ಜೇನುಹುಳ – ಕೆಲವು ಸೋಜಿಗದ ಸಂಗತಿಗಳು!
– ರತೀಶ ರತ್ನಾಕರ.
ಸಾಮಾನ್ಯ ಹುಳದಂತೆ ಕಾಣುವ ಜೇನುಹುಳದ ಬಾಳ್ಮೆ ಹಲವು ಸೋಜಿಗದಿಂದ ಕೂಡಿದೆ. ತನ್ನ ಪಾಡಿಗೆ ತಾನು ಗೂಡನ್ನು ಕಟ್ಟಿ, ಹೂವನ್ನು ಹುಡುಕಿ, ಸಿಹಿಯನ್ನು ಕೂಡಿ, ಒಗ್ಗಟ್ಟಿನ ಬಾಳ್ಮೆ ನಡೆಸುತ್ತಾ, ಬದುಕಿನ ಬಂಡಿಯ ಓಡಿಸುವ ಈ ಹುಳಗಳು ಬೆರಗಿನ ಗಣಿಗಳು. ಇವುಗಳ ಬದುಕಿನ ಬಗೆಯನ್ನು ಅರಿಯುವ ಪ್ರಯತ್ನ ಮಾಡುತ್ತಾ ಹಲವು ಬರಹಗಳು ಈಗಾಗಲೇ ಹೊನಲಿನಲ್ಲಿ ಮೂಡಿಬಂದಿವೆ. ಬನ್ನಿ, ಇವುಗಳ ಬದುಕಿನ ಮತ್ತಶ್ಟು ಸೋಜಿಗದ ಸಂಗತಿಗಳನ್ನು ಚುಟುಕಾಗಿ ತಿಳಿಯೋಣ.
“ಹನಿಮೂನ್” (honeymoon) ಎಂಬ ಪದದ ಹುಟ್ಟು ಮತ್ತು ಆಚರಣೆ ಹೇಗಾಯಿತು ಗೊತ್ತೇ? – ಸುಮಾರು 8 ನೇ ನೂರೇಡಿನಲ್ಲಿ ಯುರೋಪಿನಲ್ಲಿದ್ದ ‘ನಾರ‍್ಸ್ ದರ‍್ಮ'(Norse religion)ದಲ್ಲಿ ಒಂದು ಪದ್ದತಿ ಇತ್ತು. ಅದರಲ್ಲಿ ಮದುವೆಯಾದ ಹೊಸ ಜೋಡಿಗಳಿಗೆ ಒಂದು ತಿಂಗಳ ಕಾಲ ‘ಜೇನು ಹೆಂಡ'(fermented honey) ಅಂದರೆ ಜೇನುತುಪ್ಪಕ್ಕೆ ನೀರನ್ನು ಸೇರಿಸಿ ಹುದುಗೆಬ್ಬಿಸಿ ಕೊಡಲಾಗುತ್ತಿತ್ತು. ಜೇನಿನಿಂದ ಮಾಡಿದ ಹೆಂಡವನ್ನು ಹೊಸ ಜೋಡಿಗಳಿಗೆ ಕೊಡುತ್ತಿದ್ದ ಒಂದು ತಿಂಗಳ ಕಾಲಕ್ಕೆ ‘ಹನಿಮೂನ್'(honey + moon [-means month]) (ಜೇನು ತಿಂಗಳು/ಸಿಹಿ ತಿಂಗಳು) ಎಂದು ಅವರು ಕರೆಯುತ್ತಿದ್ದರು. ಇದೇ ಜೇನಿಗೂ ‘ಹನಿಮೂನ್’ ಗೂ ಇರುವ ನಂಟು!
ಜೇನುತುಪ್ಪದಲ್ಲಿ ಯಾವುದೇ ಸೀರುಸಿರುಗಳು (micro organisms) ತನ್ನ ಬದುಕನ್ನು ನಡೆಸಲು ಆಗುವುದಿಲ್ಲ ಆದ್ದರಿಂದ ಅದನ್ನು ಕೊಳೆಯಳಿಕ(antiseptic)ವಾಗಿ ಬಳಸುತ್ತಾರೆ. ಇದಲ್ಲದೇ ಇದು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಹೊಂದಿರುವುದರಿಂದ ಹೆಣಗಳು ಕೊಳೆಯದಂತೆ ಕಾಪಾಡಲು ಬಳಸುವ ಅಡಕಗಳಲ್ಲಿ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿತ್ತು. ‘ಅಲೆಕ್ಸಾಂಡರ‍್‘ ದೊರೆಯ ಹೆಣವನ್ನು ಕೊಳೆಯದಂತೆ ಕಾಪಾಡಲು ಕೂಡ ಜೇನುತುಪ್ಪವನ್ನು ಒಂದು ಅಡಕವನ್ನಾಗಿ ಬಳಸಲಾಗಿತ್ತು.
ಬನ್ನಿ, ಮತ್ತಶ್ಟು ಬೆರಗಿನ ತುಣುಕುಗಳನ್ನು ಸವಿಯೋಣ.
ಜೇನುಹುಳ:
- ಇರುವೆ ಮತ್ತು ಕಡಜದ ಹುಳಗಳು ಆದಮೇಲೆ ಕೀಟಗಳ ಹೆಚ್ಚೆಣಿಕೆಯಲ್ಲಿ ಜೇನುಹುಳಗಳಿಗೆ ಮೂರನೇ ಜಾಗ
- ಒಂದು ಗೂಡಿನಲ್ಲಿ ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳೆಂಬ ಮೂರು ಬಗೆಯ ಹುಳಗಳಿರುತ್ತವೆ
- ದುಡಿಮೆಗಾರ ಹುಳಗಳು 45 ದಿನಗಳು ಬದುಕಿದ್ದರೆ ಒಡತಿ ಜೇನುಹುಳವು 5 ವರುಶದವರೆಗೆ ಬದುಕಬಲ್ಲದು
- ಒಡತಿ ಹುಳವು ಒಂದು ದಿನಕ್ಕೆ 1500 ಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ
- ಜೇನುಹುಳಗಳು ಗಂಟೆಗೆ 15 ಮೈಲಿ ಉರುಬಿನಲ್ಲಿ ಹಾರಬಲ್ಲವು
- ಜೇನುಹುಳದ ರೆಕ್ಕೆಗಳು ನಿಮಿಶಕ್ಕೆ 11, 400 ಸಲ ಬಡಿಯುತ್ತವೆ. ಹುಳಗಳ ‘ಜುಂಯ್’ ಎನ್ನುವ ಸದ್ದಿಗೆ ಈ ರೆಕ್ಕೆಯ ಬಡಿತವೇ ಕಾರಣ
- ಇಡಿ ನೆಲದಲ್ಲಿರುವ ಕೀಟಗಳಲ್ಲಿ ಜೇನುಹುಳಗಳ ಊಟ(ಜೇನು)ವನ್ನು ಮಾತ್ರ ಮಾನವ ತನ್ನ ತಿನಿಸಾಗಿ ಬಳಸುತ್ತಾನೆ
- ಜೇನುಹುಳಗಳು ಗೂಡಿನಿಂದ ಸಾಮಾನ್ಯವಾಗಿ ಸುಮಾರು 5 ಕಿ.ಮೀ ದೂರದವರೆಗೆ ಹಾರುತ್ತವೆ. ಮೇವಿಗಾಗಿ ಗೂಡಿನಿಂದ ಸುಮಾರು 10. ಕೀ. ಮೀ. ದೂರದವರೆಗೆ ಇವು ಹಾರಬಲ್ಲವು
- ತನ್ನ ಗೂಡನ್ನು ಕಟ್ಟಲು ಬೇಕಾದ ಜೇನುಮೇಣವನ್ನು ತನ್ನ ಮೈಯಿಂದಲೇ ಹುಳವು ಉತ್ಪಾದಿಸುತ್ತದೆ
- ಅರ‍್ದ ಕೆ.ಜಿ. ಜೇನುಮೇಣವನ್ನು ಒಸರಲು (secrete) ಇವು 4 ಕೆ.ಜಿ ಸಿಹಿಯನ್ನು ತಿನ್ನಬೇಕು!
- ತಮ್ಮನ್ನು ಕಾಪಾಡಿಕೊಳ್ಳಲು ಬೇರೊಂದು ಪ್ರಾಣಿಗೆ ಚುಚ್ಚಿ ಬಳಿಕ ತಾನು ಸಾಯುವ ಕೀಟವೆಂದರೆ ಜೇನುಹುಳ ಮಾತ್ರ
- ಜೇನುಹುಳಗಳು ಕಡುನೇರಳೆ (ultravoilet) ಮತ್ತು ಪೊಲರೈಸ್ಡ್ (polarised) ಬೆಳಕನ್ನು ನೋಡಬಲ್ಲವು. ಹಾಗೆಯೇ ನಾವು ಕಾಣುವ ಕೆಂಪು ಬಣ್ಣವನ್ನು ಈ ಹುಳಗಳು ಕಾಣಲಾರವು
- ಜೇನುಹುಳದ ಮಿದುಳು ಮಾನವನ ಮಿದುಳಿಗಿಂದ 20,000 ಪಟ್ಟು ಚಿಕ್ಕದು!
- ಜೇನುಹುಳವು ಮಾನವನ ಮುಕವನ್ನು ಗುರುತಿಸಬಲ್ಲವು! 2 ಕೂಡುಗಣ್ಣು ಮತ್ತು 3 ಸುಳುಗಣ್ಣುಗಳು ಸೇರಿ ಒಟ್ಟು 5 ಕಣ್ಣುಗಳನ್ನು ಇವು ಹೊಂದಿವೆ
- ಜೇನುಹುಳಗಳು ನಾಲ್ಕರವರೆಗೆ ಎಣಿಸಬಲ್ಲವು.
ಜೇನುತುಪ್ಪದ ಕುರಿತು ಕೆಲವು ಬೆರಗಿನ ಹನಿಗಳು:
- ಇಡಿ ನೆಲದಲ್ಲಿ ಒಟ್ಟು 20 ಸಾವಿರ ಬಗೆಯ ಹುಳಗಳಿವೆ ಅದರಲ್ಲಿ 4 ಬಗೆಯ ಹುಳಗಳು ಮಾತ್ರ ಜೇನುತುಪ್ಪವನ್ನು ಮಾಡಬಲ್ಲವು
- ಅರ‍್ದ ಕೆ.ಜಿ ಜೇನುತುಪ್ಪವನ್ನು ಉತ್ಪಾದಿಸಲು ಜೇನುಹುಳಗಳು ಒಟ್ಟು 20 ಲಕ್ಶ ಹೂವುಗಳನ್ನು ಬೇಟಿ ಮಾಡಬೇಕು, ಹಾಗೆಯೇ 55, 000 ಮೈಲಿಗಳಶ್ಟು ಗೂಡಿನಿಂದ ಹೂವಿನ ಜಾಗಕ್ಕೆ ತಿರುಗಾಟ ನಡೆಸಬೇಕು!
- ಒಂದು ಜೇನುಗೂಡಿನಲ್ಲಿ ದಿನಕ್ಕೆ 1 ಕೆ.ಜಿ.ಯಶ್ಟು ಜೇನುತುಪ್ಪ ಕೂಡಿಡಬಹುದು
- ಒಂದು ಜೇನುಗೂಡಿನಲ್ಲಿ ವರುಶಕ್ಕೆ ಸುಮಾರು 200 ಕೆ.ಜಿ ಜೇನುತುಪ್ಪವನ್ನು ಹುಳಗಳು ಉತ್ಪಾದಿಸಬಲ್ಲವು
- ಒಂದು ಜೇನುಹುಳವು ತನ್ನ ಇಡೀ ಬದುಕಿನಲ್ಲಿ 1/12 ಟೀ ಚಮಚದಶ್ಟು ಮಾತ್ರ ಜೇನುತುಪ್ಪವನ್ನು ಉತ್ಪಾದಿಸಬಲ್ಲದು
- ಜೇನುತುಪ್ಪ ಎಂದಿಗೂ ಕೆಡುವುದಿಲ್ಲ
- ಜೇನುಹುಳವೇನಾದರು ಇಡೀ ನೆಲವನ್ನು ಸುತ್ತಬೇಕು ಎಂದರೆ ಅದರ ಹಾರಾಟಕ್ಕೆ ಸುಮಾರು 28 ಗ್ರಾಂ ಜೇನುತುಪ್ಪ ಸಾಕಾಗುತ್ತದೆ. ಅಶ್ಟೊಂದು ಹುರುಪು ಜೇನುತುಪ್ಪದಲ್ಲಿದೆ.
ಎರಡು ಗೋದಿ ಕಾಳಿನಶ್ಟು ದೊಡ್ಡದಿರುವ ಈ ಹುಳಗಳ ಬಾಳ್ಮೆಯ ಆಳಕ್ಕೆ ಇಳಿದರೆ ನಾವು ಹುಬ್ಬೇರಿಸುವಂತಹ ಅರಿಮೆ ಕಣ್ಣಿಗೆ ಕಾಣುತ್ತದೆ. ಇವುಗಳ ಬದುಕಿನ ಬಗ್ಗೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಅರಕೆಗಳು ನಡೆಯುತ್ತಲೇ ಇವೆ. ಜೇನುಹುಳದ ಸಾಕಣೆಯು ಒಂದು ದೊಡ್ಡ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಸಾಕಣೆಯಲ್ಲಿ ಬಗೆಬಗೆಯ ಚಳಕಗಳು ಹೊರಬರುತ್ತಿವೆ. ಜೇನು ಸಾಕಣೆಯ ಉದ್ಯಮವನ್ನು ಪರಿಣಾಮಕಾರಿಯಾಗಿ ನಡೆಸಲು ಹುಳದ ಬಗೆಗಿನ ಅರಕೆಗಳು ನೆರವನ್ನು ನೀಡುತ್ತಿವೆ. ನಮ್ಮಲ್ಲಿಯೂ ಇಂತಹ ಅರಕೆಗಳು ಹೆಚ್ಚಲಿ.
(ಮಾಹಿತಿ ಸೆಲೆ: westmtnapiary.com)
(ಚಿತ್ರ ಸೆಲೆ: thebeeshop.net, imgkid.com)
ಇತ್ತೀಚಿನ ಅನಿಸಿಕೆಗಳು