ಕನ್ನಡಿಗರ ಒಗ್ಗಟ್ಟನ್ನು ಸಾರುವ ‘ಅಟಕೂರಿನ ಕಲ್ಬರಹ’

ಕಿರಣ್ ಮಲೆನಾಡು.

ಅಟಕೂರಿನ ಕಲ್ಬರಹವು (ಆಟಗೂರು, ಅತಗೂರು, ಅತ್ಗೂರ್, ಅಟ್ಕೂರ್, ಅಟುಕೂರು ಎಂದೂ ಕೇಳ್ಪಡಬಹುದು) ಕ್ರಿ .ಶ. 949-950ರ ಹೊತ್ತಿನ ಒಂದು ಹಳೆಗನ್ನಡದ ಕಲ್ಬರಹ. ರಾಶ್ಟ್ರಕೂಟ ಮತ್ತು ಪಡುವಣ ಗಂಗರು ಸೇರಿ ಚೋಳರ ಮೇಲೆ ಕಾಳಗವನ್ನು ಮಾಡಿ ಗೆದ್ದರು, ಈ ಗೆಲುವಿನ ಪರವಾಗಿ ಅವರ ಆಡಳಿತದ ಹೊತ್ತಿನಲ್ಲಿ ಕೆತ್ತಿಸಿದ ಕಲ್ಬರಹವೇ ಅಟಕೂರಿನ ಕಲ್ಬರಹ. ಈ ಕಲ್ಬರಹವನ್ನು ಮಂಡ್ಯ ಪಟ್ಟಣದಿಂದ 23 ಕಿ.ಮಿ ದೂರವಿರುವ ಆಟಕೂರು ಎಂಬ ಹಳ್ಳಿಯಲ್ಲಿರುವ ಚೆಲ್ಲಕೇಶ್ವರ ಗುಡಿಯ ಹತ್ತಿರ ಕಂಡುಹಿಡಿಯಲಾಯಿತು.

ಈ ಕಲ್ಬರಹದಲ್ಲೇನಿದೆ?

ಈ ವೀರಗಲ್ಲು ಹಳಮೆಯ ಎರಡು ಬಗೆಯ ವಿವರಗಳನ್ನು ನೀಡುತ್ತದೆ. ಮೊದಲನೆಯದಾಗಿ ಕಾಲಿ ಎಂಬ ಬೇಟೆನಾಯಿ ಮತ್ತು ಕಾಡು ಹಂದಿಯ ನಡುವಿನ ಕಾಳಗವನ್ನು ಬಿಂಬಿಸಿದರೆ ಎರಡನೆಯದಾಗಿ ರಾಶ್ಟ್ರಕೂಟರ ಅರಸು ಮುಮ್ಮುಡಿ ಕ್ರಿಶ್ಣನು ಮತ್ತು ಪಡುವಣ ಗಂಗರ ಅರಸು ಇಮ್ಮಡಿ ಬುತುಂಗನ ಜೊತೆಗೂಡಿ ತಂಜಾವೂರಿನ ಚೋಳರನ್ನ ಸೋಲಿಸಿರುವುದನ್ನು ಹೇಳುತ್ತದೆ. ಈ ಕಾಳಗವು ತಮಿಳುನಾಡಿನ ವೆಲ್ಲೂರಿನ ಹತ್ತಿರದ ತಕ್ಕೊಳಂ ಎಂಬಲ್ಲಿ ನಡೆಯಿತು. (ಈ ಕಾಳಗವು ಹಳಮೆಯಲ್ಲಿ ತಕ್ಕೊಳಂ ಕಾಳಗ ಎಂದು ಹೆಸರು ಪಡೆದಿದೆ.)

Atakur_memorial_stone_with_inscription_in_old_Kannada_(949_C.E.)

ಪಡುವಣ ಗಂಗರ ಅರಸು ಇಮ್ಮಡಿ ಬುತುಂಗನ ಹತ್ತಿರ ಒಂದು ನೆಚ್ಚಿನ ಕಾಲಿ ಎಂಬ ಬೇಟೆನಾಯಿ ಇತ್ತು, ಇದು ಕಾಳಗದಲ್ಲಿ ಮನ್ಲರತ (ಮಣಲೇರ ಎಂದು ಹಳಮೆಯಲ್ಲಿ ಕೇಳ್ಪಟ್ಟ ಹೆಸರು) ಎಂಬ ಪಡುವಣ ಗಂಗರ ಪಡೆಯ ಮೇಲಾಳಿಗೆ (Military chief) ಕಾಳಗದಲ್ಲಿ ನೆರವನ್ನು ನೀಡಿತ್ತು. ಚೋಳರನ್ನು ಹಿಮ್ಮೆಟ್ಟಿಸಲು ಇದೂ ಕೂಡ ನೆರವಾಗಿತ್ತು. ಆ ಹೊತ್ತಿನಲ್ಲಿ ಇಮ್ಮಡಿ ಬುತುಂಗನು ಆನೆಯೇರಿ ಚೋಳರ ಅರಸು ರಾಜಾದಿತ್ಯನನ್ನು ಕೊಂದನು. ಚೋಳರನ್ನು ಹಿಮ್ಮೆಟ್ಟಿದ ಪಡೆಯ ಮೇಲಾಳು ಮನ್ಲರತನಿಗೆ ವಲ್ಲಬಿಪುರವರೇಶ್ವರ ಎಂಬ ಬಿರುದನ್ನೂ ನೀಡಲಾಗಿದೆ ಎಂದು ಈ ಕಲ್ಬರಹದಲ್ಲಿ ನೀಡಲಾಗಿದೆ.

ರಾಶ್ಟ್ರಕೂಟರ ಮುಮ್ಮುಡಿ ಕ್ರಿಶ್ಣನು ಚೋಳರ ಮೇಲಿನ ಗೆಲುವಿನ ಸಲುವಾಗಿ ಇಮ್ಮಡಿ ಬುತುಂಗನನ್ನು ಹಾರಯ್ಸಿದನು (“ನೇರಳಿಗೆ” ಎಂಬ ಇನ್ನೊಂದು ಕಲ್ಬರಹವು ಈ ಕಾಳಗವನ್ನು ಚೆನ್ನಾಗಿ ವಿವರಿಸುತ್ತದೆ) ಮತ್ತು ಮನ್ಲರತನಿಗೆ ಕಾಳಗದಲ್ಲಿ ತೋರಿದ ಗಟ್ಟಿಗತನಕ್ಕೆ ಕಾಲಿ ಎಂಬ ಬೇಟೆನಾಯಿಯನ್ನು ಇಮ್ಮಡಿ ಬುತುಂಗನಿಂದ ಉಡುಗೊರೆಯಾಗಿ ಕೊಡುವಂತೆ ಕೋರಿದನು ಎಂದು ಕಲ್ಬರಹದಲ್ಲಿ ಅಚ್ಚಿಸಲಾಗಿದೆ.

ಬೇರೆಯದಾದ ಇನ್ನೊಂದು ಹೇಳ್ವಿಯಲ್ಲಿ ಬುತುಂಗನಿಂದ ಉಡುಗೊರೆಯಾಗಿ ಪಡೆದ ಈ ಕಾಲಿ ಬೇಟೆನಾಯಿಯು ಬೆಟ್ಲೂರಿನ ಹಳ್ಳಿಯ ಹತ್ತಿರ ಒಂದು ಕಾಡು ಹಂದಿಯ ಜೊತೆ ತಗ್ಗಿನ ನೆಲದಲ್ಲಿ ಕಾದಾಡಿ ಅದನ್ನು ಕೊಂದಿತು ಹಾಗು ತಾನು ನೆಲಸಮ ಹೊಂದಿತು ಎಂದು ಈ ಕಲ್ಬರಹದಲ್ಲಿ ಅಚ್ಚಿಸಲಾಗಿದೆ. ನೆಚ್ಚಿನ ಬೇಟೆನಾಯಿಯನ್ನು ಕಳೆದುಕೊಂಡ ಅಳುವಿನಲ್ಲಿ ಮನ್ಲರತನು ಈ ಕಲ್ಬರಹ ವನ್ನು ಕೆತ್ತಿಸಿದ ಎಂದು ಹಳಮೆಯರಿಗರಾದ ಅಯ್. ಕೆ. ಶರ‍್ಮ ಮತ್ತು ಉಪೇಂದ್ರ ಸಿಂಗ್ ತಿಳಿಸಿದ್ದಾರೆ. ಇದೇ ಹಳಮೆಯರಿಗರು ಹೇಳುವಂತೆ ಕಾಳಗದಲ್ಲಿ ಹೋರಾಡಿದ ಅರಸಾಳುಗಳಿಗೆ ಕಲ್ಬರಹದಂತಿರುವ ವೀರಗಲ್ಲುಗಳನ್ನು ಕೆತ್ತಿಸುವುದು ಸಾಮಾನ್ಯ ಆದರೆ ನೆಚ್ಚಿನ ಸಾಕು ಗಂಟಿಗಳಿಗೆ ಈ ಕಲ್ಬರಹವನ್ನು ಕೆತ್ತಿಸುವುದು ಕಡಿಮೆ. ಅಲ್ಲದೇ, ಆ ಊರಿನಲ್ಲಿ ಪೂಜಿಸುವ ಗೊರವರ ಪೂಜಾರಿಗಳಿಗೆ ತಾವು ಊಟವನ್ನು ಮಾಡುವ ಮೊದಲು ಈ ಕಲ್ಲಿಗೆ ಪೂಜೆ ಮಾಡಬೇಕು, ಇಲ್ಲವಾದರೆ ಅದು ಪಾಪವಾದೀತು ಎಂದು ಈ ಕಲ್ಬರಹದಲ್ಲಿ ಅಚ್ಚಿಸಲಾಗಿದೆ.

ಮುಮ್ಮುಡಿ ಕ್ರಿಸ್ಣನು ಚೋಳರ ಮೇಲಿನ ಗೆಲುವಿನ ಬಳುವಳಿಯಾಗಿ ಪಡುವಣ ಗಂಗರ ಅರಸ ಇಮ್ಮಡಿ ಬುತುಂಗನಿಗೆ ತನ್ನ ಆಡಳಿತದಲ್ಲಿದ್ದ ಹಲವು ತುಣುಕು ನೆಲವನ್ನು ನೀಡುತ್ತಾನೆ. ಇದರಲ್ಲಿ ಬನವಾಸಿಯ 12000 ಹಳ್ಳಿಗಳು , ಬೆಳವಲದ 300 ಹಳ್ಳಿಗಳು , ಪುರುಗೆರೆಯ 300 ಹಳ್ಳಿಗಳು, ಕಿಸುಕಾಡಿನ 70 ಹಳ್ಳಿಗಳು ಮತ್ತು ಬಾಗೆನಾಡಿನ 7 ಹಳ್ಳಿಗಳನ್ನು ನೀಡುತ್ತಾನೆ. ಅದೇ ರೀತಿಯಲ್ಲಿ ಇಮ್ಮಡಿ ಬುತುಂಗನು ತನ್ನ ನೆಚ್ಚಿನ ಪಡೆಯ ಮೇಲಾಳು ಮನ್ಲರತನಿಗೆ ಅಟಕೂರಿನ 12 ಹಳ್ಳಿಗಳನ್ನು ಮತ್ತು ಕೋಟೆಯೂರಿನ ಹಲವು ಹಳ್ಳಿಗಳನ್ನು ಬಳುವಳಿ ನೀಡುತ್ತಾನೆ ಎಂದು ಹಳೆಮೆಯು ತಿಳಿಸಿಕೊಡುತ್ತದೆ.

ಕಾಳಗದಲ್ಲಿ ನೆರವಾದ ನಾಯಿಯ ನೆನಪಿನ ಗುರುತಾಗಿ ಈ ಕಲ್ಬರಹ ಕಂಡು ಬಂದರೂ, ಕನ್ನಡಿಗ ದೊರೆಗಳು ಒಗ್ಗಟ್ಟಿನಿಂದ ಹೋರಾಡಿ ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಕನ್ನಡ ನಾಡನ್ನು ಕಾಪಾಡಿದ ತಿರುಳನ್ನು ಈ ಅಟಕೂರಿನ ಕಲ್ಬರಹವು ಸಾರುತ್ತದೆ. ಅಂದಿನ ಕನ್ನಡದ ದೊರೆಗಳ ನಡುವಿನ ಹೊಂದಾಣಿಕೆಯನ್ನು ಈ ಕಲ್ಬರಹ ಸಾರುತ್ತದೆ. ಕಾಳಗವು ಮುಗಿದ ಮೇಲೂ ತಮ್ಮ ಗೆಲುವಿನ ಮತ್ತು ಗೆಳೆತನದ ಗುರುತಾಗಿ ಉಡುಗೊರೆಗಳನ್ನು ಹಂಚಿಕೊಂಡು ತಮ್ಮ ನಡುವಿನ ಸಾಮರಸ್ಯವನ್ನು ಕಾದುಕೊಂಡ ತಿರುಳನ್ನು ಈ ಬರಹ ತಿಳಿಸುತ್ತದೆ. ಎದುರಾಳಿಗಳನ್ನು ಎದುರಿಸಲು ಕನ್ನಡಿಗರು ತಮ್ಮ ನಡುವೆ ಹೊಂದಾಣಿಕೆಯನ್ನು ಕಾದುಕೊಂಡು ಒಗ್ಗಟ್ಟಿನಿಂದ ನಿಲ್ಲಬೇಕು ಎಂಬ ಅರಿವನ್ನು ಈ ಹಳಮೆಯ ಗುರುತು ನಮಗೆ ತಿಳಿಸಿಕೊಡುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆwilkipediaಅಯ್. ಕೆ. ಶರ‍್ಮ “Temples of the Gangas of Karnataka” , ಉಪೇಂದ್ರ ಸಿಂಗರ “A History of Ancient and Early Medieval India: From the Stone Age to the 12th Century” , ಮಾಲಿನಿ ಅಡಿಗರ  ”The Making of Southern Karnataka: Society, Polity and Culture in the early medieval period, AD 400–1030”)

ನಿಮಗೆ ಹಿಡಿಸಬಹುದಾದ ಬರಹಗಳು

8 Responses

 1. Adarsh Gowda says:

  ಆತಗೂರ್ ಗ್ರಾಮ, ನನ್ನ ಸ್ವಗ್ರಾಮದಿ೦ದ ಕೇವಲ ೨ ಕಿಲೊ ಮೀಟರ್ ದೂರವಿದೆ

  • ತುಂಬಾ ಒಳ್ಳೆಯ ಸಂಗತಿ . ನೀವು ಈ ಕಲ್ಬರಹದ ಕೆಲವು ತಿಟ್ಟಗಳನ್ನು(ಚಿತ್ರಗಳನ್ನು) ತೆಗೆದು ಕಳುಹಿಸಬಹುದ ?

 2. Adarsh Gowda ಅವರು ಆ ಊರಿನ ಹೆಸರನ್ನು ಆತಗೂರ್ ಎಂದಿದ್ದಾರೆ. ಅಲ್ಲಿನ ಮಂದಿ ಅಂಗನ್ನುವುದು ದಿಟವೇ? ಯಾಕೆಂದರೆ ಆತಕೂರು ಎಂಬುದೇ ಎಲ್ಲಡೆಯೂ ಚೆನ್ನಾಗಿ ಗೊತ್ತಿರುವಂತ ಪದ. ಇರಲಿ, ಇನ್ನು ಕಲ್ಬರಹದ ಸುದ್ದಿಗೆ ಬರೋಣ.
  ಫ್ಲೀಟರು ಬರೆದುಕೊಂಡು ಸರಿಯಾದ ಅಕ್ಕರಗಳನ್ನು ಕೊಟ್ಟದ್ದು ಹೀಗಿದೆ:
  ಸ್ವಸ್ತಿ ಸಕ ನ್ರಿಪ ಕಾಲಾತೀತ ಸಂವತ್ಸರ ಸತಂಗಳೆಣ್ಟುನೂರೆಳ್ಪತ್ತೆರಡನೆಯ ಸೌಮ್ಯಮೆಂಬ ಸಂವತ್ಸರಂ ಪ್ರವರ್ತ್ತಿಸೆ, ಸ್ವಸ್ತಿ ಅಮೋಘವರಿಷದೇವ ಶ್ರೀಪ್ರಿಥುವೀವಲ್ಲಭ ಪರಮೇಶ್ವರ ಪರಮಭಟ್ಟಾರಕ ಪಾದಪಂಕಜಭ್ರಮರಂ, ನೃಪತ್ರಿಣೇತ್ರನಾನೆವೆಡಙ್ಗಂ ವನಗಜಮಲ್ಲಂ ಕಚ್ಚೆಗಂ ಕ್ರಿಷ್ಣರಾಜಂ ಶ್ರೀಮತ್ ಕನ್ನರದೇವಂ..ಳೂ _ವಜಂ ಚೋಳರಾಜಾದಿತ್ಯನ ಮೇಲೆ ಬನ್ದು ತಕ್ಕೋಲದೊಳ್ಕಾದಿ ಕೊನ್ದು ಬಿಜಯಂಗೆಯ್ಯುತ್ತಿರ‍್ದು, ಸ್ವಸ್ತಿ ಸತ್ಯವಾಕ್ಯ ಕೊಙ್ಗುಣಿವರ್ಮ ಧರ್ಮ್ಮ ಮಹಾರಾಜಾಧಿರಾಜಂ ಕೊಳಾಲಪುರವರೇಶ್ವರಂ ನನ್ದಗಿರಿನಾಥಂ ಶ್ರೀಮತ್ ಪೆರ್ಮಾನಡಿಗಳ್ ನನ್ನೆಯಗಙ್ಗ ಜಯದುತ್ತಂಗ ಗಂಗಗಾಂಗೇಯ ಗಂಗನಾರಾಯಣ ತನಾಳುತ್ತಿರ‍್ದು, ಸ್ವಸ್ತಿ ಸಕಳಲೋಕಪರಿತಾಪಾವಿ_ಹತ ಪ್ರಭಾವಾವತಾರಿತ ಗಂಗಪ್ರವಾಹೋದಾರಸಗರವಂಶ ವಳಭಿಪುರವರೇಶ್ವರನುದಾರಭಗೀರಥನಿರಿವಬೆಡಂಗಂ ಸಗರ ತ್ರಿಣೇತ್ರಂ ಸೆಣಸೆ ಮೂಗಿರಿವೊಂ ಕದನೈಕಸೂದ್ರಕಂ ಬೂತುಗನಂಕಕಾರಂ ಶ್ರೀಮತ್ ಮಣಲರತಂಗನುವರದೊಳ್ ಮೆಚ್ಚಿ ಬೇಡಿಕೊಳ್ಳೆಂದೊಡೆ ದಯೆಯ ಮೆರೆವೊಳೆ _ಳ್ಳೆಮ್ಬ ಕಾಳಿಯಂ ದಯೆಗೆಯ್ಯೆನ್ದು ಕೊಣ್ಡ ನಾಯಂ ಕಳಲೆನಾಡ ಬೆಳತೂರ ಪಡುವಣದೆಸೆಯ ಮೊರಡಿಯೊಳ್ ಪಿರಿದುಂ ಪನ್ದಿಗೆವಿಟ್ಟೊಡೆ ಪಂದಿಯುಂ ನಾಯುಮೊಡನೆಸತ್ತುವದರ್ಕ್ಕೆಯತುಕೂರೊಳ್ ಚಲ್ಲೇಶ್ವರದ ಮುನ್ದೆ ಕಲ್ಲನ್ನಡಿಸಿ ಪಿರಿಯಕೆರೆಯ ಕೆಳಗೆ ಮಳ್ತಿಕಾಲಂಗದೊಳಿರ್ಕ್ಕಂಡುಗ ಮಣ್ಣಂ ಕೊಟ್ಟರಾ ಮಣ್ಣನೊಕ್ಕಲ್ ನಾಡನೊಳ್ವೊಂನೂರನಾಳ್ವೊರೀ ಮಣ್ಣನಳಿದೊನಾ ನಾಯ ಗೆಯ್ದ ಪಾಪಮಂ ಕೊಣ್ಡೊಂ ನಾ ಸ್ಥಾನಮನಾಳ್ವ ಗೊರವನಾ ಕಲ್ಲಂ ಪೂಜಿಸದುಣ್ಡರಪ್ಪೊಡೆ ನಾಯಗೆಯ್ದ ಪಾಪಮಂ ಕೊಣ್ಡನ್ |ಓಂ|
  ಉರದಿದಿರಾನ್ತ ಚೋಳಚತುರಂಗಬಲಂಗಳನಟ್ಟಿ ಮುಟ್ಟಿ ತಳ್ತಿರಿವೆಡೆಗೊರ‍್ವರಪ್ಪೊಡಮಿದಿರ‍್ಚುವ ಗಣ್ಡರನಾಮ್ಪೆವೆನ್ದು ಪೊಟ್ಟಳಿಸುವ ಬೀರರಂ ನೆರೆಯೆ ಕೋಣಮೆ ಚೋಳನೆ ಸಕ್ತಿಯಾಗೆ ತಳ್ತಿರಿದುದನಾವೆ_ಮೆ ಕಣ್ಡೆವೆನೆ ಮೆಚ್ಚದೊರಾರ್ ಸಗರತ್ರಿಣೇತ್ರಂ. ನರಪತಿ ಬೆನ್ನೊಳಿಳ್ದೊನ್ದಿದಿರಾನ್ತುದು ವೈರಿಸಮೂಹಮಿಲ್ಲಿ ಮುಚ್ಚರಿಸುವರೆಲ್ಲರುಂ ಸೆಗುವಾಳ್ದಪೊರಿನ್ತಿರೆನ್ದು ಸಿಂಗದನ್ತಿರೆ ಹರಿಬೀರಲಕ್ಷ್ಮಿ ನೆರವಾಗಿರೆ ಚೋಳನ ಕೋಟೆಯೆಮ್ಬ ಸಿನ್ದುರದ ಶಿರಾಗ್ರಮಂ ಬಿರಿಯೆ ಪಾಯಿದಂ ಕದನೈಕಸೂದ್ರಕಂ |ಓಂ|
  ಸ್ವಸ್ತಿ ಶ್ರೀ ಎರೆಯಪನ ಮಗಂ ರಾಚಮಲ್ಲನಂ ಬೂತುಗಂ ಕಾದಿಕೊನ್ದು ತೊಮ್ಬತ್ತರುಸಾಸಿರಮಂ ಆಳುತ್ತಿರೆ, ಕನ್ನರದೇವಂ ಚೋಳನಂ ಕಾದುವನ್ದು ಬೂತುಗಂ ರಾಜಾದಿತ್ಯನಂ ಬಿಸುಗೆಯಕಳನಾಗಿ ಗುರಿಗಿರಿದು ಕಾದಿಕೊನ್ದು ಬನವಸೆ ಪನ್ನಿರ‍್ಚಾಸಿರಮುಂ ಬೆಳ್ವೊಲಮುನೂರಂ ಪುರಿಗೆರೆಮುಂನೂರಂ ಕಿಸುಕಾಡೆಳ್ಪತ್ತುಂ ಬಾಗೆನಾಡೆಳ್ಪತ್ತುಮಂ ಬೂತುಗಂಗೆ ಕನ್ನರದೇವಂ ಮೆಚ್ಚುಗೊಟ್ಟಂ| ಬೂತುಗನುಂ ಮಣಲರತನ ಮುನ್ದೆ ನಿನ್ದಿರಿದುದರ‍್ಕೆ ಮೆಚ್ಚಿ ಆತುಕೂರ‍್ಪನ್ನೆರಡುಂ ಬೆಳ್ವೊಲದ ಕಾದಿಯೂರುಮಂ ಬಾಳ್ಗಚ್ಚುಗೊಟ್ಟಂ ||ಮಂಗಳ ಮಹಾಶ್ರೀ||

 3. ಈ ಕಲ್ಬರಹವನ್ನು ಬೆಂಗಳೂರಿನ ಕಬ್ಬನುಪಾರ‍್ಕಿನಲ್ಲಿರುವ ಸರಕಾರಿ ಮ್ಯೂಸಿಯಮ್ಮಿನಲ್ಲಿ ನೋಡಬಹುದು.

  • ಕಲ್ಬರಹದಲ್ಲಿದ್ದಂತೆ ಇಲ್ಲಿ ಅಚ್ಚಿಸಿದ್ದಕ್ಕೆ ನನ್ನಿ. ಇಂತಹ ಕನ್ನಡದ ಕಲ್ಬರಹಗಳ ಮೂಲ ಪ್ರತಿ ಎಲ್ಲಿ ಸಿಗುತ್ತದೆ ಎಂದು ತಿಳಿಸುವಿರಾ ?

 4. ಇದು [email protected] ಯವರು ನನಗೆ ಕಳಿಸಿದ ಮಿನ್ನಂಚೆಯ ಓದು:
  ಲೇಖನ ಓದಿದೆ. ಪ್ರಸಿದ್ಧ. ಆತಕೂರು ನಾಯಿ ಸ್ಮಾರಕ ಶಿಲೆ. ಆ ಶಾಸನದಲ್ಲಿ ಪ್ರಾಸಂಗಿಕವಾಗಿ ಸಾಮ್ರಾಟರಾಗಿದ್ದ ರಾಷ್ಟ್ರಕೂಟರ ಮುಮ್ಮಡಿ ಕ್ರಿಷ್ಣನ ಮಾಂಡಲಿಕ ಹಾಗೂ ಬಂಧುವೂ ಆಗಿದ್ದ ತಲಕಾಡು ಗಂಗರ ಬೂತುಗ ಮತ್ತು ಅವನ ಸಾಮಂತ ಮಣಲರನು (ಕ್ರಿ.ಶ.ಸುಮಾರು ೯೪೩ರಲ್ಲೇ) ಚೋಳರ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿ ಜಯಗಳಿಸಲು ಕಾರಣನಾಗಿದ್ದ. ಸುಮಾರು ಇಪ್ಪತ್ತು ವರ್ಷಗಳ ಕಾಲ ರಾಷ್ಟ್ರಕೂಟರ ಆಡಳಿತ ತೊಂಡೆಮಂಡಲದ ಮೇಲೆ ನಡೆಯಿತು. ಆಗ ಗಂಗ, ನೊಳಂಬ,ಬಾಣರು ರಾಷ್ಟ್ರಕೂಟರ ಮಾಂಡಲಿಕರಾಗಿದ್ದರು. ಕನ್ನಡದಲ್ಲಿ ಸಾಕಷ್ಟು ಲೇಖನಗಳು ಬಂದಿವೆ. ಲೇಖಕರು ಇಂಗ್ಲಿಶ್ ಬರಹಗಳನ್ನು ಗಮನಿಸಿರುವುದರಿಂದ ನಾಮವಾಚಿಗಳು ತಪ್ಪಾಗಿವೆ. ಈ ಬಗ್ಗೆ ಸೀತಾರಾಮಜಾಗಿರದಾರರ ಮತ್ತು ನನ್ನ ಬರಹಗಳನ್ನು ನೋಡಬಹುದು.

  • ಆಂಗ್ಲ ಬರಹಗಳಿಂದ ತರ್ ಜುಮೆ ಮಾಡಿದ್ದರಿಂದ ಹೇಳೆಸರುಗಳು(ವಾಚ್ಯ ನಾಮ) ತಪ್ಪಾಗಿದೆ. ದಯವಿಟ್ಟು ಕಯ್ತಪ್ಪುಗಳನ್ನು ಮನ್ನಿಸಿ . ಈ ಬರಹದ ತಿದ್ದುಪಡಿಯ ಒಕ್ಕಣೆಯನ್ನು ಕಳುಹಿಸಿದ್ದಕ್ಕೆ ಕ್ರಿಸ್ಣಮೂರ್‍ತಿಯವರಿಗೆ ಮತ್ತು ಅದನ್ನು ಗಮನಕ್ಕೆ ತಂದ ನಿಮಗೆ ನನ್ನಿ.

 1. 01/04/2015

  […] ಸೋಲಿಸಿದರು. ಈ ಕಾಳಗದ ಮಾಹಿತಿಯನ್ನು ‘ಅತಕೂರಿನ ಕಲ್ಬರಹದಲ್ಲಿ’ ಕೆತ್ತಿಸಿಸಲಾಗಿದೆ. ಕ್ರಿ.ಶ 963 […]

ಅನಿಸಿಕೆ ಬರೆಯಿರಿ:

%d bloggers like this: