ಇಡುಗಂಟಿನ ಇರ‍್ತನ

 ಬರತ್ ಕುಮಾರ್.

capitalism_600px-1

ಹಿಂದಿನ ಬರಹದಲ್ಲಿ ದುಡ್ಡು ಅಂದರೇನು ಮತ್ತು ಅದು ಹೇಗೆ ಬಳಕೆಗೆ ಬಂದಿತು ಎಂಬುದರ ಬಗ್ಗೆ ತಿಳಿದುಕೊಂಡೆವು. ಈ ಬರಹದಲ್ಲಿ ಇಡುಗಂಟು(Capital) ಎಂದರೇನು ಮತ್ತು ಅದರ ಪರಿಚೆಗಳೇನು(characteristics) ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಇಡುಗಂಟನ್ನು ಅರ‍್ತ ಮಾಡಿಕೊಳ್ಳುವ ಮೊದಲು ನಾವು ಇರ‍್ತನ(Duality) ಬಗ್ಗೆ ತಿಳಿದುಕೊಳ್ಳಬೇಕಾಗಿದೆ.

ಇರ‍್ತನ

ಪುರುಳರಿಮೆ(Physics)ಯಲ್ಲಿ ಬೆಳಕನ್ನು ಕೆಲವೊಮ್ಮೆ ಅಲೆ ಎಂದೂ ಇನ್ನು ಕೆಲವೊಮ್ಮೆ ತುಣುಕು ಎಂದೂ ಪರಿಗಣಿಸಿ ಅದರ ಪರಿಚೆಗಳನ್ನು ವಿವರಿಸಲಾಗುತ್ತದೆ. ನ್ಯೂಟನ್ ತುಣುಕು ತಿಳಿವನ್ನು(Particle theory) ಬಣ್ಣಿಸಿದರೆ, ಹಯ್ಗಿನ್ಸ್ ಅಲೆ ತಿಳಿವನ್ನು(Wave Theory) ಎತ್ತಿಹಿಡಿಯುತ್ತಾನೆ. ಆದರೆ ಈ ಎರಡು ತಿಳಿವನ್ನು ಅರಗಿಸಿ ಮುಂದೆ ಲೂಯಿಸ್ ಡಿ ಬ್ರೊಗಯ್ಲ್ ಅಲೆ-ತುಣುಕು ಇರ‍್ತನವನ್ನು ತಮ್ಮ ಇರ‍್ತನ ತಿಳಿವಿನ(Duality Theory) ಮೂಲಕ ತೋರಿಸಿಕೊಡುತ್ತಾನೆ. ಅಂದರೆ ಬರೀ ಬೆಳಕಲ್ಲದೇ ನಮ್ಮ ಸುತ್ತಲಿರುವ ಎಲ್ಲದರಲ್ಲೂ ಅಲೆ-ತುಣುಕು ಪರಿಚೆಗಳನ್ನು ಕಾಣಬಹುದಾಗಿದೆ ಎಂಬುದೇ ಅವನ ವಾದದ ತಿರುಳು.

ನಮ್ಮ ಸುತ್ತಲಿರುವ ವಸ್ತುಗಳ ಇರ‍್ತನವನ್ನು ಅರಿಯದೆ ಅವುಗಳ ಬಗ್ಗೆ ನೆರೆಯಾಗಿ ತಿಳಿಯಲಾಗುವುದಿಲ್ಲ. ಅದೇ ರೀತಿ ನಮ್ಮ ಒಳಗೇ ಇರುವ ಬಗೆ(mind) ಮತ್ತು ಮಿದುಳು(brain) ಎಂಬುದಕ್ಕೂ ಇದೇ ಇರ‍್ತನವಿದೆ. ಬಗೆಗೆ ಹೊತ್ತು ಮತ್ತು ಎಡೆಯ ಮಿತಿಗಳನ್ನು ಹಾಕಲಾಗುವುದಿಲ್ಲ ಆದರೆ ಮಿದುಳು ಯಾವಾಗಲೂ ತಲೆಯಲ್ಲೇ ಇದ್ದು ಕೆಲಸ ಮಾಡುತ್ತಿರುತ್ತದೆ. ಮೊದಮೊದಲು ಈ ಇರ‍್ತನಗಳನ್ನು ತನ್ನೆದುರ‍್ತನ(contradiction) ಎಂದು ಬಗೆದು ಟೀಕಿಸಿದವರೇ ಹೆಚ್ಚು. ಆದರೆ ಇರ‍್ತನವೂ ಕೂಡ ತಾನಾಗಿಯೇ ಉಂಟಾದುದು ಹಾಗಾಗಿ ಅದನ್ನು ಒಪ್ಪಿಕೊಳ್ಳುವುದೇ ಸರಿ ಎಂದು ಆಮೇಲೆ ಬಗೆಯಲಾಯಿತು. ಇವತ್ತು ವಸ್ತುಗಳಲ್ಲಿರುವ ಅಲೆ-ತುಣುಕು ಇರ‍್ತನವನ್ನು ಹೆಚ್ಚಿನ ಪುರುಳರಿಗರು(Physicists) ಒಪ್ಪುತ್ತಾರೆ.

ಇಡುಗಂಟು
ಮೇಲಿನ ಇರ‍್ತನದ ಹಿನ್ನೆಲೆಯಲ್ಲಿ ಇಡುಗಂಟನ್ನು ತಿಳಿಯಬೇಕಾದರೆ ಇಡುಗಂಟು ಕೂಡ ಒಂದು ಇರುಕವೇ(thing) ಇಲ್ಲವೆ ಎಸಕವೇ(process) ಎಂಬ ಕೇಳ್ವಿ ಬರದೇ ಇರದು. ಇಡುಗಂಟು ಒಂದು ಕಡೆಯಿಂದ ಇನ್ನೊಂದು ಕಡೆಗೆ ಇಲ್ಲವೆ ಒಂದು ಎಡೆಯಿಂದ ಇನ್ನೊಂದು ಎಡೆಗೆ ಹರಿಯದಿದ್ದರೆ ಆ ಇಡುಗಂಟಿನಿಂದ ಯಾರಿಗೂ ಯಾವ ಬಳಕೆಯೂ ಇಲ್ಲ. ಹೀಗೆ ಹರಿಯುವ ಗುಣವಿರುವುದರಿಂದ ಅದನ್ನು ’ಎಸಕ’ ಎಂದು ಕರೆಯುತ್ತಾರೆ. ಹೀಗೆ ಹರಿಯುವಾಗ ಇಡುಗಂಟು ಹಲವು ವಸ್ತುಗಳ ರೂಪಗಳನ್ನು ಪಡೆಯುತ್ತಿರುತ್ತದೆ. ಹಾಗಾಗಿ ಅದು ’ಇರುಕ’ ಕೂಡ ಆಗಿದೆ.

ಎತ್ತುಗೆಗೆ ಯಾವುದೇ ಅಂಗಡಿಯಲ್ಲಿ ಮಾರುತ್ತಿರುವ ವಸ್ತು(ಇರುಕ)ಗಳಿಗೆ ಬೆಲೆ ಇರುವುದು ಅವುಗಳ ಮಾರಾಟ ಆಗುತ್ತಿರುವುದರಿಂದ, ಅವುಗಳ ಮಾರಾಟ ’ಆಗು’ವುದಿಲ್ಲ ಎಂದಾದಾಗ ಆ ವಸ್ತುಗಳಿಗೆ ’ಬೆಲೆ’(value) ಇರುವುದಿಲ್ಲ. ಆದ್ದರಿಂದ ಇಡುಗಂಟು ’ಆಗು’ತ್ತಲೇ ’ಇರು’ತ್ತದೆ. ಇಲ್ಲಿ ’ಆಗು’ ಎನ್ನುವುದು ’ಎಸಕ’ ವನ್ನು ಸೂಚಿಸಿದರೆ ’ಇರು’ ಎಂಬುದು ’ಇರುಕ’ವನ್ನು ಸೂಚಿಸುತ್ತದೆ. ಆದ್ದರಿಂದ ಇಡುಗಂಟು ಹರಿಯುತ್ತಲೇ ಗಟ್ಟಿ ರೂಪವನ್ನು ಪಡೆಯುತ್ತಾ ಹೋಗುತ್ತದೆ. ಇಡುಗಂಟು ಹರಿಯದೇ ಅದು ಗಟ್ಟಿ ರೂಪವನ್ನು ಪಡೆದುಕೊಳ್ಳಲು ಸಾದ್ಯವಾಗುವುದಿಲ್ಲ. ಹರಿಯದೇ ಇರುವ ಇಡುಗಂಟು ತನ್ನ ’ಬೆಲೆ’(value)ಯನ್ನು ಕಳೆದುಕೊಳ್ಳುತ್ತದೆ.

ಮೇಲೆ ಹೇಳಿದಂತೆ ಹರಿಯುವ ಇಡುಗಂಟು ಹಲವು ’ಗಟ್ಟಿ’ ರೂಪಗಳನ್ನು ಪಡೆದುಕೊಳ್ಳುತ್ತದೆ ಮತ್ತು ಅವುಗಳಲ್ಲಿ ಮುಕ್ಯವಾಗಿ ಎರಡು ಬಗೆ

1. ಕದಲದ ಇಡುಗಂಟು (Immovable Capital): ನಮ್ಮ ಸುತ್ತಲೂ ಕಾಣುವ ಕಟ್ಟಡಗಳು, ಮೇಲ್ಸೇತುವೆಗಳು, ಹೆದ್ದಾರಿಗಳು, ಹೋಟೆಲ್ಗಳು, ಮಾಲ್ಗಳು, ಕಯ್ಗಾರಿಕೆಗಳು, ಅಂಗಡಿಗಳು, ದೊಡ್ಡ ದೊಡ್ಡ ಮಶೀನ್‍ಗಳು ಮತ್ತು ಇತ್ಯಾದಿ.

2. ಕದಲುತ್ತಿರುವ ಇಡುಗಂಟು (Moveable Capital): ನಮ್ಮ ಸುತ್ತಲೂ ಕಾಣುವ ಬಸ್ಸು, ಕಾರು, ಬಾನೋಡ, ಅಂಗಡಿಯಲ್ಲಿ ಮಾರುವ ಚಿಲ್ಲರೆ ಸರಕುಗಳು ಇತ್ಯಾದಿ

ಇತ್ತೀಚೆಗೆ ಮನುಶ್ಯರನ್ನು ಇಡುಗಂಟಿನ ರೂಪದಲ್ಲಿ ನೋಡಲಾಗುತ್ತಿದೆಯಾದ್ದರಿಂದ ’ಮಾನವ ಇಡುಗಂಟು’(Human Capital) ಎಂಬ ಪದಗಳು ಕೂಡ ಮಯ್ದಳೆಯುತ್ತಿವೆ. ಆಗ ಮನುಶ್ಯರನ್ನು ಕೂಡ ’ಕದಲುತ್ತಿರುವ ಇಡುಗಂಟಿನ’ ಗುಂಪಿಗೆ ಸೇರಿಸಬಹುದಾಗಿದೆ. ಹಾಗಾಗಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಇಡುಗಂಟು ಮನುಶ್ಯರನ್ನು ಒಂದು ಕಡೆ ನೆಲೆಗೊಳ್ಳಲು ಬಿಡುವುದಿಲ್ಲ.

ಕದಲುತ್ತಿರುವ ಇಡುಗಂಟು ಹರಿಯಬೇಕಾದರೆ, ಅಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಅದಕ್ಕೆ ’ಕದಲದ ಇಡುಗಂಟಿ’ನ ನೆರವು ಬೇಕಾಗುತ್ತದೆ. ಹಾಗೇನೆ, ಕದಲುತ್ತಿರುವ ಇಡುಗಂಟು ಇಲ್ಲ ಎಂದಾದರೆ ಅಲ್ಲಿ ಕದಲದ ಇಡುಗಂಟಿಗೇನು ಕೆಲಸ? ಹಾಗಾಗಿ ಕದಲದ ಇಡುಗಂಟು ’ಇರುಕ’ದ ಹಾಗೆ ವರ‍್ತಿಸಿದರೆ ಕದಲುತ್ತಿರುವ ಇಡುಗಂಟು ’ಎಸಕ’ದ ಹಾಗೆ ವರ‍್ತಿಸುತ್ತದೆ. ಹಾಗಾಗಿ ಇಡುಗಂಟು ಇನ್ನೊಂದು ಮಟ್ಟದಲ್ಲಿ ನಮಗೆ ’ಎಸಕ-ಇರುಕ’ದ ಪರಿಚೆಗಳನ್ನು ತೋರ‍್ಪಡಿಸುತ್ತದೆ.

ಇನ್ನು ಇಡುಗಂಟನ್ನು ಎಶ್ಟು ಬೇಗ ಕದಲಿಸಬಹುದು ಎಂಬುದರ ಮೇಲೆ ಹಲವು ಹೂಡಿಕೆದಾರರ/ಮಾರಾಟಗಾರರ ಗಳಿಕೆ ನಿಂತಿದೆ. ಇಡುಗಂಟು ತನ್ನ ಬಲವನ್ನು ಹೆಚ್ಚು ಹೆಚ್ಚಿಸಿಕೊಳ್ಳಲು ಆದಶ್ಟು ಬೇಗ ಹರಿಯಲು/ಕದಲಲು ಪ್ರಯತ್ನಿಸುತ್ತಿರುತ್ತದೆ. ಕದಲುತ್ತಿರುವ ಮತ್ತು ಕದಲದ ಇಡುಗಂಟಿಗೆ ಈ ತರ ಒಂದಕ್ಕೊಂದು ಎದುರುಗೊಳ್ಳುವ ಗುಣಗಳು ಇದ್ದರೂ ಒಂದರ ಬಾಳಿಕೆ ಇನ್ನೊಂದರ ಮೇಲೆ ನಿಂತಿದೆ.

ಇದಲ್ಲದೆ, ಇತ್ತೀಚೆಗೆ ಪ್ರಪಂಚದ ಎಲ್ಲ ಕಡೆಗಳಲ್ಲಿ ’ನೆಲ’ವನ್ನು ಇಡುಗಂಟನ್ನಾಗಿ ನೋಡುವು ಪರಿಪಾಟ ಹೆಚ್ಚಾಗುತ್ತಿದೆ. ಕದಲದೇ ಇರುವ ನೆಲದ ಒಡೆತನವನ್ನು ಮಾರಾಟ ಮಾಡಿ ದುಡ್ಡು ಪಡೆದುಕೊಳ್ಳಬಹುದು ಅಂದರೆ ಇಡುಗಂಟಾಗಿ ಮಾರ‍್ಪಾಟು ಮಾಡಿಕೊಳ್ಳಬಹುದು. ಅಂದರೆ ಕದಲದ ಇಡುಗಂಟನ್ನು( ನೆಲಕ್ಕೆ ಇರುವ ನಿರ‍್ದಿಶ್ಟ ಬೆಲೆ) ಕದಲುತ್ತಿರುವ ಇಡುಗಂಟನ್ನಾಗಿಸುವುದು. ಇದನ್ನು ಹಲವು ಬಗೆಯಲ್ಲಿ ಮಾಡಲಾಗುತ್ತಿದೆ.

1. ಎಗ್ಗಿಲ್ಲದೆ ನೆಲವನ್ನು ಕೊಳ್ಳುವುದು-ಮಾರುವುದು
2. ಎಗ್ಗಿಲ್ಲದೆ ನೆಲವನ್ನು ಬಾಡಿಗೆಗೆ/ಬೋಗ್ಯಕ್ಕೆ ಬಿಡುವುದು
3. (1) ಮತ್ತು (2) ನ್ನು ಮಾಡಲು ಹಣಮನೆಗಳು ಎಗ್ಗಿಲ್ಲದೆ ಸಾಲಗಳನ್ನು ಕೊಡುವುದು

ಹೀಗೆ ಮಾಡುವುದರಿಂದ ನೆಲ ತನಗಿರುವ ನಿರ‍್ದಿಶ್ಟ ಮತ್ತು ದಿಟವಾದ ಬೆಲೆಯನ್ನು ಕಳೆದುಕೊಂಡು ಹೆಚ್ಚು ಹೆಚ್ಚು ’ಹುಸಿಬೆಲೆ’ಯನ್ನು ಪಡೆದುಕೊಳ್ಳುತ್ತಿದೆ. ಆದ್ದರಿಂದಲೇ “ಏನಪ್ಪಾ ! ಸಯ್ಟ್ ರೇಟ್ ಇಶ್ಟೊಂದು ಏರ‍್ಕೊಂಡಿದೆ?” ಎಂದು ಹಲವರು ಮಾತಾಡುವುದನ್ನು ಕೇಳಿರುತ್ತೇವೆ. ಈ ಮಾತಿನ ಹಿಂದೆ ಒಂದು ಗೊಂದಲ, ಒಂದು ಅಚ್ಚರಿಯನ್ನು ನಾವು ಗಮನಿಸಬಹುದು. ಅಂದರೆ ನಮ್ಮ ಅರಿವಿಗೆ ಎಟಕದ ಏನೋ ನಡೆಯುತ್ತಿದೆ ಎಂದು ಅನಿಸುತ್ತದೆ. ಹೀಗೆ ಆಗುತ್ತಿರುವುದು ಬೇರೆ ಯಾವ ಕಾರಣಕ್ಕೂ ಅಲ್ಲ, ಇಡುಗಂಟಿನ ಎಸಕ-ಇರುಕದ ಇರ‍್ತನವನ್ನು ಅರ‍್ತ ಮಾಡಿಕೊಳ್ಳದೆ ’ಇರುಕ’ದಂತಹ ನೆಲದಿಂದ ’ಎಸಕ’ದಂತಹ ಹಣದ ಹರಿವನ್ನು ಉಂಟುಮಾಡಿಕೊಳ್ಳುತ್ತಿರುವುದರಿಂದ ಎಂಬುದನ್ನು ಗಮನಿಸಬಹುದು.

(ಮಾಹಿತಿ ಸೆಲೆ: Seventeen Contradictions and The End of Capitalism by David Harvey)

(ತಿಟ್ಟ ಸೆಲೆ: www.mutualresponsibility.org)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

 1. duality ge iirtana allvaa? irtana alla.

 2. ybharath77 says:

  ನೀವು ಹೇಳುತ್ತಿರುವುದು ’ಈರ‍್ತನ’ ಎಂದು ಎಣಿಸುತ್ತಿದ್ದೇೆ. ಇಲ್ಲ ’ಇರ‍್ತನ’ ವೇ ಕನ್ನಡದ ಒಲವಿಗೆ ಒಗ್ಗುತ್ತದೆ.
  ಇರ್+ತನ = ಇರ‍್ತನ ಇಲ್ಲಿ ಎರಡನೇ ಪದ (ತನ) ಮೊದಲ ಉಲಿ ಮುಚ್ಚುಲಿ ಆಗಿರುವುದರಿಂದ ಮೊದಲ ಪದ ’ಇರ್’ ಆಗಿರಬೇಕಾಗುತ್ತದೆ.

  ಈರ್ ಎಂಬುದನ್ನು ಎರಡನೇ ಪದದ ಮೊದಲ ಉಲಿ ತೆರೆಯುಲಿ ಆಗಿದ್ದರೆ ಬಳಸಬೇಕು.
  ಎತ್ತುಗೆಗೆ:
  ೧. ಈರ್ + ಏಳು = ಈರೇಳು ( ಹದಿನಾಲ್ಕು)
  ೨. ಈರ್ + ಅಯ್ನೂರು = ಈರಯ್ನೂರು ( ಸಾವಿರ)
  ೩. ಈರ್ + ಅಡಿ = ಈರಡಿ ( ದ್ವಿಪದಿ)

  ಇಲ್ಲಿ ಏಳು, ಅಯ್ನೂರು ಮತ್ತು ಅಡಿ ಗಳಲ್ಲಿ ಮೊದಲು ಉಲಿ ’ತೆರೆಯುಲಿ’( ಏ, ಅ,ಅ)

 3. ಕುಮಾರಸ್ವಾಮಿ says:

  ಸಕತ್ತಾಗಿದೆ ವಿವರಣೆ.ಹೊಸಪದಗಳು ಕೂಡ.

  1. ಕದಲದ ಇಡುಗಂಟು (Immovable Capital):
  ಇದಕ್ಕೆ ನನ್ನ ಕಡೆಯಿಂದ ಮೊಗದೊಂದು ಪದ: ನೆಗಟ್ಟಿದ ಇಡುಗಂಟು

  2. ಕದಲುತ್ತಿರುವ ಇಡುಗಂಟು (Moveable Capital):

  ಇದಕ್ಕೆ ನನ್ನ ಕಡೆಯಿಂದ ಮೊಗದೊಂದು ಪದ: ಹರಿದಾಡುವ ಇಡುಗಂಟು

ಅನಿಸಿಕೆ ಬರೆಯಿರಿ:

Enable Notifications