ಮೊದಲು ನೆಲೆ, ಆಮೇಲೆ ಎಡ-ಬಲ

ಕಿರಣ್ ಬಾಟ್ನಿ.

pvec5augNews04 SLB-02

ಯಾವುದಾದರೂ ಒಂದು ನೆಲೆಯಲ್ಲಿ ನಿಂತಾಗ ಅಲ್ಲಿಂದ ಎಡ ಯಾವುದು, ಬಲ ಯಾವುದು, ಹಿಂದಾವುದು ಮುಂದಾವುದು ಎಂದೆಲ್ಲ ಹೇಳಲು ಬರುತ್ತದೆ. ಆದರೆ ಆ ನೆಲೆ ಯಾವುದೆಂದು ಸ್ಪಶ್ಟವಾಗಿ ಗೊತ್ತಿಲ್ಲದೆ ಹೋದರೆ? ಒಬ್ಬರು ಒಂದು ನೆಲೆಯಿಂದ ಈ ಪದಗಳನ್ನು ಬಳಸುತ್ತಿದ್ದು, ಆ ನೆಲೆ ನಿಮ್ಮದಾಗದೆ ಹೋದರೆ?

ಈಗ ನೋಡಿ, ಇವತ್ತಿನ ಪ್ರಜಾವಾಣಿಯಲ್ಲಿ ಎಸ್. ಎಲ್. ಬೈರಪ್ಪನವರು ಎಡಪಂತದವರು ಅದು ಮಾಡಿದರು, ಇದು ಮಾಡಿದರು, ಆದ್ದರಿಂದ ಎಲ್ಲ ಹಾಳಾಗಿಹೋಯಿತು ಎಂದೆಲ್ಲ ಸಾಕಶ್ಟು ಬರೆದಿದ್ದಾರೆ. ಆದರೆ ಎಲ್ಲಿಂದ ಎಡಕ್ಕಿದ್ದರು ಅವರು? ಅವರು ಎಡಕ್ಕಿದ್ದರೆ ನೀವು ಎಲ್ಲಿದ್ದೀರಿ? ಇವು ಕೇಳಬೇಕಾದ ಪ್ರಶ್ನೆಗಳು ತಾನೇ? ಅವರಿಗಿಂತ ನೀವು ಬಲಕ್ಕಿದ್ದಿರಬೇಕು ಎಂಬುದಂತೂ ನಿಜ. ಇರಲಿ. ಆದರೆ ಬಲಪಂತದ ವಾದವನ್ನೂ ಅವರೇನು ಮುಂದಿಡುತ್ತಿಲ್ಲವೆನ್ನುತ್ತಾರೆ. ಯಾವ ಸಿದ್ದಾಂತವೂ ಬೇಡ, ಲಾಲಬಹದ್ದೂರಶಾಸ್ತ್ರಿಯವರ ಮೌಲ್ಯವೊಂದೇ ಸಾಕು ಎಂಬುದು ಅವರ ವಾದ. ಅದ್ಯಾವ ಮೌಲ್ಯವೋ – ನನಗಂತೂ ಗೊತ್ತಿಲ್ಲ, ಗೊತ್ತುಪಡಿಸಿಕೊಳ್ಳುವುದಕ್ಕೂ ಕಾರಣ ಕಾಣುತ್ತಿಲ್ಲ.

ಅದೇನೇ ಇರಲಿ, ಸಿದ್ದಾಂತವೇ ಬೇಡ ಎನ್ನುವ ತಲೆಬರಹದಡಿಯಲ್ಲಿ ಒಂದು ಸಿದ್ದಾಂತವನ್ನಂತೂ ಅವರು ಮುಂದಿಟ್ಟಿರುವುದು ನಿಜ: ಬಂಡವಾಳಶಾಹಿಗಳು ಬೇಕೇ ಬೇಕು, ಆದರೆ ಅವರ ಮೇಲೆ ತಕ್ಕಮಟ್ಟಿಗೆ ತೆರಿಗೆ ಹೇರಬೇಕು ಎಂದು. ನನಗೆ ಗೊತ್ತಿಲ್ಲದ ’ಲಾಲಬಹದ್ದೂರಶಾಸ್ತ್ರಿಯವರ ಮೌಲ್ಯ’ಕ್ಕೂ ಇದಕ್ಕೂ ನಂಟು ಏನೆಂದು ಹೇಳಲಾರೆ, ಆದರೆ ಇದನ್ನೂ ಒಂದು ಸಿದ್ದಾಂತವೆಂದು ಕರೆಯುವುದರಲ್ಲಿ ತಪ್ಪೇನಿಲ್ಲವೆನಿಸುತ್ತದೆ. ಇದು ಸರಿಯೋ ತಪ್ಪೋ ಎಂಬ ಪ್ರಶ್ನೆಯನ್ನು ನಾನು ಈಗಲೇ ಉತ್ತರಿಸಲು ಹೋಗುವುದಿಲ್ಲ, ಏಕೆಂದರೆ ಇದನ್ನು ಮಂಡಿಸಿದವರು ಯಾವ ನೆಲೆಯಲ್ಲಿ ನಿಂತಿದ್ದರು ಎಂದು ಮೊದಲು ತಿಳಿಯಬೇಕು. ಇಲ್ಲದಿದ್ದರೆ ಎಡವೇ ಸರಿ, ಬಲವೇ ಸರಿ, ಅದೇ ಸರಿ, ಇದೇ ಸರಿಯೆಂಬ ಯಾವ ಸೊಲ್ಲುಗಳಿಗೂ ಹುರುಳಿಲ್ಲ.

ಬೈರಪ್ಪನವರ ವಾದದ ನೆಲೆ ಯಾವುದೆಂದು ತಿಳಿದುಕೊಳ್ಳುವುದು ಬಹಳ ಸುಲಬ. ಅವರ ಇಡೀ ವಾದದಲ್ಲಿ ಕನ್ನಡ, ಕನ್ನಡಿಗ, ಇಲ್ಲವೇ ಕರ‍್ನಾಟಕ – ಈ ಯಾವ ಪದಗಳೂ ಒಮ್ಮೆಯೂ ಕಾಣಿಸಿಕೊಳ್ಳುವುದಿಲ್ಲ. ಅವರ ಹೆಸರು ಬಿಟ್ಟರೆ ಇನ್ನಾವ ಕನ್ನಡಿಗನ ಹೆಸರೂ ಕಾಣಿಸುವುದಿಲ್ಲ, ಯಾವ ಕನ್ನಡಿಗನ ಮೌಲ್ಯವೂ ಕಾಣಿಸುವುದಿಲ್ಲ. ಹಾಗಾದರೆ ಇವರ ನೆಲೆ ಕನ್ನಡ-ಕನ್ನಡಿಗ-ಕರ‍್ನಾಟಕಗಳಿಗೆ ವಿಶೇಶವಾಗಿ ಸಂಬಂದಿಸಿದ ನೆಲೆಯಂತೂ ಅಲ್ಲವೆಂದಾಯಿತು. ಇನ್ನಾವ ನೆಲೆ ಇವರದು? ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ, ಅದು ಬಾರತವೇ. ಇಡೀ ಬಾರತವೇ ಅವರ ನೆಲೆ. ಆ ನೆಲೆಯಿಂದಲೇ ಅವರು ತಮ್ಮ ಸಿದ್ದಾಂತವನ್ನು ಮಂಡಿಸಿಸುತ್ತ ಬಂದಿರುವುದು, ಇಂದೂ ಮಂಡಿಸಿರುವುದು. ಅದನ್ನು ಕನ್ನಡದಲ್ಲಿ ಮಾಡುತ್ತಿದ್ದಾರೆ, ಅಶ್ಟೆ.

ಈಗ ನಾವು ಕೇಳಬೇಕಾಗಿರುವ ಪ್ರಶ್ನೆ: ಆ ನೆಲೆಯನ್ನೇ ನಮ್ಮದು ಮಾಡಿಕೊಳ್ಳಲು ನಾವು ತಯಾರಾಗಿದ್ದೇವಾ? ಬೈರಪ್ಪನವರ ಮಾತು ಬಾರತಕ್ಕೆ ಒಳ್ಳೆಯದೆಂದೇ ಒಪ್ಪಿಬಿಡೋಣ. ಹಾಗೆಂದ ಮಾತ್ರಕ್ಕೆ ಕನ್ನಡ-ಕನ್ನಡಿಗ-ಕರ‍್ನಾಟಕಗಳ ನೆಲೆಯಲ್ಲಿ ನೀವೇನಾದರೂ ನಿಂತು ನೋಡುವುದಾದರೆ ನಿಮಗೂ ಅದು ಒಳ್ಳೆಯದೇ ಎಂದು ಕಡಾಕಂಡಿತವಾಗಿ ಹೇಳಲು ಬರುತ್ತದೆಯೇ? ಬಾರತಕ್ಕೆ ಒಳ್ಳೆಯದು ಎಂದು ಯಾರು ಏನೇ ಹೇಳಿದರೂ ಆದು ಕನ್ನಡಿಗರಿಗೆಲ್ಲ ಒಳ್ಳೆಯದೇ ಏನು? ಹಾಗೇನಿಲ್ಲ. ನೂರಕ್ಕೆ ಐದು ಮಂದಿ ಮಾತ್ರ ಕನ್ನಡಿಗರಿರುವ ಬಾರತದಲ್ಲಿ ಸರಾಸರಿ ಒಳಿತೆಂದು ಯಾವುದನ್ನು ಕರೆಯಬಹುದೋ ಅದರಲ್ಲಿ ಕನ್ನಡಿಗರ ಕೆಡುಕೇ ತುಂಬಿಕೊಂಡಿರಲು ಸಾದ್ಯ.

ಆದ್ದರಿಂದ ಬಂಡವಾಳಶಾಹಿಗಳು ಬೇಕೋ ಬೇಡವೋ ಎಂಬ ಪ್ರಶ್ನೆ ಆಮೇಲೆ, ಮೊದಲು ಅವರು ಕನ್ನಡದ ಬಂಡವಾಳಶಾಹಿಗಳಾಗಿದ್ದಾರೆಯೇ ಎಂದು ನಾವು ಕೇಳಿಕೊಳ್ಳಬೇಕು – ಕನ್ನಡ-ಕನ್ನಡಿಗ-ಕರ‍್ನಾಟಕಗಳ ನೆಲೆಯಲ್ಲಿ ನಿಲ್ಲುವುದಾದರೆ. ಬೈರಪ್ಪನವರೇನು ಅವರು ಕನ್ನಡಿಗರಾಗಿರಬಾರದು ಎಂದಿಲ್ಲ, ನಿಜ, ಆದರೆ ಅದೇ ದೊಡ್ಡ ತೊಂದರೆ: ಅವರು ಕನ್ನಡಿಗರಾಗಿರಲೇ ಬೇಕು, ಇಲ್ಲದಿದ್ದರೆ ಕನ್ನಡ-ಕನ್ನಡಿಗ-ಕರ‍್ನಾಟಕಗಳ ನೆಲೆಯಲ್ಲಿ ನಿಂತು ನೋಡುವವರಿಗೆ ಅವರಿಂದ ಕೆಡುಕೇ. ಕನ್ನಡಿಗರ ಸಂಪತ್ತನ್ನು ಇಂದಿರಾಗಾಂದಿ ಹೀರುವ ಬದಲು ಅಂಬಾನಿಯೋ ಅಡಾನಿಯೋ ಹೀರಿದರೆ ಅದೇನು ಕನ್ನಡಿಗರು ಒಟ್ಟಾಗಿ ತಮ್ಮ ಏಳಿಗೆಗಾಗಿ ಇಟ್ಟ ದಿಟ್ಟ ಹೆಜ್ಜೆಯೇ? ಆದ್ದರಿಂದ ಈ ಎಡ-ಬಲಗಳ ಜಂಜಾಟದಲ್ಲಿ ಕನ್ನಡಿಗರು ತಮ್ಮ ಸಮಯವನ್ನು ಹಾಳುಮಾಡಿಕೊಳ್ಳದೆ ಮೊದಲು ಕನ್ನಡ-ಕನ್ನಡಿಗ-ಕರ‍್ನಾಟಕಗಳ ನೆಲೆಯಿಂದ ಜಗತ್ತನ್ನು ನೋಡುವುದನ್ನು ಕಲಿಯಬೇಕು. ಆಗ ಕಾಣಿಸುತ್ತದೆ: ಯಾವ ಬಂಡವಾಳಶಾಹಿಗಳ ಪರವಾಗಿ ಬೈರಪ್ಪನವರು ಮಾತನಾಡುತ್ತಿರುವರೋ ಅವರೆಲ್ಲ ಕನ್ನಡೇತರರೇ, ಅವರಿಂದ ಕೊನೆಗೆ ನಮ್ಮ ಕೈಗೆ ಚಿಪ್ಪೇ. ಹಾಂ, ಅವರುಗಳ ಮೇಲೆ ತೆರಿಗೆ ಹೇರಿದರೂ ಆ ತೆರಿಗೆ ಹೋಗುವುದೂ ಕೇಂದ್ರ ಸರ‍್ಕಾರಕ್ಕೆ: ಅದರಲ್ಲಿ ಕನ್ನಡಿಗರ ಮಾತು ಎಂದಿಗೂ ನಡೆದಿಲ್ಲ, ನಡೆಯುವಂತೆಯೂ ಕಾಣುತ್ತಿಲ್ಲ.

(ಚಿತ್ರ: ಪ್ರಜಾವಾಣಿ)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.