ನಿನ್ನೊಲವಿನಾ ಅಲೆ
– ರತೀಶ ರತ್ನಾಕರ.
ನೆನಪಿದೆಯಾ ನಾವು ಕಂಡಂತ ಬೆಳಕು
ಇಬ್ಬರೂ ಕೂಡಿ ಇರುಳನ್ನು ಕಳೆವಾಗ|
ತಂಟೆ ಮಾಡುವ ತುಂಟ ತಿಂಗಳ
ಅಟ್ಟಿಸಿಕೊಂಡು ಹೋಗುವಾಗ|
ಸಿರಿಮನೆಯ ಮಾಡ ಸೂರಂಚಿನಲ್ಲಿ
ಅಗೊ ನೋಡು ಒಮ್ಮೆ ಇಣುಕಿದ್ದು ಹೋದ|
ಹೆಮ್ಮರದ ಹಿಂದೆ ಹೋಗಡಗಿ ಕೂತು
ಕರಿನೆರಳ ಹಡೆಸಿ ಮುಂದೋಡಿ ಹೋದ|
ಮೋಡದೊಡನೆ ಮನೆಮಾಡಿ ಕರೆದ
ಸರಿದಾರಿಯಿರದ ಕರಿಬೆಟ್ಟದೂರಿಗೆ|
ಹೊಂಚು ಹಾಕಿಯೆ ಹಿಡಿಯ ಹೋದೆವು
ಬೆಟ್ಟದಂಚಲಿ ಮಿಂಚೊ ಹೂವಿಗೆ|
ಎತ್ತ ಓಡುವುದು ಎನಿತು ಓಡುವುದು?
ಎಟುಕದಿರುವ ಹೊಳಪನ್ನು ಬಯಸಿ|
ಬೆವರು ಹರಿದು ಮಯ್ಯೆಲ್ಲ ಜರಿದು
ಕಾಲಿತ್ತೆವಲ್ಲ ನೀರನ್ನು ಅರಸಿ|
ಅಲ್ಲೊಂದು ಕೊಳದಿ ತಿಳಿಯಾದ ತಳದಿ
ಮೊಗೆಮೊಗೆದು ಕುಡಿಯೆ ನೀರಡಿಕೆ ನೀಗಿ|
ಕಣ್ಣೆದುರೆಗೇನೆ ಕೈಗೆಟುಕುವಂತೆ
ಅಲೆಮೇಲೆ ತೇಲಿ ತಂಬೆಳಗ ತೂಗಿ|
ಮರುಳಾದ ಮನಕೆ ತಿಳಿವಂತು ಹೊಳೆಯೆ
ನಿನ ಕಣ್ಣಿನಲ್ಲೆ ನನ್ನೊಲವ ಕಂಡೆ|
ನಿನ್ನ ಹುಡುಕಿ ನಾನು ಎಲ್ಲೆಲ್ಲೊ ಓಡದೆ
ಎದೆಯ ತಣಿಸೆ ನಿನ್ನೊಲವಿನಾ ಅಲೆ|
(ಚಿತ್ರ ಸೆಲೆ: gopixpic.com)
ಇತ್ತೀಚಿನ ಅನಿಸಿಕೆಗಳು