ಪೀಲ್ಡ್ಸ್ ಮೆಡಲ್ ಗೆಲುವು ಸಾರುವ ಸಂದೇಶ
2014ನೇ ಸಾಲಿನಲ್ಲಿ ಪೀಲ್ಡ್ಸ್ ಮೆಡಲನ್ನು ತಮ್ಮದಾಗಿಸಿಕೊಂಡ ಬ್ರೆಜಿಲ್ಲಿನ ಆರ‍್ತರ್ ಅವಿಲ, ಇಂಗ್ಲೆಂಡಿನ ಮಾರ‍್ಟಿನ್ ಹೈರೆರ್, ಇರಾನಿನ ಮರ‍್ಯಂ ಮಿರ‍್ಜಕಾನಿ ಮತ್ತು ಬಾರತೀಯ ನೆಲೆಯ ಕೆನಡಾ ಪ್ರಜೆ ಮಂಜುಲ್ ಬಾರ‍್ಗವ ಇವರುಗಳಿಗೆ ಅಬಿನಂದನೆಗಳು. ನಾಲ್ಕು ವರ‍್ಶಕ್ಕೊಮ್ಮೆ ಎಣಿಕೆಯರಿಮೆಯ ಹರಹಿನಲಿ ಸಾದನೆ ಮಾಡಿದವರಿಗೆ ನೀಡಲಾಗುವ ಈ ಕೊಡುಗೆಯನ್ನು ಈ ಬಾರಿ ಈ ನಾಲ್ವರಿಗೆ ನೀಡಲಾಗಿದೆ. ಇಂತಹ ಮೇರು ಗೆಲುವಿನ ಸುತ್ತ ಬೀರಬೇಕಿರುವ ನೋಟವೊಂದಿದೆ.
ಈ ನಾಲ್ಕು ಸಾದಕರು ಹೊರಹೊಮ್ಮಿರುವ ಆ ನಾಲ್ಕೂ ನಾಡುಗಳ ಮಂದಿಯೆಣಿಕೆಯನ್ನು ಕೂಡಿದರೂ ಬಾರತದ ಮಂದಿಯೆಣಿಕೆಯ ಮೂರನೇ ಒಂದು ಪಾಲಿಗೂ ಸಮವಾಗುವುದಿಲ್ಲ. ಆದರೆ ಹೇರಳವಾದ ಮಂದಿಯಳವು ಹೊಂದಿರುವ ಬಾರತದಲ್ಲಿ ಇಂತಹ ಮಟ್ಟದ ಹುಟ್ಟಳವುಗಳು ಹೊರಹೊಮ್ಮಲು ಏಕೆ ಸಾದ್ಯವಾಗುತ್ತಿಲ್ಲ ಎಂಬ ಕೇಳ್ವಿಗೆ ಉತ್ತರ ಕಂಡುಕೊಳ್ಳಬೇಕಿದೆ. ಪೀಲ್ಡ್ಸ್ ಮೆಡಲ್ ಗೆದ್ದ ನಾಲ್ಕೂ ಸಾದಕರು ತಮ್ಮ ಪರಿಸರದ ನುಡಿಯಲ್ಲೇ ಕಲಿತಿರುವುದನ್ನು ನಾವಿಲ್ಲಿ ಗಮನಿಸಬೇಕು. ಇರಾನಿನಲ್ಲಿ ಕಲಿತ ಮರ‍್ಯಂ ಪರ‍್ಶಿಯನ್ ನುಡಿಯಲ್ಲೂ, ಬ್ರೆಜಿಲ್ ನಲ್ಲಿ ಕಲಿತ ಆರ‍್ತರ್ ಅವಿಲ ಪೋರ‍್ಚುಗೀಸ್ ನುಡಿಯಲ್ಲೂ ಕಲಿತರೆ, ಬಾರತದ ಮೂಲದ ಮಂಜುಲ್ ಬಾರ‍್ಗವ ಕೆನಡಾ ವಾಸಿಯಾಗಿದ್ದು ಅಲ್ಲಿನ ಪರಿಸರದ ನುಡಿಯಾದ ಇಂಗ್ಲೀಶಿನಲ್ಲಿ ಕಲಿತಿರುವುದು ಕಾಣುತ್ತದೆ.
ತಾಯ್ನುಡಿ ಅತವಾ ಪರಿಸರದ ನುಡಿಯಲ್ಲಿ ಕಲಿಯುವುದು ಅರಕೆಗಳಿಂದ ಒಪ್ಪಿತವಾಗಿರುವ ಏರ‍್ಪಾಟಾಗಿದ್ದು ಇದರಿಂದ ಕಲಿಕೆಗೆ ನೆರವಾಗುವುದರಲ್ಲಿ ಅನುಮಾನವೇ ಇಲ್ಲ. ನಮ್ಮ ನಾಡಿನಲ್ಲಿ ತಾಯ್ತಂದೆಯರು ಮಕ್ಕಳನ್ನು ತಮ್ಮ ನುಡಿಯಲ್ಲಿ ಕಲಿಯಲು ಬಿಡದೆ ಇಂಗ್ಲಿಶ್ ಮಾದ್ಯಮದ ಮೊರೆ ಹೋಗುತ್ತಿರುವುದು ಕಾಣುತ್ತದೆ. ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಹೆಚ್ಚಿನ ಕಾಳಜಿಯುಳ್ಳ ಈ ತಾಯ್ತಂದೆಯರು ಮಕ್ಕಳಿಗೆ ಕಲಿಕೆಯಲ್ಲಿ ನೆರವಾಗುವ ತಾಯ್ನುಡಿಯಲ್ಲಿ ಕಲಿಯುವ ಪದ್ದತಿಯನ್ನು ಬಿಟ್ಟು ಕಲಿಯಲು ತೊಡಕಾಗುವ ಇಂಗ್ಲಿಶ್ ಮಾದ್ಯಮದ ಪದ್ದತಿಯನ್ನು ಬೆಂಬಲಿಸುತ್ತಿರುವುದು ನಿಜಕ್ಕೂ ಕೊರಗುವಂತದ್ದು.
ಮಕ್ಕಳಿಗೆ ತಮ್ಮ ತಮ್ಮ ನುಡಿಗಳಲ್ಲಿ ಒಳ್ಳೆಯ ಮಟ್ಟದ ಕಲಿಕೆ ದೊರೆತರೆ ನಮ್ಮ ನಾಡಿನಿಂದಲೂ ಹೆಚ್ಚಿನ ಪ್ರತಿಬೆಗಳು ಹೊರಹೊಮ್ಮಲು ಆಗುತ್ತದೆ. ಇಲ್ಲವಾದರೆ ನಮ್ಮ ಪ್ರತಿಬೆಗಳು ಹೆಚ್ಚಿನ ಮಟ್ಟದ ಕಲಿಕೆಯಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಎತ್ತುಗೆಗೆ – ಬಾರತದಲ್ಲಿ 18-24ರ ವಯಸ್ಸಿನವರು ಮೇಲ್ಮಟ್ಟದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ನೂರಕ್ಕೆ 19 ಮಂದಿ! (ಸ್ಪೇನ್ ನಲ್ಲಿ ಈ ಸರಾಸರಿ 83, ಇಟಲಿ ಮತ್ತು ಜಪಾನಿನಲ್ಲಿ 60 ರಶ್ಟು ಇದ್ದರೆ, ಜರ‍್ಮನಿಯಲ್ಲಿ ಸುಮಾರು 42ರಶ್ಟು ಇದೆ). ಅಂದರೆ ಬಾರತದಲ್ಲಿ ನೂರಕ್ಕೆ 81 ಪ್ರತಿಬೆಗಳು 18 ವರ‍್ಶಕ್ಕೆ ತಮ್ಮ ಕಲಿಕೆಯನ್ನು ನಿಲ್ಲಿಸುತ್ತಿದ್ದಾರೆ! ಇಶ್ಟೊoದು ದೊಡ್ಡ ಪ್ರಮಾಣದಲ್ಲಿ ಕಲಿಕೆಗೆ ತೊಡಕಿರುವಾಗ ಹೆಚ್ಚಿನ ಪ್ರತಿಬೆಗಳು ನಮ್ಮಲ್ಲಿ ಹೊರಹೊಮ್ಮಲು ಹೇಗೆ ತಾನೇ ಆದೀತು?
ಬಾರತ ಬ್ರಿಟೀಶರಿಂದ ಬಿಡುಗಡೆ ಹೊಂದಿ 68 ವರ‍್ಶಗಳಾಗಿವೆ. ಆದರೆ ನಮ್ಮ ಜೊತೆ ಜೊತೆಗೇ ಬಿಡುಗಡೆ ಹೊಂದಿದ ಇಸ್ರೇಲ್ ನಂತಹ ನಾಡುಗಳೊಂದಿಗೆ ನಮ್ಮ ಅರಿಮೆಯ ಸಾದನೆಯನ್ನು ಹೋಲಿಸಿ ನೋಡಿದರೆ ನಾವು ಬಹಳ ಹಿಂದುಳಿದಿದ್ದೇವೆ ಅನ್ನುವುದು ತಿಳಿಯುತ್ತದೆ. ಅರಿಮೆಯ ಹರವಿನಲ್ಲಿ ಪ್ರತಿ ಒಂದು ಕೋಟಿ ಮಂದಿಯೆಣಿಕೆಗೆ ಎಶ್ಟು ಮಂದಿ ನೊಬೆಲ್ ಪ್ರಶಸ್ತಿ ಗಳಿಸಿದ್ದಾರೆ ಎಂಬ ಅಂಕಿ ಅಂಶಗಳು ಹೀಗಿವೆ. ಸ್ವೀಡನ್ – 16, ಜರ‍್ಮನಿ – 10.6, ಇಸ್ರೇಲ್ – 10.3 , ಬಾರತ – 0.048. ಈ ಸಾದನೆ ಮಾಡಿರುವ ಎಲ್ಲಾ ದೇಶಗಳೂ ತಮ್ಮ ತಮ್ಮ ಪರಿಸರದ ನುಡಿಯಲ್ಲೇ ಅತ್ಯುತ್ತಮ ಕಲಿಕಾ ಏರ‍್ಪಾಟುಗಳನ್ನು ರೂಪಿಸಿಕೊಂಡಿವೆ ಅನ್ನುವುದು ಕಣ್ಣಿಗೆ ಕಾಣುವ ದಿಟವಾಗಿದೆ.
ಬಾರತದ ನೆಲೆಯ ಕೆನಡಾ ವಾಸಿ ಮಂಜುಲ್ ಬಾರ‍್ಗವ ಅವರು ಪೀಲ್ಡ್ಸ್ ಮೆಡಲ್ ಪ್ರಶಸ್ತಿ ಗೆದ್ದಿರುವ ಕುರಿತ ಇನ್ನೊಂದು ಹೆಚ್ಚುಗಾರಿಕೆಯಿದೆ. ಎಳವೆಯಿಂದಲೂ ಎಣಿಕೆಯರಿಮೆಯ ಗೀಳು ಹಚ್ಚಿಕೊಂಡಿದ್ದ ಬಾರ‍್ಗವ ಅವರಿಗೆ ತಮ್ಮ ಸುತ್ತಲ ಪರಿಸರವೆಲ್ಲ ಎಣಿಕೆಗಳಿಂದಲೇ ಕೂಡಿತ್ತು ಎಂದು ಅವರ ತಾಯಿ ತಮ್ಮ ಮಗನ ಬಗ್ಗೆ ಕಾಣ್ಮೆಯೊಂದರಲ್ಲಿ ಹೇಳಿದ್ದಾರೆ. ಮನಗೆ ತರುವ ಹಣ್ಣುಗಳನ್ನು ಪಿರಮಿಡ್ಡಿನಂತೆ ಜೋಡಿಸಿ ಅಲ್ಲಿಯೂ ಎಣಿಕೆಯ ಬಗೆಗಳನ್ನು ನೋಡುತ್ತಿದ್ದ ಬಾರ‍್ಗವ ಅವರು ಸಕ್ಕದ ಶ್ಲೋಕಗಳಲ್ಲಿ ಇದ್ದ ಲಯದಲ್ಲೂ ಎಣಿಕೆಯರಿಮೆಯ ಮಾದರಿಯನ್ನೇ ಕಾಣುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಇನಿತದಿಂದಲೂ ಎಣಿಕೆಯನ್ನೇ ಗಮನಿಸುವ ಇವರಿಗೆ ಇನಿತ, ನಲ್ಬರಹ ಮತ್ತು ಎಣಿಕೆಯರಿಮೆ ಅಚ್ಚುಮೆಚ್ಚಂತೆ. ಇದನ್ನೆಲ್ಲಾ ಏಕೆ ಹೇಳಿದ್ದೇನೆ ಎಂದರೆ ಇಲ್ಲಿ ಕೊಂಚ ನಯವಾಗಿ ಗಮನಿಸಿ ನೋಡಿದರೆ ಮಂಜುಲ್ ಅವರು ಇನಿತ, ಸಕ್ಕದ ಶ್ಲೋಕಗಳನ್ನು ಸೇರಿದಂತೆ ಹಲವಾರು ಕಡೆಯಿಂದ ಕಲಿತು, ಚಿಮ್ಮುವಿಕೆ (inspiration) ಪಡೆದು ಮುಂದುವರೆದಿದ್ದರೂ, ತಾವು ನೆಲೆಸಿರುವ ಪರಿಸರದ ನುಡಿಯಲ್ಲೇ ಕಲಿತು ಅದೇ ನುಡಿಯಲ್ಲಿ ತಮ್ಮ ಅರಿವನ್ನು ಕೂಡಿಸಿಟ್ಟಿದ್ದಾರೆ. “ಒಳ್ಳೆಯದನ್ನು ಎಲ್ಲೆಡೆಯಿಂದ ಪಡೆದುಕೋ” ಎಂದು ರುಗ್ವೇದದಲ್ಲಿ ಹೇಳಲಾಗಿದೆ. ಅಂತೆಯೇ ಎಲ್ಲೆಡೆಯಿಂದ ಪಡೆದ ಅರಿವನ್ನು ತಮ್ಮ ಕೂಡಣದ ಮಂದಿಗೆ ಅವರ ನುಡಿಯಲ್ಲೇ ತಿಳಿಸಿರುವುದರಿಂದ ಹೆಚ್ಚಿನ ಮಂದಿಗೆ ಇದು ತಲುಪುವಂತಾಗಿ ಬಾರ‍್ಗವ ಅವರ ಕೆಲಸ ಅವರ ಕೂಡಣಕ್ಕೆ ಹಿರಿದಾದ ಕೊಡುಗೆ ಎಂದು ಬಣ್ಣಿಸಬಹುದಾಗಿದೆ.
ಎಲ್ಲೆಡೆಯಿಂದ ಕಲಿತು ಕನ್ನಡದಲ್ಲೇ ಆ ಅರಿವನ್ನು ಕೂಡಿಸಿಡುವ ಕೆಲಸ ನಮ್ಮ ಕನ್ನಡ ನಾಡಲ್ಲೂ ಆಗಬೇಕಿದೆ; ಆ ಮೂಲಕ ಕನ್ನಡಿಗರಿಗೆ ಜಗತ್ತಿನ ಎಲ್ಲಾ ಅರಿಮೆಗಳೂ ಕನ್ನಡದಲ್ಲೇ ಸಿಗುವಂತಾಗಬೇಕು. ಆಗಲೇ ಅದು ಕನ್ನಡಿಗರಿಗೆ ಹತ್ತಿರವಾಗಲು ಆಗುತ್ತದೆ. ಕನ್ನಡವನ್ನು ಕೇವಲ ಆಡುಮಾತಿಗೆ ಮಿತಗೊಳಿಸದೇ ಎಲ್ಲಾ ಬಗೆಯ ಅರಿಮೆಗಳ ಕಲಿಕೆ ಕನ್ನಡದಲ್ಲೇ ನಡೆಸುವಂತಾಗಬೇಕು. ಅದೇ ಕನ್ನಡಿಗರ ಏಳ್ಗೆಗೆ ನಾಂದಿ.
(ಚಿತ್ರ ಸೆಲೆ: neurope.eu)
ಇತ್ತೀಚಿನ ಅನಿಸಿಕೆಗಳು