ಅಕ್ಕತಂಗೇರು…

ಸಿ.ಪಿ.ನಾಗರಾಜ

ಮನೆಯಲ್ಲಿ ಮೂರು ವರುಶದ ಪುಟ್ಟ ಹುಡುಗ ರಾಜೇಶನು ಎಲ್ಲರ ಕಣ್ಮಣಿಯಾಗಿದ್ದ . ಹರಳು ಹುರಿದಂತೆ ಮಾತನಾಡುವ ರಾಜೇಶನ ಮಾತುಗಳನ್ನು ಕೇಳುತ್ತಾ…ನಕ್ಕುನಲಿಯುವುದರ ಜತೆಗೆ, ಇಶ್ಟು ಚಿಕ್ಕವಯಸ್ಸಿನಲ್ಲೇ ಮುದ್ದುಮುದ್ದಾಗಿ ಮಾತನಾಡುವುದರ ಬಗ್ಗೆ ಮನೆಯವರೆಲ್ಲರೂ ತುಂಬಾ ಹೆಮ್ಮೆಪಡುತ್ತಿದ್ದರು.
ಒಂದು ದಿನ ರಾಜೇಶನ ತಾಯಿಯನ್ನು ನೋಡಲೆಂದು ಇಬ್ಬರು ಹೆಂಗಸರು ಬಂದರು. ಸುಮಾರು ಇಪ್ಪತ್ತಯ್ದು-ಮೂವತ್ತರ ವಯೋಮಾನದ ಈ ಅಕ್ಕತಂಗಿಯರು…ರೂಪದಲ್ಲಿ ಒಬ್ಬರನ್ನೊಬ್ಬರು ಬಹಳವಾಗಿ ಹೋಲುತ್ತಿದ್ದರು. ರಾಜೇಶನ ತಾಯಿಯು ಮೊನ್ನೆ ದೇಗುಲಕ್ಕೆ ಹೋಗಿದ್ದಾಗ ಹೊಸದಾಗಿ ಪರಿಚಯವಾಗಿದ್ದ ಇವರು, ಇದೇ ಮೊದಲಬಾರಿಗೆ ರಾಜೇಶನ ಮನೆಗೆ ಬಂದಿದ್ದರು.
ಮನೆಗೆ ಬಂದ ಅಕ್ಕತಂಗಿಯರನ್ನು ನಗೆಮೊಗದಿಂದ ಬರಮಾಡಿಕೊಂಡ ರಾಜೇಶನ ತಾಯಿಯು ಅವರಿಗೆ ತಿಂಡಿಕಾಪಿಯನ್ನು ನೀಡಿ, ಮಾತನಾಡುತ್ತ ಕುಳಿತಿದ್ದಾಗ, ಹೊರಗಡೆ ಆಟವಾಡಿಕೊಂಡು ಮನೆಗೆ ಬಂದ ರಾಜೇಶನು ತನ್ನ ತಾಯಿಯ ಜತೆಯಲ್ಲಿದ್ದವರನ್ನು ಕಂಡು ಕುತೂಹಲದಿಂದ –

“ಅಮ್ಮ…ಅಮ್ಮ…ಇವರ‍್ಯಾರಮ್ಮ?” ಎಂದು ಕೇಳಿದ .

“ನಿಮ್ಮ ಅತ್ತೆದೀರು ಕಣಪ್ಪ”

“ಇಬ್ಬರು ಒಂದೇ ತರ ಅವ್ರೆ!”

“ಅಕ್ಕತಂಗೇರು ಕಣಪ್ಪ”

“ಹಂಗಾದ್ರೆ…ಅಕ್ಕತಂಗೇರು…ಕತ್ತೆಮುಂಡೇರು”

ರಾಜೇಶನ ಮಾತುಗಳನ್ನು ಕೇಳುತಿದ್ದಂತೆಯೇ , ಬಂದ ಹೆಂಗಸರಿಬ್ಬರು ತುಂಬಾ ನೊಂದುಕೊಂಡರು. ತಾಯಿಯು ಮಗನ ಕೆನ್ನೆಗೆ ಚಟೀರ್ ಎಂದು ಒಂದು ಬಾರಿಸಿ-

“ಎಲ್ಲೋ ಕಲಿತ ಇಂತಾ ಕೆಟ್ಟ ಮಾತುಗಳನ್ನ?” ಎಂದು ಅಬ್ಬರಿಸಿದರು.

ಪೆಟ್ಟನ್ನು ತಿಂದ ರಾಜೇಶನು-
“ಅಜ್ಜಿ ಅವತ್ತು ನಿಮ್ಜೊತೇನೆ ಹೇಳ್ತಿರಲಿಲ್ವ…ಅಕ್ಕತಂಗೇರು…ಕತ್ತೆಮುಂಡೇರು ಅಂತ” ಎಂದು ಹೇಳುತ್ತಾ ಅಳತೊಡಗಿದ.

ನಡೆದಿದ್ದ ಪ್ರಸಂಗವೇನೆಂದರೆ … ಮೊನ್ನೆ ಹಳ್ಳಿಯಿಂದ ಬಂದಿದ್ದ ರಾಜೇಶನ ಅಜ್ಜಿಯು…ಮಗಳೊಡನೆ ತಮ್ಮ ಊರಿನ ಮನೆಯೊಂದರ ಆಗುಹೋಗುಗಳನ್ನು ಕುರಿತು ಮಾತನಾಡುತ್ತಾ … ಆ ಮನೆಗೆ ಸೊಸೆಯರಾಗಿ ಬಂದಿದ್ದ ಅಕ್ಕತಂಗಿಯರು…ಈಗ ಒಬ್ಬರಿಗೊಬ್ಬರು ಗುದ್ದಾಡಿಕೊಂಡು, ಮನೆತನ ಹಾಳಾಗುತ್ತಿರುವುದಕ್ಕೆ ಕಾರಣವಾಗಿರುವ ನಡವಳಿಕೆಯನ್ನು ವಿವರವಾಗಿ ಹೇಳುತ್ತ “ಅಕ್ಕತಂಗೇರು … ಕತ್ತೆಮುಂಡೇರು” ಎಂದು ಅವರ ಊರಿನ ಹೆಂಗಸರನ್ನು ಬಯ್ದಿದ್ದರು. ಅಲ್ಲೇ ಆಟವಾಡುತ್ತಿದ್ದು ಇದನ್ನು ಕೇಳಿಸಿಕೊಂಡಿದ್ದ ರಾಜೇಶನು, ಇಂದು ಆ ಪದಗಳನ್ನು ಮತ್ತೆ ಈ ಸನ್ನಿವೇಶದಲ್ಲಿ ಆಡಿದ್ದನು .

ತಟ್ಟನೆ ಇದನ್ನು ನೆನಪಿಸಿಕೊಂಡ ರಾಜೇಶನ ತಾಯಿಯು, ತನ್ನ ಮಗನ ಬಾಯಲ್ಲಿ ಬಂದಿದ್ದ ಕೆಟ್ಟ ಪದಗಳಿಗೆ ಕಾರಣವಾಗಿದ್ದ ಪ್ರಸಂಗವನ್ನು ಆ ಹೆಂಗಸರಿಗೆ ತಿಳಿಸಿದರು . ಹಿರಿಯರಾಡಿದ್ದ ಬಯ್ಗುಳದ ಪದಗಳ ತಿರುಳು ಗೊತ್ತಿಲ್ಲದೆ ಮಾತನಾಡಿದ್ದ ಹುಡುಗನ ತಿಳಿಮನದ ನೆಲೆಯನ್ನು ಗ್ರಹಿಸಿಕೊಂಡ ಅಕ್ಕತಂಗಿಯರು ಈಗ ಮುಗುಳ್ನಗುತ್ತಾ ಮೊದಲಿನಂತಾದರು.

ಇನ್ನೂ ಅಳುತ್ತಲೇ ಇದ್ದ ರಾಜೇಶನ ಗಲ್ಲವನ್ನು ತಂಗಿಯು ಮೆಲ್ಲನೆ ಹಿಂಡಿ ಮುದ್ದಿಸಿ ಸಂತಯ್ಸುತ್ತಿದ್ದರೆ , ಅಕ್ಕನು ರಾಜೇಶನ ತಾಯಿಯನ್ನು ಕುರಿತು-
” ಇದಕ್ಕೆ ನೋಡಿ…ಮಕ್ಕಳ ಮುಂದೆ ದೊಡ್ಡವರು ಮಾತನಾಡುವಾಗ ಒಳ್ಳೆಯ ಮಾತುಗಳನ್ನೇ ಆಡ್ಬೇಕು ಅನ್ನೋದು ” ಎನ್ನುತ್ತಾ , ರಾಜೇಶನು ತಲೆಯನ್ನು ನೇವರಿಸಿದರು.



Categories: ನಲ್ಬರಹ

ಟ್ಯಾಗ್ ಗಳು:, , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s