ಹೊಂದಾಣಿಕೆ ಮತ್ತು ಏಳಿಗೆಗಾಗಿ ವಿಶ್ವ ಹಲತನದ ದಿನ

– ರತೀಶ ರತ್ನಾಕರ.

multi-colored-hands-connected

ನಮ್ಮಲ್ಲಿರುವ ಸಂಸ್ಕ್ರುತಿಯ ಹಲತನವು ಹೊಸದನ್ನು ಹುಟ್ಟುಹಾಕಲು ಹುರಿದುಂಬಿಸುತ್ತದೆ. ಇಂತಹ ಹೊಸತನಕ್ಕೆ ಹಣಹೂಡುವುದರಿಂದ ಕೂಡಣದಲ್ಲಿ ಸಾಕಶ್ಟು ಬದಲಾವಣೆ ತರಬಹುದು. ಜಗತ್ತಿನಲ್ಲಿರುವ ಹಲತನವನ್ನು ಉಳಿಸಿಕೊಳ್ಳಲು ಮತ್ತು ನುಡಿ, ಸಂಸ್ಕ್ರುತಿ ಮತ್ತು ದರ‍್ಮಗಳ ಹಲತನದ ನಡುವೆ ಹೊಂದಿಕೊಂಡು ಬಾಳುವುದನ್ನು ಕಲಿಸಲು ಬೇಕಾದ ಕಲಿಕೆ ಹಾಗು ನಡೆ-ನುಡಿ ಚಳಕಗಳನ್ನು ಈಗಿನ ಯುವ ಪೀಳಿಗೆಗೆ ನೀಡಬೇಕಿದೆ. ಆ ಮೂಲಕ ಕೂಡಣದಲ್ಲಿ ಬದಲಾವಣೆಯನ್ನು ತರಬಹುದಾಗಿದೆ. ಇದಕ್ಕೆ ತಕ್ಕುದಾದ ಬೆಳವಣಿಗೆ ನಡೆಸುವ ಹೊಣೆ ನಮ್ಮ ಮೇಲಿದೆ.

ಅಯ್ರೀನ ಬೊಕೋವಾ, ಡಯ್ರೆಕ್ಟರ್ ಆಪ್ ಜನರಲ್, ಯುನೆಸ್ಕೋ.

ಹವ್ದು, ಮೇಲಿನ ಮಾತುಗಳು ನೂರಕ್ಕೆ ನೂರರಶ್ಟು ದಿಟ. ನಮ್ಮ ಬೆಳವಣಿಗೆಯಲ್ಲಿ ಹಲತನದ ಪಾತ್ರ ದೊಡ್ಡದು, ಅದನ್ನು ಕಾಪಾಡುವುದರಿಂದ ಮಂದಿಯ ಏಳಿಗೆಗೆ ದಾರಿ ಮಾಡಿಕೊಡುವುದು. ಈ ನಿಟ್ಟಿನಲ್ಲಿ ಯುನೆಸ್ಕೋ ಪ್ರತಿ ವರುಶದ ಮೇ 21 ರಂದು ‘ವಿಶ್ವ ಸಂಸ್ಕ್ರುತಿಯ ಹಲತನದ ದಿನ’ವನ್ನು ಆಚರಿಸಲು ಕರೆ ಕೊಟ್ಟಿದೆ. ‘ಹೊಂದಿಕೆ ಮತ್ತು ಏಳಿಗೆಗಾಗಿ ವಿಶ್ವ ಸಂಸ್ಕ್ರುತಿಯ ಹಲತನದ ದಿನ’ವೆಂದೇ ಇದನ್ನು ಕರೆಯಲಾಗುತ್ತದೆ. ಸಂಸ್ಕ್ರುತಿಯ ಹಲತನದ ಹೆಚ್ಚುಗಾರಿಕೆ ಮತ್ತು ಹಲತನದ ನಡುವೆ ಹೊಂದಿಕೊಂಡು ಹೋಗುವುದರ ಕುರಿತು ಮಂದಿಯಲ್ಲಿ ಜಾಗ್ರುತಿಯನ್ನು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಹಿನ್ನಲೆ:
ಸೆಪ್ಟೆಂಬರ್ 11, 2001 ರಲ್ಲಿ ಅಮೇರಿಕಾದ ಅವಳಿ ಗೋಪುರಗಳ ಮೇಲೆ ಉಗ್ರಗಾಮಿ ದಾಳಿ ನಡೆದಿತ್ತು. ಮುಂದೆ ಇಂತಹ ದುರಂತಗಳನ್ನು ತಪ್ಪಿಸಲು ಮಂದಿಯ ನಡುವೆ ತಮ್ಮ ತಮ್ಮ ಸಂಸ್ಕ್ರುತಿ, ನುಡಿ ಹಾಗು ದರ‍್ಮಗಳ ನಡುವೆ ಸಾಮರಸ್ಯ ತಂದು ಹೊಂದಿಕೊಂಡು ಹೋಗುವ ಏರ‍್ಪಾಡನ್ನು ಮಾಡಬೇಕಿತ್ತು. ಸಂಸ್ಕ್ರುತಿ, ನುಡಿ ಹಾಗು ದರ‍್ಮದ ಹೆಸರನಲ್ಲಿ ಆಗುವ ಬಿರುಕು ಮತ್ತು ಮೂಲಬೂತವಾದವನ್ನು ತಡೆಹಿಡಿಯಬೇಕಿತ್ತು. ಒಬ್ಬರನ್ನೊಬ್ಬರು ಅರಿತುಕೊಂಡು, ಗವ್ರವಿಸಿಕೊಂಡು ಬದುಕುವುದನ್ನು ಹುರಿದುಂಬಿಸಬೇಕಿತ್ತು. ಅದಕ್ಕಾಗಿ ನವೆಂಬರ್ 1, 2002ರಂದು ಪ್ಯಾರಿಸ್‍ನಲ್ಲಿ ನಡೆದ ಯುನೆಸ್ಕೋ ಸಾಮಾನ್ಯ ಸಬೆಯಲ್ಲಿ ಹಲತನದ ದಿನವನ್ನು ಆಚರಿಸುವ ತೀರ‍್ಮಾನವನ್ನು ತೆಗೆದುಕೊಳ್ಳಲಾಯಿತು. ಅದರಂತೆ ವಿಶ್ವಸಂಸ್ತೆಯು ಡಿಸೆಂಬರ್ 20, 2002 ರಲ್ಲಿ ‘ವಿಶ್ವ ಹಲತನದ ದಿನ’ವನ್ನು “ಮೇ 21ಕ್ಕೆ” ಆಚರಿಸುವಂತೆ ತೀರ‍್ಮಾನಿಸಿತು.

ಹಲತನದ ದಿನದ ಗುರಿಗಳು:

1. ಮಂದಿಯ ನಡುವಿನ ಹೊಂದಾಣಿಕೆ, ಹಲತನ ಮತ್ತು ಒಗ್ಗೂಡುವಿಕೆಯ ಹೆಚ್ಚುಗಾರಿಕೆ ಕುರಿತು ವಿಶ್ವಾದ್ಯಂತ ಅರಿವು ಮೂಡಿಸವುದು.
2. ನಿಜಜೀವನದ ದಿನನಿತ್ಯದ ಆಗುಹೋಗುಗಳಲ್ಲಿ ಹಲತನದ ಬೆಂಬಲಕ್ಕೆ ಬದ್ದವಾಗಿರುವ ಮಂದಿಯ ಗುಂಪನ್ನು ಕಟ್ಟುವುದು.
3. ಗುಂಪುಗಾರಿಕೆ ಮತ್ತು ಎಲ್ಲರೂ ಒಂದೇ ದರ‍್ಮ, ಸಂಸ್ಕ್ರುತಿ ಮತ್ತು ನುಡಿಯ ಅಡಿಗೆ ಬರಬೇಕು ಎನ್ನುವ ಮೊಂಡುವಾದವನ್ನು ಎದುರಿಸಿ, ಇರುವ ಹಲತನವನ್ನು ಗವ್ರವಿಸಿ, ಬೇರೆ ಬೇರೆ ಸಂಸ್ಕ್ರುತಿಯ ಮಂದಿಗಳ ನಡುವೆ ತಿಳುವಳಿಕೆ ಮತ್ತು ನೆರವನ್ನು ಸುದಾರಿಸುವುದು.

ಮೇಲಿನ ಗುರಿಗಳನ್ನು ಇಟ್ಟುಕೊಂಡಿರುವ ಹಲತನದ ದಿನದಂದು ಮಂದಿಯ ನಡುವಿನ ಸಂಸ್ಕ್ರುತಿ, ನುಡಿ ಮತ್ತು ದರ್‍ಮದ ಕುರಿತು ಸಾಮರಸ್ಯ ಮೂಡಿಸುವಂತಹ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜಗತ್ತಿನಲ್ಲಿರುವ ಹಲತನದ ಪರಿಚಯವನ್ನು ಜನರಿಗೆ ಮಾಡಿಕೊಟ್ಟು, ಹಲತನದ ನಡುವೆ ಹೊಂದಿಕೊಂಡು ಹೋಗಬೇಕಾದ ಅಗತ್ಯತೆಯನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಹಲತನವನ್ನು ಗವ್ರವಿಸಿ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದರಿಂದ ಜಗತ್ತಿನ ಏಳಿಗೆ ಸಾದ್ಯ ಎಂಬುದನ್ನು ಬಗೆಬಗೆಯ ಕಾರ‍್ಯಕ್ರಮಗಳ ಮೂಲಕ ತಿಳಿಸಿಕೊಡಲಾಗುತ್ತದೆ.

ಹೀಗೆ, ಹಲತನದ ಹೆಚ್ಚುಗಾರಿಕೆಯನ್ನು ಅರಿತಿರುವ ವಿಶ್ವಸಂಸ್ತೆ ಮತ್ತು ಯುನೆಸ್ಕೋ ’ಹಲತನದ ದಿನ’ದ ಆಚರಣೆಯನ್ನು ಹುರಿದುಂಬಿಸುತ್ತಿರುವುದು ಒಳ್ಳೆಯದಾಗಿದೆ. ಹಲತನದ ವಿಶಯಕ್ಕೆ ಬಂದರೆ ಇಂಡಿಯಾವು ಕೂಡ ಅತಿಹೆಚ್ಚು ಹಲತನವನ್ನು ಹೊಂದಿರುವ ನಾಡು. ಬೇರೆ ಬೇರೆ ಸಂಸ್ಕ್ರುತಿಗಳು, ನುಡಿಗಳು ಮತ್ತು ದರ‍್ಮಗಳು ನೆಲೆಗೊಂಡಿರುವ ನಾಡು. ಇಲ್ಲಿ ಎಲ್ಲಾ ಸಂಸ್ಕ್ರುತಿ ಮತ್ತು ನುಡಿಗಳಿಗೆ ಒಂದೇ ಬಗೆಯ ಸ್ತಾನಮಾನವನ್ನು ನೀಡಬೇಕು. ಹಲತನದ ನಡುವೆ ಬದುಕು ನಡೆಸುತ್ತಿರುವ ಮಂದಿ ಹೊಂದಾಣಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಒಂದು ನುಡಿ ಇಲ್ಲವೇ ಸಂಸ್ಕ್ರುತಿಗೆ ಹೆಚ್ಚಿನ ಸ್ತಾನಮಾನ ನೀಡಿ ಇನ್ನೊಂದನ್ನು ಎರೆಡನೇ ಜಾಗದಲ್ಲಿರಿಸಿದಾಗ ಮಂದಿಯ ನಡುವಿನ ಹೊಂದಾಣಿಕೆ ಅಲುಗಾಡುತ್ತದೆ ಮತ್ತು ಆ ಮೂಲಕ ಒಗ್ಗಟ್ಟು ಒಡೆಯುತ್ತದೆ.

ನಮ್ಮಲ್ಲಿರುವ ಹಲತನವನ್ನು ನಮ್ಮ ಬೆಳವಣಿಗೆಗೆ ನೆರವಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ತಾರತಮ್ಯವನ್ನು ಬದಿಗಿಟ್ಟು ಹಲತನವನ್ನು ಗವ್ರವಿಸಿದರೆ ಒಗ್ಗಟ್ಟು ತಾನಾಗಿಯೇ ಮೂಡುತ್ತದೆ ಮತ್ತು ಅದರಿಂದ ನಾಡಿನ ಏಳಿಗೆ ಸಾದ್ಯ. ಈ ನಿಟ್ಟಿನಲ್ಲಿ ಸರಕಾರದ ಪಾತ್ರ ಬಹುದೊಡ್ಡದಿದೆ. ಸರಕಾರದ ಕಾನೂನು-ಕಾಯ್ದೆ ಹಾಗು ಆಚರಣೆಗಳಲ್ಲಿ, ಎಲ್ಲಾ ಸಂಸ್ಕ್ರುತಿ ಮತ್ತು ನುಡಿಗೆ ಒಂದೇ ಬಗೆಯ ಮನ್ನಣೆಯನ್ನು ನೀಡಿ ಸಾಮರಸ್ಯವನ್ನು ಕಾಯ್ದುಕೊಳ್ಳಬೇಕಿದೆ. ಆ ಮೂಲಕ ಏಳಿಗೆಗೆ ನಾಂದಿ ಹಾಡಬೇಕಿದೆ.

(ಮಾಹಿತಿ ಸೆಲೆ: un.org)

(ಚಿತ್ರ ಸೆಲೆ: bitrebels.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 11/09/2014

    […] ದಿನವನ್ನೋ (World Mother tongue language Day), ಮೇ 21 ರ ವಿಶ್ವ ಹಲತನದ ದಿನವನ್ನೋ (World Day for Cultural Diversity for Dialogue and Development) […]

ಅನಿಸಿಕೆ ಬರೆಯಿರಿ: