ನಮ್ಮ ಮನೆ ಮತ್ತು ಪರಿಸರ ಮಾಲಿನ್ಯ

– ಡಾ. ರಾಮಕ್ರಿಶ್ಣ ಟಿ.ಎಮ್.

home smoke01jpg

ಕಲಬೆರಕೆಯಿಲ್ಲದ ಆಹಾರ, ಶುದ್ದ ಕುಡಿಯುವ ನೀರು ಮತ್ತು ವಾಸ ಮಾಡುವುದಕ್ಕೆ ಒಂದು ಯ್ಯೋಗವಾದ ಸೂರನ್ನು ಒದಗಿಸಿದರೆ, ಜನರ ಆರೋಗ್ಯದ ಬಗ್ಗೆ ಸರ‍್ಕಾರ ಕಾಳಜಿವಹಿಸಿದಂತಾಗುತ್ತದೆ. ದೊಡ್ಡ ನಗರಗಳಲ್ಲಿ ಗಾಳಿ, ನೀರು ಬೂಮಿಯ ಮೇಲ್ಮೈಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಮತ್ತು ವೈರಾಣುಗಳನ್ನು ಹೀರಿಕೊಂಡು ಕಲುಶಿತಗೊಂಡಿವೆ. ಇಂದಿನ ಪ್ಲಾಸ್ಟಿಕ್ ಯುಗದಲ್ಲಿ ‘ಪ್ಲಾಸ್ಟಿಕ್ ಕಲುಶಿತ ಪರಿಸರ’ ಏರ‍್ಪಟ್ಟಿದ್ದು ನೆಲದಾಳದ ನೀರಲ್ಲೂ ಉಪ್ಪಿನಾಂಶ ಹೆಚ್ಚಾಗಿದೆ. ನದಿ, ಸಮುದ್ರಗಳು ಮಾನವನಿಂದ ಕಲುಶಿತಗೊಂಡಿವೆ. ಇವೆಲ್ಲವೂ ಒಟ್ಟಾರೆಯಾಗಿ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿವೆ.

ಹಾಗೆಯೇ ಮನೆಯ ಒಳಾಂಗಣ ಕಲುಶಿತವಾಗಿರುವ ಬಗ್ಗೆ ತಿಳಿಯುವುದು ಅವಶ್ಯಕ. ಮನೆ, ಶಾಲಾ ಕಾಲೇಜು ಕಚೇರಿ ಕಟ್ಟಡಗಳಲ್ಲಿ ಒಳಾಂಗಣ ಗಾಳಿಯ ಗುಣಮಟ್ಟ ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಮನೆಯ ಒಳಾಂಗಣ ಗಾಳಿಯನ್ನು ಕಲುಶಿತಗೊಳಿಸುವ ವಸ್ತುಗಳೆಂದರೆ ರಾಡಾನ್, ಬೂಸ್ಟುಗಳು, ಕಾರ‍್ಬನ್ ಮೊನಾಕ್ಸೈಡ್, ಸಿಮೆಂಟ್, ಆಸ್ಬೆಸ್ಟಾಸ್, ಕಾರ‍್ಬನ್ ಡೈ ಆಕ್ಸೈಡ್ ಮತ್ತು ಓಜೋನ್‍ಗಳು.

ರಾಡಾನ್ (Radan):
ರಾಡಾನ್ ಒಂದು ವಿಕಿರಣ ಹೊರಸೂಸುವ ಕ್ರಿಯಾಶಕ್ತಿಯುಳ್ಳ (ರೇಡಿಯೊಆಕ್ಟಿವ್) ವಸ್ತು ವಿದ್ಯುತ್ ವಿಕಿರಣ ಶಕ್ತಿಯುಳ್ಳ ರೇಡಿಯಮ್ ನಶಿಸುವುದರಿಂದ ರಾಡಾನ್ ಅನಿಲ ಉತ್ಪತ್ತಿಯಾಗುತ್ತದೆ. ಈ ವಿಕಿರಣಗಳು ಕಟ್ಟಡದ ತಳಬಾಗದಿಂದ ಅತವಾ ಮನೆ ಕಟ್ಟಲು ಬಳಸಲಾದ ವಸ್ತುಗಳಿಂದ ಉತ್ಪತ್ತಿಯಾಗುತ್ತವೆ. ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಇಂತಹ ವಿಕಿರಣ ಕ್ರಿಯಾ ಶಕ್ತಿಯುಳ್ಳ ವಸ್ತುಗಳು ಇರುವುದು ಸಾಮಾನ್ಯ ಸಂಗತಿ. ರಾಡಾನ್‍ನಿಂದ ಸತ್ತಿರುವವರ ಸಂಕ್ಯೆ ಹತ್ತಾರು ಸಾವಿರಗಳೆಂದು ತಿಳಿದುಬಂದಿದೆ. ಅವರ ಸಾವಿಗೆ ಕಾರಣ ಶ್ವಾಸಕೋಶ ಕ್ಯಾನ್ಸರ್ ಹಾಗು ಆರತ್ರೈಟಿಸ್ (Arthritis/ಸಂದಿವಾತ)ಗಳಿಂದ ಎಂದು ತಿಳಿಯಲಾಗಿದೆ. ರಾಡಾನ್ ನಿವಾರಿಸಲು ಕಾಂಕ್ರೀಟ್‍ನಿಂದಾದ ನೆಲಹಾಸು ಮತ್ತು ತಳಪಾಯವನ್ನು ಬದ್ರವಾಗಿ ಮುಚ್ಚುವುದು ತುಂಬಾ ಅವಶ್ಯಕ.

ಬೂಸ್ಟುಗಳು:
ಪ್ರಾಣಿಗಳ ಚರ‍್ಮದ ಹೊಟ್ಟು ಮತ್ತು ಸಸ್ಯಗಳಲ್ಲಿನ ಸೂಕ್ಶ್ಮಗಾತ್ರದ ಪರಾಗ ಕಣಗಳು ಮನೆಯಲ್ಲಿನ ಒಳಚರಂಡಿ, ಸ್ನಾನದ ಮನೆ ಮತ್ತು ಪಾಯಕಾನೆಗಳಿಂದ ಉಂಟಾಗುವ ತೇವಾಂಶವು ಮನೆಯಲ್ಲಿನ ತೇವಾಂಶವನ್ನು ಹೆಚ್ಚು ಮಾಡುತ್ತವೆ. ಗಾಳಿಕಿಂಡಿಗಳು ಇಲ್ಲದಿರುವ ಮನೆಗಳಲ್ಲಿ ತೇವಾಂಶ ಮೇಲ್ಚಾವಣಿಯಲ್ಲಿ ಒಗ್ಗೂಡುತ್ತದೆ. ಜತೆಗೆ ತೇವಾಂಶ ಮನೆಯ ತಳಬಾಗದಿಂದಲೂ ಸಹ ಹೊರಬರುತ್ತಿರುತ್ತದೆ. ಮನೆಯಲ್ಲಿ ಮರಮುಟ್ಟುಗಳು ತೇವಾಂಶವನ್ನು ಹೀರಿಕೊಳ್ಳುತ್ತವೆ. ಈ ತೇವಾಂಶವು 48 ಗಂಟೆಗಳಲ್ಲಿ ಒಣಗುವುದು ಸಾದ್ಯವಾಗುವುದಿಲ್ಲ. ಆದ ಕಾರಣ, ಬೂಸ್ಟುಗಳು ಮತ್ತು ಅಣಬೆಗಳು, ವಿವಿದ ರೀತಿಯ ಮಿಲ್‍ಡ್ಯೂಗಳು ಬೆಳೆಯುತ್ತವೆ. ಇವುಗಳಿಂದ ಬೀಜಕ ಅತವಾ ಬೀಜಕ ಕೋಶ (ಸ್ಟೋರ‍್)ಗಳು ತಯಾರಾಗಿ ಮನೆಯ ಪರಿಸರದಲ್ಲಿ ಹರಡುತ್ತವೆ.

ಬೂಸ್ಟುಗಳು ಮನೆ ಗೋಡೆಗಳಲ್ಲಿನ ಬಿರುಕುಗಳಲ್ಲಿ ಸಹ ಬೆಳೆಯುತ್ತವೆ. ಹಲವಾರು ಬೂಸ್ಟು / ಶಿಲೀಂದ್ರಗಳು ಅಂದರೆ, ಮೈಸೀಲಿಯಂ ಬಾಗಗಳಿಂದ ಮೈಕೋಟಾಕ್ಸಿನ್‍ಗಳು ಉತ್ಪತ್ತಿಯಾಗುತ್ತವೆ. ಬೀಜಕಗಳಲ್ಲಿ ಮೈಕೋಟಾಕ್ಸಿನ್‍ಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ಬೂಸ್ಟುಗಳ ಬೀಜಕಗಳು ಮತ್ತು ಹೂಬಿಡುವ ಮರಗಳು ಪಾರಗಗಳು ಆಸ್ತಮಾ ಕಾಯಿಲೆಯನ್ನು ತೀವ್ರವಾಗಿಸುತ್ತವೆ. ಇವುಗಳ ಪರಿಣಾಮವನ್ನು ಹೋಗಲಾಡಿಸಲು ಮನೆಯ ಎಲ್ಲ ಬಾಗಗಳು ಅದರಲ್ಲೂ ಬಚ್ಚಲು ಮನೆ, ಪಾಯಕಾನೆಯನ್ನು ಚೊಕ್ಕವಾಗಿಡುವುದು ತುಂಬಾ ಮುಕ್ಯ.

ಕಾರ‍್ಬನ್ ಮಾನಾಕ್ಸೈಡ್:
ಕಾರ‍್ಬನ್ ಮಾನಾಕ್ಸೈಡ್ ಒಂದು ವಿಶಕಾರಿ ಅನಿಲ. ಇದು ಬಣ್ಣ ಮತ್ತು ಸೀಮೆಎಣ್ಣೆಗಳನ್ನು ಸುಟ್ಟಾಗ ಹೊರಬರುವ ಪದಾರ‍್ತಗಳಲ್ಲೊಂದು. ಸಾಮಾನ್ಯವಾಗಿ ಸ್ಕೂಟರ್, ಕಾರು ಮತ್ತು ಇತವ ವಾಹನಗಳಿಂದ ಹೊರಬರುವ ಅನಿಲ ಕೂಡ. ತಂಬಾಕಿನ ಹೊಗೆಯಲ್ಲಿ ಸಹ ಕಾರ‍್ಬನ್ ಮಾನಾಕ್ಸೈಡ್ ಇರುತ್ತದೆ. ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಡಲು ಬಳಸುವ ಪೆಟ್ರೋಲ್ ಇಂದನ ಕಾರ‍್ಬನ್ ಮಾನಾಕ್ಸೈಡ್‍ನ್ನು ತಯಾರು ಮಾಡುತ್ತದೆ. ಕಾರ‍್ಬನ್ ಮಾನಾಕ್ಸೈಡ್‍ನಿಂದ ತಲೆಸುತ್ತು, ತಲೆ ತಿರುಗುವಿಕೆ ಉಂಟಾಗುವುದಲ್ಲದೇ, ಇದರ ಪ್ರಮಾಣ ಮಿತಿಮೀರಿದಾಗ ಸಾವೂ ತರಬಲ್ಲದು! ಸೀಮೆ ಎಣ್ಣೆ ಮತ್ತು ಇತರ ಉರುವಲಗಳ ಬಳಕೆ ಕಡಿಮೆ ಮಾಡಿ ಇದನ್ನು ಹತೋಟಿಯಲ್ಲಿಡಬಹುದು.

ಸಿಮೆಂಟ್, ಆಸ್‍ಬೆಸ್ಟಾಸ್ ಪಲಕಗಳು:
ಆಸ್‍ಬೆಸ್ಟಾಸ್ ಪಲಕಗಳನ್ನು ಕೊಯ್ಯುವಾಗ ಅತವಾ ರಂದ್ರಗಳನ್ನು ಮಾಡುವಾಗ ಅದರಿಂದ ಸೂಕ್ಶ್ಮವಾದ ನಾರುಗಳು ಹೊರಬೀಳುತ್ತವೆ. ಈ ನಾರುಗಳು ಉಸಿರಾಟದ ಮೂಲಕ ಶ್ವಾಸಕೋಶಗಳಿಗೆ ಸೇರುತ್ತವೆ. ಹೀಗೆ ಶ್ವಾಸಕೋಶದಲ್ಲಿ ಸೇರಿದ ಆಸ್‍ಬೆಸ್ಟಾಸ್ ಕಣಗಳು ಹಲವಾರು ವರ‍್ಶಗಳ ನಂತರ ಶ್ವಾಸಕೋಶದ ಕ್ಯಾನ್ಸರ‍್ ಉಂಟುಮಾಡುತ್ತವೆ. ಸಾಮಾನ್ಯವಾಗಿ ಶಾಲೆ, ಕಾಲೇಜು ಮತ್ತು ಕಾರ‍್ಕಾನೆಗಳಲ್ಲಿ ಆಸ್‍ಬೆಸ್ಟಾಸ್ ಮೇಲ್ಚಾವಣಿಯಾಗಿ ಬಳಸುತ್ತಾರೆ. ಈ ಆಸ್‍ಬೆಸ್ಟಾಸ್ ಕಾಲಕ್ರಮೇಣ ನಶಿಸಿ ಸೂಕ್ಶ್ಮ ಕಣಗಳಾಗಿ ಗಾಳಿಯಲ್ಲಿ ಸೇರಿ, ನಮ್ಮ ಶ್ವಾಸಕೋಶಗಳನ್ನು ಹೊಕ್ಕು ರೋಗವನ್ನುಂಟು ಮಾಡುತ್ತವೆ. ಕಾಯಿಲೆಯ ರೋಗಲಕ್ಶಣಗಳು ಸುಮಾರು 20-30 ವರ‍್ಶಗಳ ನಂತರ ಕಾಣಿಸುತ್ತದೆ.

ಕಾರ‍್ಬನ್ ಡೈ ಆಕ್ಸೈಡ್:
ಕಾರ‍್ಬನ್ ಡೈ ಆಕ್ಸೈಡ್ ಮಾನವ ಮತ್ತು ಪ್ರಾಣಿಗಳ ಉಸಿರಾಡುವಿಕೆಯಲ್ಲಿ ಉಂಟಾಗುವ ಅನಿಲ. ಈ ಅನಿಲವು ಹೆಚ್ಚಿನ ಮಟ್ಟದಲ್ಲಿದ್ದಾಗ, ತಲೆನೋವು, ತಲೆಬಾರ, ಕೆಲಸದಲ್ಲಿ ಆಸಕ್ತಿಯಿಲ್ಲದಿರುವುದು ಸಾಮಾನ್ಯ ಸಂಗತಿ. ಮನುಶ್ಯರಿಂದಲೇ ಕಾರ‍್ಬನ್ ಡೈ ಆಕ್ಸೈಡ್ ಮನೆಯಲ್ಲಿ ತಯಾರಾಗುತ್ತದೆ. ಮನೆಯೊಳಗಿನ ಈ ಅನಿಲ ಯಾವುದೇ ಕಾರಣಕ್ಕೂ 1000 ಪಿಪಿಎಮ್ (ppm) ಗಳಿಗಿಂತ ಹೆಚ್ಚಾಗಬಾರದು. ಆದರೆ ಗಾಳಿಕಿಂಡಿ (ventilators), ಕಿಟಕಿಗಳಿರದ ಮನೆಗಳಲ್ಲಿ 1000 ಪಿಪಿಎಮ್‍ಗಳಶ್ಟು ಕಾರ‍್ಬನ್ ಡೈ ಆಕ್ಸೈಡ್ ಇರುತ್ತದೆ ಎಂಬುದು ಕಚಿತವಾಗಿದೆ.

ಓಜೋನ್:
ಓಜೋನ್ ಪದರ ಸೂರ‍್ಯನಿಂದ ಬೂಮಿಗೆ ಬರುವ ನೇರಳಾತೀತ ಕಿರಣಗಳನ್ನು ತಡೆಯೊಡ್ಡಿ, ಬೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೆ ಜೀವ ಹಾನಿಯಾಗದಂತೆ ಕಾಪಾಡುತ್ತಿರುವ ವಿಶೇಶ ಪದರ. ಈ ಪದರವು ಸ್ತರಗೋಲದಲ್ಲಿ (stratosphere) 20 ರಿಂದ 45 ಕಿಮೀ ನಶ್ಟು ದಪ್ಪಕ್ಕಿದೆ.

ಓಜೋನ್ ಅನಿಲವು ಬೂಮಿಗೆ ಹತ್ತಿರ ಕಂಡುಬಂದರೆ ಶ್ವಾಸಕೋಶಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಓಜೋನ್ ಅನಿಲವು ಕೆಲವೊಂದು ವಿದ್ಯುತ್ ಉಪಕರಣಗಳಿಂದ ಅಂದರೆ ಗಾಳಿ ಆಯೊನೈಜರ್ ಗಳಿಂದ ಮತ್ತು ಇತರೆ ಗಾಳಿಮಾಲಿನ್ಯದಿಂದ ಉತ್ಪತ್ತಿಯಾಗುತ್ತದೆ. ಹಸಿರು ಸಿಟ್ರಾನ್ ಅತವಾ ಟರ್-ಪೀನ್ ದ್ರವ್ಯಗಳು ಓಜೋನ್‍ನೊಂದಿಗೆ ಸೇರಿ ಬೇಗನೇ ವಿಶಕಾರಿ, ರಾಸಾಯನಿಕಗಳಾಗುತ್ತವೆ.

ಬಾರತದಂತಹ ಅಬಿವ್ರುದ್ದಿ ಹೊಂದುವ ದೇಶಗಳಲ್ಲಿ ಮರ, ಇದ್ದಿಲು, ಸಗಣಿ ಬೇಸಾಯದಲ್ಲಿ ಉಳಿದ ಕಾಳಿ ಕಡ್ಡಿಗಳನ್ನು ಬಳಸಿ ಅಡಿಗೆ ಮಾಡುವುದರಿಂದ ಹೊರಬರುವ ಅನಿಲಗಳಿಂದ ಕಲುಶಿತಗೊಳ್ಳುತ್ತವೆ. ಜತೆಗೆ ನೀರನ್ನು ಕಾಯಿಸಲು ಸಹ ಇವುಗಳನ್ನು ಬಳಸಲಾಗುತ್ತದೆ. ಈ ಕಾರಣದಿಂದಾಗಿ 2000 ದಿಂದೀಚೆಗೆ ಸುಮಾರು 1.5 ಮಿಲಿಯನ್ ಅತವಾ 2 ಮಿಲಿಯನ್ ಜನರು ಸತ್ತಿದ್ದಾರೆಂದು ತಿಳಿಯಲಾಗಿದೆ.

ಮನೆಯಲ್ಲಿ ಬೆಳೆಸುವ ಸಸ್ಯಗಳು:
ಮನೆಯಲ್ಲಿ ಬೆಳೆಸುವ ಸಸ್ಯಗಳು ಮನೆಯೊಳಗಿನ ಕಲುಶಿತ ಗಾಳಿಯನ್ನು ಶುದ್ದ ಮಾಡುತ್ತವೆ. ನೀರಿನ ಒಸರುವಿಕೆಯ ಗುಣವುಳ್ಳ ಸಾವಯವ ಸಂಯುಕ್ತ ರಸಾಯನಿಕಗಳಾದ ಬೆನ್‍ಜಿನ್, ಟಾಲ್ವಿನ್ ಮತ್ತು ಗ್ಸೈಸೀನ್ ಮತ್ತು ಕಾರ‍್ಬನ್ ಡೈ ಆಕ್ಸೈಡ್‍ನ್ನು ಸಸ್ಯಗಳು ಹೀರಿಕೊಳ್ಳುತ್ತವೆ. ಮನೆಯೊಳಗಿನ ಸಸ್ಯಗಳು ಗಾಳಿಯಿಂದ ತೇಲಿಬರುವ ಸೂಕ್ಶ್ಮಣುಗಳನ್ನು ಮತ್ತು ಶಿಲೀಂದ್ರಗಳನ್ನು ಕಡಿಮೆ ಮಾಡುವುದರ ಜತೆಗೆ ಮನೆಯ ತೇವಾಂಶವನ್ನು ಹೆಚ್ಚು ಮಾಡುತ್ತವೆ. ಪೀಸ್ ಲಿಲಿ (ಸ್ಪಾತಿಪಿಲಮ್ ಕ್ಲೀವ್‍ಲ್ಯಾಂಡಿ) ಮತ್ತು ಗೊಲ್ಡನ್ ಪೋತಾಸ್ (ಎಪಿಪ್ರಿಮ್‍ನಮ್ ಆರಿಯಮ್) ಸಸ್ಯಗಳು ಕಿಟೋನ್ ಮತ್ತು ಆಲ್ಡಿಹೈಡ್‍ಗಳನ್ನು ಹೀರಿಕೊಳ್ಳುವುವೆಂದು ಅಮೆರಿಕನ್ ಕೆಮಿಕಲ್ ಸೊಸೈಟಿಯ ಸಂಶೋದನೆಯು ವರದಿ ತಿಳಿಸುತ್ತದೆ.

ಮನೆಯೊಳಗಿನ ಸಸ್ಯಗಳಿಂದ ಮೇಲಿನ ಒಳಿತುಗಳಾದರೂ, ಅವುಗಳಿಂದ ಕೆಲವು ದುಶ್ಪರಿಣಾಮಗಳೂ ಆಗುತ್ತವೆ. ಸಸ್ಯಗಳಿಂದ ಮನೆಯ ಒಳಗಿನ ತೇವಾಂಶ ಹೆಚ್ಚು ಆಗುವುದರಿಂದ, ಬೂಸ್ಟುಗಳು ಗೋಡೆಯಲ್ಲಿನ ಬಿರುಕುಗಳಲ್ಲಿ ಮತ್ತು ರಂದ್ರಗಳಲ್ಲಿ ಬೆಳೆಯುತ್ತವೆ. ಬೂಸ್ಟುಗಳಿಂದ ಹೊರಹೊಮ್ಮಿದ ಬೀಜಕಗಳು ಅಲರ‍್ಜಿಯನ್ನುಂಟು ಮಾಡುತ್ತವೆ. ತೇವಾಂಶ ಹೆಚ್ಚಾಗುವುದು ಒಳ್ಳೆಯದಲ್ಲ, ತೇವಾಂಶವನ್ನು ನಿಯಂತ್ರದಲ್ಲಿಡುವುದು ಸೂಕ್ತ. ಇದನ್ನು ತಡೆಗಟ್ಟಲು ಮನೆ ನಿರ‍್ಮಿಸುವಾಗ ತೇವಾಂಶ ನಿಯಂತ್ರಿಸುವ ತಂತ್ರಗಳನ್ನು ಅಳವಡಿಸಬೇಕು.

ನಮ್ಮ ಆರೋಗ್ಯ ಚನ್ನಾಗಿರಬೇಕಾದರೆ ನಮ್ಮ ಪರಿಸರ ಚನ್ನಾಗಿರಬೇಕಾಗಿದ್ದು ತುಂಬಾ ಮುಕ್ಯ. ಪರಿಸರವನ್ನು ಚನ್ನಾಗಿಡುವ ಈ ಕೆಲಸ ನಮ್ಮ ಮನೆಯಿಂದಲೇ ಶುರುವಾಗುತ್ತದೆ ಅನ್ನುವುದನ್ನು ನಾವು ಮನಗಾಣಬೇಕು.

(ಚಿತ್ರಸೆಲೆ: www.thestar.com.my)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: