ಪಯ್ ಬಳಸಿ ಓಟದ ಅಳತೆ

ಗಿರೀಶ ವೆಂಕಟಸುಬ್ಬರಾವ್.

ಕಳೆದ ಬರಹದಲ್ಲಿ ನಾವು ಅರಿತಿದ್ದು, ಯಾವುದೇ ಅಳತೆಯ ಒಂದು ಸುತ್ತನ್ನು ತೆಗೆದುಕೊಂಡರೂ ಅದರಲ್ಲಿ ಕಾಣುವ ಹೊಂದಿಕೆ ಹೀಗಿರುತ್ತದೆ,

ಸುತ್ತಿನ ದುಂಡಳತೆ (Circumference) / ಸುತ್ತಿನ ದುಂಡಗಲ (Diameter) = π = 22/7

ಈ ಬರಹದಲ್ಲಿ ಆ ಅರಿವಿನ ಒಂದೆರಡು ಬಳಕೆಗಳನ್ನು ಅರಿಯೋಣ.

ಮೊದಲಿಗೆ ಇಗ್ಗಾಲಿಯತ್ತ (bike) ಕಿರುನೋಟ ಬೀರೋಣ. ಇದರ ಉರುವಲು ಅಳವುತನ (Fuel Efficiency) ನಾವು ಎಣಿಸುವ ಪರಿಯೆಂದರೆ: ಅದು ಓಡಿದ ಕಿ.ಮೀ ದೂರವನ್ನು ಅದಕ್ಕೆತುಂಬಿಸಿದ ಉರುವಲಿನ ಪ್ರಮಾಣದಿಂದ ಪಾಲುಮಾಡುವುದು.

10 ಲೀಟರು ಉರುವಲು ತುಂಬಿದ ಇಗ್ಗಾಲಿಯು 400 ಕಿ.ಮೀ ಓಡಿತೆಂದರೆ, ಉರುವಲು ಅಳವುತನ = 400 ಕಿ.ಮೀ / 10 ಲೀಟರು = 40 ಕಿ.ಮೀ ಪ್ರತಿ ಲೀಟರಿಗೆ. ಇಲ್ಲಿ ಬಳಸಲಾದ ಓಟವನ್ನು ಹೇಗೆ ಅಳೆಯಲಾಗುತ್ತದೆ ಅಂತಾ ಗೊತ್ತೆ?

ಯಾವುದೇ ಬಂಡಿಯ ಓಟವನ್ನು ನೇರವಾಗಿ ಓಟದಳಕದಿಂದ (Odometer) ಅಂಕೆಗಳಲ್ಲಿಯೆ ಎಣಿಸಬಹುದು. ಓಟದಳಕವು ನಮ್ಮ ಬಂಡಿಯ ಓಟವನ್ನು ಹೇಗೆ ಎಣಿಸುತ್ತದೆ ಎಂಬುದನ್ನು ತಿಳಿಯೋಣ.

ಒಂದು ಸುತ್ತಿನಲ್ಲಿ ನಾವು ತಿಳಿದಂತೆ,

ಸುತ್ತಿನ ದುಂಡಳತೆ(Circumference) / ಸುತ್ತಿನ ದುಂಡಗಲ(Diameter) = π = 22/7

ಇಗ್ಗಾಲಿಯ ಮುಂದಿನಗಾಲಿಯ ದುಂಡಗಲ ಇಲ್ಲಿ ಬದಲಾಗದಂತದು, ಆದ್ದರಿಂದ ಮುಂದಿನ ಗಾಲಿ ಒಂದು ಸುತ್ತು ಸಾಗಿದಾಗ, ಬಂಡಿಸಾಗುವ ದೂರವು ಗಾಲಿಯದುಂಡಳತೆಗೆ ಸಮ.

ಗಾಲಿಯದುಂಡಳತೆ (Circumference) = π * ಗಾಲಿಯ ದುಂಡಗಲ(Diameter)

ಮುಂದಿನ ಗಾಲಿಯು ಎಶ್ಟು ಬಾರಿ ತಿರುಗಿತೆಂಬುದನ್ನು ಎಣಿಸಿದರೆ, ನಾವು ಬಂಡಿಯ ಓಟವನ್ನು ಲೆಕ್ಕಿಸಬಹುದು:

ಬಂಡಿಸಾಗುವ ದೂರ = π * ಗಾಲಿಯ ದುಂಡಗಲ(Diameter) * ಗಾಲಿಯತಿರುಗುವಿಕೆಯ ಎಣಿಕೆ

ರಬ್ಬರ್ ಹೊದಿಕೆ (tyre) ಹಾಕಿರುವ ದುಂಡಗಲ 18 ಇಂಚುಗಳಿರುವ ಮುಂದಿನಗಾಲಿಯು ಒಮ್ಮೆ ತಿರುಗಿದರೆ:
ಬಂಡಿ ಸಾಗುವದೂರ = (22/7) * 18 ಇಂಚುಗಳು = 56.57 ಇಂಚುಗಳು = 143.69 ಸೆಂ.ಮೀ = 1.44 ಮೀ
ಅಂದರೆ ಗಾಲಿಯು 69 ಬಾರಿ ಉರುಳಿದರೆ, ಬಂಡಿಸಾಗುವ ದೂರ = 1.44 ಮೀ * 69, ಸುಮಾರು 100 ಮೀ.

ಓಟದಳಕವೂ ಮಾಡುವುದಿಶ್ಟೆ, ಬಂಡಿಯ ಗಾಲಿಯು ಎಶ್ಟುಬಾರಿ ತಿರುಗಿತೆಂಬುದನ್ನು ಎಣಿಸಿ ಓಟವನ್ನು ಲೆಕ್ಕಿಸಿತೋರುತ್ತದೆ. ಈ ಓಟದಳಕದ ಏರ‍್ಪಾಟನ್ನು ಕೆಳಗೆ ತೋರಿಸಲಾಗದೆ.

odometer

• ಇಗ್ಗಾಲಿಯ ಮುಂದಿನ ಗಾಲಿಯ ಎಡಬದಿಯಲ್ಲಿ ಉರುಬಳಕದನಡುವನ್ನು (Speedometer Hub ) ಜೋಡಿಸಿರುತ್ತಾರೆ.

• ಉರುಬಳಕದನಡುವಿಗೆ ಉರುಬಳಕದತಂತಿಯನ್ನು (Speedometer Cable ) ಜೋಡಿಸಿರುತ್ತಾರೆ.

• ಉರುಬಳಕದತಂತಿಯು ತನ್ನ ಉದ್ದಕ್ಕೂ ದಪ್ಪ ಪ್ಲಾಸ್ಟಿಕ್ ಹೊದಿಕೆಯನ್ನು ಹೊಂದಿರುವ ಒಂದು ಉಕ್ಕಿನ ಗಟ್ಟಿ ತಂತಿಯಾಗಿರುತ್ತದೆ. ಈ ಹೊದಿಕೆಯೊಳಗೆಯೇ ತಂತಿಯು ಸರಾಗವಾಗಿ ತಿರುಗುವಂತಿರುತ್ತದೆ.

• ಉರುಬಳಕದತಂತಿಯ ಕೆಳಬದಿಯನ್ನು ಉರುಬಳಕದನಡುವಿನೊಳಗಿರುವ ಪುಟ್ಟಗಾಲಿಗೆ ಸಿಕ್ಕಿಸಿರಲಾಗುತ್ತದೆ

• ಉರುಬಳಕದತಂತಿಯು ಮುಂದಿನ ಗಾಲಿಯ ಬದಿಯಲ್ಲೇ ಮೇಲೇರಿ, ಅದರ ಮೇಲುಬದಿಯು ಬಂಡಿಯ ತೋರುಹಲಗೆಯ(Dashboard) ಹಿಂಬದಿಯಲ್ಲಿ ಸಿಕ್ಕಿಸಿರಲಾಗುತ್ತದೆ.

• ಬಂಡಿಯುಓಡುತ್ತಿರುವಾಗ ಉರುಬಳಕದನಡುವಿನ ಒಳಗೆ ತಿರುಗುವ ಪುಟ್ಟಗಾಲಿಯು, ಉರುಬಳಕದ ತಂತಿಯನ್ನು ತಿರುಗಿಸುತ್ತಿರುತ್ತದೆ.

• ತಿರುಗುತ್ತಿರುವ ತಂತಿಯು, ಉರುಬಳಕದೊಳಗೆ ಇರುವ ಮತ್ತೊಂದು ಹಲ್ಗಾಲಿಯನ್ನೂ (Gear Wheel) ತಿರುಗಿಸುತ್ತಿರುತ್ತದೆ.

• ಈ ತಿರುಗುವಿಕೆಯನ್ನು ಓಟದಳಕದ ಎಣಿಕೆಗಾರ (Counter) ಎಣಿಸುತ್ತದೆ. ಅಂದರೆ, ಬಂಡಿಯು 0.1 ಕಿ.ಮೀ (100 ಮೀ) ಓಡಿದಾಗ ಓಟದಳಕದ ಬಲಬದಿಯ ಮೊದಲಂಕೆಯು ಒಂದೆಣಿಸುತ್ತದೆ [ಈ ಏರ‍್‌ಪಾಟಿನಲ್ಲಿ ಮುಂದಿನಗಾಲಿಯು 69 ಬಾರಿತಿರುಗಿದಾಗ, ಬಲಬದಿಯ ಎಣಿಕೆಗಾರ ಒಂದು ಅಂಕೆಯನ್ನು ಎಣಿಸುವಂತೆ ಹಲ್ಗಾಲಿಗಳ ನೆರವಿನಿಂದ ಮಾಡಿರುತ್ತಾರೆ]

• ಬಂಡಿಯು 1 ಕಿ.ಮೀ ಓಡಿದಾಗ, ಬಲಬದಿಯ ಎಣಿಕೆಗಾರ ಹತ್ತು ಸುತ್ತು ಸುತ್ತಿ, ಎರಡೆನೆಯ ಎಣಿಕೆಗಾರವನ್ನು ಒಮ್ಮೆ ದೂಡಿ, 1 ಕಿ.ಮೀ ತೋರುವಂತೆಮಾಡುತ್ತದೆ.

• ಈ ತರಹದಲ್ಲಿ ಒಂದರ ಪಕ್ಕ ಒಂದು ಇರುವ ಐದು ಎಣಿಕೆಗಾರ, ಬಂಡಿ ಓಡಿದ ದೂರವನ್ನು ಆರು ಅಂಕೆಗಳಲ್ಲಿ ಕೆಳಗಿನಂತೆ ತೋರಿಸುತ್ತಿರುತ್ತದೆ.

ಎಣಿಕೆಗಾರ 6 ಎಣಿಕೆಗಾರ 5 ಎಣಿಕೆಗಾರ 4 ಎಣಿಕೆಗಾರ 3 ಎಣಿಕೆಗಾರ 2 ಎಣಿಕೆಗಾರ 1 ಎಣಿಕೆಗಾರ 0
ಎಣಿಕೆಯ ಓಟ: ಎಣಿಕೆಯ ಓಟ: ಎಣಿಕೆಯ ಓಟ: ಎಣಿಕೆಯ ಓಟ: ಎಣಿಕೆಯ ಓಟ: ಎಣಿಕೆಯ ಓಟ: ಎಣಿಕೆಯ ಓಟ:
10000 ರಿಂದ 90000 ಕಿ.ಮೀಗಳಲ್ಲಿ 1000 ರಿಂದ 9000
ಕಿ.ಮೀಗಳಲ್ಲಿ
100 ರಿಂದ 900
ಕಿ.ಮೀಗಳಲ್ಲಿ
10 ರಿಂದ 90
ಕಿ.ಮೀಗಳಲ್ಲಿ
1 ರಿಂದ 9
ಕಿ.ಮೀಗಳಲ್ಲಿ
0.1 ರಿಂದ 0.9
ಕಿ.ಮೀಗಳಲ್ಲಿ
10001 ರಿಂದ 90000 ಕಿ.ಮೀಗಳಲ್ಲಿ

ಗಾಲಿಗಳ ತಿರುಗುವಿಕೆಯನ್ನು ಎಣಿಸಿ ಹೀಗೆ ಬಂಡಿಯು ಓಡಿದದೂರವನ್ನು ಓಟದಳಕವು ತೋರುವಂತೆ ಮಾಡಿರುತ್ತಾರೆ.

ಚದರವೊಂದರ ಅಳತೆ ಬಗೆಯನ್ನು ಬಳಸಿ ಸುತ್ತಿನ ಹರವು ಅಳತೆ ಮಾಡಬಹುದು. ಹೇಗೆ ಗೊತ್ತೆ? ನಾಳಿನ ಬರಹದಲ್ಲಿ ನೋಡೋಣ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.