ಕನ್ನಡದ ತೇಜಸ್ವಿ

ಗಿರೀಶ್ ಕಾರ‍್ಗದ್ದೆ.

PURNACHANdra_tejaswi

ಪೂರ‍್ಣಚಂದ್ರ ತೇಜಸ್ವಿ ಕನ್ನಡದ ಒಂದಿಡೀ ತಲೆಮಾರನ್ನು ಪ್ರಬಾವಿಸಿದ ಕನ್ನಡದ ಮುಂಚೂಣಿಯ ಬರಹಗಾರರಲ್ಲಿ ಒಬ್ಬರು. ಮಲೆನಾಡಿನ ಮೂಡಿಗೆರೆಯಲ್ಲಿ ಕೂತು ಇಡೀ ಜಗತ್ತಿನ ಆಗುಹೋಗುಗಳನ್ನು ತಮ್ಮ ಸೊಗಸಾದ ಒಳನೋಟ ಮತ್ತು ಮನುಶ್ಯಸಹಜ ಕುತೂಹಲದಿಂದ ಗಮನಿಸಿ ಅದನ್ನು ಹಲವು ಆಯಾಮದಿಂದ ಬಗೆದು ನೋಡುತ್ತಿದ್ದರು. ಒಬ್ಬ ಬರಹಗಾರ, ವಿಜ್ನಾನಿ, ಅರ‍್ತಶಾಸ್ತ್ರಜ್ನ, ಇತಿಹಾಸಕಾರ, ಸಮಾಜಶಾಸ್ತ್ರಜ್ನ, ರಾಜಕೀಯ ಶಾಸ್ತ್ರಜ್ನ ಹೀಗೆ ಎಲ್ಲವೂ ಆಗಿದ್ದ ತೇಜಸ್ವಿಯವರ ಕರಾರುವಕ್ಕಾದ ವಿಚಾರಗಳು ಮತ್ತು ಮಾಡಿದ ಕೆಲಸಗಳು ಕನ್ನಡ ಸಮಾಜದ ಬಗ್ಗೆ ಕಳಕಳಿಯುಳ್ಳ ಪ್ರತಿಯೊಬ್ಬರಿಗೂ ಹಾಕಿಕೊಟ್ಟಿರುವ ಹಾದಿಯಾಗಿದೆ ಅನ್ನಬಹುದು.

ತೇಜಸ್ವಿಯವರ ಕರ‍್ವಾಲೋ, ಕಿರಗೂರಿನ ಗಯ್ಯಾಳಿಗಳು, ಅಬಚೂರಿನ ಪೋಸ್ಟಾಪೀಸು, ಪರಿಸರದ ಕತೆ ಮೊದಲಾದ ಬರಹಗಳದ್ದೇ ಒಂದು ತೂಕವಾದರೆ ಅವರು ಕನ್ನಡನಾಡಿನ ಆಗುಹೋಗುಗಳ ಬಗ್ಗೆ, ಒಕ್ಕೂಟವ್ಯವಸ್ತೆಯ, ಕನ್ನಡದಲ್ಲಿ ತಂತ್ರಜ್ನಾನ, ಹಿಂದಿಹೇರಿಕೆಯ ಬಗ್ಗೆ ಮತ್ತು ಒಟ್ಟಾರೆಯಾಗಿ ಕನ್ನಡಸಮಾಜ ಹಿಡಿಯಬೇಕಿರುವ ದಾರಿಯಬಗ್ಗೆ ಚಿಂತಿಸಿ ಬರೆದಿರುವ ಬರಹಗಳು ಹಾಗೂ ಮಾಡಿರುವ ಕೆಲಸಗಳದ್ದೇ ಮತ್ತೊಂದು ತೂಕವಾಗಿದೆ. ಕರ‍್ನಾಟಕದಲ್ಲಿ ಈಗ ನಡೆಯುತ್ತಿರುವ ಗಟನೆಗಳು ಮತ್ತು ಕನ್ನಡಬಾಶೆಯ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ನೋಡಿದಾಗ ತೇಜಸ್ವಿಯವರ ಕನ್ನಡಪರ ಚಿಂತನೆಗಳು ಹೆಚ್ಚು ಪ್ರಸ್ತುತವೆನಿಸುತ್ತದೆ.

ಒಕ್ಕೂಟ ವ್ಯವಸ್ತೆಯ ಆಶಯಗಳಿಗೆ ವಿರುದ್ದ ದಿಕ್ಕಿನಲ್ಲಿರುವ ಕೇಂದ್ರ ಸರ‍್ಕಾರದ ಹಿಂದಿ ಪ್ರೀತಿಯನ್ನು ಮತ್ತು ಅದರಿಂದ ಕನ್ನಡಿಗರ ಮೇಲಾಗಬಹುದಾಗ ಪರಿಣಾಮಗಳನ್ನು ತೇಜಸ್ವಿ ಬಹಳ ಹಿಂದೆಯೇ ವಿರೋದಿಸಿದ್ದರು. ಹಿಂದಿ ಒಪ್ಪಿಕೊಂಡರೆ ಕನ್ನಡಿಗರು ಎರಡನೆಯ ದರ‍್ಜೆಯ ನಾಗರೀಕರಾಗುತ್ತೀರಾ ಎಂದು ಎಚ್ಚರಿಸಿದ್ದರು, ಈ ಬಗ್ಗೆ ತೇಜಸ್ವಿಯವರ ಮಾತುಗಳನ್ನೇ ನೋಡಿ,

ಸಂಪರ‍್ಕ ಮಾದ್ಯಮಗಳ ಮುಕಾಂತರ, ಆಡಳಿತ ಮಾದ್ಯಮಗಳ ಮುಕಾಂತರ ಹಿಂದಿಯನ್ನು ಉಪಯೋಗಿಸಿ ಇತರ ಬಾಶೆಗಳ ಜನರನ್ನು ಎರಡನೆ ದರ‍್ಜೆ ಪ್ರಜೆಗಳನ್ನಾಗಿ ಕೇಂದ್ರ ಪರಿವರ‍್ತಿಸುತ್ತಿರುವುದು ನಮ್ಮೆಲ್ಲರ ಗಮನಕ್ಕೂ ಬಂದಿಲ್ಲವೇ?

ಇಂದು ಸೆಪ್ಟೆಂಬರ್-8 ತೇಜಸ್ವಿಯವರು ಹುಟ್ಟಿದ ದಿನ ಕಾಕತಾಳೀಯವೆಂಬಂತೆ ಇದೇ ತಿಂಗಳಲ್ಲಿ ಪ್ರತಿವರ‍್ಶ ಕೇಂದ್ರ ಸರ‍್ಕಾರವು ಹಿಂದಿ ಪಾಕ್ಶಿಕ ಎಂಬ ಹದಿನಯ್ದು ದಿನದ ಆಚರಣೆಯನ್ನು ಹಮ್ಮಿಕೊಳ್ಳುತ್ತದೆ ಮತ್ತು ಇದಕ್ಕಾಗಿ ಕೋಟಿಗಟ್ಟಲೆ ಹಣವನ್ನು ಎತ್ತಿಡಲಾಗುತ್ತದೆ.

ಕನ್ನಡದ ಮತ್ತು ಕನ್ನಡಿಗರ ಹಿತಕ್ಕಾಗಿ ಕನ್ನಡಿಗರು ಒಂದು ರಾಜಕೀಯ ಶಕ್ತಿಯಾಗಿ ಬೆಳೆಯಬೇಕೆಂಬುದು ತೇಜಸ್ವಿಯವರ ಕಚಿತವಾದ ನಿಲುವಾಗಿತ್ತು, ಕನ್ನಡಿಗರು ರಾಜಕೀಯವಾಗಿ ಬಲಗೊಳ್ಳದೆ ಹೋದರೆ ಕನ್ನಡಿಗರು ಎಲ್ಲವನ್ನೂ ಕಳೆದುಕೊಳ್ಳಬಹುದು ಎಂದು ಹೀಗೆ ಹೇಳುತ್ತಾರೆ,

ಕನ್ನಡಿಗರ ಆಶೋತ್ತರಗಳನ್ನು ಬಲವಾಗಿ ಪ್ರತಿಪಾದಿಸುವ ಪಕ್ಶ ಮತ್ತು ರಾಜಕಾರಣಿಗಳು ಕನ್ನಡನಾಡಿನಲ್ಲಿ ಇಲ್ಲದಿದ್ದರೆ ನಾವು ನದಿ ನೀರಿನಂತೆಯೇ ನಮ್ಮ ನೆಲವನ್ನೂ ಕಳೆದುಕೊಳ್ಳುತ್ತೇವೆ. ನಜರು ಒಪ್ಪಿಸುವ ಹುಜೂರುಗಳಾಗಿರುವ ನಮ್ಮ ಪ್ರಸ್ತುತ ರಾಜಕಾರಣಿಗಳು ತಾವು ಅದಿಕಾರದಲ್ಲಿ ಮುಂದುವರೆಯಲು ನಾಡಿನ ಹಿತಾಸಕ್ತಿಗಳನ್ನು ಅಲಕ್ಶಿಸಲು ಹೇಸುವುದಿಲ್ಲ

ಇತ್ತೀಚಿನ ರಾಜಕೀಯ ಆಗುಹೋಗುಗಳನ್ನು ನೋಡಿದಾಗ ರಾಶ್ಟ್ರೀಯ ಪಕ್ಶಗಳ ದೆಹಲಿಯ ಹಯ್ಕಮಾಂಡುಗಳು ಕರ‍್ನಾಟಕದ ನಾಯಕರುಗಳಿಗೆ ಮೂಗುದಾರ ಹಾಕುತ್ತಿದ್ದಾರೆ ಅನ್ನಿಸುವಂತ ಸ್ತಿತಿಯಿರುವಾಗ ತೇಜಸ್ವಿಯ ಈ ಮಾತುಗಳು ಹೆಚ್ಚು ಪ್ರಸ್ತುತವೆನಿಸುತ್ತವೆ.

ಕನ್ನಡ ಹಾಗೂ ಕನ್ನಡಿಗ ಪರವೆನ್ನಬಹುದಾದ ಎಲ್ಲವನ್ನೂ ಸಹ ತೇಜಸ್ವಿಯವರು ಎಶ್ಟು ಸೊಗಸಾಗಿ ಬಗೆದು ನೋಡುತ್ತಿದ್ದರು ಎಂಬುದಕ್ಕೆ ಕನ್ನಡ ನುಡಿಯಲ್ಲಿ ಅನಗತ್ಯವಾಗಿ, ಜನರ ಆಡುಮಾತಿನಲ್ಲಿಲ್ಲದ ಪದಗಳನ್ನು ಸೇರಿಸುವುದನ್ನು ವಿರೋದಿಸಿ ಹೇಳಿರುವ ಈ ಮಾತುಗಳನ್ನು ನೋಡಿ,

ಒಂದು ಕಡೆ ಇಂಗ್ಲಿಶ್ ಮೋಹದಲ್ಲಿ ರಾಜ್ಯಬಾಶೆಯ ವಿರುದ್ದ ಸದಾ ಕತ್ತಿ ಮಸೆಯುತ್ತಾ ಸರ‍್ಕಾರಿ ಆಜ್ನೆಗಳನ್ನೂ ಅಲಕ್ಶಿಸುವ ಅಯ್‌ಎ‍ಎಸ್ ಅದಿಕಾರಿಗಳು, ಇನ್ನೊಂದು ಕಡೆ ಕನ್ನಡವನ್ನು ಉದ್ದರಿಸುವ ಸೋಗು ಹಾಕಿಕೊಂಡು ’ಆರಕ್ಶಕ ಟಾಣೆ’ ’ಅಬಯಂತರವರ ಕಚೇರಿ’ ಎಂದು ವಕ್ರವಕ್ರ ಬೋರ‍್ಡು ತಗುಲಿಸುವ ಕನ್ನಡ ಅಂದಾಬಿಮಾನಿಗಳು, ಇಬ್ಬರೂ ಮೇಲು ನೋಟಕ್ಕೆ ಪರಸ್ಪರ ವಯ್ರಿಗಳಂತೆ ಕಂಡರೂ ಇಬ್ಬರೂ ಮಾಡುತ್ತಿರುವ ಕೆಲಸ ಒಂದೇ. ಕನ್ನಡದ ನಾಶ!

ಬರಹದ ಬಾಶೆಯನ್ನು ಜನರ ಆಡು ಮಾತಿನಿಂದ ದೂರ ದೂರ ಸರಿಸಿದರೆ ಅದು ಕನ್ನಡವನ್ನು ನಾಶಮಾಡುವ ಕೆಲಸವಾಗುತ್ತದೆ ಎಂದೇ ತೇಜಸ್ವಿಯವರು ಹೇಳುತ್ತಾ ಬಂದಿದ್ದರು, ಇದನ್ನು ಅವರು ತಮ್ಮ ಬರಹಗಳಲ್ಲಿ ಅಳವಡಿಸಿಕೊಂಡಿದ್ದರು. ಹೀಗೆ ಸರಳವಾಗಿ ಮನಮುಟ್ಟುವಂತೆ ಬರೆದಿದ್ದರಿಂದಲೇ ಅವರ ಬರಹಗಳು ಹೆಚ್ಚಿನ ಜನರನ್ನು ತಲುಪಲು ಸಾದ್ಯವಾಯಿತು.

ಕನ್ನಡದ ಪಾಟಪುಸ್ತಕಗಳಲ್ಲಿ ಬರುವ ಕಡು ಕಶ್ಟದ ಪದಗಳ ಬಗ್ಗೆ ತೇಜಸ್ವಿಯವರಿಗೆ ಇದೇ ತೆರನಾದ ನಿಲುವಿತ್ತು, ಇದನ್ನು ಅವರ ಮಾತುಗಳಲ್ಲೇ ನೋಡಿ,

ಕನ್ನಡ ಮಾದ್ಯಮದ ವಿಜ್ನಾನದ ಪಟ್ಯಪುಸ್ತಕವಂತೂ ಅದ್ವಾನದ ಪರಮಾವದಿಯಾಗಿದೆ. ಅಂತರಾಶ್ಟ್ರೀಯ ಪಾರಿಬಾಶಿಕ ಪದಗಳನ್ನೆಲ್ಲಾ ತರ‍್ಜುಮೆ ಮಾಡಿ ವಿದ್ಯಾರ‍್ತಿಗೆ ತಿಳಿದಿರುವುದೂ ಮರೆತುಹೋಗುವಂತೆ ಮಾಡಿದ್ದಾರೆ. ಕನ್ನಡಿಗರಿಗೆ ಚೆನ್ನಾಗಿ ಗೊತ್ತಿರುವ ಚಿರಪರಿಚಿತ ಪದಗಳನ್ನೂ ತೆಗೆದುಹಾಕಿ ಅಪರಿಚಿತ ಸಂಸ್ಕ್ರುತ ಶಬ್ದಗಳನ್ನು ತುಂಬಿ ಕನ್ನಡದ ಉದ್ದಾರ ಮಾಡಿದ್ದಾರೆ! ವೇಗವಾಗಿ ಬದಲಾಗುತ್ತಿರುವ ನಾಗರಿಕತೆಯ ಸವಾಲುಗಳನ್ನು ಅಶ್ಟೇ ವೇಗವಾಗಿ ಸ್ವೀಕರಿಸಿ ಅರಗಿಸಿಕೊಂಡು ಬೆರೆಯಲು ಸಮರ‍್ತವಾದರೆ ಹಾಗೂ ಹೊಸ ಪದಗಳಿಗೆ ಹೊಸ ವಾಕ್ಯ ರಚಿಸಿ ಆಲೋಚನೆಗಳಿಗೆ ಒಳಗಾದರೆ ಮಾತ್ರ ಕನ್ನಡ ಉಳಿಯುತ್ತದೆ

ಒಟ್ಟಾರೆಯಾಗಿ ಕನ್ನಡದ ಅರಿಮೆಯ ಪದಗಳು ಸುಲಬವಾಗಿ ಅರ‍್ತವಾಗುವಂತಿರಬೇಕೆಂದು ತೇಜಸ್ವಿಯವರು ಬಲವಾಗಿ ಪ್ರತಿಪಾದಿಸಿದ್ದರು.

ತಾಯಿನುಡಿಯಲ್ಲಿ ಕಲಿತರೆ ಮಾತ್ರ ನಮ್ಮ ಕಲಿಕೆಯು ಪರಿಣಾಮಕಾರಿ ಎಂಬುದನ್ನು ಜಗತ್ತೇ ಒಪ್ಪಿಕೊಂಡಿರುವ ಸತ್ಯ, ಇದರ ಬಗ್ಗೆ ಕಚಿತವಾದ ನಿಲುವನ್ನು ಹೊಂದಿದ್ದ ತೇಜಸ್ವಿಯವರು ತಾಯಿನುಡಿ ಕಲಿಕೆಯ ಬಗ್ಗೆ ಹೀಗೆ ಹೇಳುತ್ತಾರೆ,

ಯಾವ ವಿಚಾರವನ್ನು ಮಾತ್ರುಬಾಶೆಯಲ್ಲಿ ಕಲಿತರೇ ಮಕ್ಕಳು ಸರಿಯಾಗಿ ಗ್ರಹಿಸುವುದು. ಬಾಶೆ ಕಲಿಯುವುದಕ್ಕೂ ಆ ಬಾಶಾಮಾದ್ಯಮದಲ್ಲಿ ಇತರ ವಿಶಯಗಳನ್ನು ಕಲಿಯುವುದಕ್ಕೂ ವ್ಯತ್ಯಾಸವಿದೆ. ಇಂಗ್ಲಿಶ್ ಎಲ್ಲರೂ ಕಲಿಯಲಿ ಆದರೆ ಇಂಗ್ಲಿಶ್ ಮಾದ್ಯಮದಲ್ಲಿ ಕಲಿಯುವ ಅಗತ್ಯ ಇಲ್ಲ

ಇಂಗ್ಲಿಶ್ ಮಾದ್ಯಮದಲ್ಲಿ ಕಲಿತರೆ ಮಾತ್ರ ತಮ್ಮ ಮಕ್ಕಳಿಗೆ ಬವಿಶ್ಯವಿದೆ ಎಂಬ ತಪ್ಪು ನಿಲುವು ಹೊಂದಿರುವವರು ತೇಜಸ್ವಿಯವರ ಈ ಮಾತುಗಳನ್ನು ನೆನೆಯಬೇಕಿದೆ.

ಎಲ್ಲವೂ ದಿಲ್ಲಿಯಿಂದಲೇ ನಡೆಯಬೇಕು ಎಂಬ ನಮ್ಮ ದೇಶದ ಅತಿಕೇಂದ್ರಿತವಾದ ಆಡಳಿತ ಪದ್ದತಿಯೇ ನಮ್ಮ ಹಲವಾರು ಸಮಸ್ಯೆಗಳಿಗೆ ಮೂಲ ಕಾರಣ ಎಂಬುದು ನಿಜ. ಬಾರತದಂತಹ ಹಲತನದ ನಾಡಿನಲ್ಲಿ ಎಲ್ಲರಿಗೂ ಒಗ್ಗುವಂತಹ ಪಾಲಿಸಿಗಳನ್ನು ದಿಲ್ಲಿ ಮಟ್ಟದಲ್ಲಿ ಮಾಡುವುದು ಸಾದ್ಯವಿಲ್ಲ, ಹಾಗಾಗಿಯೇ ಇಲ್ಲಿ ಹೆಚ್ಚಿನ ಎಣಿಕೆಯಲ್ಲಿರುವವರಿಗೆ ಮನ್ನಣೆ ಸಿಗುತ್ತಿದೆಯೇ ಹೊರತು ಎಲ್ಲರಿಗೂ ಅಲ್ಲ. ಇದು ನಮ್ಮ ಆಡಳಿತದ ಪದ್ದತಿಯಲ್ಲಿರುವ ಒಂದು ತೊಡಕು, ಹಾಗಾಗಿಯೇ ಅದಿಕಾರವನ್ನು ಕೆಳಹಂತಕ್ಕೆ ಕೊಂಡೊಯ್ಯುವಂತಹ ವಿಕೇಂದ್ರೀಕರಣ ಅವಶ್ಯಕತೆಯಿದೆ. ಈ ಬಗ್ಗೆ ತೇಜಸ್ವಿಯವರ ಮಾತುಗಳಲ್ಲೇ ಕೇಳಿ,

ನಮ್ಮ ರಾಜಕಾರಣಿಗಳಲ್ಲಿ ಅನೇಕರು ಕೇಂದ್ರೀಕ್ರುತ ಆಡಳಿತ ಪದ್ದತಿಯ ರುಚಿ ಕಂಡಿದ್ದಾರೆ, ಹಳ್ಳಿಗಳ ಸಂಪತ್ತನ್ನೆಲ್ಲಾ ಸೂರೆ ಹೊಡೆದು ದಿಲ್ಲಿಯಲ್ಲಿ ದರ‍್ಬಾರು ನಡೆಸುತ್ತ ಮಜಾ ಉಡಾಯಿಸುವುದೇ ರಾಜಕಾರಣ ಎಂದು ತಿಳಿದಿದ್ದಾರೆ. ಅಬಿಪ್ರಾಯಗಳನ್ನು ಕಾನೂನುಗಳಿಂದ ಬಲಪ್ರಯೋಗಗಳಿಂದ ನಾಶಮಾಡಬಹುದೆಂದು ಬ್ರಮಿಸಿದ್ದಾರೆ. ಬ್ರಿಟಿಶರೂ ಒಮ್ಮೆ ಬಾರತ ಸ್ವಾತಂತ್ರ್ಯದ ಬಗ್ಗೆ ಹಾಗೇ ತಿಳಿದಿದ್ದರು.ಸೋವಿಯತ್ ರಶ್ಯಾದಲ್ಲೇ ಗೊರ‍್ಬಚೋವ್ ತಮ್ಮ ಒಕ್ಕೂಟದ ರಚನೆ ಬಗ್ಗೆ ಮಾತಾಡಲು ತಯ್ಯಾರಿರಬೇಕಾದರೆ ಬಾರತದಂತ ಪ್ರಜಾಪ್ರಬುತ್ವ ವ್ಯವಸ್ತೆಯಲ್ಲಿ ವಿಕೇಂದ್ರಿಕರಣದ ಬಗ್ಗೆ ಮಾತುಕತೆಯಾಡಿದರೂ ಮಯ್ಲಿಗೆಯಾಗುತ್ತದೆ, ದೇಶದ್ರೋಹ ಎಸಗಿದಂತಾಗುತ್ತದೆ ಎನ್ನುವವರು ನಿಜಕ್ಕೂ ದೇಶವನ್ನು ಅನಾಹುತಕ್ಕೆ ಒಯ್ಯುತ್ತಿದ್ದಾರೆ.

ಸರಿಸುಮಾರು ಮೂವತ್ತು ವರ‍್ಶಗಳ ಹಿಂದೆಯೇ ತೇಜಸ್ವಿಯವರು ಹೇಳಿದ ಈ ಮಾತುಗಳು ಎಂದೆಂದಿಗಿಂತ ಇವತ್ತಿನ ದಿನ ಹೆಚ್ಚು ಪ್ರಸ್ತುತವೆನಿಸುತ್ತದೆ, ತಮ್ಮ ಲಾಬಕ್ಕಾಗಿ ಎಲ್ಲವನ್ನು ಕೇಂದ್ರೀಕ್ರುತಗೊಳಿಸುವ ರಾಜಕಾರಣಿಗಳ ನಡೆಗಳು ಈ ನಾಡಿನ ಏಳಿಗೆಗೆ ಕೊಡುವ ಪೆಟ್ಟು ಎಂದು ತೇಜಸ್ವಿ ಪ್ರತಿಪಾದಿಸಿದ್ದರು.

ಹೀಗೆ ಪ್ರತಿಯೊಂದನ್ನೂ ತಮ್ಮ ಕನ್ನಡತನದ ಒಳನೋಟದಿಂದ ಕಂಡು ಅದನ್ನು ಸರಳವಾಗಿ ತೇಜಸ್ವಿಯವರು ಬರೆದಿಟ್ಟಿದ್ದಾರೆ, ತಮ್ಮ ಬದುಕಿನಲ್ಲಿಯೂ ಸಹ ಇದೇ ನಿಟ್ಟಿನಲ್ಲಿ ದೊಡ್ಡಮಟ್ಟದ ಕೆಲಸವನ್ನು ಮಾಡಿ ಕನ್ನಡ ಮತ್ತು ಕನ್ನಡಿಗರನ್ನು  ಬಲಗೊಳಿಸುವ ಕಳಕಳಿ ತೇಜಸ್ವಿಯವರಿಗಿದ್ದುದೇ ಅವರನ್ನು ಇತರರಿಗಿಂತ ಬೇರೆಯಾಗೆ ನೋಡುವಂತೆ ಮಾಡಿತ್ತು ಮತ್ತು ಹಲವರನ್ನು ಸೆಳೆದಿತ್ತು. ಅವರ ಆಲೋಚನೆಗಳನ್ನು ನಿಜರೂಪಕ್ಕೆ ತರುವುದೇ ಅವರ ಹುಟ್ಟುಹಬ್ಬಕ್ಕೆ ನಾವು ಕೊಡಬಹುದಾದ ದೊಡ್ಡ ಕಾಣಿಕೆಯಾಗಿದೆ.

(ಚಿತ್ರಸೆಲೆ: www.thehindu.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಬಿ.ಮಹೇಶ್ ಹರವೆ says:

    ತೇಜಸ್ವಿ ಅವರ ಬಗೆಗಿನ ನಿಮ್ಮ ಅಭಿಪ್ರಾಯ ಸಕಾಲಿಕ .

ಅನಿಸಿಕೆ ಬರೆಯಿರಿ: