ಚುಕ್ಕಿ-ಎಳೆಗಳ ಲೆಕ್ಕಾಚಾರದ ರಂಗೋಲಿ

ಸುನಿತಾ ಹಿರೇಮಟ.

Rangoliನಮ್ಮ ಹಳ್ಳಿ ಕಡೆ ಮಾತನ್ಯಾಗ ರಂಗೋಲಿಗಿ ಮುಗ್ಗು ಅಂತಾರ. ಅಂಗಳಕ್ಕ ಸಗಣಿ ಸಾರ‍್ಸಿ(ಈಗಿನ ಆಂಟಿಬೈಯೊಟಿಕ್ಸ ಪಾಲಿಸಿ), ಹೊಸ್ತಲಿಗೆ ಕೆಮ್ಮಣ್ಣು ಚಲೊತ್ನಂಗ ಮೆತ್ತಿ, ಮಗ್ಗ್ ಹಾಕಿ ಬಾರವಾ ಹೊತ್ತಾತು ಅಂದ್ರ ಆಗಿನ್ನು ಬೆಳಗಿನ ಐದು ಗಂಟೆ! ನಿಜ, ಆಗಿನ ದಿನಗಳು ಶುರು ಆಗ್ತಾ ಇದ್ದದ್ದೆ ಹೊತ್ತು ಮೂಡುವ ಮುಂಚೆ ಮುಂಬಾಗಿಲಿನ ಒಪ್ಪ ಓರಣದೊಂದಿಗೆ. ಊರಿನ ದೇಸಾಯಿಗಳ ಮನೆಯೇ ಇರಲಿ, ಜನಸಾಮಾನ್ಯರ ಮನೆಯೇ ಇರಲಿ, ಮನೆಯ ಮುಂದಿನ ಅಂಗಳ ಯಾವಾಗಲು ಶುಬ್ರ ಬಿಳಿಯ ರಂಗೋಲಿಯೊಂದಿಗೆ ಮುಗುಳು ನಗುತ್ತಿತ್ತು. ಹಚ್ಚ ಹಸಿರ ಮದ್ಯೆ ಬಿಳಿಯ ರಂಗಿನ ಚಿತ್ತಾರ.

ಅಲ್ಲಿ ಸ್ವಚ್ಚತೆ ಮತ್ತು ಸಮಯಪ್ರಗ್ನೆ ಎದ್ದು ಕಾಣುತ್ತಿತ್ತು. ಇದು ದಿನದಿನದ ಸಂಗತಿ ಆದರೆ ಹಬ್ಬಗಳ ಸಡಗರವೇ ಬೇರೆ, ಮೊದಲೆ ಸಿದ್ದ ಪಡಿಸಿದ ರಂಗೋಲಿ ಚಿತ್ತಾರ, ಅದಕ್ಕನುಗುಣವಾಗಿ ಸಿದ್ದಪಡಿಸಿದ ಬಣ್ಣ ಬಣ್ಣದ ರಂಗೋಲಿ ಪುಡಿ. ಸರಿ, ಇನ್ನೇನು ರಂಗೋಲಿ ಬಿಡಿಸುವ ಸಡಗರ ಶುರು. ರಂಗವಲ್ಲಿ ಬರಿಯ ಅಂಗಳಕ್ಕಶ್ಟೆ ಸೀಮಿತವಾಗಿರಲಿಲ್ಲ, ನೋಡುವ ವಸ್ತು ಮತ್ತು ಪ್ರಕ್ರುತಿಯ ವಿಸ್ಮಯಗಳನ್ನು ತಮ್ಮ ಪಡಸಾಲೆಯಲ್ಲಿ, ನಡುಮನೆಯ ಗೋಡೆಗಳ ಅಂಚಿನಲ್ಲಿ ಬರೆಯುತ್ತಿದ್ದರು. ಅಕ್ಕಿಯ ಹಿಟ್ಟಿನಿಂದ ಮಾಡಿದ ಗಂಜಿಯಿಂದ ಗಿಡ, ಮರ, ನವಿಲು, ಸೂರ‍್ಯ, ಚಂದ್ರ ಮತ್ತು ಇತರೆ ವಿಶಯಗಳನ್ನು ನೆನಪಿಸುವಂತೆ ಬರೆಯುತ್ತಿದ್ದರು. ಅಲ್ಲಿ ಅವರ ಕಲಾವಂತಿಕೆ ಪರಿಸರದ ಒಡನಾಟ ಮತ್ತು ಕಾಳಜಿ ಎದ್ದು ಕಾಣುತ್ತಿತ್ತು. ಇಂದಿಗೂ ಕೆಲವರ ಮನೆಗಳಲ್ಲಿ ಮದುವೆ ಮತ್ತು ಇತರೆ ಕೆಲವು ವಿಶೇಶ ದಿನಗಳಲ್ಲಿ ಇಂತಹ ಚಿತ್ತಾರಗಳನ್ನು ಬರೆಯುತ್ತಾರೆ.

ಹೌದು, ರಂಗೋಲಿ ಚಲುವಿನ ಚಿತ್ತಾರವೇ ಅಂತಹದ್ದು. ನೋಡ ನೋಡುತ್ತಿದ್ದಂತೆ ತನ್ನತ್ತ ನೋಡುಗರನ್ನ ಸೆಳೆಯುತ್ತದೆ. ಇನ್ನು ರಂಗೋಲಿ ಬಿಡಿಸುವ ಬೆರಳುಗಳ ನೈಪುಣ್ಯತೆ ಬಿಡಿಸಿದ ರಂಗೋಲಿ ಮೇಲೆ ಕಾಣುತ್ತಿತ್ತು, ಹೊಸಲಿನ ಮೇಲೆ ಸಣ್ಣನೆ ಎರಡೆಳೆ ದಾರದಂಗೆ ಮತ್ತು ಅಂಗಳದಲ್ಲಿ ನಮ್ಮ ಲೆಕ್ಕಚಾರಕ್ಕೆ ಕಡಿಮೆ ಇಲ್ಲದಂತೆ ಚುಕ್ಕಿಗಳ ಕರಾರುವಕ್ಕಾದ ಚಿತ್ತಾರ. “11 ರಿಂದ 1 ಸರಿ“, ಇಲ್ಲ “ಸೊಂದಿ ಚುಕ್ಕಿ“, ಹೀಗೆ ಅವರದೇ ಆದ ಲೆಕ್ಕ ಪದ್ದತಿ. ಅಲ್ಲು ಕೂಡ ಒಂದು ರಂಗೋಲಿ ಇರುವಂತಿಲ್ಲ ಜತೆಗೆ ಇನ್ನೊಂದು ಸಣ್ಣನೆ ಎಳೆ ಎಳೀಲೆಬೇಕು, ಇದು ಸಂಗಜೀವಿ ಅಂತ ತೋರಿಸೊ ಎಣಿಸಿಕೆ ಅಲ್ಲದೇ, ಎಲ್ಲೆಲ್ಲೂ ನಲಿವು ಮತ್ತು ಒಳ್ಳೆಯದನ್ನು ಸೂಚಿಸುವ ಸಂಕೇತವಾಗಿರುತ್ತದೆ.

ಇನ್ನು ರಂಗೋಲಿ ಪುಡಿ, ಇದರದು ಇನ್ನೊಂದು ವಿಶಯ. ಬಹಳ ಮಂದಿಗೆ ತಿಳಿದಿರಲಾರದು, ಗುಡ್ಡದಿಂದ ಆಯ್ದು ತಂದ ಬೆಳ್ಳನೆ ಕಲ್ಲುಗಳನ್ನು ಸರಿಯಾಗಿ ತೊಳೆದು ಸಣ್ಣ ಸಣ್ಣ ಕಲ್ಲುಗಳನ್ನಾಗಿ ಕುಟ್ಟಿ ಆನಂತರ ದೊಡ್ಡದಾದ ಕಲ್ಲಿನಡಿ ಹಾಕಿ ಗಂಟೆಗಟ್ಟಳೆ ರುಬ್ಬಿ ಜರಡಿ ಹಿಡಿದರೆ ಸಿಗುವುದೆ ಬೆಳ್ಳನೆ ಸಣ್ಣನೆ ರಂಗೋಲಿ ಪುಡಿ.

ಇನ್ನು ರಂಗೋಲಿ ಬಗ್ಗೆ ಹಲವು ಹತ್ತು ನಂಬಿಕೆಗಳಿವೆ ಆಚರಣೆಗಳಿವೆ. ಅದು ಅವರವರ ಬಾವಕ್ಕೆ, ಅವರವರ ಪದ್ದತಿಗೆ ತಕ್ಕಂತೆ.

  • ಮುಕ್ಯವಾಗಿ ಮನೆಗೆ ಬರುವ ಲಕ್ಹ್ಮಿಯನ್ನೂ ಸ್ವಾಗತಿಸಲು ಎಂದು ಹೇಳಲಾಗುತ್ತದೆ
  • ಬಾರತದಲ್ಲಿ ರಂಗೋಲಿಯು ಪುರಾತನ ಕಾಲದಿಂದಲೂ ಬಂದ ಮನೆಯಲಂಕಾರದ ಒಂದು ಕಲೆ. ಪುರಾಣ, ಜನಪದ, ಕತೆ ಕವನ, ಇತಿಹಾಸ ಮೊದಲಾದ ಸಾಹಿತ್ಯಗಳಲ್ಲಿ ರಂಗವಲ್ಲಿಯ ಉಲ್ಲೇಕಗಳಿವೆ. ರಂಗೋಲಿ ಹಾಕುವುದರ ಹಿಂದಿನ ಆದ್ಯಾತ್ಮ ಮತ್ತು ಶಾಸ್ತ್ರೀಯ ದ್ರುಶ್ಟಿಕೋನ ಬಾರತೀಯ ಸಂಸ್ಕ್ರುತಿ ಮತ್ತು ನಂಬುಗೆಗಳ ಸಾಕ್ಶಿ
  • ಇಡೀ ಬಾರತದಲ್ಲಿ ರಂಗೋಲಿಯನ್ನು 400 ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಶಿಣ ಬಾರತದ ತಮಿಳಿನಲ್ಲಿ ಕೋಲಮ್ ಎಂದು, ಆಂದ್ರದಲ್ಲಿ ಮುಗ್ಗು, ಕೇರಳದಲ್ಲಿ ಪೂಕಳಂ, ಒರಿಸ್ಸಾದಲ್ಲಿ ಓಸಾ, ಉತ್ತರಪ್ರದೇಶದಲ್ಲಿ ಸೋನಾರಚನಾ, ಗುಜರಾತಿನಲ್ಲಿ ಸಾತಿಯಾ ಹೀಗೆ ಹಲವಾರು.
  • ಮನೆಯ ಹೆಂಗೆಳೆಯರ ಅಚ್ಚು ಮೆಚ್ಚಿನ ಕಲೆಯಾದ ಈ ರಂಗೋಲಿ ರೂಪ, ಕ್ರಿಯಾಶೀಲತೆ, ಸಹನೆ, ತಾಳ್ಮೆ, ಪ್ರೀತಿ, ಸಂಪ್ರದಾಯಗಳ ಶಕ್ತಿಯಂತೆ, ಬಾವನೆಗಳ ಬಿಂಬಿಸುವ ಬಣ್ಣಗಳ ಶ್ರುಂಗಾರದದಂತೆ, ಈ ಚಿತ್ತಾರದಿಂದಲೇ ಮನ ಮನೆಯಂಗಳದ ಚೆಲುವನ್ನು ಹೆಚ್ಚಿಸುತ್ತದೆ.
  • ಬಾಶೆ, ಜಾತಿ, ಮತ ಬೇದವನ್ನರಿಯದೆ ಎಲ್ಲರೂ ಕಲಿಯಬಹುದಾದ ಕಲೆ. ಮಾತಿಗೆ ನಿಲುಕದ ಬಾವಪೂರ‍್ಣ ಸಾಕಾರ ಚಿಹ್ನೆಗಳ ಗುಚ್ಚವೇ ರಂಗುರಂಗಿನ ಈ ರಂಗೋಲಿ. ಹೀಗೆ ರಂಗೋಲಿಯು ಕೇವಲ ಅಲಂಕಾರಿಕ ವಸ್ತು ಆಗಿರದೆ, ಬಾರತೀಯ ಸಂಸ್ಕ್ರುತಿಯ ಅವಿಬಾಜ್ಯ ಅಂಗವಾಗಿ ನಮ್ಮ ಸಂಸ್ಕ್ರುತಿ, ಸಂಸ್ಕಾರ, ಕಲಾದರ‍್ಶನದ ಸಿರಿಯನ್ನು ಬಿಂಬಿಸುತ್ತದೆ.

ಇದೀಗ ಬದಲಾಗುತ್ತಿರುವ ಜನಜೀವನದಲ್ಲಿ ಹೊಸ್ತಿಲ ಮೇಲೆ ಕಾಯಂ ಆಗಿ ರಂಗೋಲಿಯನ್ನು ಬಣ್ಣ ಬಳಸಿ ಬರೆಯಲಾಗುತ್ತಿದೆ. ಹಾಗೆಯೇ ಪ್ಲಾಸ್ಟಿಕ್ನ ಸ್ಟಿಕರ್ ಸಾಂಪ್ರದಾಯಿಕ ರಂಗೋಲಿಯ ಸ್ತಾನವನ್ನು ಆಕ್ರಮಿಸಿವೆ. ಬೆರಳುಗಳ ಮದ್ಯೆ ರಂಗೋಲಿ ಪುಡಿ ಹಿಡಿದು ಅದು ಅಲ್ಲಿ ಇಲ್ಲಿ ಜಾರದಂತೆ ಚಿತ್ತಾರ ಬಿಡಿಸುವುದು ಕಶ್ಟದ ಕೆಲಸ. ಅದಕ್ಕೆ ಬಹಳಶ್ಟು ತಾಳ್ಮೆ, ಅನುಬವ, ಚಾಕಚಕ್ಯತೆ ಇರಬೇಕು. ಚುಕ್ಕಿ ರಂಗೋಲಿ ಇಡಲು ಹೋಗಿ ಚುಕ್ಕಿ ತಪ್ಪುವುದು, ಎಳೆ ರಂಗೋಲಿ ಇಡಲು ಪರದಾಡುವುದು ಎಲ್ಲವೂ ಕಶ್ಟ ಕಶ್ಟ ಎನ್ನುವವರು ಸುಣ್ಣದಕಡ್ಡಿಯಿಂದಲೆ ರಂಗೋಲಿ ಬಿಡಿಸುತ್ತಾರೆ. ಇಲ್ಲದಿದ್ದರೆ ಇದ್ದೆ ಇದೆಯಲ್ಲ. ಚಿಟಿಕೆಯ ಜಗತ್ತಿನಲ್ಲಿ ಚಿಟಿಕೆ ರಂಗೋಲಿ! ಪ್ಲಾಸ್ಟಿಕ್ ಹಾಳೆಯ ಮೇಲೆ ಅಚ್ಹಾದ ಬಣ್ಣ ಬಣ್ಣದ ಹರಳು, ಮಣಿ, ಲೇಸ್, ಕಸೂತಿದಾರ ಮುಂತಾದವನ್ನು ಗೋಂದು ಹಾಕಿ ಅಂಟಿಸಿ ಸಜ್ಜಾದ ಕಲಾತ್ಮಕ ಸಿದ್ದ-ರಂಗೋಲಿ (Ready Rangoli).

ಮನೆಯ ಹಿರಿಯರನ್ನ ನೋಡಿ ಸಣ್ಣವರು ರಂಗೋಲಿ ಹಾಕುವುದನ್ನು ಕಲಿಯುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಪುಟ್ಟಪುಟ್ಟ ಕೈಗಳು, ದೊಡ್ಡದೊಡ್ಡ ರಂಗೋಲಿ ಬಿಡಿಸುತ್ತಿದ್ದವು. ಹಬ್ಬದ ದಿನ ರಂಗೋಲಿ ಬಿಡಿಸಿ, ಮನೆಮಂದಿಯೆಲ್ಲರೂ ಬಣ್ಣ ತುಂಬುತ್ತಾ ಕುಶಿ ಪಡುತ್ತಿದ್ದರು. ಈಗ ಆ ಪರಿಸ್ತಿತಿ ಇಲ್ಲ. ಕಾರಣ ಮನೆ ಮುಂದೆ ರಂಗೋಲಿ ಹಾಕಲು ಜಾಗವಿಲ್ಲ. ಮನೆಯವರಿಗೆ ಬಿಡುವಿಲ್ಲ. ರಂಗೋಲಿ ಬಗ್ಗೆ ನೆನೆದಾಗ, ಬಾಲ್ಯವೇ ನೆನಪಾಗುತ್ತದೆ, ಬದುಕಿನಲ್ಲಿ ಬಾಲ್ಯವೇ ಒಂದು ಸುಂದರ ರಂಗೋಲಿ. ನನ್ನ ಮಗಳು ಆ ರಂಗೋಲಿ ಕಲಿಯಲಿ ಎಂದು ಮನಸು ಚುಕ್ಕಿ ಚಿತ್ತಾರ ಬಿಡಿಸುತ್ತದೆ.

(ಚಿತ್ರ ಸೆಲೆ: wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: