ಕಲಿಕೆ ಮಾದ್ಯಮ : ಮಲಾವಿ ಸರಕಾರದ ತಪ್ಪು ನಡೆ

– ಅನ್ನದಾನೇಶ ಶಿ. ಸಂಕದಾಳ.

Universal-education-is-on-malawi

ಮಲಾವಿಆಪ್ರಿಕಾದ ಮೂಡುತೆಂಕಣ (southeast) ದಿಕ್ಕಿನಲ್ಲಿರುವ ದೇಶ. ಮಲಾವಿಯ ಸಾರ‍್ವಜನಿಕ ಶಾಲೆಗಳಲ್ಲಿ ಅತವಾ ಸರಕಾರೀ ಶಾಲೆಗಳಲ್ಲಿ ಇಂಗ್ಲೀಶನ್ನೇ ಕಲಿಕೆಯ ಮಾದ್ಯಮವಾಗಿಸಬೇಕು, ಅಂದರೆ ಇಂಗ್ಲೀಶಿನ ಮೂಲಕವೇ ಎಲ್ಲವನ್ನು ಹೇಳಿಕೊಡಬೇಕೆಂಬ ಹೊಸ ನೀತಿಯನ್ನು ಜಾರಿಗೊಳಿಸುವ ಸುದ್ದಿಯೊಂದು ಬಂದಿದೆ. ಮಲಾವಿಯಲ್ಲಿ ಕಲಿಕೆಯ ಗುಣಮಟ್ಟ ಕಡಿಮೆ ಇದ್ದು, ಮಕ್ಕಳಿಗೆ ಇಂಗ್ಲೀಶಿನಲ್ಲಿ ಕಲಿಸದಿರುವುದೇ ಇದಕ್ಕೆ ಕಾರಣ – ಎಂದು ತಿಳಿದಿರುವುದೇ ಈ ಹೊಸ ನೀತಿ ಜಾರಿಗೆ ಮುಂದಾಗುತ್ತಿರಲು ಕಾರಣ ಎಂದು ತಿಳಿದುಬಂದಿದೆ .

ಯಾವ ನುಡಿಯಲ್ಲಿ ಮಕ್ಕಳಿಗೆ ಕಲಿಸಬೇಕು ಎಂಬ ಚರ‍್ಚೆ ಮಲಾವಿಯಲ್ಲೂ ಹುಟ್ಟಿತ್ತು. “ನಗರಗಳಲ್ಲಿರುವ ಕಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಚೆನ್ನಾಗಿ ಇಂಗ್ಲೀಶ್ ಬಲ್ಲವರಾಗಿದ್ದಾರೆ. ಯಾಕೆಂದರೆ ಕಾಸಗಿ ಶಾಲೆಗಳಲ್ಲಿ ಎಲ್ಲವನ್ನು ಇಂಗ್ಲೀಶಿನಲ್ಲೇ ಹೇಳಿಕೊಡಲಾಗುತ್ತದೆ. ಎಲ್ಲವನ್ನು ತಾಯ್ನುಡಿಯಲ್ಲೇ ಕಲಿಸುತ್ತಿರುವ ಕಾರಣ ಸರಕಾರೀ ಶಾಲೆಗಳಲ್ಲಿ ಓದಿ ಹೊರಬರುವ ಮಕ್ಕಳಿಗೆ ಇಂಗ್ಲೀಶ್ ಬರುತ್ತಿಲ್ಲ” ಎಂಬ ಅನಿಸಿಕೆ ಮಲಾವಿಯ ಸರಕಾರದಲ್ಲಿ ಮೂಡಿ, ಅದು ಕಲಿಕೆಯ ಗುಣಮಟ್ಟ ಸರಿಯಿಲ್ಲ ಎಂಬ ತೀರ‍್ಮಾನಕ್ಕೆ ಬರುವಂತೆ ಮಾಡಿದೆ. ಆದ್ದರಿಂದ, “ಒಂದನೇ ತರಗತಿಯಿಂದ ಇಂಗ್ಲೀಶಿನಲ್ಲೇ ಕಲಿಸಲು ಶುರು ಮಾಡಿದರೆ ಎಲ್ಲಾ ಸರಿ ಹೋಗುತ್ತದೆ” ಎನ್ನುವ ನಿಲುವು ಅಲ್ಲಿನ ಸರಕಾರ ತಾಳಿದೆ. ಆದರೆ ಕಲಿಕೆಯ ಗುಣಮಟ್ಟ ಮೇಲೇರಿಸಲು ಇದು ಸರಿಯಾದ ಮದ್ದಲ್ಲ ಎಂದು ಮಲಾವಿಯಲ್ಲಿನ ಬಲ್ಲವರೇ ಹೇಳುತ್ತಿದ್ದಾರೆ. ಇಂತ ತೀರ‍್ಮಾನ ತೆಗೆದುಕೊಳ್ಳುವ ಮುನ್ನ, “ಇಂಗ್ಲೀಶಿನಲ್ಲಿ ಚೆನ್ನಾಗಿ ಕಲಿಸುವವರ ಪಡೆ ಸರಕಾರೀ ಶಾಲೆಗಳಲ್ಲಿದೆಯೇ” ಎಂದು ಯೋಚಿಸುವ ಗೋಜಿಗೂ ಹೋಗದಿರುವುದು ಅವರ ಅಚ್ಚರಿಗೆ ಕಾರಣವಾಗಿದೆ.

ಮಕ್ಕಳಿಗೆ ಇಂಗ್ಲೀಶ್ ಚೆನ್ನಾಗಿ ಮಾತಾಡಲು ಬರದೇ ಇರುವುದಕ್ಕೆ ಅವರಿಗೆ ತಾಯ್ನುಡಿಯಲ್ಲಿ ಕಲಿಸುತ್ತಿರುವುದು ಕಾರಣವಲ್ಲ, ಬದಲಿಗೆ ಇಂಗ್ಲೀಶನ್ನೇ ಸರಿಯಾಗಿ ಕಲಿಸದಿರುವುದು ಮೂಲ ಕಾರಣ ಎಂದು ತಿಳಿದವರು ಹೇಳುತ್ತಿದ್ದಾರೆ. ಹಾಗೆಯೇ, ಮಕ್ಕಳಿಗೆ ಇಂಗ್ಲೀಶ್ ಬರುವುದೋ ಇಲ್ಲವೋ ಎಂಬುದರ ಮೇಲೆ ಒಟ್ಟಾರೆ ಕಲಿಕೆಯ ಗುಣಮಟ್ಟವನ್ನು ಅಳೆಯುತ್ತಿರುವುದು ತಪ್ಪು ಎಂದೂ ಅವರು ಹೇಳುವರು. ಎಲ್ಲರಿಗೂ ಮೊದಲಹಂತದ (primary) ಕಲಿಕೆ ಒದಗಿಸುವ ಹಮ್ಮುಗೆ ಹಾಕಿಕೊಂಡಿರುವುದು, ಸರಿಯಾದ ಸಮಯದಲ್ಲಿ ಕಲಿಯುವವರಿಗೆ ಪಟ್ಯಪುಸ್ತಕಗಳು ಸಿಗದೇ ಇರುವುದು, ಶಾಲೆಯಲ್ಲಿ ಕಲಿಯುವವರು ಹೆಚ್ಚಿನ ಎಣಿಕೆಯಲ್ಲಿದ್ದು ಕಲಿಸುವವರು ಕಡಿಮೆ ಇರುವುದು – ಸರಕಾರೀ ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟ ಕುಸಿಯುತ್ತಿರುವುದರ ಹಿಂದಿರುವ ಕಾರಣ ಎಂಬುದು ಬಲ್ಲವರ ನೇರವಾದ ಅನಿಸಿಕೆ. ಇಂಗ್ಲೀಶನ್ನು ಒಂದು ನುಡಿಯಾಗಿ ಕಲಿಸುವ ಬದಲು ಇಂಗ್ಲೀಶಿನಲ್ಲೇ ಎಲ್ಲಾ ಕಲಿಸಲು ಹೊರಟಿರುವುದು ಸರಿಯಲ್ಲವೆಂದೂ ಅವರು ಹೇಳುವವರು.

“ಒಂದು ನಾಡಿನ ಏಳಿಗೆಯು ಆ ನಾಡಿನ ಮಂದಿಯ ಪಾಲ್ಗೊಳ್ಳುವಿಕೆಯಲ್ಲಿ ಅಡಗಿದೆ. ಅದಕ್ಕೆ ಬೇಕಾದಂತ ಅರಿಮೆ, ಚಳಕ ಅವರದಲ್ಲದ ನುಡಿಯಲ್ಲಿದ್ದರೆ, ಆ ಅರಿಮೆ ಕೆಲವೇ ಕೆಲವರಿಗೆ ದೊರೆತು ಸಮಾನವಾದ ಏಳಿಗೆ ಸಾದಿಸಲಾಗುವುದಿಲ್ಲ. ಏಳಿಗೆಯನ್ನು ಮತ್ತು ಸಮಾನತೆಯನ್ನು ಸಾದಿಸಲು ಎಲ್ಲವನ್ನು ತಾಯ್ನುಡಿಯಲ್ಲಿ ಪಡೆಯುವಂತ ಕಲಿಕೆ ಏರ‍್ಪಾಡು ಇರಬೇಕು. ‘ಮುಂದುವರಿದಿದೆ’ ಎಂದೆನಿಸಿಕೊಂಡಿರುವ ಹಲವಾರು ನಾಡುಗಳು ನಿಬ್ಬೆರಗಾಗುವಂತ ಏಳಿಗೆ ಸಾದಿಸಿರುವ ಹಿಂದಿರುವ ಗುಟ್ಟು ತಾಯ್ನುಡಿಯಲ್ಲಿನ ಕಲಿಕೆ” ಎಂಬುದನ್ನು ಅವರು ಹೆಚ್ಚು ಒತ್ತುಕೊಟ್ಟು ಹೇಳುತ್ತಾರೆ.

ಜಾಗತೀಕರಣದ ಈ ಸಮಯದಲ್ಲಿ ಇಂಗ್ಲೀಶಿನಿಂದ ದೊರೆಯುತ್ತಿರುವ ಸವಲತ್ತುಗಳು, ಕಲಿಕೆ ಮಾದ್ಯಮದ ವಿಶಯದಲ್ಲಿ ಜನರಲ್ಲಿ ಗೊಂದಲ ಉಂಟು ಮಾಡಿರುವುದು ದಿಟ. ಇಂಗ್ಲೀಶ್ ಚೆನ್ನಾಗಿ ಬಂದರೆ ಆ ಎಲ್ಲಾ ಸವಲತ್ತುಗಳು ಸಿಕ್ಕು ಬಿಡುತ್ತವೆ ಎಂಬ ತಪ್ಪುಕಲ್ಪನೆ ಬಹಳಶ್ಟು ಮಂದಿಯಲ್ಲಿ ಮನೆ ಮಾಡಿರುವುದೂ ದಿಟವೇ. ಮಲಾವಿ ಅತವಾ ಮಲಾವಿಯ ಮಂದಿಯೂ ಕೂಡ ಇದರ ಹೊರತಾಗಿಲ್ಲ. ಹಾಗೆ ನೋಡಿದರೆ ಕರ‍್ನಾಟಕದಲ್ಲೂ ಇದೇ ಪರಿಸ್ತಿತಿ ಇದೆ. ಹಿಂದುಳಿದ ಅತವಾ ಮುಂದುವರೆಯಬೇಕಿರುವ ನಾಡುಗಳಲ್ಲಿ ಈ ಗೊಂದಲವನ್ನು ಕಾಣಬಹುದಾಗಿದೆ.

ಒಂದು ನಾಡಿನ ಮಂದಿಯ ಕಲಿಕೆಯ ಗುಣಮಟ್ಟ ಮತ್ತು ಸಾರ‍್ತಕತೆ – ಕಲಿತಿರುವುದನ್ನು ಬಾಳ್ವೆಗೆ ಅಳವಡಿಸಿಕೊಳ್ಳುವುದರಲ್ಲಿ, ಕೂಡಣಕ್ಕೆ (society), ನಾಡಿಗೆ ಒಳ್ಳೆಯ ಕೊಡುಗೆಗಳ ನೀಡುವುದರಲ್ಲಿ, ಸರಿ-ತಪ್ಪು ಯಾವುದು ಎಂದು ಯೋಚಿಸುವ ಹಾಗೆ ಮಾಡುವುದರಲ್ಲಿ ಇದೆ. ಯಾವುದೋ ಒಂದು ನುಡಿಯ ಮೇಲೆ ಹಿಡಿತ ಸಾದಿಸುವುದರಲ್ಲಲ್ಲ. ಸದ್ಯದ ಪರಿಸ್ತಿತಿಯಲ್ಲಿ ಇಂಗ್ಲೀಶ್ ಬೇಕು ಮತ್ತು ಅದನ್ನು ಚೆನ್ನಾಗಿ ಕಲಿಸಬೇಕು, ಎರಡು ಮಾತಿಲ್ಲ. ಆದರೆ ಒಟ್ಟಾರೆ ಕಲಿಕೆಯ ಗುಣಮಟ್ಟವನ್ನು ಕೇವಲ ಇಂಗ್ಲೀಶ್ ಚೆನ್ನಾಗಿ ಬರೆಯುವುದರ ಮತ್ತು ಮಾತಾಡುವುದರ ಮೇಲೆ ಅಳೆಯುವುದು ಒಂದು ನಾಡಿನ ಏಳಿಗೆಗೆ ತೊಡಕನ್ನುಂಟು ಮಾಡುವುದು ಕಂಡಿತ. “ತಾಯ್ನುಡಿಯಲ್ಲಿನ ಕಲಿಕೆ” ಏಳಿಗೆಗೆ ಗಟ್ಟಿಯಾದ ಅಡಿಪಾಯ ಹಾಕುತ್ತದೆ ಎಂಬುದಕ್ಕೆ ಕಣ್ಣು ಮುಂದೆಯೇ ಬಹಳಶ್ಟು ಎತ್ತುಗೆಗಳಿವೆ. ಅಂತ ನಾಡುಗಳ ಕಲಿಕೆ ರೀತಿಯು ಹಿಂದುಳಿದಿರುವ ನಾಡುಗಳಿಗೆ ಮಾದರಿ ಆಗುವುದು ಒಳಿತು.

( ಮಾಹಿತಿ ಸೆಲೆ: allafrica.com wikipedia-malawi )

( ಚಿತ್ರ ಸೆಲೆ: theguardian.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.