ಗಡಿನಾಡು ತಕರಾರಿಗೆ ಇರಲಿ ಬಗೆಹರಿಕೆ

ಎಂ.ಸಿ.ಕ್ರಿಶ್ಣೇಗವ್ಡ.

Karnatakaಕರ‍್ನಾಟಕಕ್ಕೆ ಸಂಬಂದಿಸಿದಂತೆ, ಮರಾಟಿ ಮತ್ತು ಮಲಯಾಳ ಪ್ರದೇಶಗಳಿಗೆ ಹೊಂದಿಕೊಂಡಂತೆ ತಕರಾರು ಇದ್ದೇ ಇದೆ. ಇದು ನುಡಿವಾರುನಾಡುಗಳನ್ನು(linguistic state) ಪಜಲ್ ಅಲಿ ಶಿಪಾರಸಿನ ಪ್ರಕಾರ ಮಾಡಿದ ದಿನಗಳಿಂದ ಉಳಿದು ಬಂದಿದೆ. ಈಚೆಗೆ ಬೆಳಗಾವಿ ಜಿಲ್ಲೆಯ ಯಳ್ಳೂರು ಹಳ್ಳಿಯಲ್ಲಿ ಹಾಕಿದ ಹೆಸರುಹಲಿಗೆ (name board) ತೆರವು ವಿಚಾರದಲ್ಲಿ ಆದ ಗಟನೆಗಳನ್ನು ನೋಡಬಹುದು. ಇದಕ್ಕೆ ಸಂಬಂದಿಸಿದಂತೆ ಸರಿಯಾದ ತೀರ‍್ಮಾನಕ್ಕೆ ಆಳ್ವಿಗರು ಬರದಿದ್ದರೆ, ಇಂತಹ ಪರಿಸ್ತಿತಿ ಯಾವುದೇ ಬೇರೆ ನುಡಿಗರಿಂದ ಬರಬಹುದು ಮತ್ತು ಅದು ನಾಡಿನ, ಮಂದಿಯ ಏಳಿಗೆಗೆ ತೊಡಕಾಗುತ್ತದೆ. ಉಕ್ರೇನ್‍ನಲ್ಲಿ ರಶ್ಯಾ ನುಡಿಗರು ನಡೆಸುತ್ತಿರುವ ಕಾಳಗದ ಹಿನ್ನಲೆಯಲ್ಲಿ ಈ ವಿಶಯವನ್ನು ಪರಿಶೀಲಿಸಬೇಕಿದೆ.

ಮೊದಲಿಗೆ ನಾಡಿಗತನ(nationality)ವೆಂಬುದು ಆಡುವ ನುಡಿಗೆ ಸಂಬಂದಿಸಿದ್ದು ಎಂಬ ಹಿನ್ನಲೆಯಲ್ಲಿ ಪರಿಶೀಲಿಸಿದಾಗ, ಯಾವ ನಾಡಿನವರೂ ಹಟಮಾಡದೇ ತಮ್ಮ ನುಡಿಯಾಡದ ಪ್ರದೇಶಗಳನ್ನು ಆಯಾ ನುಡಿಯಾಡುವ ನಾಡಿಗೆ ಬಿಟ್ಟುಕೊಡುವುದು ಮಂದಿಯಾಳ್ವಿಕೆ ನೋಟದಿಂದ ಸರಿಯಾದ ನಡೆಯಾಗುತ್ತದೆ. ಈ ಹಿನ್ನಲೆಯಲ್ಲಿ, ಕರ‍್ನಾಟಕ, ಕೇರಳ, ಮಹಾರಾಶ್ಟ್ರ, ತಮಿಳುನಾಡು, ಸೀಮಾಂದ್ರ, ತೆಲಂಗಾಣ ಗಡಿಪ್ರದೇಶದಲ್ಲಿ ತಲೆಮಾರುಗಳಿಂದ ಇರುವ ಮಂದಿಯ ಮನದಾಳದ ಆಶಯಕ್ಕೆ ಮಿಡಿಯಬೇಕಾಗಿದೆ.

ಕಾಸರಗೋಡು ಪ್ರದೇಶವು ತಲೆಮಾರುಗಳಿಂದ ಕನ್ನಡನುಡಿಯಾಡುವ ಪ್ರದೇಶವಾದ್ದರಿಂದ ಕಾಸರಗೋಡು ಮತ್ತು ಸುತ್ತಮುತ್ತಲಿನ ಕನ್ನಡನುಡಿಯಾಡುವ ಪ್ರದೇಶಗಳನ್ನು ಕರ‍್ನಾಟಕಕ್ಕೆ ಸೇರಿಸುವುದು, ಹಾಗೇಯೇ ಕರ‍್ನಾಟಕ-ಮಹಾರಾಶ್ಟ್ರ ಗಡಿಯ ಮರಾಟಿನುಡಿಯಾಡುವ ಪ್ರದೇಶಗಳನ್ನು ಮಹಾರಾಶ್ಟ್ರಕ್ಕೆ, ಕನ್ನಡನುಡಿಯಾಡುವ ಸೊಲ್ಲಾಪುರ ಮತ್ತಿತರ ಪ್ರದೇಶಗಳನ್ನು ಕರ‍್ನಾಟಕ ಸೇರಿಸುವುದು ಆಯಾ ನುಡಿಗರ ಏಳಿಗೆ ನೋಟದಿಂದ ಸರಿಯಾದ ನಡೆಯಾಗುತ್ತದೆ.

ಕವಿ ಕಯ್ಯಾರ ಕಿನ್ಹಣ್ಣರವರು ಹೇಳುತ್ತಲಿರುವ “ನನ್ನ ಜೀವಿತ ಕಾಲದಲ್ಲಾದರೂ ಕಾಸರಗೋಡು ಕರ‍್ನಾಟಕಕ್ಕೆ ಸೇರುವಂತಾಗಲಿ”, 1956ರ ನುಡಿವಾರು ನಾಡುಗಳ ರಚನೆ ಸಮಯದಲ್ಲಿ ಕಾಸರಗೋಡು ಕೇರಳಕ್ಕೆ ಸೇರಿದಾಗ “ಮನೆಗೆ ಬೆಂಕಿ ಬಿದ್ದಿದೆ; ಆರಿಸಲು ನೀರು ತನ್ನಿ” ಎಂಬ ಮನದಾಳದ ಮಾತಿಗೆ ಮಾರುತ್ತರ ನೀಡುವುದು ಒಳನಾಡಿಗರ ಕರ‍್ತವ್ಯವಾಗಿದೆ. ಈ ಹಿನ್ನಲೆಯಲ್ಲಿ, ಕರ‍್ನಾಟಕ, ಕೇರಳ, ಮಹಾರಾಶ್ಟ್ರ ಸರ‍್ಕಾರದವರು ಮಾತುಕತೆ ನಡೆಸಿ, ಈ ಪ್ರದೇಶದ ಮಂದಿಯ ಸ್ಪಶ್ಟ ಅಬಿಪ್ರಾಯದೊಡನೆ ಪಾರ‍್ಲಿಮೆಂಟಿನ ಒಪ್ಪಿಗೆ ಪಡೆದು ಆಯಾ ನುಡಿಯಾಡುವ ಮಂದಿಗೆ ನೆಮ್ಮದಿತರುವುದು ಆಳ್ವಿಕೆಮಾಡುವವರ ಕರ‍್ತವ್ಯವಾಗಿದೆ.

ಇಶ್ಟಾದರೂ, ನುಡಿಕಡಿಮೆಎಣಿಕೆಯ(linguistic minority) ಮಂದಿ ಬೇರೆ ನುಡಿಯಾಡುವ ಪ್ರದೇಶದಲ್ಲಿ ಉಳಿಯುವುದು ಅನಿವಾರ‍್ಯವಾದರೆ; ಅಂತ ಪ್ರದೇಶಗಳಲ್ಲಿ, ಎರಡೂ ನುಡಿಗಳಲ್ಲಿ ಆಳ್ವಿಕೆ ನಡೆಯುವಂತ ಏರ‍್ಪಾಟು ಮಾಡುವಂತಾಗಬೇಕು. ಅಂತಹ ಪ್ರದೇಶಗಳಲ್ಲಿನ ನುಡಿಕಡಿಮೆಎಣಿಕೆಯ ಮಂದಿಗೆ ತಾಯಿನುಡಿಯಲ್ಲಿ ಕಲಿಕೆ, ಸರ‍್ಕಾರದ ಕೆಲಸಕ್ಕೆ ಆಯ್ಕೆಯಾದವರಿಗೆ ಅದೇ ಪ್ರದೇಶದಲ್ಲಿ ಕೆಲಸ ಮಾಡುವಂತ ಏರ‍್ಪಾಟು ಮಾಡಬೇಕು.

(ಚಿತ್ರ ಸೆಲೆ: wikimedia)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.