ದೆವ್ವ – ಅರಿವಿಲ್ಲದ ಅನುಬವ

– ಹರ‍್ಶಿತ್ ಮಂಜುನಾತ್.

kaggattala ratri
ಲಕ್ಶ್ಮೀಪುರ ! ಲಕ್ಶ್ಮಿ, ಊರಿನ ಹಸರಲ್ಲಿ ಮಾತ್ರ. ಉಳಿದಂತೆ ಅಲ್ಲಿ ಬಡತನದ್ದೇ ಮೇಲಾಟ. ಅದೂ ಸಾಕಿಲ್ಲವೆನ್ನುವಂತೆ ಕಲಿಕೆಮನೆಯ ಮೆಟ್ಟಿಲೇ ಹತ್ತಿರದ ಕಹಿನೆನಪುಗಳು. ಆದರೂ ನಲಿವ ಬದುಕಿನ ಕನಸ ಹೊತ್ತ ಕಣ್ಣುಗಳಿಗೇನೂ ಬರವಿಲ್ಲ. ಏಕೆಂದರೆ ಕನಸಿಗೆ ಕಾಸಿಲ್ಲ! ಅಂತಹ ಕನಸುಗಳ ದಾಸಿಯೇ ನಮ್ಮ ಕತೆಯ ನಾಯಕಿ. ಅವಳೇ ರೇಕಾ. ಇನ್ನೂ ಹದಿನಾರರ ವಯಸ್ಸು. ಓದಿನಲ್ಲೂ ಆಟದಲ್ಲೂ ಸದಾ ಮುಂದು. ಎಳವೆಯಲ್ಲೇ ಬಹಳಶ್ಟು ಹೆಸರು ಮಾಡಿದ ಹುಡುಗಿ. ಯಾರೂ ಸಾದಿಸದ್ದನ್ನೊಂದು ತಾನು ಸಾದಿಸಬೇಕೆಂಬ ಬಯಕೆ. ‘ನಮ್ಮ ಮಗಳು ಅಂದುಕೊಂಡದ್ದೆಲ್ಲಾ ನಡೆಯಲಿ’ ಎಂಬುವುದು ಹೆತ್ತವರ ಹರಕೆ.

ಲಕ್ಮ್ಮೀಪುರದ ತೆಂಕಣ ದಿಕ್ಕಲ್ಲೊಂದು ದೊಡ್ಡಬೆಟ್ಟ, ಸುತ್ತ ದಟ್ಟಕಾಡು. ಅಮವಾಸೆ ಬಂತೆಂದರೆ ಸಾಕು, ಈ ಊರಲ್ಲಿ ಆ ಬೆಟ್ಟದ್ದೇ ಮಾತು-ಕತೆ. ಇವೆರಡಕ್ಕಿಂತ ಹೆಚ್ಚು ಬಯ!

“ಹಿಂದೆ ರಾಜರ ಕಾಲದಲ್ಲಿ, ತಪ್ಪು ಮಾಡಿದವರಿಗೆ ಶಿಕ್ಶೆಯೆಂಬಂತೆ ಈ ಬೆಟ್ಟದ ತುದಿಗೆ ತಂದು ತಲೆ ಕಡಿಯುತ್ತಿದ್ದರು. ಅಲ್ಲಿ ಸತ್ತವರು ಈಗ ದೆವ್ವವಾಗಿ ಆ ಬೆಟ್ಟದ ಮೇಲಿದ್ದಾರೆ” ಎಂಬುವುದು ಈ ಊರಿನವರ ನಂಬಿಕೆ. ಅಶ್ಟಕ್ಕೂ ಈ ದೆವ್ವವನ್ನು ಕಂಡವರಾರಿಲ್ಲವಾದರೂ, ಕಾಣ ಹೋದವರು ತಿರುಗಿಬಂದ ಹಳಮೆಯಿಲ್ಲ. ಇದೊಂದೇ ಈ ಮಂದಿಯ ಬಯಕ್ಕೊಂದು ಬೆನ್ನೆಲುಬು.

ಈ ಕತೆಗಳ ಮೇಲೆ ನಮ್ಮ ರೇಕಾಳಿಗದಶ್ಟು ನಂಬಿಕೆಯಿಲ್ಲ. ಇವೆಲ್ಲ ಕಟ್ಟುಕತೆ. ಇದರ ಹಿಂದೆ ಬೇರೆ ಏನೋ ಪಿತೂರಿಯಿದೆ ಎಂಬ ಸಂದೇಹ ಆಕೆಯದು. ಇದರ ಬಗ್ಗೆ ನಮ್ಮ ಮಂದಿಗೆ ಮನವರಿಕೆ ಮಾಡಬೇಕು, ಈ ದೆವ್ವ ಬೂತವೆಂಬುದೆಲ್ಲ ಸುಳ್ಳು ಎಂಬುದನ್ನು ತಾನು ಎಲ್ಲರಿಗೂ ತೋರಿಸಬೇಕು ಎಂದು ತನ್ನ ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕುತ್ತಿದ್ದಳು. ಹಾಗೆಯೇ ಅದಕ್ಕೆ ಬೇಕಾದಶ್ಟು ತಯಾರಿಗಳನ್ನು ನಡೆಸುತ್ತಿದ್ದಳು. ಹೀಗೆ ದಿನಕಳೆದು ಅಮವಾಸೆಯ ದಿನಬಂತು. ಹೇಗಾದರು ಮಾಡಿ ಈ ಅಮವಾಸೆಗೆ ಆ ಬೆಟ್ಟದತ್ತ ಒಂದು ಬೇಟಿಯಿಡಬೇಕು ಎನ್ನುವುದು ಆಕೆಯ ಯೋಚನೆ. ಹಾಗಾಗಿ ಮನೆಯ ಯಾವ ಮಂದಿಗೂ ತಿಳಿಯದಂತೆ ಎಲ್ಲಾ ತಯಾರಿಗಳನ್ನೂ ಮಾಡಿಕೊಂಡು ಹೊತ್ತು ಹನ್ನೆರಡಾಗುವುದನ್ನೇ ಕಾಯುತ್ತಿದ್ದಳು. ಹಸಿವಿಲ್ಲದಿದ್ದರೂ ಮನೆಯವರ ಬಲವಂತಕ್ಕೆ ಎರಡು ತುತ್ತು ಹೊಟ್ಟೆಗೆ ಹಾಕಿಕೊಂಡು, ಮಂಚದ ಮೇಲೆ ಕುಳಿತು, ಮೆತ್ತಗೆ ಗೋಡೆಗೆ ಒರಗಿ ಕಣ್ಣು ಮುಚ್ಚಿಕೊಂಡು ಬೆಟ್ಟದ ಮೆಲುಕು ಹಾಕಲು ಶುರುವಿಟ್ಟಳು. ಇತ್ತ ನಿದ್ರೆಯೂ ಮೆಲ್ಲಗೆ ಆಕೆಯನ್ನು ಆವರಿಸಿತ್ತು.

ಹೊತ್ತು ಹನ್ನೆರಡು, ಸತ್ತಲೂ ಬಯಂಕರ ಕತ್ತಲು, ಮಯ್ ಕೊರೆಯುವ ಚಳಿ, ಎದೆ ನಡುಗಿಸುವ ಶಬ್ದಗಳು, ಇವೆಲ್ಲದರ ನಡುವೆ ರೇಕಾ, ಒಂದು ಕಯ್ಯಲ್ಲಿ ಲಾಂದ್ರದ ದೀಪವನ್ನು ಹಿಡಿದುಕೊಂಡು, ಇನ್ನೊಂದು ಕಯ್ಯಲ್ಲಿ ಕಯ್ಯಲ್ಲಿ ಒಂದು ಉದ್ದನೆಯ ದೊಣ್ಣೆಯನ್ನು ಹಿಡಿದುಕೊಂಡು ಬೆಟ್ಟದ ಕಡೆ ಹೊರಟಳು. ಊರ ದಾರಿ ಮುಗಿದು ಕಾಡ ಹಾದಿ ಶುರುವಾಯಿತು. ‘ದೆವ್ವ ಬೂತ ಅನ್ನೋದೇನಿಲ್ಲ’ ಎಂದು ಅಂದುಕೊಂಡರೂ, ಮನಸ್ಸಿನಲ್ಲಿ ಏನೋ ಕಳವಳ, ನಡುಕ, ಬಯ. ‘ಈ ಬಂಡ ದಯ್ರ್ಯ ನನಗೇಕೆ ? ಸುಮ್ಮನೆ ಊರ ದಾರಿ ಹಿಡಿದು ಮನೆ ಸೇರೋಣ’ವೆಂದು ಕೆಲವೊಮ್ಮೆ ಅನ್ನಿಸಿದರೂ, ಏನಾದರೊಂದನ್ನು ಸಾದಿಸಬೇಕೆಂಬ ಹಟ ಇನ್ನೊಂದು ಕಡೆ. ಆಗಿದ್ದಾಗಲಿ ಎಂದುಕೊಂಡ ಮುಂದೆ ನಡೆದ ರೇಕಾ ಅದಾಗಲೇ ಬೆಟ್ಟದ ಬಳಿ ತಲುಪಿದ್ದಳು. ಆದರೆ ಅಲ್ಲಿಯ ವರೆಗೆ ಯಾವುದೇ ವಿಶೇಶ ಅನುಬವಗಳು ಆಕೆಯ ಗಮನಕ್ಕೆ ಬರಲಿಲ್ಲ. ಇನ್ನೇನು, ಒಮ್ಮೆ ಬೆಟ್ಟದ ಮೇಲೆ ಹತ್ತಿನೋಡೋಣವೆಂದು ಬಲಬದಿಗೆ ತಿರುಗುತ್ತಿದ್ದಂತೆ ಪೊದೆಯೊಳಗೇ ಏನೋ ಪಟ್ ಎಂದು ಶಬ್ದ ಬಂದಂತಾಯಿತು. ನಡುಕ ಹೆಚ್ಚಿತು. ಮೆತ್ತಗೆ ಹೆಜ್ಜೆಯನ್ನು ಮುಂದೆ ಇಡುತ್ತಿದ್ದಂತೆ ಮತ್ತೆ ಶಬ್ದ ತುಸು ಜೋರಾಗೇ ಬಡಿಯಿತು. ನೋಡ ನೋಡುತ್ತಿದ್ದಂತೆ ಆನೆಯೊಂದು ಪೊದೆಯಾಚೆಯಿಂದ ರೇಕಾಳ ಕಡೆ ನುಗ್ಗಿ ಬರುತ್ತಿತ್ತು.

ಸಾಮಾನ್ಯವಾಗಿ ದೆವ್ವಗಳು, ಬಹುರೂಪಿಗಳು. ಅವು ಹೊತ್ತಿಗೆ ತಕ್ಕಂತೆ ತಮಗೆ ಬೇಕಾದ ರೂಪ ತಾಳುತ್ತವೆಂಬ ಕತೆಯನ್ನು ಹಿಂದೊಮ್ಮೆ ರೇಕಾ ಹಿರಿಯರ ಬಾಯಿಂದ ಕೇಳಿದ್ದಳು. ಈ ಕತೆ ಆ ಕ್ಶಣಕ್ಕೆ ಮೆಲ್ಲನೆ ಆಕೆಯ ಮನಸ್ಸಿನಲ್ಲಿ ಹಾದುಹೋಯಿತು. ಅದರಂತೆ ದೆವ್ವವೇ ಆನೆಯ ರೂಪದಲ್ಲಿ ಬಂದಿದೆ ಎಂದು ಹೆದರಿದ ರೇಕಾ, ತನ್ನ ಕಯ್ಯಲ್ಲಿದ್ದ ದೀಪವನ್ನು ಆನೆಯ ಕಡೆ ಎಸೆದು ದಿಕ್ಕಾಪಾಲಾಗಿ ಓಡಿದಳು. ದೀಪದ ಸೀಸ ನೇರವಾಗಿ ಒಂದು ಕಲ್ಲಿಗೆ ಬಡಿದು, ಸೀಸದೊಳಗಿದ್ದ ಕಲ್ಲೆಣ್ಣೆ  (kerosene ) ಸುತ್ತಲು ಪಸರಿಸುತ್ತಿದ್ದಂತೆ ಬೆಂಕಿಯು ಹೊತ್ತಿಕೊಂಡಿತು. ಇದು ಆನೆಯ ದಾಳಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಿತು. ಇತ್ತ ಹೆದರಿಹೋಗಿದ್ದ ರೇಕಾ, ಕಲ್ಲು ಮುಳ್ಳು ಎನ್ನದೇ ಓಡುತ್ತಿದ್ದಂತೆ ಎಡವಿ ಮುಳ್ಳಿನ ರಾಶಿಯ ಮೇಲೆ ಬಿದ್ದಳು. ನೋವಿನಿಂದ ಸುದಾರಿಸಿಕೊಳ್ಳುತ್ತಾ ಮೇಲೇಳುವಶ್ಟರಲ್ಲಾಗಲೇ ಮುಳ್ಳಿನ ಚೂಪಿನಿಂದಾಗಿ, ಮಯ್ ಗಾಸಿಯಾಗಿತ್ತು, ಬಟ್ಟೆ ಹರಿದುಹೋಗಿತ್ತು. ಕಯ್ ಕಾಲುಗಳಿಂದ ಚಿಮ್ಮತ್ತಿದ್ದ ನೆತ್ತರನ್ನು ಒರೆಸಿಕೊಳ್ಳುತ್ತಾ, ಊರ ದಾರಿ ಯಾವುದೆಂದು ತಿಳಿಯದೇ ಬಯದಿಂದ ಹೊರಟಳು. ಅಲ್ಲೇ ಸ್ವಲ್ಪ ದೂರದಲ್ಲಿ ಯಾರೋ ಮೂವರು ಬೆಂಕಿ ಹಾಕಿಕೊಂಡು ಚಳಿ ಕಾಯಿಸುತ್ತಿದ್ದ ಹಾಗೆ ಕಾಣಿಸಿತು. ತಡಮಾಡದೆ ರೇಕಾ ಆ ಮೂವರ ಕಡೆ ನಡೆದಳು.

ಇನ್ನೇನು ಆ ಮೂವರ ಸಮೀಪಿಸುತ್ತಿದ್ದಂತೆ ಏನನ್ನೋ ಎಡವಿ ದೊಪ್ಪೆಂದು ರೇಕಾ ನೆಲಕ್ಕೆ ಬಿದ್ದಳು. ಗಾಬರಿಯಿಂದ ಎದ್ದವಳೇ ತಾನೇನನ್ನು ಎಡವಿದೆ ಎಂದು ತಿರುಗಿ ನೋಡುತ್ತಿದ್ದಂತೆ ಅರೆಕ್ಶಣ ದಂಗಾದಳು. ಒಬ್ಬನ ಶವ ತುಸು ಕೊಳೆತ ರೀತಿಯಲ್ಲಿತ್ತು. “ಅರೆ ಇದು ನಮ್ಮ ಶಾಂತಪ್ಪ ಅಲ್ವೇ ? ಇವನನ್ನು ನಾನು ಬೆಳಿಗ್ಗೆಯಶ್ಟೇ ಕಂಡು ಮಾತನಾಡಿಸಿದ್ದೇನೆ. ಈಗ ನೋಡಿದರೆ ಕೊಳೆತ ಶವವಾಗಿದ್ದಾನಲ್ಲ” ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ, “ಇನ್ನು ಅರೆಕ್ಶಣ ಇಲ್ಲಿರುವುದೂ ಸರಿಯಲ್ಲ” ಎಂದುಕೊಂಡು ಮುಂದೆ ಹೆಜ್ಜೆಹಾಕಿದಳು. ಯಾರೋ ತಮ್ಮತ್ತ ಬರುತ್ತಿರುವ ಸಪ್ಪಳ ಆ ಮೂವರ ಕಿವಿಗೆ ಬೀಳುತ್ತಿದ್ದಂತೆ ತಿರುಗಿ ನೋಡಿದರು. ರೇಕಾಳಿಗೆ ಆಶ್ಚರ‍್ಯವಾಯಿತು. “ದೆವ್ವ ಅಂಬೋದೆಲ್ಲಾ ಸುಳ್ಳು. ನಾವ್ ನಿಮ್ಗ ತೊರ‍್ಸ್ ಕೊಡ್ತೀವ ನೋಡ್ರೀ” ಎಂದು ಪಂಚಾಯ್ತಿ ಕಟ್ಟೇಲಿ ಊರ ಗವ್ಡರಿಗೆ ಸವಾಲೆಸೆದು ಕಾಡ ದಾರಿ ಹಿಡಿದವರು. ಹೋಗಿ ಎರಡು ತಿಂಗಳಾದರೂ ಸುಳಿವೇ ಇರಲಿಲ್ಲಾ. ಕೊನೆಗೆ ಕಶ್ಟ ಕಾಲದಲ್ಲಿ ನನಗೆ ಸಿಕ್ಕಿದರಲ್ಲ, ಎಂದು ಅಂದುಕೊಂಡು ಆ ಮೂವರ ಬಳಿ ಹೋದಳು.

“ಏನವ್ವಾ ರೇಕಾ, ನೀನ್ಯಾಕ್ ಇಲ್ಲಿಗ್ ಬಂದಿ. ಇದೂ ಚಕ್ರವ್ಯೂಹ್ ಇದ್ದಾಂಗ. ಇಲ್ಲಿಗ್ ಬರೋದಕ್ ಮಾತ್ರ ಆಯ್ತಯ್ತಿ. ಹೊಳ್ಳೆ ಹೋಗದಕ್ಕಾಗಲ್ ಮಗ್ಳೇ. ಎಂತಾ ಕೆಲ್ಸ್ ಮಾಡ್ದಿ ?” ಎಂದು ಅವರು ಹೇಳಿದಾಗ, ರೇಕಾ ನೆಲಕ್ಕೆ ಕುಸಿದಳು.

ಕೆಲಹೊತ್ತು ಅಲ್ಲೇ ಸುದಾರಿಸಿಕೊಂಡ ರೇಕಾ, ಆ ಮೂವರೊಂದಿಗೆ ಮುಂದಕ್ಕೆ ನಡೆದಳು.ಹೊತ್ತು ಕಳೆಯುತ್ತಲೇ ಇತ್ತು. ದಾರಿ ಸಾಗುತ್ತಲೇ ಇತ್ತು. ತನೆಲ್ಲಿಗೆ ಹೋಗುತ್ತಿದ್ದೇನೆಂಬ ಪರಿವೇ ಇಲ್ಲದೆ, ರೇಕಾ ಅವರೊಂದಿಗೆ ಹೋಗುತ್ತಲೇ ಇದ್ದಳು. ನೋಡ ನೋಡುತ್ತಿದ್ದಂತೆ ಆಕೆ ಬೆಟ್ಟದ ತುದಿ ತಲುಪಿದ್ದಳು. “ನಾವೆಲ್ಲಿಗೆ ಬಂದಿದ್ದೇವೆ ? ಇಲ್ಲಿಂದ ಊರು ಸೇರುವುದು ಹೇಗೆ ?” ಎಂದು ಕೇಳಿ ಹಿಂದೆ ತಿರುಗಿದಳು.

ನೋಡಿದರೆ ಆಕೆಯ ಹಿಂದಿದ್ದವರಿಬ್ಬರು ಮಾಯವಾಗಿದ್ದರು. ಆಕೆ ಗಾಬರಿಯಿಂದ “ಅರೆ ಇವರಿಬ್ಬರು ಎಲ್ಲಿ ಹೋದರು ?” ಎಂದು ಹೇಳುತ್ತಿದ್ದಂತೆ, ದೆವ್ವ ಆಕೆಯ ಎದುರು ನಿಂತಿತ್ತು. ಚಿಂದಿಯಾದ ಬಟ್ಟೆ, ವಿಕ್ರುತ ಕಣ್ಣುಗಳು, ಮುಕದಿಂದ ಇಳಿಯುತ್ತಿರುವ ನೆತ್ತರು, ಉದ್ದುದ್ದ ಉಗುರುಗಳು, ಕುರೂಪಿಯಂತ ಮಯ್ ಕಟ್ಟನ್ನು ನೋಡಿ, ರೇಕಾ ಬಯದಿಂದ ನಡುಗಿ ಹೋದಳು. ‘ದೆವ್ವದ್ ಜೊತೇನೇ ಆಟಾನ ನಿನ್ಗೆ ?’ ಎನ್ನುತ್ತಾ ದೆವ್ವಾ ರೇಕಾಳ ಕಯ್ ಹಿಡಿದು ಎಳೆಯಿತು.

ರೇಕಾ ರಪ್ಪನೆ ಮಂಚದಿಂದ ಕೆಳಗೆ ಬಿದ್ದವಳೆ, ನಿದಾನವಾಗಿ ಕಣ್ತೆರದಳು. ಮುಂದೆ ಆಕೆಯ ತಾಯಿ ಕುಳಿತ್ತಿದ್ದರು. “ಮಗ್ಳೇ ಏನಾಯ್ತು ?” ಎಂದಾಗ ರೇಕಾಳಿಗೆ ತನ್ನ ಕನಸಿನ ಅರಿವಾಯಿತು.

“ಏನಿಲ್ಲಮ್ಮ. ಏನೋ ಕೆಟ್ ಕನ್ಸ್ ಬಿತ್ತು” ಎಂದೆನ್ನುತ್ತಾ, ತನಗರಿವಿಲ್ಲದಂತೆಯೇ ತನಗಾದ ಅನುಬವವನ್ನು ನೆನೆದು ಪುಳಕಿತಳಾದಳು.

(ಚಿತ್ರ ಸೆಲೆ: razyboard.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: