ಕನ್ನಡಿಗರಿಗೂ ಬದಲಾವಣೆ ಬೇಕಿದೆ!

ಹರ‍್ಶಿತ್ ಮಂಜುನಾತ್.

india-chennai1

ಮೊದಲೇ ಕಂಡುಕೊಂಡಂತೆ ಇಂಡಿಯಾ ಹಲತನದ ಹಿರಿಮೆಗೆ ಹೆಸರು. ನಾಡಿನಿಂದ ನಾಡಿಗೆ ಹಳಮೆ, ನಡೆ ನುಡಿ, ಸಂಸ್ಕ್ರುತಿ, ಕಲೆ, ಬದುಕಿನ ರೀತಿ ಸೇರಿದಂತೆ ಹೆಚ್ಚಾಗಿ ಬಿನ್ನತೆಯಿಂದ ಕೂಡಿರುತ್ತದೆ. ಇಂತಹ ಬದಲಾವಣೆಗಳಿಂದ ನಮ್ಮ ನಾಡಾಗಲಿ, ಪಕ್ಕದ ತಮಿಳು ನಾಡಾಗಲಿ ಹೊರತಲ್ಲ. ನಾವು ನಮ್ಮದೇ ಆದ ಹಲತನವನ್ನು ಹಿಂಬಾಲಿಸಿದರೆ, ತಮಿಳರದ್ದು ಬೇರೆಯದೇ ನಡೆನುಡಿ. ಅಂದ ಮಾತ್ರಕ್ಕೆ ನಾಡು ನಾಡುಗಳ ನಡುವೆ ಕೊಡುಕೊಳ್ಳುವಿಕೆಗೆ ಏನೂ ಅಡ್ಡಿಯಿಲ್ಲ. ಆದರೂ ನಮ್ಮ ನಾಡನ್ನು ಬಿಟ್ಟು ಪರನಾಡನೊಮ್ಮೆ ಸುತ್ತಿ ಅವಲೋಕಿಸಿದಾಗ, ನಾಡಬಿಮಾನಾದ ವಿಶಯ ಬಂದಾಗ ಕನ್ನಡಿಗರು ಪರರಿಗಿಂತಲೂ ತುಸು ಹಿಂದೆ ಬೀಳುತ್ತಿದ್ದೇವೆ ಏನೋ ಎಂದೆನಿಸುತ್ತದೆ.

ಕೆಲ ದಿನಗಳ ಹಿಂದೆಯಶ್ಟೇ ಕೆಲಸದ ಮೇಲೆ ಚೆನ್ನಯ್‍ಗೆ ಹೋಗಿದ್ದೆ. ಒಂದೆರಡು ದಿನಗಳ ಚೆನ್ನಯ್ ಓಡಾಟದಲ್ಲಿ, ಅಲ್ಲಿ ಇಲ್ಲಿ ಕೇಳಿ ಓದಿಕೊಂಡಿದ್ದ ವಿಶಯಗಳನ್ನು ನೇರವಾಗೇ ಕಂಡುಕೊಂಡೆ. ನಾಡುನುಡಿಯ ವಿಶಯ ಬಂದಾಗ ಪಕ್ಶಬೇದ, ಜಾತಿ ಬೇದ ಮರೆತು ಹೋರಾಡುವ ತಮಿಳರ ಒಗ್ಗಟ್ಟನ್ನು ಕೇಳಿದ್ದೆ. ತಮಿಳರ ನಾಡಬಿಮಾನ, ನುಡಿಯ ಬಳಕೆಯ ಬಗ್ಗೆ ಓದಿಕೊಂಡಿದ್ದೆ. ಆದರೆ ಇವುಗಳಲ್ಲಿ ಕೆಲವನ್ನು ನೋಡುವಂತಾದದ್ದು ಮೊನ್ನೆ ಚೆನ್ನಯ್‍ನಲ್ಲಿ. ಒಟ್ಟಿನಲ್ಲಿ ನಮ್ಮ ಮತ್ತು ತಮಿಳರ ನಡುವೆ ಇರುವ ಕೆಲ ಬದಲಾವಣೆಗಳನ್ನು ತುಸು ಹೇಳುವ ಪ್ರಯತ್ನ ನನ್ನದು.

ನಿಜಕ್ಕೂ ತಮಿಳರ ನಾಡಿಗೆ ಕಾಲಿಡುವ ಮುನ್ನ ನನಗೆ ಇದಾವುದರ ಅರಿವೇ ಇರಲಿಲ್ಲ. ಬೆಂಗಳೂರು ಕೆಂಪೇಗವ್ಡ ಬಾನೋಡ ನಿಲ್ದಾಣದಿಂದ ವಿಮಾನವೇರಿ ಚೆನ್ನಯ್‍ನ ಡೊಮೆಸ್ಟಿಕ್ ಟರ‍್ಮಿನಲ್ನಲ್ಲಿ ಇಳಿಯುತ್ತಿದ್ದಂತೆ ತಮಿಳು ಗಾಳಿ ಮೆಲ್ಲಗೆ ಬಡಿಯಲಾರಂಬಿಸಿತ್ತು. ಬೆಂಗಳೂರಿನಿಂದ ಚೆನ್ನಯ್ ವರೆಗೆ ಹಿಂದಿ, ಇಂಗ್ಲೀಶ್‍ನ ಅಬಿಶೇಕದಲ್ಲಿ ಮಿಂದಿದ್ದ ನಮಗೆ, ಇವರೆಡನ್ನು ಹೊರತುಪಡಿಸಿ ಬೇರೇಯದೇ ಆದ ಪ್ರಾದೇಶಿಕ ನುಡಿಯೊಂದು ಕಿವಿಗೆ ಬಿದ್ದದ್ದು ಚೆನ್ನಯ್ ನಿಲ್ದಾಣದಲ್ಲಿ. ಬೆಂಗಳೂರಿನಿಂದ ಬಂದು ಚೆನ್ನಯ್ ನಿಲ್ದಾಣದ ಹೊರಹೋಗಲು ಅಣಿಯಾಗಿದ್ದ ನಮಗೆ ಮೊದಲು ತಮಿಳು ನುಡಿಯಲ್ಲಿ ಚೆನ್ನಯ್ ನಗರಕ್ಕೆ ಆದರದಿಂದ ಬರಮಾಡಿಕೊಳ್ಳಲಾಯಿತು.

ಮುಂದೆ ನಡೆಯುತ್ತಿದ್ದಂತೆ ಗೋಡೆಯ ಇಕ್ಕೆಲಗಳಲ್ಲಿ ಸುಂದರವಾದ ತಿಟ್ಟಗಳನ್ನು ತೂಗಿಬಿಡಲಾಗಿತ್ತು. ಎಂತವರೂ ಕೂಡ ಇದೇನಪ್ಪ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಶ್ಟು ರಮಣೀಯವಾಗಿತ್ತು ಆ ತಿಟ್ಟಗಳು. ಅಶ್ಟಕ್ಕೂ ಅವು ತಮಿಳರ ನಡೆ ನುಡಿ, ಹಳಮೆ, ಸಾಹಿತ್ಯ, ಕಲೆಯ ಹಿರಿಮೆಯ ಬಗ್ಗೆ ಬಂದವರಿಗೆ ಸಾರಿ ಸಾರಿ ಹೇಳುವಂತಿತ್ತು. ಒಂದರ‍್ತದಲ್ಲಿ ತಮ್ಮ ನಾಡಿನ ಹಿರಿತನದ ಸೊಬಗನ್ನು ಬಂದವರಿಗೆ ಸೊಗಸಾಗಿ ಉಣಬಡಿಸುವ ರೀತಿಯದು. ನನಗೆ ಈಗಲೂ ಆಶ್ಚರ‍್ಯವಾಗುವುದೇನೆಂದರೆ, ಅಲ್ಲಿನ ವಿಮಾನ ನಿಲ್ದಾಣದ ಕುರಿತ ಸೂಚನೆಗಳನ್ನು ತಮಿಳು ಮತ್ತು ಇಂಗ್ಲೀಶ್‌ನಲ್ಲಿ ಮಾತ್ರ ಬರೆಯಾಲಾಗುತ್ತದೆ. ಅದೇ ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸೂಚನೆಗಳನ್ನು ಇಂಗ್ಲೀಶ್ ಮತ್ತು ಹಿಂದಿಯಲ್ಲಿಯೇ ಬರೆಯಲಾಗುತ್ತದೆ. ಅಶ್ಟೇ ಅಲ್ಲದೇ ವಿಮಾನ ನಿಲ್ದಾಣದ ಆಗಮನ ಅತವಾ ನಿರ‍್ಗಮನದ ಇಕ್ಕೆಲಗಳಲ್ಲಿ ನಾವು ಚೆನ್ನಯ್‍ನಲ್ಲಿ ಕಂಡಂತೆ ನಡೆನುಡಿಯ ತಿಟ್ಟಗಳನ್ನಾಗಲೀ, ಬರಹಗಳನ್ನಾಗಲೀ ಕಾಣಲು ಸಾದ್ಯವಿಲ್ಲ. ಬದಲಾಗಿ ಕಾಸಗಿ ಸಂಸ್ತೆಗಳ ಜಾಹೀರಾತು ಪಲಕಗಳದ್ದೇ ಮೇಲುಗಯ್.

ತಮಿಳರ ಹಲತನಗಳನ್ನು ಸವಿಯುತ್ತಾ ವಿಮಾನ ನಿಲ್ದಾಣದಿಂದ ಹೊರ ನಡೆದರೆ, ನಾ ಮುಂದು ತಾ ಮುಂದೆಂದು ನಮ್ಮತ್ತ ಎರಗುವ ಟ್ಯಾಕ್ಸಿ ಚಾಲಕರು. ಕನ್ನಡದಲ್ಲಿ ಮಾತನಾಡೋಣವೆಂದರೆ ಅವರು ಕನ್ನಡ ಬಲ್ಲದವರು, ನಾವು ತಮಿಳು ಬಲ್ಲದವರು. ಇನ್ನೇನು ಮಾಡುವುದು ಹಿಂದಿಯಲ್ಲಿ ಮಾತನಾಡೋಣವೆಂದರೆ ಅವರು ತಪ್ಪಿಯೂ ಹಿಂದಿ ಬಳಸದವರು. ಹೀಗೆ ಯಾವುದೋ ಒಂದು ಅಪರಿಚಿತ ನಗರಿಗೆ ಬಂದಿಳಿದಿದ್ದ ನಾವು, ಇಂಗ್ಲೀಶನ್ನು ಮುಂದೆ ಬಿಟ್ಟುಕೊಂಡು, ಅಲ್ಪ ಸ್ವಲ್ಪ ತಿಳಿದಿದ್ದ ತಮಿಳನ್ನೂ ಜೊತೆಯಲ್ಲಿಟ್ಟುಕೊಂಡು ಮೆತ್ತಗೆ ನಗರದತ್ತ ಹೊರಡಲು ಅಣಿಯಾದೆವು. ವಿಶೇಶವೆಂದರೆ, ದಾರಿಯುದ್ದಕ್ಕೂ ನಮ್ಮೊಂದಿಗೆ ಸಹಕರಿಸುತ್ತಲೇ ಹೋದ ಚಾಲಕ, ನಾವೆಶ್ಟೇ ಪರನುಡಿಯಲ್ಲಿ ಮಾತನಾಡಲು ಪ್ರೇರೇಪಿಸಿದರೂ ಆತ ಮಾತ್ರ ತನಗೆ ಕೊಂಚ ತಿಳಿದಿದ್ದ ಇಂಗ್ಲೀಶನ್ನು, ತಮಿಳಿನೊಟ್ಟಿಗೆ ಬೆರೆಸಿ ಮಾತನಾಡಿಸುತ್ತಿದ್ದ. ತಮ್ಮ ನಾಡಿಗೆ ಪರನಾಡಿನವರು ಬಂದಾಗ ಅವರೊಂದಿಗೆ ತಾಯ್ನುಡಿಯಲ್ಲೇ ಮಾತನಾಡಿಸುವ ಮೂಲಕ ಪ್ರಾದೇಶಿಕ ಬಾಶೆಯೊಂದರ ಗಟ್ಟಿತನವನ್ನು ತೋರಿಸುವ ಪ್ರಯತ್ನವೂ ಬಹುಶ ಅವನದ್ದಿರಬಹುದು.

ಅದು ಬಾಶೆಯ ಮೇಲೆ ಅವರವರ ಅಬಿಮಾನ. ಅಶ್ಟಕ್ಕೂ ನಮ್ಮ ನಾಡಿಗೆ ಪರಬಾಶಿಕರು ಬಂದಾಗ ನಾವು ಎಶ್ಟರಮಟ್ಟಿಗೆ ಕನ್ನಡದಲ್ಲಿ ಮಾತನಾಡಿಸುತ್ತೇವೆ. ಅತವಾ ನಾವು ಪರನಾಡಿಗೆ ಹೋಗಿ ಅವರೊಂದಿಗೆ ನಮ್ಮ ಬಾಶೆಯನ್ನು ಎಶ್ಟರ ಮಟ್ಟಿಗೆ ಬಳಸಿಕೊಳ್ಳುತ್ತಿದ್ದೇವೆ. ನಾವು ಬಾಶಾಬಿಮಾನ ಎಂದೊಡನೆ ದುರಬಿಮಾನದ ಲೇಪ ಹಚ್ಚುವ ರಾಜಕಾರಣಿಗಳು ನಮ್ಮೊಂದಿಗಿರುವುದಕ್ಕೋ ಏನೋ, ಪರಬಾಶಿಕ ರಾಜಕಾರಣಿಗಳು ನಮ್ಮ ನಾಡಿಗೆ ಬಂದು ಯಾವುದೇ ಅಡ್ಡಿ ಇಲ್ಲದೇ ಅವರದ್ದೇ ನುಡಿಯಲ್ಲಿ ಮಾತನಾಡುತ್ತಿರುವುದು. ಅಂತಹ ದಯ್ರ‍್ಯವನ್ನು ನಮ್ಮ ನಾಡಿನ ರಾಜಕಾರಣಿಗಳು ಮಾಡುವುದಿದೆಯೇ ?

ಇದೆಲ್ಲದರ ಮದ್ಯೆ ನಾನು ಗಮನಿಸಿದ ಕೆಲವು ಮುಕ್ಯ ವಿಶಯಗಳೆಂದರೆ, ಒಂದು ಅಲ್ಲಿನ ಮಂದಿಬಂಡಿಗಳಲ್ಲಿ ತಾಯ್ನುಡಿಯ ಬಳಕೆ. ಇಂತಹ ಉರಿಗೆ ಈ ಮಂದಿಬಂಡಿ ಹೋಗುತ್ತದೆ ಎಂಬುದನ್ನು ಅವರ ನುಡಿಯಲ್ಲೇ ಬರೆಯಲಾಗಿದೆಯೇ ಹೊರತು ಬೇರಾವುದೇ ನುಡಿಯ ಬಳಕೆ ಮಾಡಲಾಗಿಲ್ಲ. ಅಲ್ಲದೇ ಮಂದಿಬಂಡಿಯ ನಂಬರ್ ಪ್ಲೇಟ್ ಕೂಡ ಇಂಗ್ಲೀಶ್ ಮತ್ತು ತಮಿಳಿನಲ್ಲಿಯೇ ಬರೆಯಲಾಗಿತ್ತು. ಇದರ ಬಳಕೆಯ ಹೊತ್ತಲ್ಲಿ ಪರಬಾಶಿಕರಾದ ನಮಗೆ ತುಸು ಕಶ್ಟವಾದರೂ ಅಲ್ಲಿನವರ ಸಹಕಾರ ಗೊಂದಲವನ್ನು ಮೆಟ್ಟಿ ನಿಂತಿತು. ಬೆಂಗಳೂರಿನಂತೆಯೇ ಚೆನ್ನಯ್ ಕೂಡ ಬಲುದೊಡ್ಡ ನಗರ. ಅಲ್ಲಿಯೂ ಎತ್ತರವಾದ ಕಟ್ಟಡಗಳು, ಅಯ್ಶಾರಾಮಿ ತಿನಿಸುಮನೆಗಳಿವೆ, ಹಲವಾರು ಕಲೆಮನೆಗಳಿವೆ. ಆದರೆ ಅಲ್ಲೆಲ್ಲಾ ಹೆಚ್ಚಾಗಿ ತಾಯ್ನುಡಿಯನ್ನು ಹೊರತುಪಡಿಸಿ ಪರನುಡಿಗಳನ್ನು ಬಳಸುವುದಿಲ್ಲ. ಅಂಗಡಿ ಮುಂಗಟ್ಟುಗಳ ತಲೆಪಟ್ಟಿಯಲ್ಲಿ ಹೆಸರುಗಳನ್ನು ತಮಿಳಿನಲ್ಲಿಯೇ ಬರೆದರೆ, ಕಲೆಮನೆಗಳಲ್ಲಿ ತಮಿಳು ಓಡುತಿಟ್ಟಗಳನ್ನು ಹೊರತುಪಡಿಸಿ ಬೇರೆ ನುಡಿಗಳ ಓಡುತಿಟ್ಟಗಳಿಲ್ಲ. ಆದರೆ ನಾವು ಮಾತ್ರ ಈ ಎಲ್ಲಾ ಬದಲಾವಣೆಗಳಿಂದ ಬಿನ್ನವಾಗಿ ನಿಂತಿದ್ದೇವೆ.

ಅಂದಮಾತ್ರಕ್ಕೆ ನಮ್ಮ ನಾಡಿನಲ್ಲಿ ಇಂತಹ ಬದಲಾವಣೆಗಳನ್ನು ಕಾಣಲು ಸಾದ್ಯವಿಲ್ಲವೆಂದೇನಲ್ಲ. ಸಾವಿರಾರು ವರುಶಗಳ ಹಳಮೆ ಇರುವ ಕನ್ನಡ ಬಾಶೆಯ ಕುರಿತು ಮಂದಿಯಲ್ಲಿ ಅಬಿಮಾನ ಮೂಡಿಸುವ ಕೆಲಸ ಮೊದಲು ಮಾಡಬೇಕಾಗಿದೆ. ನಾಡು ನುಡಿಯ ವಿಶಯದಲ್ಲಿ ಒಕ್ಕೊರಲಿನ ಕೂಗೊಂದು ನಮ್ಮೆಲ್ಲರಿಂದ ಮೂಡಬೇಕಾಗಿದೆ. ಹಾಗಾದಾಗ ನಮ್ಮಲ್ಲಿಯೂ ಬದಲಾವಣೆ ಕಂಡಿತ.

(ಚಿತ್ರ ಸೆಲೆ: anjalienjeti.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: