ಉಗುರಿನ ಬಣ್ಣ – ಒಂದು ಇಣುಕು ನೋಟ

ಶ್ರುತಿ ಚಂದ್ರಶೇಕರ್.

nailpolish

ಹೆಣ್ಣುಮಕ್ಕಳ ಬೆರಳಿನ ಅಂದವನ್ನು ಹೆಚ್ಚಿಸಲು ಮಾಡುವ ಅಲಂಕಾರದಲ್ಲಿ ಉಗುರಿಗೆ ಬಣ್ಣ ಹಚ್ಚುವುದು ಕೂಡ ಒಂದು. ಉಗುರಿನ ಬಣ್ಣ ಮೂಲತಹ ಚೀನದಿಂದ ಬಂದದ್ದು. ಮೊದಲಿಗೆ ನಾಲ್ಕು ಸಾಂಪ್ರದಾಯಿಕ ಬಣ್ಣಗಳನ್ನು ಬಳಸುತ್ತಿದ್ದರು, ಅವು ಗುಲಾಬಿ, ಕೆಂಪು, ನೇರಳೆ ಮತ್ತು ಕಪ್ಪು ಬಣ್ಣಗಳಾಗಿದ್ದವು. ಬಳಿಕ ಹಲವಾರು ಬಗೆಯ ಬಣ್ಣಗಳು ಬಂದವು. ಬಣ್ಣ ಹಚ್ಚುವುದರಿಂದ ಉಗುರುಗಳು ಅಂದವಾಗಿ, ಆಕರ‍್ಶಕವಾಗಿ ಮತ್ತು ಚೊಕ್ಕವಾಗಿ ಕಾಣಿಸುತ್ತವೆ.

ಉಗುರಿಗೆ ಬಣ್ಣ ಹಚ್ಚುವುದರಲ್ಲಿಯೂ ಕೂಡ ಕೆಲವು ಹಂತಗಳಿವೆ. ಅವುಗಳ ಕುರಿತು ತಿಳಿದುಕೊಳ್ಳೋಣ:

1. ಬಣ್ಣ ಹಾಕುವಾಗ ಉಗುರಿನಲ್ಲಿ ತೇವಾಂಶ ಇರಬಾರದು, ಅವು ಚೆನ್ನಾಗಿ ಒಣಗಿರಬೇಕು. ಬಳಿಕ ಉಗುರಿನ ಸುತ್ತ ಇರುವ ದಪ್ಪ ಚರ‍್ಮವನ್ನು (cuticles) ತೊಗಲು ತಳ್ಳುಕ(cuticle pusher)ದಿಂದ ಹಿಂದಕ್ಕೆ ತಳ್ಳಬೇಕು.

2. ಬಳಿಕ ಅಡಿಹಾಸು (base coat) ಹಾಕಿಕೊಳ್ಳಬೇಕು. ಇದರಿಂದ ಬಣ್ಣ ಹಚ್ಚುವಾಗ ಹೆಚ್ಚಿನ ಸಮಯ ಉಳಿಯುತ್ತದೆ. ಈ ಅಡಿಹಾಸು ಎಂಬುದು ಯಾವುದೇ ಬಣ್ಣವನ್ನು ಹೊಂದಿರುವುದಿಲ್ಲ, ಇದನ್ನು ಹಚ್ಚುವುದರಿಂದ ಉಗುರುಗಳು ಗಟ್ಟಿಯಾಗುತ್ತವೆ, ಇದು ಉಗುರಿನ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ ಹಾಗು ಬಣ್ಣವು ಉಗುರಿಗೆ ಚೆನ್ನಾಗಿ ಅಂಟಿಕೊಳ್ಳಲು ನೆರವಾಗುತ್ತದೆ. ಅಲ್ಲದೇ, ಬೇರೆ ಬೇರೆ ಬಣ್ಣಗಳನ್ನು ಹಚ್ಚುವುದರಿಂದ ಕೆಲವೊಮ್ಮೆ ಉಗುರು ಅರಿಶಿನ ಬಣ್ಣದ ಕಲೆಯನ್ನು ಹೊಂದುತ್ತದೆ, ಈ ಅರಿಶಿನ ಬಣ್ಣದ ಕಲೆಯನ್ನು ತಡೆಯುವಲ್ಲಿ ಅಡಿಹಾಸು ನೆರವಾಗುತ್ತದೆ.

ಅಡಿಹಾಸುಗಳಲ್ಲಿ ನಾಲ್ಕು ಬಗೆಗಳಿವೆ. ಅವು ಪಳಗಿದ (regular), ದಪ್ಪನಾದ (thicken), ಗಟ್ಟಿಯಾದ (strengthen) ಮತ್ತು ಏಣು ತುಂಬುವ (ridge filler) ಅಡಿಹಾಸುಗಳು. ಇದರಲ್ಲಿ ಏಣು ತುಂಬುವ ಅಡಿಹಾಸನ್ನು ಹಚ್ಚಿಕೊಳ್ಳುವುದರಿಂದ ಉಗುರಿನ ಮೇಲೆ ಗೆರೆ-ಗೆರೆಯಾಗಿ ಕಾಣಿಸಿಕೊಳ್ಳುವುದನ್ನು ಮುಚ್ಚಿಕೂಳ್ಳಬಹುದು. ಇದರಂತೆ ಉಳಿದ ಅಡಿಹಾಸುಗಳಿಂದ ಉಗುರನ್ನು ಗಟ್ಟಿ ಹಾಗು ದಪ್ಪ ಆಗುವಂತೆ ಕೂಡಾ ಮಾಡಬಹುದು.

3. ಅಡಿಹಾಸು ಹಚ್ಚಿ ಒಣಗಿದ ಬಳಿಕ ಉಗುರಿಗೆ ಬಣ್ಣವನ್ನು ಹಚ್ಚಬೇಕು. ನಿಮ್ಮ ಇಶ್ಟದ ಬಣ್ಣವನ್ನು ಹಚ್ಚಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಬಗೆಬಗೆಯ ಬಣ್ಣಗಳು ದೂರೆಯುತ್ತವೆ. ಒಂದು ವೇಳೆ ಉಗುರುಗಳು ಚಿಕ್ಕದಿದ್ದರೆ ತೆಳುಬಣ್ಣವನ್ನು ಹಚ್ಚಿಕೊಂಡರೆ ಒಳ್ಳೆಯದು, ಚಿಕ್ಕ ಉಗುರಿನವರು ಕಡುಬಣ್ಣಗಳನ್ನು ಹಚ್ಚಿಕೊಂಡರೆ ಉಗುರುಗಳು ಇನ್ನೂ ಚಿಕ್ಕದಾಗಿ ಕಾಣಿಸುತ್ತವೆ. ಆದರೆ ಯಾರಿಗೆ ಯಾವ ಬಣ್ಣ ಇಶ್ಟವಾಗುತ್ತದೆಯೋ ಆ ಬಣ್ಣಗಳನ್ನು ಹಚ್ಚಿಕೊಳ್ಳಬಹುದು.

ಬಣ್ಣ ಹಚ್ಚುವ ಬಗೆ

ಬಣ್ಣವನ್ನು ಕುಂಚ(brush)ದಿಂದ ತೆಗೆದು ಮೊದಲು ಉಗುರಿನ ನಡುಬಾಗಕ್ಕೆ ಹಚ್ಚಬೇಕು. ಬಳಿಕ ಎಡ ಹಾಗು ಬಲ ಬಾಗದಲ್ಲಿ ತೆಳ್ಳಗೆ ಹಚ್ಚಿಕೊಳ್ಳಬೇಕು. ಬಣ್ಣ ಒಣಗಿದ ಬಳಿಕ ಇದೆ ರೀತಿಯಲ್ಲಿ ಎರಡು ಬಾರಿ ಬಣ್ಣವನ್ನು ಹಚ್ಚಿಕೊಳ್ಳಬಹುದು ಇದರಿಂದ ಉಗುರಿಗೆ ಮೆರಗು ಬರುತ್ತದೆ. ಉಗುರನ್ನು ಬಿಟ್ಟು ಬೆರಳಿನ ಬಾಗಕ್ಕೆ ಬಣ್ಣವೇನಾದರು ತಾಕಿದರೆ ಉಗುರಿನ ಬಣ್ಣ ತೆಗೆಯುಕ(Nail polish remover)ದಿಂದ ಒರೆಸಿಕೊಳ್ಳಬಹುದು. ಹೀಗೆ ಉಗುರು ಅಂದಗಾಣುವಂತೆ ಬಣ್ಣವನ್ನು ಹಚ್ಚಿಕೊಳ್ಳಬಹುದು.

ಬಣ್ಣಗಳಲ್ಲಿಯೂ ಕೂಡ ಎರಡು ಬಗೆ, ಅವು ಜೆಲ್ ಉಗುರಿನ ಬಣ್ಣ ಮತ್ತು ಪಳಗಿದ (regular) ಉಗುರಿನ ಬಣ್ಣ. ಇದರಲ್ಲಿ ಜೆಲ್ ಉಗುರಿನ ಬಣ್ಣ ತುಂಬ ಸಮಯ ಇರುತ್ತದೆ ಆದರೆ ಇದು ಒಣಗಲು ಕಡುನೇರಳೆ (ultra violet) ಬೆಳಕು ಬೇಕಾಗುತ್ತದೆ. ಸರಿಯಾದ ಕ್ರಮದಲ್ಲಿ ಹಚ್ಚಿಕೊಂಡರೆ ಮತ್ತು ಚನ್ನಾಗಿ ನೊಡಿಕೊಂಡರೆ ಎರಡು ವಾರಗಳವರೆಗೂ ಬಣ್ಣ ಹಾಗೆಯೇ ಉಳಿಯುತ್ತದೆ. ಪಳಗಿದ ಉಗುರಿನ ಬಣ್ಣ ಎರಡು ಇಲ್ಲವೇ ಏಳು ದಿನಗಳವರೆಗೂ ಇರುತ್ತದೆ. ಜೆಲ್ ಉಗುರಿನ ಬಣ್ಣ ತೆಗೆಯುವುದು ಪಳಗಿದ ಉಗುರಿನ ಬಣ್ಣ ತೆಗೆಯುವುದಕ್ಕಿಂತ ಕಶ್ಟವಾದದ್ದು. ಜೆಲ್ ಉಗುರಿನ ಬಣ್ಣವನ್ನು ತೆಗೆಯಲು ಅಸಿಟೋನ್ (Acetone) ಹೊಂದಿರುವ ಬಣ್ಣ ತೆಗೆಯುಕದಿಂದ 8 ರಿಂದ 15 ನಿಮಿಶ ನೆನಸಿ ಬಳಿಕ ಸಣ್ಣ ಮರದ ಕಡ್ಡಿಯಿಂದ ಬಣ್ಣವನ್ನು ತೆಗೆಯಬೇಕು.

ಒಂದು ವೇಳೆ ಉಗುರಿನ ಬಣ್ಣದ ಮೇಲೆ ಚಿತ್ತಾರ ಬೇಕೆಂದರೆ ಹಲವು ಬಗೆಯ ನಯಗೊಳಿಸುವ (finishing) ಬಣ್ಣಗಳಿಂದ ಬೇಕಾದ ಚಿತ್ತಾರವನ್ನು ಬಿಡಿಸಿಕೊಳ್ಳಬಹುದು. ಬಣ್ಣ ಒಣಗಿ ನಯಗೊಳಿಸಿದ ಮೇಲೆ ಮೇಲು ಹಾಸನ್ನು (top coat) ಹಚ್ಚಿಕೊಳ್ಳಬೇಕು. ಮೇಲು ಹಾಸಿನಿಂದ ಹಲವು ಉಪಯೋಗಳಿವೆ, ಅವುಗಳಲ್ಲಿ ಕೆಲವೆಂದರೆ:

  • ಇದು ಉಗುರಿನ ಬಣ್ಣಗಳಿಗೆ ಕಾಪಿನಂತೆ (shield) ಇರುತ್ತದೆ.
  • ಇದರಿಂದ ಬಣ್ಣ ಹೆಚ್ಚಿನ ಸಮಯ ಉಳಿಯುತ್ತದೆ.
  • ಬಣ್ಣವು ಕಾಂತಿಯುತವಾಗಿ ಕಾಣುತ್ತದೆ.
  • ಬಣ್ಣ ಮಾಸದಂತೆ ಹಾಗು ನಡುವೆ ಬಣ್ಣದ ಹಾಸು ಏಳದಂತೆ ತಡೆಯುತ್ತದೆ.
  • ಹೆಚ್ಚಿನ ಮೇಲು ಹಾಸುಗಳು ಬಣ್ಣವನ್ನು ಬೇಗ ಒಣಗುವಂತೆ ಮಾಡುತ್ತವೆ.

ಹೀಗೆ ಉಗುರಿಗೆ ಬಣ್ಣ ಹಚ್ಚುವುದರಲ್ಲಿ ಹಲವಾರು ವಿಶಯಗಳು ಅಡಗಿವೆ. ಬೆರಳಿಗೆ ಹೊಂದುವ ಬಣ್ಣವನ್ನು ಸರಿಯಾದ ಬಗೆಯಲ್ಲಿ ಉಗುರಿಗೆ ಹಚ್ಚಿಕೊಂಡು ಕೈಗಳ ಅಂದವನ್ನು ಮತ್ತಶ್ಟು ಹೆಚ್ಚಿಸಬಹುದು.

(ಚಿತ್ರ ಸೆಲೆ: magicnailsharrison.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: