ಹೊತ್ತಿನ ಮುನ್ನೊಟ್ಟುಗಳು

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-10

ಹೊತ್ತಿಗೆ ಸಂಬಂದಿಸಿದಂತೆ ಮುಕ್ಯವಾಗಿ ex, fore, post, pre, ante, re, neo, paleo, ಮತ್ತು proto ಎಂಬ ಒಂಬತ್ತು ಮುನ್ನೊಟ್ಟುಗಳು ಇಂಗ್ಲಿಶ್ನಲ್ಲಿ ಬಳಕೆಯಲ್ಲಿವೆ; ಕನ್ನಡದಲ್ಲಿ ಮುನ್ನೊಟ್ಟುಗಳಿಲ್ಲದಿದ್ದರೂ ಕೆಲವು ಪದಗಳನ್ನು ಇಲ್ಲವೇ ಬೇರುಗಳನ್ನು ಅವುಗಳ ಜಾಗದಲ್ಲಿರಿಸಿ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ. ಎತ್ತುಗೆಗಾಗಿ, ಇಂಗ್ಲಿಶ್ನ fore ಎಂಬ ಮುನ್ನೊಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಮುನ್ ಎಂಬ ಬೇರನ್ನು ಅದೇ ಜಾಗದಲ್ಲಿ ಬಳಸಲು ಬರುತ್ತದೆ (foresee ಮುಂಗಾಣು).

ಹೊತ್ತಿನ ಹುರುಳನ್ನು ಕೊಡುವ ಮೇಲಿನ ಒಂಬತ್ತು ಮುನ್ನೊಟ್ಟುಗಳಿರುವ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:

(1) ex ಒಟ್ಟು:
ಮೊದಲಿನ ಎಂಬ ಹುರುಳಿರುವ ಈ ಒಟ್ಟಿಗೆ ಬದಲಾಗಿ ಕನ್ನಡದಲ್ಲಿ ಮುನ್ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ:

friend ಗೆಳೆಯ ex-friend ಮುನ್ಗೆಳೆಯ
husband ಗಂಡ ex-husband ಮುನ್ಗಂಡ
president ಮೇಲಾಳು ex-president ಮುನ್ಮೇಲಾಳು
typist ಬೆರಳಚ್ಚುಗ ex-typist ಮುನ್ಬೆರಳಚ್ಚುಗ

ಕನ್ನಡದ ಮುನ್ ಮತ್ತು ಹಿನ್ ಎಂಬ ಎರಡು ಪರಿಚೆಬೇರುಗಳ ಬಳಕೆಯಲ್ಲಿ ತುಸು ಗೊಂದಲವಿರುವ ಹಾಗೆ ಕಾಣಿಸುತ್ತದೆ; ಯಾಕೆಂದರೆ, ಮೇಲಿನ ಪದಗಳಲ್ಲಿ ex ಎಂಬುದು ಮೊದಲಿನ ಎಂಬ ಹುರುಳನ್ನು ಕೊಡುತ್ತದೆ ಎಂದು ಹೇಳುವ ಬದಲು ಹಿಂದಿನ ಎಂಬ ಹುರುಳನ್ನು ಕೊಡುತ್ತದೆಯೆಂದೂ ಹೇಳಲು ಬರುತ್ತದೆ, ಮತ್ತು ಹಾಗಿದ್ದಲ್ಲಿ ಅದಕ್ಕೆ ಸಾಟಿಯಾಗಿ ಹಿನ್ ಎಂಬುದನ್ನು ಬಳಸಬಹುದಲ್ಲವೇ ಎಂದು ಕೆಲವರಿಗೆ ಅನಿಸಬಹುದು (ಹಿನ್ಗೆಳೆಯ, ಹಿನ್ಗಂಡ).

ನಿಜಕ್ಕೂ ಇದು ಗೊಂದಲವಲ್ಲ; ಹಿನ್ ಮತ್ತು ಮುನ್ ಎಂಬವು ಮುಕ್ಯವಾಗಿ ಇಂಬಿನ ಹುರುಳನ್ನು ಕೊಡುವ ಪರಿಚೆಬೇರುಗಳಾಗಿದ್ದು, ಹೊತ್ತಿನ ಹುರುಳನ್ನು ಕೊಡುವುದಕ್ಕಾಗಿ ಬಳಸುವುದು ಅವುಗಳ ಹೆಚ್ಚಿನ ಬಳಕೆಯಾಗಿದೆ; ಆದರೆ, ಹೀಗೆ ಅವುಗಳ ಬಳಕೆಯನ್ನು ಹಿಗ್ಗಿಸುವಲ್ಲಿ ಬೇರೆ ಕೆಲವು ವಿಶಯಗಳೂ ತೊಡಗಿಕೊಳ್ಳುತ್ತವೆ, ಮತ್ತು ಇದರಿಂದಾಗಿ ಹಿನ್ ಮತ್ತು ಮುನ್ ಎಂಬವುಗಳ ಆಯ್ಕೆಯಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ.

ಎತ್ತುಗೆಗಾಗಿ, ಒಂದು ಹೊತ್ತಗೆಗೆ ಮುಂಬದಿ ಮತ್ತು ಹಿಂಬದಿಗಳಿದ್ದು, ಮುಂಬದಿಯಲ್ಲಿ ಕಾಣಿಸುವ ನುಡಿಯನ್ನು ಮುನ್ನುಡಿ ಎಂಬುದಾಗಿ, ಮತ್ತು ಹಿಂಬದಿಯಲ್ಲಿ ಕಾಣಿಸುವ ನುಡಿಯನ್ನು ಹಿನ್ನುಡಿ ಎಂಬುದಾಗಿ ಕರೆಯಲಾಗುತ್ತದೆ; ಇದಕ್ಕೆ ಬದಲು, ಹಿನ್ನಡವಳಿ ಎಂಬುದರಲ್ಲಿ ಹಿನ್ ಎಂಬುದನ್ನು ಬಳಸಿರುವುದಕ್ಕೆ ಅದು ತಿಳಿಸುವ ಸಂಗತಿಗಳು ಹಿಂದೆಯೇ ನಡೆದು ಹೋಗಿವೆ ಎಂಬ ಬೇರೆಯೇ ವಿಶಯ ಕಾರಣವಾಗಿದೆ. ಹೊತ್ತಗೆಗಿರುವ ಹಾಗೆ ನಡವಳಿಗೆ ಹಿಂಬದಿ-ಮುಂಬದಿಗಳಿಲ್ಲ.

(2) fore ಒಟ್ಟು:

ಈ ಒಟ್ಟಿಗೆ ಮುಕ್ಯವಾಗಿ ಮೊದಲು ಎಂಬ ಹುರುಳಿದ್ದು, ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಮುನ್ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ; ಇಂಗ್ಲಿಶ್ನಲ್ಲಿ ಇರುವ ಹಾಗೆ, ಕನ್ನಡದಲ್ಲೂ ಇದನ್ನು ಎಸಕಪದ ಮತ್ತು ಹೆಸರುಪದಗಳೆರಡರ ಮೊದಲು ಬಳಸಲು ಬರುತ್ತದೆ:

(ಕ) ಎಸಕಪದಗಳ ಮೊದಲು:

warn ಎಚ್ಚರಿಸು forewarn ಮುನ್ನೆಚ್ಚರಿಸು
tell ಓರು foretell ಮುನ್ನೋರು
stall ತಡೆ forestall ಮುಂತಡೆ
see ಕಾಣು foresee ಮುಂಗಾಣು

(ಚ) ಹೆಸರುಪದಗಳ ಮೊದಲು:

thought ಅನಿಸಿಕೆ forethought ಮುನ್ನನಿಸಿಕೆ

(3) post ಒಟ್ಟು:

ಈ ಒಟ್ಟಿಗೆ ಆಮೇಲೆ ಇಲ್ಲವೇ ಆಮೇಲಿನ ಎಂಬ ಹುರುಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಬಳಿಕ ಇಲ್ಲವೇ ಬಳಿಕದ ಎಂಬ ಪದವನ್ನು ಬಳಸಲು ಬರುತ್ತದೆ; ಆದರೆ, ಇದನ್ನು ಹೆಸರುಪದದ ಪತ್ತುಗೆರೂಪದ ಬಳಿಕ, ಮತ್ತು ಎಸಕಪದದ ಪರಿಚೆರೂಪದ ಬಳಿಕ ಬಳಸಬೇಕಾಗುತ್ತದೆ:

autopsy ಹೆಣದೊರೆ postautopsy ಹೆಣದೊರೆಯ ಬಳಿಕ
battle ಕಾಳಗ postbattle ಕಾಳಗದ ಬಳಿಕ
drilling ಕೊರೆತ postdrilling ಕೊರೆತದ ಬಳಿಕ

ಆದರೆ, ಕನ್ನಡದಲ್ಲಿ ಇವು ಪದಕಂತೆಗಳಾಗುತ್ತವಲ್ಲದೆ ಪದಗಳಲ್ಲ. ಹಾಗಾಗಿ, ಬಳಿಕ ಎಂಬುದರ ಬದಲು ಬಳಿ ಎಂಬುದನ್ನಶ್ಟೇ ಹೆಸರುಪದ ಇಲ್ಲವೇ ಎಸಕಪದಗಳ ಮೊದಲು ಬಳಸಿ ಹೆಚ್ಚು ಅಡಕವಾದ ಪದಗಳನ್ನು ಪಡೆಯಬಹುದು. ಬಳಿ ಎಂಬುದರ ಇಂತಹ ಬಳಕೆಯನ್ನು ಬಳಿಸಲ್ಲು, ಬಳಿವಿಡಿ ಎಂಬಂತಹ ಪದಗಳಲ್ಲಿ ಕಾಣಬಹುದು:

depression ಕುಸಿತ postdepression ಬಳಿಕುಸಿತ
battle ಕಾಳಗ postbattle ಬಳಿಕಾಳಗ
fracture ಮುರಿತ postfracture ಬಳಿಮುರಿತ
release ಬಿಡುಗಡೆ postrelease ಬಳಿಬಿಡುಗಡೆಯ
sale ಮಾರಾಟ postsale ಬಳಿಮಾರಾಟದ

(4) pre ಒಟ್ಟು:

ಈ ಒಟ್ಟಿಗೂ ಮುಕ್ಯವಾಗಿ ಮೊದಲು ಎಂಬ ಹುರುಳಿದೆ; ಇದನ್ನು ಬಳಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಮುನ್ ಎಂಬ ಪರಿಚೆಬೇರನ್ನು ಮುನ್ನೊಟ್ಟುಗಳ ಜಾಗದಲ್ಲಿ ಬಳಸಲು ಬರುತ್ತದೆ:

plan ಓರು preplan ಮುನ್ನೋರು
arrange ಏರ್‍ಪಡಿಸು prearrange ಮುನ್ನೇರ್‍ಪಡಿಸು
pay ತೆರು prepay ಮುಂತೆರು
view ನೋಡು preview ಮುನ್ನೋಡು
caution ಎಚ್ಚರಿಕೆ precaution ಮುನ್ನೆಚ್ಚರಿಕೆ
cognition ಅರಿವು precognition ಮುನ್ನರಿವು
requisite ಬೇಡಿಕೆ prerequisite ಮುಂಬೇಡಿಕೆ
science ಅರಿಮೆ prescience ಮುನ್ನರಿಮೆ
stressed ಒತ್ತಿದ prestressed ಮುನ್ನೊತ್ತಿದ
cast ಎರೆದ precast ಮುನ್ನೆರೆದ
natal ಹೆರಿಗೆಯ prenatal ಮುಂಬೆರಿಗೆಯ
paid ತೆತ್ತ prepaid ಮುಂತೆತ್ತ

ಮೊದಲು ಮತ್ತು ಬಳಿಕ ಎಂಬ ಎರಡು ಹುರುಳುಗಳನ್ನೂ ಎದುರೆದುರಾಗಿರಿಸಿ ತಿಳಿಸಬೇಕಾಗಿರುವಲ್ಲಿ ಬಳಿಕ ಎಂಬುದನ್ನು ತಿಳಿಸಲು ಮುನ್ ಎಂಬ ಬೇರನ್ನು ಬಳಸಬೇಕಾಗುವುದರಿಂದ, ಮೊದಲು ಎಂಬುದನ್ನು ತಿಳಿಸಲು ಹಿನ್ ಎಂಬ ಬೇರನ್ನು ಬಳಸಲು ಬರುತ್ತದೆ (prefix ಹಿನ್ನೊಟ್ಟು, suffix ಮುನ್ನೊಟ್ಟು). ಇಲ್ಲಿ ಹಿನ್ ಮತ್ತು ಮುನ್ ಎಂಬವು ಇಂಬಿನ ಒಟ್ಟುಗಳಾಗಿ ಬಂದಿವೆಯೆಂದೂ ಹೇಳಲು ಬರುತ್ತದೆ.

(5) re ಒಟ್ಟು:

ಈ ಒಟ್ಟಿಗೆ (ಕ) ಇನ್ನೊಮ್ಮೆ ಇಲ್ಲವೇ ಹಿಂದಿನಂತೆ ಮತ್ತು (ಚ) ಹಿಂದಕ್ಕೆ ಎಂಬ ಎರಡು ಹುರುಳುಗಳಿವೆ; ಇವುಗಳಲ್ಲಿ ಮೊದಲನೆಯ ಹುರುಳು ಬಂದಿರುವಲ್ಲಿ ಮರು/ಮಾರ‍್ ಎಂಬ ಪರಿಚೆಬೇರನ್ನು ಮತ್ತು ಎರಡನೆಯ ಹುರುಳು ಬಂದಿರುವಲ್ಲಿ ಹಿನ್ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ.
ಮರು ಮತ್ತು ಮಾರ‍್ ಎಂಬ ಎರಡು ರೂಪಗಳಲ್ಲಿ ಮರು ಎಂಬುದು ಮುಚ್ಚುಲಿಗಳ ಮೊದಲು ಬರುತ್ತದೆ (ಮರುಕಳಿಸು), ಮತ್ತು ಮಾರ‍್ ಎಂಬುದು ತೆರೆಯುಲಿಗಳ ಮೊದಲು ಬರುತ್ತದೆ (ಮಾರೆಣಿಸು).

(ಕ) ಇನ್ನೊಮ್ಮೆ ಇಲ್ಲವೇ ಹಿಂದಿನಂತೆ:

allot ಹಂಚು reallot ಮರುಹಂಚು
group ಗುಂಪಿಸು regroup ಮರುಗುಂಪಿಸು
count ಎಣಿಸು recount ಮಾರೆಣಿಸು
join ಸೇರು rejoin ಮರುಸೇರು
birth ಹುಟ್ಟು rebirth ಮರುಹುಟ್ಟು
entry ಪುಗಿಲು re-entry ಮರುಪುಗಿಲು
action ಎಸಕ reaction ಮಾರೆಸಕ

(ಚ) ಹಿಂದಕ್ಕೆ:

gain ಪಡೆ regain ಹಿಂಪಡೆ
call ಕರೆ recall ಹಿಂಗರೆ

(6) neo ಒಟ್ಟು:

ಈ ಒಟ್ಟಿಗೆ ಹೊಸ ಎಂಬ ಹುರುಳಿದ್ದು, ಅದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೊಸ ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

natal ಹುಟ್ಟಿನ neonatal ಹೊಸಹುಟ್ಟಿನ
folk ಮಂದಿ neofolk ಹೊಸಮಂದಿ
phobia ಗೀಳು neophobia ಹೊಸಗೀಳು
traditional ನಡವಳಿ neotraditional ಹೊಸನಡವಳಿಯ

(7) paleo ಒಟ್ಟು:

ಈ ಒಟ್ಟಿಗೆ ಹಳೆಯ ಎಂಬ ಹುರುಳಿದ್ದು, ಕನ್ನಡದಲ್ಲಿ ಹಳೆ ಎಂಬ ಪದವನ್ನೇ ಮುನ್ನೊಟ್ಟಿನ ಜಾಗದಲ್ಲಿ ಇದಕ್ಕೆ ಸಾಟಿಯಾಗುವಂತೆ ಬಳಸಲು ಬರುತ್ತದೆ:

ontology ಬಾಳರಿಮೆ paleontology ಹಳೆಬಾಳರಿಮೆ
contact ಪತ್ತುಗೆ paleocontact ಹಳೆಪತ್ತುಗೆ
habitat ಇಕ್ಕೆ paleohabitat ಹಳೆಯಿಕ್ಕೆ
science ಅರಿಮೆ paleoscience ಹಳೆಯರಿಮೆ

ತಿರುಳು:
ಹೊತ್ತನ್ನು ತಿಳಿಸುವ ex, fore ಮತ್ತು pre ಎಂಬ ಮೂರು ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಮುನ್ ಎಂಬ ಪರಿಚೆಬೇರನ್ನು ಪದಗಳ ಮೊದಲು ಬಳಸಲು ಬರುತ್ತದೆ; re ಎಂಬ ಇನ್ನೊಂದು ಮುನ್ನೊಟ್ಟಿಗೆ ಇನ್ನೊಮ್ಮೆ ಮತ್ತು ಹಿಂದಕ್ಕೆ ಎಂಬ ಎರಡು ಹುರುಳುಗಳಿದ್ದು, ಅವುಗಳಲ್ಲಿ ಮೊದಲನೆಯ ಹುರುಳಿಗೆ ಸಾಟಿಯಾಗಿ ಮರು/ಮಾರ‍್ ಎಂಬ ಪರಿಚೆಬೇರನ್ನು, ಮತ್ತು ಎರಡನೆಯ ಹುರುಳಿಗೆ ಸಾಟಿಯಾಗಿ ಹಿನ್ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ; post ಎಂಬ ಮುನ್ನೊಟ್ಟಿಗೆ ಸಾಟಿಯಾಗಿ ಬಳಿ ಎಂಬ ಪದವನ್ನು ಬಳಸಬಹುದು; neo ಮತ್ತು paleo ಎಂಬ ಮುನ್ನೊಟ್ಟುಗಳಿಗೆ ಹೊಸ ಮತ್ತು ಹಳೆ ಎಂಬ ಪದಗಳನ್ನು ಬಳಸಬಹುದು.

<< ಬಾಗ-9

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. ಬಟ್ಟರೆ,
    ಒಟ್ಟುಗಳಲ್ಲಿ ಈ ಬಗೆಯವು ಅಲ್ಲವೆ.
    Prefixes = ಹಿನ್ನೊಟ್ಟುಗಳು (like previous = ಹಿಂದಿನ, preceding = ಹಿಂದಿರುವ)
    Suffixes = ಮುನ್ನೊಟ್ಟುಗಳು

    ಆದರೆ ಹಿಂದಿನ ಬರಹ ಹಾಗೂ ಈಗಿನ ಬರಹಗಳಲ್ಲಿ ತಪ್ಪಾಗಿ ಬಳಕೆಯಾಗಿದೆಯಲ್ಲವೆ. Prefixes ಗಳಿಗೆ ಮುನ್ನೊಟ್ಟುಗಳೆಂದು ಕರೆಯಲಾಗಿದೆ.
    ಇದನ್ನು ದಯವಿಟ್ಟು ಬದಲಿಸಿ.

  2. ಮುಂದೆ ಹಾಗು ಮುಂಚೆ ಎರಡನ್ನೂ ಕಾಲಕ್ಕೆ ಒಳಕೊಂಡಂತೆ ನೋಡಲಾಗಿ,
    ಮುಂದೆಯು ಕಾಲದ ನಂತರದನ್ನು ಸೂಚಿಸುತ್ತದೆ, ಆದರೆ ಮುಂಚೆ ಕಾಲದ ಹಿಂದಿನದರ ಅರಿವನ್ನೀವುತ್ತದೆ.
    ಹಾಗಿದ್ದಲ್ಲಿ ಮುಂಚೆ => ‘ಹಿಂದೆ’ ಪದದ ಕಾಲಕ್ಕೊಳಗೊದಗುವ ಒರೆಯಾಗುವುದು.

    ಇದರಿಂದ ನಾವು ‘ಮುನ್ ‘ದಿಂದ ‘ಮುಂದ್’ ಹಾಗೂ ‘ಮುಂಚ್’ ಯಾಗಿ ಒದಗಿದೊಟ್ಟುಗಳು ಸಿಗುವುವು.

    ಎತ್ತುಗೆಯಾಗಿ ಮುಂಚೆ ಹಿಂಗಿತ್ತು, ಹಿಂದೆ ಹಿಂಗಿತ್ತು.

    ಆದ್ದರಿಂದ
    ex-friend ಮುನ್ಗೆಳೆಯ => ಮುಂಚಿನ್ಗೆಳೆಯ
    ex-husband ಮುನ್ಗಂಡ => ಮುಂಚಿನ್ಗಂಡ
    ex-president ಮುನ್ಮೇಲಾಳು => ಮುಂಚಿನ್ಮೇಲಾಳು
    ex-typist ಮುನ್ಬೆರಳಚ್ಚುಗ => ಮುಂಚಿನ್ಬೆರಳಚ್ಚುಗ

    ಅಲ್ಲದೆ ಇವುಗಳು ಈಗಾಗಲೇ ಬಳಕೆಯಲ್ಲಿವೆ.

  3. ವಿನಾಯಕ್ ಅವರೇ, ಬಟ್ಟರ ಉತ್ತರವನ್ನು ಓದಲು ಇಲ್ಲಿ ಕ್ಲಿಕ್ಕಿಸಿ:

    https://honalu.files.wordpress.com/2014/06/bhatrep.png

ಅನಿಸಿಕೆ ಬರೆಯಿರಿ: