ಇಂಬಿನ ಮುನ್ನೊಟ್ಟುಗಳು

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-9

ಇಂಬಿನ ಹುರುಳನ್ನು ತಿಳಿಸಲು ಇಂಗ್ಲಿಶ್‌ನಲ್ಲಿ ಬಳಕೆಯಾಗುವ fore, inter, out, over, sub, super, trans, under, ex, ಮತ್ತು extra ಎಂಬ ಹತ್ತು ಮುನ್ನೊಟ್ಟುಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಬೇರುಗಳನ್ನು ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:

(1) fore ಒಟ್ಟು:

ಈ ಒಟ್ಟಿಗೆ ಮುಂದಿನ ಎಂಬ ಇಂಬಿನ ಹುರುಳು ಮಾತ್ರವಲ್ಲದೆ, ಮೊದಲಿನ ಇಲ್ಲವೇ ಹಿಂದಿನ ಎಂಬ ಹೊತ್ತಿನ ಹುರುಳೂ ಇದೆ; ಇವುಗಳಲ್ಲಿ ಹೊತ್ತಿನ ಹುರುಳನ್ನು ಮುಂದೆ (3)ರಲ್ಲಿ ವಿವರಿಸಲಾಗಿದೆ; ಮುಂದಿನ ಎಂಬ ಇಂಬಿನ ಹುರುಳಿನಲ್ಲಿ ಇದನ್ನು ಬಳಸಿರುವಲ್ಲಿ ಮುನ್ ಎಂಬ ಪರಿಚೆಬೇರನ್ನು ಪದಗಳ ಮುಂದೆ ಬಳಸಲು ಬರುತ್ತದೆ:

land ನೆಲ foreland ಮುನ್ನೆಲ
name ಹೆಸರು forename ಮುಂಬೆಸರು
mast ಕೂವೆಮರ foremast ಮುಂಕೂವೆಮರ

(2) inter ಒಟ್ಟು:

ಈ ಒಟ್ಟಿಗೆ ಮುಕ್ಯವಾಗಿ (ಕ) ಎರಡಕ್ಕೂ ತಾಗು, ಮತ್ತು (ಚ) ಎರಡರ ನಡುವೆ ಎಂಬ ಎರಡು ಹುರುಳುಗಳಿವೆ; ಇವುಗಳಲ್ಲಿ ಮೊದಲನೆಯ ಹುರುಳಿನಲ್ಲಿ ಕನ್ನಡದ ಒಡ ಎಂಬ ಪದವನ್ನು ಮತ್ತು ಎರಡನೆಯ ಹುರುಳಿನಲ್ಲಿ ನಡು ಎಂಬ ಪದವನ್ನು ಮೊನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

(ಕ) ಎರಡನ್ನೂ ತಾಗು ಎಂಬ ಹುರುಳಿನಲ್ಲಿ:

lace ಹೆಣೆ interlace ಒಡಹೆಣೆ
mingle ಬೆರೆ intermingle ಒಡಬೆರೆ
twine ಹೊಸೆ intertwine ಒಡಹೊಸೆ

(ಚ) ಎರಡರ ನಡುವೆ ಎಂಬ ಹುರುಳಿನಲ್ಲಿ:

leaf ಹಾಳೆ interleaf ನಡುಹಾಳೆ
net ಬಲೆ internet ನಡುಬಲೆ
national ನಾಡಿನ international ನಡುನಾಡಿನ
connect ತೆರು interconnect ನಡುತೆರು
mediate ಹೊಂದಿಸು intermediate ನಡುಹೊಂದಿಸು

(3) out ಒಟ್ಟು:
ಮೇಲೆ ವಿವರಿಸಿದ ಹಾಗೆ, ಈ ಒಟ್ಟಿಗೆ ಹೊರ ಮತ್ತು ಮೀರು ಎಂಬ ಎರಡು ಹುರುಳುಗಳಲ್ಲಿ ಬಳಕೆಯಿದ್ದು, ಅವುಗಳಲ್ಲಿ ಮೊದಲನೆಯದು ಮಾತ್ರ ಇಂಬಿಗೆ ಸಂಬಂದಿಸಿದುದಾಗಿದೆ; ಈ ಹುರುಳಿನಲ್ಲಿ ಕನ್ನಡದ ಹೊರ ಎಂಬ ಪದವನ್ನೇ ಇದಕ್ಕೆ ಸಾಟಿಯಾಗಿ ಪದಗಳ ಮೊದಲಿಗೆ ಬಳಸಲು ಬರುತ್ತದೆ:

flow ಹರಿವು outflow ಹೊರಹರಿವು
house ಮನೆ outhouse ಹೊರಮನೆ
post ಪಾಳೆಯ outpost ಹೊರಪಾಳೆಯ
going ಹೋಗುವ outgoing ಹೊರಹೋಗುವ
pour ಸುರಿ outpour ಹೊರಸುರಿ
burst ಸಿಡಿ outburst ಹೊರಸಿಡಿ
cast ತಳ್ಳು outcast ಹೊರತಳ್ಳಿದ

(4) over ಒಟ್ಟು:
ಹೆಚ್ಚಿನ ಬಳಕೆಗಳಲ್ಲೂ ಮೀರು ಇಲ್ಲವೇ ಮೀರಿದ ಎಂಬ ಅಳವಿನ ಹುರುಳಿದೆ; ಆದರೆ, ಕೆಲವು ಬಳಕೆಗಳಲ್ಲಿ ಮೇಲೆ ಇಲ್ಲವೇ ಮೇಲಿನ ಎಂಬ ಇಂಬಿನ ಹುರುಳೂ ಇದೆ:

arm ತೋಳು overarm ಮೇಲ್ತೋಳಿನ (ಎಸೆತ)
ground ನೆಲ overground ಮೇಲ್ನೆಲದ
lord ಆಳ್ಮ overlord ಮೇಲಾಳ್ಮ
shoe ಕೆರ overshoe ಮೇಲ್ಕೆರ

(5) sub ಒಟ್ಟು:
ಈ ಒಟ್ಟಿಗೆ ಮುಕ್ಯವಾಗಿ ಒಳ ಮತ್ತು ಕೆಳ ಎಂಬ ಎರಡು ಹುರುಳುಗಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಇವೇ ಪದಗಳನ್ನು ಬಳಸಲು ಬರುತ್ತದೆ; ಕೆಳ ಎಂಬುದಕ್ಕೆ ಬದಲಾಗಿ ಕಿಳ್/ಕೀಳ್ ಎಂಬ ಪರಿಚೆಬೇರನ್ನು ಬಳಸಿ ಹೆಚ್ಚು ಅಡಕವಾದ ಪದಗಳನ್ನೂ ಪಡೆಯಲು ಬರುತ್ತದೆ:

group ಗುಂಪು subgroup ಒಳಗುಂಪು
tenant ಬಾಡಿಗೆಗಾರ subtenant ಒಳಬಾಡಿಗೆಗಾರ
total ಮೊತ್ತ subtotal ಒಳಮೊತ್ತ
routine ಹಮ್ಮುಗೆ subroutine ಒಳಹಮ್ಮುಗೆ
way ಹಾದಿ subway ಕೆಳಹಾದಿ
script ಬರಿಗೆ subscript ಕೆಳಬರಿಗೆ
soil ಮಣ್ಣು subsoil ಕೆಳಮಣ್ಣು
sonic ಉಲಿಯ subsonic ಕೀಳುಲಿಯ

(6) super ಒಟ್ಟು:
ಈ ಒಟ್ಟಿಗೆ ಮೇಲೆ ಎಂಬ ಇಂಬಿನ ಹುರುಳಿದ್ದು, ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಮೇಲೆ ಎಂಬ ಪದವನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

impose ಹೇರು superimpose ಮೇಲೆಹೇರು
script ಬರಿಗೆ superscript ಮೇಲ್ಬರಿಗೆ
structure ಕಟ್ಟಡ superstructure ಮೇಲ್ಕಟ್ಟಡ

(7) trans ಒಟ್ಟು:
ಈ ಒಟ್ಟಿಗೆ ಆಚೆ ಎಂಬ ಹುರುಳು ಮಾತ್ರವಲ್ಲದೆ ಮಾರ‍್ಪಡಿಸು ಎಂಬ ಹುರುಳೂ ಇದೆ; ಹಾಗಾಗಿ, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಆಚೆ ಎಂಬುದನ್ನು ಪದದ ಬಳಿಕ, ಮತ್ತು ಮರು/ಮಾರ್‍ ಎಂಬುದನ್ನು ಎಸಕಪದಗಳ ಮೊದಲು ಇಲ್ಲವೇ ಹೆಸರುಪದಗಳ ಬಳಿಕ ಬಳಸಲು ಬರುತ್ತದೆ:

continent ಪೆರ‍್ನೆಲ transcontinental ಪೆರ‍್ನೆಲದಾಚೆಯ
nation ನಾಡು transnational ನಾಡಿನಾಚೆಯ
plant ನಾಟು transplant ಮರುನಾಟು
act ಎಸಗು transact ಮಾರೆಸಗು
scribe ಬರೆಗ transcribe ಮಾರ‍್ಬರೆ
form ಪರಿಜು transform ಪರಿಜುಮಾರು

(8) under ಒಟ್ಟು:
ಈ ಒಟ್ಟಿಗೆ ಕೆಳ ಮತ್ತು ಒಳ ಎಂಬ ಎರಡು ಇಂಬಿನ ಹುರುಳುಗಳಿವೆ; ಇದಲ್ಲದೆ, ಕೊರೆ ಎಂಬ ಅಳವಿನ ಹುರುಳೂ ಇದಕ್ಕಿದೆ.
ಇಂಬಿನ ಹುರುಳಿನಲ್ಲಿ ಇದಕ್ಕೆ ಸಾಟಿಯಾಗಿ ಕೆಳ(ಗೆ) ಮತ್ತು ಒಳ(ಗೆ) ಎಂಬ ಪದಗಳನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

(ಕ) ಕೆಳ ಎಂಬ ಹುರುಳಿನಲ್ಲಿ ಬಳಕೆ:

lay ಇಡು underlay ಕೆಳಗಿಡು
cut ಕಡಿ undercut ಕೆಳ ಕಡಿ
belly ಹೊಟ್ಟೆ underbelly ಕೆಳ ಹೊಟ್ಟೆ
growth ಬೆಳವಿ undergrowth ಕೆಳ ಬೆಳವಿ
arm ತೋಳು underarm ಕೆಳತೋಳಿನ

(ಚ) ಒಳ ಎಂಬ ಹುರುಳಿನಲ್ಲಿ ಬಳಕೆ:

clothing ಉಡುಪು underclothing ಒಳ ಉಡುಪು
current ಹರಿವು undercurrent ಒಳ ಹರಿವು
coat ಹಚ್ಚುಗೆ undercoat ಒಳಹಚ್ಚುಗೆ

ಕೆಲವು ಕಡೆಗಳಲ್ಲಿ ಕೆಳ(ಗೆ) ಎಂಬುದನ್ನು ಹೆಸರುಪದಗಳ ಬಳಿಕ ಬಳಸಬೇಕಾಗುತ್ತದೆ:

foot ಕಾಲು underfoot ಕಾಲ್ಕೆಳಗೆ
ground ನೆಲ underground ನೆಲದ ಕೆಳಗೆ
water ನೀರು underwater ನೀರ ಕೆಳಗೆ

(9) ex ಒಟ್ಟು:
ಇಂಗ್ಲಿಶ್‌ನ ex ಒಟ್ಟನ್ನು ಮೊದಲಿನ ಎಂಬ ಹೊತ್ತಿನ ಹುರುಳಿನಲ್ಲಿ ಮಾತ್ರವಲ್ಲದೆ ಹೊರಗಿನ ಎಂಬ ಇಂಬಿನ ಹುರುಳಿನಲ್ಲೂ ಬಳಸಲಾಗುತ್ತದೆ; ಈ ಎರಡನೆಯ ಬಳಕೆಯಲ್ಲಿ ಅದು ಒಳಗಿನ ಎಂಬ ಹುರುಳಿರುವ in ಎಂಬ ಒಟ್ಟಿಗೆ ಬದಲಾಗಿ ಬರುತ್ತದೆ (import : export).

ಇಂತಹ ಕಡೆಗಳಲ್ಲಿ ಇಂಗ್ಲಿಶ್‌ನ in ಎಂಬುದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಒಳ ಎಂಬ ಪದವನ್ನು, ಮತ್ತು ex ಎಂಬುದಕ್ಕೆ ಸಾಟಿಯಾಗಿ ಹೊರ ಎಂಬ ಪದವನ್ನು ಬಳಸಲು ಬರುತ್ತದೆ; ಆದರೆ, ಕೆಲವೆಡೆಗಳಲ್ಲಿ ಈ ರೀತಿ ಒಳ-ಹೊರ ಎಂಬ ಪದಗಳನ್ನು ಬಳಸುವಲ್ಲಿ ಅವುಗಳ ಬಳಿಕ ಬರುವ ಎಸಕಪದವನ್ನೂ ಬದಲಾಯಿಸಬೇಕಾಗುತ್ತದೆ:

implode ಒಳಸಿಡಿ explode ಹೊರಸಿಡಿ
interior ಒಳಮಯ್ exterior ಹೊರಮಯ್
import ಒಳತರು export ಹೊರಕಳಿಸು
inhale ಒಳಸೆಳೆ exhale ಹೊರಬಿಡು

(10) extra ಒಟ್ಟು:
ಇದಕ್ಕೆ ಹೊರಗಿನ ಎಂಬ ಹುರುಳಿದ್ದು, ಕನ್ನಡದಲ್ಲಿ ಈ ಹುರುಳನ್ನು ಪಡೆಯಲು ಹೊರಗಿನ ಎಂಬ ಪದವನ್ನು ಹೆಸರುಪದದ ಬಳಿಕ ಬಳಸಬೇಕಾಗುತ್ತದೆ:

marital ಮದುವೆಯ extramarital ಮದುವೆಹೊರಗಿನ
intestinal ಕರುಳಿನ extraintestinal ಕರುಳುಹೊರಗಿನ
linguistic ನುಡಿಯ extralinguistic ನುಡಿಯ ಹೊರಗಿನ
official ಮಣಿಹದ extraofficial ಮಣಿಹದ ಹೊರಗಿನ

(11) tele ಒಟ್ಟು:
ದೂರದ ಎಂಬ ಹುರುಳಿರುವ ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಗೆಂಟು ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

care ಆರಯ್ಕೆ telecare ಗೆಂಟಾರಯ್ಕೆ
learning ಕಲಿಕೆ telelearning ಗೆಂಟುಕಲಿಕೆ
sale ಮಾರಾಟ telesale ಗೆಂಟುಮಾರಾಟ
screen ತೆರೆ telescreen ಗೆಂಟುತೆರೆ

ತಿರುಳು:
ಇಂಗ್ಲಿಶ್‌ನಲ್ಲಿ ಹಲವು ಇಂಬಿನ ಮುನ್ನೊಟ್ಟುಗಳು ಬಳಕೆಯಾಗುತ್ತಿದ್ದು, ಇವಕ್ಕೆ ಸಾಟಿಯಾಗಿ ಹೆಚ್ಚಿನೆಡೆಗಳಲ್ಲೂ ಕನ್ನಡದ ಮುನ್, ಎಡ, ನಡು, ಹೊರ, ಒಳ, ಕೆಳ, ಮೇಲ್, ಗೆಂಟು ಎಂಬಂತಹ ಪರಿಚೆಬೇರುಗಳನ್ನು ಇಲ್ಲವೇ ಪದಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ.

<< ಬಾಗ-8

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ಬಲಾ ರೆ… ನಾನಿದನ್ನ ಕಾಯ್ತ ಇದ್ದೆ…

    ಆದರೆ transnational ನಾಡಿನಾಚೆಯ ಅನ್ನೊದಕ್ಕೆ ನಗೇಕೊ ಮನಸ್ಸೊಪ್ಪದಾಗಿದೆ.
    ಅದಕ್ಕೆ ಬೇಕಿದ್ದರೆ, ಮುನ್ನೊಟ್ಟು ಕೊಟ್ಟೆ ಬರೆದರೆ “ಆಚೆನಾಡಿನ” ಎಂದಾಗುತ್ತದೆ. ಇದರಲ್ಲಿ ತಪ್ಪೇನಿಲ್ಲ ಅಲ್ಲವೆ.

    scribe ಅಂದರೆ ಬರೆಗ, subscription ಗೆ ಬರಕೊಟ್ಟ ಎನ್ನಬಹುದೆ? ಇಲ್ಲ ಬರಿಜು?

    undergrowth ಗೆ ಸೊರಗು ಅನ್ನಬಹುದಲ್ಲ.
    ಬೆಳೆ – ಸೊರಗು
    ಮಗು ಬೆಳೆಯುತ್ತಿದೆ, ರೋಗ ಬಂದಾಗ ಸೊರಗಿದೆ.

    port => ಒಯ್ಯು ಅಂತ ಆದರೆ
    import => ಒಳಗೊಯ್ಯು
    export => ಹೊರಗೊಯ್ಯು
    transport => ಆಚೆಗೊಯ್ಯು

    • ಅರಿವಾಯ್ತು “ನಾಡಿನಾಚೆಯ” ನೆ ಸರಿಯಾಗಿದೆ…
      ಆಚೆನಾಡಿನ ಅಂದರೆ ಆಚೆಬದಿಯಲ್ಲಿರುವ ಒಂದು ನಾಡು, ಅದರ ತಪ್ಪುಹುರುಳು ಕೊಟ್ಟಂತಾಗುತ್ತದೆ.

ಅನಿಸಿಕೆ ಬರೆಯಿರಿ: