ನೆಲದಾಳದಲ್ಲಿ ಹೊಸ ನೀರು

ಪ್ರಶಾಂತ ಸೊರಟೂರ‍.

ಈಗ ಕಡಲಿನಲ್ಲಿರುವ ನೀರಿಗಿಂತ ಮೂರು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿ ದೊರೆತಿದೆ !

ಎಂಬಂತ ಬಿಸಿ ಸುದ್ದಿ ಕೆಲವು ದಿನಗಳ ಹಿಂದೆ ಜಗತ್ತಿನೆಲ್ಲೆಡೆ ಪಸರಿಸಿತ್ತು. ಹನಿ ನೀರಿಗಾಗಿ ಪರದಾಡುತ್ತಿರುವ ಇಂದಿನ ದಿನಗಳಲ್ಲಿ ಹೊಸದಾಗಿ ದೊರೆತ ಹೇರಳವಾದ ನೀರಿನ ಸೆಲೆ ಎಲ್ಲರನ್ನೂ ಸೆಳೆದಿತ್ತು. ಆದರೆ ಹಾಗೆ ದೊರೆತ ಸೆಲೆಯ ಆಳಕ್ಕೆ ಹೋಗುವುದು ಮತ್ತು ಅಲ್ಲಿಂದ ನೀರೆತ್ತಿ ನೆಲದ ಮೇಲ್ಗಡೆ ತರುವುದು ಈ ಹೊತ್ತಿಗಂತೂ ಆಗದ ಮಾತು ಅನ್ನುವಂತ ವಿಶಯ ಹಲವು ಮಂದಿಯ ಗಮನಕ್ಕೆ ಬರಲಿಲ್ಲವೆನ್ನಬಹುದು.

ಹೊಸ ನೀರಿನ ಸೆಲೆ ಎಟುಕದ ಕನ್ನಡಿಯಲ್ಲಿರುವ ಗಂಟಿನಂತಾದರೂ, ಈ ಹೊಸ ಕಂಡುಹಿಡಿಯುವಿಕೆ ನೆಲದಲ್ಲಿ ಕಡಲುಗಳು ಹೇಗೆ ಉಂಟಾದವು ಅನ್ನುವಂತ ಸಿಕ್ಕಲಾದ ಕೇಳ್ವಿಗೆ ಸರಿಯಾದ ಉತ್ತರ ನೀಡಲಿದೆಯೆಂದು ಅರಿಮೆಗಾರರು ಅಂದುಕೊಂಡಿದ್ದಾರೆ. ನೀರಿನ ಈ ಹೊಸ ಸೆಲೆಯತ್ತ ಹೋಗುವ ಮುನ್ನ ನಮ್ಮ ನೆಲದ ಆಳಕ್ಕೆ ಮೊದಲು ಇಳಿಯೋಣ ಬನ್ನಿ.

ನೆಲದ ಮೇಲ್ಮಯಲ್ಲಿ ಕಡಲು, ಬೆಟ್ಟಗಳು ಇರುವುದು ಕಣ್ಣಿಗೆ ಕಾಣಿಸುವಂತದು. ನೆಲದಲ್ಲಿ ನೀರಿನ ಪಾಲು ಮೂರರಶ್ಟಿದೆ ಅನ್ನುವುದು ಅದರ ಮೇಲ್ಮಯನ್ನು ತೆಗೆದುಕೊಂಡಾಗಶ್ಟೇ ದಿಟ, ಆದರೆ ಅದರ ಒಡಲಾಳದ ರಚನೆಯನ್ನು ತಿಳಿದುಕೊಂಡಾಗ ಅದರ ಇಡಿಯಾದ ಕಟ್ಟಣೆ ನಮ್ಮ ಅರಿವಿಗೆ ಬರಬಲ್ಲದು. ನೆಲದ ಒಟ್ಟಾರೆ ತೂಕಕ್ಕೆ ಹೋಲಿಸಿದಾಗ ನೀರಿನ ತೂಕ, ಅದರ ಪ್ರಮಾಣ ತುಂಬಾನೇ ಕಡಿಮೆ. ನೆಲದಾಳವು ಮುಕ್ಯವಾಗಿ ಕಬ್ಬಿಣದಂತಹ ಜಲ್ಲಿಯ ವಸ್ತುಗಳಿಂದ ಕೂಡಿದೆ.

ಹಿಂದಿನ ಬರಹವೊಂದರಲ್ಲಿ ನೆಲದ ದುಂಡಗಲವು ಸುಮಾರು 12,756 ಕಿ.ಮೀ. ಮತ್ತು ಅದರ ರಾಶಿಯು (mass) ಸುಮಾರು 5.98 x1024 kg ಇರುವುದನ್ನು ತಿಳಿದುಕೊಂಡಿದ್ದೆವು. ನೆಲದ ಮೇಲ್ಮಯಿಂದ ನೆಲದ ನಡುವು (center) ಸುಮಾರು 12,756/ = 6378 ಕಿ.ಮೀ. ಆಳದಲ್ಲಿದೆ.

ಅದರ ಒಟ್ಟು ರಾಶಿಯಲ್ಲಿ ಕಬ್ಬಿಣವು ಸುಮಾರು 32.1%, ಉಸಿರ‍್ಗಾಳಿ (oxygen) 30.1%, ಸಿಲಿಕಾನ್ 15.1%, ಮ್ಯಾಗ್ನೇಸಿಯಂ 13.9%, ಗಂದಕ 2.9%, ನಿಕೆಲ್ 1.8%, ಕ್ಯಾಲ್ಸಿಯಂ 1.5% ಮತ್ತು ಅಲ್ಯುಮಿನಿಯಂ 1.4% ರಶ್ಟಿದೆ. ಕೆಳಗಿನ ತಿಟ್ಟದಲ್ಲಿ ನೆಲದ ಒಟ್ಟಾರೆ ಸೀಳುನೋಟವನ್ನು ತೋರಿಸಲಾಗಿದೆ.

earth_section_nela

ನೆಲದ ಇಟ್ಟಳವನ್ನು (structure) ತೊಗಟೆ (0-35 km), ಮೇಲ್ ಹೊದಿಕೆ (35-60 km), ಹೊದಿಕೆ (35-2890 km), ಹೊರತಿರುಳು (2890-5150) ಮತ್ತು ಒಳತಿರುಳು (5150-6378 km) ಅಂತಾ ಗುರುತಿಸಲಾಗಿದೆ. ನೆಲದ ಒಳತಿರುಳು ಮತ್ತು ಹೊರತಿರುಳಿನ ಬಾಗ ತುಂಬಾ ದಟ್ಟಣೆ ಹೊಂದಿದ್ದು ಮುಕ್ಯವಾಗಿ ಕರಗಿದ ಕಬ್ಬಿಣದಿಂದ ಕೂಡಿದೆ. ಹೊದಿಕೆಯ ಬಾಗವು ಸಿಲಿಕೇಟ್ ಕಲ್ಲುಗಳಿಂದ ಕೂಡಿದ್ದು ಕಬ್ಬಿಣ ಮತ್ತು ಮ್ಯಾಗ್ನೇಸಿಯಂ ಜಲ್ಲಿಗಳನ್ನು ಒಳಗೊಂಡಿದೆ. ತೊಗಟೆಯ ಬಾಗವು ಕಡಲಾಳ, ಕಲ್ಲುಗಳು, ಜಲ್ಲಿಗಳಿಂದ ಕೂಡಿದೆ.

ನೆಲದ ಆಳದಲ್ಲಿ ತುಂಬಾನೇ ಒತ್ತಡ ಮತ್ತು ಬಿಸುಪಿರುವುದರಿಂದ ಅದರ ಆಳಕ್ಕೆ ಕೆಲವು ಕಿ.ಮೀ. ಗಳಶ್ಟೇ ಮನುಶ್ಯರು ಮಾಡಿದ ಸಲಕರಣೆಗಗಳು ಇಳಿಯಬಲ್ಲವು. ಹಾಗೆ ನೋಡಿದರೆ ಇಲ್ಲಿಯವರೆಗೆ ನೆಲದ ಮೇಲ್ಮಯಿಂದ ಮನುಶ್ಯರಿಗೆ ಕೊರೆಯಲು ಆದ ತೂತಿನ ಆಳ ಬರೀ 12.3 ಕಿ.ಮೀ. (ರಶ್ಯಾ ಕಯ್ಗೊಂಡ ತೂತು ಕೊರೆಯುವ ಹಮ್ಮುಗೆ, 1989). ನೆಲದಾಳದಲ್ಲಿ ಸಲಕರಣೆಗಳನ್ನು ಇಳಿಸಲು ಆಗದಿದ್ದರೂ, ನೆಲದ ಇಟ್ಟಳವನ್ನು ಅರಿಮೆಯ ಇತರ ಚಳಕಗಳನ್ನು ಬಳಸಿ ಅರಿತುಕೊಳ್ಳಲಾಗುತ್ತದೆ. ಅಂತಹ ಅರಿಮೆಯ ಚಳಕದಲ್ಲಿ ಮುಕ್ಯವಾದದ್ದು ನಡುಕದರಿಮೆ (Seismology).

ಮುಕ್ಯವಾಗಿ ನೆಲದ ತೊಗಟೆಯ ಬಾಗದಲ್ಲಿ ಬಿಡುಗಡೆಯಾಗುವ ಹೇರಳವಾದ ಕಸುವಿನಿಂದಾಗಿ ‘ನೆಲನಡುಕಗಳು’ (earthquakes) ಉಂಟಾಗುತ್ತವೆ. ಹೀಗೆ ಉಂಟಾದ ನೆಲನಡುಕಗಳು ಹೊಮ್ಮಿಸುವ ನಡುಕದ ಅಲೆಗಳು (seismic waves), ನೆಲದ ಮೇಲ್ಮಯಿಂದ ಹಿಡಿದು ಅದರ ತಿರುಳಿನ ಬಾಗದವರೆಗೆ ತೂರಬಲ್ಲವು. ನಡುಕದ ಅಲೆಗಳ ಹರಡುವ ಬಗೆ, ಅವುಗಳ ವೇಗ, ನೆಲದ ಇಟ್ಟಳವನ್ನು ಮೇಲೆ ತಿಳಿಸಿರುವಂತೆ ಗುರುತಿಸಲು ನೆರವಾಗಿವೆ. ನಡುಕದ ಅಲೆಗಳು ಬೇರೆ ಬೇರೆ ವಸ್ತುಗಳಲ್ಲಿ ಬೇರೆಯಾದ ವೇಗದಿಂದ ಹರಡುತ್ತವೆ. ಒಣಕಲ್ಲಿನಂತಹ ರಚನೆಯಲ್ಲಿ ಅವುಗಳ ವೇಗ ಬೇರೆಯಾಗಿದ್ದರೆ ನೀರಿನಿಂದ ಕೂಡಿದ ಹಸಿಕಲ್ಲಿನಲ್ಲಿ ವೇಗವು ಬೇರೆಯಾಗಿರುತ್ತದೆ.

ಮುಮ್ಮಲೆಗಳು (Primary/P Waves) ಎಂದು ಗುರುತಿಸಲಾಗುವ ನಡುಕದಲೆಗಳ ಒಂದು ಬಗೆ, ಗಟ್ಟಿಯಾದ ಮತ್ತು ನೀರಿನ ರೂಪದಲ್ಲಿರುವ ವಸ್ತಗಳೆರಡಲ್ಲೂ ಸಾಗಬಲ್ಲವು. ಅದೇ ಇಮ್ಮಲೆಗಳು (Secondary/S Waves) ಎಂಬ ನಡುಕದಲೆಗಳು ಗಟ್ಟಿಯಾದ ವಸ್ತುಗಳಲ್ಲಶ್ಟೇ ಸಾಗಬಲ್ಲವು.

Picture1

ಹಾಗೆನೇ ನೀರಿನ ರೂಪ ಇಲ್ಲವೇ ಅದರ ಅಂಶವನ್ನು ಹೊಂದಿದ ವಸ್ತುಗಳಲ್ಲಿ ಸಾಗುವಾಗ ಮುಮ್ಮಲೆಗಳ ವೇಗ ಬದಲಾಗುವುದು ಅರಕೆಯಿಂದ ತಿಳಿದುಬಂದಿದೆ. ಈ ಅರಿವನ್ನು ಬಳಸಿಕೊಂಡೇ ಇತ್ತೀಚಿಗೆ ನೆಲದಾಳದಲ್ಲಿ ’ನೀರಿದೆ’ ಎಂಬುದನ್ನು ಅಂದಾಜಿಸಲಾಗಿದೆ. ಈಗ ನಮ್ಮ ಈ ಬರಹದ ಮುಕ್ಯ ವಿಶಯ ’ನೆಲದಾಳ’ದಲ್ಲಿ ನೀರಿನತ್ತ ಬಂದಂತಾಯಿತು.

ಅಮೇರಿಕಾದ ನಾರ‍್ತ್ ವೆಸ್ಟರ‍್ನ್ ಕಲಿಕೆವೀಡಿನ ನೆಲದಿರುವರಿಗ (geophysicist) ಸ್ಟೀವ್ ಜಾಕಬ್ಸನ್ (Steve Jacobsen) ಮತ್ತು ನ್ಯೂ ಮೆಕ್ಸಿಕೋ ಕಲಿಕೆವೀಡಿನ ನಡುಕದಲೆಯರಿಗ (seismologist) ಬ್ರಾಂಡನ್ (Brandon Schmandt) ಅವರು ನಡುಕದರಿಮೆ ಬಳಸಿ, ನೆಲದ ಮೇಲ್ಮಯಿಂದ ಸುಮಾರು 660 ಕಿ.ಮೀ. ಆಳದಲ್ಲಿ ನೀರಿನ ಬಿಡಿಕಣಗಳಿದ್ದು, ಅವುಗಳು ರಿಂಗ್‍ವುಡಯ್ಟ್ (Ringwoodite) ಎಂಬ ಹರಳು ರೂಪದಲ್ಲಿರುವ ವಸ್ತುವಿಗೆ ಅಂಟಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಿಂಗ್‍ವುಡಯ್ಟ್ (ಅದನ್ನು ಕಂಡುಹಿಡಿದ ಅರಿಮೆಗಾರರ ಹೆಸರಿನಿಂದ ಕರೆಯಲಾಗುತ್ತಿದೆ), ನೆಲದಾಳದ ಹೊದಿಕೆಯ ಬಾಗದಲ್ಲಿ ಹೇರಳವಾಗಿ ಇರುವ ವಸ್ತುವೆಂದು ನಡುಕದಲೆಗಳ ಮೂಲಕ ಈ ಮುಂಚೆ ಅರಿಯಲಾಗಿತ್ತು. ರಿಂಗ್‍ವುಡಯ್ಟ್ ಮುಕ್ಯವಾಗಿ ಕಬ್ಬಿಣ ಮತ್ತು ಮ್ಯಾಗ್ನೇಸಿಯ್ಂ ನಿಂದ ಕೂಡಿದ್ದು, ತನ್ನ ತೂಕದ 2.1% ರಶ್ಟು ನೀರನ್ನು ಹಿಡಿದುಕೊಳ್ಳಬಲ್ಲದು ಅಂತಾನೂ ತಿಳಿಯಲಾಗಿತ್ತು. ಆದರೆ ಇಲ್ಲಿಯವರೆಗೆ ನೆಲದಾಳದ ರಿಂಗ್‍ವುಡಯ್ಟ್ ಹರಳಿನಲ್ಲಿ ನಿಜವಾಗಲೂ ನೀರಿದೆಯೇ ಎಂದು ಗೊತ್ತಾಗಿರಲಿಲ್ಲ.

BlueRingwoodite

(ನೆಲದ ಒಡಲಾಳದ ಹೊದಿಕೆಯ ಬಾಗದಲ್ಲಿ ಕಂಡುಬರುವ ರಿಂಗ್‍ವುಡಯ್ಟ್ ಹರಳು)

ಇಲ್ಲಿಯವರೆಗೆ ಉಂಟಾದ ಸುಮಾರು 500 ನೆಲನಡುಕಗಳ (earthquakes) ಮಾಹಿತಿಗಳನ್ನು ಸ್ಟೀವ್ ಜಾಕಬ್ಸನ್ ಅವರು ಒರೆಗೆಹಚ್ಚಿ ನೋಡಿದಾಗ, ನಡುಕದಲೆಗಳ (seismic waves) ವೇಗ ಸುಮಾರು 660 ಕಿ.ಮೀ. ನೆಲದಾಳಕ್ಕೆ ತಲುಪಿದಾಗಲೆಲ್ಲಾ ಬೇರೆಯಾಗಿರುವುದು ಮತ್ತು ಆ ವೇಗ ಹಸಿ ರೂಪದಲ್ಲಿರುವ ರಿಂಗ್‍ವುಡಯ್ಟ್ ಹರಳುಗಳಿಗೆ ತಾಗಿದಾಗ ಪಡೆಯುವ ವೇಗಕ್ಕೆ ಸಾಟಿಯಾಗಿದೆ ಎಂದು ತೋರಿಸಿದ್ದಾರೆ. ಇದಕ್ಕಾಗಿ ಅವರು ಮತ್ತು ಬ್ರಾಂಡನ್ ತಮ್ಮ ಅರಕೆಮನೆಯಲ್ಲಿ ಹಸಿ ಮತ್ತು ಒಣ ರಿಂಗ್‍ವುಡಯ್ಟ್ ಹರಳುಗಳಿಗೆ ನಡುಕದಲೆಗಳನ್ನು ತಾಗಿಸಿದಾಗ ದೊರೆತ ವೇಗ ಮತ್ತು ನೆಲನಡುಕಗಳು ನೀಡಿದ ಮಾಹಿತಿಯನ್ನು ತಾಳೆಹಾಕಿ ಈ ನಿಲುವಿಗೆ ಬಂದಿದ್ದಾರೆ.

ಹೀಗೆ ನೆಲದಾಳದಲ್ಲಿ ಇಳಿಯದೇ ಅರಿಮೆಯ ಚಳಕಗಳನ್ನು ಬಳಸಿ ನೆಲದ ಒಡಲಾಳದಲ್ಲಿ ನೀರಿರುವುದನ್ನು ಅರಿಮೆಗಾರರು ತೋರಿಸಿದಂತಾಗಿದೆ. ನಮಗೆ ಕಂಡಿರುವ ಈ ಹೊಸ ನೀರು ಬಳಕೆಗೆ ಎಟುಕದಂತಿದ್ದರೂ, ನಮ್ಮ ನೆಲದ ಮೇಲ್ಮಯಲ್ಲಿ ಉಂಟಾಗಿರುವ ಕಡಲುಗಳ ಹುಟ್ಟಿನ ಕತೆ ಮತ್ತು ಒಟ್ಟಾರೆಯಾಗಿ ನೆಲದ ರಚನೆಯ ಬಗ್ಗೆ ನಮಗೆ ಸಾಕಶ್ಟು ತಿಳುವಳಿಕೆಯನ್ನು ಮುಂದಿನ ದಿನಗಳಲ್ಲಿ ನೀಡಲಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: www.usatoday.com, trussty-jasmine, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 02/02/2015

    […] ಹೆಚ್ಚಿನ ನೀರು ನೆಲದಾಳದಲ್ಲಿದೆ ಎಂಬಂತಹ ಇತ್ತೀಚಿನ ಸುದ್ದಿಯನ್ನು ಇಲ್ಲಿ […]

ಅನಿಸಿಕೆ ಬರೆಯಿರಿ: