ಕೆಲಸದೊತ್ತಡದಿಂದ ಪಾರಾಗುವುದು ಹೇಗೆ?

– ರತೀಶ ರತ್ನಾಕರ.

Smiley-stress-ball-J-E-Therlot

ಕೆಲಸದ ಒತ್ತಡವು ಹೆಚ್ಚಿನವರ ಬದುಕಿನಲ್ಲಿ ತುಂಬಾ ಸಾಮಾನ್ಯ. ಈ ಒತ್ತಡದಿಂದ ಪಾರಾಗಲು ಬಗೆ ಬಗೆಯ ದಾರಿಗಳನ್ನು ಹುಡುಕುತ್ತಾರೆ. ಪಾರಾಗುವ ದಾರಿಯಿಂದ ಒತ್ತಡವು ಮಾಯವಾದರೆ ಅದು ತುಂಬಾ ಒಳ್ಳೆಯದು, ಇಲ್ಲವಾದರೆ ಅದು ಇನ್ನೂ ಹೆಚ್ಚಿನ ಒತ್ತಡಕ್ಕೆ ದೂಡುತ್ತದೆ. ಕೆಲಸದ ಒತ್ತಡವು ಒಬ್ಬೊಬ್ಬರಿಗೂ ಬೇರೆ ತೆರನಾಗಿರುತ್ತದೆ. ಹಾಗಾಗಿ, ಒತ್ತಡವು ಹೇಗೆ ಉಂಟಾಗುತ್ತಿದೆ? ಒತ್ತಡದ ಸೆಲೆ ಯಾವುದು ಎಂದು ಬಿಡಿಸಿನೋಡಿ ಬಳಿಕ ಅದಕ್ಕೆ ಸರಿಹೊಂದುವ ದಾರಿಗಳನ್ನು ಹುಡುಕಿಕೊಂಡರೆ ಒತ್ತಡವನ್ನು ಚೆನ್ನಾಗಿ ಸಂಬಾಳಿಸಬಹುದು.

ಒತ್ತಡವು ಹೇಗೆ ಉಂಟಾಗುತ್ತದೆ?
ಮೆದುಳಿನಲ್ಲಿರುವ ಹುರಿದುಂಬಿಸುವ ಏರ‍್ಪಾಡು (Motivational System) ಯಾವುದೋ ಒಂದು ಗುರಿಯತ್ತ ಕೆಲಸಮಾಡುವಂತೆ ಹುರುಪನ್ನು ನೀಡಿ ಹುರಿದುಂಬಿಸುತ್ತಿರುತ್ತದೆ. ಒಂದು ವೇಳೆ ಆ ಗುರಿಯನ್ನು ಮುಟ್ಟಿದರೆ ನಲಿವು, ಮುಟ್ಟಲಾಗುತ್ತಿಲ್ಲವೆಂದರೆ ಹೆದರಿಕೆ ಇಲ್ಲವೇ ಕೊರಗಿನಿಂದ ಒತ್ತಡವುಂಟಾಗುತ್ತದೆ. ಒಟ್ಟಿನಲ್ಲಿ, ಒತ್ತಡವು ತಲ್ಲಣದ ಮರುಮಾತು (emotional response). ಈ ತಲ್ಲಣಗಳು, ಹುರಿದುಂಬಿಸುವ ಏರ‍್ಪಾಡಿನಿಂದ ಮೂಡುತ್ತವೆ.
ಒಟ್ಟಿನಲ್ಲಿ ಯಾವುದೋ ಒಂದು ಮುಟ್ಟದಿರುವ ಗುರಿಯಿಂದಾಗಿ ಒತ್ತಡವು ಮೂಡುತ್ತದೆ ಎಂದು ಇದರಿಂದ ತಿಳಿಯಬಹುದು.

ಹುರಿದುಂಬಿಸುವ ಏರ‍್ಪಾಡಿನಲ್ಲಿ ಇನ್ನೆರೆಡು ಕವಲುಗಳಿವೆ;
1. ಬಳಿಸಾರುವ ಏರ‍್ಪಾಡು (approach system): ಇದು ಒಬ್ಬರು ಎದುರುನೋಡುತ್ತಿರುವ ಗುರಿಗಳತ್ತ ಗಮನಹರಿಸುತ್ತದೆ. ಕೆಲಸದಲ್ಲಿ ಮೇಲೇರಿಕೆ(promotion) ಇಲ್ಲವೇ ಹೆಚ್ಚುವರಿ ಹಣವನ್ನು(bonus) ಎದುರುನೋಡುತ್ತಿದ್ದರೆ, ಅದಕ್ಕೆ ಪೂರಕವಾಗಿ ಕೆಲಸಮಾಡಲು ಈ ಏರ‍್ಪಾಡು ನೆರವಾಗುತ್ತದೆ. ಅಂದುಕೊಂಡಂತೆಯೇ ಗುರಿಮುಟ್ಟಿದರೆ ನಲಿವು, ಇಲ್ಲದೇ ಹೋದರೆ ಕೊರಗು. ಈ ತಲ್ಲಣಗಳನ್ನು ಬಳಿಸಾರುವ ಏರ‍್ಪಾಡು ನೋಡಿಕೊಳ್ಳುತ್ತದೆ.
2. ತಡೆಯುವ ಏರ‍್ಪಾಡು(avoidance system): ಇದು ಬೇಡದ ಆಗುಹಗಳನ್ನು ತಡೆಯುವತ್ತ ಕೆಲಸಮಾಡುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಕೆಲಸದಿಂದ ತೆಗೆದುಹಾಕಲಾಗುವುದು ಎಂಬ ಸುದ್ದಿ ಬಂದರೆ, ಅದನ್ನು ತಡೆಯುವತ್ತ ಕೆಲಸಮಾಡಲು ಈ ಏರ‍್ಪಾಡು ನೆರವಾಗುತ್ತದೆ. ಕೆಟ್ಟ ಆಗುಹವನ್ನು ತಡೆಯುವಲ್ಲಿ ಗೆದ್ದರೆ ನಲಿವು, ಇಲ್ಲದೇ ಹೋದರೆ ಹೆದರಿಕೆ ಹಾಗು ಕೊರಗಿನ ತಲ್ಲಣಗಳು ಮೂಡುತ್ತವೆ.

ಹಾಗಾಗಿ, ಸುತ್ತಲಿರುವ ಕೆಲಸದ ಪರಿಸರದಿಂದ ಒತ್ತಡವು ಮೂಡುತ್ತದೆ. ಯಾವುದೋ ಕೆಲಸದ ಆಗುಹವನ್ನು ತಡೆಯಲು ಮೆದುಳು ಪ್ರಯತ್ನ ಮಾಡುತ್ತಿದೆ, ಆದರೆ ಅದನ್ನು ತಡೆಯವಲ್ಲಿ ಇನ್ನೂ ಗೆಲುವನ್ನು ಪಡೆದಿಲ್ಲ, ಅದಕ್ಕಾಗಿ ಒತ್ತಡವು ಮನೆಮಾಡಿದೆ ಎಂಬುದನ್ನು ತಿಳಿಯಬಹುದು.

ಮೇಲೆ ನೀಡಿರುವ ಯಾವ ಕಾರಣದಿಂದಾಗಿ ಒತ್ತಡವು ಮೂಡುತ್ತಿದೆ ಎಂದು ಒಮ್ಮೆ ಬಿಡಿಸಿ ನೋಡಿದರೆ, ಅದಕ್ಕೆ ತಕ್ಕುದಾದ ಪಾರುದಾರಿಗಳನ್ನು ಕಂಡುಕೊಳ್ಳಬಹುದು. ಆಗ ಅದು ಹೆಚ್ಚು ದಿನ ಕಾಡಲಾರದು.

ಒತ್ತಡದ ಸೆಲೆ ತಿಳಿದಿರಲಿ:

ಒತ್ತಡದಲ್ಲಿದ್ದರೆ, ತಡೆಯುವ ಏರ‍್ಪಾಡು ಕೆಲಸ ಮಾಡುತ್ತಿದೆ ಎಂದು. ಅದಕ್ಕೆ ಸರಿಯಾದ ಕಾರಣವೇನೆಂದು ಹುಡುಕಬೇಕು. ಕೆಲಸದ ಗಡುವು, ಸಿಡುಕಿನ ಮೇಲುಗರು, ತಲೆತಿನ್ನುವ ಹಮ್ಮುಗೆಗಳು ಹೀಗೆ ಒಬ್ಬರಿಂದ ಒಬ್ಬರಿಗೆ ಕಾರಣಗಳು ಬೇರೆ ಬೇರೆಯಾಗಿರುತ್ತವೆ. ಸೆಲೆ ಯಾವುದು ಎಂದು ಸರಿಯಾಗಿ ಗುರುತಿಸಿಕೊಂಡರೆ ಕೆಲವೊಮ್ಮೆ ತಾವೇ ಬಗೆಹರಿಕೆ ಕಂಡುಕೊಳ್ಳಬಹುದು. ಇಲ್ಲವಾದರೆ, ಗೆಳೆಯರು, ಸಲಹೆಗಾರರು ಇಲ್ಲವೇ ಜೊತೆ ಕೆಲಸಗಾರರೊಂದಿಗೆ ಮಾತನಾಡಿ ನೆರವನ್ನು ಪಡೆಯಬಹುದು. ಒತ್ತಡದಿಂದ ಸರಿಯಾದ ಬಗೆಯಲ್ಲಿ ಪಾರಾಗಲು ಅದರ ಸೆಲೆಯನ್ನು ತಿಳಿಯುವುದು ತುಂಬಾ ಅರಿದಾದದ್ದು.

ನೋಟ ಬದಲಾಗಲಿ:

ಎಲ್ಲಾ ಕೆಲಸದ ಜಾಗಗಳಲ್ಲಿ ಬಳಿಸಾರುವ ಮತ್ತು ತಡೆಯುವ ತಲ್ಲಣಗಳನ್ನು ಮೂಡಿಸುವ ಆಗುಹಗಳಿರುತ್ತವೆ. ಕೆಲಸದಿಂದ ತೆಗೆಯಬಹುದೇನೋ? ಕೆಲಸವನ್ನು ಗಡುವಿನೊಳಗೆ ಮುಗಿಸಲಾಗುವುದಿಲ್ಲ, ಸಂಬಳ ಏರಿಕೆಯಾಗುವುದಿಲ್ಲವೇನೋ? ಹೀಗೆ, ಏನಾದರು ಕೆಟ್ಟದ್ದಾಗುತ್ತದೆ ಎಂಬ ಯೋಚನೆಯ ಕಡೆ ಹೆಚ್ಚಿನ ಗಮನಹರಿಸಿದರೆ ಒತ್ತಡವು ಕಟ್ಟಿಟ್ಟಬುತ್ತಿ. ಇದರ ಬದಲಾಗಿ ತಾನು ಯಾವ ಗುರಿಯನ್ನು ಮುಟ್ಟಬಹುದು? ಯಾವ ಕೆಲಸ ಚೆನ್ನಾಗಿ ಮಾಡಬಹುದು? ಎಂಬಂತಹ ಬೆಂಬಲಿಸುವ ಯೋಚನೆಗಳನ್ನು ಮಾಡುವುದು ಒಳಿತು. ‘ಯಾರು ಮಾಡುತ್ತಾರಪ್ಪ ಈ ಕೆಲಸವನ್ನು, ಸಾಕಾಗಿಹೋಗಿದೆ.’ ಎಂಬ ಬೇಸರದ ನೋಟಕ್ಕಿಂತ, ಕೆಲಸದೆಡೆಗೆ ಒಳ್ಳೆಯ ಸೆಳೆತವನ್ನಿಟ್ಟುಕೊಂಡರೆ ಹೆಚ್ಚು ನಲಿವು ಹಾಗು ನೆಮ್ಮದಿ ದಕ್ಕುವುದು, ಅದಕ್ಕಾಗಿ ಕೆಲಸದ ಕುರಿತು ನೋಟಗಳು ಬದಲಾಗಬೇಕು.

ಹುರುಪು ಹೊರಹೋಗಲಿ:

ಹುರಿದುಂಬಿಸುವ ಏರ‍್ಪಾಡಿಗೆ ತನ್ನ ಕೆಲಸವನ್ನು ನಡೆಸಲು ಹುರುಪು ಬೇಕು. ಮಿತಿಮೀರಿದ ಒತ್ತಡದಲ್ಲಿದ್ದಾಗ ಬದಲಾದ ನೋಟದಲ್ಲಿ ನೋಡುವುದಾಗಲಿ, ಒತ್ತಡದ ಸೆಲೆಯನ್ನು ಅರಿಯುವುದಾಗಲಿ ಮಾಡಲಾಗುವುದಿಲ್ಲ. ಆದರೆ ಹುರಿದುಂಬಿಸುವ ಏರ‍್ಪಾಡಿನಲ್ಲಿ ಕೂಡಿಟ್ಟ ಹುರುಪು ಹೊರಗೆ ಬರಬೇಕು ಆಗ ಒತ್ತಡವು ಕಡಿಮೆಯಾಗುತ್ತದೆ. ಈ ಹುರುಪನ್ನು ಯಾವುದಾದರು ಒಂದು ರೂಪದಲ್ಲಿ ಹೊರಹಾಕದಿದ್ದರೆ ಸಿಟ್ಟು, ಕೊರಗಿನಂತಹ ತಲ್ಲಣಗಳ ಮೂಲಕ ಹೊರಬರುತ್ತದೆ. ಇದು ಎಂದಿಗೂ ಒಳ್ಳೆಯದಲ್ಲ. ಅದಕ್ಕಾಗಿ ದ್ಯಾನ, ಆಟೋಟ, ಮೈಯ ಕಸರತ್ತು ಮುಂತಾದ ಚಟುವಟಿಕೆಯಿಂದ ಆ ಹುರುಪನ್ನು ಹೊರಹಾಕುವುದು ಒಳಿತು. ಇದು ಒತ್ತಡದ ಮಿತಿಯನ್ನು ಕೆಳಗಿಳಿಸಿ, ಮೈ-ಮೆದುಳಿನ ದಣಿವಾರಿಸಿ, ಹೊಸ ಹುರುಪನ್ನು ನೀಡುತ್ತದೆ.

ಒಟ್ಟಿನಲ್ಲಿ, ಯಾವುದೋ ಒಂದು ಆಗುಹ ಮೆದುಳಿನ ಹುರಿದುಂಬಿಸುವ ಏರ‍್ಪಾಡಿಗೆ (ಹೆಚ್ಚಾಗಿ ತಡೆಯುವ ಏರ‍್ಪಾಡಿಗೆ) ಹೆಚ್ಚಿನ ಹುರುಪನ್ನು ಸಾಗಿಸಿ ಕೆಲಸದಲ್ಲಿ ತೊಡಗಿಸುತ್ತದೆ. ಇದರಿಂದ ಒತ್ತಡ ಮನೆಮಾಡಿದರೆ ಅದರ ಸೆಲೆಯನ್ನು ಅರಿತು, ಹುರಿದುಂಬಿಸುವ ಏರ‍್ಪಾಡನ್ನು ಸಂಬಾಳಿಸಿ, ಒತ್ತಡದ ಹುರುಪನ್ನು ಕೆಲಸದ ಮಾಡುಗತನವನ್ನು ಹೆಚ್ಚಿಸಲು ಬಳಸಬಹುದು ಇಲ್ಲವೇ ಆ ಹುರುಪನ್ನು ಚಟುವಟಿಕೆಗಳ ನೆರವಿನಿಂದ ಹೊರಹಾಕಬಹುದು.
(ಮಾಹಿತಿ ಸೆಲೆ: hbr.org)
(ಚಿತ್ರ ಸೆಲೆ: office-breaks.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: