ಸರಳ ಮದುವೆ

– ಕೆ.ಟಿ.ರಗು (ಕೆ.ಟಿ.ಆರ್)

marriage-2

ಬಾರತವು ಅತ್ಯಂತ ಪುರಾತನ ಮತ್ತು ಶ್ರೀಮಂತವಾದ ಸಂಸ್ಕ್ರುತಿಯನ್ನು ಹೊಂದಿದೆ. ನಮ್ಮ ಎಲ್ಲ ಬಗೆಯ ಆಚಾರ-ವಿಚಾರ, ಸಂಪ್ರದಾಯಗಳಿಗೆ ಅದರದೇ ಆದ ವಿಬಿನ್ನ ಮತ್ತು ವಿಶಿಶ್ಟ ಇತಿಹಾಸವಿದೆ. ಬಾರತೀಯ ಸಂಪ್ರದಾಯಗಳಲ್ಲಿ ಮದುವೆಯು ಒಂದು ಮುಕ್ಯ ಗಟ್ಟ. ವೇದ-ಉಪನಿಶತ್ತು, ಆಶ್ರಮ ವ್ಯವಸ್ತೆಗಳಲ್ಲಿ ಇದರ ಮಹತ್ವವನ್ನು ವಿವರಿಸಲಾಗಿದೆ. ಜನಿಸಿದ ಪ್ರತಿ ಗಂಡು, ಹೆಣ್ಣು ಮದುವೆಯಾಗಬೇಕು ಆಗಮಾತ್ರ ಮುಕ್ತಿ ದೊರಕುತ್ತದೆ. ಮದುವೆ ಒಂದು ಅನಿವಾರ‍್ಯ ಕರ‍್ಮವೆಂದು ಬೋದಿಸಲಾಗಿದೆ.ಇಂದಿನ ಆದುನಿಕ ಅಯ್ಶಾರಾಮಿ ಜಗದಲ್ಲಿ ಎಲ್ಲವೂ ತೋರಿಕೆಗಾಗಿ ನಡೆಸುವ ಪ್ರಕ್ರಿಯೆಯಾಗಿದೆ. ಮದುವೆಯು ಇದರಿಂದ ಹೊರತಾಗಿಲ್ಲ. ಹಿಂದೆ ನಡೆಯುತ್ತಿದ್ದಂತಹ ಸರಳ ಮದುವೆಗಳು ಕಣ್ಮರೆಯಾಗಿ, ಇಂದು ಬಡವರಿಂದ ಸಿರಿವಂತರವರೆಗೆ ಆಡಂಬರದ ಮದುವೆಯನ್ನು ಮಾಡಿ ತಮ್ಮ ಅಂತಸ್ತನ್ನು ತೋರುವ ಜಾಯಮಾನವಾಗಿದೆ. ಸರಳ ಮದುವೆಗಳಲ್ಲಿ ಇರುವ ಸಂಬ್ರಮ, ಬರಾಟೆ, ನೆಮ್ಮದಿ, ಬೋಳಯ್ಸುಗಳು ಇಂದು ಇಲ್ಲವಾಗಿ ಬರಿ ತೋರಿಕೆ ಆಚರಣೆಯಾಗಿದೆ.

ಮದುವೆಯಲ್ಲಿ ಹಲವು ಬಗೆಯ ತಿಂಡಿ-ತಿನಿಸುಗಳನ್ನು ಮಾಡಿಸುವುದು, ಬಹು ಕೋಟಿ ವ್ಯಯಿಸುವುದು, ಬರುವವರಿಗೆ ಬಿನ್ನ ಉಡುಗೊರೆಗಳನ್ನು ನೀಡುವುದು, ಬ್ರುಹತ್ ಮಂಟಪ ಹಾಗೂ ಸಬಾಂಗಣಗಳಲ್ಲಿ ಮದುವೆ ಮಾಡುವುದು, ವಿಶೇಶವಾಗಿ ಗಣ್ಯರು, ರಾಜಕೀಯ ವ್ಯಕ್ತಿಗಳನ್ನು ಕರೆಸುವುದು, ಮಯ್ ತುಂಬ ಒಡವೆಗಳನ್ನು ಹಾಕಿ ಪ್ರದರ್‍ಶಿಸುವುದು, ಬಾಡೂಟ ಮಾಡಿಸುವುದು ವಾಡಿಕೆಯಾಗಿ ಹೋಗಿದೆ. ಬಂದವರು ವದು-ವರರನ್ನು ಮರೆತು ಮದುವೆಯ ವಯ್ಬವದ ಬಗ್ಗೆ ಮಾತನಾಡಬೇಕೆನ್ನುವುದು ಮದುವೆ ಮಾಡುವವರ ಆಸೆ.

ಆದರೆ ಇಂತಹ ಮದುವೆಗಳಿಂದ ದುಂದುವೆಚ್ಚ, ಆಹಾರ ಮತ್ತು ಸಮಯ ವ್ಯರ‍್ತವಾಗುತ್ತದೆ. ಇಂತಹ ಮದುವೆಯಿಂದಾಗಿ ಮಾತ್ರ ನವದಂಪತಿಗಳು ಸಂತೋಶದಿಂದ ಜೀವನವನ್ನು ಪ್ರಾರಂಬಿಸುತ್ತಾರೆನ್ನುವುದು ಹಿರಿಯರ ಚಿಂತನೆ ಮತ್ತು ಗವ್ರವದ ಸಂಕೇತ ಎಂಬ ಬಾವನೆ ಪೋಶಕರದ್ದು. ಆದರೆ ಸವ್ಹಾರ್‍ದದ ಜೀವನ ನಡೆಸಲು ಇವು ಅವಶ್ಯಕವಿಲ್ಲ. ಜೀವನದಲ್ಲಿ ಪ್ರೀತಿ-ನಂಬಿಕೆ-ವಿಶ್ವಾಸಗಳಿದ್ದಾಗ ಮಾತ್ರ ಜೀವನ ಸುಕಮಯವಾಗುತ್ತದೆ. ಬಾರತದಂತಹ ಬಡದೇಶದಲ್ಲಿ ಇಂತಹ ದುಂದುವೆಚ್ಚದ ಮದುವೆಗಳು ತಗ್ಗಿಸಿ ಆ ಹಣದಿಂದ ಬಡವರಿಗೆ ಬೇಕಾಗುವ ಸವ್ಕರ‍್ಯಗಳನ್ನು ನಿರ್‍ಮಿಸಿದರೆ ನಮ್ಮ ದೇಶದಲ್ಲಿ ಬಡತನವೆಂಬುದೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರಳ ವಿವಾಹಗಳನ್ನು ಪ್ರೋತ್ಸಾಹಿಸುವ ವಿವಿದ ಯೋಜನೆಗಳನ್ನು ಸರಕಾರ ಕಯ್ಗೊಳ್ಳಬೇಕು. ಸರಳ ವಿವಾಹವಾಗುವವರನ್ನು ಗುರುತಿಸಿ ಗವ್ರವಿಸುವ, ಪ್ರೋತ್ಸಾಹದನ, ಬಹುಮಾನ, ಬಡ್ತಿ, ಇನ್ನಿತರೆ ಸವ್ಕರ‍್ಯಗಳನ್ನು ಒದಗಿಸಲು ಮುಂದಾಗಬೇಕು. ಸರಳ ಮದುವೆಯಿಂದಲೂ ಸುಕಜೀವನ ನಡೆಸಬಹುದೆಂಬುದಕ್ಕೆ ನಮ್ಮ ಅನೇಕ ಹಿರಿಯರ ಜೀವನವೇ ಸಾಕ್ಶಿಯಾಗಿದೆ.

(ಚಿತ್ರ ಸೆಲೆ: vijayakarnataka.indiatimes.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: