ಕನ್ನಡ ಕಲಿಯಲು ಸಂಸ್ಕ್ರುತ ಬೇಕಿಲ್ಲ
ಶ್ರೀ ಎಸ್ ಎಲ್ ಬಯ್ರಪ್ಪನವರು ಶ್ರೀ ಶ್ರೀನಿವಾಸ ತೋಪಕಾನೆ ಅವರ ಎರಡನೇ ಪುಣ್ಯಸ್ಮರಣೆಯ ಕಾರ್‍ಯಕ್ರಮದಲ್ಲಿ
“ರಾಜ್ಯದಲ್ಲಿ ವಿದ್ಯಾರ್‍ತಿಗಳು ಸಂಸ್ಕ್ರುತವನ್ನು ಕೇವಲ ನಿರ್‍ಲಕ್ಶ ಮಾಡುತ್ತಿಲ್ಲ, ಅದನ್ನು ಸಂಪೂರ್‍ಣವಾಗಿ ತಿರಸ್ಕರಿಸಬೇಕು ಎನ್ನುವ ಮನಸ್ತಿತಿ ಹೊಂದಿದ್ದಾರೆ. ಕನ್ನಡ ಉಪನ್ಯಾಸಕರದೂ ಇದೇ ಮನೋಬಾವ.ಇದರಿಂದಾಗಿ ಹಲವು ಉಪನ್ಯಾಸಕರಿಗೂ ಶುದ್ದ ಕನ್ನಡ ಬರೆಯಲು ಬರುತ್ತಿಲ್ಲ. ಸಂಸ್ಕ್ರುತದ ಪ್ರಾತಮಿಕ ತಿಳುವಳಿಕೆ ಅಗತ್ಯ.ಅದಿಲ್ಲದೇ ಕನ್ನಡವನ್ನು ಸರಿಯಾಗಿ ಕಲಿಯಲು ಸಾದ್ಯವಿಲ್ಲ. ಈ ಹಿಂದೆ ಕನ್ನಡ ಜೊತೆ ಸಂಸ್ಕ್ರುತವನ್ನೂ ಕಲಿಸಲಾಗುತ್ತಿತ್ತು. ಹೀಗಾಗಿ ಆಗಿನವರ ಕನ್ನಡ ಸತ್ವಯುತವಾಗಿತ್ತು. ಕನ್ನಡದ ವ್ಯಾಕರಣ ಶೇ 75 ಸಂಸ್ಕ್ರುತವೇ ಆಗಿದೆ. ಕನ್ನಡ ಗಟ್ಟಿಯಾಗಲು ಸಂಸ್ಕ್ರುತ ಬೇಕು”
ಎಂಬುದಾಗಿ ಹೇಳಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಕನ್ನಡವು ಸಂಸ್ಕ್ರುತದ ಬಲದಿಂದಲೇ ನಿಂತಿದೆ,ಉಳಿದಿದೆ,ಉಳಿಯುತ್ತದೆ ಎನ್ನುವಂತ ತಪ್ಪು ಅರ್‍ತ ಕೊಡುವ ಹೇಳಿಕೆಗಳನ್ನು ಕನ್ನಡಿಗರು ಒಪ್ಪದೇ, ಆ ಬಗ್ಗೆ ವಿರೋದಗಳು ಕೇಳಿ ಬರುತ್ತಿದ್ದಾಗ, ಶ್ರೀ ಬಯ್ರಪ್ಪನವರ ಹೇಳಿಕೆಗಳನ್ನು ಸಮರ್‍ತಿಸಿ “ಕನ್ನಡವಾದಿಗಳಿಗೆ ಸಂಸ್ಕ್ರುತವೇಕೆ ಬೇಡ” ಎಂದು ರಾಗವೇಂದ್ರ ಬಟ್ ಎಂಬ ಹೆಸರಿನ ಓದುಗರೊಬ್ಬರು ಉದಯವಾಣಿಯಲ್ಲಿ ಓಲೆಯನ್ನೂ ಬರೆದಿದ್ದರು. “ಕನ್ನಡ ಕಲಿಯಲು ಸಂಸ್ಕ್ರುತದ ಕಲಿಕೆ ಇರಲಿ” ಎಂಬುದರ ಪರವಾಗಿರುವ ಆ ಓಲೆಯಲ್ಲಿ – ಕನ್ನಡದ ಮೇಲೆ ಸಂಸ್ಕ್ರುತದ ಪ್ರಬಾವ, ಸಂಸ್ಕ್ರುತ ವ್ಯಾಕರಣ, ಕನ್ನಡ ಕವಿಗಳ ಸಾಹಿತ್ಯದಲ್ಲಿ ಸಂಸ್ಕ್ರುತ ಪದಗಳು ಹೀಗೆ ಹಲವಾರು ವಿಚಾರಗಳ ಬಗ್ಗೆ ಅವರು ತಮ್ಮ ಅನಿಸಿಕೆಯನ್ನು ತಿಳಿಸಿದ್ದರು. ಆ ಕುರಿತು ಕೆಲವು ಅನಿಸಿಕೆಗಳನ್ನು ಈ ಬರಹದಲ್ಲಿ ಮೂಡಿಸುತ್ತಿದ್ದೇನೆ.
ಮೊದಲನೆಯದಾಗಿ, “ಸಂಸ್ಕ್ರುತ ಬೇಡವೇ ಬೇಡ” ಅತವಾ “ಸಂಸ್ಕ್ರುತ ಕಲಿಯುವುದು ಬೇಡ” ಎಂದು ಯಾರೂ ಹೇಳುತ್ತಿಲ್ಲ. ಆಸಕ್ತರು ತಮಗೆ ಬೇಕಾದ ನುಡಿಯನ್ನು ಕಲಿಯುವ ಅವಕಾಶ ಇರಬೇಕು. “ಕನ್ನಡ ಕಲಿಯುವುದಕ್ಕೆ ಸಂಸ್ಕ್ರುತದ ಅಗತ್ಯ ಇಲ್ಲ” ಎನ್ನುವುದಶ್ಟೇ ವಾದವಾಗಿದೆ. ಈ ಹೇಳಿಕೆಯ ತಿರುಳು ಅರ್‍ತವಾಗುತ್ತದೆ ಎಂದು ಅಂದುಕೊಳ್ಳುತ್ತೇನೆ. ಆ ಓದುಗರ ಓಲೆಯಲ್ಲಿ ಅವರೇ ತಿಳಿಸಿರುವ ಹಾಗೇ ಮತ್ತು ಬಾಶಾವಿಜ್ನಾನವೂ ಹೇಳುವ ಹಾಗೆ, ಸಂಸ್ಕ್ರುತವು ಇಂಡೋ-ಯುರೋಪಿಯನ್ ನುಡಿಕುಟುಂಬಕ್ಕೂ ಮತ್ತು ಕನ್ನಡವೂ ದ್ರಾವಿಡ ನುಡಿ ಕುಟುಂಬಕ್ಕೂ ಸೇರಿವೆ. ಮೂಲದಲ್ಲೇ ಈ ಎರಡೂ ನುಡಿಗಳು ಬೇರೆ ಬೇರೆ ಎಂಬುದೇ ಅದರ ಅರ್‍ತ. ನುಡಿಗಳ ನಡುವೆ ಕೊಡು-ಕೊಳ್ಳುವಿಕೆ ನಡೆಯುವುದು, ನುಡಿಯ ಮೇಲೆ ಮತ್ತೊಂದು ನುಡಿಯ ಪ್ರಬಾವ ಇರುವುದು ನುಡಿ ಬೆಳವಣಿಗೆಯಲ್ಲಿ ಸಹಜ ಮತ್ತು ಸ್ವಾಬಾವಿಕ. ಕನ್ನಡೇತರ ನುಡಿಗಳಿಂದ ಕನ್ನಡಕ್ಕೆ ಪದಗಳು ಬಂದಿವೆ. ಆದರೆ ಅದನ್ನೇ ಮುಂದಿಟ್ಟುಕೊಂಡು, ಕನ್ನಡ ಸರಿಯಾಗಿ ಕಲಿಯಲು ಕನ್ನಡಕ್ಕೆ ಪದಗಳನ್ನು ನೀಡಿರುವ ಕನ್ನಡೇತರ ನುಡಿಗಳನ್ನೂ ಕಲಿಯಬೇಕು ಎನ್ನುವುದು ತಪ್ಪು. ಇವತ್ತು ಜಾಗತೀಕರಣದ ಕಾರಣದಿಂದಾನೋ ಏನೋ ಕನ್ನಡದಲ್ಲಿ ಇಂಗ್ಲೀಶ್ ಪದಗಳು ನುಸುಳಿ, ಅವು ಕನ್ನಡದ್ದೇ ಆಗಿವೆ ( ಬಸ್ಸು, ಟ್ರೇನು, ಕಾರು ಹೀಗೆ ). ಈಗಿನಿಂದ ಇನ್ನು ನೂರು ವರ್‍ಶ ಕನ್ನಡದ ಮೇಲೆ ಇಂಗ್ಲೀಶ್ ಪ್ರಬಾವವಿದ್ದು, ಆನಂತರ ಕನ್ನಡವನ್ನು ಕಲಿಯಲು ಇಂಗ್ಲೀಶ್ ಚೆನ್ನಾಗಿ ತಿಳಿಯಬೇಕು ಎಂದು ಹೇಳಿದರೆ ಅದು ಒಪ್ಪುವಂತ ಮಾತಾಗುವುದಿಲ್ಲ. ಎಲ್ಲ ನುಡಿಗಳು ಒಂದೇ ಆಗಿರುವಾಗ, “ಸಂಸ್ಕ್ರುತ ಕಲಿ(ಕಲೆ)ತರೆ ಮಾತ್ರ ಕನ್ನಡ ಶುದ್ದವಾಗುತ್ತದೆ ಮತ್ತು ಸತ್ವಯುತವಾಗುತ್ತದೆ” ಎಂಬಂತ ಮಾತುಗಳು ‘ಸಂಸ್ಕ್ರುತ ಮೇಲು, ಕನ್ನಡ ಕೀಳು’ ಎಂದು ಹೇಳಿದಂತಿದೆ. ಅಶ್ಟಕ್ಕೂ ಕನ್ನಡವು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಇನ್ನೂ ಚಾಲ್ತಿಯಲ್ಲಿರುವುದು, ಕನ್ನಡದ ಸತ್ವ ಮತ್ತು ಗಟ್ಟಿತನವನ್ನು ತೋರುತ್ತದೆ ಎಂದರೆ ತಪ್ಪಾಗಲಾರದು.
ಸಂಸ್ಕ್ರುತದ ಪರವಾಗಿರುವವರು ವ್ಯಾಕರಣದ ಆಯಾಮ ತಂದು, “ಹಳೆಗನ್ನಡದ ಮೇಲೆ ಸಂಸ್ಕ್ರುತದ ಪ್ರಬಾವ ಹೆಚ್ಚೇ ಇತ್ತು. ಕೇಶಿರಾಜನಂತನವರೂ ಕೂಡ ಸಂಸ್ಕ್ರುತ ಹೊರಗಿಡುವ ಸಾಹಸ ಮಾಡಲಿಲ್ಲ, ಕನ್ನಡ ವ್ಯಾಕರಣ ಸಂಸ್ಕ್ರುತ ವ್ಯಾಕರಣದ ಸ್ವೀಕ್ರುತವಶ್ಟೇ, ಕನ್ನಡದಲ್ಲಿ ಬಹುಪಾಲು ಪದಗಳು ಸಂಸ್ಕ್ರುತದದ್ದೇ ಆಗಿವೆ” ಎಂದೂ ಹೇಳುತ್ತಾರೆ. ಹಿಂದಿನ ವ್ಯಾಕರಣಿಗಳ ಮೇಲೆ ಸಂಸ್ಕ್ರುತದ ಪ್ರಬಾವ ಇದ್ದದ್ದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಆದರೆ ಆಂಡಯ್ಯ, ಮಹಾಲಿಂಗರಂಗ, ನಯಸೇನ ಇವರುಗಳು ಕನ್ನಡದ ಬರವಣಿಗೆಗಳಲ್ಲಿ ಸಂಸ್ಕ್ರುತದ ಪದಗಳ ಬಳಕೆ ತುಂಬಾ ಇದ್ದುದನ್ನು ವಿರೋದಿಸಿದ್ದರು.
“ಇಶ್ಟೊಂದು ಸಂಸ್ಕ್ರುತದ ಪದಗಳೇ ಇರುವಾಗ, ಅವನ್ನು ಕನ್ನಡದ ಪದ್ಯವೆಂದೇಕೆ ಕರೆಯುವಿರಿ? ಸಂಸ್ಕ್ರುತದ ಪದ್ಯವೆಂದೇ ಕರೆಯಿರಿ”
ಎಂದೂ ನಯಸೇನರು ಮಾತನಾಡಿದ್ದಿದೆ. ಆಂಡಯ್ಯನವರ ಕಬ್ಬಿಗರ ಕಾವದಲ್ಲಿ ಕನ್ನಡದ ಸೊಗಡನ್ನು ಕಾಪಾಡಿಕೊಂಡು ಸಂಸ್ಕ್ರುತ ಪದಗಳ ತದ್ಬವ ಪದಗಳನ್ನು ಮಾತ್ರ ಬಳಸಲಾಗಿದೆ. ಸಂಸ್ಕ್ರುತವನ್ನು ಹೊರಗಿಡುವುದು ಸಾಹಸ ಎಂದಂದು ಕೊಂಡರೆ ಆಂಡಯ್ಯನವರು ಈ ಹಿಂದೆಯೇ ಮಾಡಿದ್ದಾರೆ ಎಂದು ಹೇಳಬಹುದು. ಆದರೆ ಸಂಸ್ಕ್ರುತವನ್ನು ಕನ್ನಡದಿಂದ ಬೇರೆ ಮಾಡುವುದು “ಸಾಹಸ” ಯಾಕೆ ಆಗುತ್ತದೆ ಎಂಬುದೇ ಒಂದು ಪ್ರಶ್ನೆ ಆಗಿದೆ. “ಕನ್ನಡದಲ್ಲಿ ಬಹುಪಾಲು ಪದಗಳು ಸಂಸ್ಕ್ರುತದ್ದು ಎನ್ನುವ ಅನಿಸಿಕೆ ತಪ್ಪು” ಎಂಬುದನ್ನು ತಿಳಿಯಲು ಜನಪದ ಸಾಹಿತ್ಯ, ಆಡುಗನ್ನಡವನ್ನು ನೋಡಿದರೆ ಸಾಕು.
ಹಿಂದಿನ ಕಾಲದಲ್ಲಿ, ಎಲ್ಲಾ ಜನರೂ ಬರಹದಲ್ಲಿ ತೊಡಗಿಸಿಕೊಂಡಿರಲಿಲ್ಲ. “ಕನ್ನಡ ವ್ಯಾಕರಣ” ಎಂದು ಬರೆದವರಿಗೆ ಕನ್ನಡ ಮತ್ತು ಸಂಸ್ಕ್ರುತ ಎರಡೂ ನುಡಿ ಗೊತ್ತಿದ್ದ ಕಾರಣ, ಸಂಸ್ಕ್ರುತದ ಕಟ್ಟಳೆಗಳನ್ನೇ ಕನ್ನಡಕ್ಕೆ ತಂದು ಅದನ್ನು ಕನ್ನಡದ ವ್ಯಾಕರಣ ಎಂದು ಬಗೆದಿದ್ದರು. ಇದರ ಅರ್‍ತ “ಕನ್ನಡಕ್ಕೆ ತನ್ನದೇ ಆದ ವ್ಯಾಕರಣವಿಲ್ಲ, ವ್ಯಾಕರಣವಿರಬಾರದು ಅಂತ ಅಲ್ಲ” ಅನ್ನುವುದು ಸ್ಪಶ್ಟ. ವ್ಯಾಕರಣವನ್ನು ಬಾಶೆಗಳ ರಚನೆ, ವಾಕ್ಯ ರಚನೆ,ಶಬ್ದವಿನ್ಯಾಸ, ಪದವಿನ್ಯಾಸ, ಪದಗಳ ಜೋಡಣೆ, ಅರ್‍ತ ಮತ್ತು ಅವುಗಳು ಬಳಕೆಯಾಗುವ ರೀತಿ, ಇತ್ಯಾದಿಗಳನ್ನು ಗಮನಿಸಿಯೇ ರಚಿಸಬೇಕಾಗುತ್ತದೆ. ಅಂದರೆ ನುಡಿ ಹೇಗೆ ವರ್‍ತಿಸುತ್ತದೆ, ಹೇಗೆ ಬಳಕೆಯಾಗುತ್ತದೆ ಎಂಬುದನ್ನು ವಿವರವಾಗಿ ಪರೀಕ್ಶಿಸಿ ತಿಳಿಸುವ ಕೆಲಸ ವ್ಯಾಕರಣದ್ದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕ್ರುತವನ್ನು ಹೋಲಿಸಿ ನೋಡಿದಾಗ ಎರಡೂ ನುಡಿಗಳೂ ಬೇರೆ ಬೇರೆಯಾಗಿ ನಿಲ್ಲುತ್ತವೆ. ಕಾರಣ, ಸಂಸ್ಕ್ರುತದ ನಿಯಮಗಳು ಮತ್ತು ಎಲ್ಲ ದ್ರಾವಿಡ ನುಡಿಗಳ ವ್ಯಾಕರಣ ನಿಯಮಗಳು ತುಂಬಾ ಬೇರೆಯಾಗಿವೆ. ಈ ಬಗ್ಗೆ ಸಾಕಶ್ಟು ಸಂಶೋದನೆ ನಡೆಸಿ, ಬಾಶಾವಿಜ್ನಾನದಲ್ಲಿ ಮಾಡಿರುವ ಸಾದನೆಯಿಂದ ಅಪಾರ ಮನ್ನಣೆ ಪಡೆದಿರುವ ನಾಡೋಜ ಡಾ।। ಡಿ ಎನ್ ಶಂಕರ ಬಟ್ ಅವರ “ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ” ಹೊತ್ತಗೆಯು ಹೆಚ್ಚು ಬೆಳಕನ್ನು ಬೀರುತ್ತದೆ. “ಕನ್ನಡದ ವ್ಯಾಕರಣದ ಬಹುಪಾಲು ಸಂಸ್ಕ್ರುತದ ವ್ಯಾಕರಣವೇ ಆಗಿದೆ ಎಂಬುದು ತಪ್ಪು, ಕನ್ನಡ ಮತ್ತು ಸಂಸ್ಕ್ರುತದ ವ್ಯಾಕರಣ ಹೇಗೆ ಒಂದೇ ಅಲ್ಲ, ಹೇಗೆ ಅವು ಬೇರೆ ಬೇರೆ” ಎಂಬುದನ್ನು ಡಿ ಎನ್ ಶಂಕರ ಬಟ್ಟರು ಎಳೆ ಎಳೆಯಾಗಿ ಉದಾಹರಣೆ ಸಮೇತ ಓದುಗರ ಮುಂದಿಡುತ್ತಾರೆ. ಈ ಹೊತ್ತಗೆಯನ್ನೊಮ್ಮೆ ಓದುವುದು ಒಳಿತು. ಕನ್ನಡದ ವ್ಯಾಕರಣದ ಕುರಿತು ಶಂಕರ ಬಟ್ ರವರು ಹಲವಾರು ಹೊತ್ತಗೆಗಳನ್ನೂ ಬರೆದಿದ್ದಾರೆ.
ಕುವೆಂಪು, ಕಾರಂತ, ಗೋಕಾಕ ಮುಂತಾದ ಕವಿಗಳ ಸಾಹಿತ್ಯದಲ್ಲಿ ಸಂಸ್ಕ್ರುತ ಪದಗಳಿವೆ ಎಂಬುದೊಂದು ಅನಿಸಿಕೆ. ಅದನ್ನೂ ಯಾರೂ ಇಲ್ಲವೆನ್ನುತ್ತಿಲ್ಲ. ಆದರೆ ಆ ಕವಿಗಳಿಗೆ ಸಂಸ್ಕ್ರುತವನ್ನು ಬಳಸಲು ಯಾರ ಮತ್ತು ಯಾವ ಒತ್ತಾಯವೂ ಇರಲಿಲ್ಲ ಎಂಬುದನ್ನು ಗಮನಿಸಬೇಕು. “ಪ್ರೇಮ ಕವಿ” ಎಂದೇ ಪ್ರಸಿದ್ದರಾಗಿದ್ದ ಶ್ರೀ ಕೆ ಎಸ್ ನರಸಿಂಹಸ್ವಾಮಿಯವರು ‘ಕನ್ನಡ ಮಾದ್ಯಮ‘ ಎಂಬ ಪದ್ಯದಲ್ಲಿ,
“ಕನ್ನಡ ಲಿಪಿಯಲಿ ಏನಿದು ಸಂಸ್ಕ್ರುತ, ಪದಗಳ ಮೆರವಣಿಗೆ! ಕಡೆಯಲಿ ಒಂದೇ ಕನ್ನಡದವ್ಯಯ; ತೂಕದ ಬರವಣಿಗೆ ತೂಕಡಿಸುವ ಕಣಿಗೆ”
ಎಂದು ಕನ್ನಡದಲ್ಲಿನ ಅತಿಯಾದ ಸಂಸ್ಕ್ರುತದ ಪದಗಳ ಬಳಕೆ ಬಗ್ಗೆ ದನಿ ಎತ್ತಿದ್ದರು. ಇನ್ನು ಮಾನ್ಯ ರಾಗವೇಂದ್ರ ಬಟ್ ಅವರು ಪ್ರಸ್ತಾಪಿಸಿರುವ ಅಯ್ರ್ ಲ್ಯಾಂಡ್ ನ ರುಟ್ಗರ್ ಕೊರ್‍ತೊನ್ಹೋಸ್ಟ್ ಎಂಬುವವರು ಡಬ್ಲಿನ್ ನಲ್ಲಿ ಸಂಸ್ಕ್ರುತದ ಶಿಕ್ಶಕರಾಗಿರುವ ಮಾಹಿತಿ ಇದೆಯೇ ಹೊರತು, ಅವರು ಬಾಶಾವಿಜ್ನಾನಿ ಎಂಬ ಬಗ್ಗೆ ಮಾಹಿತಿ ಇಲ್ಲ. ಅವರು ಬಾಶಾವಿಜ್ನಾನಿಯೇ ಆಗಿದ್ದರೂ, ಬೆಂಗಳೂರು ಮಿರರ್ ಇಂಗ್ಲೀಶ್ ಪತ್ರಿಕೆಯಲ್ಲಿ ಸಂಸ್ಕ್ರುತದ ಬಗ್ಗೆ ವರದಿಯಾಗಿರುವ ಅವರ ಹೇಳಿಕೆ, ಕೇವಲ ಅವರ ಅನಿಸಿಕೆಯಶ್ಟೇ ಆಗಿದೆ. ಅವರ ಅನಿಸಿಕೆಯಲ್ಲೂ ಕಡ್ಡಾಯವಾಗಿ ಸಂಸ್ಕ್ರುತ ಕಲಿಯಿರಿ ಎಂಬ ಒತ್ತಾಯ ಅತವಾ ಹೇರಿಕೆ ಇಲ್ಲ.
ವಿಜ್ನಾನ, ಗಣಿತ ಮುಂತಾದ ವಿಶಯಗಳಲ್ಲಿ ಸಂಸ್ಕ್ರುತ ಬೇರಿನ ಪದಗಳ ಬಳಕೆಯಿಂದ ಆಗುತ್ತಿರುವ ತೊಂದರೆಯೇ ಹೆಚ್ಚು ಎಂದು ಕನ್ನಡ ಮಾದ್ಯಮ ಶಾಲಾ ಪಟ್ಯಪುಸ್ತಕ ನೋಡಿದರೆ ಅರ್‍ತವಾಗುತ್ತದೆ. ವಿಜ್ನಾನ ಮತ್ತು ಗಣಿತ ಪಟ್ಯಪುಸ್ತಕದಲ್ಲಿ ಬಳಕೆಯಾಗಿರುವ ಕೆಲ ಪದಗಳನ್ನು ಗಮನಿಸಿ : “ಪುನರಾವರ್‍ತಿತ ವ್ಯವಕಲನ“, “ದ್ಯುತಿ ಸಂಶ್ಲೇಶಣ ಕ್ರಿಯೆ“, “ವ್ಯುತ್ಕ್ರಮ“, “ಅನುಲೋಮಾನುಪಾತ“, “ಸಂಯುಗ್ಮೀಕರಣ“. ಸುಲಬವಾಗಿ ತಿಳಿಯಲಾಗದ ಮತ್ತು ವಿವರಿಸಲಾಗದ ಇಂತ ಅನೇಕ ಪದಗಳು ಪಟ್ಯಪುಸ್ತಕದಲ್ಲಿವೆ. ಕಲಿಕೆಯಲ್ಲಿ ವಿದ್ಯಾರ್‍ತಿಗಳು ಹಿಂದೆ ಬೀಳಲು ಈ ಪದಗಳೂ ಒಂದು ಕಾರಣವೇನೋ ಎಂದನಿಸುತ್ತದೆ. ಏಳಿಗೆಗೆ ಮುಕ್ಯ ಸಾದನವೇ ಕಲಿಕೆಯಾಗಿದ್ದು, ಇಂದು ಅದು ಎಲ್ಲ ಜಾತಿ-ವರ್‍ಗದ ಜನರನ್ನೂ ಒಳಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಕಲಿಕೆಯಲ್ಲಿರುವ ತೊಡಕುಗಳನ್ನು ಕಡಿಮೆ ಮಾಡುವುದು ಹಿಂದೆಂದಿಗಿಂತಲೂ ಜಾಗತೀಕರಣದ ಈ ಹೊತ್ತಿನಲ್ಲಿ ಅಗತ್ಯವಾಗಿದೆ.
ಆದರಿಂದ ವಿರೋದವು ಸಂಸ್ಕ್ರುತ ನುಡಿಗೆ ಅಲ್ಲವೇ ಅಲ್ಲ ಎಂಬುದನ್ನು ಸಂಸ್ಕ್ರುತವಾದಿಗಳು ಮನಗಾಣಬೇಕು. ಸಂಸ್ಕ್ರುತ ಅತವಾ ಬೇರೆ ಯಾವುದೇ ನುಡಿ ಕಲಿಯಲು ಆಸಕ್ತಿ, ಇಚ್ಚೆ ಇರುವವರು ಕಲಿಯಲಿ. ಕಲಿತು ಆ ನುಡಿಗಳಲ್ಲಿರುವ ಎಲ್ಲಾ ಬಗೆಯ ಜ್ನಾನವನ್ನು ಗಳಿಸಿ, ಅದನ್ನು ಕನ್ನಡಕ್ಕೂ ತರಲಿ. “ಎಲ್ಲರೂ ಕಡ್ಡಾಯವಾಗಿ ಆ ನುಡಿಯನ್ನು ಕಲಿಯಬೇಕೆನ್ನುವುದು ಅತವಾ ಕನ್ನಡವನ್ನು ಕಲಿಯಲು ಸಂಸ್ಕ್ರುತ ಕಲಿಯಬೇಕು” ಎಂಬುದನ್ನು ಮಾತ್ರ ಒಪ್ಪಲಾಗದಶ್ಟೇ.”ಕನ್ನಡವನ್ನು ಕಲಿಯಬೇಕೆಂದರೆ ಕನ್ನಡವನ್ನೇ ಕಲಿಯಬೇಕು, ಕನ್ನಡದ ಹೆಸರಲ್ಲಿ ಬೇರೆ ನುಡಿಯನ್ನು ಕಲಿತರೆ ಕನ್ನಡ ಕಲಿತ ಹಾಗಾಗುತ್ತದೆಯೇ”?
(ಚಿತ್ರ ಸೆಲೆ: ಉದಯವಾಣಿ )
ಇತ್ತೀಚಿನ ಅನಿಸಿಕೆಗಳು