ಟೊಮೆಟೊ ಇದೀಗ ಟೊಮ್-ಆಟೋ

– ಜಯತೀರ‍್ತ ನಾಡಗವ್ಡ.

2 (1)

ತಾನೋಡಗಳ (automobile) ಕಯ್ಗಾರಿಕೆಯಲ್ಲಿ ದಿನಕ್ಕೊಂದು ಹೊಸ ಅರಕೆಗಳು ನಡೆಯುತ್ತಲೇ ಇರುತ್ತವೆ. ಬಂಡಿಗಳ ಕೆಡುಗಾಳಿ ಕಡಿತಗೊಳಿಸುವತ್ತ ಕೆಲವು ಕೂಟಗಳು ತೊಡಗಿದ್ದರೆ ಇನ್ನೂ ಕೆಲವು ಬಂಡಿಗಳ ತೂಕ ಹಗುರಾಗಿಸಿ ಹೆಚ್ಚಿನ ಅಳವುತನ ಪಡೆಯುವತ್ತ ಚಿತ್ತ ನೆಟ್ಟಿವೆ. ಅಮೇರಿಕಾ, ಜಪಾನ್, ಜರ‍್ಮನಿ, ಆಸ್ಟ್ರಿಯಾ, ಬಾರತ, ಚೀನಾ ಹೀಗೆ ಜಗತ್ತಿನ ಹಲವೆಡೆಯಲ್ಲಿರುವ ಬಂಡಿಕೂಟಗಳ ಅರಕೆಮನೆಗಳು ಇಂತ ಕೆಲಸದಲ್ಲಿ ಮುಳುಗಿವೆ. ಪೋರ‍್ಡ್ ಕೂಟ ಇಂತದರಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದು ಎನ್ನಬಹುದು. ತಾನೋಡಗಳ ಕಯ್ಗಾರಿಕೆಯಲ್ಲಿ ಹಲವು ಹೊಸತುಗಳನ್ನು ಜಗತ್ತಿನ ಮುಂದಿಡುತ್ತಲೇ ಬಂದಿರುವ ಪೋರ‍್ಡ್ ಈಗ ಮತ್ತೊಂದು ಹೊಸ ಅರಕೆಗೆ ಕಯ್ ಹಾಕಿದೆ.

ಪಿಟ್ಸ್ಬರ‍್ಗ್ (Pitssburg) ಮೂಲದ ಹೆಂಜ್(Heinz) ಎಂಬುದು ಜಗತ್ತಿನಲ್ಲೇ ಹೆಸರುವಾಸಿ ತಕ್ಕಾಳಿ ಗೊಜ್ಜು (Tomato Ketchup) ತಯಾರಿಸುವ ಕೂಟ. ಹೆಂಜ್ ಕೂಟ ಗೊಜ್ಜು ತಯಾರಿಸಿ ಅಳಿದುಳಿದ ತಕಾಳಿಯನ್ನು ಕಾರು ಅಣಿಗೊಳಿಸಲು ಬಳಕೆ ಮಾಡುವತ್ತ ಪೋರ‍್ಡ್ ಕೂಟ ಅರಕೆ ಕಯ್ಗೊಂಡಿದೆ. ಪೋರ‍್ಡ್  ಹಾಗೂ ಹೆಂಜ್ ಕೂಟಗಳು ಒಟ್ಟಾಗಿ, ಒಣಗಿದ ತಕ್ಕಾಳಿಯ ನಾರನ್ನು ಇಲ್ಲವೇ ತೊಗಲನ್ನು ಕಾರುಬಂಡಿಗಳಲ್ಲಿ ಬಳಸಬಹುದು ಎಂದಿವೆ. ಬಂಡಿಯೊಳಗಿರುವ ತೋರುಮಣೆಯ ಬಾಗ ಇಲ್ಲವೇ ಕಾರಿನಲ್ಲಿ ನಾಣ್ಯ ಕೂಡಿಡುವ ಸೇರುವೆಗಳಂತ (storage) ಪ್ಲ್ಯಾಸ್ಟಿಕ್ ಬಿಡಿಬಾಗಗಳನ್ನು ತಯಾರಿಸಲು ತಕ್ಕಾಳಿ ನಾರು ಬಳಕೆ ಮಾಡಬಹುದೆಂದು ಕಂಡುಬಂದಿದೆ.

ತಿಂಡಿ-ತಿನಿಸು ಕಯ್ಗಾರಿಕೆಗಳಲ್ಲಿ ಅಳಿದುಳಿದ ತಕ್ಕಾಳಿಯನ್ನು ತಾನೋಡಗಳಲ್ಲಿ ಹಲಬಗೆಯಲ್ಲಿ ಬಳಸುವತ್ತ ನಮ್ಮ ಅರಕೆಗಳು ನಡೆಯುತ್ತಿವೆ ಎಂದು ಪೋರ‍್ಡ್ ನ ಪ್ಲ್ಯಾಸ್ಟಿಕ್ ವಿಬಾಗದ ಪ್ರಮುಕ ಅರಕೆಗಾರ‍್ತಿ ಎಲ್ಲೆನ್ ಲೀ (Ellen Lee) ತಿಳಿಸಿದ್ದಾರೆ. ಇತ್ತಿಚೀನ ದಿನಗಳಲ್ಲಿ ಹಲಬೆಸುಗೆಯ ವಸ್ತುಗಳಿಗೆ (Composite Materials) ಎಲ್ಲಿಲ್ಲದ ಬೇಡಿಕೆ. ಹಲವು ಬಗೆಯ ವಸ್ತುಗಳನ್ನು ಒಟ್ಟಾಗಿ ಬೆಸೆದು ಮಾಡಲ್ಪಟ್ಟ ಇಂತ ವಸ್ತುಗಳು ಹೆಚ್ಚಿನ ವಿಶೇಶತೆ ಹೊಂದಿರುವುದಲ್ಲದೇ ಹಗುರವಾಗಿರುವುದು ಇವುಗಳ ಬೇಡಿಕೆ ಹೆಚ್ಚುವಂತೆ ಮಾಡಿದೆ. ಹಗುರ, ಗಟ್ಟಿಮುಟ್ಟಾದ ಹಲಬೆಸುಗೆಯ ವಸ್ತುಗಳು ನಮ್ಮ ಕಾರು ತಯಾರಿಕೆ ಅನುವಾಗಿದ್ದು, ವಾತಾವರಣಕ್ಕೆ ಯಾವುದೇ ತೊಂದರೆ ಮಾಡದಿದ್ದರೆ ಇಂತ ವಸ್ತುಗಳನ್ನೇ ಬಳಸುವುದು ನಮ್ಮ ಗುರಿ ಎಂದು ಲೀ ಹೇಳಿದ್ದಾರೆ.

ford-heinz-sustainability (1)ಇಂದು ಹೆಚ್ಚಾಗಿ ಬಳಸಲ್ಪಡುವ ಬಂಡಿಯ ಬಾಗಗಳು ಪ್ಲ್ಯಾಸ್ಟಿಕ್ ಗಳಿಂದ ಮಾಡಲ್ಪಟ್ಟಿವೆ. ಇವುಗಳಿಂದ ವಾತಾವರಣಕ್ಕೆ ಹೆಚ್ಚಿನ ಕೆಡುಕು. ಇದನ್ನರಿತ ಪೋರ‍್ಡ್ ಕೂಟ ಕಳೆದೆರಡು ವರುಶಗಳಿಂದ ಅಮೇರಿಕಾದ ಇತರೆ ಕಯ್ಗಾರಿಕೆಗಳ ಪ್ರಮುಕ ಕೂಟಗಳಾದ ಹೆಂಜ್, ಕೋಕಾ-ಕೋಲಾ, ನಾಯ್ಕಿ, ಪ್ರಾಕ್ಟರ್ & ಗ್ಯಾಂಬಲ್ ಜೊತೆಗೂಡಿ ಸಹಜವಾಗಿ ಸಿಗಬಲ್ಲ ಮತ್ತು ವಾತಾವರಣಕ್ಕೆ ಕೆಡುಕುಂಟು ಮಾಡದ ವಸ್ತುಗಳ ಬಳಕೆಗೆ ಸಂಬಂದಿಸಿದಂತೆ ಮಾತುಕತೆ ನಡೆಸುತ್ತಿದೆ.

ಈ ಅರಕೆಯಲ್ಲಿ ಹೆಂಜ್ ಕೂಟದವರು ಪೋರ‍್ಡ್ ನಶ್ಟೇ ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ. ಗೊಜ್ಜು ತಯಾರಿಸಲು ವರುಶಕ್ಕೆ 2 ಮಿಲಿಯನ್ ಅಂದರೆ 20 ಲಕ್ಶ ಟನ್ ಗಳಶ್ಟು ತಕ್ಕಾಳಿ ಬಳಸುವ ಹೆಂಜ್ ಕೂಟದವರು ಈ ತಕ್ಕಾಳಿಯ ಸಿಪ್ಪೆ, ಬೀಜಗಳನ್ನು ಹಲಬಗೆಯಲ್ಲಿ ಮರುಬಳಕೆ (Recycle, Reuse) ಮಾಡುವ ಮತ್ತು ಇವುಗಳನ್ನು ಹಲಬೆಸುಗೆಯ ವಸ್ತುಗಳಲ್ಲಿ ಬಳಸುವ ಹೊಸ ಚಳಕಗಳತ್ತ ಕೆಲಸ ಮಾಡುತ್ತಿದ್ದಾರೆ. ಈ ಅರಕೆ ಇನ್ನೂ ಎಳಸಿನಲ್ಲಿದ್ದು ಹಲವು ಕೇಳ್ವಿಗಳನ್ನು ಹುಟ್ಟುಹಾಕಿದ್ದರೂ, ಹೊಸ ಚಳಕದ ಬಗ್ಗೆ ಹೆಂಜ್ ಕೂಟದ ಮೇಲಾಳು ವಿದು ನಾಗ್ಪಾಲ್ (Vidhu Nagpal) ಸಂತಸದಿಂದಿದ್ದು, ಪೋರ‍್ಡ್ ಕೂಟದ ಜೊತೆ ವಾತಾವರಣದ ಕೆಡುಕನ್ನು ಕಡಿಮೆಗೊಳಿಸುವತ್ತ ಕೆಲಸಮಾಡುವುದು ಇವರ ಹುರುಪು ಇಮ್ಮಡಿಗೊಳಿಸಿದಂತಿದೆ.

ಮರುಬಳಸಬಲ್ಲ ವಸ್ತುಗಳನ್ನು ಹೆಚ್ಚಾಗಿ ಕಾರು ತಯಾರಿಕೆಯಲ್ಲಿ ಉಪಯೋಗಿಸಿ ವಾತಾವರಣ ಹಸನಾಗಿಡಲು ಪೋರ‍್ಡ್ ಕೂಟದವರು ತಮ್ಮ ಬದ್ದತೆ ಮೆರೆಯುತ್ತಿದ್ದಾರೆ. ಅಳಿದು ಹೋಗಬಲ್ಲ ವಸ್ತುಗಳ ಬಳಕೆ ಕಡಿಮೆ ಮಾಡಿ ಹೊಸದಾದ ಹಲಬೆಸುಗೆಯ ವಸ್ತುಗಳ ಬಳಕೆಯಲ್ಲಿ ಪೋರ‍್ಡ್ ಸಂಸ್ತೆ ದಿಟ್ಟ ಹೆಜ್ಜೆ ಇಟ್ಟಿದೆ. ಕಳೆದ ವರುಶ ಬತ್ತದ ಸಿಪ್ಪೆಯಿಂದ (Rice hull) ಕಾರಿನ ಇತರೆ ಬಿಡಿಬಾಗದ ತಯಾರಿಸಲಾಗಿತ್ತಲ್ಲದೇ ಇತ್ತಿಚೀಗೆ ತೆಂಗಿನಕಾಯಿಯ ನಾರು, ಮರುಬಳಕೆಯಿಂದ ತಯಾರಿಸಿದ ಹತ್ತಿಯನ್ನು ಪೋರ‍್ಡ್ ಕಾರಿನ ಕೂರುಮಣೆಗೆ (seat) ಮತ್ತು ಕಾರಿನ ನೆಲಗಂಬಳಿ (carpet) ತಯಾರಿಸಲು ಬಳಸಲಾಗಿತ್ತು.

ಈ ತೆರನಾದ ಹೊಸ ಚಳಕಗಳನ್ನು ತಾನೋಡ ಕಯ್ಗಾರಿಕೆ ಹೆಚ್ಚು ರೂಡಿಸಿಕೊಂಡರೆ ವಾತಾವರಣ ಚೊಕ್ಕವಾಗಿಡುವುದರಲ್ಲಿ ಎರಡು ಮಾತಿಲ್ಲ. ಇದರಿಂದ ಎಲ್ಲರಿಗೂ ಒಳಿತು.

(ಮಾಹಿತಿ ಮತ್ತು ತಿಟ್ಟ ಸೆಲೆ: media.ford.com, www.postgazette.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.