ಜೇನುಹುಳ ಕಚ್ಚುವುದಿಲ್ಲ ಚುಚ್ಚುವುದು!

– ರತೀಶ ರತ್ನಾಕರ.
three.bees.finger

ಸುದ್ದಿ ಹಾಳೆಯಲ್ಲೋ, ನಿಮಗೆ ಗೊತ್ತಿರುವ ಕಡೆಯಿಂದಲೋ ಜೇನುಹುಳದಿಂದ ಕಚ್ಚಿಸಿಕೊಂಡವರ ಬಗ್ಗೆ ಕೇಳಿರುತ್ತೀರಿ ಇಲ್ಲವೇ ನೀವೇ ನೋಡಿರುತ್ತೀರಿ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನೀವೇ ಕಚ್ಚಿಸಿಕೊಂಡಿರಲೂಬಹುದು! ಜೇನುಹುಳಗಳು ಕಚ್ಚುವುದು ಎಂದರೆ ಅವು ತಮ್ಮ ಬಾಯಿಯಿಂದ ಕಚ್ಚುತ್ತವೆ ಎಂದು ಅಂದುಕೊಂಡಿರಬಹುದು. ದಿಟವಾಗಿ ಹೇಳುವುದಾದರೆ ಜೇನುಹುಳಗಳು ಬಾಯಿಂದ ಕಚ್ಚುವುದಿಲ್ಲ ಬದಲಾಗಿ ಕೊಂಡಿಯಿಂದ ಚುಚ್ಚುತ್ತವೆ! ಚೇಳು ತನ್ನ ಬಾಲದ ಕೊಂಡಿಯಲ್ಲಿರುವ ನಂಜಿನಿಂದ ಹೇಗೆ ಕುಟುಕುವುದೋ ಹಾಗೆಯೇ ಜೇನುಹುಳವು ತನ್ನ ಕೆಳಹೊಟ್ಟೆಯ ತುದಿಯಲ್ಲಿರುವ ಕೊಂಡಿ(Sting)ಯಿಂದ ಕುಟುಕುವುದು! ಬನ್ನಿ, ಈ ಕುರಿತು ಮತ್ತಶ್ಟು ತಿಳಿಯೋಣ.

ಗೂಡಿನಲ್ಲಿ ತನ್ನ ಬದುಕನ್ನು ನಡೆಸುವ ಜೇನುಹುಳಗಳಿಗೆ ಹೊರಗಿನ ಪ್ರಾಣಿಗಳಿಂದ ತೊಂದರೆ ಎದುರಾದರೆ, ತಮ್ಮನ್ನು ಮತ್ತು ಗೂಡನ್ನು ಕಾಪಾಡಿಕೊಳ್ಳಲು ತಮ್ಮ ಕೊಂಡಿಯಿಂದ ಪ್ರಾಣಿಯನ್ನು ಚುಚ್ಚುತ್ತವೆ. ಜೇನುಹುಳದ ಕೊಂಡಿಯು ಮುಳ್ಳಿನಂತೆ ಇದ್ದು, ಅದು ಎರಡು ಮೊನಚಾದ ಈಟಿಯಿಂದ ಮಾಡಲ್ಪಟ್ಟಿದೆ. ಈ ಕೊಂಡಿಯು ನಂಜುಗಡ್ಡೆ(venom bulb)ಗೆ ಸೇರಿಕೊಂಡಿರುತ್ತದೆ. ಈ ನಂಜುಗಡ್ಡೆಯು ನಂಜು ಚೀಲದಿಂದ (venom sac) ಬರುವ ನಂಜನ್ನು ಕೂಡಿಟ್ಟುಕೊಂಡಿರುತ್ತದೆ. ನಂಜು ಸುರಿಗೆ(venom gland)ಗಳು ಜೇನುಹುಳಕ್ಕೆ ಬೇಕಾದ ನಂಜನ್ನು ಒಸರುತ್ತವೆ (secrete).

Kondiಇದಲ್ಲದೇ, ಮೊನಚಾದ ಈಟಿಯ ತುದಿಯ ಎರಡೂ ಬದಿಗಳಲ್ಲಿ ಪುಟ್ಟ ರಕ್ಕೆಗಳಂತೆ ಇರುತ್ತದೆ, ಇದು ಕೊಂಡಿಯನ್ನು ಆಳಕ್ಕೆ ಚುಚ್ಚಲು ನೆರವಾಗುತ್ತದೆ. ಈ ಕೊಂಡಿಯ ಸುತ್ತಲಿರುವ ಕೆಳಹೊಟ್ಟೆಯ ಕಂಡಗಳು, ಕೊಂಡಿಯನ್ನು ಚುಚ್ಚಲು ಬೇಕಾದ ಬಲವನ್ನು ನೀಡುತ್ತವೆ. ಜೇನುಹುಳವು ತನ್ನನ್ನು ಕಾಪಾಡಿಕೊಳ್ಳಲು ಕೊಂಡಿಯಿಂದ ಚುಚ್ಚಿದಾಗ ಈ ಕೆಳಗಿನ ಹಂತಗಳಲ್ಲಿ ಕೊಂಡಿಯು ಚುಚ್ಚಲ್ಪಡುತ್ತದೆ;

  1. ಮೊದಲು ಮೊನಚಾದ ಕೊಂಡಿಯು ಪ್ರಾಣಿಯ ತೊಗಲಿನ ಮೇಲ್ಬಾಗವನ್ನು ಸೀಳುತ್ತದೆ.
  2. ಕೆಳಹೊಟ್ಟೆಯ ಕಂಡಗಳು ಹುರುಪನ್ನು ಪಡೆದು, ಮೊನಚಾದ ಕೊಂಡಿಯ ಎರಡು ಈಟಿಗಳನ್ನು ಒಂದಾದ ಮೇಲೊಂದರಂತೆ ಮೇಲೆ-ಕೆಳಗೆ ಮಾಡುತ್ತವೆ. ಇದರಿಂದ ಕೊಂಡಿಯು ತೊಗಲಿನ ಆಳಕ್ಕೆ ಹೋಗಲು ನೆರವಾಗುತ್ತದೆ.
  3. ಈಟಿಯ ತುದಿಯಲ್ಲಿರುವ ರಕ್ಕೆಯಂತಹ ಇಟ್ಟಳವು ಚುಚ್ಚುತ್ತಿರುವ ಜಾಗವನ್ನು ಮತ್ತಶ್ಟು ಅಗಲಗೊಳಿಸಿ ಕೊಂಡಿಯನ್ನು ಆಳಕ್ಕೆ ಹೋಗುವಂತೆ ಮಾಡುತ್ತದೆ.
  4. ಈ ಹೊತ್ತಿನಲ್ಲಿ ನಂಜುಗಡ್ಡೆಯಲ್ಲಿರುವ ನಂಜು ಕೊಂಡಿಯ ಮೂಲಕ ತೊಗಲಿನ ಒಳಕ್ಕೆ ಹೋಗುತ್ತದೆ.

ಕೊಂಡಿಯನ್ನು ಚುಚ್ಚಿದೊಡನೆ ನಂಜಿನ ಜೊತೆ ದಿಗಿಲು ಸೋರುಗೆ(pheromone)ಗಳನ್ನು ಕೂಡ ಹೊರಹಾಕುತ್ತದೆ. ಈ ದಿಗಿಲು ಸೋರುಗೆಗಳು ಬಾಳೆಹಣ್ಣಿನ ಪರಿಮಳವನ್ನು ಹೊಂದಿದ್ದು, ಉಳಿದ ಜೇನುಹುಳಗಳಿಗೆ ಎಚ್ಚರಿಕೆಯ ಮಾಹಿತಿಯನ್ನು ಸಾಗಿಸುತ್ತವೆ. ದಿಗಿಲು ಸೋರುಗೆಗಳ ಪರಿಮಳ ಬಂದೊಡನೆ ಉಳಿದ ಜೇನುಹುಳಗಳು ‘ತೊಂದರೆ’ ಇರುವುದನ್ನು ಅರಿತು, ಸೋರುಗೆಯು ಹರಿದು ಬಂದ ಕಡೆಗೆ ಹಾರಿ ತೊಂದರೆ ಕೊಡಲು ಬಂದಿರುವ ಪ್ರಾಣಿಗೆ ಒಟ್ಟಿಗೆ ಚುಚ್ಚಲಾರಂಬಿಸುತ್ತವೆ. ಹಲವಾರು ಜೇನುಹುಳಗಳು ಯಾರಿಗಾದರು ಒಮ್ಮೆಲೆ ಕಚ್ಚಿರುವುದನ್ನೋ ಇಲ್ಲವೇ ಒಟ್ಟೊಟ್ಟಿಗೆ ಜೇನುಹುಳಗಳು ಬೆರೆಸಿಕೊಂಡು ಬಂದಿರುವುದನ್ನು ನಾವು ಕೇಳಿರುತ್ತೇವೆ, ಜೇನುಹುಳಗಳ ಈ ಒಗ್ಗಟ್ಟಿನ ಕೆಲಸಕ್ಕೆ ದಿಗಿಲು ಸೋರುಗೆಗಳು ನೆರವಾಗುತ್ತವೆ.

ಜೇನುಹುಳಗಳು ಸಾಕಶ್ಟು ಬಗೆಯ ದಿಗಿಲು ಸೋರುಗೆಗಳನ್ನು ಹೊರಹಾಕುವ ಕಸುವನ್ನು ಹೊಂದಿವೆ. ತೊಂದರೆ ಎದುರಾದಾಗ ಎಚ್ಚರಿಸಲು, ಗೂಡಿನಲ್ಲಿರುವ ಮರಿಹುಳ ಮತ್ತು ಗೂಡುಹುಳಗಳು ತಾವು ಬೆಳೆಯುತ್ತಿರುವುದನ್ನು ತಿಳಿಸಲು, ಗಂಡು ಜೇನುಹುಳವು ಒಡತಿ ಜೇನುಹುಳದ ಬಗ್ಗೆ ಇನ್ನೊಂದು ಗಂಡು ಜೇನಿಗೆ ತಿಳಿಸಲು, ಒಡತಿ ಜೇನುಹುಳವು ಇಟ್ಟ ಮೊಟ್ಟೆಗಳನ್ನು ಕಂಡುಹಿಡಿಯಲು, ಹೀಗೆ ಬಗೆ ಬಗೆಯ ಕೆಲಸಗಳ ಬಗ್ಗೆ ಮತ್ತೊಂದು ಜೇನುಹುಳಕ್ಕೆ ಅರುಹಲು (communicate) ಹುಳಗಳು ದಿಗಿಲು ಸೋರುಗೆಯನ್ನು ಬಳಸುತ್ತವೆ. ಹಲವು ಬಗೆಯ ದಿಗಿಲು ಸೋರುಗೆಗಳನ್ನು ಒಸರಲು ಹುಳದಲ್ಲಿರುವ ಸುಮಾರು 15 ಸುರಿಗೆಗಳು ಬಳಕೆಯಾಗುತ್ತವೆ. ಹೀಗೆ ಹೊರಬರುವ ಸುರಿಗೆಗಳನ್ನು ಅರಿಯಲು ಉಳಿದ ಜೇನುಹುಳಗಳು ತಮ್ಮ ಅರಿಗೊಂಬು(Antennea) ಮತ್ತು ಇತರೆ ಮೈಬಾಗಗಳನ್ನು ಬಳಸುತ್ತವೆ. ಜೇನುಹುಳದ ಕುಣಿತವು ಹುಳಗಳ ಒಂದು ಬಗೆಯ ಮಾತುಕತೆಯಾದರೆ ಈ ದಿಗಿಲು ಸೋರುಗೆಗಳನ್ನು ಒಸರುವುದು ಇನ್ನೊಂದು ಬಗೆಯ ಮಾತುಕತೆ.

ಜೇನುಹುಳವು ಚುಚ್ಚುವ ಬಗೆಯನ್ನು ತೋರಿಸುವ ಓಡುತಿಟ್ಟವನ್ನು ಕೆಳಗೆ ನೀಡಲಾಗಿದೆ.

ಹುಳಗಳು ಒಸರುವ ದಿಗಿಲು ಸೋರುಗೆಗಳಲ್ಲಿ ಎರಡು ಬಗೆಗಳಿವೆ;
1. ಒಂದು ಪೆರೊಮೋನ್ ಕೊಶೆವ್ನಿಕೊವ್ ಸುರಿಗೆ(Koschevnikov gland)ಯಿಂದ ಒಸರುವುದು. ಈ ಸುರಿಗೆಯು ಕೊಂಡಿಯ ಬುಡದಲ್ಲೇ ಇದ್ದು, ಇದರಿಂದ ಹೊರಬರುವ ದಿಗಿಲು ಸೋರುಗೆಯು ಸುಮಾರು 40 ಬಗೆಯ ತಿರುಳುಗಳಿಂದ(chemical compounts) ಮಾಡಲ್ಪಟ್ಟಿರುತ್ತದೆ. ಅವುಗಳಲ್ಲಿ ಕೆಲವೆಂದರೆ, ಐಸೊಪೆಂಟೈಲ್ ಅಸಿಟೇಟ್ (isopentyl acetate), ಬ್ಯುಟೈಲ್ ಅಸಿಟೇಟ್ (butyl acetate), 1-ಹೆಕ್ಸನಾಲ್ (1-hexanol), n-ಬ್ಯುಟನಾಲ್(n-butanol), 1-ಆಕ್ಟನಾಲ್(1-octanol), ಹೆಕ್ಸೈಲ್ ಅಸಿಟೇಟ್(hexyl acetate), ಆಕ್ಟೈಲ್ ಅಸಿಟೇಟ್(octyl acetate), n-pentyl acetate(n-ಪೆಂಟೈಲ್ ಅಸಿಟೇಟ್) ಮತ್ತು 2-ನೊನನಾಲ್(2-nonanol).

2. ಮತ್ತೊಂದು ಸೋರುಗೆಯು ಕೆಳದವಡೆಯ ಸುರಿಗೆಗಳಿಂದ (mandibular glands) ಒಸರುತ್ತದೆ. ಇದರಲ್ಲಿರುವ ಅರಿದಾದ ತಿರುಳೆಂದರೆ 2-ಹೆಪ್ಟಾನನ್ (2-heptanone).

ಕೊಂಡಿಯ ನಂಜು:
ಜೇನುಹುಳದ ನಂಜು ಬಣ್ಣವಿಲ್ಲದ ನೀರಿನಂತಹ ವಸ್ತು. ಒಂದು ಜೇನುಹುಳವು ಚುಚ್ಚಿದರೆ 0.1 ಮಿ.ಗ್ರಾಂ ನಶ್ಟು ನಂಜನ್ನು ಅದು ಚುಚ್ಚಿದ ಪ್ರಾಣಿಗೆ ಹರಿಸಬಹುದು. ನಂಜಿನಲ್ಲಿ ಈ ಕೆಳಗಿನ ಒಂದುಗೆಗಳು(compounds) ಇರುತ್ತವೆ;
– ಮೆಲಿಟ್ಟಿನ್(melittin): ನಂಜಿನ 52% ನಶ್ಟಿರುತ್ತದೆ.
– ದಿಗಿಲು ಸೋರುಗೆಗಳು (pheromones) ಇರುತ್ತವೆ.
– ಅಪಮಿನ್(Apamin), ಅಡೊಲಪಿನ್(Adolapin), ಪಾಸ್ಪಾಲಿಪೇಸ್(Phospholipase)- ಎ2, ಹೈಯಲ್ಯುರೊನಿಡೇಸ್(Hyaluronidase), ಹಿಸ್ಟಮಿನ್(histamine), ಡೊಪಮೈನ್(Dopamine) ದೊಳೆ(enzyme), ಇತರೆ ಪೆಪ್ಟೈಡ್ಸ್(peptides), ಅಮೈನೊ ಹುಳಿಗಳು(amino acids) ಮತ್ತು ಇತರೆ ಹುಳಿಗಳು ಸೇರಿ ಒಟ್ಟಾರೆಯಾಗಿ 63 ಬಗೆಬಗೆಯ ಒಂದುಗೆಗಳು(compounds) ಇರುತ್ತವೆ.

ಜೇನುಹುಳವು ಚುಚ್ಚಿದಾಗ ಅದರ ಕೊಂಡಿಯು ಪ್ರಾಣಿಯ ತೊಗಲಿನ ಒಳಗೆ ಹೋಗುತ್ತದೆ. ಒಂದು ವೇಳೆ ಚುಚ್ಚಿದ ಜಾಗವು ಗಟ್ಟಿಯಾದ ತೊಗಲಾಗಿದ್ದರೆ ಜೇನುಹುಳವು ಹಾರಿಹೋಗುವಾಗ ಕೊಂಡಿ ಮತ್ತು ಅದರ ಬುಡದ ಕೆಲವು ಕಂಡಗಳು ಚುಚ್ಚಿದ ಜಾಗದಲ್ಲೇ ಉಳಿದುಕೊಳ್ಳುತ್ತವೆ. ಕೊಂಡಿಯನ್ನು ಕಳೆದುಕೊಳ್ಳುವ ಜೇನುಹುಳವು ಗಾಯಗೊಳ್ಳುವುದರಿಂದ ಅದು ಸಾಯುತ್ತದೆ. ತನ್ನ ಗೂಡನ್ನು ಕಾಪಾಡಿಕೊಳ್ಳಲು, ತೊಂದರೆ ಮಾಡಲು ಬಂದ ಪ್ರಾಣಿಗೆ ಚುಚ್ಚಿ ತಾನು ಉಸಿರನ್ನು ಕಳೆದುಕೊಳ್ಳುತ್ತದೆ. ಒಂದು ವೇಳೆ ಚುಚ್ಚಿದ ಜಾಗವು ಮೆತ್ತಗಿದ್ದರೆ ತನ್ನ ಕೊಂಡಿಯಿಂದ ನಂಜನ್ನು ಚುಚ್ಚಿ ಕೊಂಡಿಯ ಸಮೇತ ಹಾರಿಹೋಗುತ್ತದೆ. ಆಗ ಅದು ಸಾಯುವುದಿಲ್ಲ. ಆದರೆ ಜೇನುಹುಳವು ಚುಚ್ಚಿತೆಂದರೆ ಅದರ ಕೊಂಡಿ ಹೆಚ್ಚಿನ ಬಾರಿ ಚುಚ್ಚಿದಲ್ಲೇ ಉಳಿದುಕೊಳ್ಳುತ್ತದೆ. ಹಾಗಾಗಿ ಎರಡನೇ ಬಾರಿ ಚುಚ್ಚಲು ಬದುಕುವ ಜೇನುಹುಳಗಳು ತುಂಬಾ ಕಡಿಮೆ.

ಮತ್ತೊಂದು ಬೆರಗಿನ ಸುದ್ದಿಯೆಂದರೆ ಗಂಡುಹುಳಗಳಿಗೆ ಈ ಕೊಂಡಿಯಿರುವುದಿಲ್ಲ. ಕೇವಲ ದುಡಿಮೆಗಾರ ಹುಳಗಳು ಮಾತ್ರ ಚುಚ್ಚುತ್ತವೆ. ಒಡತಿ ಜೇನಿಗೆ ಕೊಂಡಿಯಿರುತ್ತದೆ ಆದರೆ ಅದು ದುಡಿಮೆಗಾರ ಹುಳಕ್ಕಿರುವಶ್ಟು ಗಟ್ಟಿಯಾಗಿರುವುದಿಲ್ಲ. ಅಲ್ಲದೇ ಒಡತಿ ಹುಳವು ಗೂಡನ್ನು ಬಿಟ್ಟು ಹೋಗುವ ಸಾದ್ಯತೆಗಳು ತುಂಬಾ ಕಡಿಮೆ ಇರುವುದರಿಂದ ಇದು ತನ್ನನ್ನು ಕಾಪಾಡಿಕೊಳ್ಳಲು ಕೊಂಡಿಯನ್ನು ಬಳಸುವುದು ತುಂಬಾ ಕಡಿಮೆ.

ಮುಂದಿನ ಬಾರಿ ನೀವೆಲ್ಲಾದರೂ ಜೇನುಹುಳಗಳನ್ನು ಕಂಡರೆ ಎಚ್ಚರವಿರಲಿ, ಒಂದು ಜೇನುಹುಳ ಚುಚ್ಚಿದರೆ ಅದರಲ್ಲಿರುವ ದಿಗಿಲು ಸೋರುಗೆಗಳು ಹೊರಬಂದು, ತೊಂದರೆ ಇದೆ ಎಂದು ಉಳಿದ ಜೇನುಹುಳಗಳು ತಿಳಿದು, ಹಾರಿಬಂದು ಚುಚ್ಚುವ ಸಾದ್ಯತೆಗಳು ತುಂಬಾ ಹೆಚ್ಚು. ಅದಲ್ಲದೇ ಜೇನುಹುಳವೇನಾದರು ಚುಚ್ಚಿದರೆ ಅದರ ಕೊಂಡಿಯನ್ನು ಆದಶ್ಟು ಬೇಗ ಚುಚ್ಚಿದ ಜಾಗದಿಂದ ಕಿತ್ತು ಹಾಕಿ, ಏಕೆಂದರೆ, ಆ ಕೊಂಡಿಯ ಚೂರು ಕೂಡ ಅಳಿದುಳಿದ ನಂಜನ್ನು ನಮ್ಮ ನೆತ್ತರಿಗೆ ಸೇರಿಸುತ್ತಿರುತ್ತದೆ. ಆದರೆ ನೆನಪಿರಲಿ ಜೇನುಹುಳುಗಳಿಗೆ ನಾವು ತೊಂದರೆ ಕೊಡದಿದ್ದರೆ ಅವು ಕೂಡ ನಮಗೆ ಯಾವುದೇ ತೊಂದರೆ ಕೊಡುವುದಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: chm.bris, earthsky.org, beespotter.org, honeybeeremoval.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications