ಸುಗ್ಗಿ – ನಮ್ಮಲ್ಲೊಂದು ಒಕ್ಕಲಾಟ

ಹರ‍್ಶಿತ್ ಮಂಜುನಾತ್.

paddy-harvest

ಸುಗ್ಗಿ ಬಂದಿದೆ, ಹಿಗ್ಗನು ತಂದಿದೆ. ನಮ್ಮ ನಾಡಿನ ಮಂದಿಗೆಲ್ಲಾ…!

ಹವ್ದು ನಮಗಿದು ಸುಗ್ಗಿಯ ಕಾಲ. ಜನವರಿ ತಿಂಗಳ ಕೊರೆ ಬೀಳುವ ಹೊತ್ತಿನಲ್ಲಿ ಆಚರಿಸಲ್ಪಡುವ ಸುಗ್ಗಿಗೆ ಇನ್ನೊಂದು ಹೆಸರು ಸಂಕ್ರಾಂತಿ ಎಂದು. ಅಲ್ಲದೇ ಒಕ್ಕಲಾಟ ಎಂಬ ಹೆಸರೂ ಮಂದಿಯ ನಡುವೆ ಬಳಕೆಯಲ್ಲಿದೆ. ಜೂನ್ ತಿಂಗಳಲ್ಲಿ ಶುರುವಾಗುವ ಬಿತ್ತನೆಯ ಬಳಿಕ ಜನವರಿ ಹೊತ್ತಿನಲ್ಲಿ ಪಡೆಯುವ ಪಸಲಿನ ನಲಿವನ್ನು ತನ್ನವರೊಂದಿಗೆ ಹಂಚಿಕೊಂಡು ಹಬ್ಬದಂತೆ ಆಚರಿಸಿ ಅನುಬವಿಸುವ ಹೊತ್ತಿದು. ನಾಡಿನಲ್ಲೀಗ ಬತ್ತದ ಕುಯ್ಲಿನ ನಲಿವು. ಎಲ್ಲೆಡೆ ಬೆಳೆದ ಬೆಳೆಗಳ ಪಸಲನ್ನು ಕಯ್ಗೆತ್ತಿಕೊಳ್ಳುವ ಕೆಲಸ ಜೋರಾಗಿಯೇ ನಡೆಯುತ್ತಿದೆ. ತಾವು ಬೆಳೆದ ಬೆಳೆಯನ್ನು ಮನೆತುಂಬಿಕೊಳ್ಳುವ ಕೆಲಸದಲ್ಲಿ ರೈತರು ನಿರತರಾಗಿದ್ದಾರೆ.

ಇದಕ್ಕೂ ಮುನ್ನಾ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಬೀಳುವ ಅಶ್ವಿನಿ ಮಳೆಯಿಂದ ಹೊಲಗೆಯ್ಮೆಯ ಕೆಲಸಗಳು ಮೊದಲ್ಗೊಳ್ಳುತ್ತವೆ. ಅಶ್ವಿನಿ ಮಳೆಯ ಬಳಿಕ ಬೀಳುವ ಬರಣಿ ಮಳೆಯಿಂದ ಬೇಸಾಯದ ಕೆಲಸಗಳು ಶುರುವಾಗುತ್ತದೆ. ಈ ಹೊತ್ತಿಗಾಗಲೇ ಯುಗಾದಿಯ ನಲಿವು ನಮ್ಮದು. ಯುಗಾದಿ ಹಬ್ಬಕ್ಕೆ ಏಳು ದಿನಗಳ ಹಿಂದು-ಮುಂದಾಗಿ ಮುಂಗಾರು ಮಳೆ ಬೀಳುತ್ತದೆ. ಆದರೆ ಮುಂಗಾರು ಮಳೆ ಬಿದ್ದ ಮಾತ್ರಕ್ಕೆ ಹೊಲಗೆಯ್ಮೆಯು  ಶುರುವಾಗುವುದಿಲ್ಲ. ಬದಲಾಗಿ ನೆಲ ನೆನೆದು ತೇವ ಹೀರಿಕೊಳ್ಳಲು ಬಿಡುತ್ತಾರೆ. ಕಾರಣ ನೆಲದ ಪಲವತ್ತತೆ ಹೆಚ್ಚಿಸುವಲ್ಲಿ ನೆರವಾಗುವ ಕೆಲ ಸಣ್ಣ ಉಸಿರಿಗಳು ಈ ನೆಲ ನೆನೆಯುವ ಕೆಲಸದಲ್ಲಿ ಹುಟ್ಟಿ ಬೆಳವಣಿಗೆ ಹೊಂದುತ್ತವೆ. ನೆಲ ನೆವೆಯಾದ ಬಳಿಕ ಹೊಲಕ್ಕೆ ಗೊಬ್ಬರ-ಗೋಡು ಹಾಕುವುದು, ಬೇಲಿ, ಉದಿ-ಬದು ಗಟ್ಟಿಗೊಳಿಸುವ ಕೆಲಸಗಳು ಮುಂದುವರಿಯುತ್ತವೆ. ಈ ಹೊತ್ತಿಗಾಗಲೇ ಮಳೆ ಶುರುವಾಗಿರುತ್ತದೆ. ಹಾಗಾಗಿ ಗೊಬ್ಬರ ಹಾಕಿದ ಬಳಿಕ ಬೀಳುವ ಒಂದು ಮಳೆಯನ್ನು ನೋಡಿಕೊಂಡು ನಾಟಿಗರು ಪೂಜೆಯೊಂದಿಗೆ ಉಳುಮೆಯ ಕೆಲಸವನ್ನು ಶುರುವಿಡುತ್ತಾರೆ. ಆಗಸ್ಟ್ ತಿಂಗಳಿನ ಹೊತ್ತಿಗಾಗಲೇ ಬಿತ್ತಿದ ಬೀಜ ಮೊಳೆತು, ಎರಡೆಲೆ ಬಿಟ್ಟು, ಬೆಳೆದು, ಮುಂದೆ ತೆನೆಯಾಗಿ, ತೆನೆ ಬಲಿತು ಹಣ್ಣಾಗಿ ಜನವರಿಯ ಹೊತ್ತಿಗೆ ಕಟಾವಿಗೆ ಸಿದ್ದವಾಗುತ್ತದೆ.

ಒಂದು ಕಡೆ ಬೆಳೆ ಕಟಾವಿಗೆ ಸಿದ್ದವಾದರೆ, ಇನ್ನೊಂದು ಕಡೆ ಒಕ್ಕಲಾಟ ಮಾಡಲು ಕಣ ಮಾಡುವುದೇ ನಾಟಿಗರಿಗೆ ಹಬ್ಬ. ನಾಟಿಗಾರರು ತಮ್ಮ ಹೊಲ, ಮನೆಯ ಆಸು ಪಾಸಿನಲ್ಲಿ  ಕಣ ಮಾಡಿಕೊಳ್ಳುತ್ತಿದ್ದರು. ನೀರು, ಸಗಣಿ, ಮಣ್ಣು ಹಾಕಿ, ದನ, ಕುರಿಗಳಿಂದ ತುಳಿಸಿ ಕಣ ಮಾಡುತ್ತಾರೆ. ಕೆಲವರಂತೂ ರಸಗಣ ಎಂದು ವಾರಗಟ್ಟಲೇ ಕಣದ ತಯಾರಿ ಮಾಡುತ್ತಾರೆ. ಹೀಗೆ ಕಣ ತಯಾರಾಗುತ್ತಿದ್ದಂತೆ ಹೊಲದಲ್ಲಿ ಕಟಾವಿನ ಕೆಲಸಗಳು ಮೊದಲ್ಗೊಳ್ಳುತ್ತವೆ. ಒಂದು ಒಳ್ಳೆಯ ಹೊತ್ತು ನೋಡಿಕೊಂಡು ಪೂಜೆ ಮಾಡಿ ಮೊದಲು ಎರಡು ಮೀಸಲು ತೆನೆಯನ್ನು ಕಟಾವು ಮಾಡಿ ಒಕ್ಕಲಾಟದ ಪೂಜೆಗೆಂದು ತೆಗೆದಿಡಲಾಗುತ್ತದೆ. ಬಳಿಕ ಕಟಾವಿನ ಕೆಲಸಗಳು ಮುಂದುವರೆಯುತ್ತವೆ.  ಹೀಗೆ ಕಟಾವಾದ ತೆನೆಯನ್ನು ಎರಡು ದಿನ ಹೊಲದಲ್ಲಿ ಬಿಡಲಾಗುತ್ತದೆ.

ಬಳಿಕ ತೆನೆಯನ್ನು ಹೊರೆಕಟ್ಟಿ ಅದನ್ನು ಕಣಕ್ಕೆ ಹೊತ್ತೊಯ್ಯಲಾಗುತ್ತದೆ. ತೆನೆಯ ಹೊರೆಗೆ ಮಲೆನಾಡು ಬಾಗಗಳಲ್ಲಿ ತೆನೆಗಂಟು ಎಂದೂ ಕೂಡ ಹೇಳುತ್ತಾರೆ. ಹೀಗೆ ಬೆಳೆ ಕಟಾವಾಗಿ ಕಣಕ್ಕೆ ಸಾಗುವ ಹೊತ್ತಿಗೆ ನಾಟಿಗಾರರ ನಡುವೆ ಅಡಿಯಿಡುವುದೇ ಸುಗ್ಗಿಯ ನಲಿವು. ಕೊಯ್ಲು ಶುರುವಾಗಿ ಕಣಕ್ಕೆ ಸಲು ಬಂದು ಬೀಳುತ್ತಿದ್ದಂತೆ ಹಗಲು ರಾತ್ರಿಯ ಪರಿವೇ ಇಲ್ಲದೆ ಅಲ್ಲಿ ಒಂದು ಸಾಂಸ್ಕ್ರುತಿಕ ಲೋಕವೇ ಬಿಚ್ಚುಕೊಳ್ಳುತ್ತದೆ. ಹಾಡು, ಕುಣಿತ ರಂಗೇರುತ್ತದೆ. ಅದೊಂದು ತೆನೆಯನ್ನು ಕಯ್ಗೆ ಪಡೆದು ದಕ್ಕಿಸಿಕೊಂಡ ಲೆಕ್ಕ ಇಡುವ ಹೆಮ್ಮೆಯ ತಾಣ. ತನ್ನ ಒಡನಾಡಿಗಳಾಗಿ ದುಡಿವ ಜಾನುವಾರುಗಳಿಗೆ ಬೇಕಾಗುವ ಮೇವನ್ನು ಕಾಪಿಡುವ ಜಾಗವದು.

ಹೀಗೆ ಗದ್ದೆ ಕೊಯ್ದ ಹೊರೆಯನ್ನು ಗೊಣಬೆ ಹಾಕಲಾಗುತ್ತದೆ. ಅಂದರೆ ಬತ್ತದ ಹೊರೆಯನ್ನು ಗದ್ದೆಯಲ್ಲಿ ಕಟಾವು ಮಾಡಿ ಹೊರೆ ಕಟ್ಟಿ ತಂದು ಒಟ್ಟಿಗೆ ಹಾಕುವುದು. ಗೊಣಬೆ ಎಂಬ ಪದವು ಮಲೆನಾಡಿನ ಶಿವಮೊಗ್ಗ ಬಾಗದಲ್ಲಿ ಬಳಕೆಯಲ್ಲಿರುವ ಪದ. ಹಾಗೆಯೇ ಚಿಕ್ಕಮಗಳೂರು ಬಾಗಗಳಲ್ಲಿ ಬೆಣಬೆ ಮತ್ತು ಬೆಣವೆ ಎಂಬ ಪದ ಬಳಕೆ ಇದ್ದರೇ ಹಾಸನದ ಕಡೆ ಬಣವೆ ಎನ್ನಲಾಗುತ್ತದೆ. ಆದರೆ ಗೊಣಬೆ ಎಂಬ ಪದವು ಹೆಚ್ಚಾಗಿ ಮಂದಿಯ ನಡುವೆ ಬಳಕೆಯಲ್ಲಿದೆ. ಗೊಣಬೆಯು ನೋಡಲು ಗೋಪುರದ ಆಕಾರದಲ್ಲಿರುತ್ತದೆ. ಕಾರಣ ಈ ಗೊಣಬೆಯ ಬುಡವನ್ನು ದುಂಡಾಕಾರವಾಗಿ ಹಾಕಲಾಗುತ್ತದೆ. ಹೀಗೆ ದುಂಡಾಕಾರವಾಗಿ ಹಾಕುತ್ತಾ ಹಾಕುತ್ತಾ ಹೊರೆಯನ್ನು ಏರಿಸುತ್ತಾ ಬಂದು ಗೊಣಬೆಯ ತುದಿಯು ಚೂಪಿನ ಆಕಾರ ಬರುವಂತೆ ಮಾಡಲಾಗುತ್ತದೆ. ಗೊಣಬೆ ಕಟ್ಟುವ ಹೊತ್ತಲ್ಲಿ ಹೊರೆಯ ತೆನೆಯ ಬಾಗವನ್ನು ಒಳಮುಕವಾಗಿ ಇರಿಸಿದರೆ, ದಂಡಿನ ಬಾಗವನ್ನು ಹೊರಮುಕವಾಗಿ ಇರಿಸಲಾಗುತ್ತದೆ. ಇದರಿಂದ ತೆನೆಯಿಂದ ಉದುರಿದ ಬತ್ತವು ಗೊಣಬೆಯ ಒಳಗೆಯೇ ಉಳಿದುಕೊಳ್ಳುತ್ತದೆ. ಇದು ಬತ್ತವನ್ನು ರಾಶಿ ಮಾಡುವ ಹೊತ್ತಿನಲ್ಲಿ ನೆರವಾಗುತ್ತದೆ. ಹೀಗೆ ಗೊಣಬೆಯ ಮೇಲೆ ಹೊದಿಕೆ ಹೊದಿಸುವ ಮುನ್ನ ಗೊಣಬೆಯ ಮೇಲೆ ಒಂದು ಚೆಂಡು ಹೂವಿನ ಗಿಡ ನಿಲ್ಲಿಸಿ ಅದರ ಮೇಲೆ ಹುಲ್ಲುಕಟ್ಟಿ ಮುಚ್ಚಿಬಿಡಲಾಗುತ್ತದೆ.

ಗೊಣಬೆಯನ್ನು ಹೆಚ್ಚಿನ ಕಾಳಜಿ ವಹಿಸಿ ಕಟ್ಟಲಾಗುತ್ತದೆ. ಎಶ್ಟರಮಟ್ಟಿಗೆಂದರೆ, ಒಂದು ವೇಳೆ ಗೊಣಬೆಯ ಮೇಲೆ ನೀರು ಬಿದ್ದರೆ ಅದು ನೆಲಮುಟ್ಟಲಾರದು. ಅಲ್ಲದೇ ಈ ಕಾಳಜಿಗೆ ಒಂದು ಮುಕ್ಯ ಕಾರಣವೂ ಇದೆ. ಒಂದು ವೇಳೆ ನೀರು ಗೊಣಬೆಯೆ ಒಳಹೊಕ್ಕರೆ ಹೊರೆ ನೀರಿನಿಂದ ನೆನೆದು ಮುಗ್ಗು ಬರುತ್ತದೆ. ಅದು ಆ ಹೊರೆಯನ್ನೇ ಬಳಕೆಯಿಂದ ಹೊರಗುಳಿಯುವಂತೆ ಮಾಡುತ್ತದೆ. ಅದಕ್ಕೆಂದೆ ಗೊಣಬೆ ಕಟ್ಟುವ ಹೊತ್ತಲ್ಲಿ ಕಾಳಜಿ ವಹಿಸುವ ಜೊತೆ ಜೊತೆಗೆ ಗೊಣಬೆ ಕಟ್ಟಿದ ಬಳಿಕ ಅದರ ಮೇಲೆ ದೊಡ್ಡ ನೀರ‍್ಕರಿಯರಕ(Plastic)ದ ಹೊದಿಕೆಯನ್ನು ಹೊದಿಸಲಾಗುತ್ತದೆ. ಗೊಣಬೆಯನ್ನು ಇಂತಿಶ್ಟು ದಿನದವರೆಗೆ ಇಡಬೇಕೆಂದೇನಿಲ್ಲ. ಕೆಲವರು ಎರಡರಿಂದ ಮೂರು ತಿಂಗಳುಗಳ ವರೆಗೂ ಹಾಗೆಯೇ ಬಿಡುತ್ತಾರೆ. ಮತ್ತೆ ಕೆಲವರು ಅಯ್ದಾರು ದಿನಕ್ಕೇ ತೆಗೆಯುವುದುಂಟು. ಒಟ್ಟಿನಲ್ಲಿ ಕೆಲ ದಿನಗಳವರೆಗೆ ಹೊರೆಯನ್ನು ಒಟ್ಟುಮಾಡಿ ಒಣಗಿಸುವುದು ಗೊಣಬೆ ಕಟ್ಟುವ ಗುರಿ. ಒಟ್ಟಿನಲ್ಲಿ ಕಟ್ಟುವ ಗೊಣಬೆಗಳು ನಾಟಿಗಾರನ ತನ್ನಂಬುಗೆ ಹೆಚ್ಚಿಸುತ್ತಿದ್ದವು, ಅಲ್ಲದೇ ಆ ಗೊಣಬೆಗಳ ಸಾಲು ಮತ್ತು ಎತ್ತರಗಳ ಮೇಲೆ ಹಿಂದಿನ ಕಾಲದಲ್ಲಿ ಅವರ ಶ್ರೀಮಂತಿಕೆಯನ್ನು ಅಳೆಯಾಲಾಗುತ್ತಿತ್ತಂತೆ.

ಹೀಗೆ ಒಂದಶ್ಟು ದಿನಗಳ ಬಳಿಕ ಮುಚ್ಚಿಟ್ಟ ಗೊಣಬೆಯನ್ನು ಬಿಚ್ಚಲಾಗುತ್ತದೆ. ಅಂದರೆ ಇಲ್ಲಿ ಗೊಣಬೆಯನ್ನು ತೆಗೆದು ಕಣದ ನಡುವೆ ಒಂದು ಕಂಬ ಹಾಕಿ ಅದರ ಸುತ್ತಲೂ ದುಂಡಾಕಾರವಾಗಿ ತೆನೆ ಹೊರೆಯನ್ನು ಹಾಕುತ್ತಾ ಬರಲಾಗುತ್ತದೆ. ಹೀಗೆ ಹಾಕುವ ಕಂಬವನ್ನು ಮೇಟಿ ಎನ್ನುತ್ತಾರೆ ಮತ್ತು ಗೊಣಬೆಯಿಂದ ಮೇಟಿಯ ಸುತ್ತ ಹಾಕುವ ತೆನೆಯ ಹೊರೆಗೆ ಶಿವಮೊಗ್ಗ ಬಾಗಗಳಲ್ಲಿ ’ನೆರಗುಹಾಕುವುದು’ ಎನ್ನುತ್ತಾರೆ. ಹಾಗೆಯೇ ಚಿಕ್ಕಮಗಳೂರಿನ ಕಡೆಯ ಮಂದಿ ’ಹಡ್ಲು ಹಾಕುವುದು’ ಎನ್ನುತ್ತಾರೆ. ಮುಂದೆ ಮೇಟಿಗೆ ಅಯ್ದು ಅತವಾ ಆರು ಎತ್ತುಗಳನ್ನು ಬಿಗಿದು ಹಡ್ಲಿನ ಸುತ್ತ ನಡೆಸಲಾಗುತ್ತದೆ. ಆ ಹೊತ್ತಲ್ಲಿ ಬತ್ತದ ಕಾಳು ತೆನೆಯಿಂದ ಬೇರೆಯಾಗುತ್ತದೆ. ಹೀಗೆ ಕೆಲ ಹೊತ್ತಿನ ಬಳಿಕ ಎತ್ತನ್ನು ಬದಿಗೆ ಕಟ್ಟಿ ಹಡ್ಲನ್ನು ಮಗುಚಿ ಹಾಕಲಾಗುತ್ತದೆ. ತೆನೆಯಿಂದ  ಕಾಳು ಬೇರಾಗದೇ ಅಡಿಯಲ್ಲೇ ಉಳಿದಿದ್ದರೆ ಮತ್ತೆ ಅದೇ ರೀತಿಯಾಗಿ ಮೇಟಿಗೆ ದನವನ್ನು ಕಟ್ಟಿ ಹಡ್ಲಿನ ಸುತ್ತ ನಡೆಸಲಾಗುತ್ತದೆ. ಇದು ಒಂದು ರೀತಿಯಲ್ಲಿ ತೆನೆಯಿಂದ ಕಾಳನ್ನು ಬೇರಾಗಿಸುವ ಬಗೆ.

ಮತ್ತೆ ಕೆಲವು ಕಡೆಗಳಲ್ಲಿ ದೊಡ್ಡ ಗುಂಡು ಗಾಲಿಯ ಎರಡೂ ಬದಿಗೆ ಮರದ ಹಲಗೆಯನ್ನು ಕಟ್ಟಿ ಅದನ್ನು ಹಡ್ಲಿನ ಮೇಲೆ ಎತ್ತಿನಿಂದ ಎಳೆಸಲಾಗುತ್ತದೆ. ಈ ಎಲ್ಲಾ ಕೆಲಸದ ಬಳಿಕ ಹುಲ್ಲನ್ನು ಎತ್ತಿ ಕಣದ ಬದಿಯಲ್ಲಿ ಇರಿಸಿ ತೆನೆಯಿಂದ ಉದುರಿದ ಬತ್ತದ ಕಾಳನ್ನು ರಾಶಿ ಮಾಡಲಾಗುತ್ತದೆ. ಹೀಗೆ ಹುಲ್ಲನ್ನು ಬೇರಾಗಿರಿಸುವುದನ್ನು ’ಹುಲ್ಲು ಬೀಸುವುದು’ ಎನ್ನುತ್ತಾರೆ ಮತ್ತು ಈ ಕೆಲಸವನ್ನು ಹೆಚ್ಚಾಗಿ ರಾತ್ರಿಯ ಬೆಳದಿಂಗಳ ಹೊತ್ತಿನಲ್ಲಿ ಇಟ್ಟುಕೊಂಡಿರುತ್ತಾರೆ. ಇದರ ಬಳಿಕ ಮುಂಜಾವಿನ ತಂಪು ಗಾಳಿಯಲ್ಲಿ ರಾಶಿ ಮಾಡಿಟ್ಟ ಬತ್ತದ ಕಾಳನ್ನು, ಮುಟ್ಟಲನ್ನು ಬಳಸಿಕೊಂಡು ಕೇರಲಾಗುತ್ತದೆ. ಮುಟ್ಟಲಿಗೆ ನಾವು ಆಡುನುಡಿಯಲ್ಲಿ ಕೇರುವ ಮರ ಎಂದು ಕೂಡ ಹೇಳುವುದುಂಟು.

paddy-harvest-windಅಂದರೆ ಇಲ್ಲಿ ಮುಟ್ಟಲಿನಲ್ಲಿ ಬತ್ತದ ಬೀಜವನ್ನು ತೆಗೆದುಕೊಂಡು ಬೀಸಲಾಗುತ್ತದೆ. ಗಾಳಿ ಬೀಸುವ ದಿಕ್ಕನ್ನು ತಿಳಿಯಲು ಒಂದು ಕೋಲಿಗೆ ಹಗ್ಗವನ್ನು ಕಟ್ಟಿ ಆ ಹಗ್ಗದ ತುದಿಗೆ ಒಂದು ನೀರ‍್ಕರಿಯರಕದ ಹಾಳೆಯನ್ನು ಕಟ್ಟಲಾಗುತ್ತದೆ. ಗಾಳಿಯ ಬೀಸುವ ಕಡೆಗೇ ಆ ನೀರ‍್ಕರಿಯರಕ ಕೂಡ ಹಾರುವುದರಿಂದ ಗಾಳಿಯ ದಿಕ್ಕನ್ನು ಗುರುತಿಸಲು ನೆರವಾಗುತ್ತದೆ. ಹೀಗೆ ಗಾಳಿಯು ಬೀಸುವ ದಿಕ್ಕಿಗೆ ಸರಿಹೊಂದುವಂತೆ ನಿಂತುಕೊಂಡು ಮುಟ್ಟಲಿನಲ್ಲಿ ಬತ್ತದ ಕಾಳನ್ನು ಬೀಸಲು ಶುರುವಿಡುತ್ತಾರೆ. ಹೀಗೆ ಬೀಸುವಾಗ ಜಳ್ಳು ಒಂದು ಕಡೆಗೆ, ಹೊಟ್ಟು ಒಂದು ಕಡೆಗೆ, ಮತ್ತು ಬತ್ತ ಒಂದು ಕಡೆ ಬೇರಾಗುತ್ತವೆ. ಇಲ್ಲಿ ಜಳ್ಳು ಎಂದರೆ ನೆವೆಯಾದ ಬತ್ತ, ಹೊಟ್ಟು ಎಂದರೆ ಸಿಪ್ಪೆ ಕಸ. ಹಾಗೆಯೇ ಬೇರಾದ ಮೂರೂ ಬಗೆಯನ್ನು ಬೇರೆಯದಾಗಿಯೇ ತೆಗೆದು ಜಳ್ಳಿನ ಒಂದು ಬಾಗ, ಹೊಟ್ಟಿನ ಒಂದು ಬಾಗ ಮತ್ತು ಗಟ್ಟಿ ಬತ್ತದ ಒಂದು ರಾಶಿಯನ್ನು ಮಾಡಲಾಗುತ್ತದೆ. ಹೀಗೆ ರಾಶಿ ಮಾಡಿದ ಗಟ್ಟಿ ಬತ್ತದ ಕಾಳಿನಲ್ಲಿರುವ ದೂಳನ್ನು ’ಕೊಂಗ’ದಿಂದ ತೆಗೆಯಲಾಗುತ್ತದೆ. ಹೀಗೆ ಬತ್ತದ ಕಾಳಿನಿಂದ ದೂಳು ತೆಗೆದ ಬಳಿಕ ಗೋರುಮಣೆಯಲ್ಲಿ ಗೋರಿ ಒಟ್ಟುಗೂಡಿಸಿ ’ಮೆರ‍್ಕೋಲಿ’ನಲ್ಲಿ ಕಾಲ್ಗಟ್ಟಲಾಗುತ್ತದೆ. ಅಂದರೆ ಬತ್ತದ ರಾಶಿಯ ಸುತ್ತ ಕೋಲಿನಿಂದ ಗೆರೆ ಎಳೆಯುವ ನಿಯಮ.

ಈ ರೀತಿಯಾಗಿ ರಾಶಿ ಮಾಡಿದ ಬತ್ತದ ಕಾಳಿನ ನಡುವೆ ಗಣಪತಿಯನ್ನು ಇರಿಸಿದರೆ, ಮತ್ತೆ ಕೆಲವರು ತಮ್ಮ ಮನೆ ದೇವರನ್ನು ನೆನೆಯಲು ಕಳಶವನ್ನು ಇರಿಸುತ್ತಾರೆ. ಹಾಗೆಯೇ ಶಿವಮೊಗ್ಗದ ಕೆಲವು ಬಾಗಗಳಲ್ಲಿ ’ಮುತ್ತುಗದ ಹೂವ’ನ್ನು ಬತ್ತದ ರಾಶಿಯ ನಡುವೆ ಇಡಲಾಗುತ್ತದೆ, ಇದರ ಜೊತೆಗೆ ಕಟಾವಿನ ಹೊತ್ತಲ್ಲಿ ತೆಗೆದಿರಿಸಿದ ಮೀಸಲುತೆನೆ, ಒಕ್ಕಲಾಟಕ್ಕೆ ಬಳಸುವ ಕೊಂಗ, ಮುಟ್ಟಲಿ, ಗೋರುಮಣೆ, ಮೆರ‍್ಕೋಲು ಸೇರಿದಂತೆ ಹೊಲಗೆಯ್ಮೆಯಲ್ಲಿ ಬಳಸಿದ ಎಲ್ಲಾ ವಸ್ತುಗಳನ್ನು ಬತ್ತದ ರಾಶಿಯ ಮೇಲಿಟ್ಟು ಪೂಜಿಸಲಾಗುತ್ತದೆ. ಬಳಿಕ ಆ ಮನೆಗೆ ಒಂದು ವರುಶಕ್ಕೆ ಬೇಕಾಗುವಶ್ಟು ಬತ್ತದ ಕಾಳನ್ನು ತೆಗೆದು ’ಪಣತ’ದಲ್ಲಿ ಕೂಡಿಡಲಾಗುತ್ತದೆ. ಮತ್ತೆ ಉಳಿದದ್ದನ್ನು ಮೂಟೆಗಳಲ್ಲಿ ಕಟ್ಟಿಡಲಾಗುತ್ತದೆ. ಆ ಮೂಲಕ ಒಕ್ಕಲಾಟಕ್ಕೆ ತೆರೆಬೀಳುತ್ತದೆ.

ಆದರೆ ಒಕ್ಕಲಾಟ ಮುಗಿದ ಬಳಿಕ ಒಂದಶ್ಟು ಬತ್ತವನ್ನು ದೇವರ ಗುಡಿಗೆ ನೀಡಲಾಗುತ್ತದೆ. ಅಲ್ಲಿ ಅದಕ್ಕೆ ಬೇಕಾದ ಪೂಜೆಯ ವಿದಾನಗಳೆಲ್ಲಾ ನಡೆದ ಬಳಿಕ ಮನೆಗೆ ತಂದು ಅದರಲ್ಲಿ ಅನ್ನ ಮಾಡಲಾಗುತ್ತದೆ. ಇದನ್ನು ’ಹೊಸಕ್ಕಿ ಅನ್ನ’ ಎನ್ನುವರು. ಆ ದಿನ ಮನೆಯಲ್ಲಿ ಬಾಡೂಟ ಮಾಡಿ ತಮ್ಮ ಒಡನಾಡಿಗಳನ್ನು ಮನೆಗೆ ಊಟಕ್ಕೆ ಕರೆಸಿಕೊಳ್ಳುತ್ತಾರೆ. ಆ ದಿನ ಮಾಡುವ ಹೊಸಕ್ಕಿಯ ಅನ್ನವನ್ನು ಹಿತಾರುಗಳಿಗೆ ಎಡೆಯಿಟ್ಟು ಮೊದಲು ಮನೆಯ ಹಿರಿಯರು ಅನ್ನವನ್ನು ಸೇವಿಸಿದ ಬಳಿಕ ಮನೆಯ ಇತರರು ಸೇವಿಸುತ್ತಾರೆ. ಇಲ್ಲಿಂದ ಆ ವರುಶದ ಅಕ್ಕಿ ಬಳಕೆಗೆ ಬರುತ್ತದೆ.

(ಚಿತ್ರ ಸೆಲೆ: sundayobserver, michaelfoleyphotography, )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: