‘ಒಂದೇ ಕರ‍್ನಾಟಕ’ ದಿಂದಲೇ ಕನ್ನಡಿಗರ ಏಳಿಗೆ
ನಾಡಿನ ಹೋಳಾಗಿಸುವಿಕೆಯ ಬಗ್ಗೆ ಮತ್ತೆ ಉಮೇಶ ಕತ್ತಿಯವರು ದನಿಯೆತ್ತ್ಯಾರ. ಕಳೆದ ಮೂರು ವರುಶದಿಂದ ಕತ್ತಿಯವರು ಇಂತ ಮನೆ ಮುರುಕತನದ ಮಾತುಗಳನ್ನ ಹೇಳ್ಕೊತಾ ಹೊಂಟಾರ. ಇದರಿಂದ ಹೊಸದಾದ ನಾಡಿಗೆ ಯಾವುದೇ ರೀತಿಯಿಂದ ಲಾಬ ಇಲ್ಲ. ಕೇವಲ ತಮ್ಮ ಸ್ವಂತ ರಾಜಕೀಯ ಲಾಬ ಮತ್ತ ತಾವೇ ಮುಕ್ಯಮಂತ್ರಿ ಆಗಬೇಕು ಅನ್ನೋ ದುರುದ್ದೇಶ ಇಟ್ಕೊಂಡು ಕತ್ತಿಯವರು ಇಂತ ಇಲ್ಲಸಲ್ಲದ ಹೇಳಿಕಿ ಕೊಡ್ಲಿಕತ್ತಾರ. ಈ ಹಿಂದಕ್ಕ ಕತ್ತಿಯವರೇ ಸರ‍್ಕಾರದಾಗ ಒಬ್ಬ ಸಚಿವರು ಆಗಿದ್ರು ಆಗ ಇವರು ಏನೇನು ಬೆಳವಣಿಗೆ ಅಬಿವ್ರುದ್ದಿ ಕೆಲಸ ಮಾಡ್ಯಾರ ಅನ್ನುದು ಎಲ್ಲರಿಗೂ ಗೊತ್ತಿದ್ದದ್ದೆ ಅದ. ಈಗಲೂ ಅವರು ಶಾಸಕರು ಆಗಿ ಯಾವುದೇ ಜನಪರ ಕೆಲಸ ಮಾಡಿದ್ದು ಕಂಡಿಲ್ಲ. ಇಂತಹವರಿಂದ ಬೆಳವಣಿಗೆ ಬರೀ ಕನಸಿನ ಮಾತು ಅಶ್ಟೇ.
ಉತ್ತರದ ಬಾಗ ಹಿಂದುಳಿದದ ಅಂತ ಕತ್ತಿಯವರು ಹೇಳ್ಕೋತ ಬಂದ್ರು. ಆದರೆ ಇಲ್ಲಿನ ಯಾವ ಸಮಸ್ಯೆಗೆ ಅವರು ಮುಂದೆ ಬಂದು ಹೋರಾಟ ಮಾಡ್ಯಾರ ಎಂಬುದು ಇನ್ನೂ ಪ್ರಶ್ನೆ ಆಗೇ ಉಳದಯ್ತಿ. ಇಲ್ಲಿಯವರು ಸಮಸ್ಯೆಗಳನ್ನು ನೋಡಿದಾಗ ಮೊದಲು ಕಾಣುದು ಮಂದಿಗೆ ದುಡಿದು ತಿನ್ನಲಿಕ್ಕೆ ಕೆಲಸ ಸಿಗವಲ್ತು. ಅದಕ್ಕಂತ ಬಡ ಕೂಲಿ ಕೆಲಸ ಮಾಡು ಮಂದಿ ಮಗ್ಗಲಕಿನ ಗೋವಾಕೊ, ಇಲ್ಲ ಮಹಾರಾಶ್ಟ್ರಕ್ಕೊ ಗುಳೆ ಹೋಗಿ ತಮ್ಮ ಬದುಕು ನಡೆಸ್ಲಿಕತ್ತ್ಯಾರ. ಮಂದಿ ಬಗ್ಗೆ ಅಶ್ಟು ಕಾಳಜಿ ಇದ್ದರ ಉಮೇಶ ಕತ್ತಿಯವರು ಅದ್ಯಾಕ ಗೋವಾ ಸರ‍್ಕಾರದ ವಿರುದ್ದ ನಮ್ಮ ಮಂದಿನ ಹೊರಹಾಕಿದಾಗ ಹೋರಾಟ ಮಾಡ್ಲಿಲ್ಲ. ಕತ್ತಿಯವರು ಬಿಡ್ರಿ, ಕರ‍್ನಾಟಕದ ಬೇರೆ ಯಾವುದೇ ನಾಯಕರು ಇದರ ಬಗ್ಗೆ ಚರ‍್ಚೆ ಮಾಡದೇ ಸುಮ್ಮನಾದ್ರು. ಕತ್ತಿಯವರ ಪಕ್ಶದ ಮನೋಹರ ಪರಿಕ್ಕರ ಗೋವಾದ ಮುಕ್ಯಮಂತ್ರಿ ಇದ್ರು ಅವರ ಜೊತೆ ಇದರ ಬಗ್ಗೆ ಮಾತಾಡು ಗೋಜಿಗೆ ಹೋಗಲಿಲ್ಲ. ಇಶ್ಟು ಸಾಲದಕ್ಕೆ ತಮ್ಮ ಪಕ್ಶ ಆಳುವ ಹೊತ್ತಿನಾಗ ಅಂದಿನ ಕಯ್ಗಾರಿಕೆ ಸಚಿವರು ಮತ್ತ ಕತ್ತಿಯವರು ಸೇರಿಕೊಂಡು ಕೊಪ್ಪಳದಾಗ “ಕೊಪ್ಪಳ ಮಂದಿಗೆ ಗುಳೆ ಹೋಗುವ ಚಟ ಅದ” ಅಂತ ಹೇಳಿಕೆ ಬ್ಯಾರೆ ಕೊಟ್ಟಿದ್ರು. ಒಂದ ಕಡೆಯಿಂದ ಮಂದಿಗೆ ಗುಳೆ ಹೋಗುವ ಚಟ ಅದ ಅನ್ನುವ ಮಂತ್ರಿಗಳು, ಇನ್ನೊಂದು ಕಡೆ ಗುಳೆಕ್ಕ ಹೋದ ಮಂದಿಗೆ ರಕ್ಶಣೆ ಕೊಡುವ ಬಲಾನೂ ಇವ್ರ ಕಡೆ ಇಲ್ಲ. ಗುಳೆ ಹೋಗುವ ಮಂದಿ ತಡದು ಕೆಲಸ ಕೊಡ್ಸು ಅಶ್ಟು ಬಲ ನಮ್ಮ ಶಾಸಕರು, ಮಂತ್ರಿಗಳು ಹೊಂದಿದ್ರ ಮಂದಿಯಾಕ ಗುಳೆ ಹೋಗ್ತಿದ್ರು? ಇದಕ್ಕ ಹೇಳಿಕೆ ನೀಡಿದವರೇ ಉತ್ತರ ಕೊಡಬೇಕು.
ಮೊನ್ನೆ ಮೊನ್ನೆ ಬೆಳಗಾವಿಯೊಳಗ ಎಮ್.ಈ.ಎಸ್ ಮತ್ತು ಶಿವಸೇನೆ ಸೇರಿ ನಮ್ಮ ಕರ‍್ನಾಟಕ ಬಾವುಟ ಸುಟ್ಟರು, ಪೋಲಿಸ್ ರ ಮ್ಯಾಲೆ ಕಲ್ಲವಗದು ದೊಡ್ಡ ಗಲಾಟೆ ಮಾಡಿದ್ರು. ಇದನ್ನೆಲ್ಲ ಗೊತ್ತಿದ್ದು ಗೊತ್ತಿಲ್ಲದವರ ತರಹ ನಮ್ಮ ಬಾಗದ ಶಾಸಕರು, ಸಂಸದರು ಮತ್ತ ಮಂತ್ರಿಗಳು ಸುಮ್ಮನಿದ್ದರು. ಪ್ರತಿ ವರುಶ ಎಮ್. ಈ. ಎಸ್ ದವರು ನಮ್ಮ ಕನ್ನಡ ರಾಜ್ಯೋತ್ಸವ ಕರಾಳದಿನ ಅಂತ ಆಚರಿಸ್ಲಿಕತ್ತಾರ, ಜ್ನಾನಪೀಟ ಚಂದ್ರಶೇಕರ ಕಂಬಾರ ಸರ್ ಅವ್ರಿಗೆ ಇತ್ತಿಚೀಗೆ ಅವಮಾನ ಮಾಡಿದ್ರು, ಕರ‍್ನಾಟಕ ಸರ‍್ಕಾರದ ಹೆಣ ಎತ್ತತಿವಿ ಅಂದ್ರು ಇದಕ್ಕೆ ಕತ್ತಿಯವರಾಗಲಿ ಅವರ ಬೆಂಬಲಿಗರಾಗಲಿ ಏನು ಮಾಡದ ಸುಮ್ಮನ ಇದ್ರು. ಶಿವಸೇನೆ ಮಹಾರಾಶ್ಟ್ರದಿಂದ ಬಂದು ನಮ್ಮ ಬಾವುಟ ಸುಟ್ಟ್ರು ನಮ್ಮ ಬಾಗದ ನಾಯಕರು ಸುಮ್ಮನೆ ಇರ‍್ತಾರ ಅಂದ್ರ ಏನು ಅರ‍್ತ? ನಮ್ಮ ಮಂದಿ ಬಗ್ಗೆ ಇವ್ರಿಗೆ ಕಾಳಜಿ ಇದ್ದಂಗಿಲ್ಲ, ನಮ್ಮ ಪರ ದನಿಯೆತ್ತು ಮನಸು ಇವ್ರಿಗೆ ಇದ್ದಂಗಿಲ್ಲ. ನಾಳೆ ಇದಕ್ಕಿಂತ ದೊಡ್ಡ ಆಪತ್ತು ಬಂದ್ರ ಇವರು ನಮ್ಮ ಕಾಪಾಡ್ತಾರಾ ಅನ್ನು ಚಿಂತಿ ಇನ್ನೂ ಕಾಡ್ಲಿಕತ್ತದ.
ಹುಬ್ಬಳ್ಳಿಯೊಳಗ ಕೆಲವು ವರುಶದ ಹೋರಾಟದ ಮ್ಯಾಲೆ ಕೇಂದ್ರಸರ‍್ಕಾರ ಒಂದು ನಯ್ರುತ್ಯ ವಲಯ ರಯ್ಲು ಅಂತ ಹುಟ್ಟು ಹಾಕಿದ್ರು. ಕರ‍್ನಾಟಕದ ಹೆಚ್ಚಿನ ಪಾಲು ಉಗಿಬಂಡಿ ಸ್ಟೇಶನ್ ಗಳು ಇದರ ಅಡಿಯೊಳಗ ಬರ‍್ತಾವ. ಹುಬ್ಬಳ್ಳಿಯೊಳಗ ಏನೋ ಒಂದು ಹೊಸ ವಲಯ ಬಂತು ಅದರ ಜೊತೆಗೆ ಹಿಂದಿವಾಲಾಗಳು ಮತ್ತು ಹಿಂದಿಹೇರಿಕಿ ತಗೊಂಡು ಬಂತು. ಹುಬ್ಬಳ್ಳಿ ಸ್ಟೇಶನ್ ದಾಗ ಇವತ್ತು ಒಂದು ಚಾ ಕುಡಿಲಿಕ್ಕ ಹೋದ್ರು ಹಿಂದಿ ಮಾತಾಡು ಪರಿಸ್ತಿತಿ ತಂದ ಇಟ್ಟಾರ. ಒಂದು ಕಡೆ ಕೇಂದ್ರ ಸರ‍್ಕಾರ ಇದಕ್ಕೆ ಕಾರಣ ಆದ್ರ ಇನ್ನೊಂದ ಕಡೆ ಇದನ್ನು ಪ್ರಶ್ನೆ ಮಾಡದೇ ಮಂದಿ ಮಾತಿಗೆ ಬೆಲೆಕೊಡದ ನಾಯಕರು ಕಾರಣ ಆಗ್ಯಾರ ಅನ್ನುವ ಮಾತು ನಾವು ಮರೀಬಾರದು. ಹುಬ್ಬಳ್ಳಿ ನಯ್ರುತ್ಯ ವಲಯದ ಸಣ್ಣ ಪುಟ್ಟ ಕೆಲಸ, ಸಿ-ಡಿ ಗ್ರುಪ್ ಕೆಲಸದಿಂದ ದೊಡ್ಡ ಹುದ್ದೆಗಳು ಯಾವದ್ರಾಗೂ ನಮಗೆ ಪಾಲು ಸಿಕ್ಕಿಲ್ಲ. ಉತ್ತರ ಕರ‍್ನಾಟಕ ಹೋಗ್ಲಿ, ಯಾವುದೇ ಬಾಗದ ಕರ‍್ನಾಟಕದವರಿಗೆ ಇಲ್ಲಿ ಹೆಚ್ಚಿನ ಕೆಲಸಗಳು ಸಿಕ್ಕಿಲ್ಲ.
ಇನ್ನ ನೀರಾವರಿ ವಿಶಯಕ್ಕೆ ಬಂದ್ರೂ ನಮ್ಮನ್ನಾಳು ಮಂದಿ ಸಾದನೆ ಸೊನ್ನೆ. ಗದಗ ಜಿಲ್ಲೆ ಹೆಚ್.ಕೆ.ಪಾಟೀಲ್ರು, ಹುಬ್ಬಳ್ಳಿಯ ಬಸವರಾಜ ಬೊಮ್ಮಾಯಿ ಅವ್ರು ಹಿಂದಿನ ಸರ‍್ಕಾರದಾಗ ನೀರಾವರಿ ಕಾತೆ ಮಂತ್ರಿಗಳು. ಗದಗ-ಬೆಟಗೇರಿ,ಹುಬ್ಬಳ್ಳಿ-ದಾರವಾಡ ಊರುಗೊಳಿಗೆ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗಿಹರಿವಲ್ತು. ಸಿದ್ದರಾಮಯ್ಯನವರ ಈಗಿನ ಸರ‍್ಕಾರದಾಗ ವಿಜಾಪುರದ ಎಮ್.ಬಿ ಪಾಟೀಲ್ರು ನೀರಾವರಿ ಮಂತ್ರಿಗಳಾದ್ರು ವಿಜಾಪುರದ ಮಂದಿ ನೀರಿನ ಪರದಾಟ ಮುಂದುವರದದ.ನೆನಪಿರಲಿ ವಿಜಾಪುರದಿಂದ ಕ್ರಿಶ್ಣಾ ಹೊಳಿ ಬಾಳ ದೂರ ಇಲ್ರಿ. ದರಮ್ ಸಿಂಗ್ ಸಾಹೇಬ್ರು ಮುಕ್ಯಮಂತ್ರಿ ಹುದ್ದೆ ಅನುಬವಿಸಿದ್ರು, ಬಲು ಇತ್ತಿಚೀಗೆ ಕರ‍್ಗೆ ಸಾಹೇಬ್ರು ಕಾರ‍್ಮಿಕ ಮತ್ತು ರಯ್ಲು ಕಾತೆ ಕೇಂದ್ರ ಮಂತ್ರಿಯಾಗಿದ್ರು ಆದರೂ ಕಲ್ಬುರ‍್ಗಿ ಬೆಣ್ಣೆತೋರಾ ಆಣೆಕಟ್ಟಿನ ಕೆಲಸ ಮಾತ್ರ ಹಂಗ ಉಳದಯ್ತಿ. ಇವರಂಗ ಬಾಳ ಮಂದಿ ಈ ಬಾಗದಿಂದ ಆರಿಸಿ ಹೋಗಿ ಕೇಂದ್ರದಾಗ ಮತ್ತ ರಾಜ್ಯದಾಗ ಚಲೋ ಹುದ್ದೆ ಅನುಬವಿಸಿದ್ರು ಕೆಲಸ ಮಾತ್ರ ಹೇಳ್ಕೊವಂತವು ಕಾಣಿಸಲಿಲ್ಲ.
ಈ ಮ್ಯಾಲಿನು ಎಲ್ಲ ವಿಶಯಗಳನ್ನ ನೋಡಿದಾಗ ಎರಡು ವಿಚಾರ ತಲೆಯೊಳಗ ಬರ‍್ತಾವ. ಮೊದಲನೇಯದು ನಮ್ಮ ಬೆಳವಣಿಗೆಗೆ ಬೇಕಾದ ಹೆದ್ದಾರಿ, ಕಲಿಕೆ, ಬಾನೋಡ ತಾಣ, ರೇಲ್ವೆ ಬಂಡಿ, ದುಡಿಮಿ ಎಲ್ಲ ಸವ್ಕರ‍್ಯಗಳು ಕೇಂದ್ರ ಸರ‍್ಕಾರದ ಕಯ್ಯೊಳಗ ಅದಾವ. ದೆಹಲಿ ದೊರೆಗಳು ಜಯ್ ಅಂದು ಸಯ್ ಹಾಕ್ದೆ ಹೋದ್ರ ನಮ್ಮೂರಿಗೆ ಹೊಸ ರಯ್ಲು ಬರಾಂಗಿಲ್ಲ, ಹೊಸ ಹೆದ್ದಾರಿಗಳು ಮಾಡಾಂಗಿಲ್ಲ. ಮುಂದುವರದ ಜರ‍್ಮನಿ, ಜಪಾನ್, ಇಟಲಿ, ಪ್ರಾನ್ಸ್ ಕಡೆ ಒಮ್ಮೆ ನೋಡಿದ್ರೆ ಅಲ್ಲಿ ಈ ಎಲ್ಲ ಅದಿಕಾರಗಳು ಸ್ತಳೀಯ ಸರ‍್ಕಾರದ ಕಯ್ಯಾಗ ಅವ. ಅದಕ್ಕೆ ಅವರು ತಮಗೆ ಬೇಕಾದ ಹೆದ್ದಾರಿ, ಬಾನೋಡ ತಾಣ, ಹೊಳಿ ನೀರಿಗೆ ಆಣೆಕಟ್ಟು ಕಟ್ಟಿಸಿಕೊಂಡು ಮುಂದು ಬಂದಾರ. ಹೊಸದಾಗಿ ಕಯ್ಗಾರಿಕೆಗಳು ಆಯಾ ದೇಶದಾಗ ಹುಟ್ಟುಕೊಂಡ್ರೆ, ಇಲ್ಲಾ ಬೇರೆ ನಾಡಿನ ಕಯ್ಗಾರಿಕೆಗಳು ಅಲ್ಲಿಗೆ ಬಂದ್ರೆ ಅಲ್ಲಿನ ಮಂದಿಗೆ ಹೆಚ್ಚಿನ ಕೆಲಸ ಸಿಗುವಂತ ಕಟ್ಟಳೆ ಮಾಡ್ಕೊಂಡಾರ. ನಮ್ಮ ಕರ‍್ನಾಟಕದ ಯಾವುದೇ ಬಾಗದಾಗ (ಉತ್ತರ,ದಕ್ಶಿಣ,ಕರಾವಳಿ ಎಲ್ಲೇ ಇರಲಿ) ಒಂದು ಹೊಸ ಕಂಪನಿ ಬರಬೇಕು ಅಂದ್ರ ಅದಕ್ಕೆ ದೆಹಲಿ ಮಂದಿ ಒಪ್ಪಿಗಿ ಪಡಿಬೇಕು. ತಮ್ಮ ರಾಜಕೀಯದ ಲಾಬ ಯಾವ ರಾಜ್ಯದಿಂದ ಸಿಗ್ತದ ಅಂತ ಲೆಕ್ಕಾಚಾರಗಳು ಮಾಡಿ ಅವ್ರಿಗೆ ಮಣಿ ಹಾಕೋತ ಬಂದದ ದೆಹಲಿಯ ಕೇಂದ್ರ ಸರ‍್ಕಾರ. ಬಾಗಲಕೋಟೆಯಿಂದ ಬೆಳಗಾವಿವರೆಗೆ ಹೊಸ ರಯ್ಲಿನ ಹಳಿ ಹಾಕಬೇಕು ಅಂದ್ರು ಕೇಂದ್ರದ ಒಪ್ಪಿಗಿಬೇಕು, ಚಿಕ್ಕಮಗಳೂರು ಚಿತ್ರದುರ‍್ಗ ನಡುವೆ ಹೊಸ ರಯ್ಲಿನ ಹಳಿ ಹಾಕ್ಲಿಕ್ಕು ಕೇಂದ್ರದ ಒಪ್ಪಿಗಿಬೇಕು. ಹುಳುಕು ಇರುದು ನಮ್ಮ ಆಳ್ವಿಕೆಯೊಳಗ. ಮಂದಿಯಾಳ್ವಿಕೆ (Democracy) ಅಂತ ಹೆಸರಿಗೆ ಮಾತ್ರ ಹೇಳಿ ನಾವು ಆರಿಸಿಕಳಿಸು ನಾಯಕರನ್ನು ಗುಲಾಮರಂತೆ ನಡೆಸಿಕೊಳ್ಳುದು ದೆಹಲಿಯ ಕೇಂದ್ರ ಸರ‍್ಕಾರಕ್ಕ ರೂಡಿ ಆಗಯ್ತಿ. ಇದಕ್ಕೆ ಒಳ್ಳೆ ಎತ್ತುಗೆ ಅಂದ್ರ ನಮ್ಮ ನಯ್ರುತ್ಯ ವಲಯ. ನಯ್ರುತ್ಯ ವಲಯಕ್ಕೆ ಸೇರಿದ ಊರಿನ ಮಂದಿಕ್ಕಿಂತ ಹೆಚ್ಚಿನ ಕೆಲಸ ಹೊರಗಡೆಯವರಿಗೆ ಸಿಗುವಂತ ಕಾಯ್ದೆ-ಕಟ್ಟುಪಾಡುಗಳನ್ನ ನಮ್ಮ ಕೇಂದ್ರ ಸರ‍್ಕಾರ ಮಾಡ್ಯದ.
ಎರಡನೇಯದು ಅಂದ್ರ, ನಮ್ಮ ಬಾಗದ ನಾಯಕರುಗಳಲ್ಲಿ ಮಂದಿಪರವಾಗಿ ಕೆಲಸ ಮಾಡಬೇಕು ಅನ್ನುವ ಯಾವ ಇಚ್ಚಾನೂ ಇಲ್ಲ. ತಾವು ಪ್ರತಿನಿದಿಸು ಕ್ಶೇತ್ರದ ಮಂದಿ ದುಡಿಮಿ, ಕಲಿಕಿ ಬಗ್ಗೆ ಇವರು ಯಳ್ಳಶ್ಟೂ ಆಸಕ್ತಿ ತೋರಿಸಿದಂಗ ಇಲ್ಲ. ಬಿ.ಡಿ.ಜತ್ತಿ, ಎಸ್.ಆರ್ ಕಂಟಿ ಇಬ್ಬರೂ ವಿಜಾಪುರ (ಇಂದಿನ ಬಾಗಲಕೋಟೆ ಜಿಲ್ಲೆ) ಪ್ರತಿನಿದಿಸಿದವರು, ರಾಮಕ್ರಿಶ್ಣ ಹೆಗಡೆ ಶಿರಸಿ ಕಾರವಾರ ಜಿಲ್ಲೆಯವರು, ವೀರೇಂದ್ರ ಪಾಟೀಲ್, ದರಮ್ ಸಿಂಗ್ ಇಬ್ಬರೂ ಕಲ್ಬುರ‍್ಗಿಗೆ ಸೇರಿದವರು, ಎಸ್.ಆರ್.ಬೊಮ್ಮಾಯಿ ಮತ್ತ ಜಗದೀಶ ಶೆಟ್ಟರ್ ಹುಬ್ಬಳ್ಳಿಯವರು, ಇವರೆಲ್ಲ ಕರ‍್ನಾಟಕದ ಮುಕ್ಯಮಂತ್ರಿ ಸ್ತಾನದಲ್ಲಿ ಕುಳಿತಿದ್ದು ನಾವು ಮರೀಬಾರದು. ನಾಡಿನ ಬಹುತೇಕ ಎಲ್ಲ ಬಾಗದವರು ಮುಕ್ಯಮಂತ್ರಿಗಳಾಗಿದ್ರು ಅವರ ರಾಜಕೀಯ ಇಚ್ಚಾಶಕ್ತಿ ಕೊರತೆ ಇರುದರಿಂದ ಬೆಳವಣಿಗೆ ಎಂಬುದು ಕನಸಾಗೆ ಉಳದದ. ಬೇರೆ ಬಾಗದ ಯಾವುದೇ ನಾಯಕರು ಉತ್ತರ ಕರ‍್ನಾಟಕದ ಬೆಳವಣಿಗೆಗೆ ಅಡ್ಡಗಾಲು ಹಾಕಿಲ್ಲ, ಹಾಗೆಯೇ ಉತ್ತರ ಬಾಗದವರು ಬೇರೆ ಬಾಗದ ಬೆಳವಣಿಗೆಗೆ ಅಡ್ಡಿ ಬಂದಿಲ್ಲ. ಇಂತ ಸುಳ್ಳು ಪೊಳ್ಳು ವಾದಗಳನ್ನು ನಮ್ಮ ಉಮೇಶ ಕತ್ತಿಯಂತ ನಾಯಕರು ಹುಟ್ಟುಹಾಕಿದ್ದು ತಮ್ಮ ಬ್ಯಾಳಿ ಬೇಯಿಸ್ಕೊಳಿಕ್ಕೆ ಅನ್ನುದು ಇಲ್ಲಿ ಎದ್ದು ಕಾಣಸ್ತದ.
28 ಸಂಸದರು ಹೊಂದಿದ ನಮಗ ಇನ್ನೂ ಕೇಂದ್ರ ಬೆಲೆ ಕೊಡವಲ್ತು, ಇನ್ನೂ ಇಬ್ಬಾಗ ಆಗಿ 12-14 ಸಂಸದರನ್ನು ಹೊಂದಿ ನಾವು ಮುಂದು ಹೋಗುದು ಅಸಾದ್ಯನೇ. ನೆಗಡಿ ಬಂದದ ಅಂತ ಹೇಳಿ ಮೂಗು ಕೊಯ್ಯಬಾರದು, ಅದಕ್ಕೆ ತಕ್ಕಂಗ ಗುಳಿಗಿ ತಗೊಂಡು ಆರಾಮ ಆಗಬೇಕು. ಆಗಬೇಕಾಗಿರುವುದು ನಮ್ಮ ನಾಡ ವಿಬಜನೆ ಅಲ್ಲ ಅದಿಕಾರದ ವಿಬಜನೆ ಅಂದ್ರ ಅದಿಕಾರ ವಿಕೇಂದ್ರಿತವಾಗಬೇಕು. ಅಕಂಡ ಕರ‍್ನಾಟಕವೇ ನಮ್ಮ ಏಳಿಗೆ. ಜಯ್ ಕರ‍್ನಾಟಕ.
( ಚಿತ್ರ ಸೆಲೆ: karnataka.com )
ಇತ್ತೀಚಿನ ಅನಿಸಿಕೆಗಳು