ನುಡಿಯ ಅಳಿಸದೇ ಉಳಿಸುವುದು ಹೇಗೆ?

– ರತೀಶ ರತ್ನಾಕರ.

mmw-disappearing-languages

ಒಂದಾನೊಂದು ಕಾಲದಲ್ಲಿ ಡಯ್ನೋಸಾರ್ ಎಂಬ ದೊಡ್ಡ ಪ್ರಾಣಿ ಬದುಕಿತ್ತು, ಪ್ರಕ್ರುತಿಯ ಹೊಡೆತಕ್ಕೆ ಸಿಕ್ಕು ಇಂದು ಆ ಪ್ರಾಣಿಯ ಸಂತತಿ ಅಳಿದು ಪಳೆಯುಳಿಕೆ ಮಾತ್ರ ಅಲ್ಲಲ್ಲಿ ಉಳಿದಿದೆ. ಇದು ಅಳಿದು ಹೋದ ಪ್ರಾಣಿಯ ಕತೆಯಾದರೆ ಇನ್ನು ಇತ್ತೀಚೆಗಶ್ಟೇ ಅಳಿವಿನ ಅಂಚಿನಲ್ಲಿರುವ ಹುಲಿಗಳನ್ನು ಕಾಪಾಡುವುದರ ಬಗ್ಗೆ ಸಾಕಶ್ಟು ಕೇಳುತ್ತಿದ್ದೇವೆ. ಹೀಗೆ ಅಳಿದು ಹೋಗುವುದು ಇಲ್ಲವೇ ಅಳಿವಿನ ಅಂಚಿಗೆ ಬರುವುದು ಜೀವಿಗಳಿಗೆ ಮಾತ್ರ ಮೀಸಲಾಗಿಲ್ಲ, ನಾವು ಮಾತನಾಡುವ ನುಡಿಗೂ ಈ ಹೊತ್ತು ಬರುತ್ತದೆ!

ಹವ್ದು, ನುಡಿಗಳೂ ಕೂಡ ಅಳಿವಿನ ಅಂಚಿಗೆ ಬಂದಿವೆ, ಬರುತ್ತಿವೆ ಮುಂದೆ ಬರುತ್ತಲೇ ಇರಬಹುದು. ಇತ್ತೀಚೆಗೆ, ಅಂದರೆ 2010 ರಲ್ಲಿ ಅಂಡಮಾನ್ ದ್ವೀಪದಲ್ಲಿ, ಅಳಿವಿನ ಅಂಚಿನಲ್ಲಿ ಇದ್ದ ಅಕಾ-ಬೊ (Aka-bo) ಎಂಬ ನುಡಿಯಾಡುಗರ ಕೊನೆಯ ತಲೆಮಾರಿನ, ಕೊನೆಯ ನುಡಿಯಾಡುಗನೊಬ್ಬ ತೀರಿ ಹೋದ ಬಳಿಕ ಆ ನುಡಿಯು ಅಳಿದು ಹೋದ ನುಡಿಗಳ ಸಾಲಿಗೆ ಸೇರಿಕೊಂಡಿತು! ಹೀಗೆ ಹಲವು ನುಡಿಗಳು ತಮ್ಮ ಅಳಿವಿನ ಅಂಚಿನಲ್ಲಿ ಇದ್ದು ಕೊನೆಯ ದಿನಗಳನ್ನು ಎಣಿಸುತ್ತಿವೆ. ಅಲ್ಲಲ್ಲಿ, ಇವುಗಳನ್ನು ಕಾಪಾಡುವ ಕೆಲಸವು ಕೊಂಚ ಮಟ್ಟಿಗೆ ನಡೆಯುತ್ತಿದೆ.

ಯಾವುದೇ ಒಂದು ನುಡಿಯು ಸಾಕಶ್ಟು ಮಂದಿಯ ನಡುವೆ ಬಳಕೆಯಲ್ಲಿರದೇ, ಕೆಲವೇ ಮಂದಿಯ ಬಾಯಿ ಮಾತಾಗಿದ್ದರೆ ಅದನ್ನು ಅಳಿವಿನ ಅಂಚಿನಲ್ಲಿರುವ ನುಡಿ ಎಂದು ಕರೆಯಬಹುದು. ಒಂದು ನುಡಿಯು ಬೇರೊಂದು ನುಡಿಯ ಹೊಡೆತಕ್ಕೆ ಸಿಕ್ಕಿ ಅಳಿವಿನ ಅಂಚಿಗೆ ಬರಬಹುದು. ಇಲ್ಲವೇ ಕಾಯಿಲೆ, ಯುದ್ದ ಮತ್ತು ಪ್ರಕ್ರುತಿ ವಿಕೋಪಗಳ ಹೊಡೆತಕ್ಕೆ ಸಿಕ್ಕು ಒಂದು ನುಡಿಯಾಡುಗರ ಗುಂಪು ನಾಶವಾದರೆ ಆ ನುಡಿಯು ಅಳಿವಿನ ಅಂಚಿಗೆ ಬರಬಹುದು. ಮತ್ತೊಂದು ಬಗೆಯ ಅಳಿವು ಎಂದರೆ ಒಂದು ನುಡಿಯು ಮಾರ‍್ಪಾಟುಗೊಂಡು ಹೊಸ ನುಡಿಯಾಗಿ ಇಲ್ಲವೇ ಹಲವು ನುಡಿಯಾಗಿ ಮೂಡುವುದು. ಎತ್ತುಗೆಗೆ, ಲ್ಯಾಟಿನ್ ನುಡಿಗಳು ಈಗ ಬಳಕೆಯಲ್ಲಿಲ್ಲ ಆದರೆ ಅದರಿಂದ ಮೂಡಿರುವ ಪ್ರೆಂಚ್ ಹಾಗು ಇಟಾಲಿಯನ್ ನಂತಹ ಹಲವು ನುಡಿಗಳು ಬಳಕೆಯಲ್ಲಿವೆ.

ಇನ್ನು ನುಡಿಯ ಅಳಿವಿನ ಬಗ್ಗೆ ತಿಳಿಯೋಣ. ಒಂದು ನುಡಿಯು ಇನ್ನೊಂದು ನುಡಿಯ ಹೊಡೆತಕ್ಕೆ ಹಲವಾರು ಬಗೆಗಳಲ್ಲಿ ಬಲಿಯಾಗಬಹುದು. ಎತ್ತುಗೆಗೆ, ಸುಮಾರು 16 ನೇ ನೂರೇಡಿನಲ್ಲಿ ಸ್ಪೇನ್ ಮಂದಿಯು ಉತ್ತರ ಅಮೇರಿಕಾದ ಮೆಕ್ಸಿಕೋ ನಾಡನ್ನು ಆಕ್ರಮಿಸಿಕೊಂಡು ತನ್ನ ವಸಹಾತನ್ನಾಗಿ ಮಾಡಿಕೊಂಡಿತು. ಮೆಕ್ಸಿಕೋದಲ್ಲಿ ಬಳಕೆಯಲ್ಲಿದ್ದ ನುಡಿಗಳನ್ನು ಕಡೆಗಣಿಸಿ ಸ್ಪ್ಯಾನಿಶ್ ನುಡಿಯನ್ನು ಆಡಳಿತ ನುಡಿಯನ್ನಾಗಿ ಮಾಡಿಕೊಂಡು ಹಲವಾರು ವರುಶಗಳ ಕಾಲ ಆಳ್ವಿಕೆ ನಡೆಸಿತು. ಇದರಿಂದಾಗಿ ಮೆಕ್ಸಿಕೋದಲ್ಲಿದ್ದ ಹಲವಾರು ನುಡಿಗಳು ಅಳಿದು ಹೋದವು. ಈಗ ಮೆಕ್ಸಿಕೋದಲ್ಲಿ ಸುಮಾರು 60 ಬಗೆಯ ಒಳನುಡಿಗಳು ತಮ್ಮ ಅಳಿವಿನ ಅಂಚಿನಲ್ಲಿವೆ!

ಮತ್ತೊಂದು ಎತ್ತುಗೆಯನ್ನು ತೆಗೆದುಕೊಳ್ಳುವುದಾದರೆ ಹಲನುಡಿಯನ್ನಾಡುವ ಒಂದು ನಾಡಿನಲ್ಲಿ ಯಾವುದಾದರು ಒಂದು ನುಡಿಯನ್ನು ಮಾತ್ರ ಆಡಳಿತ ನುಡಿಯನ್ನಾಗಿ ಬಳಸಲ್ಪಟ್ಟರೆ ಆಗ ಉಳಿದ ನುಡಿಗಳು ಮೂಲೆಗುಂಪಾಗಿ ಕ್ರಮೇಣ ಅಳಿವಿನ ಅಂಚಿಗೆ ಸರಿಯುತ್ತವೆ. ಕ್ಯಾಲಿಪೋರ‍್ನಿಯಾದಲ್ಲಿರುವ ಚೂಮಾಶ್ ಎಂಬ ಮಂದಿಯು ಇಂಗ್ಲೀಶಿನ ಹೊಡೆತಕ್ಕೆ ಸಿಕ್ಕು ತಮ್ಮ ತಾಯ್ನುಡಿಯನ್ನು ಕಳೆದುಕೊಂಡಿದ್ದಾರೆ. ಚೂಮಾಶ್ ನ ಈಗಿನ ತಲೆಮಾರಿನವರಿಗೆ ತಮ್ಮ ಮೂಲ ನುಡಿಯ ಅರಿವಿಲ್ಲ. ಹೀಗೆ ಒಂದು ನುಡಿಯ ಅಳಿವಾಗಬೇಕಾದರೆ ಆ ನುಡಿಯಾಡುವ ಮಂದಿಯ ಕೊನೆಯಾಗಲೇ ಬೇಕೆಂದಿಲ್ಲ, ಇನ್ನೊಂದು ನುಡಿಯ ಹೊಡೆತಕ್ಕೆ ಸಿಕ್ಕೂ ಅಳಿಯಬಹುದು.

ನುಡಿಯ ಅಳಿವು ಕೂಡಲೇ ಆಗಬಹುದು ಇಲ್ಲವೇ ಹಂತ ಹಂತವಾಗಿ ಆಗಬಹುದು. ನಾನು ಮೊದಲೇ ತಿಳಿಸಿದಂತೆ ಕಾಯಿಲೆ, ಯುದ್ದ ಮತ್ತು ಪ್ರಕ್ರುತಿ ವಿಕೋಪಕ್ಕೆ ಯಾವುದಾದರು ಜನಾಂಗ ಸಿಕ್ಕು ಅಳಿದು ಹೋದರೆ ಅವರ ಜೊತೆ ಅವರ ನುಡಿಯು ಕೂಡಲೇ ಅಳಿದು ಹೋಗಬಹುದು. ಇನ್ನು ಹಂತ ಹಂತವಾಗಿ ಅಳಿಯುವ ನುಡಿಯಲ್ಲಿ ಮೊದಲು ಆ ನುಡಿಯು ವ್ಯಾವಹಾರಿಕವಾಗಿ ಮತ್ತು ಕಲಿಕೆಯ ಬಾಗವಾಗಿ ಉಳಿಯದೇ ಆ ಜಾಗವನ್ನು ಮತ್ತೊಂದು ನುಡಿಯು ಆಕ್ರಮಿಸಿಕೊಳ್ಳುತ್ತದೆ, ಇದು ಹೀಗೆ ಮುಂದುವರಿದು ಒಂದು ತಲೆಮಾರಿನ ಮಕ್ಕಳಲ್ಲಿ ಆ ನುಡಿಯ ಬಳಕೆ ನಿಲ್ಲುತ್ತದೆ. ಕೇವಲ ಹಿರಿಯರು ಮಾತ್ರ ಆ ನುಡಿಯನ್ನು ಆಡುವವರಾಗಿರುತ್ತಾರೆ. ಈ ಹಂತದಲ್ಲಿ, ಆ ನುಡಿಯನ್ನಾಡುವ ಹಿರಿಯರ ಸಾವಾಗುತ್ತಿದ್ದಂತೆ ಆ ನುಡಿಯು ಅಳಿದುಹೋಗುತ್ತದೆ.

ಮಂದಿಯಾಳ್ವಿಕೆ ಎಂಬುದು ಜಗತ್ತಿನ ಹೆಚ್ಚುಬಾಗದಲ್ಲಿ ಈಗ ನಡೆಯುತ್ತಿದೆ. ಕಡಿಮೆ ಎಣಿಕೆಯ ಮಂದಿಯು ಮಾತನಾಡುವ ನುಡಿಗಳನ್ನು ಕಾಪಾಡುವಲ್ಲಿ ಈ ಆಳ್ವಿಕೆಯು ಅಲ್ಲಲ್ಲಿ ಗಮನ ಹರಿಸದೇ ಇರುವುದರಿಂದ ಹಲವಾರು ನುಡಿಗಳನ್ನು ಕಳೆದುಕೊಳ್ಳಲಾಗುತ್ತಿದೆ. ಪಾಪುವಾ ನ್ಯೂ ಗಿನಿಯಲ್ಲಿರುವ ಬುಡಕಟ್ಟು ಜನಾಂಗ ಬರೋಬ್ಬರಿ 900 ನುಡಿಗಳನ್ನು ಆಡುತ್ತವೆ! ಆದರೆ ಅವುಗಳನ್ನು ಉಳಿಸಿಕೊಳ್ಳುವಲ್ಲಿ ಅಲ್ಲಿನ ಆಳ್ವಿಕೆ ಯಾವುದೇ ಹೆಜ್ಜೆಗಳನ್ನು ಇಟ್ಟಿಲ್ಲ. ಜಗತ್ತಿನ ದೊಡ್ಡ ದೊಡ್ಡ ಮಂದಿಯಾಳ್ವಿಕೆಗಳ ಆಡಳಿತ ನುಡಿಗಳನ್ನು ತೆಗೆದುಕೊಂಡರೆ ಇವುಗಳಲ್ಲಿ ಇಂಗ್ಲೀಶ್, ಸ್ಪ್ಯಾನಿಶ್, ಪೋರ‍್ಚುಗೀಸ್, ಮ್ಯಾಂಡ್ರಿಯನ್ ಚಯ್ನೀಸ್, ರಶ್ಯನ್, ಇಂಡೋನೇಶಿಯನ್, ಅರಾಬಿಕ್ ಮತ್ತು ಹಿಂದಿ ಹೀಗೆ ಕೆಲವು ನುಡಿಗಳು ಮಾತ್ರ ಲೆಕ್ಕಕ್ಕೆ ಸಿಗುತ್ತವೆ ಇದರಿಂದಾಗಿ ಮುಂದಿನ ನೂರು ವರುಶದಲ್ಲಿ ಸುಮಾರು 90% ನುಡಿಗಳನ್ನು ಕಳೆದು ಕೊಳ್ಳುವ ಆತಂಕದಲ್ಲಿ ನಾವಿದ್ದೇವೆ (ಮಾಹಿತಿ ಸೆಲೆಯ ಕೊಂಡಿ ಕೆಳಗೆ ನೀಡಲಾಗಿದೆ). ಹೀಗೆ ಜಗತ್ತಿನ ಬೇರೆ ಬೇರೆ ಬಾಗಗಳಲ್ಲಿರುವ ಬುಡಕಟ್ಟು ಜನಾಂಗದ ನುಡಿಗಳು ಮತ್ತು ಕಡಿಮೆ ಎಣಿಕೆಯಲ್ಲಿರುವ ನುಡಿಯಾಡುಗರ ನುಡಿಗಳು ಅಳಿವಿನ ಅಂಚಿಗೆ ಬಂದು ನಿಂತಿವೆ.

ನುಡಿಯು ಅಳಿಯುವುದರಿಂದ ಕಳೆದುಕೊಳ್ಳುವುದೇನು?

ಒಂದು ನುಡಿಯಾಡುವ ಮಂದಿಯ ನುಡಿಯು ಅಳಿಯುವುದರ ಜೊತೆಗೆ ಅವರ ಸಂಸ್ಕ್ರುತಿ, ಹಬ್ಬಗಳು ಮತ್ತು ಆ ಮಂದಿಯ ಗುರುತು ಕೊನೆಯಾದಂತೆ. ಹಳಮೆ, ಅರಿಮೆ, ಆದ್ಯಾತ್ಮ ಮತ್ತು ನಲ್ಬರಹಕ್ಕೆ ಆ ನುಡಿಯು ಜಗತ್ತಿಗೆ ಕೊಡುತ್ತಿದ್ದ ಕೊಡುಗೆ ಹಾಗು ನುಡಿಯ ಸಾದ್ಯತೆಗಳನ್ನೆಲ್ಲಾ ಕಳೆದುಕೊಂಡಂತೆ. ಯಾವುದೇ ಒಂದು ನುಡಿಯಾಡುವ ಮಂದಿಗೆ ನುಡಿಗಿಂತ ದೊಡ್ಡದಾದ ಮತ್ತು ಅತ್ಯಂತ ಹಳೆಯ ಗುರುತು ಮತ್ತೊಂದಿಲ್ಲ. ಹೀಗಿರುವ ಒಂದು ನುಡಿಯ ಅಳಿವಾದರೆ ಅದು ಆ ಮಂದಿಯ ದೊಡ್ಡ ಸೋಲಾಗಿರುತ್ತದೆ. ನೆನಪಿರಲಿ, ಕ್ಯಾಲಿಪೋರ‍್ನಿಯಾದ ಚೂಮಾಶ್ ಮಂದಿಯು ತಮ್ಮ ತಾಯ್ನುಡಿಯನ್ನು ಕಳೆದುಕೊಂಡಿದ್ದಾರೆ ಆದರೆ ಅವರ ಅಳಿವಾಗಿಲ್ಲ, ಅವರು ತಮ್ಮ ಅತಿ ದೊಡ್ಡ ಗುರುತನ್ನೇ ಕಳೆದುಕೊಂಡಿದ್ದಾರೆ.

ನಾವೇನು ತಿಳಿಯಬಹುದು?
ಒಟ್ಟಾರೆಯಾಗಿ ಒಂದು ನುಡಿಯು ಅಳಿವಿನ ಅಂಚಿಗೆ ಬರಲು ಮೂರು ಮುಕ್ಯ ಕಾರಣಗಳನ್ನು ಈ ಮೇಲಿನ ವಿಚಾರಗಳಿಂದ ತಿಳಿಯಬಹುದು.

  1. ನುಡಿಯಾಡುವ ಮಂದಿಯ ಎಣಿಕೆ ಕಡಿಮೆಯಾಗುವುದು.
  2. ಒಂದು ನುಡಿಯಿಂದ ಮಂದಿಯ ಬದುಕು ಕಟ್ಟಿಕೊಳ್ಳಲಾಗದೇ ಹೋಗುವುದು. ಅದಕ್ಕಾಗಿ ಆ ಮಂದಿಯು ಬೇರೊಂದು ನುಡಿಯ ಮೊರೆ ಹೋಗುವುದು.
  3. ಮಂದಿಯಾಳ್ವಿಕೆ ಇಲ್ಲವೇ ಅರಸಾಳ್ವಿಕೆ ಹೀಗೆ ಯಾವುದೇ ಆಳ್ವಿಕೆಯಲ್ಲಿ ಎಲ್ಲಾ ನುಡಿಯನ್ನು ಸಮಾನಾವಾಗಿ ಕಾಣದೆ ಯಾವುದೋ ಒಂದು ನುಡಿಯನ್ನು ಮೇಲೇರಿಸಿ ಕೂರಿಸುವುದು, ಮತ್ತು ಆ ನುಡಿಯನ್ನು ಬಳಸುವಂತೆ ಬಗೆ ಬಗೆಯ ರೂಪದಲ್ಲಿ ನಾಡಿನ ಮಂದಿಯ ಮೇಲೆ ಸರಕಾರವೇ ಹೇರಿಕೆಯನ್ನು ಮಾಡುವುದು.

ಈ ಮೇಲಿನ ಮೂರು ವಿಶಯಗಳ ಸುತ್ತ ನಾವು ಗಮನಹರಿಸಿ ನಮ್ಮ ನಮ್ಮ ನುಡಿಗಳನ್ನು ಕಾಪಾಡಿಕೊಳ್ಳಬೇಕಿದೆ. ನಮ್ಮ ನುಡಿಯನ್ನು ನಾವು ಹಲವಾರು ತಲೆಮಾರುಗಳವರೆಗೂ ಉಳಿಸಿಕೊಳ್ಳಬೇಕು ಎಂದರೆ ನಮ್ಮ ಮಂದಿಯೆಣಿಕೆ ಕಡಿಮೆಯಾಗದಂತೆ ಎಚ್ಚರವಹಿಸಬೇಕು. ನುಡಿಯ ಬಳಕೆಗೆ ಹೆಚ್ಚು ಒತ್ತು ಕೊಡಬೇಕು. ಬಳಕೆ ಎಂದರೆ ನಮ್ಮ ಕಲಿಕೆ, ದುಡಿಮೆ ಮತ್ತು ವ್ಯವಹಾರಗಳಲ್ಲಿ ನುಡಿಯನ್ನು ಕಾದುಕೊಳ್ಳುವುದು.

ಇದೆಲ್ಲದರ ಜೊತೆಗೆ ಮುಕ್ಯವಾಗಿ ನಮ್ಮ ಆಳ್ವಿಕೆಯಲ್ಲಿ ನಮ್ಮ ನುಡಿಗೆ ಸಮಾನ ಸ್ತಾನಮಾನ ಇರುವಂತೆ ನೋಡಿಕೊಳ್ಳುವುದು ಮತ್ತು ಬೇರೊಂದು ನುಡಿಯ ಹೇರಿಕೆ ಆಗದಂತೆ ತಡೆಗಟ್ಟುವುದು. ಹೀಗಾದಲ್ಲಿ ಮಾತ್ರ ಒಂದು ನುಡಿಯು ಮುಂದಿನ ತಲೆಮಾರಿಗೆ ಪಳೆಯುಳಿಕೆಯಾಗದಂತೆ ಬಳಕೆಯಲ್ಲಿಯೇ ಉಳಿಯುವುದು.

(ಮಾಹಿತಿ ಸೆಲೆ: linguisticsociety.org, wikipedia.org )

(ಚಿತ್ರ ಸೆಲೆ: lackuna.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: