ಹಿಂದಿ ಹೇರಿಕೆಯೆಂಬ ಪಿಡುಗು

– ರತೀಶ ರತ್ನಾಕರ.

Himp

ಯಾವುದೇ ಒಂದು ಕೂಡಣಕ್ಕೆ ಪಿಡುಗುಗಳು ಬಂದಪ್ಪಳಿಸುವುದು, ಆ ಪಿಡುಗಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಮಂದಿಯು ಹೋರಾಟವನ್ನು ನಡೆಸುವುದು ಬಹಳ ಹಿಂದಿನಿಂದಲೂ ಬಂದಿದೆ. ಎತ್ತುಗೆಗೆ, ಸತೀ ಪದ್ದತಿ, ಹೆಣ್ಣು-ಬಸಿರುಕೂಸಿನ ಕೊಲೆ ಹೀಗೆ ಇಂತಹ ಪಿಡುಗುಗಳು ಕೂಡ ಒಂದು ಸಂತತಿಯ ಕೊನೆಗೆ ಮುನ್ನುಡಿ ಬರೆಯತೊಡಗಿದ್ದವು. ಇಂತಹ ಹಲವು ಪಿಡುಗಗಳಿಗೆ ಕೂಡಣದ ಮಂದಿಯು ಬಗೆಹರಿಕೆಗಳನ್ನು ಕಂಡುಹಿಡಿದು ಸರಿಪಡಿಸಿಕೊಂಡಿದ್ದಾರೆ, ಸರಿಪಡಿಸಿಕೊಳ್ಳುತ್ತಿದ್ದಾರೆ.

ಅರೆ! ಈಗೇಕೆ ಪಿಡುಗಿನ ವಿಚಾರ ಎನ್ನುವಿರಾ. ಕಾರಣವಿಶ್ಟೆ, ಹಲವು ನುಡಿಗಳ ಅಳಿವಿಗೆ ಮತ್ತು ಆ ಮೂಲಕ ಹಲವಾರು ನುಡಿಯಾಡುಗರ ಅಳಿವಿಗೆ ಮುನ್ನುಡಿ ಬರೆಯುತ್ತಿರುವ ಪಿಡುಗೊಂದು ನಮ್ಮ ಇಂಡಿಯಾದಲ್ಲಿ ಇದೆ. ಅದೇ ‘ಹಿಂದಿ ಹೇರಿಕೆ‘! ಮಂದಿಯಿಂದ ಆರಿಸಲ್ಪಟ್ಟ ಸರಕಾರವೇ ಈ ಪಿಡುಗನ್ನು ಹರಡುವ ಕೆಲಸವನ್ನು ಕೈಗೆತ್ತಿಕೊಂಡಿದೆ! ಈ ಪಿಡುಗಿಗೆ ಬಲಿಯಾಗುವುದು ಹಿಂದಿಯಲ್ಲದ ನುಡಿಗಳು ಮತ್ತು ನುಡಿಯಾಡುಗರು.

ಯಾವುದೇ ಒಂದು ನುಡಿಯ ಉಳಿವಿಗೆ ಮೂರು ವಿಶಯಗಳು ಮುಕ್ಯ ಪಾತ್ರ ವಹಿಸುತ್ತವೆ. ಒಂದು, ನುಡಿಯಾಡುಗರ ಮಂದಿಯೆಣಿಕೆ ಕಡಿಮೆಯಾಗದಿರುವುದು. ಎರೆಡು, ಮಂದಿಯು ಆ ನುಡಿಯಿಂದಲೇ ಬದುಕು ಕಟ್ಟಿಕೊಳ್ಳುವ ಏರ‍್ಪಾಡು ಇರುವುದು. ಕೊನೆಯದಾಗಿ, ಆಳ್ವಿಕೆಯಲ್ಲಿ (ಮಂದಿಯಾಳ್ವಿಕೆ ಇಲ್ಲವೇ ಅರಸಾಳ್ವಿಕೆ) ಆ ನುಡಿಯ ಬಳಕೆಯಾಗುವುದು ಮತ್ತು ಸಮಾನ ಸ್ತಾನಮಾನ ಕಾದುಕೊಳ್ಳುವುದು. ಒಂದಕ್ಕಿಂತ ಹೆಚ್ಚು ನುಡಿಯಾಡುಗರು ಒಂದೇ ಆಳ್ವಿಕೆಯಡಿ ಇದ್ದರೆ, ಆಗ ಒಂದು ನುಡಿಯನ್ನು ಇನ್ನೊಬ್ಬರ ಮೇಲೆ ಹೇರದಂತೆ, ಆಳ್ವಿಕೆಯಡಿ ಬರುವ ಎಲ್ಲಾ ನುಡಿಗಳಿಗೂ ಸಮಾನ ಸ್ತಾನಮಾನ ಕೊಡಬೇಕು. ಇದು ಆಳ್ವಿಕೆಯ ಜವಬ್ದಾರಿಯಾಗಿರುತ್ತದೆ ಮತ್ತು ಸಮಾನ ಸ್ತಾನಮಾನ ಕೇಳುವುದು ಮಂದಿಯ ಹಕ್ಕಾಗಿರುತ್ತದೆ.

ಕಳೆದ ಅರವತ್ತು ವರುಶಗಳಿಂದ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ನಡೆಯುತ್ತಲೇ ಇದೆ. ಬಗೆ ಬಗೆಯ ತಂತ್ರ-ಕುತಂತ್ರಗಳಿಂದ ಕೇಂದ್ರ ಸರಕಾರವು ಹಿಂದಿ ಹೇರಿಕೆಯ ಕೆಲಸವನ್ನು ನಡೆಸುತ್ತಾ ಬಂದಿದೆ. ಒಂದೇ ಮಂದಿಯಾಳ್ವಿಕೆಯಡಿ ಹಿಂದಿಯ ಜೊತೆಗೆ ಕನ್ನಡ, ತಮಿಳು, ಬೆಂಗಾಳಿಯಂತಹ ಹಿಂದಿಯಲ್ಲದ ನುಡಿಗಳಿದ್ದರೂ, ಹಿಂದಿಗೆ ಇನ್ನಿಲ್ಲದ ಮನ್ನಣೆ ನೀಡಿ ಹಿಂದಿಯಲ್ಲದ ನುಡಿಗಳನ್ನು ಮತ್ತು ನುಡಿಯಾಡುಗರನ್ನು ಎರಡನೇ ದರ‍್ಜೆಗೆ ದೂಡಲಾಗಿದೆ.

ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಆಡಳಿತದಲ್ಲಿ ಹಿಂದಿ ಹೇರಿಕೆಯಿಂದ ಹಲವು ತೊಂದರೆಗಳಾಗುತ್ತಿವೆ. ರೈಲು, ಗ್ಯಾಸ್ ನಂತಹ ಕೇಂದ್ರ ಸರಕಾರದ ಸೇವೆಗಳಲ್ಲಿ ಕನ್ನಡ ಇಲ್ಲದಿರುವುದು. ಬ್ಯಾಂಕ್, ಅಂಚೆ ಕಚೇರಿಯಂತಹ ಕೇಂದ್ರ ಸರಕಾರಿ ಕೆಲಸಕ್ಕೆ ಸೇರಲು ಹಿಂದಿಯನ್ನು ಅನಿವಾರ‍್ಯವಾಗಿಸಿರುವುದು. ತ್ರಿಬಾಶಾ ಸೂತ್ರದ ಹೆಸರಲ್ಲಿ ಮಕ್ಕಳ ಕಲಿಕೆಯಲ್ಲಿ ಹಿಂದಿಯನ್ನು ತುರುಕಿರುವುದು ಮತ್ತು ಕೇಂದ್ರಿಯ ವಿದ್ಯಾಲಯಗಳ ಮೂಲಕ ಹಿಂದಿಯನ್ನು ಹರಡತ್ತಿರುವುದು. ಒಟ್ಟಾರೆಯಾಗಿ, ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಆಡಳಿತದಲ್ಲಿ ಹಿಂದಿಯನ್ನು ತುರುಕಿ ಕನ್ನಡಿಗರ ಏಳಿಗೆಗೆ ತೊಡಕನ್ನು ಉಂಟುಮಾಡುತ್ತಿದೆ.

ಹಲವು ನುಡಿಗಳಿರುವ ಇಂಡಿಯಾದಲ್ಲಿ ಪೆಬ್ರವರಿ 21 ರಂದು ಆಚರಿಸುವ ವಿಶ್ವ ತಾಯ್ನುಡಿಯ ದಿನವನ್ನೋ (World Mother tongue language Day), ಮೇ 21 ರ ವಿಶ್ವ ಹಲತನದ ದಿನವನ್ನೋ (World Day for Cultural Diversity for Dialogue and Development) ಸರಕಾರವು ಆಚರಿಸಬೇಕಿತ್ತು. ಆದರೆ ಕೇಂದ್ರ ಸರಕಾರವು ‘ಹಿಂದಿ ದಿವಸ’ ವನ್ನು ಸೆಪ್ಟೆಂಬರ್ 14 ರಂದು ಆಚರಿಸುತ್ತಿದೆ. ಇದಕ್ಕಾಗಿ ನೂರಾರು ಕೋಟಿಗಳಶ್ಟು ಮಂದಿಯ ಹಣ ಬಳಕೆ ಮಾಡುತ್ತಿದೆ. ಆದರೆ ಕನ್ನಡ, ತಮಿಳು, ಬೆಂಗಾಳಿ, ತೆಲುಗು ಹೀಗೆ ಹಿಂದಿಯಲ್ಲದ ನುಡಿಗಳ ಆಚರಣೆಗೆ ಯಾವುದೇ ಒತ್ತನ್ನು ಕೊಡುತ್ತಿಲ್ಲ. ಹೀಗೆ ಕೇಂದ್ರ ಸರಕಾರವು ಹಿಂದಿಯಲ್ಲದ ನುಡಿಗಳಿಗೆ ಮಲತಾಯಿ ದೋರಣೆಯನ್ನು ತೋರುತ್ತಿದೆ ಎಂಬುದಕ್ಕೆ ಇದು ನೇರ ಉದಾಹರಣೆ.

ಮೊದಲೇ ತಿಳಿಸಿದಂತೆ ಹಿಂದಿ ಹೇರಿಕೆಯೆಂಬುದು ಒಂದು ದೊಡ್ಡ ಪಿಡುಗು. ಈ ಪಿಡುಗು ಕನ್ನಡಿಗರ ಏಳಿಗೆಗೆ ದೊಡ್ಡ ಕಂಟಕವಾಗಿದೆ. ಕೇಂದ್ರ ಸರಕಾರದ ‘ಹಿಂದಿ ದಿವಸ’ದ ಆಚರಣೆ ಈ ಪಿಡುಗನ್ನು ಮತ್ತಶ್ಟು ಹರಡಲು ಕೈಗೆತ್ತಿಕೊಂಡ ಕಾರ‍್ಯಕ್ರಮವಾಗಿದೆ. ಹಿಂದಿ ದಿವಸದಂತಹ ತಾರತಮ್ಯ ಎಸಗುವ ಕಾರ‍್ಯಕ್ರಮಗಳನ್ನು ವಿರೋದಿಸಿ, ಕನ್ನಡಿಗರು ಸಮಾನ ಸ್ತಾನಮಾನದ ಹಕ್ಕನ್ನು ಪಡೆದುಕೊಳ್ಳಬೇಕಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: