ನವಣೆ ಉಣಿಸು ಬವಣೆ ಬಿಡಿಸು

ಸುನಿತಾ ಹಿರೇಮಟ.

Navane

ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ.
ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ.
ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ.
ನೋಡಾ, ಕಪಿಲಸಿದ್ದಮಲ್ಲಿಕಾರ‍್ಜುನಾ|

ಸಿದ್ದರಾಮೇಶ್ವರರ ಈ ವಚನ ಇಲ್ಲಿ ಎಶ್ಟೊಂದು ಸರಿ ಎನಿಸುತ್ತದೆ. ನವಣೆ ಒಂದು ಸತ್ವಯುತ ಕಿರುದಾನ್ಯ ನವಣೆಯಲ್ಲಿರುವ ಪೌಶ್ಟಿಕತೆ ಎಲ್ಲಕ್ಕಿಂತ ಮಿಗಿಲಾಗಿದದ್ದು ಎನ್ನುವುದೇ ಇಲ್ಲಿ ಅಡಕವಾಗಿರುವ ಮುಕ್ಯ ಅಂಶ. ಜಗತ್ತಿನಲ್ಲಿ ಅತಿ ಹೆಚ್ಚು ನವಣೆ ಬೆಳೆಯುವ ದೇಶಗಳ ಪೈಕಿ ಬಾರತವು ಒಂದು. ನವಣೆ ಬಾರತದ ಅತೀ ಪುರಾತನ ಸಿರಿದಾನ್ಯಗಳಲ್ಲಿ ಒಂದು. ಸಾವಿರಾರು ವರ‍್ಶಗಳ ಹಿಂದಿನ ಇತಿಹಾಸವಿರುವ ನವಣೆ ಇಂದಿಗೂ ನಾನಾ ಬಗೆಗಳಲ್ಲಿ ಬಳಕೆಯಲ್ಲಿರುವ ಸಿರಿದಾನ್ಯ.

ಬಾರತದಲ್ಲಿ ಕರ‍್ನಾಟಕ, ತಮಿಳುನಾಡು, ಆಂದ್ರ ಪ್ರದೇಶ, ಮಹಾರಾಶ್ಟ್ರ, ಉತ್ತರ ಪ್ರದೇಶ ಹಾಗು ಬಿಹಾರ ರಾಜ್ಯಗಳಲ್ಲಿ ನವಣೆಯನ್ನು ಬೆಳೆಯಲಾಗುತ್ತಿದೆ. ಕರ‍್ನಾಟಕದಲ್ಲಿ ದೊರೆಯುವ ತಳಿಗಳು ಎಂದರೆ ಕರಿ ನವಣೆ, ಕೆಂಪು ನವಣೆ, ಜಡೆ ನವಣೆ, ಹುಲ್ಲು ನವಣೆ, ಹಾಲು ನವಣೆ ಹೀಗೆ ಹಲವಾರು. ಒಂದೊಂದು ತಳಿಗು ಒಂದೊಂದು ವಿಶಿಶ್ಟ ಗುಣವಿದೆ.

ನವಣೆ, ಒಂದು ಸತ್ವಯುತ ಕಿರುದಾನ್ಯ ಹಾಗೂ ಅಲ್ಪಾವದಿ ಬೆಳೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಇದನ್ನು ಸುಲಬವಾಗಿ ಬೆಳೆಯ ಬಹುದು. ಕಡಿಮೆ ಆಳದ, ಹೆಚ್ಚು ಪಲವತ್ತತೆಯಿಲ್ಲದ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ, ಗುಡ್ಡಗಾಡು ಪ್ರದೇಶಗಳಲ್ಲೂ ಇದರ ಕ್ರುಶಿ ಸಾದ್ಯ. ಕೀಟ ಮತ್ತು ರೋಗ ನಿರೋದಕ ಶಕ್ತಿಯನ್ನು ನವಣೆ ಹೊಂದಿದೆ. ನವಣೆ ಬೆಳೆಯಲು ಜೂನ್-ಜುಲೈ ತಿಂಗಳುಗಳು ಸಕಾಲ. ಈ ಬೆಳೆಯನ್ನು ಮುಕ್ಯ ಬೆಳೆಯಾಗಿ ಬೆಳೆಯಬಹುದು, ಇಲ್ಲವೇ ತೊಗರಿ, ಎಳ್ಳು, ಹೆಸರು, ಮಡಕಿ ಜೊತೆ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಈ ಬೆಳೆ ಅತಿ ಕಡಿಮೆ ತೇವಾಂಶದಲ್ಲಿಯೂ ಬೆಳೆಯುವುದರಿಂದ ಬರಗಾಲದಂತಹ ಪರಿಸ್ತಿತಿಗೂ ನವಣೆ ಬೆಳೆ ಸೂಕ್ತವಾದದ್ದು. ನವಣೆಯ ತೆನೆಯು ಒಂದು ಗುಚ್ಚದಂತೆ ಇದೆ. ನವಣೆಯ ದಾನ್ಯ ತೀರಾ ಸಣ್ಣದಾಗಿದ್ದು ಕೆಂಪು ಮಿಶ್ರಿತ ಹಳದಿ ತುಸುಕಂದು ಹಾಗು ಕರಿಯ ಬಣ್ಣಗಳಲ್ಲಿವೆ.

ಒಂದು ನೂರು ಗ್ರಾಮ್ ನ ನವಣೆಯಲ್ಲಿ ಸಿಗುವ ಪೌಶ್ಟಿಕಾಂಶಗಳ ಮಾಹಿತಿ ನೋಡಿ.
Navaneನವಣೆಯ ಉಪಯೋಗಗಳು:

  • ನವಣೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಏರಿಸುವ ಅಂಶ ಕಡಿಮೆ ಪ್ರಮಾಣದಲ್ಲಿರುವುದರಿಂದ ಸಕ್ಕರೆ ರೋಗಿಗಳಿಗೆ ಸೂಕ್ತ ಆಹಾರ
  • ಇದರಲ್ಲಿನ ಗಂಜಿಯ (Starch) ಅಂಶ ನಿದಾನವಾಗಿ ಶಕ್ತಿಯಾಗಿ ಪರಿವರ‍್ತನೆಯಾಗುವ ವಿಶಿಶ್ಟ ಗುಣ ಹೊಂದಿದೆ
  • ನವಣೆ ಹೆಚ್ಚು ನಾರಿನಾಂಶ ಹೊಂದಿರುವುದರಿಂದ ದೇಹದ ಕೊಬ್ಬು ಕಡಿಮೆ ಮಾಡಲು ಸಹಯಕಾರಿ. ಅಲ್ಲದೆ ಮಲಬದ್ದತೆ, ಮೂಲವ್ಯಾದಿ ಅಂತಹ ಕಾಯಿಲೆಗಳು ಬರದಂತೆ ತಡೆಯುತ್ತದೆ
  • ನವಣೆಯಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ, ಇದರಿಂದ ಮೈಗೆ ಬೇಕಾಗಿರುವ ಒಳ್ಳೆಯ ಕೊಲೆಸ್ಟರಾಲ್ ಪ್ರಮಾಣ ಹೆಚ್ಚುತ್ತದೆ.

ರುಚಿ ನೀಡುವ ನವಣೆಯಿಂದ ಚಕ್ಕುಲಿ, ಅನ್ನ, ಎಣ್ಣೆ ಹೋಳಿಗೆ, ತಂಬಿಟ್ಟು, ಬುತ್ತಿ, ಚಿತ್ರನ್ನ, ಪುಳಿಯೋಗರೆ, ಅಂಬಲಿ, ಕುಸುಬಿ ಹಾಲು ಹಾಕಿದ ನವಣಕ್ಕಿ ಜಾರಿ, ಸಾಸುವೆ ಬುತ್ತಿ ಸಿದ್ದಪಡಿಸಬಹುದಾಗಿದೆ. ನವಣೆಯನ್ನು ಹೆಚ್ಚು ಬಳಸುವ ಸಲುವಾಗಿ ಇಂದಿನ ಅಡುಗೆಯಲ್ಲಿ ಬಿಸ್ಕಿಟ್, ನಿಪ್ಪಟ್ಟು, ಚಕ್ಕುಲಿ, ಇಡ್ಲಿ, ದೋಸೆ, ಬಿಸಿಬೇಳೆ ಬಾತ್, ಪಲಾವ್ ತಿನಿಸುಗಳನ್ನು ತಯಾರಿಸಬಹುದು.

ನವಣೆ ಗ್ರುಹ ಉದ್ಯಮಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ದೊರೆಯುವ ಕಚ್ಚಾ ಸಾಮಾಗ್ರಿಯಾಗಬಲ್ಲದು. ಇದರಿಂದ ರೈತರಿಗೂ ಮತ್ತು ಬಳಕೆದಾರರಿಗೂ ಅನುಕೂಲವಾಗುತ್ತದೆ. ಎಲ್ಲಾ ದಾನ್ಯಗಳನ್ನು ಆಹಾರದಲ್ಲಿ ಬಳಸುವುದರಿಂದ ಪೋಶಕಾಂಶಗಳು ಸುಲಬ ರೀತಿಯಲ್ಲಿ ಸಿಗುತ್ತದೆ. ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿ ನವಣೆ ಅತವಾ ಇತರೇ ಕಿರು ದಾನ್ಯಗಳನ್ನು ಬೆಳೆಯುವುದರಿಂದ, ತಮಗೂ ಅಹಾರವಾಗಿ ಬಳಸಿ ಹೆಚ್ಚಿನದನ್ನು ಮಾರಾಟ ಮಾಡಿ ಆರ‍್ತಿಕ ಪರಿಸ್ತಿತಿಯನ್ನು ಸುದಾರಿಸಿಕೊಳ್ಳಬಹುದು. ನವಣೆ ಮೇವು ಅತಿ ರುಚಿಕರವಾಗಿದ್ದು, ಜಾನುವಾರಗಳ ಮೇವಿಗಾಗಿಯು ಅತಿ ಬೇಡಿಕೆ ಇದೆ. ನವಣೆ ಮಾನವರಿಗೆ ಮತ್ತು ದನಕರುಗಳಿಗೆ ಒಳ್ಳೆಯ ಅಹಾರವಗಬಲ್ಲದು ಅಲ್ಲದೇ “ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ” ಎನ್ನುವ ಸಿದ್ದರಾಮೇಶ್ವರರ ವಚನದದಂತೆ ಒಕ್ಕಲ ಸಮುದಾಯಕ್ಕೆ ಒಳ್ಳೆಯ ವರವಂತು ನಿಜ.

(ಮಾಹಿತಿ ಸೆಲೆ: smallmillets.res.in)

(ಚಿತ್ರ ಸೆಲೆ: wikipedia)

(ವಚನಗಳ ಸೆಲೆ: vachanasanchaya)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ಕುಮಾರಸ್ವಾಮಿ says:

    ನವಣೆಯ ಮಹಿಮೆ ಚನ್ನಾಗಿ ಮೂಡಿಬಂದಿದೆ. ಒಳ್ಳೆಯ ಮಾಹಿತಿ…

  2. dhananjaya chandn says:

    ಒಳ್ಳೆಯ ಸಂದೇಶ

  1. 17/06/2016

    […] ನೆನಪಾಗುವುದು ಪಂಚದಾನ್ಯ ಹಾರಕ, ಕೊರ‍್ಲೆ, ನವಣೆ, ಬರಗು ಹಾಗು ಸಾಮೆ. ಇವುಗಳನ್ನು ನಮ್ಮ […]

ಅನಿಸಿಕೆ ಬರೆಯಿರಿ:

%d bloggers like this: