
ವಿಶ್ವ ತಾಯ್ನುಡಿಯ ದಿನ – ಒಗ್ಗಟ್ಟಿನತ್ತ ಒಂದು ಹೆಜ್ಜೆ
ಜಗತ್ತಿನೆಲ್ಲೆಡೆ ಪೆಬ್ರವರಿ 21 ನ್ನು “ವಿಶ್ವ ತಾಯ್ನುಡಿಯ ದಿನ” ಎಂದು ಆಚರಿಸಲಾಗುವುದು. ಜಗತ್ತಿನಲ್ಲಿರುವ ನುಡಿಯ ಹಲತನವನ್ನು, ಆಯಾ ನುಡಿಗಳ ಜೊತೆ ಬೆಳೆದು ಬಂದಿರುವ ಸಂಸ್ಕ್ರುತಿಯ ಹಲತನವನ್ನು ಮತ್ತು ಹಲನುಡಿತನವನ್ನು ಬೆಂಬಲಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುವುದು. 17 ನವೆಂಬರ್ 1999 ರಂದು ಯುನೆಸ್ಕೋನ ಸಾಮಾನ್ಯ ಸಬೆಯಲ್ಲಿ ಮೊತ್ತ ಮೊದಲ ಬಾರಿಗೆ ಇದರ ಆಚರಣೆಯ ನಿರ‍್ದಾರವನ್ನು ಕಯ್ಗೆತ್ತಿಕೊಳ್ಳಲಾಯಿತು. ಅಂತೆಯೇ, 21 ಪೆಬ್ರವರಿ 2000 ದಿಂದ ಪ್ರತಿ ವರುಶ ಈ ದಿನವನ್ನು ಆಚರಿಸುತ್ತಾ ಬರಲಾಗಿದೆ.
ಪೆಬ್ರವರಿ 21 ನ್ನು ಈ ಆಚರಣೆಗೆ ತೆಗೆದುಕೊಳ್ಳಲು ಆ ದಿನದ ಹಿಂದೆ ಒಂದು ಕತೆ ಇದೆ. 1952 ರಲ್ಲಿ, ಆಗಿನ್ನು ಬಾಂಗ್ಲಾದೇಶವು ಪಾಕಿಸ್ತಾನದಿಂದ ಬೇರ‍್ಪಟ್ಟಿರಲಿಲ್ಲ. ಆಗ ಪಾಕಿಸ್ತಾನ ಸರಕಾರವು ಉರ‍್ದುವನ್ನು ರಾಶ್ಟ್ರನುಡಿ ಎಂದು ಹೇಳಿ, ಬಾಂಗ್ಲಾದಲ್ಲಿ ಹೆಚ್ಚು ಬಳಕೆಯಲ್ಲಿದ್ದ ‘ಬಂಗಾಳಿ’ ನುಡಿಯನ್ನು ಕಡೆಗಣಿಸಿತ್ತು. ಬಂಗಾಳಿ ನುಡಿಯನ್ನು ಕೂಡ ರಾಶ್ಟ್ರನುಡಿ ಎಂದು ಪರಿಗಣಿಸಿ ಸಮಾನ ಸ್ತಾನಮಾನ ನೀಡಬೇಕೆಂದು ಹಲವು ಚಳುವಳಿಗಳು ನಡೆಯಲಾರಂಬಿಸಿದವು. ಅಂತಹ ಒಂದು ದೊಡ್ಡ ಚಳುವಳಿಯಲ್ಲಿ ಬಾಂಗ್ಲಾದ ಹಲವು ವಿದ್ಯಾರ‍್ತಿಗಳು, ಡಾಕಾ ನಗರದ ಹಯ್‍ಕೋರ‍್ಟ್ ಬಳಿ ಹೋರಾಟ ನಡೆಸುತ್ತಿದ್ದರು. ಆಗ ಪಾಕಿಸ್ತಾನ ಸರಕಾರವು ಸೆಕ್ಶನ್ ೧೪೪ನ್ನು ಜಾರಿಗೊಳಿಸಿ ಚಳುವಳಿಯಲ್ಲಿ ಪಾಲ್ಗೊಂಡ ವಿದ್ಯಾರ‍್ತಿಗಳನ್ನು ಗುಂಡಿಕ್ಕಿ ಕೊಂದಿತು. ಬಳಿಕ ಹೋರಾಟದ ತೀವ್ರತೆಗೆ ಬೆದರಿದ ಸರಕಾರ ಬಂಗಾಳಿ ನುಡಿಗೆ ಸಮಾನ ಸ್ತಾನಮಾನ ನೀಡಿತು. ತಾಯ್ನುಡಿಯ ಸ್ತಾನಮಾನಕ್ಕೆ ಹೋರಾಡಿ ಮಡಿದ ವಿದ್ಯಾರ‍್ತಿಗಳ ನೆನಪಿಗಾಗಿ ಈ ದಿನವನ್ನು ‘ವಿಶ್ವ ತಾಯ್ನುಡಿಯ ದಿನ’ವನ್ನಾಗಿ ಆಚರಿಸಲು ಯುನೆಸ್ಕೋ ತೀರ‍್ಮಾನಿಸಿತು.
ವಿಶ್ವ ತಾಯ್ನುಡಿಯ ದಿನದ ಹೆಚ್ಚುಗಾರಿಕೆಯನ್ನು ಯುನೆಸ್ಕೋ ಈ ಬಗೆಯಲ್ಲಿ ತಿಳಿಸುತ್ತದೆ:-
ಹಲವಾರು ವರುಶಗಳಿಂದ ಬೆಳೆದು ಬಂದ, ಅರಿಯಲಾಗುವ ಹಾಗು ಅರಿಯಲಾಗದ ಸಿರಿವಂತ ಪರಂಪರೆಯನ್ನು ಕಾಪಾಡಲು ಮತ್ತು ಬೆಳೆಸಲು ನುಡಿ ಎಂಬುದು ಒಂದು ಗಟ್ಟಿಯಾದ ಸಾದನವಾಗಿದೆ. ತಾಯ್ನುಡಿಯನ್ನು ಹರಡಲು ಕಯ್ಗೆತ್ತಿಕೊಳ್ಳುವ ಎಲ್ಲಾ ಕೆಲಸಗಳು ನುಡಿಯ ಹಲತನ ಮತ್ತು ಹಲನುಡಿಯ ಕಲಿಕೆಯನ್ನು ಬೆಂಬಲಿಸುವುದಲ್ಲದೇ, ನುಡಿಗಳ ಮತ್ತು ಸಂಸ್ಕ್ರುತಿಯ ನಡವಳಿಯ ಕುರಿತು ಜಗತ್ತಿಗೆ ಜಾಗ್ರುತಿಯನ್ನು ಮೂಡಿಸುವಲ್ಲಿ ನೆರವಾಗುತ್ತವೆ. ಆ ಮೂಲಕ ಕೂಡಣದಲ್ಲಿ ಒಗ್ಗಟ್ಟಾಗಿರುವುದನ್ನು ಮತ್ತು ಹೊಂದಿಕೊಂಡು ಹೋಗುವುದನ್ನು ಹುರಿದುಂಬಿಸಬೇಕಿದೆ.
ಪೆಬ್ರವರಿ 21 ರಂದು ಯುನೆಸ್ಕೊನ ಡಯ್‍ರೆಕ್ಟರ್ ಜನರಲ್ ಅವರು ವಿಶ್ವ ತಾಯ್ನುಡಿ ದಿನದ ಆರಂಬವನ್ನು ಮಾಡುತ್ತಾರೆ. ಯುನೆಸ್ಕೋ ಅಡಿಯಲ್ಲಿ ಬರುವ ನಾಡುಗಳು ವಿಶ್ವ ತಾಯ್ನುಡಿ ದಿನದ ಗುರಿಯನ್ನು ಈಡೇರಿಸುವಂತಹ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಾರೆ. ಆಯಾ ನಾಡಿನ ಸ್ಕೂಲು, ಕಾಲೇಜು ಹಾಗು ಸರಕಾರಿ ಕಚೇರಿಗಳಲ್ಲಿ ತಾಯ್ನುಡಿಯನ್ನು ಉಳಿಸಿ ಬೆಳಸಲು, ಹಲನುಡಿಯನ್ನು ಕಲಿಯಲು ಮತ್ತು ಸಂಸ್ಕ್ರುತಿಯನ್ನು ಕಾಪಾಡಲು ಹುರಿದುಂಬಿಸುವಂತಹ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆ ಮೂಲಕ ತಾಯ್ನುಡಿಯ ಹೆಚ್ಚುಗಾರಿಕೆಯನ್ನು ಎಲ್ಲರಿಗೂ ತಿಳಿಯಪಡಿಸಲಾಗುವುದು.
ಯುನೆಸ್ಕೋ ಹಮ್ಮಿಕೊಂಡಿರುವ ಈ ದಿನ ದಿಟವಾಗಿಯು ಮೆಚ್ಚುವಂತಹದು. ಒಂದು ನಾಡಿನಲ್ಲಿ ಇಲ್ಲವೇ ಒಟ್ಟು ಜಗತ್ತಿನಲ್ಲಿ ಒಗ್ಗಟ್ಟನ್ನು ಸಾದಿಸಬೇಕೆಂದರೆ, ತಾನು ಇನ್ನೊಂದು ನುಡಿಯನ್ನು ಗವ್ರವಿಸುವುದು ಮತ್ತು ಇನ್ನೊಬ್ಬನನ್ನು ತನ್ನ ನುಡಿಯನ್ನು ಗವ್ರವಿಸುವಂತೆ ನಡೆದುಕೊಳ್ಳುವುದು. ತನ್ನ ತಾಯ್ನುಡಿಯ ಹೆಚ್ಚುಗಾರಿಕೆ ತನಗೆ ಸರಿಯಾಗಿ ತಿಳಿದಿದ್ದು ಅದನ್ನು ಬೇರೆ ತಾಯ್ನುಡಿಯ ಮಂದಿಗೂ ತಿಳಿಯಪಡಿಸಿದರೆ ತನ್ನಿಂತಾನೆ ಹೊಂದಿಕೆ ಎಂಬುದು ಹುಟ್ಟಿ ಬರುವುದು ಮತ್ತು ಆ ಮೂಲಕ ಒಗ್ಗಟ್ಟು ಹುಟ್ಟುವುದು. ಇದನ್ನು ಬಿಟ್ಟು, ಒಂದು ನಾಡಿಗೆ ಒಂದೇ ನುಡಿಯಿದ್ದರೆ ಮಾತ್ರ ಒಗ್ಗಟ್ಟು ಸಾದ್ಯ ಎಂದು ಬೇರೊಂದು ನುಡಿಯನ್ನು ಮಂದಿಯ ಮೇಲೆ ಹೇರಿದರೆ, ಇಲ್ಲವೇ ನುಡಿಗಳ ನಡುವೆ ತಾರತಮ್ಯ ಎಸಗಿದರೆ ಒಗ್ಗಟ್ಟಿನ ನಾಡನ್ನು ಕಟ್ಟಲು ಎಂದಿಗೂ ಸಾದ್ಯವಿಲ್ಲ.
1 ಅನಿಸಿಕೆ