ನಮ್ಮ ಕನ್ನಡದರಸರು ತಲಕಾಡಿನ ಗಂಗರು

ಕಿರಣ್ ಮಲೆನಾಡು.
gangaಬನ್ನಿ, ನಾವು ಈಗ ತಲಕಾಡಿನ ಗಂಗರು ಅಂದರೆ ಪಡುವಣ ಗಂಗರ ಬಗ್ಗೆ ತಿಳಿಯೋಣ. ತಲಕಾಡಿನ ಗಂಗರು ಅಪ್ಪಟ ಕನ್ನಡಿಗರಾಗಿದ್ದು ಇವರು ಕದಂಬರ ಹೊತ್ತಿನಲ್ಲೇ ಈಗಿನ ಕೋಲಾರ, ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಹಾಗು ಬಡಗಣ ತಮಿಳುನಾಡು ಮತ್ತು ಅಂದ್ರದ ಹಲಬಾಗಗಳನ್ನು ಒಳಗೊಂಡಂತೆ ತೆಂಕಣ ಕರ‍್ನಾಟಕದಲ್ಲಿ ಆಳ್ವಿಕೆ ನಡೆಸುತ್ತಿದ್ದವರು. ಇವರು ಶಾತವಾಹನರ ಬಳಿಕ ಪಟ್ಟಕ್ಕೆ ಬಂದರು. ಗಂಗರು ಸುಮಾರು ಕ್ರಿ.ಶ. 350 ರಿಂದ ಕ್ರಿ.ಶ. 1000 ದವರೆಗೆ ಆಳಿದ ಕನ್ನಡದ ಅರಸುಮನೆತನ. ಕನ್ನಡದರಸರುಗಳಲ್ಲೇ ಗಟ್ಟಿಗರಾದ ಬಾದಾಮಿ ಚಾಲುಕ್ಯರು ಮತ್ತು ರಾಶ್ಟ್ರಕೂಟರ ಸಾಮಂತರಾಗಿ ಹಾಗು ಅವರ ಒಡನಾಡಿಯಾಗಿ ಹಲವು ಕಾಲ ಕನ್ನಡ ನಾಡನ್ನು ಆಳಿದರು ಮತ್ತು ಕನ್ನಡ ನಾಡನ್ನು ಬೆಳೆಸಿದರು.

ತಲಕಾಡು ಗಂಗರ ಹುಟ್ಟು:
ಬಡಗಣ ಬಾರತ ಮತ್ತು ತಮಿಳು ಅರಸರ ದಾಳಿಯನ್ನು ತಡೆಗಟ್ಟಲು ಕದಂಬರಂತೆ ಇನ್ನೊಂದು ಕನ್ನಡದ ಅರಸುಮನೆತನ ಅಗತ್ಯವಿತ್ತು, ಇವೆಲ್ಲವೂ ಗಂಗರನ್ನು ಬೆಳೆಯುವಂತೆ ಮಾಡಿದವು. ತಮಿಳು ಪಲ್ಲವರು ಮತ್ತು ತೆಂಕಣ ಬಾರತದ ಕನ್ನಡೇತರ ಅರಸರುಗಳು ಬಡಗಣ ಬಾರತದ ಸಮುದ್ರಗುಪ್ತನ ಸತತ ದಾಳಿಯಿಂದ ಮಂಕಾಗಿದ್ದರು, ಅದೇ ಹೊತ್ತಿನಲ್ಲಿ ಅಪ್ಪಟ ಕನ್ನಡಿಗರಾದ ಕದಂಬರು ಮತ್ತು ಗಂಗರು ಕನ್ನಡದ ಅರಸುಮನೆತನವನ್ನು ಹುಟ್ಟುಹಾಕಿ ಚಿನ್ನದ ಕರುನಾಡನ್ನು ಕಟ್ಟಿದರು. ಗಂಗರು ತೆಂಕಣ ಕರ‍್ನಾಟಕದಿಂದಲೇ ಬಂದವರೆಂದು ಹಾಗು ದೊಡ್ಡಮಟ್ಟದ ಅರಸರಾಗುವ ಮುನ್ನ ಪಾಳೆಗಾರರಾಗಿದ್ದರೆಂದು ಹಿನ್ನಡುವಳಿಯರಿಗರ ಅನಿಸಿಕೆ. ಈ ಪಾಳೆಗಾರರು ತೆಂಕಣ ಕರ‍್ನಾಟಕಕ್ಕೆ ಅಂಟಿಕೊಂಡಿರುವ ತಮಿಳುನಾಡಿನ ಕೊಂಗುನಾಡಿನ ಹಲವು ಹಳ್ಳಿಗಳನ್ನು ಮತ್ತು ಅಂದ್ರದ ಹಳ್ಳಿಗಳನ್ನು ಆಳುತ್ತಿದ್ದರು.

Ganga_file

ಗಂಗರ ಗುರುತು

ಇಲ್ಲಿಯವರೆಗೆ ಸಿಕ್ಕಿರುವ ಕಲ್ಬರಹಗಳಿಂದ ಕನ್ನಡಿಗರು ಆಂದ್ರ ಮತ್ತು ತಮಿಳಿನಾಡಿನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು ಎಂದು ಹೇಳಬಹುದು. ಜೈನರಾದ ದಡಿಗ ಮತ್ತು ಮಾದವ(ಕೊಂಗಣಿವರ‍್ಮನ್ ಮಾದವ) ಇವರುಗಳು ಗಂಗ ಅರಸುಮನೆತನವನ್ನು ಹುಟ್ಟುಹಾಕಿದರು. ದಡಿಗ ಮತ್ತು ಮಾದವರು ಗಂಗರ ಮನೆತನವನ್ನು ಹುಟ್ಟುಹಾಕಿದರು ಎಂಬುವುದನ್ನು ಬಿಟ್ಟು ಬೇರೆ ಮಾಹಿತಿಗಳು ಹೆಚ್ಚಾಗಿ ಸಿಕ್ಕಿಲ್ಲ. ಕರ‍್ನಾಟಕದ ಹಿನ್ನಡುವಳಿಯರಿಗರಾದ ಅಡಿಗ ಮತ್ತು ನರಸಿಂಹಾಚಾರ್ ಅವರ ಅನಿಸಿಕೆಯಂತೆ ಗಂಗರು ಕರ‍್ನಾಟಕದವರೇ ಆಗಿದ್ದರು, ಏಕೆಂದರೆ ತೆಂಕಣ ಕರ‍್ನಾಟಕದಲ್ಲಿ ಸಿಕ್ಕ ಗಂಗರ ಎಲ್ಲಾ ಕಲ್ಬರಹಗಳು ಕನ್ನಡದಲ್ಲಿದೆ. ಗಂಗರು ಕರ‍್ನಾಟಕದವರೆಂದು ಹೇಳಲು ಇನ್ನೊಂದು ಕುರುಹು ಏನೆಂದರೆ ಇಂದಿಗೂ ಹಳೆಮೈಸೂರಿನ ಹಲವು ರೈತ ಕುಟುಂಬಗಳು ತಮ್ಮನ್ನು ‘ಗಂಗಡಿಕಾರರು‘ ಎಂದು ಕರೆದುಕೊಳ್ಳುತ್ತಾರೆ.

ಗಂಗರ ಅರಸು ಅವಿನೀತನ ಹೊತ್ತಿಗೆ ಸೇರಿದ ‘ಸೆರಗುಂದದ ಕಲ್ಬರಹ’ವು ಗಂಗರ ಬಗೆಗಿನ ಹಲವು ಮಾಹಿತಿಗಳನ್ನು ನೀಡುತ್ತದೆ. ಗಂಗರ ಮೇಲ್ಪಟ್ಟಣ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ) ಬಳಿಕ ಹರಿವರ‍್ಮನ ಹೊತ್ತಿನಲ್ಲಿ( ಕ್ರಿ.ಶ 390- 410) ತಲಕಾಡಿನಿಂದ ಆಳಲಾರಂಬಿಸಿ ತಲಕಾಡು ಮೇಲ್ಪಟ್ಟಣವಾಯಿತು. ಹೀಗೆ ಇವರು ‘ತಲಕಾಡಿನ ಗಂಗರು‘ ಎಂದು ಹೆಸರುವಾಸಿಯಾದರು. ಕನ್ನಡದ ತಲಕಾಡಿನ ಗಂಗರ ವಂಶದವರು ಕ್ರಿ.ಶ 1000 ದ ಬಳಿಕ ಬಡಗಣ ಬಾರತದ ಒರಿಸ್ಸಾ, ಬಂಗಾಳ ಮತ್ತು ಇನ್ನಿತರ ಬಾಗಗಳನ್ನು ಆಳಿದ್ದರಿಂದ ಅವರನ್ನು ‘ಮೂಡಣ ಗಂಗ‘ರೆಂದು (Eastern Ganga Dynasty) ಹಾಗು ತಲಕಾಡು ಗಂಗರನ್ನು ‘ಪಡುವಣ ಗಂಗ‘ರೆಂದು (Western Ganga Dynasty) ಹಿನ್ನಡುವಳಿಯರಿಗರು ಕರೆಯುವರು. ಮೂಡಣ ಗಂಗರು ಆ ಬಾಗದ ನುಡಿಗಳನ್ನು ಬಳಸಿದ್ದರಿಂದ ಅವರು ಕನ್ನಡಿಗರಾಗಿ ಮುಂದುವರೆಯಲಿಲ್ಲ.

ಕನ್ನಡದ ಅರಸರುಗಳಲ್ಲೇ ಗಟ್ಟಿಗರಾದ ಬಾದಾಮಿ ಚಾಲುಕ್ಯರು ಮತ್ತು ರಾಶ್ಟ್ರಕೂಟರ ಸಾಮಂತರಾಗಿ ಹಾಗು ಅವರ ಒಡನಾಡಿಯಾಗಿ ಕನ್ನಡ ನಾಡನ್ನು ಆಳಿದ ಇವರು, ಕಾವೇರಿಯನ್ನು ತೆಂಕಣದ ಗಂಗಾ ಎಂದು ಕರೆಯುತ್ತಿದ್ದರಿಂದ ‘ಗಂಗ’ ಹೆಸರು ಬಂದಿರಬಹುದೆಂದು ಹಾಗು ಅವರು ಕೊಂಗಣಿವರ‍್ಮನ ಹೆಸರೇ ಮುಂದೆ ‘ಗಂಗ’ ಆಯಿತೆಂದೂ ಹಿನ್ನಡುವಳಿಯರಿಗರ ಅನಿಸಿಕೆ. ತಮಿಳರ ಶಂಗಂ ಸಾಹಿತ್ಯದಲ್ಲಿ ಕಾವೇರಿ ನದಿಯ ಎಲ್ಲೆಯನ್ನು ಗುರುತಿಸಲು ಗಂಗ ಅರಸುಮನೆತನದ ಹೆಸರನ್ನು ಅಲ್ಲಲ್ಲಿ ಹೇಳಲಾಗಿದೆ.

ಗಂಗರ ಅರಸರುಗಳು

ತಲಕಾಡು ಈಗ ಎಲ್ಲಿದೆ ?

ತಲಕಾಡು ಮೈಸೂರು ಜಿಲ್ಲೆಯ ಕಾವೇರಿನದಿಯ ದಡದಮೇಲಿನ ಒಂದು ಪ್ರವಾಸಿತಾಣ, ಇದು ಮೈಸೂರಿನಿಂದ ಸುಮಾರು 45 ಕಿ.ಮೀ ದೂರದಲ್ಲಿದೆ ಹಾಗು ಬೆಂಗಳೂರಿನಿಂದ 133 ಕಿ.ಮಿ ದೂರದಲ್ಲಿದೆ. ಗಂಗರ ಮೇಲ್ಪಟ್ಟಣವಾದ ತಲಕಾಡಿನಲ್ಲಿ ಗಂಗರಿಗೆ ಸೇರಿದ ಹಲವಾರು ದೇಗುಲಗಳನ್ನು ಮತ್ತು ಪಳೆಯುಳಿಕೆಗಳನ್ನು ನೋಡಬಹುದು.

ಗಂಗರ ಆಡಳಿತದ ಹರವು:
ಮೊದಲು ‘ಕುವಲಾಳ’(ಕೋಲಾರ)ದಿಂದ ಆಳುತ್ತಿದ್ದ ದಡಿಗ ಮತ್ತು ಮಾದವರು ಹಾಗು ಇನ್ನಿತರ ಗಂಗರಸರು ಹರಿವರ‍್ಮನ ಹೊತ್ತಿನಲ್ಲಿ ( ಕ್ರಿ.ಶ 390- 410) ಕುವಲಾಳವನ್ನುಬಿಟ್ಟು ತಲಕಾಡಿನಿಂದ ಆಳಲಾರಂಬಿಸಿದರು ಹೀಗೆ ತಲಕಾಡು ಮೇಲ್ಪಟ್ಟಣವಾಯಿತು. ಚನ್ನಪಟ್ಟಣ ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಾನ್ಯಪುರ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ಇವರ ಕಿರುಪಟ್ಟಣಗಳಾಗಿದ್ದವು, ಹಾಗು ಮಾನ್ಯಪುರದಲ್ಲಿ ಇವರ ಅರಮನೆ ಕೂಡ ಇದ್ದಿತ್ತು. ಹೀಗಾಗಿ ಕೋಲಾರ, ಬೆಂಗಳೂರು, ತುಮಕೂರು ಇವರ ಆಡಳಿತದ ಬಾಗವಾಯ್ತು. ಅವಿನೀತನು(ಕ್ರಿ.ಶ 469 – 529) ತನ್ನ ಆಡಳಿತದ ಹರವನ್ನು ಕೊಂಗುನಾಡಿನವರೆಗೆ ಹರಡಿದನು, ಹಾಗು ಸೆಂದ್ರಕ (ಚಿಕ್ಕಮಗಳೂರು ಜಿಲ್ಲೆಯ ಬಾಗಗಳು), ಪುನ್ನಾಟ ಮತ್ತು ಪನ್ನಾಡ(ಚಾಮರಾಜನಗರ ಜಿಲ್ಲೆಯ ಬಾಗಗಳು)ದವರೆಗೂ ವಿಸ್ತರಿಸಿದನು.

ಗಂಗನಾಡಿನ ತಿರುಳುಬಾಗವನ್ನು ‘ಗಂಗವಾಡಿ’ ಎಂದು ಕರೆಯಲಾಗುತ್ತಿತ್ತು. ಗಂಗವಾಡಿ ಬಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿತ್ತು. ’ಪುನ್ನಾಟ’ಕ್ಕೆ ತಲಕಾಡಿನ ಗಂಗರು ತಮ್ಮ ಆಡಳಿತವನ್ನು ವಿಸ್ತರಿಸಿದ ಸಂಗತಿಯನ್ನು ಮಡಕೆರೆ(ಕ್ರಿ.ಶ 466), ಸಾಲಿಗ್ರಾಮ (ಕ್ರಿ.ಶ 600ರ ಸುಮಾರು), ತಿರುಮೊರೆಕೋಳಿ(ಕ್ರಿ.ಶ 700ರ ಸುಮಾರು), ಕುಲಗಾಣ, ದೇಬೂರು ಮತ್ತು ಹೆಬ್ಬೂರಿನ ಕಲ್ಬರಹಗಳು ಹೇಳುತ್ತವೆ. ಹಿಂದೆ ಪುನ್ನಾಟವು ಒಂದು ಚಿಕ್ಕ ನಾಡಗಿತ್ತು ಎಂದು ಅವನೀತನ ಕಲ್ಬರಹಗಳಿಂದ ತಿಳಿದು ಬರುತ್ತದೆ ಹಾಗು ಪುನ್ನಾಟರ ಪಟ್ಟದರಸಿಯನ್ನು ಅವನೀತನು ಮದುವೆಯಾಗುತ್ತಾನೆ ಮತ್ತು ಅವನ ಮಗನೇ ದುರ‍್ವಿನೀತ. ಗಂಗರಸರಲ್ಲೇ ಗಟ್ಟಿಗನಾದ ‘ದುರ‍್ವಿನೀತ’ನು (ಕ್ರಿ.ಶ 529 – 579 ) ತಮಿಳುನಾಡಿನ ತೊಂಡಯ್ಮಂಡಲದ ಕಾಳಗದಲ್ಲಿ ಪಲ್ಲವರನ್ನು ಸೋಲಿಸಿದನು. ನಲ್ಲಾಳ ಮತ್ತು ಕಡಗತ್ತುರು ಕಲ್ಬರಹವು ಇದರ ಬಗ್ಗೆ ವಿವರಿಸುತ್ತದೆ. ಹೀಗಾಗಿ ತಮಿಳುನಾಡಿನ ಹಲವು ಬಾಗವನ್ನು ಕನ್ನಡಿಗರಾದ ಗಂಗರು ಆಳಿದರು.

ದುರ‍್ವಿನೀತನ ಆಡಳಿತದ ಹರವು ತೆಂಕಣದಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ಬಡಗಣದ ಬಳ್ಳಾರಿಯವರೆಗೆ ಹರಡಿತ್ತು. ದುರ‍್ವಿನೀತನು ತನ್ನ ಮಗಳನ್ನೇ ಕನ್ನಡಿಗರ ಕೆಚ್ಚೆದೆಯ ಚಾಲುಕ್ಯರರಸು ಇಮ್ಮಡಿ ಪುಲಿಕೇಶಿಗೆ ಮಾಡುವೆಮಾಡಿಕೊಟ್ಟಿದ್ದ, ಇದು ರಾಜ್ಯವನ್ನಾಳಲು ಇನ್ನೂ ಸಹಾಯ ಮಾಡಿತು. ದುರ‍್ವಿನೀತನು ಕಲೆ ಮತ್ತು ಸಾಹಿತ್ಯಕ್ಕೆ ಬೆಂಬಲ ನೀಡಿದ್ದನು, ಅವನೇ ‘ಶಬ್ದಾವತಾರ‘ ಎಂಬ ಹೊತ್ತಿಗೆಯನ್ನು ಬರೆದಿದ್ದನೆಂದು ‘ಗುಮ್ಮರೆಡ್ಡಿಪುರದ ಕಲ್ಬರಹ’ವು ತಿಳಿಸುತ್ತದೆ. ಗಂಗರರಸ ಇಮ್ಮಡಿ ಶಿವಮಾರನು (ಕ್ರಿ.ಶ) ರಾಶ್ಟ್ರಕೂಟರೊಂದಿಗೆ ಹಗೆ ಸಾದಿಸಿದ್ದನು. ಆದರೆ ಹಲ ವರುಶಗಳ ನಂತರ ರಾಶ್ಟ್ರಕೂಟರ ಒಂದನೇ ಅಮೋಗವರ‍್ಶನು ತನ್ನಮಗಳಾದ ಚಂದ್ರಬ್ಬಲಬ್ಬೆಯನ್ನು ಏರೆಗಂಗ ನೀತಿಮಾರ‍್ಗನ ಮಗ ಒಂದನೇ ಬೂತುಗನಿಗೆ ಮದುವೆಮಾಡಿಕೊಟ್ಟನು. ಅಲ್ಲಿಂದ ಈ ಎರಡು ಕನ್ನಡದ ಅರಸುಮನೆತನಗಳು ಒಡನಾಡಿಗಳಾದವು.

ರಾಶ್ಟ್ರಕೂಟರ ಮುಮ್ಮುಡಿ ಅಮೋಗವರ‍್ಶನು ಗಂಗರ ಇಮ್ಮಡಿ ಬೂತುಗನಿಗೆ(ಕ್ರಿ.ಶ 938 – 961) ಗದ್ದುಗೆಯೇರಲು ಸಹಾಯ ಮಾಡಿದನು. ಬಳಿಕ ಮುಮ್ಮುಡಿ ಅಮೋಗವರ‍್ಶನ ಮಗ ಮುಮ್ಮುಡಿ ಕ್ರಿಶ್ಣನು, ಇಮ್ಮಡಿ ಬೂತುಗನ ಜೊತೆ ಸೇರಿ ತಮಿಳುನಾಡಿನ ತಕ್ಕೊಳಂನಲ್ಲಿ ಚೋಳರನ್ನು ಸೋಲಿಸಿದರು. ಈ ಕಾಳಗದ ಮಾಹಿತಿಯನ್ನು ‘ಅತಕೂರಿನ ಕಲ್ಬರಹದಲ್ಲಿ’ ಕೆತ್ತಿಸಿಸಲಾಗಿದೆ. ಕ್ರಿ.ಶ 963 ರಲ್ಲಿ ಪಟ್ಟಕ್ಕೇರಿದ ಗಂಗರರಸ ಇಮ್ಮಡಿ ಮಾರಸಿಂಹನು ಬಡಗಣ ಬಾರತದ ಗುರ‍್ಜರ-ಪ್ರತಿಹಾರ ಮತ್ತು ಪರಮಾರರನ್ನು ಸೋಲಿಸಲು ರಾಶ್ಟ್ರಕೂಟರಿಗೆ ಸಹಾಯ ಮಾಡಿದನು. ಇಮ್ಮಡಿ ಮಾರಸಿಂಹ ಮತ್ತು ನಾಲ್ವಡಿ ರಾಚಮಲ್ಲರ ಹೊತ್ತಿನಲ್ಲಿ ಹೆಸರಾಂತ ಮಂತ್ರಿಯಾಗಿ, ಪಡೆಯ ಮೇಲುಗನಾಗಿ ಮತ್ತು ಕವಿಯಾಗಿ ಚಾವುಂಡರಾಯನು ಸೇವೆಸಲ್ಲಿಸಿದನು. ಹತ್ತುನೂರರ ಹೊತ್ತಿನಲ್ಲಿ ಗಂಗರ ಆಡಳಿತ ಕೊನೆಗೊಂಡಿತು.

ಗಂಗರ ಆಡಳಿತದ ಬಗೆ:
ಗಂಗರು ತಮ್ಮದೇಯಾದ ರೀತಿಯಲ್ಲಿ ನಾಡಿನ ಏಳಿಗೆಗೆ ಆಡಳಿತವನ್ನು ನೀಡಿದರು. ಕದಂಬರಂತೆ ಗಂಗರು ಕೂಡ ಆಡಳಿತದಲ್ಲಿ ಕನ್ನಡವನ್ನು ಬಳಸಿದರು, ಇವರ ಎಲ್ಲಾ ಕಲ್ಬರಹಗಳು ಕನ್ನಡದಲ್ಲಿವೆ. ಗಂಗರಿಗೆ ನಾಡಿನ ಹರವನ್ನು ಹೆಚ್ಚಿಸಿಕೊಳ್ಳುವುದು ಎಶ್ಟು ಮುಕ್ಯವಾಗಿತ್ತೋ ಹಾಗೆಯೇ ಮಂದಿಗೆ ಒಳ್ಳೆಯ ಆಡಳಿತವನ್ನು ನೀಡುವದು ಅಶ್ಟೇ ಮುಕ್ಯವಾಗಿತ್ತು ಎಂದು ಕಲ್ಬರಹಗಳಿಂದ ತಿಳಿದುಬರುತ್ತದೆ. ಗಂಗರ ಆಡಳಿತದ ನೆಲವನ್ನು ಹಲವು ಬಾಗಗಳಾಗಿ ವಿಂಗಡಿಸಲಾಗಿತ್ತು, ಅವುಗಳೆಂದರೆ ರಾಸ್ಟ್ರ(ಜಿಲ್ಲೆ) ಮತ್ತು ವಿಶಯ(ಸಾವಿರ ಹಳ್ಳಿಗಳು). ಸರಿಸುಮಾರು 800ರ ಹೊತ್ತಿನಲ್ಲಿ ‘ವಿಶಯ’ ಎಂಬ ಸಂಸ್ಕ್ರುತ ಪದದ ಬದಲಾಗಿ ‘ನಾಡು‘ ಎಂದು ಬಳಸಿಕೊಂಡರು. ಎತ್ತುಗೆಗೆ: ಸಿಂದನಾಡು, ಪುನ್ನಾಡು(ಪುನ್ನಾಟ). ನಾಡು ಎಂದರೆ ಸಾವಿರ ಹಳ್ಳಿಗಳನ್ನೊಳಗೊಂಡ ಒಂದು ಬಾಗವಾಗಿತ್ತು. ಇವುಗಳಲ್ಲಿ ದೊಡ್ಡ ನಾಡೆಂದರೆ ‘ಗಂಗವಾಡಿ’. ಗಂಗನಾಡಿನ ತಿರುಳುಬಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು, ಇದು 96000 ಹಳ್ಳಿಗಳ ಒಕ್ಕೂಟ, ಹಾಗು ಗಂಗರ ಹಲವಾರು ಕಲ್ಬರಹಗಳಲ್ಲಿ ಗಂಗವಾಡಿಯನ್ನು ‘ತೊಂಬತ್ತಱುಸಾಸಿರ’ (ತೊಂಬತ್ತಾರು ಸಾವಿರ ಹಳ್ಳಿಗಳು = ತೊಂಬತ್ತಾರು ನಾಡುಗಳು) ಎಂದೇ ಒಕ್ಕಣಿಸಲಾಗಿದೆ.

ಗಂಗವಾಡಿಯ ಮಂದಿಯನ್ನು ‘ಗಂಗಡಿಕಾರ’ರು ಎಂದು ಕರೆಯುತ್ತಿದ್ದರು ಹಾಗು ಈ ಹೆಸರು ಇಂದಿಗೂ ಹಳೆಮೈಸೂರು ಬಾಗದಲ್ಲಿ ‘ಗಂಗಡಿಕಾರ’ ಎಂದಾಗಿ ಉಳಿದಿಕೊಂಡು ಬಂದಿದೆ. ಗಂಗರ ಹಲವಾರು ಕಲ್ಬರಹಗಳಿಂದ ಅವರ ಆಡಳಿತದಲ್ಲಿ ಬಳಸುತ್ತಿದ್ದ ಹೆಸರುಗಳನ್ನು ತಿಳಿಯಬಹುದಾಗಿದೆ. ಅರಿದಾಳುವನ್ನು ಸರ‍್ವಾದಿಕಾರಿ, ಹಣಕಾಸು ನೋಡಿಕೊಳ್ಳುವವರನ್ನು ಶ್ರೀಬಂಡಾರಿ, ಹೊರನಾಡಿನ ಆಳ್ವೆಕವಲಾಳುವನ್ನು (minister) ಸಂದಿವಿಗ್ರಹ, ನಾಡಾಳುವನ್ನು ಮಹಾಪ್ರದಾನ, ಪಡೆಯ ಮೇಲಾಳನ್ನು ದಂಡನಾಯಕ, ಆರಯ್ಗನನ್ನು ಮನೆಪೆರ‍್ಗಡೆ, ಆನೆಪಡೆಯ ಮೇಲಾಳುವನ್ನು ಗಜಸಹಾನಿ, ಕುದುರೆಪಡೆಯ ವೀಳ್ಯದೆಲೆ ನೋಡಿಕೊಳ್ಳುವವರನ್ನು ಅಡೆಪ ಎಂದು, ಅರಸರ ನೆರವಿಗನನ್ನು ರಾಜಸೂತ್ರದಾರಿ, ಗುಟ್ಟಿನ ನೆರವಿಗನನ್ನು ರಹಸ್ಯಾದಿಕ್ರುತ ಹಳೆಯ ದಾಕಲೆಗಳನ್ನು ನೋಡಿಕೊಳ್ಳುವವರನ್ನು ಶಾಸನದೊರೆ, ನೆಲದಳೆವಿಗನನ್ನು ರಜ್ಜುಕ, ಹಣಕಾಸಿನ ಲೆಕ್ಕಾಚಾರವನ್ನು ನೋಡಿಕೊಳ್ಳುವವನನ್ನು ಲೆಕ್ಕಿಗನೆಂದು ಕರೆಯುತ್ತಿದ್ದರು.

TalakadInscription

ಕ್ರಿ.ಶ. 726 ರ ತಲಕಾಡಿನ ಕಲ್ಬರಹ

ನಿಯೋಗಿಯು ಅರಮನೆಯ ಮೇಲುಸ್ತುವಾರಿ, ಅರಸುಮನೆತನದ ಬಟ್ಟೆ ಮತ್ತು ಒಡವೆಯನ್ನು ನೋಡಿಕೊಳ್ಳುತ್ತಿದ್ದನು. ಅರಸರ ಸಬೆಗಳನ್ನು ಮತ್ತು ಹೆಬ್ಬಾಗಿಲಿನ ಉಸ್ತುವಾರಿ ನೋಡಿಕೊಳ್ಳುವವರನ್ನು ಪಡಿಯಾರ ಎಂದು ಕರೆಯುತ್ತಿದ್ದರು. ಪೆರ‍್ಗಡೆಯು ಗಂಗರ ನಾಡಿನಲ್ಲಿ ತಮ್ಮ ಕಸುಬನ್ನು ಮಾಡುತ್ತಿದ್ದ ಅಕ್ಕಸಾಲಿಗರು, ಕಲೆಗಾರರು, ಕಮ್ಮಾರರು ಮತ್ತು ಕುಂಬಾರರ ಮೇಲ್ವಿಚಾರಣೆ ಮಾಡುತ್ತಿದ್ದನು. ಗಂಗರ ನಾಡಿನ ಸುಂಕ ಮತ್ತು ತೆರಿಗೆಯನ್ನು ನೋಡಿಕೊಳ್ಳುತ್ತಿದ್ದವನನ್ನು ಸುಂಕಪೆರ‍್ಗಡೆ ಎಂದು ಕರೆಯುತ್ತಿದ್ದರು. ಈ ಸುಂಕ ಪೆರ‍್ಗಡೆಯ ಕೆಳಗೆ ನಾಡಬೊವರು ಕೆಲಸ ಮಾಡುತ್ತಿದ್ದರು. ನೆಲದ ಮೇಲುಸ್ತುವಾರಿ ನೋಡಿಕೊಳ್ಳುವವನನ್ನು ಪ್ರಬು ಎಂಬ ಬಿರುದಿನಿಂದ ಕರೆಯುತ್ತಿದ್ದರು. ಹಳ್ಳಿಗಳ ಮೇಲುಗರನ್ನು ಗಾವುಂಡ ಎಂದು ಕರೆಯುತ್ತಿದ್ದರು.

ಮಾವಳ್ಳಿ, ಕುಂಸಿ, ದೊಡ್ಡಹೊಮ್ಮ ಹಾಗು ಇನ್ನಿತರ ಕಲ್ಬರಹಗಲ್ಲಿ ಹೇಳಿರುವಂತೆ ಮಂದಿಯ ಅನುಕೂಲಕ್ಕಾಗಿ ನದಿ, ಹೊಳೆ, ಕಾಲುವೆ, ಹಳ್ಳಿಗಳ ಎಲ್ಲೆ, ಬೆಟ್ಟ ಗುಡ್ಡಗಳು, ಕೋಟೆಗಳು, ಕಾಡುಗಳು, ದೇವಸ್ತಾನಗಳು, ನೀರಿನ ತೊಟ್ಟಿಗಳ ಇರುವಿಕೆಯ ಗುರುತುಗಳನ್ನು ಮಾಡಿದ್ದರು. ಹಾಗೆಯೇ ಆಯಾ ನೆಲದ ಮಣ್ಣಿಗೆ ಸರಿಯಾಗಿ ಯಾವ ಯಾವ ಬೆಳೆಗಳನ್ನು ಬೆಳೆಯಬೇಕೆಂಬುದನ್ನು ತಿಳಿಸಿದ್ದರು. ಅದಕ್ಕಾಗಿ ನೀರಾವರಿ ಕಾಲುವೆ ಮತ್ತು ತೊಟ್ಟಿಗಳನ್ನು ಕಟ್ಟಿಸಿದ್ದರು. ಕಲ್ಬರಹಗಳಲ್ಲಿ ಹೇಳಿರುವಂತೆ ಬೇಡರಿಗಾಗಿಯೇ ಹಳ್ಳಿಗಳು ಇರುತ್ತಿದ್ದವು ಹಾಗು ಅದನ್ನು ‘ಬೇಡಪಳ್ಳಿ’ ಎಂದು ಕರೆಯುತ್ತಿದ್ದರು. ಮಯ್ಗಾವಲುಗಾರರನ್ನು ವೆಲಾವಳಿ ಎಂದು ಕರೆಯುತ್ತಿದ್ದರು.

ಗಂಗರು ತಮ್ಮ ಲಾಂಚನವಾಗಿ ಮದದಾನೆಯನ್ನು ಬಳಸಿಕೊಂಡರು, ಇದರ ಹಿನ್ನೆಲೆ ಹಳೆಮೈಸೂರು ಬಾಗದಲ್ಲಿ ಆನೆಗಳು ಹೆಚ್ಚು ಇದ್ದರಿಂದವಿರಬಹುದು. ಮೇಲುಕೋಟೆಯ ತಾಮ್ರದ ಬರಹ, ಮಾಂಬಳ್ಳಿ ಕಲ್ಬರಹ ಮತ್ತು ಮೇಡುತಂಬಳ್ಳಿ ಕಲ್ಬರಹಗಳಿಂದ ಗಂಗವಾಡಿ ಬಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿದ್ದರಿಂದ ಆಯ ಬಾಗಗಳಲ್ಲಿ ಅಡಿಕೆ, ಕಾಳು ಮೆಣಸು, ತೆಂಗು, ಬತ್ತ, ರಾಗಿ, ಎಣ್ಣೆ ಬೀಜಗಳು ಹಾಗು ಜೋಳ ಈ ಬೆಳೆಗಳಿಗೆ ಕಾವೇರಿ, ತುಂಗಬದ್ರ, ವೇದಾವತಿ ನದಿಗಳಿಗೆ ಕಟ್ಟಿದ ಅಣೆಕಟ್ಟುಗಳಿಂದ ಕಾಲುವೆಗಳಲ್ಲಿ ನೀರುಣಿಸುತ್ತಿದ್ದರು. ಗಂಗರರಸು ನಾಲ್ವಡಿ ರಾಚಮಲ್ಲನ ದೊಡ್ಡಹೊಮ್ಮ ಕಲ್ಬರಹದಿಂದ ಹಲವಾರು ಮಣ್ಣು ಮತ್ತು ನೆಲದ ಬಗೆಯನ್ನು ತಿಳಿಸುವ ಕನ್ನಡದ ಪದಗಳು ಕಂಡುಬರುತ್ತದೆ. ಕರಿಮಣ್ಣಿಯ-ಕಪ್ಪುಮಣ್ಣು, ಕೆಬ್ಬಯಮಣ್ಣು- ಕೆಂಪುಮಣ್ಣು ಎಂದು, ಹಸಿನೆಲ-ಕಳನಿ, ಗಳ್ಡೆ, ಪಣ್ಯ ಎಂದು ಕರೆಯುತ್ತಿದ್ದರು. ರೈತರ ಬಗ್ಗೆ ಹೆಚ್ಚು ಒಲವಿದ್ದ ತಲಕಾಡಿನ ಗಂಗರು ಹಸುಸಾಕಣೆಗೆ ಒತ್ತು ನೀಡಿದರು. ಹಲವು ಹಸು ಸಾಕಣೆಯ ಹಟ್ಟಿಗಳನ್ನು ಅವರೇ ನಡೆಸುತ್ತಿದ್ದರು.

ಹಲವಾರು ನ್ಯಾಯ ತೀರ‍್ಮಾನಗಳನ್ನು ಮತ್ತು ಮಂದಿಯ ಹಣಕಾಸಿನ ಪರಿಸ್ತಿತಿ ನೋಡಿ ಸುಂಕ ರದ್ದತಿಯ ತೀರ‍್ಮಾನಗಳನ್ನು ಹಳ್ಳಿಯ ಮೇಲುಗಾರಾದ ಗಾವುಂಡರೆ ತೆಗೆದುಕೊಳ್ಳುತ್ತಿದ್ದರು, ಹೀಗಾಗಿ ಆಡಳಿತವನ್ನು ಕೆಳಗಿನ ಅದಿಕಾರಿಗಳಿಗೆ ಹಂಚಿದ್ದರು. ರದ್ದು ಮಾಡಿದ ಸುಂಕವನ್ನು ‘ಮಾನ್ಯ’ ಎಂದು ಕರೆಯಲಾಗುತ್ತಿತ್ತು. ಸುಂಕ ‘ಮಾನ್ಯ’ವಾದ ನೆಲವನ್ನು ಸೈನ್ಯದಲ್ಲಿ ಕಾದಾಡಿದವರಿಗೆ ಮತ್ತು ನಾಡವೀರರಿಗೆ ಕೊಡುತ್ತಿದ್ದರು, ಇದನ್ನು ಬಿಳವ್ರುತ್ತಿ(ಬಿೞವ್ರುತ್ತಿ) ಹಾಗು ಕಲ್ನಾಡ್ ಎಂದು ಕರೆಯುತ್ತಿದ್ದರು ಈ ಸಂಗತಿಯನ್ನು ನರಸಿಂಹಪುರದ ಕಲ್ಬರಹದಲ್ಲಿ ತಿಳಿಸಲಾಗಿದೆ. ಒಳಸುಂಕವನ್ನು ಅಂತಕರ ಎಂದು ಕರೆಯುತ್ತಿದ್ದರು, ರಾಜನಿಂದ ಬಂದ ಬಹುಮಾನವನ್ನು ಉತ್ಕೊಟವೆಂದು ಕರೆಯುತ್ತಿದ್ದರು. ಆಮದು ವಸ್ತುಗಳ ಸುಂಕ ಮತ್ತು ತೆರಿಗೆಗೆ ಸುಲಿಕ ಎಂದು ಕರೆಯುತ್ತಿದ್ದರು. ಕ್ರುಶಿಯ ಮೇಲಿನ ತೆರಿಗೆಯನ್ನು ‘ಸಿದ್ದಾಯ’ ಎಂದು ಮಾರಾಟದ ಮೇಲಿನ ತೆರಿಗೆಯನ್ನು ಪೊತ್ತೊಂದಿ ಎಂದು ಕರೆಯುತ್ತಿದ್ದರು. ಇವೆಲ್ಲವನ್ನೂ ನಾಡಿನ(ಸಾವಿರಹಳ್ಳಿಗಳು) ಮೇಲುಗರು ಮತ್ತು ಸುಂಕಪೆರ‍್ಗಡೆಯವರು ಲೆಕ್ಕಾಚಾರ ಮಾಡುತ್ತಿದ್ದರು. ಹಲವು ಕಡೆಗಳಲ್ಲಿ ‘ಪೊತ್ತೊಂದಿ’ ತೆರಿಗೆಯನ್ನು ಹತ್ತನೇ ಒಂದು ಬಾಗದ ತೆರಿಗೆ ಎಂದು, ‘ಐದಾಳ್ವಿ’ಯನ್ನು ಐದನೇ ಒಂದು ಬಾಗದ ತೆರಿಗೆ ಎಂದು, ‘ಏಳಾಳ್ವಿ’ಯನ್ನು ಏಳನೇ ಒಂದು ಬಾಗದ ತೆರಿಗೆ ಎಂದು ಕರೆಯುತ್ತಿದ್ದರು. ಮಣ್ಣದಾರೆ ಎಂಬ ಸುಂಕವನ್ನು ನೆಲಗಂದಾಯದ ಜೊತೆಗೆ ಕುರಿಂಬದೆರೆ ಎಂಬ ಕುರಿಸಾಕಣೆ ಮೇಲಿನ ಸುಂಕವನ್ನು ಕುರುಬರು ಅವರ ಮುಕಂಡನಿಗೆ ಕೊಡುತ್ತಿದ್ದರು.

ಹಲವು ಕಿರುಸುಂಕವನ್ನು ಕಿರುದೆರೆ ಎಂದು ಕರೆಯುತ್ತಿದ್ದರು. ಕಾಳಗದ ಹೊತ್ತಿನಲ್ಲಿ ಪಡೆಯ ಕಾಳಗದ ತರಬೇತಿಗಾಗಿ ಹಾಗು ಕುದುರೆ ಪಡೆಯ ಕುದುರೆಗಳು, ಆನೆಪಡೆಯ ಆನೆಗಳನ್ನು ಮೇಯಿಸಲು ಹಲವು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದರು ಹಾಗು ಇದಕ್ಕಾಗಿ ಸುಂಕ ತೆರಿಗೆಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ಮಂದಿಯ ಅನುಕೂಲಕ್ಕಾಗಿ ನೀರಿನ ತೊಟ್ಟಿಗಳನ್ನು ಕಟ್ಟಿಸುತ್ತಿದ್ದರು ಇದರ ಹಣಕಾಸಿಗೆ ಬಿಟ್ಟುವತ್ತ ಎಂಬ ತೆರಿಗೆಯನ್ನು ಹಾಕುತ್ತಿದ್ದರು. ಹೀಗೆ ಆಳ್ವಿಕೆಯಲ್ಲಿ ಗಟ್ಟಿಗರಾದ ತಲಕಾಡಿನ ಗಂಗರು ಯಾವುದೇ ಅರಸುಮನೆತನಗಳಿಗಿಂತ ಕಮ್ಮಿಯಿಲ್ಲದೆ ಕನ್ನಡ ನಾಡಿನ ಏಳಿಗೆಗಾಗಿ ಒಳ್ಳೆಯ ಆಡಳಿತ ನೀಡಿದರು.
ಮುಂದಿನ ಬರಹಗಳಲ್ಲಿ ಕರ‍್ನಾಟಕ ಮತ್ತು ಕನ್ನಡಕ್ಕೆ ತಲಕಾಡಿನಗಂಗರ ಕೊಡುಗೆಗಳನ್ನು ತಿಳಿಯೋಣ.
(ಮಾಹಿತಿ ಸೆಲೆ: books.google, googlebooks, balsankar.com, karnataka.gov.in, “ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ” – ಶ.ಶೆಟ್ಟರ‍್,  Mysore Gazetter,Vol. I, p.308 by BL rice, The Making of Southern Karnataka: Society, Polity and Culture in the early medieval period, AD 400–1030 – by Malini Adiga)
(ಚಿತ್ರಸೆಲೆ: ವಿಕಿಪೀಡಿಯ)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. M.R Indudhar says:

    Kannadigaru great. Avara ithihasa bhvyavagide…

ಅನಿಸಿಕೆ ಬರೆಯಿರಿ:

Enable Notifications OK No thanks