ಕಣ್ಮರೆಯಾಗುತ್ತಿರುವ ಕೊರಲೆ

Korale-4

ಬೇರೆಲ್ಲಾ ಕಿರುದಾನ್ಯಗಳಿಗೆ ಹೋಲಿಸಿದರೆ ಕೊರಲೆ ಬಗ್ಗೆ ಮಾಹಿತಿ ಸಿಗುವುದು ತುಸು ಕಶ್ಟ. ಕೊರಲೆ ರಾಜ್ಯದ ಮೈಸೂರು, ತುಮಕೂರು, ಚಿತ್ರದುರ‍್ಗ  ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳೆಯಲಾಗುತ್ತಿದೆ.ಇತರ ಕಿರುದಾನ್ಯಗಳಂತೆಯೇ ಇದರ ಬೇಸಾಯ ಮಾಡಬಹುದು. ಕಡಿಮೆ ಸಾರಯುಕ್ತ ಬರಡು ಮಣ್ಣಿನಲ್ಲೂ, ಇಬ್ಬನಿಯ ತೇವದಲ್ಲೂ ಇದನ್ನು ಬೆಳೆಯಬಹುದು.ಕೊರಲೆ ಬಿತ್ತನೆ ಅತ್ಯಂತ ಸುಲಬ. ಒಂದು ಸಲ ಉಳುಮೆ ಮಾಡಿದ ಜಮೀನಿಗೂ ಸಹ ಬಿತ್ತಬಹುದು. ತುಂಬಾ ಹಸನು ಮಾಡಬೇಕಾದ್ದಿಲ್ಲ. ರೋಹಿಣಿ ಮಳೆಯಲ್ಲಿ ಬಿತ್ತನೆ ಮಾಡಿದರೆ ಒಳ್ಳೆಯದು ಎಂಬುದು ಬಹುತೇಕ ರೈತರ ಅನಿಸಿಕೆ. ಬಿತ್ತಿದ ಕೆಲವೇ ಅಂದರೆ ಸರಿ ಸುಮಾರು 90 ರಿಂದ 100 ದಿನಗಳಿಗೆ ಕೊರಲೆ ಕಟಾವಿಗೆ ಬರುತ್ತದೆ. ಬಿತ್ತುವಾಗ ಸ್ವಲ್ಪ ತೇವವಿದ್ದರೆ ಸಾಕು. ಮುಂದೆ ಒಂದೆರಡು ಸುಮಾರಾದ ಮಳೆ ಬಿದ್ದರೆ ಉತ್ತಮ ಬೆಳೆ ಕೈಗೆ ಸಿಗುತ್ತದೆ.

ಕೊರಲೆ ಎಂಬ ಒಂದೇ ತಳಿ ಮೊದಲಿನಿಂದಲೂ ಬಳಕೆಯಲ್ಲಿದ್ದು, ಇರುಬಹುದಾದ ಬೇರೆ ತಳಿಗಳ ಬಗ್ಗೆ ಬಹಳವಾಗಿ ತಿಳಿದಿಲ್ಲ. ಇದರ ಕಾಳು ನವಣೆಗಿಂತ ಸಣ್ಣದಾಗಿದೆ. ಕಾಳು ಹಳದಿ ಮಿಶ್ರಿತ ಬೂದು ಬಣ್ಣಕ್ಕಿರುತ್ತದೆ. ಗರಿಗಳು ಜೋಳದ ಗರಿಗಳನ್ನು ಹೋಲುತ್ತವೆ, ಆದರೆ ಗಾತ್ರ ಮತ್ತು ಉದ್ದ ಕಡಿಮೆ. ಕೊರಲೆ ಹುಲ್ಲು ದನಕರುಗಳಿಗೆ ಉತ್ತಮ ಆಹಾರ.

ಕೊರಲೆ ರೊಟ್ಟಿ ಬಹಳ ರುಚಿಯಾಗಿದ್ದು, ರೊಟ್ಟಿಯ ಕಮ್ಮಗಿನ ಸ್ವಾದ, ಮತ್ತು ಮೆದುವಾಗಿರುವುದು ಇದರ ವಿಶೇಶ ಗುಣ. ಬಹಳ ದಿನ ಕೆಡದಿರುವ ಬಗ್ಗೆ ಹಿರಿಯರು ಮಾತನಾಡುತ್ತಾರೆ. ಚೆನ್ನಾಗಿ ಒಣಗಿಸಿಟ್ಟರೆ ತಿಂಗಳುಗಟ್ಟಲೆ ಇಟ್ಟು ಬಳಸಬಹುದು ಎನ್ನುತ್ತಾರೆ. ರಾಗಿ ಮುದ್ದೆಗೆ ಕೊರಲೆ ಅಕ್ಕಿಯ ನುಚ್ಚು ಬಳಕೆ ಮಾಡುತ್ತಾರೆ. ಕೊರಲೆ ಹುಗ್ಗಿ ಸಹ ಮಾಡಬಹುದಾದ ಇನ್ನೊಂದು ಅಡುಗೆ ಅಲ್ಲದೆ ಸರಳವಾಗಿ ವೇಗವಾಗಿ ಕೊರಲೆ ಉಸ್ಲಿ ಮಾಡಿದರೆ ಇಂದಿನ ಯಾವುದೇ ಇನ್ಸಟಂಟ್ ಅಡುಗೆಯೂ ಇದಕ್ಕೆ ಸಾಟಿಯಾಗಲ್ಲ.

ಬೇರೆಲ್ಲಾ ಕಿರುದಾನ್ಯಗಳಂತೆ ಕೊರಲೆಯೂ ಕಣ್ಮರೆಯ ಹಾದಿಯಲ್ಲಿದೆ. ಆದರೆ ಉಳಿದೆಲ್ಲವುಗಳಿಗಿಂತ ಕೊರಲೆ ಹೆಚ್ಚು ಅಪಾಯದಲ್ಲಿದೆ. ಕೊರಲೆ ಕೇವಲ ಒಂದೆರಡು ಜಿಲ್ಲೆಗಳಲ್ಲಿ ಮಾತ್ರ ಬೆಳೆಯುತ್ತಿರುವುದರಿಂದ ಬಹುಬೇಗ ನಾಶವಾಗುವ ಸಾದ್ಯತೆ ಹೆಚ್ಚಿದೆ. ಬೇರೆ ದಾನ್ಯಗಳ ಬೆಳೆಯುವ ವ್ಯಾಪ್ತಿ ಹೆಚ್ಚಾಗಿದೆ ಹಾಗೆನೇ ಒಂದೆರಡು ಕಡೆ ಅಶ್ಟೇ ಉಳಿದಿರುವ ಕೊರಲೆ ಬೇರೆ ಬೇರೆ ಜಾಗಗಳಿಗೆ ಹರಡಿ ಕಾಣೆಯಾಗದಿರಲೆಂದು ಆಶಿಸೋಣ.

(ಚಿತ್ರಸೆಲೆ: http://kanaja.in/, ಮಾಹಿತಿಸೆಲೆ: ಕನ್ನಡದ ಸುದ್ದಿಹಾಳೆಗಳು ಮತ್ತು ಮಿಂಬಲೆಯ ಇತರ ಸೆಲೆಗಳು)

1 ಅನಿಸಿಕೆ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: