ಬಾಲಚುಕ್ಕಿಯ ಚಿತ್ರ ಸೆರೆಹಿಡಿದ ಬಾನಬಂಡಿ

ಡಾ. ಮಂಡಯಂ ಆನಂದರಾಮ.

ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ ಅಕ್ಟೋಬರ್ 19ರಂದು ಮಂಗಳದ ಬಳಿ ಬಹುವೇಗದಿಂದ ಸುತ್ತಿಕೊಂಡು ಸೂರ‍್ಯನ ಕಡೆ ಸಾಗಿಹೋದ ಸೈಡಿಂಗ್ ಸ್ಪ್ರಿಂಗ್-ಸಿ2013/ಎ1 ಎಂಬ ಬಾಲಚುಕ್ಕಿಯನ್ನು (comet) ಹತ್ತಿರದಿಂದ ನೋಡುತ್ತಲೆ ಕೆಲವು ಚಿತ್ರಗಳನ್ನು ಸೆರೆ ಹಿಡಿಯುವ ಬಾಗ್ಯ ನಮ್ಮ ಬಾನಬಂಡಿಗೆ ಒದಗಿತು. ಅದು ಕಳಿಸಿದ ಹಲವು ಅರಿಮೆಯುಕ್ತ ಚಾಯಾಚಿತ್ರಗಳು ನಮ್ಮ ಇಸ್ರೋ ಪ್ರಕಟಣೆಯಿಂದ ಸಿಕ್ಕಿದ್ದು ಇಲ್ಲಿ ಆರಿಸಿಕೊಟ್ಟಿದ್ದೇನೆ.

ಈ ಬಾಲಚುಕ್ಕಿಯು ಮಂಗಳಕ್ಕೆ ಅತಿ ಹತ್ತಿರ ಹಾದುಹೋಗುವುದಕ್ಕೆ ನಲವತ್ತು ನಿಮಿಶಗಳ ಮುಂಚೆ ಬೆಳಗುತ್ತಿರುವ ಅದರ ತಲೆ ಅಂದರೆ ಕೇಂದ್ರದ ಹಿಂಬಾಗವನ್ನು ಒಳಗೊಂಡಂತೆ ಒಂದಿಶ್ಟು ಬಾಲದ ಬಾಗವನ್ನು ಐದು ಚಿತ್ರಗಳಲ್ಲಿ ನಮ್ಮ ಬಾನಬಂಡಿಯು ತನ್ನ ಬಣ್ಣದ ಕ್ಯಾಮರಾದಿಂದ ಸೆರೆಹಿಡಿದು ಕಳಿಸಿತು. ಇವುಗಳನ್ನು ಜೋಡಿಸಿಕೊಂಡು ಒಂದೇ ಪಟದಲ್ಲಿ ತನ್ನ ವಿವರಗಳೊಂದಿಗೆ ಇಸ್ರೋ ಪ್ರಕಟಿಸಿತು. ಇದನ್ನು ಕೆಳಗಿರುವ ಮೊದಲನೆ ಚಿತ್ರಪಟ – 1 ರಲ್ಲಿ ಕಾಣಬಹುದು.

ಆ ವಿವರಗಳ ರೀತಿಯಂತೆ ಈ ಬಾಲಚುಕ್ಕಿಯು ಅಕ್ಟೋಬರ್ 19ರ ರಾತ್ರಿ ನಮ್ಮ ಕಾಲಮಾನ 23 ಗಂಟೆ 14 ನಿಮಿಶದಲ್ಲಿ ಬಾನಬಂಡಿಗೆ 180 ಸಾವಿರ ಕಿಮೀ ದೂರವಿದ್ದು 41 ನಿಮಿಶಗಳ ನಂತರ 130 ಸಾವಿರ ಕಿಮೀಗಳ ಹತ್ತಿರದಲ್ಲಿ ಸಾಗಿದಾಗ ಆ ಐದು ಚಿತ್ರಗಳನ್ನು ಹಿಡಿಯಿತು. ಇದೇ ಪಟದ ನಡುವಿರುವ ಚಿತ್ರದಲ್ಲಿ ಆ ತಲೆಯಿಂದ ಹೊಗೆಯ ಹಾಗೆ ಹೊಮ್ಮುತ್ತಿರುವ ಬಳ್ಳಿಯನ್ನು ನೋಡಬಹುದು. ಈ ಹೊಗೆಯು ತಲೆಯಿಂದ ಎದ್ದು ಬಂದಿರುವ ದೂಳು ಮತ್ತು ಹಿಮದ ಪುಡಿಗಳ ಬೆರಕಿಯಿಂದ ಆಗಿರುತ್ತದೆ. ಈ ಪರಿಣಾಮವು ಸೂರ‍್ಯನನ್ನು ಸಮೀಪಿಸಿದಂತೆ ಹೆಚ್ಚು ಉದ್ದ ಹಾಗೂ ಅಗಲವಾಗಿ ಬೆಳಗಿಕೊಂಡು ಹೋಗುತ್ತದೆ. ಹಾಗೆಯೆ ಈ ಐದು ಪಟಗಳಲ್ಲಿ ಕಾಣಿಸುವ ಒಂದೆರಡು ಸಣ್ಣ ಬಿಳೀ ಚುಕ್ಕಿಗಳು ಬಾನಬಂಡಿಗೆ ಕಾಣಿಸಿದ ಚುಕ್ಕಿಗಳು ಎಂದು ಗಮನಿಸಬೇಕು.

ಇಸ್ರೋದವರು ಬಹು ಚನ್ನಾಗಿ ಬಾನಬಂಡಿಯ ಮೂಲಕ ಸಂಪಾದಿಸಿದ ಎರಡು ಚಾಯಾಚಿತ್ರಗಳನ್ನು ಚಿತ್ರಪಟ – 2 ರಲ್ಲಿ ನೋಡಬಹುದು.

ನಾಸಾದವರ ಮಂಗಳ ಅರಿಯುವ ಬಂಡಿಯ ವಿಶೇಶ ಕ್ಯಾಮರಾವು (High Resolution Imaging Science Experiment (HiRISE) camera in NASA’s Mars Reconnaissance Orbiter) ಇದೇ ಬಾಲಚುಕ್ಕಿಯ ಬೆಳಗುವ ತಲೆಯನ್ನು ಚಿತ್ರಿಸಿದಾಗ ಬಂದ ಎರಡು ಪಟಗಳನ್ನು ಚಿತ್ರಪಟ – 3 ರಲ್ಲಿ ಕೊಟ್ಟಿದೆ.

commet_pic1

ಚಿತ್ರಪಟ – 1 (ಇಸ್ರೋ ಪ್ರಕಟಣೆ)

commet_pic2

ಚಿತ್ರಪಟ – 2(ಮೇಲೆ, ಇಸ್ರೋ ಪ್ರಕಟಣೆ)

ಚಿತ್ರಪಟ – 3 (ಕೆಳಗೆ, ನಾಸಾ ಪ್ರಕಟಣೆ)

commet_pic3
ನಾಸಾದವರ ಹೇಳಿಕೆಯಂತೆ ಈ ಬಾಲಚುಕ್ಕಿಯು ಪ್ಲೂಟೋ ಗ್ರಹಕ್ಕಿಂತ ಬಹು ದೂರದಲ್ಲಿರುವ ಊರ‍್ಟ್ ಪ್ರದೇಶ (Oort Cloud)ದಿಂದ ತಪ್ಪಿಸಿಕೊಂಡು ಮೊದಲ ಬಾರಿಗೆ ಸೂರ‍್ಯನ ಬಳಿಗೆ ಬರುತ್ತಿದೆ. ಇದನ್ನು ಮಂಗಳದ ಹತ್ತಿರದಿಂದ ನಮ್ಮ ಬಾನಬಂಡಿಯ ಮೂಲಕವೇ ನೋಡಿದ್ದು ನಮ್ಮೆಲ್ಲರ ಬಾಗ್ಯವೇ ಸರಿ!

(ಮಾಹಿತಿ ಸಲೆ: ಇಸ್ರೋ ಪ್ರಕಟಣೆಗಳು, ನಾಸಾ ಪ್ರಕಟಣೆಗಳು ಮತ್ತು Zee News Website)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: