ಸರ‍್ಕಾರಿ ಆಸ್ಪತ್ರೆ…
– ಬಸವರಾಜ್ ಕಂಟಿ.
ಕಂತು – 1 ಕಂತು – 2
ಬಯದಲ್ಲಿ ನಡುಗುತ್ತ, ತೊದಲುತ್ತ, ನಡೆದುದೆಲ್ಲವನ್ನೂ ಸುದಾ ಮೇಡಂ ಮುಂದೆ ಹೇಳಿಕೊಂಡಳು ನರ‍್ಸ್ ಸಾವಿತ್ರಿ. ಅಶ್ಟರಲ್ಲಿ ರಾತ್ರಿ ಪಾಳಿಯ ಇನ್ನೊಬ್ಬ ಡಾಕ್ಟರರೂ ಅಲ್ಲಿ ಬಂದಿದ್ದರು. ಪೇದೆಯ ಕಯ್ ಗಾಯಕ್ಕೆ ಪಟ್ಟಿ ಕಟ್ಟಿಯಾಗಿತ್ತು. ಸಾವಿತ್ರಿ ಕತೆ ಹೇಳಿ ಮುಗಿಸುತ್ತಿದ್ದಂತೆ, ಆಸ್ಪತ್ರೆಯ ಗೇಟಿನಲ್ಲಿ ಹಾಯ್ದು ಪೊಲೀಸ್ ಜೀಪೊಂದು ಬಂದು ನಿಂತಿತು. ಕೆಳಗಿಳಿದ ಎಸ್. ಆಯ್ ನೇರ ಮೊದಲ ಮಹಡಿಯಲ್ಲಿದ್ದ ಆ ವಾರ‍್ಡಿಗೆ ಬಂದರು. ಬಂದವರೇ, ಪೇದೆ ಹತ್ತಿರ ಹೋಗಿ,
“ಯಾವ್ ಕಡೆ ಹೋದ್ಳು?” ಎಂದು ಕೇಳಿದರು.
ಪೇದೆ ತಡವರಿಸುತ್ತಾ, ಮುಕ ಕೆಳಗೆ ಮಾಡಿ, “ಕತ್ಲಲ್ಲಿ ಗೊತ್ತಾಗ್ಲಿಲ್ಲ ಸರ್, ನಾನೂ ತುಂಬಾ ಹುಡುಕ್ದೆ” ಎಂದಳು.
“ಏನ್ ಹುಡುಕ್ದೆ ನಿನ್ ಪಿಂಡ” ಎಂದು ಎಸ್. ಆಯ್ ತಮ್ಮ ಕೋಪ ಹೊರಹಾಕಿದರು.
ಕೆಳಗಿದ್ದ ಇನ್ನಿಬ್ಬರು ಪೇದೆಗಳ ಜೊತೆ ವಾಕಿ-ಟಾಕಿಯಲ್ಲಿ ಮಾತಾಡಿ ಆಸ್ಪತ್ರೆಯಿಂದ ಯಾರೂ ಹೊರ ಹೋಗದ ಹಾಗೆ ನೋಡಿಕೊಳ್ಳಲು ಹೇಳಿದನು.
“ಎಶ್ಟೊತ್ತಾಯ್ತು ಹೋಗಿ?” ಎಂದು ಪೇದೆಗೆ ಕೇಳಿದನು.
ಪೇದೆ ಮತ್ತೆ ತಡವರಿಸುತ್ತಾ, “ಒಂದ್ ಹತ್-ಹದಿನಯ್ದ್ ನಿಮಿಶ ಆಗಿರಬೌದು ಸಾರ‍್” ಅಂದಳು.
ಎಸ್. ಆಯ್ ಗೆ ಇನ್ನಶ್ಟು ಸಿಟ್ಟು ಏರಿ, “ಹತ್ತಾ… ಹದಿನಯ್ದಾ ಸರಿಯಾಗಿ ಬೊಗಳೆ” ಎಂದನು.
ಪೇದೆ ಮುಕ ಕೆಳಗೆ ಹಾಕಿದಳು. “ಒಂದ್ ಹುಡುಗಿ ಕಾಯೊಕ್ಕಾಗಲ್ಲಾ ನಿನಗೆ?” ಅಂತ ಜೋರು ಮಾಡಿ ಅಲ್ಲಿಂದ ಹೊರಳಿ, ವಾರ‍್ಡಿನ ಹೊರಗೆ ಬಂದು ನಿಂತನು. ಮಳೆ ಇನ್ನೂ ಬೀಳುತ್ತಿತ್ತು. ಎದೆಯ ಮೇಲಿನ ಅಂಗಿ ಹಸಿಯಾಗಿತ್ತು. ಅಲ್ಲಿ ನಿಂತು ಆಸ್ಪತ್ರೆಯ ಸುತ್ತ ನೋಡಿದನು. ಏನೂ ಹೊಳೆಯಲಿಲ್ಲ. ಈ ಮಳೆಯಲ್ಲಿ ಇನ್ನಶ್ಟು ಪೇದೆಗಳನ್ನು ಕರಿಸಿ ಅವಳನ್ನು ಹುಡುಕುವುದು ಬಲು ತೊಡಕಿನ ಕೆಲಸವಾಗಿತ್ತು. ಅಂಗಿಯ ಜೇಬಿನಲ್ಲಿದ್ದ ಸಿಗರೇಟು ತೆಗೆದು ಹೊತ್ತಿಸಿದನು.
ಏನೋ ಹೊಳೆದಂತಾಗಿ, ಮತ್ತೆ ಒಳಗೆ ಬಂದು, ಪೇದೆಗೆ “ಅವ್ಳು ಗೇಟ್ ಹೊರಗ್ ಹೋಗಿದ್ದಾದ್ರು ನೋಡಿದ್ಯಾ?”
“ಇಲ್ಲಾ ಸರ್. ಅವ್ಳು ಬಾಗ್ಲಿಂದ ಹೊರಗೋಗಿದ್ದನ್ನ ನೋಡ್ದೆ. ಕತ್ಲಲ್ಲಿ ಎಲ್ಲೊ ಬೇರೆ ಕಡೆ ಓಡಿ ಹೋಗಿರಬೇಕು. ನಾನು ಗೇಟ್ ಕಡೆನೇ ನೋಡ್ತಾ ಇದ್ದೆ. ಯಾರೂ ಹೊರ ಹೋಗೋದು ಕಾಣ್ಸಿಲ್ಲಾ. ಆಮೇಲೆ ನಾನು ಗೇಟ್ ಹತ್ರ ಹೋಗಿ ನೋಡ್ದೆ. ಯಾರೂ ಇರ‍್ಲಿಲ್ಲ.”
ಅವಳ ಮಾತು ಮುಗಿಯುತ್ತಿದ್ದಂತೆ, ಸುದಾ ಮೇಡಂ ಮಾತಾಡಿದರು, “ನೋಡಿ ಸರ್. ಇದು ಆಸ್ಪತ್ರೆ. ಇಲ್ಲಿ ನೀವು ಸಿಗರೇಟ್ ಸೇದೋ ಹಾಗಿಲ್ಲ”.
ಅವರ ಮಾತು ಕೇಳಿ ಅತ್ತ ತಿರುಗಿದ ಎಸ್. ಆಯ್, ಒಂದೆರಡು ಕ್ಶಣ ದುರುಗುಟ್ಟಿ ನೋಡಿ, ಹೊರಗೆ ಹೋದರು. ಮುಂದೆ ಇನ್ನೆಂದೂ ಸಿಗರೇಟು ಸೇದುವುದಿಲ್ಲವೇನೋ ಎಂಬಂತೆ ಹೀರಿ ಹೀರಿ ಹೊಗೆ ಎಳೆದು, ಆಮೇಲೆ ಆ ತುಂಡನ್ನು ಎಸೆದು ಮತ್ತೆ ಒಳಗೆ ಬಂದನು. ಮಳೆಯಲ್ಲಿ ಅರೆ-ಬರೆ ನೆಂದು ಚೆಂದವಾಗಿ ಕಾಣುತ್ತಿದ್ದ ಮೂವತ್ತರ ಒಳಗಿನ ಸುದಾ ಮೇಡಂ ಕಡೆಗೆ ಬಂದು, “ನೀವು ಯಾರು?” ಎಂದು ನುಂಗಿ ಹಾಕುವಂತೆ ಕೇಳಿದನು.
ಅವನ ಬಾಯಿಂದ ಬರುತ್ತಿದ್ದ ಸಹಿಸಲಾಗದ ವಾಸನೆಯಿಂದ, ಕಯ್ಯನ್ನು ಮೂಗಿಗೆ ಅಡ್ಡ ಹಿಡಿದು, “ನಾನು ಈ ವಾರ‍್ಡಿನ ಡಾಕ್ಟರ‍್” ಅಂದರು ಸುದಾ.
ಅವರ ಪ್ರತಿಕ್ರಿಯೆ ನೋಡಿ, ನಾಚಿಕೆಯಾಗಿ ತುಸು ಹಿಂದೆ ಸರಿದ ಎಸ್. ಆಯ್. “ನಿಮ್ದೇನಾ ಡ್ಯುಟಿ ಇದ್ದದ್ದು?” ಎಂದು ಕೇಳಿದ.
“ಇಲ್ಲಾ. ಡ್ಯೂಟಿ ಇದ್ದದ್ದು ಇವರದು” ಎಂದು ಇನ್ನೊಬ್ಬ ಡಾಕ್ಟರ್ ಕಡೆ ತೋರಿಸಿದರು.
“ಮತ್ತೆ ನೀವೇನ್ ಇಶ್ಟೊತ್ತಲ್ಲಿ ಇಲ್ಲಿ?” ಅದೇ ಗಡಸು ದನಿ
“ಏನಾದ್ರು ಎಮರ‍್ಜೆನ್ಸಿ ಇದ್ರೆ ಕಾಲ್ ಮಾಡು ಅಂತ ನರ‍್ಸ್ ಗೆ ಹೇಳಿದ್ದೆ. ಅವಳು ಕಾಲ್ ಮಾಡಿ ಹೀಗೆಲ್ಲಾ ಆಗಿದೆ ಅಂದ ತಕ್ಶಣ, ತಡಕೊಳ್ಳೊಕಾಗ್ದೆ ಇಲ್ಲಿಗ್ ಬಂದೆ”.
“ಸರಿ” ಎಂದು ಹೊರಳಿದ್ದ ಎಸ್. ಆಯ್. ಮತ್ತೆ ಅವರ ಕಡೆ ತಿರುಗಿ, “ನಾವ್ ಬರೋಕಿಂತ ಮುಂಚೇನೆ ಅದೇಗ್ ಬಂದ್ರಿ?” ಎಂದನು.
“ನನ್ನ ಮನೆ ಇಲ್ಲೇ ಹತ್ರ ಇರೋದು, ಕ್ವಾರ‍್ಟರ‍್ಸ್ ನಲ್ಲಿ. ಕಾರಿನಲ್ಲಿ ಬಂದೆ”
“ಒಟ್ನಲ್ಲಿ ಪೊಲೀಸೋರೆ ಲೇಟಾಗಿ ಬರೋದು ಅನ್ನಿ” ಎಂದು ನಕ್ಕನು, ಅವರನ್ನು ನಗಿಸಲೆಂದು. ಸುದಾ ಅವರು ಯಾವ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ. ಎಸ್. ಆಯ್. ಸುಮ್ಮನಾದ.
ವಾಕಿ-ಟಾಕಿಯಲ್ಲಿ ಮಾತಾಡುತ್ತ, ಪೇದೆಗಳಿಗೆ ಆಸ್ಪತ್ರೆಯ ಸುತ್ತ ಬ್ಯಾಟರಿ ಹಿಡಿದು ಹುಡುಕಲು ಹೇಳಿದನು. ಮಹಿಳಾ ಪೇದೆಯನ್ನು ಕರೆದುಕೊಂಡು ತಾನೂ ಕೆಳಗಿಳಿದು ಬಂದು ಕತ್ತಲಿದ್ದ ಜಾಗದಲ್ಲೆಲ್ಲಾ ಹುಡುಕಲು ಮೊದಲುಮಾಡಿದನು.
ಹದಿನಯ್ದು, ಇಪ್ಪತ್ತು ನಿಮಿಶ ಕಳೆದ ಮೇಲೆ, ಆ ವಾರ‍್ಡಿನ ಸುತ್ತ ಜನ ಜಮಾಯಿಸಲು ಶುರುಮಾಡಿದ್ದರು, ಕುತೂಹಲ ತಾಳಲಾರದೆ. ನಡೆದುದೆಲ್ಲ ಅದಾಗಲೆ ವಾರ‍್ಡಿನಿಂದ ವಾರ‍್ಡಿಗೆ ಹಬ್ಬಿಯಾಗಿತ್ತು. ಹದಿಮೂರನೇ ಮಂಚದ ಗುಣದ ಬಗ್ಗೆ ಸುದಾ ಮೇಡಂ ಅವರಿಗೆ ಸಾವಿತ್ರಿ ಪದೇ ಪದೇ ನೆನಪು ಮಾಡಿ ಕೊಡುತ್ತಿದ್ದಳು. ತನ್ನ ಮಾತು ಕೇಳದಿದ್ದರ ಪರಿಣಾಮ ಏನಾಯಿತು ನೋಡಿ ಎನ್ನುವಂತೆ ಮಾತಿನಲ್ಲೇ ಚುಚ್ಚುತ್ತಿದ್ದಳು. ಅವಳ ಮಾತು ಕೇಳಿ ಸಾಕಾಗಿ ಸುದಾ ಮೇಡಂ ಹೊರಡಲು ಅಣಿಯಾದರು. ಹೇಗೂ ಅಲ್ಲಿ ಅವರು ಯಾವ ಸಹಾಯವನ್ನೂ ಮಾಡುವ ಸ್ತಿತಿಯಲ್ಲಿರಲಿಲ್ಲ. ಕೆಳಗಿಳಿದು ಬಂದು ಕಾರು ನಿಲುಗಡೆಯತ್ತ ನಡೆದರು. ಮಳೆ ಇನ್ನೂ ಬೀಳುತ್ತಿತ್ತು. ಅರ‍್ದ ಹಾದಿಗೆ ಎದುರಾದದ್ದು ಎಸ್. ಆಯ್., ಕತ್ತಲನ್ನು ಸೀಳುವ ಬ್ಯಾಟರಿ ಹಿಡಿದುಕೊಂಡು.
“ಎಲ್ಲಿಗೆ ಹೊರಟ್ರಿ ಮೇಡಂ?” ಎಂದು ಕೇಳಿದ
“ಮನೆಗೆ. ಏನಾದ್ರು ಪ್ರಾಬ್ಲಮ್ಮಾ?”
“ಪ್ರಾಬ್ಲಮ್ಮ್ ಏನ್ ಇಲ್ಲಾ ಬಿಡಿ. ನೀವು ಹಾಯಾಗಿ ಮಲ್ಕೊಳ್ಳಿ. ನಮ್ ನಾಯಿ ಪಾಡು ಇದ್ದದ್ದೆ”, ಎಂದನು.
ಸುದಾ ಅವರು ಕಾರಿನತ್ತ ನಡೆದರು. ಎಸ್ ಆಯ್ ಹಿಂದೆ ಹಿಂದೆ ನಡೆದ. ಕಾರಿನ ಬಳಿ ಬಂದು, ಲಾಕ್ ತೆಗೆದು ಕಾರು ಹತ್ತಿ, ಹೊರಡಬೇಕು ಎನ್ನುವಾಗ, ಹೊರಗಿದ್ದ ಎಸ್. ಆಯ್ ತಡೆದು,
“ಒಂದ್ ನಿಮಿಶ ಮೇಡಂ” ಎಂದು “ಲೋ ಶಂಕ್ರ” ಅಂತ ಜೋರಾಗಿ ಒಬ್ಬ ಪೇದೆಗೆ ಕೂಗಿದ. ಪೇದೆ ಕಯ್ಯಲ್ಲಿ ಬ್ಯಾಟರಿ ಹಿಡಿದು ಓಡಿ ಬಂದ.
“ಮೇಡಂ ಹೋಗ್ತಾರಂತೆ. ಒಂದ್ಸಾರಿ ಕಾರ್ ಚೆಕ್ ಮಾಡು” ಅಂದ.
“ಸರಿ ಸರ‍್” ಎಂದು ಪೇದೆ ಬೀಳುವ ಮಳೆಯಲ್ಲೇ ಕಾರಿನ ಡಿಕ್ಕಿ, ಬಾಗಿಲು, ಎಲ್ಲಾ ತೆಗೆದು ನೋಡಿದನು. ಅವನು ಸರಿಯಾಗಿದೆ ಎನ್ನುವ ಸೂಚನೆ ಕೊಟ್ಟಾಗ, ಎಸ್. ಆಯ್ ಹೊರಡಲು ಅನುವು ಮಾಡಿ ಕೊಟ್ಟನು.
ಸುದಾ ಅವರ ಕಯ್ ಕಾಲು ಇನ್ನೂ ನಡುಗುತ್ತಿದ್ದವು. ಕಾರನ್ನು ಶುರುಮಾಡಿ, ಮನೆಯತ್ತ ನಡೆಸಿದರು. ಇತ್ತ ಎಸ್. ಆಯ್. ಪೇಶಂಟನ್ನು ಹುಡುಕುವ ಕೆಲಸ ಮುಂದುವರೆಸಿದ.
ಮನೆಗೆ ಹೋಗುವ ದಾರಿಯಲ್ಲಿ, ಕತ್ತಲಿರುವೆಡೆ ಸುದಾ ಮೇಡಂ ಅವರ ಕಾರು ಗಕ್ಕನೆ ನಿಂತಿತು. ಒಂದೆರಡು ನಿಮಿಶದ ನಂತರ ಸುದಾ ಮೇಡಂ ಕೆಳಗಿಳಿದು ಸುತ್ತ ಮುತ್ತ ನೋಡಿದರು. ಯಾರು ಇಲ್ಲದ್ದನು ಕಾತ್ರಿಪಡಿಸಿಕೊಂಡು, ಕಾರಿನ ಡ್ರಾಯ್ವರ್ ಕಡೆಯ ಬಾಗಿಲು ತೆಗೆದು, “ಚಿತ್ರಾ” ಅಂತ ಕರೆದರು.
ಮೆಲ್ಲಗೆ ಹೊರಗಿಳಿದು ಬಂದಳು ಆ ಪೇಶಂಟು! ಅವಳ ಕಣ್ಣಿನಿಂದ ನೀರು ಇಳಿಯುವುದು ಆ ಜೋರು ಮಳೆಯಲ್ಲೂ ಕಾಣುತ್ತಿತ್ತು. ಗೆಳತಿಯನ್ನು ಜೋರಾಗಿ ಅಪ್ಪಿಕೊಂಡರು. ಚಿತ್ರಾಳ ಅಳುವು ಹೆಚ್ಚಾಯಿತು. ತುಸು ಹೊತ್ತಾದ ಮೇಲೆ ತಾವಿರುವ ಸ್ತಿತಿ ನೆನಪಾಗಿ, ಅಪ್ಪುಗೆ ಬಿಡಿಸಿಕೊಂಡರು.
ಕಾರಿನಿಂದ ಪರ‍್ಸೊಂದನ್ನು ತೆಗೆದು, “ತೊಗೋ. ಹತ್ತು ಸಾವಿರ ಇದೆ. ಆದಶ್ಟು ಬೇಗ ಸ್ಟೇಶನ್ಗೆ ಹೋಗು. ಟ್ರೇನ್ ಹೊರಡೋದಕ್ಕೆ ಇನ್ನೂ ಎರಡು ಗಂಟೆ ಇದೆ. ಅದರಲ್ಲೇ ಸೌಮ್ಯಾ ಮನೆ ಅಡ್ರೆಸ್ಸೂ ಇದೆ.” ಅಂದರು ಸುದಾ ಮೇಡಂ.
ಚಿತ್ರಾ ಪರ‍್ಸ ತೆಗೆದುಕೊಂಡಳು. ಅವಳ ಅಳು ನಿಂತಿರಲಿಲ್ಲ. ಸಮಾದಾನ ಮಾಡಲು ಅದು ಸಮಯವೂ ಆಗಿರಲಿಲ್ಲ.
“ನೋಡು, ನಾನ್ ಹೋಗ್ತೀನಿ. ತುಂಬಾ ಹೊತ್ತು ಇಲ್ಲೇ ನಿಂತಿದ್ರೆ ತೊಂದ್ರೆಯಾಗುತ್ತೆ. ಯಾವ್ದಾದ್ರು ಆಟೋ ಹಿಡ್ಕೊಂಡು ಹೋಗು” ಎಂದು ಸುದಾ ಮೇಡಂ ಅನಿವಾರ‍್ಯವಾಗಿ ಮನಸ್ಸು ಬಾರ ಮಾಡಿಕೊಂಡು ಅಲ್ಲಿಂದ ಹೊರಟರು.
ತುಸು ದೂರ ನಡೆದುಕೊಂಡು ಹೋದ ಚಿತ್ರಾ, ಸಿಕ್ಕ ಆಟೋ ಒಂದನ್ನು ಹತ್ತಿ ಸ್ಟೇಶನ್ ತಲುಪಿದಳು. ಜನರಲ್ ಬೋಗಿಯಲ್ಲೇ ಕುಳಿತು ಒಂದು ದಿನದ ನಂತರ ದೂರದ ಮುಂಬಯ್ ತಲುಪಿದಳು. ರೇಲಿನಿಂದ ಇಳಿದಾಗ ತುಂತುರು ಮಳೆಯ ನಡುವೆ ಮೂಡಣದಲ್ಲಿ ಸೂರ‍್ಯ ಮೂಡಿದ್ದ. ಮಳೆ-ಬೆಳಕಿನಲ್ಲಿ ಮಿಂದು, ಆಳವಾಗಿ ಉಸಿರೆಳೆದುಕೊಂಡು ಗೆಳತಿಯ ಮನೆಯತ್ತ ಹೆಜ್ಜೆಹಾಕುತ್ತ ಜನರ ಗುಂಪಿನಲ್ಲಿ ಮರೆಯಾದಳು.
(ಮುಗಿಯಿತು)
(ಚಿತ್ರ ಸೆಲೆ: pinstopin.com )
ಇತ್ತೀಚಿನ ಅನಿಸಿಕೆಗಳು