ಪದಕಟ್ಟಣೆಯ ಚಳಕಗಾರ : ಮುದ್ದಣ

– ಅನ್ನದಾನೇಶ ಶಿ. ಸಂಕದಾಳ.

muddana

 

 ಕುಮಾರವಿಜಯ ಬಿಟ್ಟರೆ ಪ್ರಸಂಗವಿಲ್ಲ ನಂದಳಿಕೆಯವರನ್ನು ಬಿಟ್ಟರೆ ಕವಿಯಿಲ್ಲ

ಈ ಮಾತನ್ನು ಪಂಜೆ ಮಂಗೇಶರಾಯರು ನಂದಳಿಕೆ ನಾರಾಣಪ್ಪರನ್ನು ಕುರಿತು ಆಡಿದ್ದು. ನಂದಳಿಕೆ ನಾರಾಣಪ್ಪ ಅಂದರೆ ಅಶ್ಟು ಬೇಗ ತಿಳಿಯುವುದಿಲ್ಲ. ಆದರೆ ಮುದ್ದಣ ಎಂದರೆ ಎಲ್ಲರಿಗೂ ಗೊತ್ತಾಗಿಬಿಡುತ್ತದೆ. ಕನ್ನಡದ ನಲ್ಬರಹ ಕವಲಿನ ಬಹು ದೊಡ್ಡ ಹೆಸರಲ್ಲಿ ಒಂದು – ಮುದ್ದಣರದು. ಮುದ್ದಣರ ಹೆಸರು ಕೇಳದವರು ಬಹುಶ ಕನ್ನಡ ನಲ್ಬರಹ ವಲಯದಲ್ಲಿ ಯಾರೂ ಇಲ್ಲ ಎನಬಹುದು. ಮುದ್ದಣರು ಹುಟ್ಟಿದ್ದು 1870 ರ ಜನವರಿ 24 ರಂದು. ಮುದ್ದಣರ ಮೂಲ ಹೆಸರು ನಾರಾಣಪ್ಪ. ಹುಟ್ಟಿದ ಊರು ಕರ‍್ನಾಟಕದ ಕಾರ‍್ಕಳ ತಾಲೂಕಿನ ನಂದಳಿಕೆ ಎಂಬುದು. ಆದರಿಂದ ‘ನಂದಳಿಕೆ ನಾರಾಣಪ್ಪ’ ಎಂದೂ ಕೂಡ ಅವರನ್ನು ಕರೆಯುತ್ತಿದ್ದರು. ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟಿದ ತಲೆಮೆ ಇವರದು.

ಮುದ್ದಣ ಮತ್ತು ಅವರ ಬರಹಗಳು:

ಮುದ್ದಣರು ತುಂಬಾ ನಾಚಿಕೆ ಸ್ವಬಾವ ಹೊಂದಿದ್ದರು ಮತ್ತು ವಿನಯವಂತರು ಎಂದು ಹೇಳಲಾಗುತ್ತದೆ. ತಾವೇ ಬರೆದಿದ್ದರೂ, ತಮ್ಮ ಹೆಸರನ್ನು ಹಾಕದೆ ಬೇರೊಬ್ಬರ ಹೆಸರನ್ನು ತಮ್ಮ ಬರಹಗಳಿಗೆ ಕೊಟ್ಟು, ಅವುಗಳನ್ನು ಅಚ್ಚು ಹಾಕಿಸಿದ್ದರೆಂದೂ ತಿಳಿದು ಬಂದಿದೆ. ಅದ್ಬುತ ರಾಮಾಯಣಂ, ಶ್ರೀರಾಮ ಪಟ್ಟಾಬಿಶೇಕಂ ಹಾಗೂ ಶ್ರೀ ರಾಮಾಶ್ವಮೇದಂ ಕ್ರುತಿಗಳನ್ನು ಬೇರೊಬ್ಬರ ಹೆಸರಿನಲ್ಲಿ ಪ್ರಕಾಶನಕ್ಕೆ ಕಳಿಸಿದ್ದರು ಎಂದು ಹೇಳಲಾಗುತ್ತದೆ. ಮುದ್ದಣರ ಹೊತ್ತಗೆಗಳು ಇಂತಿವೆ: ‘ರತ್ನಾವತಿ ಕಲ್ಯಾಣ’, ‘ಕುಮಾರ ವಿಜಯ (ಯಕ್ಶಗಾನ ಪ್ರಸಂಗ)’, ಶ್ರೀರಾಮ ಪಟ್ಟಾಬಿಶೇಕಂ, ‘ಅದ್ಬುತ ರಾಮಾಯಣಂ’ ಮತ್ತು ‘ಶ್ರೀರಾಮಾಶ್ವಮೇದಂ’. ಮುದ್ದಣರು ಹೆಚ್ಚಾಗಿ ಗದ್ಯಕಾವ್ಯವನ್ನೇ ಬರೆಯುತ್ತಿದ್ದರು ಎಂದು ತಿಳಿದು ಬಂದಿದೆ. ಕೇವಲ ಬರೆಯುವುದು ಮಾತ್ರವಲ್ಲದೇ ಹೊಸ ಹೊಸ ಪದಗಳನ್ನು ಹೊರ ತಂದು ಅದನ್ನು ಬಳಸಿದ ಹೆಗ್ಗಳಿಕೆ ಅವರದು.

ಮುದ್ದಣ ಮತ್ತು ಕನ್ನಡ ಪದ ಕಟ್ಟುವಿಕೆ:

ಪ್ರತಿಯೊಬ್ಬ ಕಬ್ಬಿಗನಿಗೂ ಅವನದೇ ಆದ ಶಬ್ದಸಂಪತ್ತೆಂಬುದು ಇದ್ದೇ ಇರುತ್ತದೆ. ಆ ಶಬ್ದಸಂಪತ್ತು ಬಳಸಿ ಬರೆಯುವವರೊಂದು ಕಡೆಯಾದರೆ, ಅವಶ್ಯಕತೆಗೆ ತಕ್ಕ ಹಾಗೆ ಹೊಸ ಪದಗಳನ್ನು ಟಂಕಿಸುವರು ಮತ್ತೊಂದೆಡೆ. ಹೀಗೆ ಕನ್ನಡದಲ್ಲಿ ಹೊಸ ಹೊಸ ರೀತಿಯ ಪದಗಳನ್ನು ಕಟ್ಟಿದವರಲ್ಲಿ ಮುಕ್ಯವಾಗಿ ಎರಡು ಹೆಸರು ಕೇಳಿ ಬರುತ್ತದೆ. ಮೊದಲಿಗೆ ಆಂಡಯ್ಯ, ಆಮೇಲೆ ಮುದ್ದಣ. ದಕ್ಶಿಣ ಕನ್ನಡ ಜಿಲ್ಲೆಯ ಜನಪದ ಕಲೆ ಮುದ್ದಣರ ಮೇಲೆ ಹೆಚ್ಚು ಪ್ರಬಾವ ಬೀರಿತ್ತು ಎಂದು ಹೇಳಲಾಗುತ್ತದೆ. ಮುದ್ದಣರು ಬಳಸಿದ ಕೆಲ ದೇಸೀ ಪದಗಳನ್ನು ಓದಿದಾಗ ಜನಪದ ಕಲೆಯ ಆ ಪ್ರಬಾವವನ್ನು ಕಾಣಬಹುದಾಗಿದೆ. ಎತ್ತುಗೆಗೆ : ಕೋಲೆ (ಪ್ರೇತ) , ಅಣಿಗಟ್ಟು (ತೆಂಗಿನ ಗರಿಯಿಂದ ಮಾಡುವ ಬೂತದ ಅಲಂಕಾರ ಸಾದನ). ದಶರತ, ಶಿವ, ರಾವಣರಿಗೂ ಮುದ್ದಣರು ತಮ್ಮದೇ ಪದಗಳನ್ನು ಸರಳವಾಗಿ ತಿಳಿಯುವಂತೆ ಕಟ್ಟಿದ್ದಾರೆ. ದಶರತ – ಪಂತಿದೇರ, ಶಿವ – ಅರ್ ವೆಣ್ಮಯ್ಯ (ಅರ‍್ದ ನಾರೀಶ್ವರ), ರಾವಣ – ಪದಿಮೊಗದವ. ವಿಮಾನಕ್ಕೆ ಅವರು ಗಾಳಿದೇರು ಎಂದಿದ್ದರು. ಅಶ್ಟ ದಿಕ್ಕುಗಳು ‘ಎಣ್ಮೂಲೆ’ (ಎಂಟು ಮೂಲೆ) ಗಳೆಂದು ಸರಳವಾಗಿಸಿದ್ದಾರೆ. ಪದ ಕಟ್ಟುವಿಕೆಯ ಇಂತ ಹಲವಾರು ಎತ್ತುಗೆಗಳು ಮುದ್ದಣರ ಹೊತ್ತಗೆಯಲ್ಲಿ ನೋಡ ಸಿಗುತ್ತವೆ.

ಬಹು ಬೇಗನೇ ಬದುಕಿನ ಲೆಕ್ಕಾಚಾರ ಮುಗಿಸಿಕೊಂಡ ಮುದ್ದಣರು ಸಣ್ಣ ವಯಸ್ಸಿನಲ್ಲೇ ತೀರಿಕೊಂಡರು. 1901 ರ ಪೆಬ್ರವರಿ 5 ಅವರು ಅಗಲಿದ ದಿನ. ಸಾಯುವಾಗ ಅವರ ವಯಸ್ಸು 31 ವರುಶ. ಕನ್ನಡ ನಾಡಿನಿಂದ ಬೇಗನೆ ದೂರ ಹೋದರೂ ತಮ್ಮ ಚಾಪನ್ನು ಅವರು ಮೂಡಿಸಿ, ಉಳಿಸಿ ಹೋಗಿದ್ದಾರೆ. ಅವರ ಪದಕಟ್ಟುವಿಕೆ ಕೆಲಸ, ತೊಡಕಿನ ಕನ್ನಡದ ಪದಗಳನ್ನು ಸರಳಗೊಳಿಸುವರಿಗೆ ಮತ್ತು ಹೊಸ ಹೊಸ ಕನ್ನಡ ಪದವನ್ನು ಕಟ್ಟುವವರಿಗೆ ಮಾದರಿಯಾಗಿದೆ.

( ಮಾಹಿತಿ ಸೆಲೆ: wiki-muddana, kn-wiki-muddana, oppanna.com, ಹೊತ್ತಗೆ : ಮುದ್ದಣನ ಶಬ್ದ ಪ್ರತಿಬೆ )

(ಚಿತ್ರ ಸೆಲೆ: karavenalnudi.blogspot.in )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.