ರವೀಂದ್ರನಾತ ಟ್ಯಾಗೋರರ ಕವನಗಳ ಓದು

– ಸಿ.ಪಿ.ನಾಗರಾಜ.

ಕವಿ, ಕತೆಗಾರ, ನಾಟಕಕಾರ, ಕಾದಂಬರಿಕಾರ ಮತ್ತು ಕಲಾವಿದರಾಗಿ ರವೀಂದ್ರನಾತ ಟ್ಯಾಗೋರ್ ಅವರು ಬಂಗಾಳಿ ಸಾಹಿತ್ಯ ಮತ್ತು ಸಂಗೀತ ರಂಗಕ್ಕೆ ಹೊಸರೂಪವನ್ನು ಕೊಟ್ಟರು. ಇವರ ‘ಗೀತಾಂಜಲಿ’ ಕವನ ಸಂಕಲನಕ್ಕೆ ಕ್ರಿ.ಶ. 1913 ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ದೊರಕಿತು.

ಹೆಸರು: ರವೀಂದ್ರನಾತ ಟ್ಯಾಗೋರ್
ಜನನ: 7-ಮೇ-1861
ಮರಣ:7-ಆಗಸ್ಟ್-1941
ಹುಟ್ಟಿದ ಊರು: ಕೊಲ್ಕತ್ತ, ಪಶ್ಚಿಮ ಬಂಗಾಳ ರಾಜ್ಯ
ತಾಯಿ: ಶಾರದಾ ದೇವಿ
ತಂದೆ: ದೇಬೇಂದ್ರನಾತ ಟ್ಯಾಗೋರ್

(ಬರಹಗಾರರ ಮಾತು:ಇಂದಿನಿಂದ ನಾನು ರವೀಂದ್ರನಾತ ಟ್ಯಾಗೋರ್ ಅವರ ಕವನಗಳನ್ನು ಕುರಿತು ಬರೆಯಲು ತೊಡಗಿದ್ದೇನೆ. ಕವನಗಳನ್ನು ಈ ಕೆಳಕಂಡ ಹೊತ್ತಿಗೆಯಿಂದ ಆಯ್ದುಕೊಂಡಿದ್ದೇನೆ.)

ರವೀಂದ್ರ ಕಾವ್ಯ ಸಂಚಯ: ಗುರುದೇವ ರವೀಂದ್ರನಾತ ಟಾಕೂರರ ಕಾವ್ಯ ಕ್ರುತಿಗಳು
ಅನುವಾದ: ಜಿ.ರಾಮನಾತ ಬಟ್
ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು.
ಪ್ರಕಟಣೆ:2014

*** ಅಡಿಯ ಮುಂದಿಡು **

ಅಡಿಯ ಮುಂದಿಡಲು ನೀನಂಜಿಕೆಗೆ ಶರಣಾಗಿ
ನಿನ್ನ ನೀನಪಮಾನಿಸುವುದು ತರವಲ್ಲ
ನೀನಿಂದು ಭಯದಿಂದ ಮುಕ್ತನಾಗಲು ಬೇಕು
ಕೇಡಿನಾ ಭಯಕೆ ಮನನೋಯುವುದು ಸಲ್ಲ.

ನೀನು ಜಾಗೃತಗೊಳಿಸು ನಿನ್ನೆಲ್ಲ ಶಕ್ತಿಯನು
ಆಪತ್ತುಗಳನು ಎದುರಿಸಿ ಗೆಲ್ಲುವುದಕೆ
ಕೇಡಿಗರನೆಲ್ಲ ನೀ ಖಂಡಿಸುವ ಪಣವ ತೊಡು
ದುರ್ಬಲರಿಗೆಲ್ಲ ರಕ್ಷಣೆ ನೀಡುವುದಕೆ

ಬಡವನೆನಬೇಡ ನೀ ಆತ್ಮಚೈತನ್ಯದಲಿ
ಕುಗ್ಗದಿರು ನೀನು ಅಸಹಾಯನೆನ್ನುತಲಿ
ಅಚಲ ನಂಬಿಕೆಯಿರಲಿ ನಿನ್ನಾತ್ಮಶಕ್ತಿಯಲಿ
ಭಯದಿಂದ ಬಿಡುಗಡೆಯ ಪಡೆವ ಛಲವಿರಲಿ

ಸಂಕಷ್ಟಮಯ ಕಠಿಣ ಸಾಹಸದ ಪಥದಲ್ಲಿ
ನಿನ್ನ ಪೌರುಷಗಾಥೆ ಶ್ರುತಗೊಳ್ಳುತಿರಲಿ.

ವ್ಯಕ್ತಿಯು ತನ್ನ ಜೀವನದಲ್ಲಿ ಎದುರಾಗುವ ಸಂಕಟ, ಅಪಮಾನ ಮತ್ತು ಸೋಲುಗಳಿಗೆ ಹೆದರಿ ಹಿಮ್ಮೆಟ್ಟದೆ, ತನ್ನಲ್ಲಿ ತಾನು ನಂಬಿಕೆಯನ್ನಿಟ್ಟುಕೊಂಡು ಕೆಚ್ಚೆದೆಯಿಂದ ಮುನ್ನುಗ್ಗಬೇಕೆಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಅಡಿ=ಹೆಜ್ಜೆ/ಪಾದ; ಮುಂದೆ+ಇಡಲು; ಅಡಿಯ ಮುಂದಿಡು=ಇದೊಂದು ನುಡಿಗಟ್ಟು. ಜೀವನದಲ್ಲಿ ಒಳ್ಳೆಯ ಕೆಲಸವನ್ನು ಮಾಡುವುದಕ್ಕೆ ಉತ್ಸಾಹ, ಆಸಕ್ತಿ ಮತ್ತು ಕೆಚ್ಚಿನಿಂದ ತೊಡಗುವುದು;

ನೀನ್+ಅಂಜಿಕೆಗೆ; ಅಂಜಿಕೆ=ಹೆದರಿಕೆ/ದಿಗಿಲು/ಪುಕ್ಕಲು; ಶರಣ್+ಆಗಿ; ಶರಣು=ತಲೆಬಾಗು; ಅಂಜಿಕೆಗೆ ಶರಣಾಗಿ=ಹೆದರಿಕೆಗೆ ಗುರಿಯಾಗಿ/ಪುಕ್ಕಲುತನದಿಂದ ನಡುಗುತ್ತ;

ನೀನ್+ಅಪಮಾನಿಸುವುದು; ಅಪಮಾನ=ವ್ಯಕ್ತಿಯ ನಡೆನುಡಿಗೆ ಕಳಂಕ ಉಂಟಾಗುವುದು/ಕೆಟ್ಟ ಹೆಸರು ಬರುವುದು; ತರ+ಅಲ್ಲ; ತರ=ರೀತಿ; ತರವಲ್ಲ=ಸರಿಯಲ್ಲ/ಯೋಗ್ಯವಲ್ಲ;

ಅಡಿಯ ಮುಂದಿಡಲು ನೀನಂಜಿಕೆಗೆ ಶರಣಾಗಿ…ನಿನ್ನ ನೀನಪಮಾನಿಸುವುದು ತರವಲ್ಲ=ಎಲ್ಲಿ… ಯಾವಾಗ… ಏನಾಗುವುದೋ ಎಂಬ ಹೆದರಿಕೆಯಿಂದ ನೀನು ಒಳ್ಳೆಯ ಕೆಲಸವನ್ನು ಮಾಡದೆ ಹಿಂಜರಿದರೆ, ಅದು “ನಿನ್ನನ್ನು ನೀನೇ ಕೀಳು ಮಾಡಿಕೊಂಡಂತೆ ಇಲ್ಲವೇ ಕಯ್ಯಲ್ಲಿ ಆಗದವನು” ಎಂದು ಒಪ್ಪಿಕೊಂಡಂತಾಗುತ್ತದೆ. ಜೀವನದಲ್ಲಿ ಇಂತಹ ಪುಕ್ಕಲುತನದ ನಡೆನುಡಿ ಸರಿಯಲ್ಲ;

ನೀನ್+ಇಂದು; ಇಂದು=ಈಗ/ದಿನನಿತ್ಯದ ಬದುಕಿನಲ್ಲಿ; ಭಯ+ಇಂದ; ಭಯ=ಹೆದರಿಕೆ/ದಿಗಿಲು; ಮುಕ್ತನ್+ಆಗಲು; ಮುಕ್ತ=ಬಿಡುಗಡೆ ಹೊಂದಿದವನು; ಭಯಮುಕ್ತ=ಹೆದರಿಕೆಯಿಲ್ಲದವನು;

ನೀನಿಂದು ಭಯದಿಂದ ಮುಕ್ತನಾಗಲು ಬೇಕು= ನಿತ್ಯ ಜೀವನದ ಸನ್ನಿವೇಶಗಳಲ್ಲಿ ಯಾವುದೇ ಬಗೆಯ ಹೆದರಿಕೆಗೂ ಒಳಗಾಗದೆ, ಕೆಚ್ಚೆದೆಯಿಂದ ಕೂಡಿರಬೇಕು;

ಕೇಡು+ಇನ್+ಆ; ಕೇಡು=ಅಪಾಯ/ಆಪತ್ತು/ಹಾನಿ; ಮನನೋಯುವುದು=ಮನಸ್ಸು ಸಂಕಟದಿಂದ ತತ್ತರಿಸುವುದು; ಸಲ್ಲ=ತಕ್ಕುದಲ್ಲ/ಯೋಗ್ಯವಲ್ಲ;

ಕೇಡಿನಾ ಭಯಕೆ ಮನನೋಯುವುದು ಸಲ್ಲ=ಸಾವು ನೋವು ಉಂಟಾಗುವುದೆಂಬ ಹೆದರಿಕೆಯಿಂದ ಮನಸ್ಸನ್ನು ಗಾಸಿಗೊಳಿಸಿಕೊಳ್ಳುವುದು ಸರಿಯಲ್ಲ.ಏಕೆಂದರೆ ಹೆದರಿಕೊಂಡ ವ್ಯಕ್ತಿಯ ಮಯ್ ಮನಸ್ಸು ಪ್ರತಿಗಳಿಗೆಯಲ್ಲಿಯೂ ಆತಂಕದಿಂದ ತಲ್ಲಣಿಸುತ್ತ ಬಲಹೀನವಾಗುತ್ತದೆ;

ಜಾಗೃತ=ಎಚ್ಚರ/ವ್ಯಕ್ತಿಯು ತನ್ನ ಸುತ್ತಮುತ್ತ ನಡೆಯುತ್ತಿರುವುದೆಲ್ಲವನ್ನೂ ಗಮನಿಸುತ್ತಿರುವುದು; ನಿನ್ನ+ಎಲ್ಲ; ಶಕ್ತಿ=ಕಸುವು/ಬಲ; ಆಪತ್ತು=ತೊಂದರೆ/ಅಪಾಯ; ಎದುರಿಸು=ನೇರವಾಗಿ ಮುಂದೆ ನಿಂತು; ಗೆಲ್ಲು=ಜಯಿಸು;

ನೀನು ಜಾಗೃತಗೊಳಿಸು ನಿನ್ನೆಲ್ಲ ಶಕ್ತಿಯನು… ಆಪತ್ತುಗಳನು ಎದುರಿಸಿ ಗೆಲ್ಲುವುದಕೆ=ಜೀವನದಲ್ಲಿ ಬರುವ ಸಂಕಟಗಳನ್ನು ಎದುರಿಸಿ ಗೆಲ್ಲುವುದಕ್ಕಾಗಿ ಅಂದರೆ ಸಂಕಟಗಳ ಪರಿಹಾರಕ್ಕಾಗಿ ನಿನ್ನ ಮಯ್ ಮನದಲ್ಲಿರುವ ಶಕ್ತಿಯೆಲ್ಲವನ್ನೂ ಒಗ್ಗೂಡಿಸು;

ಕೇಡಿಗರನ್+ಎಲ್ಲ; ಕೇಡಿಗರು=ಇತರರಿಗೆ ಕೆಟ್ಟದ್ದನ್ನೇ ಮಾಡುವವರು; ಖಂಡಿಸು=ನಿರಾಕರಿಸು; ಪಣ=ಯಾವುದೇ ಒಂದು ಕೆಲಸವನ್ನು ಮಾಡಿಯೇ ಮುಗಿಸುತ್ತೇನೆ ಎಂಬ ನಿಲುವು; ತೊಡು=ಹೊಂದು/ತಳೆ; ದುರ್ಬಲರಿಗೆ+ಎಲ್ಲ; ದುರ್ಬಲರು=ಅನ್ನ, ಬಟ್ಟೆ, ವಸತಿಗೆ ಗತಿಯಿಲ್ಲದ ಬಡವರು; ರಕ್ಷಣೆ=ಕಾಪಾಡುವಿಕೆ; ನೀಡು=ಕೊಡು;

ಕೇಡಿಗರನೆಲ್ಲ ನೀ ಖಂಡಿಸುವ ಪಣವ ತೊಡು… ದುರ್ಬಲರಿಗೆಲ್ಲ ರಕ್ಷಣೆ ನೀಡುವುದಕೆ=ದುಡಿಯುವ ವರ್‍ಗದ ಬಡಜನರ ಪಾಲಿಗೆ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯ ದೊರಕದಂತೆ ಸಮಾಜದ ಸಂಪತ್ತೆಲ್ಲವನ್ನೂ ದೋಚುತ್ತಿರುವ ಕೇಡಿಗರ ಹೀನ ಕೆಲಸಗಳನ್ನು ತಡೆಹಿಡಿಯುವ ನಿಲುವನ್ನು ತಳೆದು, ಅವರ ಎದುರಾಗಿ ಹೋರಾಡಿ, ಬಡವರನ್ನು ಕಾಪಾಡಲು ಅಣಿಯಾಗು;

ಬಡವನ್+ಎನಬೇಡ; ಬಡವ=ಯಾವುದೇ ಬಗೆಯ ಆಸ್ತಿಯಾಗಲಿ/ಸಂಪತ್ತಾಗಲಿ ಇಲ್ಲದವನು; ಬಡವನು ಎನಬೇಡ=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ವ್ಯಕ್ತಿಯು ತನ್ನ ಮಯ್ ಮನದಲ್ಲಿ ಯಾವುದೇ ಬಗೆಯ ಕಸುವು ಇಲ್ಲ/ನನ್ನಿಂದ ಯಾವುದೇ ಒಳ್ಳೆಯ ಕೆಲಸ ಆಗಲಾರದು ಎಂಬ ನಿರಾಶೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಬಾರದು;

ಆತ್ಮ+ಚೈತನ್ಯದಲಿ; ಆತ್ಮ=ಮನಸ್ಸು; ಚೈತನ್ಯ=ಜೀವಂತಿಕೆ/ಲವಲವಿಕೆ/ಚಟುವಟಿಕೆ;

ಬಡವನೆನಬೇಡ ನೀ ಆತ್ಮಚೈತನ್ಯದಲಿ=ಮಾನಸಿಕವಾಗಿ ಕುಗ್ಗಬೇಡ. ಏಕೆಂದರೆ ಮಾನಸಿಕವಾಗಿ ಕುಗ್ಗಿದರೆ, ವ್ಯಕ್ತಿಯ ಚೇತನವೇ ಅಡಗಿಹೋಗುತ್ತದೆ. ವ್ಯಕ್ತಿಯ ಕಯ್ ಕಾಲು ಬಿದ್ದು ಹೋಗುತ್ತವೆ. ವ್ಯಕ್ತಿಯು ಬದುಕಿದ್ದು ಸತ್ತಂತೆ ಆಗುತ್ತಾನೆ;

ಕುಗ್ಗು=ಕುಂದು/ಸೊರಗು; ಅಸಹಾಯನ್+ಎನ್ನುತಲಿ; ಸಹಾಯ=ನೆರವು/ಒತ್ತಾಸೆ; ಅಸಹಾಯನ್=ಯಾರ ನೆರವು ಇಲ್ಲದವನು; ಎನ್ನುತಲಿ=ಎಂದುಕೊಂಡು;

ಕುಗ್ಗದಿರು ನೀನು ಅಸಹಾಯನೆನ್ನುತಲಿ=ನನಗೆ ಯಾರ ನೆರವಾಗಲಿ… ಬೆಂಬಲವಾಗಲಿ…ಒತ್ತಾಸೆಯಾಗಲಿ ಇಲ್ಲ. ನಾನು ಒಬ್ಬಂಟಿ ಎಂದು ಹತಾಶನಾಗಬೇಡ;

ಅಚಲ=ಅಲ್ಲಾಡದ/ಗಟ್ಟಿಯಾದ; ನಂಬಿಕೆ+ಇರಲಿ; ನಂಬಿಕೆ=ನೆಚ್ಚು/ವಿಶ್ವಾಸ; ನಿನ್ನ+ಆತ್ಮ+ಶಕ್ತಿಯಲಿ; ಆತ್ಮಶಕ್ತಿ=ಮನಸ್ಸಿನ ಗಟ್ಟಿತನ;

ಅಚಲ ನಂಬಿಕೆಯಿರಲಿ ನಿನ್ನಾತ್ಮಶಕ್ತಿಯಲಿ=ಒಳಿತನ್ನು ಮಾಡಬಲ್ಲೆ…ಕೆಟ್ಟದ್ದನ್ನು ಎದುರಿಸಬಲ್ಲೆ…ಎಂತಹ ಸಂಕಟವನ್ನಾದರೂ ಪರಿಹರಿಸಬಲ್ಲೆ ಎಂಬ ನಂಬಿಕೆಯು ನಿನ್ನಲ್ಲಿರಲಿ;

ಬಿಡುಗಡೆ=ವಿಮೋಚನೆ/ಮುಕ್ತಿ; ಪಡೆ=ಹೊಂದು; ಛಲ+ಇರಲಿ; ಛಲ=ಗಟ್ಟಿಯಾದ ನಿಲುವು;

ಭಯದಿಂದ ಬಿಡುಗಡೆಯ ಪಡೆವ ಛಲವಿರಲಿ=ಎಂತಹ ಅಪಾಯಕಾರಿಯಾದ ಸನ್ನಿವೇಶದಲ್ಲಿಯೂ ನಾನು ಹೆದರುವುದಿಲ್ಲವೆಂಬ ಗಟ್ಟಿಯಾದ ನಿಲುವು ನಿನ್ನ ಮನದಲ್ಲಿರಲಿ. ಏಕೆಂದರೆ ವ್ಯಕ್ತಿಯು ಕೆಚ್ಚೆದೆಯಿಂದ ಇದ್ದರೆ ಎಂತಹ ಆಪತ್ತನ್ನಾದರೂ ಎದುರಿಸಿ ಗೆಲ್ಲಬಹುದು;

ಸಂಕಷ್ಟ=ತೊಂದರೆ/ತೊಡಕು/ಅಡೆತಡೆ/ಕಿರುಕುಳ/ಹಿಂಸೆ; ಮಯ=ತುಂಬಿದ/ಕೂಡಿದ; ಕಠಿಣ=ಗಡುಸು/ಬಿರುಸು/ಕ್ರೂರವಾದುದು; ಸಾಹಸ=ಯಾವುದೇ ಕೆಲಸವನ್ನು ಮಾಡಲು ವ್ಯಕ್ತಿಯು ತನ್ನ ಶಕ್ತಿ ಮೀರಿ ಹೋರಾಡುವುದು/ಪ್ರಯತ್ನಿಸುವುದು; ಪಥ=ದಾರಿ/ಹಾದಿ;

ಸಂಕಷ್ಟಮಯ ಕಠಿಣ ಸಾಹಸದ ಪಥದಲ್ಲಿ=ಬಹುಬಗೆಯ ಸಂಕಟ, ಅಪಮಾನ ಮತ್ತು ಸೋಲುಗಳಿಂದ ತುಂಬಿರುವ ಜಗದ ಜೀವನದಲ್ಲಿ ಅವೆಲ್ಲವನ್ನೂ ತೊಡೆದುಹಾಕಲು ಹೋರಾಡುತ್ತ, ಸಾಹಸದಿಂದ ಮುನ್ನಡೆಯುತ್ತಿರುವ ದಾರಿಯಲ್ಲಿ;

ಪೌರುಷ=ಕೆಚ್ಚಿನಿಂದ ಕೂಡಿದ/ಸಾಹಸದಿಂದ ಕೂಡಿದ; ಗಾಥೆ=ಹಾಡು; ಶ್ರುತ=ಹೆಸರುವಾಸಿಯಾದ/ಕೀರ್‍ತಿಯನ್ನು ತರುವ;

ನಿನ್ನ ಪೌರುಷಗಾಥೆ ಶ್ರುತಗೊಳ್ಳುತಿರಲಿ=ಜೀವನದಲ್ಲಿ ಬರುವ ಸಂಕಟಗಳನ್ನು ಅಡಗಿಸಲು ವ್ಯಕ್ತಿಯಾಗಿ ನೀನು ಮಾಡುವ ಹೋರಾಟದ ಪ್ರಯತ್ನಗಳೆಲ್ಲವೂ, ಮಾನವನ ಮಯ್ ಮನಸ್ಸಿಗೆ ಇರುವ ಕಸುವು ಎಂತಹುದು ಎಂಬುದನ್ನು ಜಗತ್ತಿಗೆ ತಿಳಿಸುವ ಕಾವ್ಯವಾಗಿ ಜನಮನದಲ್ಲಿ ನೆಲಸಿ ಹೆಸರುವಾಸಿಯಾಗಲಿ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks