ಎರ‍್ಡೋಗಾನ್ ತೀರ‍್ಮಾನ: ಟರ‍್ಕಿ ಏಳಿಗೆಗೆ ತೊಡಕು?

– ಅನ್ನದಾನೇಶ ಶಿ. ಸಂಕದಾಳ.

erdogan

“ಒಟ್ಟೋಮನ್ ಟರ‍್ಕಿಶ್ ನುಡಿಯನ್ನು ಕಲಿಯಲು ಬಯಸದವರು ಟರ‍್ಕಿಯಲ್ಲಿದ್ದಾರೆ. ಅವರು ಕಲಿಯಲಿ ಬಿಡಲಿ ಟರ‍್ಕಿಯಲ್ಲಿ ಒಟ್ಟೋಮನ್ ನ್ನು ಕಲಿಸಲಾಗುತ್ತದೆ” ಎಂದು ಟರ‍್ಕಿ ನಾಡಿನ ಮೇಲಾಳು (president) ರೆಜೆಪ್ ತಾಯಿಪ್ ಎರ‍್ಡೋಗಾನ್ ಅವರ ಹೇಳಿಕೆ ಅವರು ಸುದ್ದಿಯಲ್ಲಿರುವಂತೆ ಮಾಡಿದೆ. ಮೇಲ್ ಹಂತದ ಕಲಿಕೆಯಲ್ಲಿ (high school) ‘ಒಟ್ಟೋಮನ್ ಟರ‍್ಕಿಶ್’ ನುಡಿಯನ್ನು ಕಡ್ಡಾಯ ಮಾಡುವ ಅವರ ಹಮ್ಮುಗೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಟರ‍್ಕಿಯ ಕಲಿಕೆ ಸಮಿತಿಯು ಒಟ್ಟೋಮನ್ ಟರ‍್ಕಿಶನ್ನು ಮೇಲ್ ಹಂತದ ಕಲಿಕೆಯಲ್ಲಿ ಕಡ್ಡಾಯ ಮಾಡಲು ತೀರ‍್ಮಾನಿಸಿತ್ತು. ಅದನ್ನು ಬೆಂಬಲಿಸಿ ‘ಟರ‍್ಕಿಶ್ ರಿಲಿಜಿಯಸ್ ಕೌನ್ಸಿಲ್’ ನ ಸಬೆಯಲ್ಲಿ ನೀಡಿದ ಎರ‍್ಡೋಗಾನ್ ಅವರ ಹೇಳಿಕೆ ಈಗ ಟರ‍್ಕಿಯಲ್ಲಿ ದೊಡ್ಡ ಮಟ್ಟದ ಚರ‍್ಚೆಯನ್ನು ಹುಟ್ಟು ಹಾಕಿದೆ.

ಟರ‍್ಕಿಯಲ್ಲಿ ಶೇ 70 ರಶ್ಟು ಟರ‍್ಕಿಶ್ ನುಡಿಯಾಡುವವರಿದ್ದರೆ, ಶೇ 18 ರಶ್ಟು ಕುರ‍್ಡ್ ನುಡಿಯಾಡುವರಿದ್ದಾರೆ. ಇನ್ನುಳಿದ ಮಂದಿ ಬೇರೆ ಬೇರೆ ನುಡಿಯಾಡುವವರಾಗಿದ್ದಾರೆ. ಎರ‍್ಡೋಗಾನ್ ಅವರ ನಡೆ ಇಸ್ಲಾಂ ದರ‍್ಮದ ಸಿದ್ದಾಂತವನ್ನು ನೆಲೆಗೊಳಿಸುವ ರೀತಿಯಲ್ಲಿದ್ದು, ‘ಜಾತ್ಯಾತೀತ ನಾಡು’ ಎಂದು ಕರೆಸಿಕೊಳ್ಳುವ ಟರ‍್ಕಿಗೆ ಸರಿ ಹೊಂದುವುದಿಲ್ಲ ಎಂದು ಅವರ ಹಮ್ಮುಗೆಗೆ ಎದುರಿರುವರು ಹೇಳುತ್ತಿದ್ದಾರೆ. ಟರ‍್ಕಿ ನಾಡಿನ ಹನ್ನೆರಡನೇ ಮೇಲಾಳಾದ ಎರ‍್ಡೋಗಾನ್, ಚುನಾವಣೆಯಲ್ಲಿ ಶೇ 52 ರಶ್ಟು ಮತ ಪಡೆದಿದ್ದರು. ಎರ‍್ಡೋಗಾನ್ ಇಸ್ಲಾಂ ದರ‍್ಮದ ಹಿತ ಕಾಯಬಲ್ಲರು, ಜಾತ್ಯಾತೀತ ಸಿದ್ದಾಂತದ ಪರವಾಗಿರುವವರನ್ನು ಎದುರಿಸಬಲ್ಲರು ಎಂಬ ಲೆಕ್ಕಾಚಾರದಿಂದಲೇ ಇಸ್ಲಾಂ ಸಿದ್ದಾಂತದ ಬೆಂಬಲಿಗರಿಂದ ಎರ‍್ಡೋಗಾನ್ ಅವರಿಗೆ ಹೆಚ್ಚಿನ ಮತಗಳು ದಕ್ಕಿವೆ ಎಂದು ಹೇಳಲಾಗುತ್ತದೆ.                  

                                                                                      ಒಟ್ಟೋಮನ್ ಟರ‍್ಕಿಶ್ : ಅರೇಬಿಕ್ ಲಿಪಿ

ottaman-turkish

ಒಟ್ಟೋಮನ್ ಟರ‍್ಕಿಶನ್ನು ಕಲಿಯುವುದರಿಂದ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ನಾಡು -ನಡೆ-ನುಡಿಯ ಬಗ್ಗೆ ಅರಿವಾಗುತ್ತದೆ ಎಂಬುದು ಎರ‍್ಡೋಗಾನ್ ಅವರ ವಾದವಾಗಿದೆ. ಆದರೆ ಇದನ್ನು ಒಪ್ಪದಿರುವವರು, ಟರ‍್ಕಿಯಲ್ಲಿ ಅರೇಬಿಕ್ ಬರಿಗೆಗೆ ಹೆಚ್ಚು ಒತ್ತು ಕೊಡುವ ನಡೆ ಇದಾಗಿದ್ದು ಬೇರೆ ಬೇರೆ ನುಡಿಗಳನು ಒಳಗೊಂಡು ಬೆಳೆಯುತ್ತಿರುವ ಟರ‍್ಕಿಗೆ ಈ ಹಮ್ಮುಗೆ ತಕ್ಕುದ್ದಲ್ಲ ಎಂದೇ ಹೇಳುತ್ತಾರೆ. ಹೊಸ ಜಗತ್ತಿನ ಸುಲ್ತಾನನಂತೆ ಆಡುತ್ತಿರುವ ಎರ‍್ಡೋಗಾನ್ ಗೆ ಒಟ್ಟೋಮನ್ ಟರ‍್ಕಿಶ್ ನುಡಿ ಕಲಿಸುವುದಕ್ಕಿಂತಾ, ಇಸ್ಲಾಂ ದರ‍್ಮಕ್ಕೆ ಹೆಚ್ಚು ಒತ್ತು ಕೊಡುವುದು ಬೇಕಾಗಿದೆ ಮತ್ತು ಆ ಮೂಲಕ ಜಾತ್ಯಾತೀತ ಸಿದ್ದಾಂತವನ್ನು ಕೈ ಬಿಡುವುದಕ್ಕೆ ಇಂತ ಹಮ್ಮುಗೆಯನ್ನು ಹಾಕಿಕೊಂಡಿದಾರೆ ಎಂಬುದು ಅವರ ಎದುರಾಳಿಗಳ ಬಲವಾದ ಅನಿಸಿಕೆ.

ಹೊಸ ಟರ‍್ಕಿಶ್ : ಲ್ಯಾಟಿನ್ ಲಿಪಿ

latin-turkish

ಒಟ್ಟೋಮನ್ ಟರ‍್ಕಿಶ್ ಎಂಬುದು ಟರ‍್ಕಿಶ್ ನುಡಿಯ ಹಳೆಯ ರೂಪವಾಗಿದ್ದು ಕ್ರಿ.ಶ. 1400 ರ ಒಟ್ಟೋಮನ್ ಎಂಪೈರ್ ಕಾಲದಲ್ಲಿ ಬಳಕೆಯಲ್ಲಿತ್ತು. ಆ ನುಡಿಯನ್ನು ಬರೆಯಲು ಅರೇಬಿಕ್ ಲಿಪಿಯ ಬಗೆಯೊಂದನ್ನು ಬಳಸಲಾಗುತ್ತಿತ್ತು. ಆ ಅರೇಬಿಕ್ ಲಿಪಿಯಿಂದ ಟರ‍್ಕಿಶ್ ನುಡಿಯಲ್ಲಿರೋ ಅರೇಬಿಕ್ ಮತ್ತು ಪರ‍್ಶಿಯನ್ ಬೇರಿನ ಪದಗಳನ್ನು ಬರೆಯಬಹುದಾಗಿತ್ತಾದರೂ, ಟರ‍್ಕಿಶ್ ನುಡಿಯ ಪದಗಳನ್ನು ಬರೆಯುವುದು ಹೆಚ್ಚು ತೊಡಕಿನದಾಗಿತ್ತು. ಟರ‍್ಕಿಶ್ ನುಡಿಯಲ್ಲಿನ ಹಲವಾರು ಸ್ವರಗಳಿಗೆ ಬರಿಗೆಗಳಿಲ್ಲದ್ದು ಅರೇಬಿಕ್ ಲಿಪಿಯು ಟರ‍್ಕಿಶ್ ನುಡಿಗೆ ಒಗ್ಗದಿರುವಂತೆ ಮಾಡಿತ್ತು. ಇದನ್ನು ಸರಿಪಡಿಸಲು 1928 ರಲ್ಲಿ, ಟರ‍್ಕಿ ನಾಡಿನ ಮೊದಲ ಮೇಲಾಳಾದ ಮುಸ್ತಾಪಾ ಕೇಮಲ್ ಅಟಾಟುರ‍್ಕ್ ಎಂಬುವರು ಸಂಪ್ರದಾಯವಾದಿಗಳ ವಿರೋದದ ನಡುವೆಯೇ, ಲ್ಯಾಟಿನ್ ಬರಿಗೆಗಳ ನೆಲೆಯ ಮೇಲೆ 29 ಬರಿಗೆಗಳನ್ನು ಟರ‍್ಕಿಶ್ ನುಡಿಗೆ ಅಳವಡಿಸಿದರು. ಟರ‍್ಕಿಶ್ ನುಡಿಗೆ ಲ್ಯಾಟಿನ್ ಬರಿಗೆಗಳನ್ನು ಬಳಸುವುದರ ಕುರಿತು ಹೆಚ್ಚು ಹೆಚ್ಚು ಮಂದಿಗೆ ತಿಳಿಸುವ ಕೆಲಸವನ್ನೂ ಕೂಡ ಅವರು ಮಾಡಿದರು. ಟರ‍್ಕಿಶ್ ನುಡಿಗೆ ಲ್ಯಾಟಿನ್ ಬರಿಗೆಗಳನ್ನು ಅಳವಡಿಸಿದ್ದಾದ ಮೇಲೆ ಟರ‍್ಕಿ ನಾಡಿನ ಮಂದಿಯಲ್ಲಿ ಓದುಬರಹದರಿವು (literacy) ಹೆಚ್ಚಾಯಿತು ಎಂದು ತಿಳಿದುಬಂದಿದೆ .

ಎರ‍್ಡೋಗಾನ್ ಅವರು, ಒಟ್ಟೋಮನ್ ಟರ‍್ಕಿಶ್ ನುಡಿ ಕಲಿಕೆಯ ಜೊತೆಗೆ ಅದನ್ನು ಬರೆಯಲು ಬಳಸುತ್ತಿದ್ದ ಅರೇಬಿಕ್ ಲಿಪಿಯನ್ನೂ ಕೂಡ ಕಲಿಸಬೇಕು ಎಂದು ಹೇಳಿದ್ದಾರೆ. ಟರ‍್ಕಿಯಲ್ಲಿ ಕಲಿಸುವವರ ಮತ್ತು ಬಲ್ಲವರ ಒಕ್ಕೂಟವೊಂದಿದ್ದು ಆ ಒಕ್ಕೂಟದ ಸದಸ್ಯರಿಗೆ ಒಟ್ಟೋಮನ್ ನುಡಿಯ ಬಗ್ಗೆ ಎರ‍್ಡೋಗಾನ್ ಅವರು ತೆಗೆದುಕೊಂಡಿರುವ ತೀರ‍್ಮಾನ ಹಿಡಿಸಿಲ್ಲ. ಒಟ್ಟೋಮನ್ ಟರ‍್ಕಿಶ್ ನುಡಿಯ ಬಗ್ಗೆ ತಾಳಿರುವ ತೀರ‍್ಮಾನ, ದಾರ‍್ಮಿಕ ನೆಲೆಯ ಮೇಲೆ ಕೈಗೊಂಡಿರುವ ತೀರ‍್ಮಾನವಾಗಿದೆ. ಅಟಾಟುರ‍್ಕ್ ಅವರ ಲಿಪಿ ಬದಲಾವಣೆ ನಡೆಯಿಂದ ಓದುಬರಹದರಿವಿನಲ್ಲಿ ಹೆಚ್ಚಳ ಕಂಡಿರುವ ಟರ‍್ಕಿಯಲ್ಲಿ, ಮತ್ತೆ ಹಳೆ ನುಡಿ ಕಲಿಸುವ ಅತವಾ ಕಲಿಕೆಯಲ್ಲಿ ಅರೇಬಿಕ್ ಲಿಪಿಯನ್ನು ಅಳವಡಿಸುವ ನಡೆಯಿಂದ, ಆ ನಾಡು ಕಂಡಿರುವ ಏಳಿಗೆ ಕಾಯ್ದುಕೊಳ್ಳಲಿಕ್ಕೆ ತೊಡಕಾಗಬಹುದು. ಓದುಬರಹ ತಿಳಿಯಲು ಮುಂದಿನ ಪೀಳಿಗೆಗಳು ಒದ್ದಾಡಬೇಕಾದ ಹಂತವೂ ಎದುರಾಗಬಹುದು. ಈ ನಿಟ್ಟಿನಲ್ಲಿ ಸವಾಲಿನ ದಿನಗಳು ಟರ‍್ಕಿಯ ಮುಂದಿವೆ ಎಂದರೆ ತಪ್ಪಾಗಲಾರದು!

( ಮಾಹಿತಿ ಸೆಲೆ: english.al-akhbar.com, wiki-turkeywiki-ottoman-turkishwiki-turkish-languageಟರ‍್ಕಿ:ಲಿಪಿ ಬದಲಾವಣೆ )

(ಚಿತ್ರ ಸೆಲೆ: theconservativetreehouse.comelearn.fiu.edu )Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s