ಹಬ್ಬಿ ನಿಂತಿರುವ ಮಿಂಬಲೆ
– ರತೀಶ ರತ್ನಾಕರ.
ದಿನೇ ದಿನೇ ಬೆಳೆಯುತ್ತಿರುವ ಜಗತ್ತಿನಲ್ಲಿ ಹೊಸತನವನ್ನು ನೋಡುತ್ತಲೇ ಇರುತ್ತೇವೆ. ಟಿವಿ, ಬಾನುಲಿ, ಮಿಂಬಲೆ, ಅಲೆಯುಲಿಯಂತಹ ಚಳಕಗಳು ಜಗತ್ತಿನ ಪರಿಚಯವನ್ನು ಮಂದಿಗೆ ಮಾಡಿಕೊಡುತ್ತಲೇ ಇದೆ. ಈ ಹೊಸ ಚಳಕಗಳ ಸುತ್ತಲು ದೊಡ್ಡ ದೊಡ್ಡ ವ್ಯಾಪಾರ ವಹಿವಾಟುಗಳು ಹುಟ್ಟುತ್ತಿವೆ. ಅದಕ್ಕೆ ತಕ್ಕಂತೆ ಮಂದಿಯೂ ಕೂಡ ಒಗ್ಗಿಕೊಳ್ಳುತ್ತಿದ್ದಾರೆ. ಕೆಲವು ವರುಶಗಳ ಕೆಳಗೆ ಕರ‍್ನಾಟಕದಲ್ಲಿ ಅಲೆಯುಲಿ ಮತ್ತು ಮಿಂಬಲೆಯನ್ನು ಕಡಿಮೆಯೆಣಿಕೆಯ ಮಂದಿ ಬಳಸುತ್ತಿದ್ದರು. ಅರಿಮೆ ಹಾಗು ಚಳಕಗಳು ಬೆಳೆದಂತೆ ಮಂದಿಯ ಕೈಗೆಟುಕುವಂತೆ ಹೆಚ್ಚಿನ ಸವಲತ್ತುಗಳು ಸಿಗತೊಡಗಿದವು. ಈಗ ಅಲೆಯುಲಿಯು ಸಾಮಾನ್ಯ ಮಂದಿಯ ಎಂದಿನ ಬಳಕೆಯ ವಸ್ತುವಾಗಿದೆ, ಹಾಗೆಯೇ ಮಿಂಬಲೆಯ ಬಳಕೆ ಕೂಡ ಹೆಚ್ಚುತ್ತಿದೆ.
ಇದರ ಜೊತೆ ಜೊತೆಗೆಯೇ ಮಾರುಕಟ್ಟೆಯಲ್ಲಿನ ಮಾರಾಟದ ವಸ್ತುಗಳನ್ನು ಮಂದಿಗೆ ಪರಿಚಯಸುವ ಪ್ರಯತ್ನಗಳು ಹೊಸ ಹೊಸ ಹೊಳಹುಗಳ ಮೂಲಕ ನಡೆಯುತ್ತಿದೆ. ಟಿವಿ ಹಾಗು ಬಾನುಲಿಗಳಲ್ಲಿ ಬಯಲರಿಕೆಯ ಮೂಲಕ ಮಂದಿಯನ್ನು ತಲುಪುವ ಪ್ರಯತ್ನ ಈ ಹಿಂದೆ ನಡೆದಿತ್ತು, ಮತ್ತು ಇನ್ನೂ ನಡೆಯುತ್ತಿದೆ. ಈ ಸಾಲಿಗೆ ಇತ್ತೀಚಿನ ಸೇರ‍್ಪಡೆ ಎಂದರೆ ಅಲೆಯುಲಿ ಮತ್ತು ಮಿಂಬಲೆಗಳು. ಬಟ್ಟೆ, ಕಾರು, ಮನೆ, ಮನೆಯೊಳಗಿನ ಉಪಕರಣಗಳು, ಜಾಗ, ತಿಂಡಿ-ತಿನಿಸುಗಳು, ಹೀಗೆ ಮಾರುವ ವಸ್ತು ಇಲ್ಲವೇ ಸೇವೆಗಳತ್ತ ಮಂದಿಯ ಗಮನ ಸೆಳೆಯಲು ಎಲ್ಲಾ ಬಗೆಯ ಪ್ರಯತ್ನಗಳು ಮಾರುವವರಿಂದ ನಡೆಯುತ್ತಿದೆ. ಇದಕ್ಕೆ ಸಿನಿಮಾಗಳು ಕೂಡ ಹೊರತಾಗಿಲ್ಲ. ತಾವು ಮಾಡಿದ ಚಿತ್ರಗಳಿಗೆ ಪ್ರಚಾರ ಗಿಟ್ಟಿಸಲು ಚಿತ್ರತಂಡದವರು ಕೂಡ ಅಲೆಯುಲಿ ಮತ್ತು ಮಿಂಬಲೆಗಳನ್ನು ಬಳಸುತ್ತಿದ್ದಾರೆ.
ಇತ್ತೀಚೆಗೆ ‘ರಿಂಗ್ ರೋಡ್ ಶುಬ‘ ಎಂಬ ಕನ್ನಡ ಚಿತ್ರತಂಡದವರು ತಮ್ಮ ಚಿತ್ರದ ಪ್ರಚಾರಕ್ಕೆ ಒಂದು ಬಯಲರಿಕೆಯನ್ನು ಮಾಡಿದ್ದರು. ಅದರಲ್ಲಿ ಅಲೆಯುಲಿ ಅಂಕಿಗಳನ್ನು ನೀಡಿ, ಆ ಅಂಕಿಗೆ ತಪ್ಪಿದ ಕರೆ(missed call) ಮಾಡಿದವರಿಗೆ ‘ವಾಟ್ಸಪ್’ ಮೂಲಕ ಚಿತ್ರದ ತುಣುಕುಗಳ ವಿಡಿಯೋ ಕಳಿಸುವುದಾಗಿ ತಿಳಿಸಿದ್ದರು. ಈ ಬಯಲರಿಕೆ ಹೊರಬಿದ್ದ ಕೂಡಲೆ ಚಿತ್ರತಂಡದವರಿಗೆ ಕರೆಗಳ ಹೊಳೆಯೇ ಹರಿದು ಬಂದಿದೆ. ಒಂದು ನಿಮಿಶಕ್ಕೆ ಸುಮಾರು 800 ತಪ್ಪಿದ ಕರೆಗಳು! ಒಂದೇ ದಿನದಲ್ಲಿ ಸುಮಾರು ಹತ್ತು ಸಾವಿರ ತಪ್ಪಿದ ಕರೆಗಳು! ಚಿತ್ರ ತಂಡದವರಿಗೇ ಅಚ್ಚರಿಯಾಗುವಂತೆ ಈ ಬಯಲರಿಕೆಗೆ ಮಂದಿಯು ಓಗೊಟ್ಟಿದ್ದಾರೆ.
ರಿಂಗ್ ರೋಡ್ ಶುಬ ಎಂಬುದು ಕೋಟಿ ಕೋಟಿ ಬಜೆಟ್ ಆಗಲಿ, ಇಲ್ಲವೇ ಅತಿ ಹೆಚ್ಚು ನಿರೀಕ್ಶೆಯನ್ನು ಹುಟ್ಟಿಸಿದ ಚಿತ್ರವೇನಲ್ಲ. ಆದರೂ ಕನ್ನಡ ಚಿತ್ರದ ನೋಡುಗರು ಈ ಚಿತ್ರದ ಬಯಲರಿಕೆಗೆ ನೀಡಿರುವ ಉತ್ತರವನ್ನು ನೋಡಿದರೆ, ಮಿಂಬಲೆ ಹಾಗು ಅಲೆಯುಲಿಯನ್ನು ಹೊಂದಿರುವ ಕನ್ನಡ ಗ್ರಾಹಕರ ದಂಡು ಎಶ್ಟು ದೊಡ್ಡದಿದೆ ಎಂದು ಅರಿವಾಗುತ್ತದೆ. ಕನ್ನಡಿಗರ ಕೈಯಲ್ಲಿ ಮಿಂಬಲೆ ಈಗ ಹಬ್ಬಿ ನಿಂತಿದೆ. ಈ ಮಿಂಬಲೆ ಮಾರುಕಟ್ಟೆ ಎಶ್ಟು ದೊಡ್ಡದಾಗಿದೆ ಎಂಬುದನ್ನು ರಿಂಗ್ ರೋಡ್ ಶುಬ ಚಿತ್ರತಂಡದ ಪ್ರಯೋಗ ತೋರ‍್ಪಡಿಸಿದೆ.
ಹೀಗೆ, ಮಿಂಬಲೆಯಂತಹ ಹೊಸ ಚಳಕಗಳನ್ನು ಬಳಸುತ್ತಿರುವ ಕನ್ನಡಿಗರ ಎಣಿಕೆ ಹೆಚ್ಚಾಗಿದೆ ಮತ್ತು ದಿನೇ ದಿನೇ ಹೆಚ್ಚುತ್ತಿದೆ. ಕನ್ನಡಕ್ಕೆ ಹೊಸ ಮಾರುಕಟ್ಟೆಯಾಗಿ ಈಗ ಮಿಂಬಲೆ ಮಾರ‍್ಪಾಟಾಗಿದೆ. ಇದಕ್ಕೆ ಒಂದು ಉದಾಹರಣೆ ರಿಂಗ್ ರೋಡ್ ಶುಬ ಚಿತ್ರ ತಂಡಕ್ಕೆ ಸಿಕ್ಕಿರುವ ಪ್ರತಿಕ್ರಿಯೆ. ಚಿಕ್ಕಮಟ್ಟದ ಬಯಲರಿಕೆಯಿಂದಲೇ ಇಶ್ಟೊಂದು ಜನರನ್ನು ತಲುಪಲು ಸಾದ್ಯವಾಗಿದೆ ಎಂದರೆ, ಚೆನ್ನಾಗಿ ಬಯಲರಿಕೆ ನೀಡಿ ಮಂದಿಯನ್ನು ತಲುಪಿದರೆ, ಮಿಂಬಲೆ ಮೂಲಕ ಲಕ್ಶಗಟ್ಟಲೆ ಕನ್ನಡಿಗರನ್ನು ತಲುಪಬಹುದು.
(ಚಿತ್ರ ಸೆಲೆ: ವಿಜಯ ಕರ್ನಾಟಕ)
ಇತ್ತೀಚಿನ ಅನಿಸಿಕೆಗಳು