ಹಿತಾರು – ಬುಡಕಟ್ಟು ನಡೆನುಡಿಯ ಕುರುಹು

– ರತೀಶ ರತ್ನಾಕರ.

Hitharu2

ಹಬ್ಬದಂದು ಇಟ್ಟ ಹಿತಾರು ಎಡೆ

ಹಿರಿಯರುಗಳೇ ನಮ್ಮ ದೇವರುಗಳು ಎಂಬ ನಂಬಿಕೆ ತುಂಬಾ ಹಿಂದಿನಿಂದಲೂ ಬಂದಿದೆ. ಈ ನಂಬಿಕೆಗೆ ಕನ್ನಡಿ ಹಿಡಿದಂತೆ ನಮ್ಮ ನಡೆ-ನುಡಿಗಳಿರುವುದನ್ನು ಗಮನಿಸಬಹುದು. ಇಂತಹ ನಡೆ-ನುಡಿಗಳಲ್ಲಿ ಒಂದು ‘ಹಿತಾರು’. ನಾನು ಗಮನಿಸಿದಂತೆ ಮಲೆನಾಡಿನ ಹೆಚ್ಚಿನ ಮನೆಗಳಲ್ಲಿ ಹಿರಿಯರನ್ನು ಪೂಜಿಸುವ ಪದ್ದತಿಯೇ ಹಿತಾರು.

ಸಾಮಾನ್ಯವಾಗಿ ಹಿತಾರು ಎಂಬುದು ಕಂಚು ಇಲ್ಲವೇ ತಾಮ್ರದ ಎರಡು ಗಿಂಡಿಗಳಲ್ಲಿ ನೀರನ್ನು ತುಂಬಿಸಿ, ಅದಕ್ಕೆ ಹೂವು, ಅರಿಶಿನ-ಕುಂಕುಮಗಳಿಂದ ಸಿಂಗಾರಗೊಳಿಸಿ, ಹಿತಾರು ಪೂಜೆಗೆಂದೇ ಮನೆಯಲ್ಲಿ ನಿಗದಿ ಮಾಡಿರುವ ಜಾಗದಲ್ಲಿಟ್ಟು ಪೂಜಿಸುವುದು. ಆ ಕುಟುಂಬದಲ್ಲಿ ಬಾಳಿ-ಬದುಕಿ ತೀರಿಹೋಗಿರುವ ಎಲ್ಲಾ ಹಿರಿಯರು ಆ ಹಿತಾರಿನಲ್ಲಿ ಇರುತ್ತಾರೆ ಎಂಬುದು ನಂಬಿಕೆ. ಮನೆಯಲ್ಲಿ ನಡೆಯುವ ಎಲ್ಲಾ ಹಬ್ಬಗಳಲ್ಲಿ, ಹಿತಾರನ್ನು ಇಟ್ಟು, ಬಾಳೆ ಎಲೆಯ ಎಡೆಯಲ್ಲಿ ಹಬ್ಬಕ್ಕೆ ಮಾಡಿದ ಬಗೆ ಬಗೆಯ ಅಡುಗೆಗಳನ್ನು ಬಡಿಸಿ, ಪೂಜೆ ಮಾಡಿದ ಬಳಿಕ ಮನೆಯವರೆಲ್ಲಾ ಊಟಮಾಡುವುದು ಪದ್ದತಿ.

ಇದಲ್ಲದೇ ಮದುವೆ, ಮನೆಯೊಕ್ಕಲು, ಮಗುವಿಗೆ ಹೆಸರಿಡುವುದು ಇಂತಹ ಒಸಗೆಗಳಲ್ಲೂ ಕೂಡ ಹಿತಾರನ್ನು ಇಟ್ಟು ಪೂಜೆ ಮಾಡಿ ಹಿರಿಯರ ಹಾರೈಕೆ ಪಡೆದು ಕೆಲಸಗಳನ್ನು ಮುಂದುವರಿಸಲಾಗುವುದು. ಹಿತಾರಿನ ಪೂಜೆಯಲ್ಲಿಯೂ ಕೂಡ ಹಲತನವಿದೆ. ಮನೆಯಿಂದ ಮನೆಗೆ, ಊರಿನಿಂದ ಊರಿಗೆ ಈ ಪೂಜೆಯಲ್ಲಿ ಸಣ್ಣ-ಪುಟ್ಟ ಬದಲಾವಣೆಗಳಿವೆ, ಈ ಬದಲಾವಣೆಗಳು ಹಲತನವನ್ನು ಹುಟ್ಟುಹಾಕಿದೆ. ನಮ್ಮ ಮನೆಯ ಹಿತಾರಿನ ಪೂಜೆಯಲ್ಲಿ, ಹಿತಾರನ್ನಿಟ್ಟು ಮೂರು ಇಲ್ಲವೇ ಐದು ಎಲೆಗಳ ಎಡೆಯನ್ನಿಟ್ಟು, ಅಡುಗೆಯನ್ನು ಬಡಿಸಿ ಮನೆಯಲ್ಲಿರುವ ಎಲ್ಲರೂ ಬಂದು ದೂಪವನ್ನು ಹಾಕಬೇಕು. ಎಲ್ಲರೂ ದೂಪವನ್ನು ಹಾಕಿದ ಬಳಿಕ ಹಣ್ಣು-ಕಾಯಿ ಮಾಡಲಾಗುತ್ತದೆ. ಆಮೇಲೆ ಎಲ್ಲರೂ ಒಟ್ಟಿಗೆ ಬಂದು ಕೈ ಮುಗಿದು ನಿಲ್ಲಬೇಕು, ಆಗ ಮನೆಯಲ್ಲಿರುವ ದೊಡ್ಡವರೊಬ್ಬರು ಹಿತಾರಿನ ಎದುರು ಕೋರಿಕೆಗಳನ್ನು ಇಡುತ್ತಾರೆ. ನನ್ನ ಅಜ್ಜ ಮಾಡುತ್ತಿದ್ದ ಕೋರಿಕೆ ನನಗೆ ಈಗಲೂ ನೆನಪಿದೆ;

ಅಯ್ಯಾ, ನಾವ್ ಮಾಡೋ ಹಬ್ಬದಲ್ಲಿ, ಏನೋ ಹೂವು ಕೊಡೋದರಲ್ಲಿ ಹೂವಿನ ಎಸಳು ಕೊಟ್ಟು, ಕೈಲಾದ ಎಡೆ ಇಟ್ಟು, ನಿನ್ ಕಾಲಿಗ್ ಬಿದ್ದು ಕೇಳ್ ಕೊಳ್ತಾ ಇದ್ದೀವಿ. ಕುಟುಂಬಕ್ಕೆ ಯಾವುದೇ ತೊಂದರೆ ಆಗದಂಗೆ, ನಾವು ಹೋದಲ್ಲಿ, ಬಂದಲ್ಲಿ, ಕುಂತಲ್ಲಿ, ನಿಂತಲ್ಲಿ ಎಲ್ಲಾ ಕಡೆನೂ ಕಾಪಾಡಿಕೊಂಡು, ಮನೆಯನ್ನು, ಮನೆಯವರನ್ನು ಕಾಪಾಡಿಕೊಂಡು ಹೋಗಬೇಕಪ್ಪ ತಂದೆ. ನಾವು ಕೊಡೋ ಎಡೆಯಲ್ಲಿ ಏನಾದರು ತಪ್ಪಾಗಿದ್ದರೆ ಅದನ್ನ ಹೊಟ್ಟೆಗೆ ಹಾಕಿಕೊಂಡು ಕೈ ಹಿಡಿದು ನಡೆಸಿಕೊಂಡು ಹೋಗಬೇಕಪ್ಪ. ಏನೆ ತೊಂದರೆಗಳಿದ್ದರೂ ನೀನೇ ಕಾಪಾಡಿ, ಕುಟುಂಬ ಉದ್ದಾರ ಆಗೋ ಹಾಗೆ ಮಾಡೋ ನನ್ ಅಪ್ಪನೇ…

ಈ ಕೋರಿಕೆ ಮುಗಿದ ಒಂದೆರೆಡು ನಿಮಿಶ ಮನೆಯಲ್ಲಿರುವ ಎಲ್ಲರು ಮೌನವಾಗಿರಬೇಕು. ಈ ಮೌನವಾಗಿರುವ ಹೊತ್ತಿನಲ್ಲಿ ಮನೆಯ ಮುಂದಿನ ಬಾಗಿಲು ತೆಗೆದಿರಬೇಕು ಮತ್ತು ಹಿತಾರಿಗೆ ಬೆನ್ನು ಹಾಕಿ ನಿಲ್ಲಬೇಕು, ಅಂದರೆ ಹಿತಾರಿನ ಕಡೆ ಯಾರು ನೋಡಬಾರದು. ಮೌನವಾಗಿರುವಾಗ ನಮ್ಮ ತಲೆಮಾರಿನ ಹಿರಿಯರು, ಮನೆಯ ಎದುರು ಬಾಗಿಲಿನಿಂದ ಬಂದು ನಾವು ಇಟ್ಟ ಎಡೆಯಲ್ಲಿನ ಗಾಳಿಯನ್ನು ಸೇವಿಸುತ್ತಾರೆ ಎಂಬುದು ನಂಬಿಕೆ. ಎರಡು ನಿಮಿಶಗಳ ಮೌನ ಮುಗಿದ ಮೇಲೆ ಮನೆಯಲ್ಲಿರುವ ದೊಡ್ಡವರು ಎಲ್ಲರನ್ನು ಹಿತಾರಿನ ಕಡೆ ತಿರುಗಲು ಹೇಳುತ್ತಾರೆ. ಮತ್ತೊಬ್ಬರು, ಒಂದು ತಂಬಿಗೆ ನೀರನ್ನು ತೆಗೆದುಕೊಂಡು ಹೋಗಿ ಮನೆಯ ಎದುರು ಬಾಗಿಲ ಹೊರಗೆ ಚೆಲ್ಲುತ್ತಾರೆ. ನಮ್ಮ ಹಬ್ಬದೂಟಕ್ಕೆ ಬಂದಿರುವ ಹಿರಿಯರ ಕಾಲನ್ನು ತೊಳೆದು ಮನೆಯ ಒಳಗೆ ಬರಮಾಡಿಕೊಳ್ಳುತ್ತಿದ್ದೇವೆ ಎಂಬುದು ಇದರ ಹಿಂದಿರುವ ನಂಬಿಕೆ. ಇದು ಮುಗಿದ ಮೇಲೆ ನಮ್ಮ ಹಿಂದಿನ ತಲೆಮಾರಿನ ಹಿರಿಯರು ಈ ಹಬ್ಬದಲ್ಲಿ ನಮ್ಮ ಜೊತೆಯೇ ಇದ್ದಾರೆ ಎಂಬಂತಹ ನಂಬಿಕೆ ಹುಟ್ಟಿ, ಎಲ್ಲರು ಹಿತಾರಿಗೆ ಅಡ್ಡ ಬೀಳುತ್ತಾರೆ. ಹಿತಾರಿನ ಎಡೆಯನ್ನು ತೆಗೆದುಕೊಂಡು ಬಳಿಕ ಎಲ್ಲರೂ ಊಟ ಮಾಡುತ್ತಾರೆ.

ಈ ಹಿತಾರಿನ ಎಡೆಯನ್ನು ಕೂಡ ಮೊದಲು ಮನೆಯಲ್ಲಿರುವ ದೊಡ್ಡವರು ಎಂಜಲು ಮಾಡುವುದು ಪದ್ದತಿ. ಇನ್ನು ಹಿತಾರಿಗೆ ಬಾಡೂಟ ಹಾಗು ಹಸಿರೂಟ ಎರೆಡನ್ನೂ ಇಡಲಾಗುವುದು. ಹಿತಾರು ಇಡಲೆಂದೇ ಮನೆಯಲ್ಲಿ ಒಂದು ಜಾಗವನ್ನು ನಿಗದಿ ಮಾಡಿರುತ್ತಾರೆ. ಕೆಲವೊಮ್ಮೆ ನೆಲದಿಂದ ಅರ‍್ದ ಅಡಿ ಎತ್ತರಕ್ಕೆ ಕಟ್ಟೆ ಕಟ್ಟಿ ಅಲ್ಲಿ ಹಿತಾರನ್ನು ಇಡುತ್ತಾರೆ. ಇದನ್ನು ‘ಇಡಕಲು’ ಎನ್ನುತ್ತಾರೆ. ಹಿತಾರಿಗೆ ಬಡಿಸುವ ಅಡುಗೆಯನ್ನು ಮೊದಲು ಯಾರು ಎಂಜಲು ಮಾಡುವ ಹಾಗಿಲ್ಲ. ಮಾಡಿರುವ ಸಾರು ಉಪ್ಪಾಗಿದೆಯೋ, ಸಪ್ಪೆಯೋ ಎಂಬುವುದನ್ನು ಕೂಡ ನೋಡುವ ಹಾಗಿಲ್ಲ. ಹಾಗೆನಾದರು ಮಾಡಿದರೆ ಅದು ನಮ್ಮ ಹಿರಿಯರನ್ನು ಹೀಗೆಳೆದಂತೆ.

ಈ ಹಿತಾರಿನಲ್ಲಿ ಮತ್ತೊಂದು ವಿಶೇಶ ಎಂದರೆ ‘ಕೇಲು ಪೂಜೆ’. ‘ಕೇಲುಕಂದಲು’ ಎಂಬುದು ಮಣ್ಣಿನಲ್ಲಿ ಮಾಡಿರುವ ಚಿಕ್ಕ ಗಿಂಡಿಗಳು, ಈ ಗಿಂಡಿಗಳಿಗೆ ಗೋಪುರದ ಮಾದರಿಯಲ್ಲಿ ಚಿಕ್ಕ ಮುಚ್ಚುಳಗಳಿರುತ್ತವೆ, ಗಿಂಡಿಯ ಹೊರಗಡೆ ಬಣ್ಣ ಬಣ್ಣದ ಚಿತ್ತಾರಗಳಿರುತ್ತವೆ. ಹಿತಾರಿನಲ್ಲಿ ಈ ಕೇಲು ಕಂದಲನ್ನು ಪೂಜೆ ಮಾಡುವುದು ಕೆಲವು ಹಬ್ಬಗಳಲ್ಲಿ ಮಾತ್ರ. ಹಾಗೆಯೇ ಕೇಲು ಪೂಜೆಯನ್ನು ಎಲ್ಲರ ಮನೆಯಲ್ಲಿ ಮಾಡುವ ಹಾಗಿಲ್ಲ.

DSC07408

ಕೇಲುಕಂದಲುಗಳು

ಈ ಕೇಲು ಪೂಜೆಗೂ ಊರಿನ ಸುಗ್ಗಿ ಹಬ್ಬಕ್ಕೂ ನಂಟಿರುತ್ತದೆ. ಇಲ್ಲಿ ಸುಗ್ಗಿ ಹಬ್ಬ ಎಂದರೆ ‘ಸಂಕ್ರಾಂತಿ’ಯಲ್ಲ. ಹಲವು ಊರುಗಳಲ್ಲಿ ಆ ಊರಿನ ದೇವರ ಹಬ್ಬವನ್ನು ವರುಶಕ್ಕೆ ಒಮ್ಮೆ ಮಾಡುತ್ತಾರೆ, ಇದು ಆ ಊರಿನ ಸುಗ್ಗಿ ಹಬ್ಬ ಆಗಿರುತ್ತದೆ. ಈ ಹಬ್ಬದ ಮುಂದಾಳ್ತನವನ್ನು ಹಲವು ಮನೆತನಗಳು ನಡೆಸಿಕೊಂಡು ಬಂದಿರುತ್ತಾರೆ, ಇಂತಹ ಮನೆತನಗಳನ್ನು ‘ಕುಳಗಾರರು’ ಎನ್ನುತ್ತಾರೆ. ಕುಳಗಾರರ ಮನೆತನಕ್ಕೆ ಸೇರಿದವರು ಮಾತ್ರ ಕೇಲು ಕಂದಲು ಪೂಜೆಯನ್ನು ಮಾಡಬಹುದು.

ಕುಳಗಾರರಾಗಲು ಯಾವುದೇ ಜಾತಿಯ ನಂಟಿಲ್ಲ. ಕೆಲವೊಮ್ಮೆ ಊರಿನ ಎಲ್ಲಾ ಮನೆತನಗಳು ಕುಳಗಾರರಾಗಿರುತ್ತಾರೆ. ಕೇಲು ಕಂದಲನ್ನು ಮೂಲ ಮನೆಯಲ್ಲಿ ಮಾತ್ರ ಪೂಜಿಸಲಾಗುವುದು. ಒಂದು ವೇಳೆ ಮನೆಯವರು ಪಾಲಾಗಿ ಬೇರೆ ಬೇರೆಯಾದರೆ, ಪಾಲಾಗಿ ಬೇರೆ ಮನೆ ಮಾಡಿಕೊಂಡವರು ಅವರ ಮನೆಯಲ್ಲಿ ಕೇಲುಕಂದಲು ಪೂಜಿಸುವ ಹಾಗಿಲ್ಲ. ಈ ಕೇಲುಕಂದಲನ್ನು ಪೂಜಿಸುವ ಹಕ್ಕಿಗೋಸ್ಕರವಾಗಿ ಮನೆಯಲ್ಲಿ ಒಂದಾಗಿರಲು ಹಲವರು ಬಯಸುವುದನ್ನು ನಾನು ಕೇಳಿದ್ದೇನೆ.

ಮನೆಯಲ್ಲಿ ಯಾರಾದರು ತೀರಿಹೋದರೆ, ತೀರಿಹೋದ ಹನ್ನೆರೆಡು ದಿನಗಳ ಬಳಿಕ ತೀರಿಹೋದವರನ್ನು ಹಿತಾರಿಗೆ ಸೇರಿಸುವ ಕೆಲಸವನ್ನು ಮಾಡಲಾಗುತ್ತದೆ. ಇದಕ್ಕಾಗಿ, ದಾಸಯ್ಯನವರನ್ನು ಇಲ್ಲವೇ ಜೋಗಪ್ಪನವರನ್ನು ಕರೆಸುತ್ತಾರೆ. ತಿಮ್ಮಪ್ಪ ದೇವರ ಒಕ್ಕಲಿನ ಮನೆತನದವರು ದಾಸಯ್ಯನವರನ್ನು, ಜೋಗಪ್ಪ ದೇವರ ಒಕ್ಕಲಿನ ಮನೆತನದವರು ಜೋಗಪ್ಪನವರನ್ನು ಕರೆಸುತ್ತಾರೆ. ಇವರುಗಳು ಹಿತಾರನ್ನು ಇಟ್ಟು, ತೀರಿಹೋದವರ ಚಿತ್ರವನ್ನು ಇಟ್ಟು, ಶಂಕ – ಜಾಗಟೆಗಳನ್ನು ಬಾರಿಸಿ, ಬಗೆ ಬಗೆಯ ಪೂಜೆಗಳನ್ನು ಮಾಡಿ ತೀರಿಹೋದವರನ್ನು ಹಿತಾರಿಗೆ ಸೇರಿಸುತ್ತಾರೆ. ಇದನ್ನು ‘ಇಂಡುಗೂಡಿಸುವುದು’ ಎನ್ನುವರು. ಹೀಗೆ ಹಿತಾರು ಎಂಬುದು ನಮ್ಮ ಕುಟುಂಬದಲ್ಲಿ ಇದ್ದ ಎಲ್ಲಾ ಹಿರಿಯರುಗಳ ಸಂಕೇತವಾಗಿರುತ್ತದೆ. ಇದು ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ.

Hitharu1

ಕೆಲಸಕ್ಕೆಂದು ಪಟ್ಟಣದಲ್ಲಿದ್ದರೂ ಹಬ್ಬದಂದು ನಡೆಸುವ ಹಿತಾರು ಪೂಜೆ

ಮಾರ‍್ಲಾಮಿ ಹಬ್ಬ (ಮಲೆನಾಡಿನ ಕೆಲವು ಬಾಗದಲ್ಲಿ ಮಾಳದ ಅಮಾಸೆ ಎಂದು ಕೂಡ ಕರೆಯುವರು) ಎಂದರೆ ಹಿತಾರಿನ ಪೂಜೆ ಬಲುಜೋರು. ಈ ಹಬ್ಬದಲ್ಲಿ ಕುಟುಂಬದ ಎಲ್ಲರೂ ಸೇರಿ ಕೇಲುಕಂದಲಿಗೆ ದೂಪ ಹಾಕಬೇಕು. ಮನೆಯಿಂದ ಪಾಲಾಗಿ ಹೊರಗೆ ಹೋದವರು ಕೂಡ ಆ ಹಬ್ಬದಲ್ಲಿ ಬಂದು ಹಿರಿಯರಿಗೆ ದೂಪ ಹಾಕಲೇಬೇಕು. ಇಲ್ಲವಾದರೆ ಹಿರಿಯರಿಗೆ ದೂಪ ಹಾಕಿಲ್ಲ ಎಂಬ ನೋವು ಅವರನ್ನೇ ಕಾಡುತ್ತಿರುತ್ತದೆ.

ಮಾರ‍್ಲಾಮಿ ಹಬ್ಬವು, ಹಿರಿಯರೇ ನಮ್ಮ ದೇವರು ಎಂದು ಪೂಜಿಸುವ ನಮ್ಮ ಬುಡಕಟ್ಟು ನಡೆ ನುಡಿಯ ಕುರುಹು. ಅದೇ ಬಗೆಯಲ್ಲಿ ಈ ಹಿತಾರು ಕೂಡ ಒಂದು ಕುರುಹು. ನಮ್ಮ ಹುಟ್ಟಿಗೆ ನಮ್ಮ ಹಿರಿಯರೇ ಕಾರಣ, ಹಿರಿಯರ ಒಳ್ಳೆಯ ಕೆಲಸಗಳೇ ನಮ್ಮನ್ನು ಇಂದಿಗೂ ಕಾಯುತ್ತಿರುವುದು. ತೀರಿಹೋದ ಹಿರಿಯರೆಲ್ಲಾ ದೇವರಾಗಿ ಹಿತಾರಿನಲ್ಲಿದ್ದಾರೆ, ಅದನ್ನು ನಮ್ಮ ಎಲ್ಲಾ ನಲಿವಿನ ಹೊತ್ತಿನಲ್ಲಿ ನೆನೆದು ಅವರಿಂದ ಹಾರೈಕೆಗಳನ್ನು ಬೇಡುತ್ತಿದ್ದೇವೆ. ಹಿತಾರನ್ನು ಇಟ್ಟ ಮೂರು ದಿನಗಳ ಬಳಿಕ ದೂಪ ಹಾಕಿ, ಹಿತಾರಿನ ಗಿಂಡಿಯ ನೀರನ್ನು ಮರದ ಬುಡಕ್ಕೆ ಬಿಟ್ಟು ಹಿರಿಯರನ್ನು ಬೀಳ್ಕೊಡಲಾಗುತ್ತದೆ. ಮತ್ತೆ ಮುಂದಿನ ಹಬ್ಬಕ್ಕೆಂದು ಆ ಗಿಂಡಿ/ಕೇಲುಕಂದಲನ್ನು ತೆಗೆದಿಡಲಾಗುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 14/01/2015

    […] ಆ ದಿನ ಮಾಡುವ ಹೊಸಕ್ಕಿಯ ಅನ್ನವನ್ನು ಹಿತಾರುಗಳಿಗೆ ಎಡೆಯಿಟ್ಟು ಮೊದಲು ಮನೆಯ ಹಿರಿಯರು […]

ಅನಿಸಿಕೆ ಬರೆಯಿರಿ:

Enable Notifications OK No thanks