ಅಲ್ಲಗಳೆತದ ಮುನ್ನೊಟ್ಟುಗಳು

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-11 

ಇಂಗ್ಲಿಶ್‌ನಲ್ಲಿ ಒಂದು ಪದ ತಿಳಿಸುವ ಹುರುಳನ್ನು ಅಲ್ಲಗಳೆಯಲು ಇಲ್ಲವೇ ಅದರ ಎದುರುಹುರುಳನ್ನು ತಿಳಿಸಲು ಮುಕ್ಯವಾಗಿ a/an, anti, de, dis, in, non, ಮತ್ತು un ಎಂಬ ಏಳು ಮುನ್ನೊಟ್ಟುಗಳನ್ನು ಬಳಸಲಾಗುತ್ತದೆ; mal ಮತ್ತು mis ಎಂಬ ಬೇರೆ ಎರಡು ಒಟ್ಟುಗಳೂ ಇವಕ್ಕೆ ಹತ್ತಿರದ ಹುರುಳನ್ನು ಕೊಡುತ್ತವೆಯೆಂದು ಹೇಳಬಹುದು; ಆದರೆ ಇವಕ್ಕೆ ಅಲ್ಲಗಳೆಯುವ ಹುರುಳಿಗಿಂತಲೂ ತಪ್ಪು ಇಲ್ಲವೇ ಕೆಟ್ಟ ಎಂಬ ಹುರುಳು, ಮತ್ತು ಕೀಳ್ಪಡಿಸುವ ಹುರುಳಿದೆ.

ಕನ್ನಡದಲ್ಲಿ ಇಂತಹ ಅಲ್ಲಗಳೆಯುವ ಇಲ್ಲವೇ ಎದುರುಹುರುಳನ್ನು ತಿಳಿಸುವ ಮುನ್ನೊಟ್ಟುಗಳಿಲ್ಲ. ಹಾಗಾಗಿ, ಇಂತಹ ಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಇಶ್ಟೊಂದು ಅಡಕವಾಗಿ ಉಂಟುಮಾಡಲು ಬರುವುದಿಲ್ಲ.

ಇದು ಕನ್ನಡದ ಒಂದು ತೊಡಕು ಎಂಬುದಾಗಿ ಕೆಲವರಿಗೆ ಅನಿಸಬಹುದು, ಮತ್ತು ಇಂತಹ ಕಡೆಗಳಲ್ಲಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟಲು ಹೋಗುವ ಬದಲು, ಇಂಗ್ಲಿಶ್‌ನಂತಹವೇ ಮುನ್ನೊಟ್ಟುಗಳಿರುವ ಸಂಸ್ಕ್ರುದಲ್ಲಿ ಹೊಸಪದಗಳನ್ನು ಕಟ್ಟಿ ಅವನ್ನು ಕನ್ನಡಕ್ಕೆ ಎರವಲು ತರುವುದೇ ಅವರಿಗೆ ಹೆಚ್ಚು ಸುಳುವಾದ ಕೆಲಸವೆಂದು ಅನಿಸಬಹುದು.

ಆದರೆ, ಹೀಗೆ ಮಾಡುವುದರಿಂದ ಬರಹದ ಕನ್ನಡಕ್ಕೂ ಮಾತಿನ ಕನ್ನಡಕ್ಕೂ ನಡುವಿರುವ ಅಂತರ ಇನ್ನಶ್ಟು ಹೆಚ್ಚುತ್ತದೆ, ಮತ್ತು ಕನ್ನಡದ ಸೊಗಡು ಬರಹದಲ್ಲಿ ಉಳಿಯುವುದಿಲ್ಲ. ಹಾಗಾಗಿ, ಇಂತಹ ಅಲ್ಲಗಳೆಯುವ ಪದಗಳಿಗೂ ಕನ್ನಡದಲ್ಲಿ ಬಳಕೆಯಲ್ಲಿರುವ ಹಮ್ಮುಗೆಗಳನ್ನೇ ಬಳಸಿ ಹೊಸ ಪದಗಳನ್ನು ಕಟ್ಟುವುದೇ ನಮ್ಮ ಮುಂದಿರುವ ಒಳ್ಳೆಯ ಮತ್ತು ಸರಿಯಾದ ದಾರಿಯಾಗಿದೆ.

ಇದಲ್ಲದೆ, ಕನ್ನಡದವೇ ಆದ ಪದಗಳನ್ನು ಇಲ್ಲವೇ ಪದರೂಪಗಳನ್ನು ಬಳಸಿದಾಗ, ಇಂಗ್ಲಿಶ್ ಪದಗಳಲ್ಲಿ ಕಾಣಿಸಿರದ ಕೆಲವು ಹೆಚ್ಚಿನ ಹುರುಳುಗಳನ್ನು ಕನ್ನಡದಲ್ಲಿ ಕಾಣಿಸಲು ಬರುತ್ತದೆ; ಇಂತಹ ಹೆಚ್ಚಿನ ಹುರುಳುಗಳನ್ನು ಕಾಣಿಸುವುದು ಇಂಗ್ಲಿಶ್ ನುಡಿಗೆ ಅವಶ್ಯವಿಲ್ಲದಿರಬಹುದು; ಆದರೆ, ಕನ್ನಡ ನುಡಿ ಇದು ಅವಶ್ಯವೆಂದು ತಿಳಿದಿರುವುದರಿಂದಲೇ ಅದನ್ನು ಕಾಣಿಸಲು ಕನ್ನಡದಲ್ಲಿ ಹೆಚ್ಚಿನ ಹಮ್ಮುಗೆಗಳು ಬೆಳೆದುಬಂದಿವೆ. ಕನ್ನಡದವೇ ಆದ ಪದಗಳನ್ನು ಬಳಸಿದಲ್ಲಿ ಕನ್ನಡಕ್ಕೆ ಅವಶ್ಯವಿರುವ ಇಂತಹ ಹುರುಳುಗಳನ್ನು ಕಾಣಿಸಲು ಬರುತ್ತದೆ.

ಎತ್ತುಗೆಗಾಗಿ, (ಕ) ಒಂದು ಎಸಕದ ಇಲ್ಲವೇ ಪಾಂಗಿನ ಇರುವಿಕೆಯನ್ನು ಅಲ್ಲಗಳೆಯಲು ಕನ್ನಡದಲ್ಲಿ ಇಲ್ಲ ಪದವನ್ನು ಬಳಸಲಾಗುತ್ತದೆ, ಮತ್ತು (ಚ) ಒಂದು ಎಸಕ ಇಲ್ಲವೇ ಪಾಂಗಿಗೂ ಇನ್ನೊಂದು ಪಾಂಗಿಗೂ ನಡುವಿರುವ ಪತ್ತುಗೆಯನ್ನು ಅಲ್ಲಗಳೆಯಲು ಅಲ್ಲ ಪದವನ್ನು ಬಳಸಲಾಗುತ್ತದೆ.

(ಕ) ಇಲ್ಲ ಪದದ ಬಳಕೆ:

(1ಕ)    ನಿಮ್ಮ ಪುಸ್ತಕ ಇಲ್ಲಿದೆ.

(1ಚ)   ನಿಮ್ಮ ಪುಸ್ತಕ ಇಲ್ಲಿಲ್ಲ.

(2ಕ)   ಅವನು ಮನೆಗೆ ಹೋಗಿದ್ದಾನೆ.

(2ಚ)   ಅವನು ಮನೆಗೆ ಹೋಗಲಿಲ್ಲ.

(ಚ) ಅಲ್ಲ ಪದದ ಬಳಕೆ:

(1ಕ)    ಇದು ನಿಮ್ಮ ಪುಸ್ತಕ

(1ಚ)   ಇದು ನಿಮ್ಮ ಪುಸ್ತಕ ಅಲ್ಲ.

(2ಕ)   ಮನೆಗೆ ಹೋದವನು ಅವನು.

(2ಚ)   ಮನೆಗೆ ಹೋದವನು ಅವನಲ್ಲ.

ಇಂಗ್ಲಿಶ್‌ನಲ್ಲಿ ಈ ಎರಡು ಬಗೆಯ ಅಲ್ಲಗಳೆತಗಳ ನಡುವಿನ ವ್ಯತ್ಯಾಸವನ್ನು ಕಾಣಿಸಲು ಬರುವುದಿಲ್ಲ; ಯಾಕೆಂದರೆ, ಈ ಎರಡು ಕಡೆಗಳಲ್ಲೂ not ಎಂಬ ಒಂದೇ ಪದವನ್ನು ಅದರಲ್ಲಿ ಬಳಸಲಾಗುತ್ತದೆ (ಇದು ಇಂಡೋ-ಯುರೋಪಿಯನ್ ನುಡಿಗಳ ಒಂದು ದೊಡ್ಡ ಕೊರತೆ ಎಂಬುದಾಗಿ ಬರ‍್ಟ್ರಾಂಡ್ ರಸೆಲ್ ಅವರು ಬರೆದಿದ್ದಾರೆ). ಪದಗಳನ್ನು ಅಲ್ಲಗಳೆಯುವಲ್ಲೂ ಇಂಗ್ಲಿಶ್‌ನಲ್ಲಿ ಈ ಹುರುಳಿನ ವ್ಯತ್ಯಾಸ ಕಾಣಿಸುವುದಿಲ್ಲ, ಆದರೆ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಳಗೆ ವಿವರಿಸಿದ ಹಾಗೆ, ಇಂಗ್ಲಿಶ್‌ನ ಅಲ್ಲಗಳೆಯುವ ಮುನ್ನೊಟ್ಟುಗಳಿಗೆ ಸಾಟಿಯಾಗಿ ಕೆಲವೆಡೆಗಳಲ್ಲಿ ಇಲ್ಲದ ಎಂಬುದನ್ನು, ಮತ್ತು ಬೇರೆ ಕೆಲವೆಡೆಗಳಲ್ಲಿ ಅಲ್ಲದ ಎಂಬುದನ್ನು ಕನ್ನಡದಲ್ಲಿ ಬಳಸಬೇಕಾಗುತ್ತದೆ ಎಂಬುದು ಈ ವ್ಯತ್ಯಾಸದಿಂದಾಗಿ ಮೂಡಿಬಂದಿದೆ.

ಮೇಲೆ ಕೊಟ್ಟಿರುವ ಒಂಬತ್ತು ಮುನ್ನೊಟ್ಟುಗಳನ್ನೂ ಅಲ್ಲಗಳೆಯಲು ಬಳಸಲಾಗುತ್ತಿದೆಯಾದರೂ ಅವುಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ;  ಈ ಒಟ್ಟುಗಳಲ್ಲಿ un ಎಂಬುದು ಎಲ್ಲಕ್ಕಿಂತ ಹೆಚ್ಚು ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ; ಕೆಲವು ಪದಗಳಲ್ಲಿ ಅದನ್ನು in ಇಲ್ಲವೇ  dis ಎಂಬವುಗಳ ಬದಲಾಗಿ ಬಳಸಲು ಬರುತ್ತದೆ; ಆದರೆ, ಅಂತಹ ಕಡೆಗಳಲ್ಲಿ ಅದು ಅವಕ್ಕಿಂತ ತುಸು ಬೇರಾಗಿರುವ ಹುರುಳನ್ನು ಕೊಡಬಲ್ಲುದು.

ಈ ಒಟ್ಟುಗಳಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಕಟ್ಟುವುದು ಹೇಗೆ ಎಂಬುದನ್ನು ವಿವರಿಸಲು ಕೆಳಗೆ ಈ ಒಟ್ಟುಗಳನ್ನು ಒಂದೊಂದಾಗಿ ಪರಿಗಣಿಸಲಾಗಿದೆ:

(1) a/an ಒಟ್ಟು:

ಅಲ್ಲಗಳೆಯುವ ಹುರುಳಿನಲ್ಲಿ ಬಳಕೆಯಾಗುವ ಈ ಒಟ್ಟನ್ನು ಮುಕ್ಯವಾಗಿ ಅರಿಮೆಯ ಬರಹಗಳಲ್ಲಿ ಬಳಸಲಾಗುತ್ತದೆ, ಮತ್ತು ಹೆಚ್ಚಿನೆಡೆಗಳಲ್ಲೂ ಇದನ್ನು ಹೆಸರುಪದಗಳಿಂದ ಪಡೆದಿರುವ ಪರಿಚೆಪದಗಳಿಗೆ ಸೇರಿಸಲಾಗುತ್ತದೆ. ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಹೆಸರುಪದಗಳಿಗೇನೇ ನೇರವಾಗಿ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ಸೇರಿಸಿ ಬಳಸಲು ಬರುತ್ತದೆ:

chromatic ಬಣ್ಣದ achromatic ಬಣ್ಣವಿಲ್ಲದ
symmetrical ಸರಿಬದಿಯ asymmetrical ಸರಿಬದಿಯಲ್ಲದ
political ಆಳ್ವಿಕೆಯ apolitical ಆಳ್ವಿಕೆಯಲ್ಲದ
hydrous ತೇವದ ahydrous ತೇವವಿಲ್ಲದ

ಕೆಲವೆಡೆಗಳಲ್ಲಿ ಇಂತಹ ಹೆಸರುಪದಗಳ ಪರಿಚೆರೂಪಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದದ ಪರಿಚೆರೂಪವನ್ನು ಬಳಸಲಾಗುತ್ತಿದ್ದು, ಇಂತಹ ಕಡೆಗಳಲ್ಲಿ ಇಂಗ್ಲಿಶ್‌ನ a/an ಒಟ್ಟಿರುವ ಪದಗಳಿಗೆ ಸಾಟಿಯಾಗಿ ಅವುಗಳ ಅಲ್ಲಗಳೆಯುವ ರೂಪವನ್ನು ಬಳಸಲು ಬರುತ್ತದೆ:

septic ಕೊಳೆಸುವ aseptic ಕೊಳೆಸದ

atheist ಎಂಬ ಪದದಲ್ಲಿ ಇದನ್ನು ಮಂದಿಯನ್ನು ಹೆಸರಿಸುವ theist ನಂಬಿಗ ಎಂಬ ಒಂದು ಹೆಸರುಪದಕ್ಕೇನೇ ಸೇರಿಸಲಾಗಿದ್ದು, ಇಂತಹ ಕಡೆಗಳಲ್ಲಿ ಕನ್ನಡದ ಇಲಿ ಎಂಬ ಒಟ್ಟನ್ನು ಹೆಸರುಪದದ ಹಿಂದಿರುವ ಎಸಕಪದಕ್ಕೆ ಸೇರಿಸಿ ನಂಬಿಲಿ ಎಂಬಂತಹ ಪದವನ್ನು ಪಡೆಯಲು ಬರುತ್ತದೆ.

(2) anti ಒಟ್ಟು:

ಈ ಒಟ್ಟನ್ನು ಬಳಸಿರುವ ಪದಗಳು ಮಂದಿಯನ್ನು ತಿಳಿಸುತ್ತಿವೆಯಾದರೆ ಕನ್ನಡದಲ್ಲಿ ಎದುರಿ ಎಂಬ ಪದವನ್ನು ಬಳಸಲು ಬರುತ್ತದೆ, ಮತ್ತು ಉಳಿದೆಡೆಗಳಲ್ಲಿ ಎದುರುಕ ಎಂಬ ಪದವನ್ನು ಬಳಸಲು ಬರುತ್ತದೆ:

abortion ಬಸಿರಳಿತ antiabortion ಬಸಿರಳಿತದೆದುರಿ
apartheid ಬೇರ‍್ಪಡಿಕೆ antiapartheid ಬೇರ‍್ಪಡಿಕೆಯೆದುರಿ
austerity ಕಟ್ಟುನಿಟ್ಟು antiausterity ಕಟ್ಟುನಿಟ್ಟೆದುರಿ
migration ವಲಸೆ antimigration ವಲಸೆಯೆದುರಿ
allergy ಒಗ್ಗದಿಕೆ antiallergy ಒಗ್ಗದಿಕೆಯೆದುರುಕ
erosion ಕೊರೆತ antierosion ಕೊರೆತದೆದುರುಕ
fatigue ದಣಿವು antifatigue ದಣಿವೆದುರುಕ
dandruff ಹೆಡಸು antidandruff ಹೆಡಸೆದುರುಕ
cavity ತೊಳ್ಳೆ anticavity ತೊಳ್ಳೆದುರುಕ

(3) de ಒಟ್ಟು:

ಇಂಗ್ಲಿಶ್‌ನಲ್ಲಿ ಇದನ್ನು ಎಸಕಪದಗಳಿಗೆ ಇಲ್ಲವೇ ಅವುಗಳಿಂದ ಪಡೆದ ಹೆಸರುಪದಗಳಿಗೆ ಮತ್ತು ಪರಿಚೆಪದಗಳಿಗೆ ಸೇರಿಸಲಾಗುತ್ತದೆ; ಇದಕ್ಕೆ ಮುಕ್ಯವಾಗಿ (ಕ) ಕೆಳಗೆ ಇಲ್ಲವೇ ದೂರ, (ಚ) ತುಂಬಾ, ಹೆಚ್ಚು, ಮತ್ತು (ಟ) ಕಳೆ ಇಲ್ಲವೇ ಹಿಮ್ಮರಳು ಎಂಬಂತಹ ಮೂರು ಹುರುಳುಗಳಿವೆ.

ಈ ಒಟ್ಟನ್ನು ಬಳಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಕೆಲವೆಡೆಗಳಲ್ಲಿ ಹೆಸರುಪದಗಳು ಕಾಣಿಸಿಕೊಳ್ಳುತ್ತವೆ (carbon ಮಸಿ), ಮತ್ತು ಬೇರೆ ಕೆಲವೆಡೆಗಳಲ್ಲಿ ಹೆಸರುಪದಗಳೊಂದಿಗೆ ಎಸಕಪದಗಳನ್ನು ಬಳಸಿರುವ ಕೂಡುಪದಗಳು ಕಾಣಿಸಿಕೊಳ್ಳುತ್ತವೆ (foliate ಸೊಪ್ಪು ಬೆಳೆ).

ಇಂತಹ ಪದಗಳಿಗೆ ಸಾಟಿಯಾಗುವಂತಹ ಎಸಕಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಇಂಗ್ಲಿಶ್‌ನ ಒಟ್ಟು ಕೊಡಬೇಕಾಗಿರುವ ಹುರುಳಿರುವಂತಹ ಎಸಕಪದಗಳನ್ನು (ಕ) ಹೆಸರುಪದಗಳಿಗೆ ನೇರವಾಗಿ ಸೇರಿಸಬಹುದು, ಮತ್ತು (ಚ) ಕೂಡುಪದಗಳಲ್ಲಿ ಬರುವ ಎಸಕಪದಗಳಿಗೆ ಬದಲಾಗಿ ಬಳಸಬಹುದು:

(ಕ) ಹೆಸರುಪದಗಳಿಗೆ ನೇರವಾಗಿ ಸೇರಿಸುವುದು:

carbon ಮಸಿ decarbon ಮಸಿಕಳೆ
louse ಹೇನು delouse ಹೇನುಕಳೆ
nude ಬತ್ತಲೆ denude ಬತ್ತಲೆ ಮಾಡು
face ಮೋರೆ deface ಮೋರೆ ಕೆಡಿಸು
form ಪರಿಜು deform ಪರಿಜು ಕೆಡಿಸು
grade ಮಟ್ಟ degrade ಮಟ್ಟ ಇಳಿಸು
value ಬೆಲೆ devalue ಬೆಲೆ ತಗ್ಗಿಸು

(ಚ) ಕೂಡುಪದಗಳಲ್ಲಿ ಬರುವ ಎಸಕಪದಗಳಿಗೆ ಬದಲಾಗಿ ಬಳಸುವುದು:

compress ಒತ್ತಡ ಹಾಕು decompress ಒತ್ತಡ ತೆಗೆ
foliate ಸೊಪ್ಪು ಬೆಳೆ defoliate ಸೊಪ್ಪು ಕಳೆ
mobilize ಪಡೆ ಸೇರಿಸು demobilize ಪಡೆ ಕಳೆ
classify ಗುಂಪಿಸು declassify ಗುಂಪಳಿ
humidify ಈರ ಹೆಚ್ಚಿಸು dehumidify ಈರ ಕಳೆ

(4) dis ಒಟ್ಟು:

ಈ ಒಟ್ಟಿಗೆ (ಕ) ಅಲ್ಲಗಳೆಯುವ ಹುರುಳು ಮತ್ತು (ಚ) ಎದುರು ಹುರುಳು ಎಂಬುದಾಗಿ ಎರಡು ಬಗೆಯ ಹುರುಳುಗಳಿವೆ; ಅಲ್ಲಗಳೆಯುವ ಹುರುಳಿರುವಲ್ಲಿ (1) ಅದನ್ನು ಎಸಕಪದಗಳಿಗೆ ಸೇರಿಸಿದಾಗ ಅದು ಎಸಕವನ್ನು ಅಲ್ಲಗಳೆಯುತ್ತದೆ, ಮತ್ತು (2) ಹೆಸರುಪದ ಇಲ್ಲವೇ ಪರಿಚೆಪದಕ್ಕೆ ಸೇರಿಸಿದಾಗ ಅದು ಪಾಂಗಿನ ಇಲ್ಲವೇ ಪರಿಚೆಯ ಇರವನ್ನು ಅಲ್ಲಗಳೆಯುತ್ತದೆ.

(ಕ1) ಎಸಕವನ್ನು ಅಲ್ಲಗಳೆಯುವುದಿದ್ದಲ್ಲಿ, ಅದಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ ಎಸಕಪದದ ಅಲ್ಲಗಳೆಯುವ ಜೋಡಿಸುವ ರೂಪಕ್ಕೆ ಇರು ಇಲ್ಲವೇ ಆಗು ಎಂಬುದನ್ನು ಸೇರಿಸಿ ಬಳಸಲು ಬರುತ್ತದೆ:

agree ಒಪ್ಪು disagree ಒಪ್ಪದಿರು
satisfy ತಣಿ dissatisfy ತಣಿಯದಿರು
believe ನಂಬು disbelieve ನಂಬದಿರು
approve ಮೆಚ್ಚು disapprove ಮೆಚ್ಚದಿರು
appear ತೋರು disappear ತೋರದಾಗು

(ಕ2) ಪಾಂಗು ಇಲ್ಲವೇ ಪರಿಚೆಯ ಇರವನ್ನು ಅಲ್ಲಗಳೆಯುವುದಿದ್ದಲ್ಲಿ, ಅದಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ ಇಲ್ಲದಿಕೆ ಇಲ್ಲವೇ ಇಲ್ಲದ ಎಂಬ ಪದಗಳನ್ನು ಬಳಸಲು ಬರುತ್ತದೆ; ಕೆಲವೆಡೆಗಳಲ್ಲಿ ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನೂ ಬಳಸಲು ಬರುತ್ತದೆ:

respect ತಕ್ಕುಮೆ disrespect ತಕ್ಕುಮೆಯಿಲ್ಲದಿಕೆ
approbation ಮೆಚ್ಚುಗೆ disapprobation ಮೆಚ್ಚುಗೆಯಿಲ್ಲದಿಕೆ
ability ಅಳವು disability ಅಳವಿಲ್ಲದಿಕೆ
use ಬಳಕೆ disuse ಬಳಕೆಯಿಲ್ಲದಿಕೆ
interested ಒಲವಿರುವ disinterested ಒಲವಿಲ್ಲದ
similar ಹೋಲುವ dissimilar ಹೋಲದ
content ತಣಿದ discontent ತಣಿಯದ
honest ಸಯ್ದ dishonest ಸಯ್ಯದ

(ಚ) ಎದುರು ಹುರುಳಿರುವಲ್ಲಿ ಅಂತಹ ಹುರುಳನ್ನು ಕೊಡಬಲ್ಲ ಬೇರೆಯೇ ಎಸಕಪದವನ್ನು ಇಲ್ಲವೇ ಅದರ ಪರಿಚೆರೂಪವನ್ನು ಬಳಸಬೇಕಾಗುತ್ತದೆ:

band ಕೂಟ disband ಕೂಟ ಮುರಿ
figure ಪಾಂಗು disfigure ಪಾಂಗು ಕೆಡಿಸು
franchise ಹಕ್ಕು disfranchise ಹಕ್ಕು ಕಳೆ
plume ಗರಿ displume ಗರಿ ತೆಗೆ
parity ಎಣೆ disparity ಎಣೆಗೆಡುಹ
pleasure ನಲಿವು displeasure ನಲಿವು ಕಳೆತ
claim ಹಕ್ಕು ಕೇಳು disclaim ಹಕ್ಕು ಬಿಡು
colour ಬಣ್ಣ ಕೊಡು discolour ಬಣ್ಣ ಬಿಡು
entangle ಸಿಕ್ಕು ಕಟ್ಟು disentangle ಸಿಕ್ಕು ಬಿಡಿಸು
locate ನೆಲೆಗೊಳ್ಳು dislocate ನೆಲೆ ತಪ್ಪು

(ಈ ಒಳಪಸುಗೆ ಇಂಗ್ಲಿಶ್ ಪದಗಳಿಗೆ…-12ರಲ್ಲಿ ಮುಂದುವರಿಯುತ್ತದೆ)

 << ಬಾಗ-10

 

 

 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 09/07/2014

    […] (ಇಂಗ್ಲಿಶ್ ಪದಗಳಿಗೆ-11ರಿಂದ ಮುಂದುವರಿದುದು) […]

ಅನಿಸಿಕೆ ಬರೆಯಿರಿ: