ಗೋಂಡಿ ಎಂಬ ದ್ರಾವಿಡ ನುಡಿ

ಅನ್ನದಾನೇಶ ಶಿ. ಸಂಕದಾಳ.

gondi

‘ಗೋಂಡಿ’ ನುಡಿ ಬಳಸಿ ಬರೆದಿರುವ ಕಯ್ಬರಹಗಳು-ಕಡತಗಳು (manuscripts) ಸಿಕ್ಕಿದ್ದು, ಅವುಗಳನ್ನು ಎಣ್ಣುಕದಲ್ಲಿ (computer) ಸಿಗುವಂತೆ ಮಾಡುವ ಹಮ್ಮುಗೆಯೊಂದನ್ನು ಅರಕೆಗಾರರು ಹಾಕಿಕೊಂಡಿರುವ ಸುದ್ದಿಯೊಂದು ಬಂದಿದೆ. ಹಯ್ದರಾಬಾದ್ ನಲ್ಲಿರುವ ಸೆಂಟರ್ ಆಪ್ ದಲಿತ್ ಅಂಡ್ ಆದಿವಾಸಿ ಸ್ಟಡೀಸ್ (CDAST) ವಿಶ್ವವಿದ್ಯಾಲಯದ ಅರಕೆಗಾರರು ಮತ್ತು ಬಲ್ಲವರು ಜೊತೆಗೂಡಿ ಈ ಕೆಲಸ ಮಾಡಲು ಮುಂದಾಗಿದ್ದಾರೆ. ‘ಗೋಂಡಿ’ ನುಡಿಯ ಬಗ್ಗೆ, ಆ ನುಡಿಯಾಡುವ ಜನರ ಬಗ್ಗೆ, ನುಡಿಯಲ್ಲಿನ ಸಾಹಿತ್ಯದ ಬಗ್ಗೆ ತಿಳಿಸುವಂತ ಅಪರೂಪದ ಮಾಹಿತಿ, ದೊರೆತ ಆ ಕಯ್ ಬರಹದ ಹಾಳೆ-ಕಡತಗಳಲ್ಲಿದ್ದು, ಅದನ್ನು ಕಾಪಿಡಲು ಎಣ್ಣುಕದಲ್ಲಿ ಅಳವಡಿಸುವ ನಡೆ ಮೆಚ್ಚುವಂತದ್ದು. ತೆಲುಗು ನುಡಿಗೆ ಹತ್ತಿರವಾಗಿದ್ದ ಕಾರಣಕ್ಕೆ ಏನೋ, ತೆಲುಗು ಲಿಪಿಯನ್ನು ಬಳಸುತ್ತಿದ್ದ ‘ಗೋಂಡಿ’ ಗೆ ಹೊಸ ಲಿಪಿಯನ್ನು ತಯಾರು ಮಾಡುವ ಕೆಲಸವೂ ನಡೆಯುತ್ತಿದೆಯಂತೆ!

ಯಾವುದಿದು ‘ಗೋಂಡಿ’ ನುಡಿ:

ಬಾರತ ಒಕ್ಕೂಟದಲ್ಲಾಡುವ ನುಡಿಗಳು ಹಲವಾರಿದ್ದು, ಅವುಗಳ ನಡುವಿನ ಬೇರ‍್ಮೆಯಿಂದ ಬೇರೆ ಬೇರೆ ನುಡಿ ಕುಟುಂಬಗಳಿಗೆ ಸೇರಿದ್ದವಾಗಿವೆ. ಹಲವಾರು ನುಡಿ ಕುಟುಂಬಗಳ ಬೀಡಾಗಿರುವ ಬಾರತದಲ್ಲಿ ಹೆಚ್ಚಿನ ನುಡಿಗಳು ದ್ರಾವಿಡ (ಎತ್ತುಗೆ : ಕನ್ನಡ, ತಮಿಳು, ತೆಲುಗು ಮುಂತಾದವು), ಇಂಡೋ-ಆರ್‍ಯನ್ (ಎತ್ತುಗೆ : ಸಂಸ್ಕ್ರುತ, ಅಸ್ಸಾಮಿ, ಹಿಂದಿ ಮುಂತಾದವು), ಟಿಬೆಟೋ-ಬರ್‍ಮನ್ (ಎತ್ತುಗೆ : ಬೋಡೊ, ಮಣಿಪುರಿ) ಮತ್ತು ಆಸ್ಟ್ರೋ -ಏಶ್ಯಟಿಕ್ (ಎತ್ತುಗೆ : ಸಂತಲಿ) ಎಂಬ ನುಡಿಕುಟುಂಬಗಳಿಗೆ ಸೇರಿದ್ದವಾಗಿರುತ್ತವೆ ಎಂದು ನುಡಿಯರಿಗರು ಹೇಳುತ್ತಾರೆ.

‘ಗೋಂಡಿ’ ನುಡಿಯು ದ್ರಾವಿಡ ನುಡಿ ಕುಟುಂಬಕ್ಕೆ ಸೇರಿದ ಒಂದು ನುಡಿಯಾಗಿದೆ. ‘ಗೋಂಡಿ’ ನುಡಿಯಾಡುವ ಮಂದಿ ಈಗ ಸುಮಾರು 20 ಲಕ್ಶದಶ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ‘ಗೋಂಡಿ’ನುಡಿಯಾಡುವ ಮಂದಿ ಮುಕ್ಯವಾಗಿ ಬುಡಕಟ್ಟು ಜನಾಂಗದವರಾಗಿದ್ದು ಅವರನ್ನು ಮುಕ್ಯವಾಹಿನಿಗೆ ತರಲು ಇಂತ ಹಮ್ಮುಗೆಗಳನ್ನು ಹಾಕಿಕೊಂಡಿದ್ದಾರೆ. ‘ಗೋಂಡಿ’ ನುಡಿಯಲ್ಲಿನ ಜನಪದ ಸಾಹಿತ್ಯ ಶ್ರೀಮಂತವಾಗಿದ್ದು ಮದುವೆ ಮುಂತಾದ ನಲ್ಕೂಟಗಳಲ್ಲಿ ಹಾಡುಗಳ ರೂಪದಲ್ಲಿ ಹೆಚ್ಚಾಗಿ ಹೊರ ಹೊಮ್ಮಿ ಜನರ ಅರಿವಿನಲ್ಲಿದೆ ಎಂದು ಹೇಳಲಾಗುತ್ತದೆ.

ದ್ರಾವಿಡ ನುಡಿಕುಟುಂಬ ಮತ್ತು ‘ಗೋಂಡಿ’ : ಒಂದು ಇಣುಕುನೋಟ

ದ್ರಾವಿಡ ನುಡಿಗಳನ್ನು ಮುಕ್ಯವಾಗಿ ಬಡಗಣ ದ್ರಾವಿಡ , ನಡು ದ್ರಾವಿಡ ಮತ್ತು ತೆಂಕಣ ದ್ರಾವಿಡ ನುಡಿಗಳು ಎಂದು ಗುರುತಿಸಲಾಗುತ್ತದೆ. ಕನ್ನಡ, ತಮಿಳು, ತೆಲುಗು, ತುಳು , ಮಲಯಾಳಂ ಇವು ತೆಂಕಣ ದ್ರಾವಿಡ ನುಡಿಗಳಲ್ಲಿ ಮುಕ್ಯವಾದರೆ, ನಯ್ಕಿ, ಕೊಲಮಿ, ಒಲ್ಲರಿ, ದುರುವ ನುಡಿಗಳು ನಡು ದ್ರಾವಿಡದ್ದವಾಗಿವೆ. ಕುರುಕ್, ಕುಮರ್‍ಬಗ್ ಪಹರಿಯ, ಸುರಿಯ ಪಹರಿಯ ಮತ್ತು ಬ್ರಹುಯಿ ನುಡಿಗಳು ಬಡಗಣ ದ್ರಾವಿಡ ಕುಟುಂಬಕ್ಕೆ ಸೇರಿವೆ ಎಂದು ನುಡಿಯರಿಮೆ ತಿಳಿಸುತ್ತದೆ.

ದ್ರಾವಿಡ ನುಡಿ ಕುಟುಂಬದಲ್ಲಿನ ನುಡಿಗಳು ಇಂಡೋ-ಆರ‍್ಯನ್ ನುಡಿಗಳಿಗಿಂತಲೂ ಒಂದಕ್ಕೊಂದು ತುಂಬಾ ಹತ್ತಿರದಲ್ಲಿರುವ ನುಡಿಗಳಾಗಿವೆ ಎಂದು ನುಡಿಯರಿಮೆ ಹೇಳುತ್ತದೆ. ಅಂದರೆ, ಬೇರೆ ಬೇರೆ ದ್ರಾವಿಡ ನುಡಿಗಳಲ್ಲಿ ಬಳಸುವ ಪದಗಳ ನಡುವೆ ಹೋಲಿಕೆ ಇದ್ದು, ಬೇರ್‍ಮೆಗೆ ಇರುವ ಕಾರಣವನ್ನು ಸರಿಯಾಗಿ ವಿವರಿಸಬಹುದಾಗಿದೆ. 20 ಕ್ಕೂ ಹೆಚ್ಚು ನುಡಿಗಳನ್ನು ದ್ರಾವಿಡ ನುಡಿ ಕುಟುಂಬ ಹೊಂದಿದ್ದು, ಗೋಂಡಿಯು ತೆಂಕಣ ದ್ರಾವಿಡ ಬಗೆಯದ್ದಾಗಿದೆ. ಗೋಂಡಿ ನುಡಿಯಾಡುವವರು ಆಂದ್ರಪ್ರದೇಶ ಮಾತ್ರವಲ್ಲದೆ ಮಹಾರಾಶ್ಟ್ರ, ಮದ್ಯಪ್ರದೇಶ್, ಗುಜರಾತ್, ಚತ್ತೀಸ್ಗಡ ಮತ್ತು ಈ ರಾಜ್ಯಗಳ ನೆರೆಯ ಪ್ರದೇಶಗಳಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ದ್ರಾವಿಡ ನುಡಿಗಳ ಬೇರು ತೆಂಕಣ ದಿಕ್ಕಿನಲ್ಲಿದೆ, ದ್ರಾವಿಡ ನುಡಿಗಳನ್ನು ಮಾತಾಡುವವರು ತೆಂಕಣದ ಗಡಿಯೊಳಗೆ ಮಾತ್ರ ಇರುವರು ಎಂಬಂತ ಅನಿಸಿಕೆಗಳು ಮನೆಮಾಡಿದ್ದು, ಅವುಗಳೆಲ್ಲ “ತಪ್ಪನಿಸಿಕೆ” ಎಂಬುದು ಗೋಂಡಿ ನುಡಿಯಾಡುವುವರಿಂದ ತಿಳಿಯಲ್ಪಡುತ್ತದೆ. ಬಡಗಣದಲ್ಲೂ ದ್ರಾವಿಡ ನುಡಿ ಹಬ್ಬಿರುವ ರೀತಿ ದ್ರಾವಿಡ ನುಡಿಗಳ ಬಗ್ಗೆ ಹೆಚ್ಚು ಹೊಳಹನ್ನು ಬೀರಿ, ದ್ರಾವಿಡ ನುಡಿಗಳ ಎಲ್ಲೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಅರಿಯಲು ಹುರಿದುಂಬಿಸುವಂತಿದೆ.

(ಮಾಹಿತಿ ಸೆಲೆ: Wiki-languages-of-India, Wiki-Gondi-language, Wiktionary-Gondi, wiki-Dravidian languages, britannica.com, Issu.com )

(ಚಿತ್ರ ಸೆಲೆ: twitter-Indian-Diplomacy)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.