ನತಿಂಗ್ ಪೋನ್ 2

– ಕಿಶೋರ್ ಕುಮಾರ್.

ಆಂಡ್ರಾಯ್ಡ್ ಚೂಟಿಯುಲಿಗಳ (smartphone) ಮಾರುಕಟ್ಟೆ ಇಂದು ಹತ್ತಾರು ಬ್ರಾಂಡ್ ಗಳ ನೂರಾರು ಆಯ್ಕೆಗಳನ್ನು ಕೊಳ್ಳುಗರ ಮುಂದಿಡುತ್ತಿದೆ. ಇವುಗಳಲ್ಲಿ ಸ್ಯಾಮ್ಸಂಗ್, ಒನ್ ಪ್ಲಸ್, ಎಮ್ ಐ, ರಿಯಲ್ಮಿ ಬ್ರಾಂಡ್ ಗಳು ಚೂಟಿಯುಲಿ ಮಾರುಕಟ್ಟೆಯಲ್ಲಿ ಹೆಚ್ಚುಪಾಲನ್ನು ಹೊಂದಿವೆ. ಈ ದೊಡ್ಡ ಬ್ರಾಂಡ್ ಗಳ ಮುಂದೆ ಮತ್ತೊಂದು ಬ್ರಾಂಡ್ ಮುಂದೆ ಬರುವುದು ಎಂದರೆ ಅದು ಸಣ್ಣ ಮಾತಲ್ಲ. ಅದಕ್ಕೆ ದೊಡ್ಡ ಹೂಡಿಕೆ, ಬಳಸುಗರನ್ನು ಸೆಳೆವ ಪೋನ್ ಮಾದರಿ ಹಾಗೂ ಪ್ರಚಾರ ಇವೆಲ್ಲ ಬೇಕೇ ಬೇಕು. ಇದನ್ನ ಸರಿಯಾಗಿ ಅರಿತಿರುವ ಲಂಡನ್ ಮೂಲದ ‘’ನತಿಂಗ್ ಟೆಕ್ನಾಲಜಿ ಲಿಮಿಟೆಡ್’’ ಕಂಪನಿಯು 2022 ರಲ್ಲಿ ತನ್ನ ಮೊದಲ ಚೂಟಿಯುಲಿ ನತಿಂಗ್ ಪೋನ್ 1 ಅನ್ನು ಮಾರುಕಟ್ಟೆಗೆ ತಂದಿತು. ಬಿಡುಗಡೆಗೆ ಮುಂಚೆಯೇ ಕುತೂಹಲ ಉಂಟು ಮಾಡಿದ್ದ ನತಿಂಗ್ 1, ಚೂಟಿಯುಲಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡಿದ ಚೂಟಿಯುಲಿ ಎನ್ನಬಹುದು. ಇದು ಬಿಡುಗಡೆಯ ನಂತರ ತಕ್ಕಮಟ್ಟಗಿನ ಹೆಸರನ್ನೂ ಸಹ ಗಳಿಸಿತು. 2023 ರ ಜುಲೈ ನಲ್ಲಿ ನತಿಂಗ್ ಕಂಪನಿಯು ತನ್ನ 2 ನೇ ಚೂಟಿಯುಲಿ ‘ನತಿಂಗ್ ಪೋನ್ 2 ನ್ನು ಮಾರುಕಟ್ಟೆಗೆ ತಂದಿದೆ. ತನ್ನ ಮೊದಲ ಪೋನ್ ಮಾದರಿಯಲ್ಲೇ ಹೆಚ್ಚು ಮಂದಿಯನ್ನು ಸೆಳೆದು ಮಾರುಕಟ್ಟೆಯ ಮಾತಾಗಿದ್ದ ನತಿಂಗ್ ಪೋನ್ ಈಗ 2ನೇ ಮಾದರಿಯಲ್ಲಿ ಬಳಸುಗರಿಗೆ ಏನೆಲ್ಲಾ ಆಯ್ಕೆ ತಂದಿರಬಹುದು ನೊಡೋಣ.

ಗೊತ್ತುಪಡಿಗಳು (specifications)

ಕ್ಯಾಮೆರಾ

ನತಿಂಗ್ ಪೋನ್ 2 ರ ಕ್ಯಾಮೆರಾ ನೋಡುವುದಾದರೆ ಒಟ್ಟು 3 ಕ್ಯಾಮೆರಾಗಳಿದ್ದು. ಹಿಂದೆ ಸೋನಿ ಕಂಪನಿಯ IMX890 ಸೆನ್ಸಾರ್ ಇರುವ 50 ಮೆಗಾ ಪಿಕ್ಸೆಲ್ ಮುಕ್ಯ ಕ್ಯಾಮೆರಾ ಇದ್ದು. ಆಪ್ಟಿಕಲ್ ಇಮೇಜ್ ಸ್ಟಾಬಿಲೈಜೇಶನ್ ಇದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಈ ಪರಿಚೆ (feature) ದೊಡ್ಡಬೆಲೆ (premium) ಪೋನ್ ಗಳಲ್ಲಿ ಮಾತ್ರ ಕಾಣಸಿಗುತ್ತದೆ. ಇದರಲ್ಲಿ 60fps ನಲ್ಲಿ 4K ವೀಡಿಯೋ ಮಾಡುವ ಆಯ್ಕೆ ಇದ್ದು, 480fps ನಿದಾನಗತಿ (slow motion) ವೀಡಿಯೋ ಹಾಗೂ 4K ಟೈಮ್ ಲ್ಯಾಪ್ಸ್ ಆಯ್ಕೆ ಇದೆ. ಹಿಂದೆ ಸ್ಯಾಮ್ಸಂಗ್ JN1 ಸೆನ್ಸಾರ್ ಇರುವ 50 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಇದ್ದು, 114° ನೋಟ ಹಾಗೂ ಇಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಇದೆ.

ಮುಂದೆ 32 ಮೆಗಾಪಿಕ್ಸೆಲ್ ಸೋನಿ IMX615 ಸೆನ್ಸಾರ್ ಇರುವ ಸೆಲ್ಪಿ ಕ್ಯಾಮೆರಾ ಇದ್ದು, 60fps ನಲ್ಲಿ 1080p ವೀಡಿಯೋ ರೆಕಾರ‍್ಡಿಂಗ್ ಇದೆ.

ಮೈಕಟ್ಟು ಮತ್ತು ತೆರೆ (display)

ಈ ಪೋನ್ 162.1 ಮಿಮೀ ಎತ್ತರ, 76.4 ಮಿಮೀ ಅಗಲ, 8.6 ಮಿಮೀ ದಪ್ಪ ಇದೆ. ಇದರ ತೂಕ 201.2 ಗ್ರಾಮ್ ನಶ್ಟು ಇದ್ದು ಅಲ್ಯೂಮಿನಿಯಮ್ ಪಟ್ಟಿ (frame) ಹೊಂದಿದೆ.

6.7’’ ಇಂಚಿನ LTPO AMOLED ತೆರೆ (display) ಇರುವ ಈ ಪೋನ್ ನಲ್ಲಿ ಕಾರ‍್ನಿಂಗ್ ಗೊರಿಲ್ಲಾ ಗಾಜಿನ ಬದ್ರತೆ ಇದೆ. ಇದರಲ್ಲಿ ಬಳಸಿರುವ ಕಾರ‍್ನಿಂಗ್ ಗೊರಿಲ್ಲಾ ಗಾಜಿನ ಪಳಿಯೆಣಿಕೆ (version) ಬಗ್ಗೆ ಸುದ್ದಿ ಇಲ್ಲ. 2412×1080 ಪಿಕ್ಸೆಲ್ ರೆಸೊಲ್ಯೂಶನ್ ಹಾಗೂ ಪ್ರತೀ ಇಂಚಿಗೆ 394 ಪಿಕ್ಸೆಲ್ ಗಳು ಸಿಗುತ್ತವೆ. ಈ ಪೋನ್ HDR10+ ಪರಿಚೆ ಹೊಂದಿದ್ದು, ಪ್ರೈಮ್ ಹಾಗೂ ನೆಟ್ ಪ್ಲಿಕ್ಸ್ ನಲ್ಲಿ HDR ವೀಡಿಯೋಗಳನ್ನು ನೋಡಬಹುದಾಗಿದ್ದು, 120 Hz ರಿಪ್ರೆಶ್ ರೀಟ್ ಹೊಂದಿದೆ. LTPO ತೆರೆ ಬಳಸಿರುವುದರಿಂದ ಇದು ಕಡಿಮೆ ಬ್ಯಾಟರಿ ಬಳಕೆ ಮಾಡುತ್ತದೆ. ನತಿಂಗ್ ಪೋನ್ 1ರಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದ ತೂರ‍್ನೋಟದ (transparent) ಹಿಂದಿನ ಮೈ ಹಾಗೂ ಲೈಟ್ ಈ ಪೋನ್ ನಲ್ಲೂ ಸಹ ಇದೆ.

ಪ್ರೋಸೆಸರ್ ಹಾಗೂ ನಡೆಸೇರ‍್ಪಾಟು (operating system)

ಈ ಪೋನ್ ನಲ್ಲಿ 4 ನ್ಯಾನೋ ಮೀಟರ್ ಇರುವ ಸ್ನಾಪ್ ಡ್ರಾಗನ್ 8+ Gen1 ಪ್ರೋಸೆಸರ್ (ಒಪ್ಪೆಸಗುಕ) ಇದ್ದು. ಇದು ಇಂದಿನ ಬಲಿಶ್ಟ ಒಪ್ಪೆಸಗುಕಗಳಲ್ಲಿ ಒಂದಾಗಿದೆ. ಈ ಪೋನ್ ಆಂಡ್ರಾಯ್ಡ್ 13 ರ ಮೇಲೆ ಕಟ್ಟಿರುವ ನತಿಂಗ್ ಓಎಸ್ 2 ರಲ್ಲಿ ಕೆಲಸ ಮಾಡುತ್ತದೆ. ಗೂಗಲ್ ಸ್ಟಾಕ್ ನಡೆಸೇರ‍್ಪಾಟನ್ನು (OS) ಇಶ್ಟಪಡುವವರಿಗೆ ಇದೊಂದು ಒಳ್ಳೆಯ ಆಯ್ಕೆ. ಯಾವುದೇ ರೀತಿಯ ಬೇಕಾಗದಬಳಕ (bloatware) ಗಳಿಲ್ಲದ ಚೊಕ್ಕ ಆಂಡ್ರಾಯ್ಡ್ ಬಳಕೆದಾರ ಅನುಬವಕ್ಕೆ (stock android experience / pure android user experience) ಯಾವುದೇ ಅಡ್ಡಿಯಿಲ್ಲ.

ಮಿಂಕಟ್ಟು (battery) ಹಾಗೂ ಇತರೆ ಪರಿಚೆಗಳು (features)

4700 mAh Li-Ion ಮಿಂಕಟ್ಟು (battery) ಹೊಂದಿರುವ ಈ ಪೋನ್ ನಲ್ಲಿ ಡಿಸ್ಪ್ಲೇ ಬೆರಳಚ್ಚು, ಪ್ರಾಕ್ಸಿಮಿಟಿ ಸೆನ್ಸಾರ್, ದಿಕ್ಕುತೋರುಕ (compass) ಇನ್ನು ಹಲವು ಸೆನ್ಸಾರ್ ಗಳಿವೆ. ಇದರಲ್ಲಿ ಬ್ಲುಟೂತ್ 5.3, WiFi 6, NFC ಹಾಗೂ USB-C 2.0 ಇದೆ. ಇದು 45W ನ ಬೇಗ ತುಂಬುಕ (fast charger) ದಿಂದ 55 ನಿಮಿಶಗಳಲ್ಲಿ 100% ಚಾರ‍್ಜ್ ಆಗಬಲ್ಲದು. 15W ಗಳ ತಂತಿಯಿಲ್ಲದ ತುಂಬುಕೆ (wireless charging), 5W ತಿರು ತುಂಬುಕೆ (reverse charging) ಆಯ್ಕೆ ಇದೆ. ಇದರಿಂದ ಮತ್ತೊಂದು ಪೋನ್ ಅನ್ನು ಚಾರ‍್ಜ್ ಮಾಡಬಹುದಾಗಿದೆ. ಈ ಪೋನ್ ನೊಂದಿಗೆ ತುಂಬುಕ (charger)ವನ್ನು ನೀಡುವುದಿಲ್ಲವಾದ್ದರಿಂದ, ತುಂಬುಕವನ್ನು ಕೊಂಡುಕೊಳ್ಳಬೇಕು.

ಆಯ್ಕೆಗಳು

ನತಿಂಗ್ ಪೋನ್ 2, ಕೊಳ್ಳುಗರಿಗೆ 3 ಬೇರ‍್ಮೆಯ (variant) ಆಯ್ಕೆಯನ್ನು ನೀಡುತ್ತಿದ್ದು. 8 ಜಿಬಿ ರ‍್ಯಾಮ್ 128 ಜಿಬಿ ಕೂಡೆಡೆ (storage) ಬೆಲೆ 44,999, 12 ಜಿಬಿ ರ‍್ಯಾಮ್ 256 ಜಿಬಿ ಕೂಡೆಡೆ ಬೆಲೆ 49,999 ಹಾಗೂ 12 ಜಿಬಿ ರ‍್ಯಾಮ್ 512 ಜಿಬಿ ಕೂಡೆಡೆ ಬೆಲೆ 54,999 ಇದ್ದು. ಗಾಡ ಬೂದು ಹಾಗೂ ಬಿಳಿ ಬಣ್ಣದ ಆಯ್ಕೆಗಳಿವೆ. ಈ ಪೋನ್ ಅನ್ನು ಪ್ಲಿಪ್ ಕಾರ‍್ಟ್ ನಲ್ಲಿ ಆರ‍್ಡರ್ ಮಾಡಬಹುದಾಗಿದೆ.

(ಮಾಹಿತಿ ಮತ್ತು ಚಿತ್ರಸೆಲೆ: in.nothing.tech, gsmarena.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks