“ಶಿಕ್ಶಣದಲ್ಲಿ ದೇಶಬಾಶೆಗಳು” – ವಿಚಾರ ಸಂಕಿರಣ

 ಪ್ರಿಯಾಂಕ್ ಕತ್ತಲಗಿರಿ.

pvec080914ILSS-1ಈ ಸೆಪ್ಟೆಂಬರ್ 6 ಮತ್ತು 7 ರಂದು ಕುವೆಂಪು ಬಾಶಾ ಬಾರತಿ ಪ್ರಾದಿಕಾರ ಅವರಿಂದ “ಶಿಕ್ಶಣದಲ್ಲಿ ದೇಶಬಾಶೆಗಳು” ಎಂಬ ವಿಚಾರ ಸಂಕಿರಣ ಏರ‍್ಪಡಿಸಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಈ ವಿಚಾರ ಸಂಕಿರಣಕ್ಕೆ ಬೇರೆ ಬೇರೆ ರಾಜ್ಯಗಳಿಂದ ನುಡಿಯರಿಗರು ಬಂದು ಪಾಲ್ಗೊಂಡಿದ್ದರು. ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೂ ಒದಗಿಬಂದಿದ್ದರಿಂದ, ಬೇರೆ ಬೇರೆ ನುಡಿಸಮುದಾಯಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ತಿಳಿದುಕೊಳ್ಳಲು ಸಾದ್ಯವಾಯಿತು. ಜೊತೆಗೇ, ಬಾರತ ಒಕ್ಕೂಟವನ್ನು ಕಾಡುತ್ತಿರುವ ಹಿಂದಿ ಹೇರಿಕೆ, ಇಂಗ್ಲೀಶ್ ಮಾದ್ಯಮದಲ್ಲಿ ಕಲಿಕೆಯೆಡೆಗೆ ಒಲವು, ತಮ್ಮ ನುಡಿ ಯಾವುದೆಂಬುದನ್ನೇ ಗುರುತಿಸುವಲ್ಲಿ ಎಡವುತ್ತಿರುವುದು, ಇಂತಹ ತೊಂದರೆಗಳು ಬೇರೆ ಬೇರೆ ನುಡಿಸಮುದಾಯಗಳನ್ನೂ ಹೇಗೆ ಆವರಿಸಿದೆ ಎಂಬುದನ್ನು ತಿಳಿದುಕೊಂಡಂತಾಯಿತು. ನನಗಾದ ಕಲಿಕೆಯನ್ನು ಹೊನಲು ಓದುಗರೊಂದಿಗೆ ಹಂಚಿಕೊಳ್ಳಲೋಸುಗ ಈ ಬರಹ.

ರಾಜಸ್ತಾನಿ ನುಡಿಯಾಡುಗರ ತೊಂದರೆಗಳು:
ವಿಚಾರ ಸಂಕಿರಣದಲ್ಲಿ ರಾಜಸ್ತಾನಿ ಕವಿಯಾದ ಪ್ರೊ. ಚಂದ್ರಪ್ರಕಾಶ್ ದೇವಲ್ ಅವರೂ ಪಾಲ್ಗೊಂಡಿದ್ದರು. ರಾಜಸ್ತಾನಿ ನುಡಿಯಲ್ಲಿ ಕಲಿಕೆಯೇರ‍್ಪಾಡು ಕಟ್ಟುವುದರ ಕುರಿತು ಅವರು ಎದುರಿಸುತ್ತಿರುವ ತೊಂದರೆಗಳನ್ನು ನೆರೆದ ಜನರೆದುರಿಗಿಟ್ಟರು.

ರಾಜಸ್ತಾನಿ ನುಡಿಯು ಬೇರೆಯೇ ಒಂದು ನುಡಿಯಾಗಿದ್ದರೂ, ಅದನ್ನು ಹಿಂದಿ ಎಂದೇ ಕರೆಯಲಾಗುತ್ತಿರುವುದರಿಂದ, ಅಲ್ಲಿಯ ಮಕ್ಕಳಿಗೆ ತಾಯ್ನುಡಿಯಲ್ಲಿ ಕಲಿಕೆ ಎಂಬುದೇ ಕನ್ನಡಿಯೊಳಗಿನ ಗಂಟೆಂಬಂತಾಗಿದೆ. ರಾಜಸ್ತಾನಿ ಮಕ್ಕಳು ಮೊದಲ ಹಂತದ ಕಲಿಕೆಯಲ್ಲಿ ಪಡುವ ಕಶ್ಟದ ಬಗ್ಗೆ ಉದಾಹರಣೆ ಒಂದನ್ನು ಚಂದ್ರಪ್ರಕಾಶ್ ಅವರು ನೀಡಿದರು. ಮನೆಯಲ್ಲಿ, ಬೀದಿಯಲ್ಲಿ ಬೆಳೆಯುವಾಗ ರಾಜಸ್ತಾನಿ ಮಗುವೊಂದು ಕಾಗೆಯನ್ನು “ಕಾಗ್ಲಾ” ಎಂದು ಕರೆಯುವುದ ಕಲಿತಿರುತ್ತದೆ. ಮಗುವಿನ ಮೊದಲ ನುಡಿ ಅದೇ ಆಗಿರುವುದರಿಂದ, ಕಾಗೆಯನ್ನು ನೋಡಿದಾ ಕೂಡಲೇ “ಕಾಗ್ಲಾ” ಎಂಬ ಪದವು ಮಗುವಿನ ಮನದಲ್ಲಿ ಮೂಡುತ್ತಿರುತ್ತದೆ. ಆದರೆ, ಶಾಲೆಗೆ ಹೋದ ಕೂಡಲೇ ಮಗುವಿಗೆ ಕಾಗೆಯ ಚಿತ್ರ ತೋರಿಸಿ “ಕೌವ್ವಾ” ಎಂದು ಹೇಳಿಕೊಡಲಾಗುತ್ತದೆ. “ಈ ಬಗೆಯ ಕಲಿಕೆಯಲ್ಲಿ ಮಗುವಿನಲ್ಲಿ ಉಂಟಾಗುವ ಗೊಂದಲಕ್ಕೇನು ಪರಿಹಾರ? ಇಂತಹ ಗೊಂದಲ ಯಾಕೆ ಉಂಟುಮಾಡಬೇಕು? ಮಗುವಿಗೆ ರಾಜಸ್ತಾನಿ ನುಡಿಯಲ್ಲಿಯೇ ಮೊದಲ ಹಂತದ ಕಲಿಕೆ ನೀಡಲು ಸಾದ್ಯವಿಲ್ಲವೇ?” ಎಂದು ಕೇಳುತ್ತಾರೆ ಚಂದ್ರಪ್ರಕಾಶ್ ಅವರು. ಇಂಗ್ಲೀಶ್ ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಸಲು ತೊಡಗುವ ಮಗುವು ಪಡುವ ಪಾಡೇ ರಾಜಸ್ತಾನಿ ಮಗುವಿನದ್ದೂ ಆಗಿರುತ್ತದೆ ಎನ್ನುತ್ತಾರೆ ಚಂದ್ರಪ್ರಕಾಶ್ ಅವರು.

ಪ್ರೊ. ಚಂದ್ರಪ್ರಕಾಶ್ ದೇವಲ್ ಅವರ ಅನಿಸಿಕೆಗಳನ್ನು ಆಲಿಸಿದ ಹಿರಿಯರೊಬ್ಬರು, ಹೀಗೆ ಕೇಳಿದರು “ಹಿಂದಿಯೊಂದು ಆಲದ ಮರವಿದ್ದಂತೆ. ಅದಕ್ಕೆ ಇಂತದ್ದೇ ಕಾಂಡ ಎನ್ನಲು ಸಾದ್ಯವಿಲ್ಲ. ಹಾಗಾಗಿ, ರಾಜಸ್ತಾನಿ ನುಡಿಯನ್ನೂ ಹಿಂದಿಯ ಕಾಂಡ ಎಂದುಕೊಳ್ಳಬಾರದೇಕೇ?”. ಅದಕ್ಕುತ್ತರಿಸುತ್ತಾ ಚಂದ್ರಪ್ರಕಾಶ್ ಅವರು “ಹೌದು! ಹಿಂದಿಯು ಆಲದ ಮರವೇ. ಅದರಿಂದಲೇ ಆ ಮರದ ಕೆಳಗೆ ಬೇರೆ ಯಾವುದೇ ಗಿಡಗಳಿಗೆ ಮೊಳಕೆಯೊಡೆಯಲೂ ಬಿಡುವುದಿಲ್ಲ” ಎಂದರು.

ಸಿಂದಿ ನುಡಿಯಾಡುಗರ ತೊಂದರೆಗಳು:
ಸಿಂದಿ ನುಡಿಯಾಡುಗರು ಇವತ್ತಿನ ಪಾಕಿಸ್ತಾನದ ಸಿಂದ್ ಹೆಸರಿನ ಜಾಗದಲ್ಲಿ ನೂರಾರು ವರುಶಗಳ ಕಾಲ ನೆಲೆಸಿದ್ದವರು. 1947ರ ಹೊತ್ತಿಗೆ ಉಂಟಾದ ಗಲಾಟೆಯನ್ನು ತಪ್ಪಿಸಿಕೊಳ್ಳಲು ಸಿಂದಿ ಜನರು ಗುಂಪು ಗುಂಪಾಗಿ ಇಂಡಿಯಾಗೆ ವಲಸೆ ಬಂದವರು. ತನ್ನದೇ ಆದ ನಲ್ಬರಹ (ಸಾಹಿತ್ಯ) ಹೊಂದಿದ್ದ ನುಡಿ ಸಿಂದಿ. ವಲಸೆ ಬಂದಮೇಲೆ ಹಲವೆಡೆ ಚದುರಿ ಹೋದುದ್ದರಿಂದ, ಸಿಂದಿ ನುಡಿಯಾಡುಗರು ತಮ್ಮ ನುಡಿಯನ್ನು ನಿದಾನವಾಗಿ ಕೈಬಿಟ್ಟು ಹಿಂದಿ ನುಡಿಯನ್ನು ಒಪ್ಪಿಕೊಳ್ಳುತ್ತಿದ್ದಾರಂತೆ. ಪರ‍್ಶೋ-ಅರೇಬಿಕ್ ಲಿಪಿಯನ್ನು ಬಳಸಿ ಬರೆಯಲಾಗುತ್ತಿದ್ದ ಸಿಂದಿ ನುಡಿಗೆ ದೇವನಾಗರಿ ಲಿಪಿಯನ್ನು ಅಳವಡಿಸುವ ಕೆಲಸ ಇತ್ತೀಚೆಗೆ ಬಿರುಸಾಗಿದ್ದು, ಲಿಪಿ ಬದಲಾವಣೆ ಕುರಿತು ಸಾಕಶ್ಟು ಚರ‍್ಚೆ ಸಿಂದಿ ನುಡಿಸಮುದಾಯದಲ್ಲಿ ನಡೆಯುತ್ತಿದೆಯಂತೆ. ಸಿಂದಿ ನುಡಿಗೆ ದೇವನಾಗರಿ ಲಿಪಿ ಇಡಿಯಾಗಿ ಹೊಂದದೇ ಇರುವುದು, ಚರ‍್ಚೆಯನ್ನು ಎತ್ತೆತ್ತಲೋ ಕೊಂಡೊಯ್ಯುತ್ತಿದೆ ಎಂಬುದು ಪ್ರೊ. ವಾಸುದೇವ ಮೋಹಿ ಅವರ ಅನಿಸಿಕೆ.

ಕಾಶ್ಮೀರದ ಜನರ ತೊಂದರೆಗಳು:
ಕಾಶ್ಮೀರದ ಜನರ ನುಡಿಯು ಒಂದೋ ಕಾಶ್ಮೀರಿ, ಅತವಾ ಡೋಗ್ರಿ ಆಗಿರುತ್ತದೆ ಎಂದು ವಿಚಾರ ಸಂಕಿರಣದಲ್ಲಿ ತಿಳಿಸಿಕೊಟ್ಟವರು ಪ್ರೊ. ಓ. ಎನ್. ಕೌಲ್ ಅವರು. ಕಾಶ್ಮೀರವು ಉರ‍್ದು ನುಡಿಯನ್ನು ತನ್ನ ಅದಿಕ್ರುತ ನುಡಿಯಾಗಿ ಕರೆದಿದ್ದು, ಶಾಲೆಗಳಲ್ಲಿ ಉರ‍್ದುವನ್ನೇ ಮಾದ್ಯಮವನ್ನಾಗಿ ಮಾಡಲಾಗಿದೆಯಂತೆ. ಇದು ಕಾಶ್ಮೀರದ ಸರಕಾರ ಮಾಡಿರುವ ದೊಡ್ಡ ತಪ್ಪು. ಕಾಶ್ಮೀರಿ ಮತ್ತು ಡೋಗ್ರಿ ನುಡಿಗಳು ಉರ‍್ದುವಿಗಿಂತ ತೀರಾ ಬೇರೆಯೇ ನುಡಿಗಳಾಗಿದ್ದು, ಅಲ್ಲಿನ ಮಕ್ಕಳಿಗೆ ಮೊದಲ ಹಂತದ ಕಲಿಕೆ ಉರ‍್ದುವಿನಲ್ಲಿ ನಡೆಸುವುದು ಕಾಶ್ಮೀರಿಗಳ ಮೂಲಬೂತ ಹಕ್ಕನ್ನೇ ಬಲಿಕೊಟ್ಟಂತೆ ಎನ್ನುತ್ತಾರೆ ಪ್ರೊ. ಕೌಲ್ ಅವರು. ಮೊದಲ ಹಂತದ ಕಲಿಕೆಯನ್ನು ತನ್ನದಲ್ಲದ ನುಡಿಯಲ್ಲಿ ಕಲಿಯಲು ತೊಡಗುವ ಎಲ್ಲಾ ಮಕ್ಕಳು ಪಡುವ ಕಶ್ಟವನ್ನೇ ಕಾಶ್ಮೀರದ ಮಕ್ಕಳೆಲ್ಲವೂ ಪಡುತ್ತಿವೆಯಂತೆ. ಹಾಗಿರುವಾಗ, ಸಹಜವಾಗಿಯೇ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗುವುದು, ಕಲಿಕೆಯಲ್ಲಿ ಹಿಂದೆ ಬೀಳುವುದು, ಶಾಲೆಯನ್ನು ಅರ‍್ದದಲ್ಲೇ ಬಿಟ್ಟುಹೋಗುವುದು, ಇವೆಲ್ಲಾ ಕಾಶ್ಮೀರದಲ್ಲಿ ಆಗುತ್ತಿವೆಯಂತೆ.

ಹೀಗೆ, ಶಾಲೆಗಳಲ್ಲಿ ಅರೆ-ಬರೆ ಕಲಿತವರೇ ಹೆಚ್ಚಿರುವ ಕಾಶ್ಮೀರಿಗಳು ದಿಗಿಲುಕೋರರಿಗೆ ಎಲ್ಲೆಡೆ ದಿಗಿಲು ಉಂಟುಮಾಡಿಸಲು ಸಲಕರಣೆಗಳಾಗಿ ಬಳಕೆಯಾಗುತ್ತಿದ್ದಾರೆ ಎನ್ನುತ್ತಾರೆ ಪ್ರೊ. ಕೌಲ್ ಅವರು. ಕಾಶ್ಮೀರಿ ಮತ್ತು ಡೋಗ್ರಿ ಮಾದ್ಯಮ ಶಾಲೆಗಳನ್ನು ಹೆಚ್ಚೆಚ್ಚು ತೆರೆಯುವ ಮೂಲಕ, ಹೆಚ್ಚೆಚ್ಚು ಜನರು ಶಾಲೆಗಳಲ್ಲಿ ಉಳಿಯುವಂತೆ ಮಾಡಬಹುದು ಮತ್ತು ದಿಗಿಲುಕೋರತನವನ್ನೂ ಕಡಿಮೆ ಮಾಡಬಹುದು ಎನ್ನುತ್ತಾರೆ ಪ್ರೊ. ಕೌಲ್ ಅವರು. ಶಾಲೆಯಲ್ಲಿ ಪಾಟ ಕಲಿಯದೆಯೇ, 18-25 ವಯಸ್ಸಿನಲ್ಲಿ ದಿಗಿಲುಕೋರರಾಗಿದ್ದುಕೊಂಡು, ಬಳಿಕ ಬದುಕಿನಲ್ಲಿ ಪೆಟ್ಟು ತಿಂದು, ಪಾಟ ಕಲಿತು ಬದಲಾದ ಕಾಶ್ಮೀರಿಗಳ ಒಡನಾಟದಿಂದ ಈ ವಿಶಯವು ತಮಗೆ ಗಾಡವಾಗಿ ಮನವರಿಕೆಯಾಗಿದ್ದಾಗಿ ಪ್ರೊ. ಕೌಲ್ ಅವರು ಹೇಳಿಕೊಳ್ಳುತ್ತಾರೆ.

ಮುಂದಿನ ಬರಹದಲ್ಲಿ ತಮಿಳುನಾಡಿನ ಮತ್ತು ತೆಲಂಗಾಣದಲ್ಲಿನ ಕಲಿಕೆಯೇರ‍್ಪಾಡು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ತಿಳಿಯೋಣ.

(ಚಿತ್ರ ಸೆಲೆ: ಪ್ರಜಾವಾಣಿ)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.