“ಅರೇಬಿಕ್ ನಾಡಿನ ಅಪರೂಪದ ನುಡಿ – ಸೊಕೊಟ್ರಿ”

– ಅನ್ನದಾನೇಶ ಶಿ. ಸಂಕದಾಳ.

arabia-desert

ಪಡುವಣ ಏಶ್ಯಾದಲ್ಲಿ (West Asia) ತಮ್ಮ ಬೇರನ್ನು ಹೊಂದಿರುವ ನುಡಿಗಳ ಗುಂಪನ್ನು ‘ಸೆಮೆಟಿಕ್ ನುಡಿಕುಟುಂಬ‘ ಎಂದು ಕರೆಯಲಾಗುತ್ತದೆ (ಪಡುವಣ ಏಶ್ಯಾವು ಈಗೀಗ ‘ನಡು-ಮೂಡಣ ಏಶ್ಯಾ [middle east]’ ಎಂದು ಕರೆಸಿಕೊಳ್ಳುತ್ತಿದೆ). ಆ ನುಡಿಕುಟುಂಬದ ನುಡಿಗಳು ಹಲವಾರಿದ್ದು, ಬಳಕೆಯಲ್ಲಿರುವ ಆ ನುಡಿಕುಟುಂಬದ ನುಡಿಯನ್ನಾಡುವವರು ಪಡುವಣ ಏಶ್ಯಾ, ಬಡಗಣ ಆಪ್ರಿಕಾ, ಸೊಮಾಲಿಯಾ, ಬಡಗಣ ಅಮೇರಿಕಾ ಮತ್ತು ಯುರೋಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ಅರೇಬಿಕ್, ಅಮ್ಹಾರಿಕ್, ಹೀಬ್ರು, ಟಿಗ್ರೀನ್ಯ ಮುಂತಾದ ನುಡಿಗಳು ಇಂದು ಹೆಚ್ಚಾಗಿ ಬಳಕೆಯಲ್ಲಿರುವ ಸೆಮೆಟಿಕ್ ನುಡಿಗಳು. ಇವೆಲ್ಲವುಗಳ ನಡುವೆ ಐವತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿ ಮಾತನಾಡುವ ಸೆಮೆಟಿಕ್ ನುಡಿಕುಟುಂಬಕ್ಕೆ ಸೇರಿದ ನುಡಿಯೊಂದು ಯೆಮೆನ್ ನಾಡಿನ ‘ಸೊಕೊಟ್ರ’ ಕುರ‍್ವೆಯಲ್ಲಿದ್ದು (island) ‘ಸೊಕೊಟ್ರಿ‘ ಎಂದು ಆ ನುಡಿಯನ್ನು ಕರೆಯಲಾಗುತ್ತದೆ.

ಸೊಕೊಟ್ರಿ ನುಡಿಯ ಬೇರುಗಳು ಸಾವಿರಾರು ವರ‍್ಶಗಳ ಹಿಂದೆ ಇದ್ದಂತ (ಈಗ ಬಳಕೆಯಲ್ಲಿಲ್ಲದ) ಹಳೆಯ ಸೆಮೆಟಿಕ್ ನುಡಿಗಳಿಗೆ ಹತ್ತಿರವಿದೆ ಎಂದು ಹೇಳಲಾಗುತ್ತದೆ. ಸೊಕೊಟ್ರಿಯ ಸೊಲ್ಲರಿಮೆಯ ಕಟ್ಟಲೆಗಳು ಅರೇಬಿಕ್, ಹೀಬ್ರು ಮುಂತಾದ ಸೆಮೆಟಿಕ್ ನುಡಿಗಳಲ್ಲೂ ಇಲ್ಲ ಎಂದು ಬಲ್ಲವರು ಹೇಳುತ್ತಾರೆ. ಆದರಿಂದ ಸೊಕೊಟ್ರಿ ನುಡಿಯ ಬಗ್ಗೆ ಆಳಕ್ಕಿಳಿದು ತಿಳಿಯುವ ಪ್ರಯತ್ನಗಳು, ಸೆಮೆಟಿಕ್ ನುಡಿಗಳ ಹಿನ್ನಡವಳಿ ಮತ್ತು ಅವುಗಳ ಬೆಳವಣಿಗೆಗಳ ಬಗ್ಗೆ ಬೆಳಕು ಬೀರುತ್ತದೆ ಎಂಬುದು ಬಲ್ಲವರ ಅನಿಸಿಕೆಯಾಗಿದೆ. ಅಶ್ಟೇ ಅಲ್ಲದೆ, ಸೊಕೊಟ್ರಿ ಬಗ್ಗೆ ಹೆಚ್ಚು ಹೆಚ್ಚು ತಿಳಿಯುವುದರ ಮೂಲಕ ‘ಹಳೇ ಅರೇಬಿಯಾ ಕಾಲ’ದ ಬಗ್ಗೆಯೂ ಕೂಡ ಅರಿಯಬಹುದಾಗಿದೆ ಎಂದೂ ಕೂಡ ಅವರು ಹೇಳುವರು. ಏಡನ್ ಕೊಲ್ಲಿ ಮತ್ತು ಸೊಮಾಲಿಯಾ ನಡುವಿನಲ್ಲಿರುವ ಸೊಕೊಟ್ರ ಕುರ‍್ವೆ, ಹಲವಾರು ಶತಮಾನಗಳ ಕಾಲ ವ್ಯಾಪಾರ-ವಹಿವಾಟುಗಳ ನೆಲೆಯಾಗಿತ್ತು. ವ್ಯಾಪಾರಿಗಳು, ನಾವಿಕರು ಸೊಕೊಟ್ರ ಕುರ‍್ವೆಯೊಳಗಡೆ ಹಾಯುತ್ತಿದ್ದರೂ, ಅವರ ನುಡಿಗಳು ಕುರ‍್ವೆಯಲ್ಲಿನ ನೆಲೆಸಿಗರ (natives) ನುಡಿಯಾದ ಸೊಕೊಟ್ರಿ ಮೇಲೆ ಯಾವುದೇ ಪ್ರಬಾವ ಬೀರಿರಲಿಲ್ಲ ಎಂಬುದು ಒಂದಾದರೆ, ಸೊಕೊಟ್ರ ಕುರ‍್ವೆಯ ನುಡಿಯ ಬಗ್ಗೆ ಅಶ್ಟಾಗಿ ಎಲ್ಲೂ ಹೇಳಿಲ್ಲದೇ ಇರೋದು ಕೂಡ ಅಚ್ಚರಿಯ ಅಂಶವಾಗಿದೆ.

ಸೊಕೊಟ್ರಿ ನುಡಿಯ ಬಗ್ಗೆ 19ನೆ ಶತಮಾನದಲ್ಲಿ ಪಡುವಣ ನುಡಿಯರಿಗರಿಗೆ ತಿಳಿದು ಬಂತು. ತೆಂಕಣ ಅರೇಬಿಯಾದಲ್ಲೆಲ್ಲ ಮಾತಾಡುತ್ತಿದ್ದ, ಈಗಿನ ತೆಂಕಣ-ಯೆಮೆನ್ ಮತ್ತು ತೆಂಕಣ-ಓಮನ್ ಪ್ರದೇಶದಲ್ಲಿ ಮಾತ್ರ ಕಾಣಬರುತ್ತಿದ್ದ ನುಡಿಗಳ ಗುಂಪೊಂದಿದ್ದು, ಅದನ್ನು ‘ಹೊಸ-ತೆಂಕಣ-ಅರೇಬಿಕ್ ನುಡಿಗಳ ಗುಂಪು’ (Modern South Arabian Languages) ಎಂದು ಕರೆಯಲಾಗುತ್ತದೆ. ಬತಾರಿ,ಜಿಬ್ಬಾಲಿ,ಹಾರ‍್ಸುಸಿ, ಹೊಬ್ಯೋತ್, ಮಾಹ್ರಿ, ಸೊಕೊಟ್ರಿ ಮುಂತಾದ ನುಡಿಗಳು ಈ ಗುಂಪಿಗೆ ಸೇರಿವೆ. ಈ ಗುಂಪಿಗೆ ಸೇರಿದ ಬಹುತೇಕ ನುಡಿಗಳು ಈಗ ಬಳಕೆಯಲ್ಲಿಲ್ಲ. ಹಾಗೇ, ಈ ಗುಂಪಿನ ನುಡಿಗಳಿಗೆ ಲಿಪಿಗಳಿಲ್ಲದಿರುವುದರಿಂದ, ಬಳಕೆಯಲ್ಲಿರುವ ನುಡಿಗಳನ್ನು ಅರೇಬಿಕ್ ಅತವಾ ಲ್ಯಾಟಿನ್ ಲಿಪಿಗಳನ್ನು ಬಳಸಿ ಬರೆಯಲಾಗುತ್ತದೆ. ಅರೇಬಿಕ್ ಲಿಪಿಗಳನ್ನು ಬಳಸಿ ಈ ನುಡಿಗಳನ್ನು ಬರೆಯುವುದು ಹೆಚ್ಚು ತೊಡಕಿನದಾಗಿದ್ದು, ಲ್ಯಾಟಿನ್ ಲಿಪಿಗಳನ್ನು ಬಳಸಿ ಬರೆಯುವುದು ಸುಳುವಾಗಿದೆ ಎಂದು ಹೇಳಲಾಗುತ್ತದೆ. ಆದರೆ ರಶ್ಯಾದ ನುಡಿಯರಿಗರು ಅರೇಬಿಕ್ ಲಿಪಿಯ ನೆಲೆಯ ಮೇಲೆ ಸೊಕೊಟ್ರಿ ನುಡಿಗೆ ಅದರದೇ ಆದ ಲಿಪಿಯನ್ನು ಹುಟ್ಟು ಹಾಕಿದ್ದಾರೆ!yemen map

ಹೊಸ ಲಿಪಿಯನ್ನು ಬಳಸಿ, ಸೊಕೊಟ್ರಿ ನುಡಿಯಲ್ಲಿ ಬರವಣಿಗೆ ಸಾದ್ಯವಾಗಿಸುವಂತ ತ್ರಾಸಿನ ಕೆಲಸವನ್ನು ಮುಗಿಸಿರುವ ರಶ್ಯಾದ ನುಡಿಯರಿಗರಿಗೆ ಸಹಜವಾಗಿ ಕುಶಿಯಾಗಿದೆ. ಸೊಕೊಟ್ರಿ ಮಂದಿಯೇ ಈ ಹೊಸ ಲಿಪಿಗಳನ್ನು ಬಳಸಿ – ತಮ್ಮ ನುಡಿಯನ್ನು ಯಾವುದೇ ಕಶ್ಟವಿಲ್ಲದೇ ಓದುವಂತಾಗಿದ್ದು, ತಮ್ಮ ನುಡಿಯ ಬಗ್ಗೆ ನಡೆಯುವ ಅರಕೆಗಳಲ್ಲಿ(research) ಪಾಲ್ಗೊಳ್ಳುವಂತಾಗಿದ್ದು ಮತ್ತು ನುಡಿಯರಿಗರ ಪ್ರಯತ್ನಗಳಿಗೆ ಕೈ ಜೋಡಿಸುವಂತಾಗಿರುವುದು ರಶ್ಯಾ ನುಡಿಯರಿಗರ ಸಂತಸವನ್ನು ಇಮ್ಮಡಿಸಿದೆ. ಸೊಕೊಟ್ರಿ ನುಡಿಯಲ್ಲಿ ಜನಪದ ಕತೆ-ಹಾಡುಗಳು ಹೇರಳವಾಗಿದ್ದು, ಅವುಗಳ ಶೈಲಿ ದ್ರಾವಿಡ ನುಡಿಗಳಲ್ಲಿನ ಜನಪದ ಶೈಲಿಗೆ ಹತ್ತಿರವಾಗಿದೆ ಎಂದು ನುಡಿಯರಿಗರು ಹೇಳುವರು. ತುಂಬಾ ಹಿಂದಿನ, ಅಂದರೆ ಶಿಲಾಯುಗದ ದಿನಗಳ ಆಪ್ರಿಕ-ಏಶ್ಯಾ ನಡುವಿನ ನಂಟು ಇದಕ್ಕೆ ಕಾರಣವಾಗಿದೆ.

ರಶ್ಯಾದ ನುಡಿಯರಿಗರು ಸೊಕೊಟ್ರಿ ನುಡಿಯ ಬಗ್ಗೆ ಹೆಚ್ಚು ಅರಕೆ ನಡೆಸಲು ಸಾದ್ಯವಾದ ಬಗ್ಗೆ ಹಿನ್ನೆಲೆಯೂ ಇದೆ. ತೆಂಕಣ ಯೆಮೆನ್ ನಾಡು ರಶ್ಯಾ ಬೆಂಬಲಿಸುತ್ತಿದ್ದ ಕಮ್ಯುನಿಸಂ ಆಳ್ವಿಕೆಯನ್ನು 1970 ರಲ್ಲಿ ಒಪ್ಪಿಕೊಂಡು ರಶ್ಯಾಗೆ ಹತ್ತಿರವಾಯಿತು. ಅಲ್ಲಿ ಎಲ್ಲೆಡೆ ಹಬ್ಬಿದ್ದ ಇಸ್ಲಾಮಿನ ಪ್ರಬಾವವನ್ನು ಬಹಳವಾಗಿ ತಗ್ಗಿಸುವ ಪ್ರಯತ್ನವನ್ನೂ ಕೂಡ ಯೆಮೆನ್ ನ ಆಡಳಿತ ಆ ಸಮಯದಲ್ಲಿ ಮಾಡಿದೆ. ಸೊಕೊಟ್ರ ಕುರ‍್ವೆಯಲ್ಲಿ ಸೋವಿಯತ್ ಒಕ್ಕೂಟ ತನ್ನ ಮಿಲಿಟರಿ ಪಡೆಯನ್ನು ಹೊಂದಲು ಯೆಮೆನ್ ಅನುವು ಮಾಡಿಕೊಟ್ಟಿದೆ. ಈ ಎಲ್ಲ ಬೆಳವಣಿಗೆಗಳು ರಶ್ಯನ್ನರಿಗೆ ಸೊಕೊಟ್ರ ನುಡಿಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲು ದಾರಿ ಮಾಡಿಕೊಟ್ಟು, ಇಂದು ಸೊಕೊಟ್ರಿ ನುಡಿಗೆ ಲಿಪಿಗಳನ್ನು ಹುಟ್ಟಾಕುವ ಹಾಗೆ ಮಾಡಿದೆ. ಕಮ್ಯುನಿಸ್ಟರ ಆಳ್ವಿಕೆ ಕೊನೆಗೊಂಡು 1990 ರ ಸಮಯದಲ್ಲಿ ಯೆಮೆನ್ ನ ಬಾಗಗಳು ಒಂದಾದ ಮೇಲೆ ಮತ್ತೆ ಇಸ್ಲಾಮಿಕರಣಕ್ಕೆ ಯೆಮೆನ್ ಒಳಗಾಯಿತು. ಹಲವಾರು ಶತಮಾನಗಳ ಕಾಲ ಅರೇಬಿಕ್ ನುಡಿಯ ಪ್ರಬಾವದಿಂದ, ಹಲವಾರು ಹೊಸ-ತೆಂಕಣ-ಅರೇಬಿಕ್ ನುಡಿಗಳು ತಮ್ಮ ಇರುವನ್ನೇ ಕಳೆದುಕೊಂಡಿವೆ. ಆದರೆ, ಸೊಕೊಟ್ರಿ ನುಡಿಯ ಹಿನ್ನಡವಳಿ, ಹೊಸ ಲಿಪಿ ಮತ್ತು ಆ ನುಡಿಯಾಡುವವರ ಪರಂಪರೆ ಬಗ್ಗೆ ರಶ್ಯನ್ ನುಡಿಯರಿಗರು ಮಾಡಿರುವ ಕೆಲಸ, ತಮ್ಮ ಬೇರ‍್ಮೆಯನ್ನು ಉಳಿಸಿಕೊಳ್ಳಲು ಸೊಕೊಟ್ರಿಯನ್ನರಿಗೆ ನೆರವಾಗಬಹುದು!

(ಚಿತ್ರ ಸೆಲೆ : thegoldenscope.comsocotraisland.com )

(ಮಾಹಿತಿ ಸೆಲೆ : wiki-NearEast, wiki-SemeticLanguages, wiki-Socotraen-maktoob.news.yahoo.comal-bab.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *