ನಮಗೂ ನಿಮ್ಮಂಗೆ ಆಸೆ ಇಲ್ವೇ ?

ಸಿ.ಪಿ.ನಾಗರಾಜ

ಹಲವು ವರುಶಗಳ ಹಿಂದೆ ನಾನು ಕನ್ನಡ ಮಾಸ್ತರನಾಗಿ ಕೆಲಸ ಮಾಡುತ್ತಿದ್ದ ಕಾಳಮುದ್ದನದೊಡ್ಡಿಬಾರತಿ ಕಾಲೇಜಿನಲ್ಲಿ ನಡೆದ ಪ್ರಸಂಗವಿದು.

ಏಕೋ…ಏನೋ… ಆ ವರುಶ ವಿದ್ಯಾರ‍್ತಿಗಳ ಸಮಸ್ಯೆಗಳು ತುಸು ಹೆಚ್ಚಾಗಿ, ಹತೋಟಿಗೆ ಸಿಗಲಾರದಂತೆ ಬಿಗಡಾಯಿಸಿಕೊಳ್ಳುತ್ತಿದ್ದವು. ದಿನ ಬೆಳಗಾದರೆ ಕಾಲೇಜಿನ ಪರಿಸರದಲ್ಲಿ ಏನಾದರೊಂದು ಬಗೆಯ ಕಹಿ ಪ್ರಸಂಗ ನಡೆಯುತ್ತಿತ್ತು. ಕಟ್ಟುಪಾಡುಗಳನ್ನು ಹೇರುವುದರ ಮೂಲಕ ವಿದ್ಯಾರ‍್ತಿಗಳನ್ನು ಹತೋಟಿಯಲ್ಲಿಡುವುದರ ಬದಲು…ಒಲವು ಮತ್ತು ನಲಿವಿನ ನಡೆನುಡಿಗಳಿಂದಲೇ ಅವರ ಮನಸ್ಸನ್ನು ಒಲಿಸಿಕೊಂಡು… ಕಾಲೇಜಿನಲ್ಲಿ ಒಳ್ಳೆಯ ವಾತಾವರಣವನ್ನು ಮೂಡಿಸಬೇಕೆಂಬ ಉದ್ದೇಶದಿಂದ, ಒಂದು ದಿನ ಬೆಳಗ್ಗೆ ವಿದ್ಯಾರ‍್ತಿಗಳೆಲ್ಲರನ್ನೂ ದೊಡ್ಡ ಕೊಟಡಿಯೊಂದರಲ್ಲಿ ಕೂರಿಸಿ, ವಿದ್ಯಾರ‍್ತಿಗಳಲ್ಲಿ ಯಾರು ಬೇಕಾದರೂ… ತಮ್ಮ ಯಾವುದೇ ಬಗೆಯ ಸಮಸ್ಯೆಯನ್ನಾದರೂ… ಯಾವ ಹಿಂಜರಿಕೆಯೂ ಇಲ್ಲದೆ… ಪ್ರಿನ್ಸಿಪಾಲರು ಮತ್ತು ಉಪನ್ಯಾಸಕರ ಮುಂದೆ ಹೇಳಿಕೊಳ್ಳುವಂತೆ ಸೂಚಿಸಲಾಯಿತು. ವಿದ್ಯಾರ‍್ತಿಗಳ ಸಮಸ್ಯೆಗಳನ್ನು ನಿವಾರಿಸಲು ಸೂಕ್ತವಾದ ಪರಿಹಾರಗಳನ್ನು ಅವರ ಮುಂದೆಯೇ ಚರ‍್ಚಿಸಿ, ಅವನ್ನು ಕಾರ‍್ಯರೂಪಕ್ಕೆ ತರಲು ಅಗತ್ಯವಾದ ಕ್ರಮಗಳನ್ನು ಕಯ್ಗೊಳ್ಳಲು ಪ್ರಿನ್ಸಿಪಾಲರು ಮೊದಲುಗೊಂಡು ಉಪನ್ಯಾಸಕರಾದ ನಾವೆಲ್ಲರೂ ತಯಾರಾಗಿದ್ದೆವು .

ಸಬೆಯು ಶುರುವಾಗುತ್ತಿದ್ದಂತೆಯೇ… ಹತ್ತಾರು ಹುಡುಗರು ವೇದಿಕೆಯ ಮೇಲೆ ಒಬ್ಬೊಬ್ಬರಾಗಿ ಬಂದು ಮಾತನಾಡತೊಡಗಿದರು. ಕೆಲವರು ದೊಡ್ಡ ದನಿಯಲ್ಲಿ ಅಬ್ಬರಿಸಿದರು. ಮತ್ತೆ ಕೆಲವರು ಮೇಜು ಕುಟ್ಟಿ ಆಕ್ರೋಶದಿಂದ ಕೂಗಾಡಿದರು. ಒಂದಿಬ್ಬರು ತುಂಬಾ ತಾಳ್ಮೆಯಿಂದ ಕೇಳುಗರ ಮನಮುಟ್ಟುವಂತೆ ವಿದ್ಯಾರ‍್ತಿಗಳಿಗೆ ಉಂಟಾಗಿರುವ ತೊಂದರೆಗಳಿಗೆ ಕಾರಣವಾದ ಸಂಗತಿಗಳನ್ನು ಕುರಿತು ಮಾತನಾಡಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಈ ಸಬೆಯಲ್ಲಿ ಸಮಸ್ಯೆಗಳೆಲ್ಲವನ್ನೂ ಆಲಿಸಿದ ಪ್ರಿನ್ಸಿಪಾಲರು ಮತ್ತು ಉಪನ್ಯಾಸಕರು, ವಿದ್ಯಾರ‍್ತಿಗಳ ಬಗ್ಗೆ ಹೆಚ್ಚಿನ ಕಾಳಜಿಯಿಂದ ಅವರಿಗೆ ನೆರವಾಗುವಂತೆ ಪ್ರತಿಕ್ರಿಯಿಸುತ್ತಿದ್ದಂತೆಯೇ… ಒಂದು ಒಳ್ಳೆಯ ವಾತಾವರಣ ಉಂಟಾಯಿತು. ವಿದ್ಯಾರ‍್ತಿಗಳ ಮೊಗದಲ್ಲಿ ಒಂದು ಬಗೆಯ ನೆಮ್ಮದಿ ಹಾಗೂ ಸಂತಸ ಕಾಣತೊಡಗಿತು. ಇನ್ನೇನು ಸಬೆಯು ಮುಕ್ತಾಯದ ಹಂತವನ್ನು ತಲುಪುತ್ತಿರುವಾಗ… ಹುಡುಗಿಯರ ಗುಂಪಿನಿಂದ ಮೇಲೆದ್ದ ಸಣ್ಣಮ್ಮ… ವೇದಿಕೆಯತ್ತ ಬರತೊಡಗಿದಳು.

ಅಂತಿಮ ಬಿ.ಎ., ತರಗತಿಯಲ್ಲಿ ಓದುತ್ತಿದ್ದ ಸಣ್ಣಮ್ಮ… ಕಾಲೇಜಿನ ಪ್ರತಿಬಾವಂತ ವಿದ್ಯಾರ‍್ತಿನಿಯರಲ್ಲಿ ಒಬ್ಬಳಾಗಿದ್ದಳು. ಯಾವುದೇ ಬಗೆಯ ಮೋಟಾರುಕಾರುಬಸ್ಸುಗಳು ತಿರುಗಾಡದ ಹಳ್ಳಿಗಾಡಿನ ಮೂಲೆಯೊಂದರಲ್ಲಿದ್ದ ಪುಟ್ಟ ಊರಿನಿಂದ ಪ್ರತಿನಿತ್ಯ ನಾಲ್ಕಾರು ಕಿಲೊ ಮೀಟರ್ ನಡೆದುಕೊಂಡು ಕಾಲೇಜಿಗೆ ಬಂದು ಹೋಗುತ್ತಿದ್ದ ಸಣ್ಣಮ್ಮ… ಬಡ ಕುಟುಂಬಕ್ಕೆ ಸೇರಿದ ಹೆಣ್ಣುಮಗಳು. ಕಳೆದ ಅಯ್ದು ವರುಶಗಳಿಂದ ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ ಈಕೆ… ಒಳ್ಳೆಯ ಚರ‍್ಚಾಪಟುವಾಗಿದ್ದು, ಅಂತರಕಾಲೇಜು ಚರ‍್ಚಾಕೂಟಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನು ಪಡೆದು ಕಾಲೇಜಿಗೆ ಕೀರ‍್ತಿಯನ್ನು ತಂದಿದ್ದಳು. ಹಳ್ಳಿಯ ಪರಿಸರದಲ್ಲಿ ಹುಟ್ಟಿ ಬೆಳೆದು ಬಾಳುತ್ತಿದ್ದ ಸಣ್ಣಮ್ಮನ ಮಾತುಗಳಲ್ಲಿ ಕನ್ನಡ ನುಡಿಯ ಸೊಗಡು ಕೇಳಿ ಬರುತ್ತಿತ್ತು. ಈಕೆಯ ವ್ಯಕ್ತಿತ್ವದ ಹಿನ್ನೆಲೆಯನ್ನು ಅರಿತಿದ್ದ ನಾವೆಲ್ಲಾ… ಅವಳ ಮಾತುಗಳನ್ನು ಆಲಿಸಲು ಕುತೂಹಲದಿಂದ ಅವಳತ್ತ ನೋಡತೊಡಗಿದೆವು.

“ಗುರುಗಳೇ ಮತ್ತು ಗೆಳೆಯ ಗೆಳತಿಯರೇ… ನಾನು ಅಶ್ಟೊತ್ನಿಂದ ನೋಡುತ್ಲೆ ಇವ್ನಿ. ಇಶ್ಟೊಂದು ಜನ ಹುಡುಗರು ಮಾತಾಡುದ್ರು… ಅವರೆಲ್ಲಾ ಬರೀ ಹುಡುಗರ ಸಮಸ್ಯೆಗಳನ್ನ ಹೇಳ್ಕೊಂಡ್ರೆ ಹೊರ‍್ತು… ಈ ಕಾಲೇಜ್ನಲ್ಲಿ ಓದುತ್ತಿರುವ ನೂರಾರು ಮಂದಿ ಹುಡುಗಿಯರಿಗೆ ಇರೂ ತೊಂದರೆಗಳ ಬಗ್ಗೆ ಒಂದ್ ಚಿಂಕ್ರನೂ ಮಾತನಾಡಲಿಲ್ಲ. ಪ್ರಿನ್ಸಿಪಾಲರಾದಿಯಾಗಿ ನಮ್ಮ ಲೆಕ್ಚರರ್‌ಗಳೂ ಅಶ್ಟೆಯ… ಹುಡುಗರ ಸಮಸ್ಯೆಗಳ ಪರಿಹಾರಕ್ಕೆ ಸಲಹೆಗಳನ್ನು ನೀಡಿ, ಸುಮ್ನೆ ಕುಂತ್ಕೊಂಡವ್ರೆ. ನಮ್ ಕಾಲೇಜ್ನಲ್ಲಿ ಇಶ್ಟೊಂದು ಜನ ಹೆಣ್ಮಕ್ಳು ಅವ್ರೆ… ಅವರ‍್ದೇನ್ ಕಶ್ಟ-ಸುಕ ಅಂತ ಒಂದು ಮಾತು ಕೇಳ್ಮ ಅಂತ ಯಾರ‍್ಗೂ ಅನ್ನಿಸ್ಲೇ ಇಲ್ಲ… ಹೋಗ್ಲಿ ಬುಡಿ.. ಈಗ ನಾನು ನೇರವಾಗಿ ವಿಶಯಕ್ಕೆ ಬತ್ತೀನಿ. ನೀವೆಲ್ಲಾ ಕಂಡಿರುವಂಗೆ ನಮ್ ಕಾಲೇಜ್ನಲ್ಲಿ ಹೊಸದಾಗಿ ಕ್ಯಾಂಟೀನು ಶುರುವಾಗಿ ಎರಡ್ಮೂರು ತಿಂಗಳೇ ಆಯ್ತು. ಕ್ಯಾಂಟಿನ್ನಿನ ಒಳಗೆ ನಮ್ ಲೆಕ್ಚರರ್‌ಗಳಿಗೆ ಅಂತ ಬ್ಯಾರೆಯಾಗಿ ಒಂದು ರೂಮ್ ಅದೆ. ಹುಡುಗರಿಗೆ ಕ್ಯಾಂಟಿನ್ನಿನ ಮುಂದುಗಡೆ ಬೇಕಾದಶ್ಟು ಜಾಗ ಇದೆ. ಪ್ರತಿನಿತ್ಯ ನೀವೆಲ್ಲಾ ನಿಮಗೆ ಬೇಕು ಅಂದಾಗಲೆಲ್ಲಾ ಕ್ಯಾಂಟಿನ್ನಿಗೆ ಹೊಯ್ತ-ಬತ್ತಾ ಇದ್ದೀರಿ. ಇದುವರೆಗೆ ಒಂದು ಹುಡುಗಿಯಾದರೂ ಕ್ಯಾಂಟಿನ್ನಿನ ಕಡೆ ಮೊಕ ಹಾಕಿಲ್ಲ… ಯಾಕಂದ್ರೆ ಅಲ್ಲಿ ನಿಂತ್ಕೊಳೂಕೆ ಇಲ್ಲವೇ ಕುಂತ್ಕೊಳೂಕೆ ಹುಡುಗಿಯರಿಗೆ ಒಂದು ಚಿಂಕ್ರನೂ ಜಾಗ ಇಲ್ಲ. ಕ್ಯಾಂಟಿನ್ನಿಗೆ ಹೋಗಿ ಏನನ್ನಾದರೂ ತಿನ್ನಬೇಕು… ಕುಡೀಬೇಕು ಅಂತ… ನಮಗೂ ನಿಮ್ಮಂಗೆ ಆಸೆ ಇಲ್ವೇ ?… ಕ್ಯಾಂಟಿನ್ನಿಗೆ ಹುಡುಗಿಯರೂ ಬಂದು ಹೋಗುವಂತಿರಬೇಕು ಅಂತ ನಿಮ್ಮಲ್ಲಿ ಒಬ್ಬರಿಗಾದರೂ ಅನ್ನಿಸಲಿಲ್ವೇ ?” ಎಂದು ಕೇಳಿ… ಇಡೀ ಸಬೆಯನ್ನು ಒಂದು ಗಳಿಗೆ ನೋಡಿ, ಮತ್ತೆ ಮಾತನ್ನು ಮುಂದುವರಿಸಿದಳು –

“ಈ ಬಗ್ಗೆ ನೀವ್ಯಾರು ತಲೆಕೆಡಿಸಿಕೊಳ್ಳುವುದಿಲ್ಲ.. ಯಾಕೆ ಅಂತ ಹೇಳಿ ?… ಹೆಣ್ಮಕ್ಳು ಹಂಗೆಲ್ಲಾ ಕ್ಯಾಂಟಿನ್ನಿಗಾಗ್ಲಿ… ಹೋಟೆಲ್‌ಗಾಗ್ಲಿ ಬರಬಾರ‍್ದು ಅನ್ನೂ ಸಂಪ್ರದಾಯದ ಮನಸ್ಸು ನಿಮ್ಮೆಲ್ಲರದು. ಆದ್ದರಿಂದ ಹುಡುಗಿಯರಾದ ನಮಗೆ ಏನ್ ಬೇಕಾಗಿದೆಯೋ ಅದನ್ನು ನಾವೇ ಕೇಳಿ ಪಡಕೊಳ್ಳಬೇಕಾಗಿದೆ…ಪ್ರಿನ್ಸಿಪಾಲರನ್ನ ಮತ್ತು ಗುರುಗಳನ್ನ ನಾನು ಕೇಳ್ಕೊಳ್ಳೂದು ಇಶ್ಟೆಯ… ನಾಳೆಯಿಂದಲೇ ಹುಡುಗಿಯರು ಕ್ಯಾಂಟಿನ್ನಿಗೆ ಹೋಗಿಬರಲು ಅನುಕೂಲವನ್ನು ಮಾಡಿಸಿಕೊಡಿ ” ಎಂದು ಕೇಳಿಕೊಂಡು ವೇದಿಕೆಯಿಂದ ಕೆಳಗಿಳಿದಳು.

ಸಬೆಯು ಅರೆಗಳಿಗೆ ಮೂಕವಾಯಿತು. ಮರುಗಳಿಗೆಯಲ್ಲೇ…ಹುಡುಗಿಯರ ಪರವಾಗಿ ಸಣ್ಣಮ್ಮನು ಮಂಡಿಸಿದ ಬೇಡಿಕೆಯನ್ನು ಎತ್ತಿಹಿಡಿಯುವಂತೆ…ಅಲ್ಲಿದ್ದವರೆಲ್ಲರೂ ತಟ್ಟಿದ ಚಪ್ಪಾಳೆಯ ದನಿಯು ದೊಡ್ಡಕೊಟಡಿಯ ತುಂಬೆಲ್ಲಾ ಅನುರಣಿಸತೊಡಗಿತು.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *