ಮಂದಿಯಾಳ್ವಿಕೆಗೆ ಹೊಂದಿಕೆಯಾಗದ ಸೇನಾ ಆಡಳಿತ

– ಚೇತನ್ ಜೀರಾಳ್.

martial-law

ಒಂದು ದೇಶದಲ್ಲಿ ಜನರು ಯಾವುದೇ ಅಂಜಿಕೆಯಿಲ್ಲದೆ ನಿದ್ರಿಸುತ್ತಿದ್ದಾರೆ ಎಂದರೆ ಆ ದೇಶದಲ್ಲಿ ಜನರಿಗೆ ಒಳ್ಳೆಯ ಆಡಳಿತ, ಒಳ್ಳೆಯ ಕಾನೂನು ಹಾಗೂ ದೇಶದಲ್ಲಿ ಸಯ್ನ್ಯದ ಕಾವಲು ಚೆನ್ನಾಗಿದೆಯಂದು ಹೇಳಲಾಗುತ್ತದೆ. ಮೊದಲಿನೆರಡು ಹೆಚ್ಚಾಗಿ ಆಯಾ ನಾಡಿಗೆ, ಪ್ರದೇಶಕ್ಕೆ ಸೀಮಿತವಾಗುವ ವಸ್ತುಗಳಾದರೆ, ಸಯ್ನ್ಯ ಇಡೀ ದೇಶವನ್ನು ಕಾವಲು ಕಾಯುವ ಕೆಲಸ ಮಾಡುತ್ತದೆ. ಆದರೆ ಸಯ್ನ್ಯ ಕೆಲವೊಂದು ಬಾರಿ ಇದನ್ನೂ ಮೀರಿ ದೇಶದ ಅತವಾ ನಾಡಿನ ಆಡಳಿತದಲ್ಲಿ ಕಯ್ ಹಾಕಿರುವ ಪ್ರಸಂಗಗಳು ಹಲವು ಬಾರಿ ನಡೆದಿವೆ. ಇಂತಹ ನಡೆಯನ್ನು “ದೇಶದ ಬದ್ರತೆ ಅತವಾ ನಾಗರೀಕರ ಹಿತಕ್ಕಾಗಿ ಮಾಡಲಾಗಿದೆ” ಎಂದು ಸಮರ‍್ತಿಸಿಕೊಳ್ಳಲಾಗುತ್ತದೆ.

ಇಂತಹುದೇ ಒಂದು ಗಟನೆ ಈಗ ಏಶ್ಯಾದಲ್ಲಿ ನಡೆದಿದೆ. ಮೇ 20 ರಂದು ತಾಯ್ಲೆಂಡಿನಲ್ಲಿ ಮಿಲಿಟರಿ ಆಡಳಿತ ಹೇರಲಾಗಿದೆ. ಈ ಮುಂಚೆ 2006 ರಲ್ಲೂ ಕೂಡ ಈ ದೇಶದಲ್ಲಿ ಮಿಲಿಟರಿ ಆಡಳಿತ ಹೇರಲಾಗಿತ್ತು. ಸೇನೆಯ ಆಡಳಿತ ಹೇರಿದ ತಕ್ಶಣ ತಾಯ್ಲೆಂಡಿನ ರಾಜದಾನಿ ಬ್ಯಾಂಕಾಕ್ ನ ಮುಕ್ಯ ಪ್ರದೇಶದಲ್ಲಿ ಸೇನೆ ಜಮಾವಣೆ ಮಾಡಲಾಯಿತು. ಇದಾದ ನಂತರ ಟಿ.ವಿ ಕೇಂದ್ರಗಳನ್ನು ವಶಪಡಿಸಿಕೊಂಡು ಸುದ್ದಿಪ್ರಸಾರವನ್ನು ತಡೆಯಲಾಯಿತು. ಅದರೂ ಸಹ ಇದು ಜನರ ದಿನನಿತ್ಯದ ಜೀವನದ ಮೇಲೆ ಪರಿಣಾಮವನ್ನು ಬೀರಿಲ್ಲ ಎಂದು ಸುದ್ದಿಹಾಳೆಗಳಲ್ಲಿ ಪ್ರಸಾರವಾಯಿತು.

ಸೇನೆಯ ಮುಂದಾಳುಗಳು ಇದು ಸೇನೆಯ ಹೇರಿಕೆಯಲ್ಲ, ಇಲ್ಲಿ ಇನ್ನೂ ಮಂದಿಯಾಳ್ವಿಕೆಯ ಸರಕಾರವಿದೆ ಎಂದು ಹೇಳುತ್ತಿದ್ದಾರೆ. ದೇಶದ ಬದ್ರತೆ ನೋಡಿಕೊಳ್ಳುತ್ತಿದ್ದ ಸಂಸ್ತೆಯನ್ನು ರದ್ದು ಮಾಡಿ ಸೇನೆ ತನ್ನದೇ ಒಂದು ಸಂಸ್ತೆಯನ್ನು ಹುಟ್ಟುಹಾಕಿದೆ. ಆದರೆ ಇಂತಹ ಗಟನೆಗಳನ್ನು ನೋಡುತ್ತಿರುವ ಅರಿಗರು “ಸದ್ಯಕ್ಕೆ ಸೇನೆ ಆಡಳಿತ ಏರ‍್ಪಟ್ಟಿದೆ ಎಂದು ಹೇಳಿದರೆ ಇಡೀ ವಿಶ್ವವೇ ತಾಯ್ಲೆಂಡಿನೊಂದಿಗೆ ಸಂಬಂದ ಕಡಿದುಕೊಳ್ಳಬಹುದಾಗಿದೆ, ಹಾಗಾಗಿ ಸೇನೆ ಇದನ್ನು ಮಿಲಿಟರಿ ಆಡಳಿತ ಎಂದು ತೋರಗೊಡುವುದಿಲ್ಲ” ಎಂಬುದಾಗಿ ಬಣ್ಣಿಸುತ್ತಿದ್ದಾರೆ.

ಈಗಾಗಲೇ ಜನರು ಈ ವಿಚಾರವಾಗಿ ಮಾತನಾಡದ ಹಾಗೆ ಮಾಡಲಾಗಿದೆ. ಇದರ ಜೊತೆಗೆ ಸರಕಾರದ ಪರವಾಗಿರುವವರು ಹಾಗೂ ವಿರುದ್ದವಾಗಿರುವವರು ತಮ್ಮ ಜಾಗಗಳನ್ನು ಬಿಟ್ಟು ಕದಲದಂತೆ ಸೇನೆ ಆದೇಶ ಮಾಡಿದೆ.

ಇದಕ್ಕೆ ಕಾರಣವೇನು?
ತಾಯ್ಲೆಂಡ್ ಸರಕಾರದ ಯೋಜನಾ ಸಂಸ್ತೆ ಮೇ 19 ರಂದು ರಾಜಕಾರಣಿಗಳು ಹೇಗೆ ತಾಯ್ಲೆಂಡಿನ ಹಣಕಾಸು ಏರ‍್ಪಾಡನ್ನು ಹಿಂಜರಿಕೆಗೆ (recession) ತಳ್ಳುತ್ತಿದ್ದಾರೆ ಎಂದು ತೋರಿಸಿತು. ಇದಾದ ನಂತರವೇ ಸೇನೆ ದೇಶದಲ್ಲಿ ಮಿಲಿಟರಿ ಆಡಳಿತವನ್ನು ಹೇರಿದೆ. ಈಗಿರುವ ಸರಕಾರವನ್ನು ಕೆಳಗಿಳಿಸಲು ಕಳೆದ ಆರು ತಿಂಗಳಿನಿಂದ ಪ್ರತಿಬಟನೆಯನ್ನು ಪ್ರತಿಪಕ್ಶದವರು ನಡೆಸುತ್ತಲೇ ಇದ್ದರು ಅನ್ನುವುದನ್ನು ನಾವು ಗಮನಿಸಬೇಕು.

ಮಾರ‍್ಶಲ್ ಲಾ (ಸೇನೆಯ ಕಟ್ಟಳೆ) ಎಂದರೇನು?
ಮಾರ‍್ಶಲ್ ಲಾ ಎಂದರೆ ಸೇನೆಯ ಕಟ್ಟಳೆ ಎಂದು ಅರ‍್ತ. ಇದನ್ನು ಸೇನೆಯ ಮುಕ್ಯಸ್ತರು ತಮ್ಮ ಸೇನೆ ಅದಿಕಾರವನ್ನು ಬಳಸಿಕೊಂಡು ಒಂದು ಪ್ರದೇಶದ ಅತವಾ ಇಡೀ ದೇಶವನ್ನು ತಮ್ಮ ವಶಕ್ಕೆ ತಗೆದುಕೊಂಡು ಆಡಳಿತ ನಡೆಸುವುದು. ಸೇನೆಯ ಆಡಳಿತವನ್ನು ಒಂದು ನಿರ‍್ದಿಶ್ಟ ಸಮಯದವರೆಗೆ ಹಾಕಲಾಗಿರುತ್ತದೆ. ಒಂದು ದೇಶದ ಸರಕಾರ ಅತವಾ ಅಲ್ಲಿನ ಆಡಳಿತದೇರ‍್ಪಾಡು ಸರಿಯಾಗಿ ಕೆಲಸ ಮಾಡದೇ, ಜನರು ಆಳುವ ಸರಕಾರದ ವಿರುದ್ದ ತಿರುಗಿ ಬಿದ್ದಾಗ, ಪೋಲಿಸ್ ವ್ಯವಸ್ತೆಯಿಂದ ಹಿಡಿತಕ್ಕೆ ತರಲಾಗದ ಗಟನೆಗಳಾದಾಗ, ಕಾನೂನು ವ್ಯವಸ್ತೆಯನ್ನು ಸರಿದಾರಿಗೆ ತರಲು ಸೇನೆ ಕಟ್ಟಳೆಯನ್ನು ಬಳಸಲಾಗುತ್ತದೆ.

ಸೇನೆಯ ಆಡಳಿತದಲ್ಲಿ ಸೇನೆಯ ಮುಂದಾಳು ಆಡಳಿತದ ಮುಕ್ಯಸ್ತರಾಗಿ ಕೆಲಸ ವಹಿಸಿಕೊಳ್ಳುತ್ತಾರೆ. ಇವರು ಕೆಲಸವಹಿಸಿಕೊಂಡ ನಂತರ ಕಾರ‍್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಎಲ್ಲಾ ಅದಿಕಾರವನ್ನು ತಮ್ಮ ಕಯ್ಯಲ್ಲಿ ಇಟ್ಟುಕೊಳ್ಳುತ್ತಾರೆ. ಅಂದರೆ ಸರಕಾರಕ್ಕಾಗಲಿ, ಸರಕಾರಿ ಅದಿಕಾರಿಗಳಿಗಾಗಲಿ, ನ್ಯಾಯಾದೀಶರಾಗಲಿ ಈ ಹೊತ್ತಿನಲ್ಲಿ ತಮ್ಮ ಅದಿಕಾರವನ್ನು ಕಳೆದುಕೊಂಡಿರುತ್ತಾರೆ. ಸೇನೆ ತನ್ನ ಆಡಳಿತವನ್ನು ಕೊನೆಗೊಳಿಸಿದ ಬಳಿಕ ಮತ್ತೆ ಹಿಂದಿನಂತೆ ಏರ‍್ಪಾಡುಗಳು ಜಾರಿಗೆ ಬರುತ್ತವೆ.

ಹಲವಾರು ಬಾರಿ ಸರಕಾರವೇ ಸೇನೆಯ ಆಡಳಿತವನ್ನು ಜಾರಿಗೆ ತರುವ ಕೆಲಸವೂ ಹಿಂದೆ ಹಲವೆಡೆಗಳಲ್ಲಿ ಆಗಿದೆ. ಹೀಗೆ ಸೇನೆಯ ಆಡಳಿತ ತರುವ ಮೂಲಕ ಸರಕಾರ ಮಾಡಿರುವ ಕಟ್ಟಳೆಗಳನ್ನು ಜನರು ಕಡ್ಡಾಯವಾಗಿ ಪಾಲಿಸಬೇಕು ಎನ್ನುವ ನಿಯಮವನ್ನು ಹೇರಲು ಉಪಯೋಗಿಸಲಾಗುತ್ತದೆ.
ಮಿಲಿಟರಿ ಆಡಳಿತ ಅನ್ವಯಿಸಿದಾಗ ಕರ್‍ಪ್ಯೂ ಹಾಕಬಹುದು, ಮಂದಿ ಕಟ್ಟಳೆಗಳನ್ನು (civil laws), ಮಂದಿ ಹಕ್ಕುಗಳನ್ನು (Civil rights) ಮೊಟಕುಕೊಳಿಸಬಹುದು, ಹೇಬಿಯಸ್ ಕಾರ‍್ಪಸ್ ಹಾಗೂ ಮಂದಿಗೆ ಸೇನೆಯ ಕಟ್ಟಳೆ ಹಾಗೂ ಸೇನೆ ರೀತಿಯ ನ್ಯಾಯವನ್ನು ನೀಡಬಹುದು.

ಹಿಂದೆ ಎಲ್ಲೆಲ್ಲಿ ಸೇನಾ ಆಡಳಿತ ಇತ್ತು?
ಪ್ರಪಂಚದ ಹಲವು ಮಂದಿಯಾಳ್ವಿಕೆಯ, ರಾಜ ಆಡಳಿತದ ದೇಶಗಳಲ್ಲಿ ಸೇನಾ ಆಡಳಿತವನ್ನು ಹೇರಲಾಗಿದೆ. ಎತ್ತುಗೆಗೆ ಕೆನಡಾ, ಇಜಿಪ್ಟ್, ಇರಾನ್, ಅಯ್ರ್ಲೆಂಡ್, ಇಸ್ರೇಲ್, ಕೊರೀಯಾ, ಮಾರಿಶಿಯಸ್, ಪಾಕಿಸ್ತಾನ್, ಪಿಲಿಪಿನ್ಸ್, ಪೋಲಂಡ್, ಸ್ವಿಜರ್‍ಲೆಂಡ್, ತಯ್ವಾನ್, ತಾಯ್ಲೆಂಡ್, ಟರ‍್ಕಿ, ಯುಗೋಸ್ಲಾವಿಯಾ, ಅಮೇರಿಕಾ (ಇಲ್ಲಿ ಸುಮಾರು 12 ಬಾರಿ ಸೇನಾ ಆಡಳಿತವಿತ್ತು!!)

ಬಾರತದಲ್ಲಿ ಸೇನಾ ಆಡಳಿತದ ಕಟ್ಟಳೆಗಳು ಹೇಗಿವೆ?
ಬಾರತ ಸೇನೆಯ ಮುಕ್ಯ ಕೆಲಸವೆಂದರೆ ಬಾರತದ ಪರವಾಗಿ ಕಾಳಗಗಳಲ್ಲಿ ಪಾಲ್ಗೊಳ್ಳುವುದು. ಆದರೆ ಹಲವಾರು ಬಾರಿ ಸರಕಾರವೇ ಸೇನೆಯ ಸಹಾಯವನ್ನು ಈ ಕೆಳಗಿನ ಸಮಯದಲ್ಲಿ ಕೇಳಿ ಪಡೆಯುತ್ತವೆ:
• ಕಾನೂನು ಹಾಗೂ ವ್ಯವಸ್ತೆಯನ್ನು ಕಾಪಾಡುವುದು
• ಅಗತ್ಯದ ಸೇವೆಗಳು ದೊರೆಯುವಂತೆ ಮಾಡುವುದು
• ನೆರೆ, ನೆಲನಡಗುವಿಕೆ, ನೆಲಕುಸಿತ ಇಂತಹ ಆಗುಹಗಳಾದಾಗ, ನೆರವಿಗಾಗಿ
• ಹಲವಾರು ಕಟ್ಟುವ ಕೆಲಸಗಳಿಗಾಗಿ
ಕಾನೂನು ಸುವ್ಯವಸ್ತೆಯನ್ನು ಕಾಪಾಡುವುದು ಆಯಾ ರಾಜ್ಯಗಳ ಸರಕಾರದ ಹೊಣೆ ಆಗಿದೆ. ಒಂದು ವೇಳೆ ಸರಕಾರಕ್ಕೆ ನಡೆಯುತ್ತಿರುವ ದಂಗೆ ಅತವಾ ಗಲಾಟೆಯನ್ನು ಆಯುದ ಹೊಂದಿರುವ ಪಡೆಯಿಂದ (ಸಾಮಾನ್ಯವಾಗಿ ಪೋಲಿಸ್) ನಿಯಂತ್ರಿಸಲು ಆಗದಿರುವ ಹೊತ್ತಿನಲ್ಲಿ ಅಲ್ಲಿ ಸೇನೆ ಆಡಳಿತವನ್ನು ಜಾರಿಗೆ ತರಬಹುದಾಗಿದೆ. ಒಂದು ವೇಳೆ ಸರಕಾರದ ಆಡಳಿತದೇರ‍್ಪಾಡು ಕುಸಿದುಬಿದ್ದರೆ, ಜನತೆಗೆ ಅವಶ್ಯಕವಾದ ಸೇವೆಗಳನ್ನು ಪೂರಯ್ಸಲಾಗದಿದ್ದರೆ ಸೇನಾ ಆಡಳಿತವನ್ನು ಮಿಲಿಟರಿ ಕಮಾಂಡರ್ ಅವರು ಜಾರಿಗೆ ತರಬಹುದು.

ಈ ಕಾನೂನಿನ ಅನ್ವಯ ಸರಕಾರಿ ಆಡಳಿತವನ್ನು ಮೊಟಕುಗೊಳಿಸಲಾಗುವುದು, ಈ ಕಟ್ಟಳೆಯ ಗುರಿ ಆದಶ್ಟು ಬೇಗ ವ್ಯವಸ್ತೆಯನ್ನು ಮೊದಲಿನ ಹಾಗೆ ಮಾಡುವುದೇ ಆಗಿದೆ. ಪರಿಸ್ತಿತಿ ಹತೋಟಿಗೆ ಬಂದ ತಕ್ಶಣವೇ ಸರಕಾರಿ ಆಡಳಿತಕ್ಕೆ ಮತ್ತೆ ಅದಿಕಾರ ವಹಿಸಲಾಗುವುದು. ಸೇನೆಯ ಆಡಳಿತವಿದ್ದ ಜಾಗದಲ್ಲಿ ಕಮಾಂಡರ್ ಅದಿಕಾರ ವಹಿಸಿಕೊಳ್ಳುತ್ತಾರೆ. ಅವಶ್ಯಕತೆ ಬಿದ್ದಲ್ಲಿ ಸರಕಾರಿ ಆಡಳಿತವನ್ನು ಅಗತ್ಯ ಸೇವೆಗಳನ್ನು ಒದಗಿಸಲು ಸೇನಾ ಆಡಳಿತದಲ್ಲಿ ಬಳಸಿಕೊಳ್ಳಲಾಗುತ್ತದೆ. ಸೇನಾ ಆಡಳಿತವನ್ನು ಹೇರುವ ಮೊದಲು ಸೇನಾ ಮುಕ್ಯಸ್ತರು ಆದಶ್ಟು ಸಾದ್ಯವಾದಲ್ಲಿ ಕೇಂದ್ರ ಸರಕಾರದಿಂದ ಒಪ್ಪಿಗೆ ಪಡೆಯಬೇಕು. ಅಗತ್ಯ ಬಿದ್ದಲ್ಲಿ ಕೇಂದ್ರ ಸರಕಾರದ ಒಪ್ಪಿಗೆ ಪಡೆಯದೇ ಕಮಾಂಡರ್ ಸೇನಾ ಆಡಳಿತವನ್ನು ಜಾರಿಗೆ ತರಬಹುದಾಗಿದೆ. ಜಾರಿಗೆ ತಂದ ನಂತರವಾದರೂ ಕಮಾಂಡರ್ ಕೇಂದ್ರ ಸರಕಾರಕ್ಕೆ ಸೇನಾ ಆಡಳಿತದ ಬಗ್ಗೆ ಮಾಹಿತಿ ನೀಡಬೇಕು ಮತ್ತು ಯಾವ ಜಾಗದಲ್ಲಿ ಆಡಳಿತ ಹೇರಲಾಗಿದೆಯೋ ಅಲ್ಲಿಯ ಜನರಿಗೆ ಈ ಆಡಳಿತದ ಬಗ್ಗೆ ಮಾಹಿತಿ ನೀಡಬೇಕು.

ಸೇನಾ ಆಡಳಿತದ ಮುಕ್ಯ ಹೊಣೆ ಕಾನೂನು ಹಾಗೂ ವ್ಯವಸ್ತೆಯನ್ನು ಸರಿ ಮಾಡುವುದೇ ಆಗಿರುವುದರಿಂದ, ಮಿಲಿಟರಿ ಕಮಾಂಡರ್ ಸೇನಾ ಆಡಳಿತ ಇರುವ ಸಮಯದಲ್ಲಿ ಯಾವುದನ್ನು ಅಪರಾದ ಎಂದು ಪರಿಗಣಿಸಲಾಗುತ್ತದೆ, ಆ ಅಪರಾದಕ್ಕೆ ನೀಡುವ ಶಿಕ್ಶೆ ಮತ್ತು ಶಿಕ್ಶೆ ನೀಡಲು ಸೇನಾ ತೀರ‍್ಪುಮನೆಗಳನ್ನು ಜಾರಿಗೆ ತರಲಾಗುತ್ತದೆ. ಶಾಂತಿ ವ್ಯವಸ್ತೆಯನ್ನು ಸರಿದಾರಿಗೆ ತಂದ ಮೇಲೆ ಹಾಗೂ ಸರಕಾರಿ ಯಂತ್ರ ಮತ್ತೆ ಕೆಲಸ ಮಾಡಲು ಶುರುಮಾಡಿದ ಮೇಲೆ. ತೀರ‍್ಪುಮನೆಗಳು ಮಿಲಿಟರಿ ಆಡಳಿತದ ಸಂದರ‍್ಬದಲ್ಲಿ ತಗೆದುಕೊಳ್ಳಲಾಗಿರುವ ನಿರ‍್ದಾರಗಳ ಬಗ್ಗೆ ವಿಚಾರಣೆ ಮಾಡಬಹುದಾಗಿದೆ. ಆದರೆ ಸೇನೆ ಆಡಳಿತದಲ್ಲಿ ನಿರ‍್ದಾರ ತಗೆದುಕೊಂಡಿರುವ ವ್ಯಕ್ತಿಗಳನ್ನು ಕಾನೂನಿನ ಅಡಿಯಲ್ಲಿ ಶಿಕ್ಶೆ ನೀಡಲು ಬರುವುದಿಲ್ಲ. ಇದರ ಬಗ್ಗೆ ಸಂವಿದಾನದ 34 ನೇ ಕಲಂನಲ್ಲಿ (Act of Indemnity) ಹೇಳಲಾಗಿದೆ. ಹಾಗಾಗಿ ಸೇನಾ ಆಡಳಿತದ ಸಮಯದಲ್ಲಿ ಸೇನಾ ನ್ಯಾಯಾಲಗಳು ತಗೆದುಕೊಂಡ ನಿರ‍್ಣಯಗಳು ಸರಿಯಾದದು ಎಂದು ಹೇಳಲಾಗಿದೆ.

ಸೇನಾ ಆಡಳಿತ ಒಳಿತೇ?
ಮಂದಿಯಾಳ್ವಿಕೆಯಲ್ಲಿ ನಂಬಿಕೆ ಇಡುವ ಯಾವುದೇ ಮಂದಿಗುಂಪಾದರೂ ತನ್ನಾಡಳಿತವಲ್ಲದೇ ಬೇರೆ ಯಾವುದೇ ರೀತಿಯ ಆಡಳಿತವನ್ನು ಸಹ ಒಪ್ಪಲು ಸಾದ್ಯವಿಲ್ಲ. ಯಾವುದೇ ಜನಾಂಗದ ಏಳಿಗೆ ಅತವಾ ಅಳಿವು ತಮ್ಮ ಸಮಾಜವನ್ನು ಕಟ್ಟಿಕೊಳ್ಳುವ ಬಗೆಯಲ್ಲಿ ಇರುತ್ತದೆ. ಜನರು ಸರಕಾರದ ವಿರುದ್ದ ದಂಗೆ ಎದ್ದರೆ ಅದಕ್ಕೆ ಕಾರಣ ಅಲ್ಲಿಯ ಸರಕಾರ ಜನರ ಬೇಡಿಕೆಗಳಿಗೆ ಸ್ಪಂದಿಸದಿರುವುದೇ ಆಗಿರುತ್ತದೆ. ಹಾಗಿರುವಾಗ ಮಂದಿಯಿಂದ ಆರಿಸಲ್ಪಟ್ಟ ಸರಕಾರವೇ ಸರಿಯಾಗಿ ಕೆಲಸ ಮಾಡದಿದ್ದ ಪಕ್ಶದಲ್ಲಿ, ಸೇನೆ ಆಡಳಿತವಾಗಲಿ ಅತವಾ ಒಬ್ಬ ವ್ಯಕ್ತಿಯ ಆಡಳಿತವಾಗಲಿ ಯಾವತ್ತಿಗೂ ಮಂದಿಯಾಳ್ವಿಕೆಗೆ ಸರಿಸಾಟಿಯಾಗುವುದಿಲ್ಲ.

ಮಂದಿಯಾಳ್ವಿಕೆಯು ತನ್ನನ್ನು ತಾನೇ ಸರಿಪಡಿಸಿಕೊಳ್ಳಬಲ್ಲುದು. ಆದರೆ, ಸೇನೆ ಆಡಳಿತ ತನ್ನನ್ನು ತಾನೇ ಸರಿದೂಗಿಸಿಕೊಳ್ಳುವಲ್ಲಿ ಸೋಲುತ್ತದೆ. ಸೇನೆ ಆಡಳಿತ ಅತವಾ ಒಬ್ಬ ವ್ಯಕ್ತಿಯ ಆಡಳಿತದಲ್ಲಿ ಕೇವಲ ಆ ವ್ಯಕ್ತಿಯ ಅತವಾ ಅವನ ಸುತ್ತ ಇರುವ ಜನರ ಮಾತೇ ಹೆಚ್ಚಾಗಿ ನಡೆಯುತ್ತದೆ ಹಾಗೂ ಜನರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಸಂಬವವೇ ಹೆಚ್ಚು.

ಮಂದಿಯಾಳ್ವಿಕೆಯಲ್ಲಿ ಅದಿಕಾರ ಜನರ ಕಯ್ಗೆ ಸಿಗಬೇಕು. ಅದಿಕಾರ ಒಂದು ಕಡೆ ಕೇಂದ್ರಿಕರಣವಾಗದೇ ಅದು ಎಲ್ಲಾ ಕಡೆ ಹಂಚಿಕೆಯಾಗಬೇಕು. ಕೇಂದ್ರಿಕ್ರುತ ಅದಿಕಾರವೇ ಬ್ರಶ್ಟಾಚಾರಕ್ಕೆ ಬುನಾದಿಯಾಗುತ್ತದೆ. ಹಾಗಿದ್ದಾಗ ಸೇನಾ ಆಡಳಿತವೂ ಸಹ ಒಬ್ಬನ (ಸೇನೆಯ ಮುಂದಾಳು) ಕಯ್ಯಲ್ಲಿ ಕೊಡುವುದು ಮಂದಿಯಾಳ್ವಿಕೆಗೆ ಹೊಂದಿಕೆಯಾಗುವುದಿಲ್ಲ.

(ಚಿತ್ರ ಸೆಲೆ: playasonly.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: