ಶಿಕ್ಶಣದಲ್ಲಿ ದೇಶಬಾಶೆಗಳು – 2

 ಪ್ರಿಯಾಂಕ್ ಕತ್ತಲಗಿರಿ.

language_largeok
ಕುವೆಂಪು ಬಾಶಾ ಬಾರತಿ ಪ್ರಾದಿಕಾರದವರು ಏರ‍್ಪಡಿಸಿದ್ದ “ಶಿಕ್ಶಣದಲ್ಲಿ ದೇಶಬಾಶೆಗಳು” ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಹಲವಾರು ನುಡಿಯರಿಗರು, ತಮ್ಮ ತಮ್ಮ ನುಡಿಸಮುದಾಯಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಆ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಒದಗಿಬಂದಿದ್ದರಿಂದ, ಅಲ್ಲಿ ತಿಳಿದುಕೊಂಡ ಕೆಲವು ವಿಶಯಗಳನ್ನು ಹೊನಲು ಓದುಗರಿಗಾಗಿ ಸರಣಿ ಬರಹದ ಮೂಲಕ ಇಡುತ್ತಿದ್ದೇನೆ.

ಕಳೆದ ಬರಹದಲ್ಲಿ, ರಾಜಸ್ತಾನಿ, ಸಿಂದಿ, ಕಾಶ್ಮೀರ ಮತ್ತು ಡೋಗ್ರಿ ನುಡಿಯಾಡುಗರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ನೋಡಿದೆವು. ಈ ಬರಹದಲ್ಲಿ ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲಿಕೆ ಮಾದ್ಯಮ ಮತ್ತು ನುಡಿಗಳು ಎದುರಿಸುತ್ತಿರುವ ತೊಂದರೆಗಳನ್ನು ತಿಳಿಯೋಣ.

ತಮಿಳುನಾಡಿನಲ್ಲಿ ಹಿಂದಿ ಹೇರಿಕೆ
ಹಿಂದಿ ಹೇರಿಕೆಯ ವಿರುದ್ದದ ಹೋರಾಟಕ್ಕೆ ಹೆಸರುವಾಸಿಯಾದ ತಮಿಳುನಾಡಿನಲ್ಲೂ ಇಂದು ಹಿಂದಿ ಹೇರಿಕೆ ಸದ್ದಿಲ್ಲದೇ ನಡೆಯುತ್ತಿದೆ. ತಮಿಳುನಾಡಿನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಹೆಸರುಹಲಗೆಗಳನ್ನೂ ಇಂಗ್ಲೀಶ್ ಮತ್ತು ಹಿಂದಿ ಎರಡೇ ನುಡಿಗಳಲ್ಲಿ ಬರೆಸಲಾಗಿದ್ದು, ತಮಿಳನ್ನೇ ಕಡೆಗಣಿಸಲಾಗಿದೆ. ಅದೇ ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರಾದ ಶ್ರೀ ಕ್ರಿಶ್ಣಸ್ವಾಮಿ ನಾಚಿಮುತು ಅವರು, “ಇಂತಹ ನುಡಿನೀತಿ ಯಾರ ಉಪಯೋಗಕ್ಕಾಗಿ?” ಎಂದು ಪ್ರಶ್ನಿಸಿದರು.

ತಮಿಳುನಾಡಿನಲ್ಲಿ ಕಲಿಕೆ ಮಾದ್ಯಮದ ಚರ‍್ಚೆ
ಇಂಗ್ಲೀಶ್ ಮಾದ್ಯಮವೇ ಏಳಿಗೆಯ ಮೆಟ್ಟಿಲು ಎಂಬ ತಪ್ಪನಿಸಿಕೆಯು ತಮಿಳುನಾಡಿನ ಜನರಲ್ಲೂ ಬೇರೂರುತ್ತಿದೆಯಂತೆ. ಹೆಚ್ಚು ಜನರ ಬೇಡಿಕೆಯಿದೆ ಎಂಬ ನೆಪವನ್ನೇ ಮುಂದಿಟ್ಟುಕೊಂಡು ತಮಿಳುನಾಡಿನ ಸರಕಾರವೂ ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ತೆರೆಯ ಹೊರಟಿದೆಯಂತೆ. ಸರಕಾರದ ಈ ನಡೆಯು ಚರ‍್ಚೆಗೆ ಕಾರಣವಾಗಿದ್ದು, “ತಾಯ್ನುಡಿಯಲ್ಲಿ ಕಲಿಕೆಯೇ ಮೇಲು” ಎಂಬ ದಿಟವನ್ನು ಬದಿಗೊತ್ತಿ ಸರಕಾರವು ಮುನ್ನಡೆಯುತ್ತಿರುವುದು ತಮಿಳುನಾಡಿನ ನುಡಿಯರಿಗರಲ್ಲಿ ಕಳವಳ ಉಂಟುಮಾಡಿದೆ.

ತೆಲಂಗಾಣದಲ್ಲಿ ಕಲಿಕೆ ಮಾದ್ಯಮ ಬೆಳವಣಿಗೆಗಳು
ತೆಲುಗು ನುಡಿಯರಿಗರಾದ ಪ್ರೊ. ಉಶಾದೇವಿ ಅವರು ತೆಲಂಗಾಣದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಮುಂದಿಟ್ಟರು. ತೆಲಂಗಾಣ ಬೇರೆ ರಾಜ್ಯವಾಗುವುದಕ್ಕೂ ಮುನ್ನ, ಆಂದ್ರಪ್ರದೇಶದಲ್ಲಿ ಹೆಚ್ಚಾಗಿ ತೆಲುಗು ಮಾದ್ಯಮ ಶಾಲೆಗಳೇ ಇದ್ದಿದ್ದು. ಅಲ್ಲಿನ ಸರಕಾರವು ತೆಲುಗು ಮಾದ್ಯಮ ಶಾಲೆಗಳನ್ನೇ ನಡೆಸುತ್ತಿತ್ತು. ಕಲಿಕೆ ಮಾದ್ಯಮ ತೆಲುಗೇ ಆಗಿರಬೇಕೋ, ಇಂಗ್ಲೀಶ್ ಆಗಿರಬೇಕೋ ಎಂಬ ಚರ‍್ಚೆ ಆಂದ್ರಪ್ರದೇಶದಲ್ಲಿಯೂ ಹುಟ್ಟಿದ್ದು, ಪರ-ವಿರೋದ ಅನಿಸಿಕೆಗಳು ಕಂಡುಬರುತ್ತಿದ್ದವು. ತೆಲಂಗಾಣವು ಬೇರೆಯೇ ರಾಜ್ಯವಾದಮೇಲೆ ಅಲ್ಲಿನ ಮುಕ್ಯಮಂತ್ರಿಗಳಾದ ಕೆ. ಚಂದ್ರಶೇಕರ ರಾವ್ ಅವರಂತೂ ಇಂಗ್ಲೀಶ್ ಮಾದ್ಯಮ ಶಾಲೆಗಳ ಬೆನ್ನಿಗೆ ಬಲವಾಗಿ ನಿಂತುಬಿಟ್ಟಿದ್ದಾರಂತೆ. “ತೆಲಂಗಾಣವನ್ನು ಮತ್ತು ಇಲ್ಲಿಯ ಜನರನ್ನೂ ಹಿಂದುಳಿದವರನ್ನಾಗಿ ಮಾಡುವ ಕೆಟ್ಟ ಉದ್ದೇಶದಿಂದಲೇ ನಮ್ಮಲ್ಲಿ ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ಕಟ್ಟಿರಲಿಲ್ಲ. ಈಗ, ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ತೆರೆಯುವ ಮೂಲಕ, ನಮ್ಮ ಏಳಿಗೆಯಾಗುತ್ತದೆ” ಎಂದು ಮುಕ್ಯಮಂತ್ರಿಗಳು ಹೇಳಿದ್ದಾರಂತೆ.

ಅವರ ಈ ನಿಲುವಿನಿಂದಾಗಿ, ತಾಯ್ನುಡಿಯಲ್ಲಿ ಕಲಿಯುವುದರ ಒಳಿತಿನ ಬಗ್ಗೆ ಚರ‍್ಚೆಯೇ ನಡೆಯದಂತಹ ವಾತಾವರಣ ಏರ‍್ಪಾಡಾಗಿದೆಯಂತೆ. ಹೊಸದಾಗಿ ಸರಕಾರವೇ ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ತೆರೆಯುತ್ತದೆ ಎಂದು ಕೆ.ಸಿ.ಆರ್ ಅವರು ಹೇಳಿರುವುದು, ಅಲ್ಲಿನ ಕಲಿಕೆಯರಿಗರು ಮತ್ತು ನುಡಿಯರಿಗರಲ್ಲಿ ಚಿಂತೆ ಹುಟ್ಟುಹಾಕಿದೆ.

ಯಾವುದೇ ಬಗೆಯ ಚರ‍್ಚೆಗೆ ಎಡೆಮಾಡಿಕೊಡದೆಯೇ, ಆನೆ ನಡೆದಿದ್ದೇ ದಾರಿ ಎನ್ನುವಂತೆ ಕೆ.ಸಿ.ಆರ್ ಅವರು ಸಾಗುತ್ತಿರುವುದು ತೆಲಂಗಾಣದ ಜನರಿಗಂತೂ ಮುಂದಿನ ದಿನಗಳಲ್ಲಿ ಎಡವಟ್ಟು ತಂದೊಡ್ಡಲಿದೆ.

(ಚಿತ್ರ ಸೆಲೆ: mathrubhoomi.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.