ಹೆಸರುಪದಗಳಿಂದ ಪಡೆದ ಬೇರೆ ಹೆಸರುಪದಗಳು

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-7

ಇಂಗ್ಲಿಶ್ ಹೆಸರುಪದಗಳಿಗೆ dom, ery/ry, ing, ism, ship, eer, ess, ette, let, ster, er, hood, ling, age, ful ಎಂಬಂತಹ ಹಲವು ಒಟ್ಟುಗಳನ್ನು ಸೇರಿಸಿ ಬೇರೆ ಬಗೆಯ ಹೆಸರುಪದಗಳನ್ನು ಪಡೆಯಲು ಬರುತ್ತದೆ. ಇದಲ್ಲದೆ, an, ise, ist, ಮತ್ತು ite ಎಂಬ ಬೇರೆ ನಾಲ್ಕು ಒಟ್ಟುಗಳನ್ನು ಬಳಸಿಯೂ ಹೆಸರುಪದಗಳಿಂದ ಹೆಸರುಪದಗಳನ್ನು ಪಡೆಯಲು ಬರುತ್ತದೆ; ಆದರೆ, ಈ ಒಟ್ಟುಗಳನ್ನು ಬಳಸಿ ಪಡೆದ ಪದಗಳು ಹೆಸರುಪದಗಳಾಗಿ ಮಾತ್ರವಲ್ಲದೆ ಪರಿಚೆಪದಗಳಾಗಿಯೂ ಬಳಕೆಯಾಗಬಲ್ಲುವು.

ಹೆಸರುಪದಗಳಿಗೆ ಸೇರುವ ಈ ಎಲ್ಲಾ ಒಟ್ಟುಗಳಿಗೂ ಮೇಲೆ ವಿವರಿಸಿದ ಒಟ್ಟುಗಳ ಹಾಗೆ ಪದಗಳ ಗುಂಪನ್ನು ಮಾರ‍್ಪಡಿಸುವ ಕೆಲಸವಿಲ್ಲ; ಹೆಸರುಪದಗಳಿಗೆ ಕೆಲವು ಹೆಚ್ಚಿನ ಹುರುಳನ್ನು ಸೇರಿಸುವುದೇ ಅವುಗಳ ಮುಕ್ಯ ಕೆಲಸವಾಗಿರುತ್ತದೆ.

ಹಾಗಾಗಿ, ಇಂತಹ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಬೇಕಿದ್ದರೆ ಮೊದಲಿಗೆ ಅವು ಇಂಗ್ಲಿಶ್‌ನಲ್ಲಿ ಹೆಸರುಪದಗಳಿಗೆ ಸೇರಿಸುವಂತಹ ಹೆಚ್ಚಿನ ಹುರುಳನ್ನು ಕನ್ನಡದಲ್ಲಿ ಪಡೆಯುವುದು ಹೇಗೆ ಎಂಬುದನ್ನು ತಿಳಿಯಬೇಕಾಗುತ್ತದೆ.

(1) dom ಎಂಬುದಕ್ಕೆ ಹಲವು ಹುರುಳುಗಳಿವೆ; ಅದು ಒಂದು ಹೆಸರುಪದ ಗುರುತಿಸುವ ಪಾಂಗಿನ ಗೊತ್ತುಪಾಡು, ನಾಡು, ಮಟ್ಟ ಮೊದಲಾದುವನ್ನು ತಿಳಿಸಬಲ್ಲುದು; ಈ ಹುರುಳುಗಳನ್ನವಲಂಬಿಸಿ, ಅದನ್ನು ಬಳಸಿರುವ ಹೆಸರುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ತನ ಒಟ್ಟನ್ನು ಇಲ್ಲವೇ ನಾಡು, ಮಟ್ಟ ಎಂಬಂತಹ ಪದಗಳನ್ನು ಬಳಸಲು ಬರುತ್ತದೆ:

bore ಕೊರೆಗ boredom ಕೊರೆಗತನ
clerk ಬರೆಗ clerkdom ಬರೆಗತನ
heir ಮರುಪಡೆಗ heirdom ಮರುಪಡೆಗತನ
king ಅರಸು kingdom ಅರಸುನಾಡು
gangster ತಂಡಗಾರ gangsterdom ತಂಡಗಾರನಾಡು

(2) ery/ry ಎಂಬುದಕ್ಕೂ ಹಲವು ಹುರುಳುಗಳಿವೆ; ಅದು ಒಂದು ಹೆಸರುಪದ ಗುರುತಿಸುವ ಪಾಂಗಿನ ಗೊತ್ತುಪಾಡು ಇಲ್ಲವೇ ನಡವಳಿಕೆ (slavery), ಪಾಂಗಿನ ಜಾಗ ಇಲ್ಲವೇ ಅಂಗಡಿ (bakery), ಪಾಂಗುಗಳ ಸೇರಿಕೆ (jewellery), ಪಾಂಗಿನ ಕೆಲಸ (husbandry), ಮೊದಲಾದ ಹಲವು ಹುರುಳುಗಳನ್ನು ಕೊಡಬಲ್ಲುದು.

ಪಾಂಗಿನ ನಡವಳಿಕೆಯನ್ನು ತಿಳಿಸುವಲ್ಲಿ ತನ ಇಲ್ಲವೇ ಇಕೆ ಒಟ್ಟನ್ನು, ಜಾಗವನ್ನು ತಿಳಿಸುವಲ್ಲಿ ಮನೆ, ಅಂಗಡಿ, ಇಲ್ಲವೇ ಅಂತಹದೇ ಬೇರೆ ಪದವನ್ನು, ಪಾಂಗುಗಳ ಸೇರಿಕೆಯನ್ನು ತಿಳಿಸುವಲ್ಲಿ ಹಲವೆಣಿಕೆಯ ಗಳು ಒಟ್ಟನ್ನು, ಮತ್ತು ನನಸಿನ ಪಾಂಗನ್ನು ತಿಳಿಸುವಲ್ಲಿ ಗೆ ಒಟ್ಟನ್ನು ಬಳಸಲು ಬರುತ್ತದೆ:

buffon ಕೋಡಂಗಿ buffonery ಕೋಡಂಗಿತನ
slave ಅಡಿಯ slavery ಅಡಿಯತನ
trick ಬೂಟಾಟ trickery ಬೂಟಾಟಿಕೆ
perfume ಸಾದು perfumery ಸಾದಂಗಡಿ
pot ಬಾನ pottery ಬಾನಂಗಡಿ
nun ಬಿಡುಗಿತ್ತಿ nunnery ಬಿಡುಗಿತ್ತಿಮನೆ
pig ಹಂದಿ piggery ಹಂದಿಕೊಂಚೆ
orange ಕಿತ್ತಳೆ orangery ಕಿತ್ತಳೆತೋಟ

(3) ing ಎಂಬುದನ್ನು ಹೆಸರುಪದಗಳೊಂದಿಗೆ ಬಳಸಿದಾಗ, ಅವು ತಿಳಿಸುವ ಪಾಂಗಿನ ಬಳಕೆಯೊಂದನ್ನು ಅದು ತಿಳಿಸುತ್ತದೆ; ಈ ಹುರುಳನ್ನು ತಿಳಿಸಲು ಕನ್ನಡದಲ್ಲಿ ಹೆಸರುಪದಗಳಿಗೆ ಬಳಕೆ ಎಂಬ ಪದವನ್ನು ಸೇರಿಸಬಹುದು:

rule ಕಟ್ಟಲೆ ruling ಕಟ್ಟಲೆಬಳಕೆ
boat ಓಡ boating ಓಡಬಳಕೆ
word ಸೊಲ್ಲು wording ಸೊಲ್ಲುಬಳಕೆ
scaffold ಸಾರ scaffolding ಸಾರಬಳಕೆ
panel ಪಡಿ panelling ಪಡಿಬಳಕೆ

(4) ism ಎಂಬುದು ಕಲಿತ (doctrine) ಇಲ್ಲವೇ ಬಳಕೆ ಎಂಬ ಹುರುಳನ್ನು ಕೊಡುತ್ತದೆ; ಈ ಪದಗಳಿಗೆ ಸಾಟಿಯಾದ ಕನ್ನಡ ಪದಗಳನ್ನು ಉಂಟುಮಾಡುವಲ್ಲಿ ತನ ಇಲ್ಲವೇ ಒಲವು ಎಂಬವುಗಳನ್ನು ಬಳಸಲು ಬರುತ್ತದೆ:

hero ಕಲಿ heroism ಕಲಿತನ
cynic ಜರೆಗ cynicism ಜರೆಗತನ
magnet ಸೆಳೆಗಲ್ಲು magnetism ಸೆಳೆತನ
native ನಾಡಿಗ nativism ನಾಡಿಗನೊಲವು
race ತಳಿ racism ತಳಿಯೊಲವು

(5) ship ಎಂಬುದು ಹೆಸರುಪದ ಗುರುತಿಸುವ ಮಂದಿಯ ಪರಿಚೆಯನ್ನು ಇಲ್ಲವೇ ಚಳಕವನ್ನು ಗುರುತಿಸುವಂತಹ ಪದವನ್ನು ಪಡೆಯುವಲ್ಲಿ ನೆರವಾಗುತ್ತದೆ; ಕನ್ನಡದಲ್ಲಿ ಇದಕ್ಕೆ ಸಾಟಿಯಾಗಬಲ್ಲ ಪದವನ್ನು ಪಡೆಯಲು ತನ ಒಟ್ಟನ್ನು ಬಳಸಬಹುದು:

citizenship ನಾಡಿಗತನ friendship ಗೆಳೆತನ
kinship ನಂಟತನ dealership ಹರದತನ
followership ಹಿಂಬಾಲಕತನ chiefship ಮುಂದಾಳುತನ
studentship ಕಲಿಗತನ editorship ಅಳವಡಿಗತನ

ಕೆಲವು ಬಳಕೆಗಳಲ್ಲಿ ಈ ಒಟ್ಟಿಗೆ ಹಲವರ ಕಲೆತವನ್ನು ತಿಳಿಸುವ ಹುರುಳೂ ಇದೆ; ಎತ್ತುಗೆಗಾಗಿ, readership ಎಂಬ ಪದಕ್ಕೆ ಒಟ್ಟು ಒದುಗರ ಎಣಿಕೆ ಎಂಬ ಹುರುಳೂ ಇದೆ.

(6) eer ಎಂಬುದು ಪಳಗಿದ ಇಲ್ಲವೇ ನುರಿತ ಎಂಬ ಹುರುಳನ್ನು ಕೊಡುತ್ತದೆ; ಕನ್ನಡದ ಗಾರ ಒಟ್ಟಿಗೂ ಇಂತಹದೇ ಹುರುಳಿದೆ. ಹಾಗಾಗಿ, ಈ ಒಟ್ಟನ್ನು ಬಳಸಿರುವ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಗಾರ ಒಟ್ಟನ್ನು ಬಳಸಿರುವ ಪದಗಳನ್ನು ಕೊಡಬಹುದು; ನುರಿತ ಎಂಬ ಹುರುಳನ್ನು ಒತ್ತಿಹೇಳಬೇಕಿದ್ದಲ್ಲಿ ಅರಿಗ ಎಂಬ ಪದವನ್ನು ಸೇರಿಸಿರುವ ಪದಗಳನ್ನೂ ಕೊಡಬಹುದು:

cameleer ಒಂಟೆಗಾರ pamphleteer ಕಯ್ಕಡತಗಾರ
pistoleer ಕಯ್ಕೋವಿಗಾರ profiteer ಪಡಪುಗಾರ
racketeer ಕೆಯ್ತಗಾರ summiteer ಮೇಲ್ಕೂಟಗಾರ
engineer ಬಿಣಿಗೆಯರಿಗ rocketeer ಏರುಗಣೆಯರಿಗ

(7) ess ಎಂಬುದು ಹೆಣ್ಣು ಎಂಬ ಹುರುಳನ್ನು ಕೊಡುತ್ತದೆ; ಈ ಒಟ್ಟನ್ನು ಬಳಸಿರುವ ಹೆಚ್ಚಿನ ಕಡೆಗಳಲ್ಲೂ ಕನ್ನಡದಲ್ಲಿ ತಿ ಇಲ್ಲವೇ ಇತ್ತಿ ಒಟ್ಟನ್ನು ಬಳಸಲು ಬರುತ್ತದೆ (ಗಾರ ಒಟ್ಟಿನ ಬಳಿಕ ತಿ ಮತ್ತು ಗ ಒಟ್ಟಿನ ಬಳಿಕ ಇತ್ತಿ):

author ಬರಹಗಾರ authoress ಬರಹಗಾರ‍್ತಿ
champion ಗೆಲ್ಲುಗ championess ಗೆಲ್ಲುಗಿತ್ತಿ
clerk ಬರೆಗ clerkess ಬರೆಗಿತ್ತಿ
constable ಕಾಪುಗ constabless ಕಾಪುಗಿತ್ತಿ
doctor ಮಾಂಜುಗ doctress ಮಾಂಜುಗಿತ್ತಿ
hunter ಬೇಟೆಗಾರ huntress ಬೇಟೆಗಾರ‍್ತಿ

(8) ette ಎಂಬುದು ಕಿರಿದು ಎಂಬ ಹುರುಳನ್ನು ಹೆಸರುಪದಕ್ಕೆ ಸೇರಿಸುತ್ತದೆ; ಕನ್ನಡದಲ್ಲಿ ಈ ಹುರುಳನ್ನು ಪಡೆಯಲು ಹೆಸರುಪದದ ಮೊದಲು ಕಿರು(ಕಿತ್ತ್) ಎಂಬ ಪದವನ್ನು ಬಳಸಲು ಬರುತ್ತದೆ (ಮುಚ್ಚುಲಿಗಳ ಮೊದಲು ಕಿರು ಮತ್ತು ತೆರೆಯುಲಿಗಳ ಮೊದಲು ಕಿತ್ತ್):

celler ನೆಲಮನೆ cellerette ಕಿರುನೆಲಮನೆ
diner ಊಟಮನೆ dinerette ಕಿತ್ತೂಟಮನೆ
farmer ಒಕ್ಕಲಿಗ farmerette ಕಿತ್ತೊಕ್ಕಲಿಗ
kitchen ಅಡಿಗೆಮನೆ kitchenette ಕಿತ್ತಡಿಗೆಮನೆ
room ಕೋಣೆ roomette ಕಿರುಕೋಣೆ

ಬೇರೆ ಕೆಲವು ಪದಗಳಲ್ಲಿ ಇದಕ್ಕೆ ಅಣಕ ಇಲ್ಲವೇ ಸೋಗು ಎಂಬ ಹುರುಳಿದೆ (leather ತೊಗಲು leatherette ಸೋಗುತೊಗಲು)

(9) let ಎಂಬುದ ಚಿಕ್ಕ ಎಂಬ ಹುರುಳನ್ನು ಹೆಸರುಪದಕ್ಕೆ ಸೇರಿಸುತ್ತದೆ; ಕನ್ನಡದಲ್ಲಿ ಈ ಹುರುಳನ್ನು ಪಡೆಯಲು ಹೆಸರುಪದದ ಮೊದಲು ಕಿರು(ಕಿತ್ತ್) ಎಂಬುದನ್ನು ಸೇರಿಸಬಹುದು:

leaf ಓಲೆ leaflet ಕಿತ್ತೋಲೆ
isle ಕುದುರು islet ಕಿರುಕುದುರು
book ಕಡತ booklet ಕಿರುಕಡತ
branch ಗೆಲ್ಲು branchlet ಕಿರುಗೆಲ್ಲು
nut ಬಿತ್ತು nutlet ಕಿರುಬಿತ್ತು

ಈ ಒಟ್ಟನ್ನು ಉಸಿರಿಗಳನ್ನು ಹೆಸರಿಸುವ ಪದಗಳೊಂದಿಗೆ ಬಳಕೆಯಾಗಿರುವಲ್ಲಿ ಪದಗಳ ಬಳಿಕ ಮರಿ ಎಂಬ ಪದವನ್ನು ಬಳಸಬಹುದು (piglet ಹಂದಿಮರಿ, eaglet ಹದ್ದುಮರಿ).

(10) ster ಎಂಬುದು ಒಂದು ಹೆಸರುಪದ ಗುರುತಿಸುವ ಪಾಂಗಿಗೆ ಸಂಬಂದಿಸಿರುವವರನ್ನು ಹೆಸರಿಸುತ್ತದೆ; ಕನ್ನಡದಲ್ಲಿ ಇಂತಹ ಪದಕ್ಕೆ ಸಾಟಿಯಾಗುವಂತೆ ಗಾರ ಒಟ್ಟನ್ನು ಬಳಸಲು ಬರುತ್ತದೆ:

pun ಹದಿರು punster ಹದಿರುಗಾರ
song ಹಾಡು songster ಹಾಡುಗಾರ
mob ದೊಂಬಿ mobster ದೊಂಬಿಗಾರ
speed ಉರುಬು speedster ಉರುಬುಗಾರ

(11) er ಎಂಬುದನ್ನೂ ಹೆಸರುಪದಗಳೊಂದಿಗೆ ಬಳಸಲು ಬರುತ್ತಿದ್ದು, ಅದು ಆ ಹೆಸರುಪದ ಗುರುತಿಸುವ ಪಾಂಗನ್ನು ಮುಕ್ಯ ಪರಿಚೆಯಾಗಿ ಪಡೆದಿರುವ ಮಂದಿಯನ್ನು ಹೆಸರಿಸುತ್ತದೆ. ಕನ್ನಡದಲ್ಲಿ ಈ ಒಟ್ಟಿಗೆ ಬದಲಾಗಿ ಗ/ಇಗ ಇಲ್ಲವೇ ಗಾರ ಒಟ್ಟನ್ನು ಬಳಸಲು ಬರುತ್ತದೆ:

office ಮಣಿಹ officer ಮಣಿಹಗಾರ
research ಅರಕೆ researcher ಅರಕೆಗಾರ
oil mill ಗಾಣ oil miller ಗಾಣಿಗ
garden ತೋಟ gardener ತೋಟಗಾರ

ಕೆಲವು ಬಳಕೆಗಳಲ್ಲಿ ಈ ಒಟ್ಟು ಮಂದಿಯಲ್ಲದ ಪಾಂಗುಗಳನ್ನು ಗುರುತಿಸುವ ಹೆಸರುಪದಗಳನ್ನೂ ಉಂಟುಮಾಡಬಲ್ಲುದು; ಇಂತಹ ಕಡೆಗಳಲ್ಲಿ ಗ ಇಲ್ಲವೇ ಗಾರ ಒಟ್ಟಿನ ಬದಲು ಕ ಒಟ್ಟನ್ನು ಬಳಸಬಹುದು:

(12) hood ಒಟ್ಟನ್ನು ಬಳಸಿ ಹೆಸರುಪದಗಳು ಗುರುತಿಸುವ ಪಾಂಗಿನ ಪರಿಚೆಯನ್ನು ತಿಳಿಸಬಲ್ಲ ಬೇರೆ ಹೆಸರುಪದಗಳನ್ನು ಪಡೆಯಲಾಗುತ್ತದೆ; ಇಂತಹ ಇಂಗ್ಲಿಶ್ ಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ತನ ಒಟ್ಟನ್ನು ಬಳಸಿ ಪಡೆಯಲು ಬರುತ್ತದೆ:

mother ತಾಯಿ motherhood ತಾಯ್ತನ
man ಗಂಡಸು manhood ಗಂಡಸ್ತನ
boy ಹುಡುಗ boyhood ಹುಡುಗತನ

ಮೇಲಿನ ಹನ್ನೆರಡು ಒಟ್ಟುಗಳು ಮಾತ್ರವಲ್ಲದೆ, an, ist, ಮತ್ತು ese ಎಂಬ ಬೇರೆ ಮೂರು ಒಟ್ಟುಗಳನ್ನೂ ಹೆಸರುಪದಗಳಿಗೆ ಸೇರಿಸಿ ಬೇರೆ ಹೆಸರುಪದಗಳನ್ನು ಪಡೆಯಲು ಬರುತ್ತದೆ; ಆದರೆ, ಈ ಒಟ್ಟುಗಳನ್ನು ಬಳಸಿ ಪಡೆದ ಪದಗಳು ಹೆಸರುಪದಗಳಾಗಿ ಮಾತ್ರವಲ್ಲದೆ ಹೆಸರುಪರಿಚೆಗಳಾಗಿಯೂ ಬಳಕೆಯಾಗಬಲ್ಲುವು.

(13) an ಎಂಬುದು ಹೆಸರುಪದ ಗುರುತಿಸುವ ಪಾಂಗಿಗೆ ಸಂಬಂದಿಸಿದ ಇಲ್ಲವೇ ಅದರ ಕುರಿತಾಗಿ ಹೆಚ್ಚಿನ ಅರಿವನ್ನು ಪಡೆದ ಮಂದಿಯನ್ನು ಗುರುತಿಸುತ್ತದೆ; ಹಾಗಾಗಿ, ಈ ಒಟ್ಟನ್ನು ಬಳಸಿರುವ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಗ, ಗಾರ, ಇಲ್ಲವೇ ಅರಿಗ ಎಂಬುದನ್ನು ಸೇರಿಸಿರುವ ಹೆಸರುಪದಗಳನ್ನು ಬಳಸಲು ಬರುತ್ತದೆ:

music ಹಾಡಿಕೆ musician ಹಾಡುಗಾರ
library ಕಡತಮನೆ librarian ಕಡತಗಾರ
history ಹಿನ್ನಡವಳಿ historian ಹಿನ್ನಡವಳಿಯರಿಗ
grammar ಸೊಲ್ಲರಿಮೆ grammarian ಸೊಲ್ಲರಿಗ
logic ತೀರ‍್ಮೆ logician ತೀರ‍್ಮೆಯರಿಗ

(14) ist ಎಂಬ ಒಟ್ಟಿಗೂ ಹೆಚ್ಚುಕಡಿಮೆ ಇದೇ ಹುರುಳಿದೆ, ಮತ್ತು ಇದನ್ನು ಬಳಸಿರುವ ಪದಗಳಿಗೂ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಗ, ಗಾರ, ಇಲ್ಲವೇ ಅರಿಗ ಎಂಬವುಗಳನ್ನು ಬಳಸಿ ಪಡೆಯಲು ಬರುತ್ತದೆ; ಕೆಲವೆಡೆಗಳಲ್ಲಿ ಒಲವಿಗ ಎಂಬ ಪದವನ್ನೂ ಸೇರಿಸಿ, ಪಡೆಯಬೇಗಾಗಿರುವ ಹುರುಳನ್ನು ಪಡೆಯಲು ಬರುತ್ತದೆ:

cartoon ಚಲ್ಲತಿಟ್ಟ cartoonist ಚಲ್ಲತಿಟ್ಟಗಾರ
terror ದಿಗಿಲು terrorist ದಿಗಿಲುಗಾರ
tour ಸುತ್ತಾಟ tourist ಸುತ್ತಾಟಗಾರ
biology ಉಸಿರಿಯರಿಮೆ biologist ಉಸಿರಿಯರಿಗ
Darwin ಡಾರ‍್ವಿನ್ Darwinist ಡಾರ‍್ವಿನ್ನರಿಗ
geology ಮಣ್ಣರಿಮೆ geologist ಮಣ್ಣರಿಗ
nude ಬೆತ್ತಲೆ nudist ಬೆತ್ತಲೆಯೊಲವಿಗ
race ತಳಿ racist ತಳಿಯೊಲವಿಗ

(15) ese ಎಂಬ ಇನ್ನೊಂದು ಒಟ್ಟಿಗೆ ಮೂರು ಬಗೆಯ ಹುರುಳುಗಳಿವೆ: ಒಂದು ನಾಡು, ಹೊಳಲು, ಇಲ್ಲವೇ ಜಾಗವನ್ನು ಹೆಸರಿಸುವ ಪದಗಳ ಬಳಿಕ ಬಳಸಿದಾಗ ಇದು ಅಲ್ಲಿ ನೆಲಸಿರುವ ಮಂದಿಯನ್ನು ಇಲ್ಲವೇ ಅವರ ನುಡಿಯನ್ನು ಹೆಸರಿಸಬಲ್ಲುದು. ಇಂತಹ ಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಉಂಟುಮಾಡಲು ಹೆಸರುಪದಗಳಿಗೆ ಇಗ ಎಂಬ ಒಟ್ಟನ್ನು ಇಲ್ಲವೇ ನುಡಿ ಎಂಬ ಪದವನ್ನು ಸೇರಿಸಲು ಬರುತ್ತದೆ:

Vienna ವಿಯೆನ್ನಾ Viennese ವಿಯೆನ್ನಿಗ, ವಿಯೆನ್ನಾ ನುಡಿ
Bhutan ಬುತಾನ್ Bhutanese ಬುತಾನಿಗ, ಬುತಾನ್ ನುಡಿ
Burma ಬರ‍್ಮಾ Burmese ಬರ‍್ಮಿಗ, ಬರ‍್ಮಾ ನುಡಿ
Sudan ಸುಡಾನ್ Sudanese ಸುಡಾನಿಗ, ಸುಡಾನ್ ನುಡಿ
Malta ಮಾಲ್ಟಾ Maltese ಮಾಲ್ಟಾನಿಗ, ಮಾಲ್ಟಾ ನುಡಿ
China ಚೀನಾ Chinese ಚೀನಿಗ, ಚೀನೀ ನುಡಿ

ಈ ಒಟ್ಟಿನ ಇನ್ನೊಂದು ಬಳಕೆಯಲ್ಲಿ ಅದು ಹೆಸರುಪದ ಗುರುತಿಸುವ ಒಂದು ಗುಂಪಿನ ಒಳನುಡಿಯನ್ನು ತಿಳಿಸುತ್ತದೆ. ಇಂತಹ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ತೊಂಡು ಪದವನ್ನು ಸೇರಿಸಿ ಹೇಳಬಹುದು:

computer ಎಣ್ಣುಕ computerese ಎಣ್ಣುಕತೊಂಡು
education ಕಲಿಕೆ educationese ಕಲಿಕೆತೊಂಡು
government ಆಡಳಿತ governmentese ಆಡಳಿತ ತೊಂಡು
journal ಸುದ್ದಿಹಾಳೆ journalese ಸುದ್ದಿಹಾಳೆ ತೊಂಡು
legal ಕಟ್ಟಲೆಯ legalese ಕಟ್ಟಲೆತೊಂಡು

ತಿರುಳು:
ಇಂಗ್ಲಿಶ್‌ನಲ್ಲಿ ಹೆಸರುಪದಗಳಿಗೆ ಒಟ್ಟುಗಳನ್ನು ಸೇರಿಸಿ ಹಲವು ಬಗೆಯ ಹೆಚ್ಚಿನ ಹೆಸರುಪದಗಳನ್ನು ಪಡೆಯಲಾಗಿದೆ; ಈ ಹೆಸರುಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಹೊಸದಾಗಿ ಉಂಟುಮಾಡಲು ಅವುಗಳ ಹುರುಳನ್ನವಲಂಬಿಸಿ ಬೇರೆ ಬೇರೆ ಹಮ್ಮುಗೆಗಳನ್ನು ಬಳಸಬೇಕಾಗುತ್ತದೆ. ಇವುಗಳಲ್ಲಿ ತನ, ಕೆ/ಇಕೆ, ಗ/ಇಗ, ತಿ/ಇತ್ತಿ ಎಂಬ ಹಿನ್ನೊಟ್ಟುಗಳು, ಪದಗಳ ಮೊದಲು ಸೇರಿಸುವ ಕಿರು/ಕಿತ್ ಪದಬೇರು, ಮತ್ತು ಪದಗಳ ಬಳಿಕ ಸೇರಿಸುವ ನಾಡು, ಅಂಗಡಿ, ಮನೆ, ಬಳಕೆ, ಒಲವು, ಆಳ್ವಿಕೆ, ಅರಿಗ ಮೊದಲಾದ ಪದಗಳು ಮುಕ್ಯವಾದವುಗಳು.

<< ಬಾಗ-6

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ: