ನುಡಿ ಹಲತನವನ್ನು ಶಾಪವೆಂದು ನೋಡುತ್ತಿದೆಯೇ ಚೀನಾ?

ಅನ್ನದಾನೇಶ ಶಿ. ಸಂಕದಾಳ.

mandarin-or-cantonese2

ಸುಮ್ಮನೆ ಕಣ್ಣು ಮುಚ್ಚಿಕೊಂಡು ಹೀಗಾದರೆ ಹೇಗೆ ಎಂದು ಅಂದುಕೊಳ್ಳಿ : ನೀವು ನಿಮ್ಮ ಮನೆಯವರು ಪ್ರತಿ ದಿನ ನೋಡುವ ಟಿ.ವಿ ಕಾರ‍್ಯಕ್ರಮಗಳು ಇದ್ದಕ್ಕಿದ್ದ ಹಾಗೆ ನಿಮಗೆ ಗೊತ್ತಿಲ್ಲದ ನುಡಿಯಲ್ಲಿ ಬರಲು ಶುರುವಾಗುತ್ತದೆ. ಇದೇನಿದು ಹೀಗೆ? ಸರಿ, ಇದನ್ನು ಪ್ರಶ್ನೆ ಮಾಡೇ ಬಿಡೋಣ ಅಂತ ಮುಂದಾಗುವಶ್ಟರಲ್ಲೇ ನಿಮಗೆ ಗೊತ್ತಾಗುತ್ತದೆ – ಆ ಬೇರೆ ನುಡಿಯನ್ನು, ಅಂದರೆ ‘ನಿಮ್ಮದಲ್ಲದ ನುಡಿಯನ್ನು’ ಮುನ್ನೆಲೆ’ಗೆ(mainstream) ತರುವುದಕ್ಕಾಗಿ ಮತ್ತು ಅದನ್ನೇ ಹೆಚ್ಚು ಹೆಚ್ಚು ಬಳಸುವಂತೆ ಮಾಡುವುದಕ್ಕಾಗಿ ನಿಮ್ಮನಾಳುತ್ತಿರುವ ಸರಕಾರವೇ ಆ ಕೆಲಸ ಮಾಡುತ್ತಿದೆ ಎಂದು. ಇನ್ನು ಯಾರನ್ನು ಪ್ರಶ್ನಿಸುವುದು? ಪ್ರಶ್ನಿಸಲು ಉಳಿದಿರುವುದಾದರೂ ಏನು ಅಂತ ಅನಿಸುವುದಿಲ್ವೆ? ನುಡಿ ಎಂಬುದೇ ಮುಕ್ಯ ಗುರುತುಗಳಲ್ಲಿ ಒಂದಾಗಿರುವಾಗ, ಇಂತ ನಡೆಗಳು ಆ ಗುರುತನ್ನು ನಿದಾನವಾಗಿ ಅಳಿಸಿ ಹಾಕುವಂತೆ ತೋರುತ್ತದಲ್ಲವೇ? ಇಂತಾ ಒಂದು ಕಲ್ಪನೆಯೇ ನೆಮ್ಮದಿಯನ್ನು ಕದಡುತ್ತದೆ, ಕಳವಳವನ್ನು ಹುಟ್ಟುಹಾಕುತ್ತದೆ. ಇನ್ನು ಚೀನಾ‘ಗ್ವಾಂಗ್ ಜೂ’ ನಲ್ಲಿ ಇಂತದೊಂದು ಕೆಲಸ ಆಗುವುದರಲ್ಲಿದೆಯಲ್ಲಾ, ಅದು ಅಲ್ಲಿಯ ಮಂದಿಯಲ್ಲಿ ಎಂತಹ ತಳಮಳ ಹುಟ್ಟುಹಾಕಿರಬಹುದು ಎಂದು ಯೋಚಿಸಿ.

ಹೌದು, ಅಂತ ಒಂದು ಸುದ್ದಿ ಬಂದಿದೆ. ಚೀನಾದಲ್ಲಿ ಗ್ವಾಂಗ್ ಡಾಂಗ್ ಅನ್ನುವದೊಂದು ರಾಜ್ಯವಿದೆ (ಚೀನಾದಲ್ಲಿ ಅದನ್ನು ‘ಪ್ರಾವಿನ್ಸ್‘ ಎಂದು ಹೇಳುತ್ತಾರೆ). ಈ ರಾಜ್ಯದಲ್ಲಿ ನಡೆಯುವ ಹಣಕಾಸಿನ ವ್ಯವಹಾರದಿಂದ ಇದನ್ನು ನೆದರ್ ಲ್ಯಾಂಡ್ಸ್ ನಾಡಿಗೆ ಹೋಲಿಸಬಹುದಾಗಿದೆ. ಗ್ವಾಂಗ್ ಡಾಂಗ್ ನ ರಾಜದಾನಿ ಗ್ವಾಂಗ್ ಜೂ. ಇಲ್ಲಿ ಕಂಟೊನಿಸ್ (Cantonese ) ನುಡಿಯಾಡುವವರೇ ಹೆಚ್ಚು. ಕಂಟೊನಿಸ್ ನುಡಿಯಾಡುವವರು ಗ್ವಾಂಗ್ ಡಾಂಗ್ ನಲ್ಲಲ್ಲದೇ, ಹಾಂಗ್ ಕಾಂಗ್ ಮತ್ತು ಮೆಕಾವೋನಲ್ಲೂ ಹೆಚ್ಚಿನ ಎಣಿಕೆಯಲ್ಲಿದ್ದಾರೆ. ಈ ರಾಜ್ಯದಲ್ಲಿ ಹಲವಾರು ಟಿ ವಿ ಚಾನೆಲುಗಳನ್ನು ಬಿತ್ತರಿಸುವ ‘ಗ್ವಾಂಗ್ ಡಾಂಗ್ ಟೆಲಿವಿಶನ್’ ಎಂಬ ಹೆಸರಿನ ಸಂಸ್ತೆ ಒಂದಿದೆ. ಇಶ್ಟು ದಿವಸ ತಮ್ಮ ಚಾನೆಲ್ಲಿನ ಕಾರ‍್ಯಕ್ರಮಗಳನ್ನು ಕಂಟೊನಿಸ್ ನುಡಿಯಲ್ಲಿ ಪ್ರಸಾರ ಮಾಡುತ್ತಿದ್ದ ಈ ಸಂಸ್ತೆ, ಬರುವ ಸೆಪ್ಟಂಬರ್ ಇಂದ ಸುದ್ದಿ ಮತ್ತು ಬೇರೆಲ್ಲಾ ಕಾರ‍್ಯಕ್ರಮಗಳನ್ನು ‘ಪುಟೊಂಗ್ವಾ‘ ನುಡಿಯಲ್ಲಿ ಬಿತ್ತರಿಸುತ್ತದೆ ಎಂಬ ಸುದ್ದಿ ಬಂದಿದೆ (ಪುಟುಂಗ್ವಾ/ಮ್ಯಾಂಡರಿನ್ ನುಡಿಯನ್ನು ಹೆಚ್ಚಾಗಿ ಚೀನಾ ರಾಜದಾನಿಯಾದ ಬೀಜಿಂಗ್ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಮಾತಾಡುತ್ತಾರೆ). ಈ ತೀರ‍್ಮಾನದ ಹಿಂದೆ ಸರಕಾರದ ಪಾತ್ರವೂ ಇದೆ ಎಂದೂ ಹೇಳಲಾಗುತ್ತದೆ. ಈ ಸುದ್ದಿ ತಿಳಿದು ಬರುತ್ತಲೇ ಕಂಟೊನಿಸ್ ನುಡಿಯಾಡುವವರು, ತಮ್ಮ ತಾಯ್ನುಡಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ‘ಜುಲೈ 25‘ ಅನ್ನು ‘ಕಂಟೊನಿಸ್ ದಿನ‘ವನ್ನಾಗಿ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರಲು ತಮ್ಮ ಮಂದಿಯನ್ನು ಒಗ್ಗೂಡಿಸುತ್ತಿದ್ದಾರೆ. ಮ್ಯಾಂಡರಿನ್/ಪುಟೊಂಗ್ವಾ ನುಡಿಗಿಂತಲೂ ಹೆಚ್ಚಿನ ಹಳಮೆಯನ್ನು, ಹಿನ್ನಡುವಳಿಯನ್ನು(history) ಕಂಟೊನಿಸ್ ನುಡಿ ಹೊಂದಿದೆ ಎಂದು ಹೇಳಲಾಗುತ್ತದೆ.

ಜುಲೈ 25 ಯಾಕೆ ?:

‘ಜುಲೈ 25’ ಅನ್ನು ‘ಕಂಟೊನಿಸ್ ದಿನ’ವನ್ನಾಗಿ ಮಾಡಲು ಹೊರಟಿರುವುದಕ್ಕೆ ಹಿನ್ನೆಲೆಯೊಂದಿದೆ. ಗ್ವಾಂಗ್ ಜೂ ನಲ್ಲಿ 2010 ರ ಜುಲೈ 25 ರಂದು, ಹೀಗೆಯೇ, ಟಿ ವಿ ಸಂಸ್ತೆಯವರು ಕಾರ‍್ಯಕ್ರಮಗಳನ್ನು ಕಂಟೊನಿಸ್ ನುಡಿಯ ಬದಲಾಗಿ ಮ್ಯಾಂಡರಿನ್/ಪುಟೊಂಗ್ವಾ ನುಡಿಯಲ್ಲಿ ಬಿತ್ತರಿಸಲು ತೀರ‍್ಮಾನ ಮಾಡಿದ್ದಾರೆಂಬ ಸುದ್ದಿ ತಿಳಿದು, ಕಂಟೊನಿಸರು ಅದನ್ನು ವಿರೋದಿಸಲು ಹೆಚ್ಚಿನ ಎಣಿಕೆಯಲ್ಲಿ ಬೀದಿಗಿಳಿದಿದ್ದರು. ‘ಚೈನೀಸ್ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಪರೆನ್ಸ್(ಸಿ.ಪಿ.ಪಿ.ಸಿ.ಸಿ)’ ಎಂಬ ರಾಜಕೀಯ ಸಲಹಾ ಸಮಿತಿಯು, ಮ್ಯಾಂಡರಿನ್ ನುಡಿಯನ್ನು ಎಲ್ಲರೂ ಬಳಸುವಂತೆ ಮಾಡಲು, ಆ ಮೂಲಕ ಆ ನುಡಿಯನ್ನೇ ಮುನ್ನೆಲೆಗೆ ತರಲು ಇಂತದೊಂದು ಪ್ರಸ್ತಾವನೆಯನ್ನು ಆ ಟಿ ವಿ ಸಂಸ್ತೆ ಮುಂದಿಟ್ಟಿತ್ತಂತೆ. ಆದರೆ ಕಂಟೊನಿಸರ ವಿರೋದದಿಂದ ಆ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಲಾಗಿತ್ತು.

ಏಶಿಯನ್ ಗೇಮ್ಸ್‘ ಅಲ್ಲಿ ನಡೆಯುತ್ತಿದ್ದ ಕಾರಣ, ಅದರಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ದೇಶದಿಂದ ಚೀನಾಗೆ ಬರುವವರು, ಮ್ಯಾಂಡರಿನ್ ನುಡಿಯಲ್ಲಿನ ಕಾರ‍್ಯಕ್ರಮಗಳನ್ನು ನೋಡುವ ಮೂಲಕ ಚೀನೀ ಸಂಸ್ಕ್ರುತಿಯನ್ನು ತಿಳಿಯಲಿ ಎಂಬುದು ಆ ಸಮಿತಿಯ ಯೋಜನೆ-ಯೋಚನೆಯಾಗಿತ್ತು. ಆದರೆ ಚೀನಾ, ಚೀನೀ ಸಂಸ್ಕ್ರುತಿ ಎಂದರೆ ಬರೀ ಮ್ಯಾಂಡರಿನ್ ಮಾತ್ರವಲ್ಲ, ಬೇರೆ ಬೇರೆ ನುಡಿಯವರ ಸಂಸ್ಕ್ರುತಿಯೂ ಇದೆ ಎಂಬ ಸಂದೇಶವನ್ನು, ಕಂಟೊನಿಸರು ಆ ಪ್ರಸ್ತಾವನೆಯನ್ನು ಬಲವಾಗಿ ವಿರೋದಿಸುವ ಮೂಲಕ ರವಾನಿಸಿದ್ದರು. ಚೀನಾದ ಬೇರೆ ಬೇರೆ ಪ್ರದೇಶದಿಂದ ಮ್ಯಾಂಡರಿನ್/ಪುಟೊಂಗ್ವಾ ನುಡಿಯಾಡುವವರು ಹೆಚ್ಚಿನ ಎಣಿಕೆಯಲ್ಲಿ ಗ್ವಾಂಗ್ ಡಾಂಗ್ ಗೆ ವಲಸೆ ಬರುತ್ತಿದ್ದು, ಆ ನುಡಿಯಾಡುವವರ ಎಣಿಕೆ ಹೆಚ್ಚುತ್ತಿದೆ ಎಂದೂ ಕೂಡ ಹೇಳಲಾಗುತ್ತದೆ. ಮ್ಯಾಂಡರಿನ್/ಪುಟೊಂಗ್ವಾ ನುಡಿಯನ್ನೇ ಮುನ್ನೆಲೆಗೆ ತರಲು ‘ಮೇನ್ ಲ್ಯಾಂಡ್ ಚೀನಾ’ ದಲ್ಲಿನ ಎಲ್ಲಾ ಮಾದ್ಯಮದವರಿಗೂ, ಪ್ರಾದೇಶಿಕ ನುಡಿಗಳಲ್ಲಿ ಕಾರ‍್ಯಕ್ರಮಗಳನ್ನು ಬಿತ್ತರಿಸಿದಂತೆ ನಿಶೇದ ಹೇರಲಾಗಿದಿಯಂತೆ. ಇದುವರೆಗೂ ಗ್ವಾಂಗ್ ಡಾಂಗ್ ಪ್ರಾಂತ್ಯವು ಅಂತ ಯಾವುದೇ ಕಟ್ಟಳೆಗೆ ಒಳಪಟ್ಟಿರಲಿಲ್ಲ.ಆದರೆ ಇನ್ಮೇಲೆ ಅದೂ ಕೂಡ ಈ ಕಟ್ಟಳೆಯನ್ನು ಪಾಲಿಸಬೇಕಾಗಬಹುದು.

ಹಲತನ ಸ್ವಾಬಾವಿಕ, ಶಾಪವಲ್ಲ:

ನುಡಿಗಳ ಹಲತನವನ್ನು(diversity) ಚೆನ್ನಾಗಿ ಕಾಪಾಡಿಕೊಂಡು, ನುಡಿ ಸಮಾನತೆಯನ್ನು ಎತ್ತಿ ಹಿಡಿದಿರುವ ನಾಡುಗಳೂ ಕಣ್ಮುಂದಿವೆ. ಹಾಗೆಯೇ, ಸಮಾನತೆಯನ್ನು ಕಾಪಾಡದ ಅತವಾ ಸಮಾನತೆ ಬಯಸದ ಚೀನಾ ಮತ್ತು ಬೇರೆ ಬೇರೆ ನಾಡುಗಳೂ ನಮ್ಮ ಮುಂದೆ ಇವೆ. ನುಡಿಗಳ ಹಲತನ ಇರುವುದು ಸ್ವಾಬಾವಿಕ. ಆ ಹಲತನದಲ್ಲಿ ಒಂತನ (unity) ಮೂಡಿಸಿದರೆ ನಾಡಿನ ಜನರಲ್ಲಿ ಒಗ್ಗಟ್ಟು ಮೂಡಿ ನಾಡೂ ಕೂಡ ಗಟ್ಟಿಯಾಗುತ್ತದೆ. ಆದರೆ ಸ್ವಾಬಾವಿಕವಾದ ಹಲತನವನ್ನೇ ಶಾಪವೆಂದು ತಿಳಿದು, ಎಲ್ಲರೂ ‘ಒಂದೇ’ ರೀತಿ ಇರಲಿ ಎನ್ನುವ ನಿಟ್ಟಿನಲ್ಲಿ – ನುಡಿಯೊಂದನ್ನು ತನ್ನ ಮಂದಿಯ ಮೇಲೆ ಹೇರುವುದು, ನಾಡಿನ ಮಂದಿಯ ಗುರುತನ್ನೇ ಅಳಿಸುವಂತ ಹಮ್ಮುಗೆಗಳನ್ನು ಹಾಕಿಕೊಳ್ಳುವುದು, ನಾಡಿಗೆ, ನಾಡಿನ ಏಳಿಗೆಗೆ, ನಾಡಿನ ಒಗ್ಗಟ್ಟಿಗೆ ತಕ್ಕುದಾದುದಲ್ಲ.

(ಮಾಹಿತಿ ಸೆಲೆ :  scmp.com, theguardian.comcantonese.sheik.co.ukWikipedia-cppcc, Wiki-guangdong,Wiki-cantonese, Wiki-guangzhou, Wiki-GuangdongTV)

(ಚಿತ್ರ ಸೆಲೆ:  qlanguage.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: